ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌

ನವದೆಹಲಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದನ್ನು ಸರಿದಾರಿಗೆ ತರಲು ಸೂಕ್ತ ಕಾನೂನು ರೂಪು-ರೇಷೆ ರೂಪಿಸಲು ಸಂಬಂಧಪಟ್ಟ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಚಳಿಗಾಲದ ಸಂಸತ್‌ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ಮಾತನಾಡಿದ ಯದುವೀರ್, ಮೈಸೂರಿನಲ್ಲಿ ಎಂಡಿಎಂಎ ವಶ ಹಾಗೂ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿರುವುದು, ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.

ಕಳೆದ ಬಾರಿಯ ಕಲಾಪದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಹಲವಾರು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನನ್ನ ಕ್ಷೇತ್ರದ ಪ್ರಮುಖ ನಗರವಾದ ಮೈಸೂರಿನಲ್ಲಿ ಬೃಹತ್‌ ಎಂಡಿಎಂಎ ತಯಾರಿಕಾ ಘಟಕವನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಕೂಡ ಪತ್ತೆ ಹಚ್ಚಿದ್ದು ನೆರೆ ರಾಜ್ಯದ ಪೊಲೀಸರು. ನಮ್ಮ ಪರಿಸ್ಥಿತಿ ಹೀಗಿದೆ. ಇಂತಹ ನಿರಂತರ ಘಟನೆಗಳಿಂದ ಸ್ಥಳೀಯ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಸಂಸದರು ತಿಳಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾರಂಪರಿಕ ಹಾಗೂ ಐತಿಹಾಸಿಕ ನಗರವಾದ ಹಂಪಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ, ಇದರಿಂದ ಸ್ಥಳೀಯ ವ್ಯಾಪಾರ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಯದುವೀರ್‌ ಹೇಳಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರಕ್ಕಾಗಿ ಹೆಚ್ಚಿನ ಭದ್ರತೆ ಹಾಗೂ ಸೌಲಭ್ಯ ಒದಗಿಸುವ ರೀತಿಯಲ್ಲಿ ನೀತಿ ರೂಪಿಸಬೇಕಾದ ಅಗತ್ಯವಿದೆ ಈ‌ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ತಾಣಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಸಹ ಕ್ರಮ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಯದುವೀರ್‌ ಒಡೆಯರ್‌ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌ Read More

ನಾಯಕತ್ವ ಬದಲಾವಣೆ ಮಾಡಿದರೆ ರಾಜ್ಯದಲ್ಲೂ ಬಿಹಾರ ಪರಿಸ್ಥಿತಿ: ಸುಬ್ರಹ್ಮಣ್ಯ ಎಚ್ಚರಿಕೆ

ಮೈಸೂರು: ನುಡಿದಂತೆ ನಡೆದು ಸುಭಿಕ್ಷ ಆಡಳಿತ ನಡೆಸತ್ತಿರುವ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಯಿಸಿದರೆ ಕರ್ನಾಟಕದಲ್ಲೂ ಮುಂದೆ ಬಿಹಾರದ ಪರಿಸ್ಥಿತಿ ಬರಬಹುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.

ಒಂದು‌ ವೇಳೆ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಅಹಿಂದ ವರ್ಗ ಕೈ ಬಿಡಬಹುದು ಎಂದು ಬಿ.ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನ ಕೇವಲ ಎರಡೂವರೆ ವರ್ಷಕ್ಕೆ ಮುಖ್ಯ ಮಂತ್ರಿ ಎಂದು ಹೈಕಮಾಂಡ್ ಆಯ್ಕೆ ಮಾಡಿಲ್ಲ. ಆದರೂ ಕೆಲ ನಾಯಕರು ಈ ಬಗ್ಗೆ ಇಲ್ಲ ಸಲ್ಲದ್ದನ್ನ ಚರ್ಚಿಸುತ್ತಿದ್ದಾರೆ.ಇದು ಮುಂದೆ ಗ್ರೇಟರ್ ಬೆಂಗಳೂರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.

ಹಿಂದಿನ ಸರ್ಕಾರದ ದುರಾಡಳಿತದಿಂದ ಕರ್ನಾಟಕದ ಹಣಕಾಸು ಪರಿಸ್ಥಿತಿ ಹೀನಾಯವಾಗಿತ್ತು. ಅದಕ್ಕೆ 2023ರ ಚುನಾವಣೆಯಲ್ಲಿ ಜನ ಬುದ್ದಿ ಕಲಿಸಿದ್ದಾರೆ, ಈಗ ಸಿದ್ದರಾಮಯ್ಯ ಅವರು 5 ಗ್ಯಾರಂಟಿಗಳನ್ನ ಕರ್ನಾಟಕದ ಜನತೆಗೆ ಪೂರೈಸಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸದೃಢ ಸರ್ಕಾರ ನಡೆಸುತ್ತಿದ್ದಾರೆ.ಇದೀಗ ನಾಯಕತ್ವದಿಂದ ಬದಲಾವಣೆ ಮಾಡಿದರೆ ಅಹಿಂದ ವರ್ಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಜೊತೆಗೆ ಕರ್ನಾಟಕದಲ್ಲೂ ಬಿಹಾರದ ಪರಿಸ್ಥಿತಿ ಎದುರಾಗುತ್ತದೆ ಎಂದು ಸುಬ್ರಮಣ್ಯ ಭವಿಷ್ಯ ನುಡಿದಿದ್ದಾರೆ

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರಿಬ್ಬರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದಾರೆ. ನಾಯಕತ್ವ ಬದಲಾವಣೆಯನ್ನ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಬಯಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಕೈ ಹಿಡಿದಿರೋದು ಅಹಿಂದ ವರ್ಗ ಅನ್ನೋದನ್ನ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿದ್ದರಾಮಯ್ಯ ಅವರನ್ನ ಬದಲಾವಣೆ ಮಾಡಿದ್ರೆ ಅಹಿಂದ ವರ್ಗ ಕೈ ಬಿಡುವ ಸಾಧ್ಯತೆ ಇದೆ. ಮುಂದೆ ಇದರ ಪಶ್ಚಾತಾಪ ಎದುರಿಸಬೇಕಾಗುತ್ತದೆ ಸುಬ್ರಮಣ್ಯ ಸೂಚ್ಯವಾಗಿ ಹೇಳಿದ್ದಾರೆ.

ಹಾಲು ಕೆಟ್ಟರೂ ಹಾಲು ಮತ ಕೆಡುವುದಿಲ್ಲ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಮೊದಲು ಹಾಲುಮತದ ತತ್ವವನ್ನ ಅರ್ಥ ಅಳವಡಿಸಿಕೊಳ್ಳಿ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ನಿಂದಲೇ ನೀವು ಸಂಸದರಾಗಿದ್ದು ಎಂಬುದನ್ನ ಮರೆತುಬಿಟ್ರಾ? ಕೊನೆಗೆ ಬಿಜೆಪಿ ಸೇರಿಕೊಂಡಿದ್ದೀರಿ, ಪಕ್ಷದ ವಿರುದ್ಧವೇ ಮಾತನಾಡಿದ್ರಿಂದ ಅವರೂ ನಿಮ್ಮನ್ನ ಬದಿಗಿಟ್ಟಿದ್ದಾರೆ ಎಂದು ವ್ಯಂಗ್ಯ ವಾಡಿದ್ದಾರೆ.

ಸಿದ್ದರಾಮಯ್ಯ ಅವರು ಯಾವುದೇ ಮೂಢನಂಬಿಕೆ ನಂಬುವುದಿಲ್ಲ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ. ಆದರೂ ನೀವು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದೀರಿ. ಸಿದ್ದರಾಮಯ್ಯ ಡಿ.ಕೆ ಬ್ರದರ್ಸ್ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದ್ದಾರೆ ಅಂತ ಜನರ ಕಿವಿಗೆ ಹೂ ಇಡಲು ಹೊರಟಿದ್ದೀರಿ. ಇದು ನಿಮಗೆ ಶೋಭೆ ತರುವುದಿಲ್ಲ. ನಿಮ್ಮ ಹೇಳಿಕೆಗಳನ್ನ ನೋಡಿದರೆ ನೀವೇ ಹಾಲುಮತ ಸಮಾಜವನ್ನ ತುಳಿಯಲು ಹೊರಟಿದ್ದೀರಿ ಅನ್ನುವಂತೆ ಕಾಣುತ್ತದೆ ಎಂದು‌ ಬಿ ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ನಾಯಕತ್ವ ಬದಲಾವಣೆ ಮಾಡಿದರೆ ರಾಜ್ಯದಲ್ಲೂ ಬಿಹಾರ ಪರಿಸ್ಥಿತಿ: ಸುಬ್ರಹ್ಮಣ್ಯ ಎಚ್ಚರಿಕೆ Read More

ಪಂಜಾಬ್ ರೀತಿ ರಾಜ್ಯದ ರೈತರಿಗೂ ಪ್ರತಿ ಎಕರೆಗೆ 20 ಸಾವಿರ ಪರಿಹಾರಕ್ಕೆ ಆಪ್ ಆಗ್ರಹ

ಬೆಂಗಳೂರು: ಪಂಜಾಬ್ ರಾಜ್ಯದ ಆಮ್ ಆದ್ಮಿ ಪಕ್ಷದ ಸಿಎಂ ಭಗವಂತ ಮಾನ್ ಸರ್ಕಾರ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರ ಜಮೀನಿಗೆ ಘೋಷಿಸಿರುವಂತೆ ರಾಜ್ಯದ ರೈತರಿಗೂ ಸಹ ಪ್ರತಿ ಎಕರೆಗೆ 20 ಸಾವಿರ ರೂ ಪರಿಹಾರ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಈ ಕುರಿತು ಮಾತನಾಡಿದ್ದು, ರಾಜ್ಯ ಸರ್ಕಾರವು ಹೆಕ್ಟೇರ್ ಲೆಕ್ಕದಲ್ಲಿ ಘೋಷಿಸಿರುವ 17,000 ಮತ್ತು 25,000 ರೂ.ಗಳು ಅರೆಕಾಸಿನ ಮಜ್ಜಿಗೆಯಂತಿದೆ, ಉತ್ತರ ಕರ್ನಾಟಕದ ರೈತರು ಖಾಸಗಿಯವರಿಂದ ಸಾಲ,ಸೋಲ ಮಾಡಿ ಅತಿವೃಷ್ಟಿಯಿಂದಾದ ಅನಾಹುತಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಸರ್ಕಾರ ನೀಡುವ ಪರಿಹಾರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರನ್ನು ಪಾರು ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಪಂಜಾಬ್ ಸರ್ಕಾರವು ಕ್ಷಿಪ್ರಗತಿಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ಪೂರ್ಣಗೊಳಿಸಿ ದೇಶದಲ್ಲಿಯೇ ಅತಿ ಹೆಚ್ಚಿನ ಪರಿಹಾರ ಧನವನ್ನು ಘೋಷಿಸಿದೆ, ರಾಜ್ಯದಲ್ಲಿ ಇದುವರೆಗೂ ಜಂಟಿ ಸಮೀಕ್ಷೆ ಕಾರ್ಯ ಪೂರ್ಣ ಗೊಂಡಿಲ್ಲ, ಕೃಷಿ ಅಧಿಕಾರಿಗಳ ನಿಧಾನ ಗತಿಯ ಸರ್ವೆ ಕಾರ್ಯಗಳನ್ನು ನೋಡಿದರೆ ಮೂರ್ನಾಲ್ಕು ತಿಂಗಳಾದರೂ ಮುಗಿಯುವುದಿಲ್ಲ. ಆದರೆ ಕೃಷಿ ಸಚಿವರು ಪರಿಹಾರವನ್ನು ಈಗಲೇ ಘೋಷಿಸಿಬಿಟ್ಟಿದ್ದಾರೆ, ಯಾವ ರೀತಿ ರೈತರಿಗೆ ಈ ಅಲ್ಪ ಮೊತ್ತ ತಲುಪಲು ಸಾಧ್ಯ ಎಂಬುದನ್ನು ಕೃಷಿ ಸಚಿವರು ಉತ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ರೀತಿಯ ಸೋಗಲಾಡಿತನ ವರ್ತನೆಯನ್ನು ಬಿಟ್ಟು ಕೂಡಲೇ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ಶೀಘ್ರವೇ ಜಂಟಿ ಸರ್ವೆ ಕಾರ್ಯ ಮುಗಿಸಿ ಪಂಜಾಬ್ ಸರ್ಕಾರದ ಮಾದರಿಯಲ್ಲಿ ಎಕರೆಗಳಲ್ಲಿ ಪರಿಹಾರ ಧನವನ್ನು ಮರು ಘೋಷಿಸಬೇಕೆಂದು ಜಗದೀಶ್ ವಿ. ಸದಂ ಒತ್ತಾಯಿಸಿದ್ದಾರೆ.

ಪಂಜಾಬ್ ರೀತಿ ರಾಜ್ಯದ ರೈತರಿಗೂ ಪ್ರತಿ ಎಕರೆಗೆ 20 ಸಾವಿರ ಪರಿಹಾರಕ್ಕೆ ಆಪ್ ಆಗ್ರಹ Read More

ಕರ್ನಾಟಕವನ್ನು ದಿವಾಳಿ ಮಾಡುವುದೇ ರಾಜ್ಯ ಸರ್ಕಾರದ ಅಜೆಂಡಾ:ಅಶೋಕ್

ಬೆಂಗಳೂರು:

ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡಬೇಕೆಂಬುದೇ ಕಾಂಗ್ರೆಸ್ ಸರ್ಕಾರದ ಒನ್‌ ಲೈನ್‌ ಅಜೆಂಡಾ‌‌ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಸಾಲ ಮಾಡುವುದನ್ನೇ ಫುಲ್‌ ಟೈಂ ಕಾಯಕವನ್ನಾಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಸ್ತುತ ಕರ್ನಾಟಕದ ಒಟ್ಟು ಸಾಲವನ್ನು 6 ಲಕ್ಷ 65 ಸಾವಿರ ಕೋಟಿಗೆ ಮುಟ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿ ಕನ್ನಡಿಗನ ಮೇಲೆ ಬರೋಬ್ಬರಿ 1 ಲಕ್ಷ ರೂಪಾಯಿ ಸಾಲದ ಹೊರೆಯನ್ನು ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಹೊರೆಸಿದೆ ಎಂದು ಟ್ವೀಟ್ ಮಾಡಿ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ನಾವೀನ್ಯತೆಯ ಸೂಚ್ಯಂಕದಲ್ಲಿ, ಬಂಡವಾಳ ಹೂಡಿಕೆಯಲ್ಲಿ ನಂಬರ್‌ 1 ಆಗಿತ್ತು, ಆದರೆ ಈ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅತಿ ಹೆಚ್ಚು ಸಾಲ ಮಾಡುವ ರಾಜ್ಯಗಳಲ್ಲಿ ನಂಬರ್‌ 1 ಆಗುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಜರಿದಿದ್ದಾರೆ.

ಹಿಂದಿನ ಅವಧಿಯಲ್ಲಿ ಕೇಂದ್ರದ ಎನ್ ಡಿ ಎ ಸರ್ಕಾರ‌ ಕೃಷಿ ಕಾಯ್ದೆ‌ಗಳ ತಿದ್ದುಪಡಿಗೆ ಮುಂದಾದಾಗ ಅದನ್ನ ವಿರೋಧಿಸಿ, ಬೀದಿ ರಂಪಾಟ ಮಾಡಿದ್ದ ಕಾಂಗ್ರೆಸ್ ಪಕ್ಷ, ಈಗ ಅದೇ ಮೂರು ಕೃಷಿ ಕಾಯ್ದೆಗಳ ಅನ್ವಯ ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕೃಷಿ ಬೆಲೆ ಆಯೋಗಕ್ಕೆ ಸಿದ್ದರಾಮಯ್ಯ ಸರ್ಕಾರ ಸೂಚನೆ ನೀಡಿದೆ.

ತನ್ನ ರಾಜಕೀಯ ಲಾಭಕ್ಕಾಗಿ ಅನ್ನದಾತರ ಹಿತಾಸಕ್ತಿಯನ್ನು ಬಲಿಕೊಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಈಗ ಬಯಲಾಗಿದೆ ಎಂದು ಅಶೋಕ್ ವ್ಯಂಗ್ಯ ವಾಡಿದ್ದಾರೆ.

ಕರ್ನಾಟಕವನ್ನು ದಿವಾಳಿ ಮಾಡುವುದೇ ರಾಜ್ಯ ಸರ್ಕಾರದ ಅಜೆಂಡಾ:ಅಶೋಕ್ Read More