ಕಮಲಹಸನ್ ಹೇಳಿಕೆ ಖಂಡಿಸಿಕರ್ನಾಟಕ ಸೇನಾಪಡೆ ಪ್ರತಿಭಟನೆ

ಮೈಸೂರು: ಬಹುಭಾಷಾ ನಟ ಕಮಲಹಸನ್ ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಸದಸ್ಯರು ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿದರು.

ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ, ಸ್ವತಂತ್ರ ಲಿಪಿ ಹೊಂದಿರುವ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ಕೋಟ್ಯಾಂತರ ಕನ್ನಡಿಗರ ಜೀವನಾಡಿ ಆಗಿರುವ ಹೆಮ್ಮೆಯ ಕನ್ನಡ ಭಾಷೆಗೆ ಕಮಲಹಾಸನ್ ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕನ್ನಡ ಭಾಷೆಗೆ ಅವಮಾನಿಸಿದ್ದಾರೆ ಎಂದು ಪ್ರತಭಟನಾ ನಿರತರು ಖಂಡಿಸಿದರು.

ನಮ್ಮ ಕನ್ನಡ ಭಾಷೆಯಲ್ಲಿ 52 ಅಕ್ಷರಗಳಿವೆ. ಆದರೆ ತಮಿಳು ಭಾಷೆಯಲ್ಲಿ ಬರೀ 18 ಅಕ್ಷರಗಳಿವೆ‌. ನಮ್ಮ ಕನ್ನಡ ಭಾಷೆಯಲ್ಲಿ ಕ ಖ ಗ ಘ ಙ, ಚ ಛ ಜ ಝ ಞ ಎಂಬಿತ್ಯಾದಿ ಅಕ್ಷರಗಳಿವೆ. ಆದರೆ ತಮಿಳಿನಲ್ಲಿ ಬರೀ ಕ, ಚ, ಟ, ಪ ಅಕ್ಷರಗಳಿವೆ. ಇದನ್ನು ಅರಿಯದ, ಭಾಷೆಗಳ ಬಗ್ಗೆ ಜ್ಞಾನ ಇಲ್ಲದ ಕಮಲಹಸನ್ ಈ ರೀತಿ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ನಮ್ಮ ಕನ್ನಡ ಭಾಷೆ ದೇಶದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಬಹುಶಃ ಸಂಸ್ಕೃತ ಬಿಟ್ಟರೆ ಕನ್ನಡ ಭಾಷೆ ಬಹಳ ಪ್ರಾಚೀನ ಭಾಷೆ, ಅದಕ್ಕಾಗಿ ನಮ್ಮ ಕನ್ನಡಕ್ಕೆ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಹ ನಮ್ಮ ಕನ್ನಡಕ್ಕೆ ಸಿಕ್ಕಿದೆ.

ಕೂಡಲೇ ಕಮಲಹಾಸನ್ ಕನ್ನಡಿಗರ ಹಾಗೂ ಕನ್ನಡ ಭಾಷೆಯ ಬಗ್ಗೆ ಕ್ಷಮೆ ಕೋರಬೇಕು ಇಲ್ಲದಿದ್ದಲ್ಲಿ ಮುಂದಿನ ವಾರ ತೆರೆ ಕಾಣಲಿರುವ ಅವರ ಸಿನಿಮಾವನ್ನು ರಾಜ್ಯಾದ್ಯಂತ ಬಹಿಷ್ಕಾರ ಮಾಡಿ ಬಿಡುಗಡೆಯಾಗದಂತೆ ತಡೆ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಗೋಲ್ಡ್ ಸುರೇಶ್, ಪ್ರಭುಶಂಕರ, ನೇಹಾ, ಬೋಗಾದಿ ಸಿದ್ದೇಗೌಡ, ಕೃಷ್ಣಪ್ಪ, ಗಿರೀಶ್ ಹೆಚ್, ಸಿಂದುವಳ್ಳಿ ಶಿವಕುಮಾರ್, ತಾಯೂರ್ ಗಣೇಶ್, ಹನುಮಂತಯ್ಯ, ಮೂರ್ತಿ ಲಿಂಗಯ್ಯ, ದರ್ಶನ್ ಗೌಡ, ವರಕೂಡು ಕೃಷ್ಣೇಗೌಡ,ರವೀಶ್, ಪ್ರಭಾಕರ್ , ನಾಗರಾಜಾ ಚಾರ್, ಶಿವರಾಂ ಗೌಡ, ರಘು ಅರಸ್, ಎಳನೀರು ರಾಮಣ್ಣ, ಗಣೇಶ್ ಪ್ರಸಾದ್, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.

ಕಮಲಹಸನ್ ಹೇಳಿಕೆ ಖಂಡಿಸಿಕರ್ನಾಟಕ ಸೇನಾಪಡೆ ಪ್ರತಿಭಟನೆ Read More

ವಿದ್ಯಾರ್ಥಿಗಳಲ್ಲಿ ಕನ್ನಡದ ಜಾಗೃತಿ ಅಗತ್ಯ ಟಿ .ಎಸ್ ಶ್ರೀವತ್ಸ

ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಭಾಷೆ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ನಮೋ ಯೋಗ ಭವನದಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೂ ಹೆಚ್ಚು ಅಂಕಗಳಿಸಿದ
ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಶಾಸಕರು ಮಾತನಾಡಿದರು.

ಮಾತೃ ಭಾಷೆ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ, ಇಂದಿನ ಹೊಸ ಪೀಳಿಗೆಯಲ್ಲಿ ಕನ್ನಡ ಭಾಷೆಯ ಅಭಿಮಾನದ ಕಿಚ್ಚು ಹಚ್ಚುವ ಮತ್ತು ಸಾಧನೆಯ ಹೊಸ ಕನಸು ಬಿತ್ತುವ ಪ್ರಾಮಾಣಿಕ ಕಾರ್ಯವನ್ನು ಕೆ ಎಂ ಪಿ ಕೆ ಟ್ರಸ್ಟ್ ಮಾಡುತ್ತಿದ್ದು ಶ್ಲಾಘನೀಯ ಎಂದು ಹೇಳಿದರು.

ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಪ್ರಜ್ಞೆ, ಜಾಗೃತಿಗೊಳಿಸುವ ಅಗತ್ಯವಿದೆ,
ಕನ್ನಡ ಕರ್ನಾಟಕದ ಜನರ ಬದುಕಿನ ಭಾಷೆ, ಜನ ಭಾಷೆ ಅಷ್ಟೇ ಅಲ್ಲ ಜನಸಾಮಾನ್ಯರ ಭಾಷೆಯಾಗಿದೆ.ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನಲ್ಲಿ ಪ್ರತಿ ವಿದ್ಯಾರ್ಥಿಯು ಕನ್ನಡ ಪ್ರಜ್ಞೆಯನ್ನ ಬೆಳೆಸಿಕೊಳ್ಳಬೇಕು, ಅದು ಮುಂದೆ ಕನ್ನಡತನ ಬೆಳೆಯಲು ಸಹಾಯವಾ ಗುತ್ತದೆ ಎಂದು ಶ್ರೀವತ್ಸ ಹೇಳಿದರು

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಮಾತನಾಡಿ ವಿದ್ಯಾರ್ಥಿ ಹಂತದಲ್ಲಿಯೇ ಕನ್ನಡ ಪ್ರೀತಿ ಜಾಗೃತಿಗೊಳಿಸುವ ಕೆಲಸ ಆಗಬೇಕಿದೆ, ಇದಕ್ಕಾಗಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗಿತ್ತಿರುವುದು ಶ್ಲಾಘನಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2025ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಅಂಕ ಪಡೆದ ರಾಹುಲ್ ಗಾಂಧಿ, ಅಭಯ್,ಲಹರಿ ಜಿ ಆರ್, ರಾಜೇಶ್,ಪ್ರವೀಣ್,ಶಾಂಭವಿ,ಸ್ಪಂದನ, ಐಶ್ವರ್ಯ, ಗೌತಮ್,ಕಿರಣ್ ಕುಮಾರ್, ನಾಗರಾಜು ಅವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಹಿರಿಯ ಸಮಾಜ ಸೇವಕ ಕೆ ರಘುರಾಮ ವಾಜಪೇಯಿ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ನಿರೂಪಕ ಅಜಯ್ ಶಾಸ್ತ್ರಿ, ಜಿ ರಾಘವೇಂದ್ರ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಸಮಾಜ ಸೇವಕರಾದ ಖುಷಿ ವಿನು, ರವಿಚಂದ್ರ, ಸುಚೇಂದ್ರ,ಶ್ರೀಕಾಂತ್ ಕಶ್ಯಪ್,
ಮಹಾನ್ ಶ್ರೇಯಸ್, ಚಕ್ರಪಾಣಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ಕನ್ನಡದ ಜಾಗೃತಿ ಅಗತ್ಯ ಟಿ .ಎಸ್ ಶ್ರೀವತ್ಸ Read More

ಕನ್ನಡದ ವಾತಾವರಣ ಗಟ್ಟಿಗೊಳಿಸಲು ಹೆಚ್ಚು ಶ್ರಮಿಸೋಣ: ಸಿದ್ದರಾಮಯ್ಯ ಕರೆ

ಮೈಸೂರು: ಕನ್ನಡದ ವಾತಾವರಣವನ್ನು ವಿಸ್ತರಿಸಲು, ಗಟ್ಟಿಗೊಳಿಸಲು ನಾವೆಲ್ಲಾ ಹೆಚ್ಚೆಚ್ಚು ಶ್ರಮಿಸೋಣ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಕರ್ನಾಟಕ ಬಹುತ್ವದ ಬೀಡು, ಬಹುತ್ವದ ನಾಡು ಕಟ್ಟುವ ವಿಚಾರದಲ್ಲಿ ರಾಜಿಯೇ ಇಲ್ಲ‌ ಎಂದು ಸಿ.ಎಂ.ಸಿದ್ದರಾಮಯ್ಯ ಕಡಕ್ಕಾಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ಮುನ್ನೋಟ ಚಿಂತನಾ ಸಮಾವೇಶ‌ ಉದ್ಘಾಟಿಸಿ ಸಿಎಂ ಮಾತನಾಡಿದರು.

ದೇವರಾಜ ಅರಸರು 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಮಕರಣಗೊಂಡು 50 ವರ್ಷದ ಸುವರ್ಣ ಸಂಭ್ರಮವನ್ನು ಬಿಜೆಪಿ ಸರ್ಕಾರ ಮಾಡಬೇಕಿತ್ತು, ಅವರು ಮಾಡಲಿಲ್ಲ ಹಾಗಾಗಿ ನಾನು ಸುವರ್ಣ ಸಂಭ್ರಮವನ್ನು ಬಜೆಟ್ ನಲ್ಲೇ ಘೋಷಿಸಿ ಇದನ್ನು ಕನ್ನಡ ಜನೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಮತ್ತು ಕನ್ನಡ ಏಳು ಕೋಟಿ ಜನರ ಉಸಿರಾಗಲಿ,ಇಲ್ಲಿ ಬದುಕನ್ನು ಕಟ್ಟಿಕೊಂಡಿರುವ ಇತರೆ ಭಾಷಿಕರು ಕನ್ನಡ ಮಾತಾಡುವಂತಾದರೆ ಒಳ್ಳೆಯದು. ನಾವು ಯಾವ ಭಾಷೆಯ ದ್ವೇಷಿಗಳಲ್ಲ ಸಾಧ್ಯವಿರುವಷ್ಟು ಭಾಷೆಗಳನ್ನೆಲ್ಲಾ ಕಲಿತರೆ ಒಳ್ಳೆಯದೆ. ಆದರೆ ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಿಸಿ ಕನ್ನಡವನ್ನು ಪೂರ್ತಿಯಾಗಿ ಬಳಸಬೇಕು ಇದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ಸೂಚ್ಯವಾಗಿ ಹೇಳಿದರು

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡ ನಾಡು ಬಹುತ್ವದ ಬೀಡು. ಇಲ್ಲಿ ಮನುಷ್ಯ ಪ್ರೀತಿಯ ಬಹುತ್ವ ಆಚರಿಸಲ್ಪಡುತ್ತದೆ. ಆದರೆ ವಿದ್ಯಾವಂತರೇ ಬಹುತ್ವ, ಜಾತ್ಯತೀತತೆ ಕೈಬಿಟ್ಟು ತಾರತಮ್ಯ , ಕಂದಾಚಾರವನ್ನು ಆಚರಿಸುತ್ತಿರುವುದು ದುರಂತ ಎಂದು ಸಿಎಂ ವಿಷಾದಿಸಿದರು.

ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ್ದು ಬಸವಣ್ಣನವರ ವೈಚಾರಿಕ ನಿಲುವುಗಳನ್ನು ನಾವು ಪಾಲಿಸಬೇಕು ಎನ್ನುವ ಉದ್ದೇಶದಿಂದ. ಸರ್ಕಾರಕ್ಕೆ ಕಿರೀಟ ಸಿಗುತ್ತದೆ ಎನ್ನುವ ಕಾರಣಕ್ಕೆ ಘೋಷಣೆ ಮಾಡಿದ್ದಲ್ಲ.

ಕನ್ನಡ-ಕರ್ನಾಟಕ-ಬಹುತ್ವ-ವೈಚಾರಿಕತೆ ಎಲ್ಲವೂ ಸೇರಿ ಆಗಿರುವ ಕನ್ನಡತನ ರೂಪುಗೊಂಡಿದೆ. ಈ ಕನ್ನಡತನವನ್ನು, ಇದು ರೂಪುಗೊಂಡ ಚರಿತ್ರೆಯನ್ನು ನಾವು ಈ ತಲೆಮಾರಿಗೆ ದಾಟಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಈ ಚಿಂತನಾ ಸಮಾವೇಶವನ್ನು ಆಯೋಜಿಸಲಾಗಿದೆ. ವಿಚಾರವಾದಿಗಳು ಒಟ್ಟಾಗಿ ಸೂಕ್ತವಾದ ಸಾಂಸ್ಕೃತಿಕ‌ ಮುನ್ನೋಟವನ್ನು ನೀಡುತ್ತೀರಿ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ.ಮಹದೇವಪ್ಪ, ಕನಕದಾಸ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ಗ್ಯಾರಂಟಿ ಅನುಷ್ಠಾನ‌ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಮುಕ್ತ ವಿವಿ‌ ಕುಲಪತಿಗಳಾದ ಪ್ರೊ.ಶರಣಪ್ಪ ವಿ.ಹಲ್ಸೆ, ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಧರಣೀದೇವಿ ಮಾಲಗತ್ತಿ, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕನ್ನಡದ ವಾತಾವರಣ ಗಟ್ಟಿಗೊಳಿಸಲು ಹೆಚ್ಚು ಶ್ರಮಿಸೋಣ: ಸಿದ್ದರಾಮಯ್ಯ ಕರೆ Read More