ಮೈಸೂರು: ಶ್ರೀ ದತ್ತಾತ್ರೇಯ ಪ್ರತಿಷ್ಠಾನ ಮತ್ತು ಕರ್ನಾಟಕ ಬಸವೇಶ್ವರ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಶ್ರೀ ಶಿವರಾತ್ರಿಶ್ವರ ಆಟೋಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್, ಕಾಲಾ ಶನೇಶ್ವರ ಸ್ವಾಮಿ ದೇವಸ್ಥಾನ ಮುಖ್ಯಸ್ಥರಾದ ಸೂರ್ಯ ದೇವ , ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಮಲಾ ನಟರಾಜ್ ಮತ್ತಿತರ ಸಾಧಕರನ್ನು ಗೌರವಿಸಲಾಯಿತು.
ಮೈಸೂರು: ಕೃಷ್ಣಮೂರ್ತಿ ಪುರಂನಲ್ಲಿರುವ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಸಂಘದ ಅಧ್ಯಕ್ಷರಾದ ಎಂ ಡಿ ಗೋಪಿನಾಥ್ ಹಾಗೂ ಬ್ರಾಹ್ಮಣ ಧರ್ಮ ಸಹಾಯ ಸಭೆಯ ಚುನಾವಣೆಯಲ್ಲಿ ಆಯ್ಕೆಯಾದ ಸಂಘದ ನಿರ್ದೇಶಕರಾದ ಎಚ್.ಎಸ್ ಪ್ರಶಾಂತ್ ತಾತಾಚಾರ್(ಕಣ್ಣ) ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ನಲ್ಲಿ ಉತ್ತೀರ್ಣರಾದ ಪ್ರಿಯ ಎಸ್ ಅವರನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟ ಅಧಿಕಾರಿ ಮನು ಮಂಜುಳಾ ಅವರು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಸ್ಥೆಗಳ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಸಹಕಾರ ಸಪ್ತಹವನ್ನು ಹಬ್ಬದ ಮಾದರಿಯಲ್ಲಿ ಆಚರಿಸಬೇಕು, ಭಾರತದ ಸಹಕಾರ ಚಳುವಳಿ ಹಲವಾರು ಸವಾಲುಗಳು ಮತ್ತು ಸ್ಪರ್ಧೆಗಳನ್ನು ಎದುರಿಸಿದರೂ ದೃತಿಗೆಡದೆ ಮುಂದುವರೆದಿದೆ, ಸಹಕಾರ ಕ್ಷೇತ್ರ ಪ್ರಗತಿ ಕಾಣುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪ್ರಾರ್ಥನೆ ಹಾಗೂ ನಾಡಗೀತೆಯನ್ನು ನಿರ್ದೇಶಕರಾದ ನಾಗಶ್ರೀ ಎನ್ ಹಾಗೂ ಗಾಯಕ ಮಹಾಲಿಂಗ ಮತ್ತು ಮಹಿಳಾ ವೃಂದಗಾನ ತಂಡದವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ.ಡಿ ಗೋಪಿನಾಥ್, ಉಪಾಧ್ಯಕ್ಷರಾದ ಎಂ.ಎನ್ ಸೌಮ್ಯ, ಖಜಾಂಚಿ ಕೆ ನಾಗರಾಜ, ನಿರ್ದೇಶಕ ಮಂಡಲಿ ಸದಸ್ಯರಾದ ಸಿ.ವಿ ಪಾರ್ಥಸಾರಥಿ, ಹೆಚ್. ಎಸ್. ಪ್ರಶಾಂತ್ ತಾತಾಚಾರ್ (ಕಣ್ಣ), ಹೆಚ್. ಪಿ.ಚೇತನ್, ವಿಕ್ರಂ ಅಯ್ಯಂಗಾರ್, ಎನ್ ನಾಗಶ್ರೀ, ಕೆ. ಎನ್ ಅರುಣ್, ಶಿವರುದ್ರಪ್ಪ,ಎಸ್ ರಾಜಮ್ಮ ಹಾಗೂ ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಹಾಗೂ ಸೊಸೈಟಿ ಸದಸ್ಯರ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
ಧಾರವಾಡ: ಧಾರವಾಡದ ರೈಲ್ವೇ ಕಾಲೋನಿ ಆವರಣದಲ್ಲಿ ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆ ವತಿಯಿಂದ ಹಮ್ನಿಕೊಂಡಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.
ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೋ ಕೆ ಎಸ್ ಕೌಜಲಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಧಾರವಾಡ ರೈಲ್ವೇ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ವ್ಹಿ ಸಿ ಪಾಟೀಲ,ಕಚೇರಿ ಸೂಪರಿಂಟೆಂಡೆಂಟ್ ಮಂಜುನಾಥ ದ್ಯಾವಣ್ಣವರ ಹಾಗೂ ಪ್ರಕಾಶ ಬಾಗಳಿ ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ರಾ.ಹ ಕೊಂಡಕೇರ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಮಹೇಶ ಎಸ್ ತಳವಾರ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುರೇಶ ಹೀರೆಣ್ಣವರ ಸವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಸಂಘದ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಮಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರೈಲ್ವೇ ಕಾಲೋನಿಯ ಮಕ್ಕಳು,ನೌಕರರು ಹಾಗೂ ಇನ್ನಿತರ ಕನ್ನಡ ಕಲಾಭಿಮಾನಿಗಳು ನೃತ್ಯ, ಹಾಡು,ಭಾಷಣ,ಏಕ ಪಾತ್ರಾಭಿನಯ,ಗೀತ ಗಾಯನ ನಡೆಸಿಕೊಟ್ಟು ಎಲ್ಲರನ್ನು ರಂಜಿಸಿದರು.
ಸಂಘದ ಎಲ್ಲಾ ಸದಸ್ಯರು,ಕನ್ನಡ ಪ್ರೇಮಿಗಳು,ರೈಲ್ವೇ ನೌಕರರು ಪಾಲ್ಗೊಂಡಿದ್ದರು.
ಬೆಂಗಳೂರು, ನವೆಂಬರ್. ೧: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಮಂತ್ರಿಗಳು, ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಬೇಕೆಂದು ಕರೆ ನೀಡಿದರು.
ಮಾತೃಭಾಷೆಯಲ್ಲಿಯೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರಬೇಕೆಂದು ಕೇಂದ್ರ ಸರ್ಕಾರವನ್ನು ಇದೇ ವೇಳೆ ಒತ್ತಾಯಿಸಿದರು.
ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ವುಸ್ತರಿಸುವ ಕಾರ್ಯವನ್ನೂ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
800 ಕನ್ನಡ ಶಾಲೆಗಳು ಮತ್ತು 100 ಉರ್ದು ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಮದರಸಾಗಳಲ್ಲಿ ಕನ್ನಡ ಕಲಿಸಲು ಆದ್ಯತೆ ನೀಡುತ್ತಿದ್ದೇವೆ. ಕನ್ನಡ ಭಾಷೆ, ಪರಂಪರೆಗಳನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸಬೇಕಾದ ಅನಿವಾರ್ಯತೆಯಿರುವುದರಿಂದ ಇದಕ್ಕಾಗಿ ಹೊಸ ನೀತಿಯನ್ನು ತರುವ ಸಿದ್ಧತೆಯಲ್ಲಿದ್ದೇವೆ ಎಂದು ಸಿದ್ದು ತಿಳಿಸಿದರು.
ರಾಜ್ಯದಲ್ಲಿ ಶತಮಾನ ಪೂರೈಸಿರುವ ಸುಮಾರು 3000 ಸರ್ಕಾರಿ ಶಾಲೆಗಳಿವೆ. ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ರಾಜ್ಯಾದ್ಯಂತ 2,500 ಕೋಟಿ ರೂ ವೆಚ್ಚದಲ್ಲಿ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಿ ಪ್ರತಿ ಶಾಲೆಯನ್ನು 4 ಕೋಟಿ ರೂ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಅಲ್ಪಸಂಖ್ಯಾತ ಸಮುದಾಯಗಳು ಮುಖ್ಯವಾಹಿನಿಗೆ ಬರುವ ಜೊತೆಗೆ ಸುಲಭವಾಗಿ ಸಮಾಜದಲ್ಲಿ ಬೆರೆಯುವಂತೆ ಪ್ರಾಥಮಿಕ ಕನ್ನಡವನ್ನು ಮದರಸಾ ಶಿಕ್ಷಣದ ಭಾಗವಾಗಿ ಕಲಿಸಲು ಪ್ರಸ್ತುತ ವರ್ಷದಲ್ಲಿ 180 ಮದರಸಾಗಳಲ್ಲಿ ಕನ್ನಡ ಕಲಿಸಲಾಗುತ್ತಿದೆ. ಇದನ್ನು ರಾಜ್ಯದಲ್ಲಿರುವ 1500 ಮದರಸಾಗಳಿಗೆ ವಿಸ್ತರಿಸಲಾಗುವುದು. ಇದಕ್ಕಾಗಿ 483 ಕೋಟಿ ವೆಚ್ಚದಲ್ಲಿ 100 ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
1956 ರಂದು ಏಕೀಕರಣಗೊಂಡ ನಮ್ಮ ಕರ್ನಾಟಕ ರಾಜ್ಯ ಉದಯವಾಗಿ ನವೆಂಬರ್ 1, 2025 ಕ್ಕೆ 69 ವರ್ಷ ಪೂರೈಸಿ 70 ನೇ ವರ್ಷಕ್ಕೆ ಮುನ್ನಡೆಯುತ್ತಿದೆ,ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಮೈಸೂರಿನ ವಿದ್ಯಾರ್ಥಿ ರಾಮಸ್ವಾಮಿ, ಬಳ್ಳಾರಿಯ ರಂಜಾನ್ ಸಾಬ್ ಮುಂತಾದವರಿಗೆ ತಲೆಬಾಗಿ ನಮಿಸುತ್ತೇನೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಏಕೀಕರಣ ಚಳವಳಿಯ ಬೀಜಗಳನ್ನು ಬಿತ್ತಿ, ಅದನ್ನು ಮುನ್ನಡೆಸಿದ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ಕೆಂಗಲ್ ಹನುಮಂತಯ್ಯ ಮುಂತಾದ ಮಹನೀಯರನ್ನು ಹೃದಯ ತುಂಬಿ ಸ್ಮರಿಸುತ್ತೇನೆ. ಇವರೆಲ್ಲರ ಹೋರಾಟದ ಫಲವೆ ಇಂದಿನ ಕರ್ನಾಟಕ ಎಂದು ಬಣ್ಣಿಸಿದರು.
ಮನುಷ್ಯ ಜಾತಿ ತಾನೊಂದೇ ವಲಂ’ ಎಂದ ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡದ ಸಾಹಿತ್ಯ ಸಂಪತ್ತು ಸಾಕಷ್ಟು ಸಮೃದ್ಧಗೊಂಡಿದೆ. ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದೆ ಎಂದು ಹೇಳಿದರು.
ಸಾವಿರಾರು ವರ್ಷಗಳಷ್ಟು ಹಳೆಯ ಇತಿಹಾಸವುಳ್ಳ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆಯ ನಿರ್ಲಕ್ಷ ಹಲವು ಸಮಸ್ಯೆಗಳನ್ನು ಹುಟ್ಟಿ ಹಾಕಿದೆ. ಜಗತ್ತಿನ ಮುಂದುವರೆದ ಭಾಷೆಗಳಿಗೆ ಇಲ್ಲದ ಬಿಕ್ಕಟ್ಟು ಇಂದು ಕನ್ನಡದಂಥ ಭಾಷೆಗೆ ಬಂದಿದೆ. ಮುಂದುವರೆದ ದೇಶಗಳ ಮಕ್ಕಳು ತಮ್ಮ ತಾಯಿ ನುಡಿಗಳಲ್ಲಿಯೆ ಯೋಚಿಸುತ್ತಾರೆ, ಕಲಿಯುತ್ತಾರೆ ಮತ್ತು ಕನಸು ಕಾಣುತ್ತಾರೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ಇಂಗ್ಲೀಷು, ಹಿಂದಿಯಂಥ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಯನ್ನು ಭಾಷೆಯ ಕಾರಣಕ್ಕೆ ದುರ್ಬಲಗೊಳಿಸುತ್ತಿವೆ. ಹಾಗಾಗಿ ಮಾತೃಭಾಷೆಯಲ್ಲಿಯೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರಬೇಕಾದ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಒಂದು ನಾಡನ್ನು ಕಟ್ಟುವುದು ಸರಳವಾದ ಸಂಗತಿಯಲ್ಲ. ನಾಡೊಂದರ ಸಮಗ್ರ ಅಭಿವೃದ್ಧಿಯೆಂದರೆ ರಸ್ತೆ, ಸೇತುವೆ, ವಿದ್ಯುತ್, ರೈಲು, ವಿಮಾನ, ಸುಸಜ್ಜಿತ ಕಟ್ಟಡಗಳಷ್ಟೆ ಅಲ್ಲ. ಆ ನಾಡಿನ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ, ತಮ್ಮ ಜೊತೆಯಲ್ಲಿನ ಮಕ್ಕಳ ಭಾಷೆ, ಬದುಕು, ಧರ್ಮ, ಜಾತಿ ಹಾಗೂ ಇನ್ನಿತ್ಯಾದಿ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಕಲಿಸುವುದೂ ಮುಖ್ಯ. ಇದರ ಜೊತೆಗೆ ಜಗತ್ತಿನ ಮುಖ್ಯ ದೇಶಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಅನ್ವೇಷಣೆಗಳಿಗೆ ಸರಿಸಾಟಿಯಾಗಿ ನಿಲ್ಲುವಂಥ ರೀತಿಯಲ್ಲಿ ಆಲೋಚನೆಗಳನ್ನು ಕಲಿಸುವ ವಾತಾವರಣವೂ ಬಹಳ ಮುಖ್ಯ ಎಂದು ತಿಳಿಸಿದರು.
ಈ ವರ್ಷ ಕನ್ನಡಕ್ಕೆ ಬೂಕರ್ ಪ್ರಶಸ್ತಿಯನ್ನು ಶ್ರೀಮತಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯವರು ತಂದುಕೊಡುವ ಮೂಲಕ ನಮ್ಮ ಭಾಷೆಯ ಶಕ್ತಿಯನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದ್ದಾರೆ. ಅವರನ್ನೂ ಈ ಸಂದರ್ಭದಲ್ಲಿ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಮುಖ್ಯ ಮಂತ್ರಿಗಳು ಹೃದಯತುಂಬಿ ಹೇಳಿದರು.
ಒಕ್ಕೂಟ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಮಲತಾಯಿ ಧೋರಣೆಯನ್ನು ತೋರುತ್ತಿದೆ. 4.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಸಂಪತ್ತನ್ನು ಕರ್ನಾಟಕವು ನೀಡುತ್ತಿದೆ. ಆದರೆ ನಮಗೆ ಬಿಡಿಗಾಸು ಕೊಟ್ಟು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತಿದೆ. ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ನಿರಂತರ ಹುನ್ನಾರ ನಡೆಯುತ್ತಿದೆ. ಹಿಂದಿ, ಸಂಸ್ಕೃತ ಭಾಷೆಗಳ ಅಭಿವೃದ್ಧಿಗೆ ಮಾತ್ರ ಅನುದಾನಗಳನ್ನು ನೀಡಲಾಗುತ್ತಿದೆ. ಕನ್ನಡವೂ ಸೇರಿದಂತೆ ಉಳಿದ ದೇಶಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ನಾಡಿನ ಇತಿಹಾಸ, ಪರಂಪರೆಗಳ ನೆನಪುಗಳನ್ನು ಹೊಸ ತಲೆಮಾರುಗಳಲ್ಲಿ ಮೂಡಿಸಿ ಅವರಲ್ಲಿ ಅಭಿಮಾನ ಮೂಡಿಸೋಣ. ನಮಗಿರುವ ಸವಾಲುಗಳನ್ನೆ ಅವಕಾಶವಾಗಿ ಮಾರ್ಪಡಿಸುವ ಶಕ್ತಿ ನಮ್ಮ ಯುವ ತಲೆಮಾರಿಗಿದೆ. ಯುವ ತಲೆಮಾರು ಎದ್ದು ನಿಂತು ಕನ್ನಡ ಮತ್ತು ಕರ್ನಾಟಕವನ್ನು ಜಗತ್ತಿನ ಮುಂದುವರೆದ ಸಮಾಜಗಳ ಮಟ್ಟಕ್ಕೆ ನಿಲ್ಲಿಸಬೇಕಾಗಿದೆ ಎಂದು ಕರೆ ನೀಡಿದರು.
ಇತ್ತೀಚೆಗೆ ತಾನೆ ಪ್ರೊ.ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ವರದಿಯನ್ನು ನೀಡಿದೆ. ರಾಜ್ಯದ್ದೆ ಆದ ಶಿಕ್ಷಣ ನೀತಿಯು ರಚನೆಯಾಗಿರುವುದು ಇದೇ ಮೊದಲು,ಈ ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.
ಬಹಳ ವರ್ಷಗಳ ನಂತರ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ನಲ್ಲಿ 2024-25 ರಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದೆ ಹಾಕಿ, ಮೊದಲ ಸ್ಥಾನಕ್ಕೆ ಏರಿದೆ ಎಂಬುದಾಗಿ ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳು ಹೇಳುತ್ತಿವೆ. 50,107 ಕೋಟಿ ರೂ.ಗಳಿಗೂ ಹೆಚ್ಚಿನ ವಿದೇಶಿ ನೇರ ಹೂಡಿಕೆಯು ರಾಜ್ಯದಲ್ಲಿ ಆಗಿದೆ. ಇಡೀ ದೇಶದ ಹೂಡಿಕೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಲು ಶೇ.51 ರಷ್ಟಿದೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಸಂತಸದಿಂದ ಸಿದ್ದು ಹೇಳಿದರು.
ನಮ್ಮ ರಾಜ್ಯವು ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಮೂಲಕ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಜನರಲ್ಲಿ ಕೊಳ್ಳುವ ಸಾಮರ್ಥ್ಯ ವನ್ನು ಹೆಚ್ಚಿಸಿ, ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವ ಮೂಲಕ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ಸಿದ್ದು ಹೇಳಿದರು.
ನಮ್ಮ ಸರ್ಕಾರವು ಗಿಗ್ ಎಕಾನಮಿ, ಗ್ರೀನ್ ಎಕಾನಮಿ, ಗ್ಯಾರಂಟಿ ಎಕಾನಮಿ, ಗ್ಲೋಬ್ ಟ್ರೋಟಿಂಗ್ ಎಕಾನಮಿ, ಪ್ರವಾಸೋದ್ಯಮ ಆರ್ಥಿಕತೆ, ಗುಡ್ ಗವರ್ನೆನ್ಸ್, ಜಿಯೊಗ್ರಾಫಿಕಲ್ ಈಕ್ವಾಲಿಟಿ, ಪ್ರಾದೇಶಿಕ ಸಮಾನತೆ, ಗುಡ್ ಹೆಲ್ತ್ ಟು ಆಲ್ ಪೀಪಲ್, ಜೆಂಡರ್ ಈಕ್ವಾಲಿಟಿ, ಗುಡ್ ಪಬ್ಲಿಕ್ ಎಜುಕೇಶನ್, ಗುಡ್ ಕನೆಕ್ಟಿವಿಟಿ ಮುಂತಾದ 10-ಜಿ ಗಳನ್ನು ಮುಖ್ಯ ಗುರಿಯಾಗಿಸಿಕೊಂಡು, ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೆ ಕರ್ನಾಟಕವು ಉದಯಿಸುತ್ತಿದೆ. ದ ರೈಸಿಂಗ್ ಕರ್ನಾಟಕದ ಕುರಿತು ವಿಶ್ವ ಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ ಅವರೆ ಶ್ಲಾಘಿಸಿದ್ದಾರೆ. ಇವೆಲ್ಲವೂ ನಮಗೆ ಹೆಮ್ಮೆಯನ್ನೂ ತಂದಿವೆ. ಜವಾಬ್ಧಾರಿಯನ್ನೂ ಹೆಚ್ಚಿಸಿವೆ ಮುಖ್ಯ ಮಂತ್ರಿಗಳು ತಿಳಿಸಿದರು.
ಮೈಸೂರು, ನವೆಂಬರ್ ೧: 70 ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಓವೆಲ್ ಮೈದಾನದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿದರು.
ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಎನ್ ಸಿ ಸಿ, ಎನ್ ಎಸ್ ಎಸ್ ಹಾಗೂ ವಿವಿಧ ಶಾಲೆಗಳ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿ ಗಮಬ ಸೆಳೆದರು.
ಸಚಿವರು ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ, ತಾಯಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ ಟಿ ದೇವೇಗೌಡ, ಕೆ ಹರೀಶ್ ಗೌಡ, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಕೆ. ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ರಾದ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮೈಸೂರು: ಕನ್ನಡ ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬ ಕನ್ನಡಿಗ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಹರೀಶ್ ಗೌಡ ಕರೆ ನೀಡಿದರು.
ನಗರದ ದೇವರಾಜ ಮಾರ್ಕೆಟ್ ಯುವ ಬ್ರಿಗೇಡ್ ವತಿಯಿಂದ 17ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಹರೀಶ್ ಗೌಡ ಅವರ ಕೆ ಜಿ ಕೊಪ್ಪಲಿ ನಲ್ಲಿರುವ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕರು,ಪ್ರತಿಯೊಬ್ಬರೂ ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ಕನ್ನಡ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿದರೆ ಸಾಲದು, ಕನ್ನಡ ಬೆಳವಣಿಗೆಯ ಬಗ್ಗೆ ನಿತ್ಯ ಚಿಂತನೆ ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಯಶಸ್ವಿಗೊಳ್ಳಲಿ ಎಂದು ಹರೀಶ್‌ಗೌಡ ಶುಭ ಹಾರೈಸಿದರು.
ನವಂಬರ್ 3ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಳೆ ಸಂತೆಪೇಟೆಯ ನಂಜುಂಡೇಶ್ವರ ದೇವಸ್ಥಾನದ ಮುಂಭಾಗ ಕನ್ನಡದ ತೇರು ಭವ್ಯ ಮೆರವಣಿಗೆ ಪ್ರಾರಂಭಗೊಂಡು ದೇವರಾಜ ಮಾರ್ಕೆಟ್ ನಲ್ಲಿ ಅಂತ್ಯಗೊಳ್ಳುವುದು.
ಭುವನೇಶ್ವರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರ ಹಾಗೂ ವಿವಿಧ ಕಲಾತಂಡಗಳ ಜೊತೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸಂಸದರಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಶಾಸಕರಾದ ಹರೀಶ್ ಗೌಡ ಸೇರಿದಂತೆ ಇನ್ನಿತರ ಮುಖಂಡರುಗಳು ಭಾಗಿಯಾಗಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪ್ರೇಮಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ದೇವರಾಜ ಮಾರ್ಕೆಟ್ ಯುವ ಬ್ರಿಗೇಡ್ ಅಧ್ಯಕ್ಷ ಬಿ.ಸಂದೀಪ್ ಈ ವೇಳೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ನವೀನ್, ಕಾರ್ತಿಕ್ ಗೌಡ, ಹಿಬ್ಬು, ಪುರುಷೋತ್ತಮ್, ಸಾಗರ್, ಮುಂತಾದವರು ಹಾಜರಿದ್ದರು