ಕನಕಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ಹೋಬಳಿ ಮಟ್ಟದ ಖೋ ಖೋ ಕ್ರೀಡೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಾವು ಯಾವುದೇ ಖಾಸಗಿ ಶಾಲೆ ಮಕ್ಕಳಿಗೆ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ
ಕನಕಪುರ ತಾಲೂಕು ಉಯಂಬಳ್ಳಿ ಹೋಬಳಿ ದೊಡ್ಡ ಹಲ್ಲಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ಹೋಬಳಿ ಮಟ್ಟದ ಖೊ ಖೊ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ,ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಗ್ರಾಮದಲ್ಲಿ ನಡೆದಿದೆ.
ಹೊಂಗಾಣಿದೊಡ್ಡಿ ಗ್ರಾಮದ ನಂಜೇಶ್(45)ಹತ್ಯೆಯಾದ ಕಾಂಗ್ರೆಸ್ ಮುಖಂಡ.ಈತ ಅಚ್ಚಲು ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು.
ಸಾತನೂರು ಗ್ರಾಮದ ಡಾಬಾದ ವೊಂದರಲ್ಲಿ ಪಾರ್ಟಿ ಮಾಡುತ್ತಿದ್ದ ನಂಜೇಶ್ ಮೇಲೆ ಐದಾರು ಜನರ ಗುಂಪು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಿದೆ.
ಜಮೀನು ವಿವಾದ ಹಿನ್ನೆಲೆಯಲ್ಲಿ ನಾಲ್ಕೈದು ಜನರ ತಂಡ ನಂಜೇಶ್ ಅವರನ್ನು ಮನಬಂದಂತೆ ಕೊಚ್ಚಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮ ಗ್ರಾಮದಲ್ಲಿನ ಜಮೀನಿನ ಸೈಟ್ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಥಳೀಯರೊಂದಿಗೆ ಜಗಳವಾಗಿತ್ತು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನನ್ನು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕನಕಪುರ: ನಾಡಿನ ಸೃಜನಾತ್ಮಕ ಜಾನಪದ ಕಲೆಗಳಲ್ಲಿರುವ ಕಲಾತ್ಮಕ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು, ಯುವ ಸಮುದಾಯ ಹೆಚ್ಚು ಅಧ್ಯಯನ ಮಾಡಬೇಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ಕನಕಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುವೆಂಪು ಸಭಾಂಗಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಕಲೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿರುವ ಜಾನಪದ ನೃತ್ಯ, ಗಾಯನ, ಸಂಗೀತ ಪ್ರದರ್ಶನ ಕಲೆಗಳನ್ನು ಪ್ರಸ್ತುತ ಹೊಸ ಹೊಸ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಸಿಕೊಂಡು ಮೂಲ ಕಲೆಗಳ ಸಾರ ಮತ್ತು ಮೌಲ್ಯವನ್ನು ಕಸಿದುಕೊಳ್ಳುತ್ತಿರುವುದು ದುರಂತದ ಸಂಗತಿ ಎಂದು ವಿಷಾದಿಸಿದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯಿಂದಾಗಿ ನಮ್ಮ ಮೂಲ ಜಾನಪದಕ್ಕೆ ಪೆಟ್ಟು ಬೀಳುತ್ತಿರುವ ಸಂದರ್ಭದಲ್ಲಿ ಮಾತೃಶ್ರೀ ಸಂಸ್ಥೆ ಗಡಿನಾಡು ತಾಲೂಕಿನ ಸರ್ಕಾರಿ ಶಾಲಾ ಕಾಲೇಜು, ಗ್ರಾಮಾಂತರ ಪ್ರದೇಶಗಳಲ್ಲಿ ಕಲೆ ಮತ್ತು ಕಲಾವಿದರ ಕಲ್ಯಾಣಾಭಿವೃದ್ಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಕಲೆ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಚಂದ್ರ ಎಂ (ನಮನ ಚಂದ್ರು) ಮಾತನಾಡಿ, ಜಾನಪದದಲ್ಲಿರುವ ಮೌಖಿಕ ಪರಂಪರೆ, ಕಲೆ ಸಾಹಿತ್ಯ ಸಂಸ್ಕೃತಿ ವಿಚಾರಧಾರೆಗಳನ್ನು ಇಂದಿನ ವಿದ್ಯಾರ್ಥಿ ಯುವ ಸಮುದಾಯಕ್ಕೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಮೂಲಕ ಪ್ರತಿ ವರ್ಷ ರಾಜ್ಯ ಮಟ್ಟದ ಜಾನಪದ ಕಲೋತ್ಸವ ಕಾರ್ಯಕ್ರಮದಡಿಯಲ್ಲಿ ಮೂಲ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಜಾನಪದ ಗೌರವ ನೀಡುವ ಮೂಲಕ ಹಲವು ಜಾನಪದ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಆಹಾರ ಆಯೋಗದ ಸದಸ್ಯೆ ರೋಹಿಣಿ ಪ್ರಿಯ, ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಂ ಮಹದೇವನಾಯ್ಕ, ಪರಿಸರ ಪ್ರೇಮಿ ಮರಸಪ್ಪ ರವಿ, ಕ.ಜಾ.ಪ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ,ಎಂ ಎಸ್ ಗೋಲ್ಡ್ ವ್ಯವಸ್ಥಾಪಕ ಮನ್ಸೂರ್ ಪುದಿಯಂಡ,ಲಿಯೋ ಸಂದೀಪ್ ಎಂ, ಸಾಹಿತಿ ಕೂ.ಗಿ ಗಿರಿಯಪ್ಪ, ತಮಟೆ ಕಲಾವಿದ ಮರಿಸ್ವಾಮಿ ಅವರಿಗೆ ಜಾನಪದ ಗೌರವ ನೀಡಿ ಸನ್ಮಾನಿಸಲಾಯಿತು.
ಜಾನಪದ ಕಲೋತ್ಸವದಲ್ಲಿ ವೆಂಕಟಚಲ, ನಗೆಮಳೆರಾಜ ಚಂದ್ರಾಜ್,ಎಚ್ ಎಸ್ ಲೋಕೇಶ್, ಶ್ರೀನಿವಾಸ್ ತಂಡದಿಂದ ಜಾನಪದ ಗೀತೆ ಗಾಯನ, ದಿವಾಕರ್ ಮತ್ತು ತಂಡ ತಮಟೆ ವಾದನ, ಕಿರಣ್ ಕುಮಾರ್ ಮತ್ತು ತಂಡ ಪೂಜಾ ಕುಣಿತ, ಚಂದ್ರಮೌಳೇಶ್ವರ ಮತ್ತು ತಂಡ ವೀರಗಾಸೆ,ಯೋಗೇಶ್ ಮತ್ತು ತಂಡ ಚರ್ಮ ವಾದ್ಯ,ಚಿಕ್ಕಮುತ್ತಯ್ಯ ಮತ್ತು ತಂಡ ಜಂಬೆವಾದನ,ಭರತ್ ಮತ್ತು ತಂಡ ಚಿಲಿಪಿಲಿ ಗೊಂಬೆ, ಕಾರ್ತಿಕ್ ಮತ್ತು ತಂಡ ಕೊಂಬು ಕಹಳೆ ಸೇರಿದಂತೆ 20ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿ ಜನರಿಗೆ ಮುದ ನೀಡಿದವು.
ಇದೇ ಸಂದರ್ಭದಲ್ಲಿ ಜಾನಪದ ನೂರೊಂದು ಕೃತಿ ಬಿಡುಗಡೆ ಮಾಡಲಾಯಿತು.
ಸಹಾಯಕ ಪ್ರಾಧ್ಯಾಪಕರಾದ ಕೋಮಲ,ಮುಜಿಬ್ ಖಾನ್, ವಿಶ್ವರಾಧ್ಯ, ಸೌಮ್ಯ,ಪಾಷಾ, ಸಾವಿತ್ರಿ, ರೆಡ್ಡಪ್ಪ, ಲಿಯೋ ಹರ್ಷಿತ್ ಮೊದಲಾದವರು ಭಾಗವಹಿಸಿದ್ದರು.
ಕನಕಪುರ: ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರು ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕೇರಳದ ಭಸ್ಮಾಕುಲಂ ರಸ್ತೆ ಮಲ್ಲಿಕಾಪುರಂನಲ್ಲಿ ಈ ಘಟನೆ ಸಂಭವಿಸಿದ್ದು,ಕನಕಪುರ ನಗರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ ಅಲಿಯಾಸ್ ಕುಂಬಿ (40) ಮೃತಪಟ್ಟ ಭಕ್ತ.
ಕನಕಪುರದಿಂದ ಶನಿವಾರ ಸಂಜೆ ಕುಮಾರ್ ಸೇರಿದಂತೆ 5 ಮಂದಿ ಇರುಮುಡಿ ಕಟ್ಟಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದರು.
ಸೋಮವಾರ ಮಧ್ಯಾಹ್ನ ಪತ್ನಿ ಮಹಾಲಕ್ಷ್ಮಿಯೊಂದಿಗೆ ಶಬರಿಮಲೆ ಹತ್ತುತ್ತಿರುವ ಬಗ್ಗೆ ಕುಮಾರ್ ಮಾಹಿತಿ ನೀಡಿದ್ದರು,ಆದರೆ ಸಂಜೆ ವೇಳೆಗೆ ಕಟ್ಟಡದ ಮೇಲಿಂದ ಬಿದ್ದು ಪತಿ ಸಾವನ್ನಪ್ಪಿದ್ದಾರೆಂದು ಮಾಹಿತಿ ಬಂದಿತೆಂದು ಮೃತನ ಪತ್ನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಿದ್ದ ಕೂಡಲೇ ಕೊಟ್ಟಾಯಂ ಆಸ್ಪತ್ರೆಗೆ ಕುಮಾರನನ್ನು ದಾಖಲಿಸಲಾಯಿತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಸ್ನೇಹಿತ ಕೃಷ್ಣ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ನಿ ಮಹಾಲಕ್ಷ್ಮಿ ಮಾತನಾಡಿ ನಾಲ್ಕು ಮಂದಿ ಸ್ನೇಹಿತರು ಕರೆದುಕೊಂಡು ಹೋಗುವಾಗ ನನ್ನ ಪತಿ ಚೆನ್ನಾಗಿಯೇ ಇದ್ದರು.ಏಕಾಏಕಿ ಈ ರೀತಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ಕಾಡುತ್ತಿದೆ.ಜತೆಗೆ ನನ್ನ ಪತಿ ಕಟ್ಟಡದ ಮೇಲಿಂದ ಜಿಗಿಯುತ್ತಿರುವ ಚಿತ್ರ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ,ಅದನ್ನು ನೋಡಿ ನಮಗೆ ಕುಮಾರ್ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿಲ್ಲ ಅನ್ನಿಸುತ್ತಿದೆ ಹಾಗಾಗಿ ಈ ಕುರಿತು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.