ಮಕ್ಕಳ ಶೈಕ್ಷಣಿಕ,ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ ಅಗತ್ಯ-ಮಲ್ಲಿಕಾರ್ಜುನ ಸ್ವಾಮಿ
ಮೈಸೂರು: ಮಕ್ಕಳು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅಭಿವೃದ್ಧಿಯಾಗಲು ಪ್ರೋತ್ಸಾಹ ಅಗತ್ಯ
ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ. ಎನ್ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.
ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು ಮನಸ್ಸು ಸುಂದರ ಹಾಗೂ ಮೃದು ಹಾಗಾಗಿ ಗೆಲುವಿನ ಹಾದಿಯಲ್ಲಿ ಸಾಗುವ ರೀತಿ ಅವರಿಗೆ ಸ್ವತಂತ್ರ್ಯ ನೀಡಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮoದಿರದಲ್ಲಿ ಆಯೋಜಿಸಿದ್ದ, ಕಲಾ ಪ್ರತಿಭೋತ್ಸವ 2025-26 ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳ ಬಗ್ಗೆ ಮತ್ತು ಅವರ ಜ್ಞಾನ ತಿಳುವಳಿಕೆ ಮಟ್ಟ ಇವುಗಳ ಬಗ್ಗೆ ಯಾವಾಗಲೂ ಸಕಾರಾತ್ಮಕ ಭಾವನೆ ಹಾಗೂ ಒಳ್ಳೆಯ ದೃಷ್ಟಿಕೋನ ಹೊಂದಿರಬೇಕು ಎಂದು ಸಲಹೆ ನೀಡಿದರು.
ಶಾಲೆ ಹಾಗೂ ಮನೆ ಎರಡರಲ್ಲೂ ಮಗುವನ್ನು ಪ್ರೋತ್ಸಾಹಿಸಿದರೆ ಮಕ್ಕಳು ಸಮರ್ಥ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ಮಕ್ಕಳು ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಮನೋಸ್ಥೈರ್ಯ ತುಂಬುವುದು ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಪೋಷಕರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದರ ಜತೆಗೆ ಕೆಲವು ನಿಯಂತ್ರಣವನ್ನೂ ಹಾಕಬೇಕು. ಮಕ್ಕಳು ತಮ್ಮ ವ್ಯಕ್ತಿತ್ವದ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇದಕ್ಕೆ ಪೂರಕವಾಗಿ ಮಕ್ಕಳೂ ಸಹ ತಮ್ಮ ಓದಿನ ಬಗ್ಗೆ ಗಮನ ನೀಡಬೇಕು. ಉತ್ತಮ ವಿಚಾರಗಳನ್ನು ಆಸಕ್ತಿಯಿಂದ ಕಲಿಯಬೇಕು ಎಂದು ಮಲ್ಲಿಕಾರ್ಜುನ ಸ್ವಾಮಿ ತಿಳಿಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಿ. ಉದಯ್ ಕುಮಾರ್ ಅವರು ಮಾತನಾಡಿ ಮಕ್ಕಳೊಂದಿಗೆ ಸಂವಾದ ನಡೆಸಬೇಕು, ಅವರಲ್ಲಿ ಪಠ್ಯದ ಕುರಿತು ಆಸಕ್ತಿ ಹೆಚ್ಚಿಸಬೇಕು ಅವರ ಮನಸ್ಸನ್ನು ತಮ್ಮ ಬೋಧನೆಯತ್ತ ತಿರುಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್, ತೀರ್ಪುಗಾರರಾದ ಶ್ರೀವಾಣಿ, ಲಕ್ಷ್ಮಿ, ರಮ್ಯಾ, ಅನಿತಾ, ಆನಂದ್ ಕುಮಾರ್, ರಮೇಶ್ ಚಂದ್ರ, ಎ ಪಿ ಚಂದ್ರಶೇಖರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.