ಕಬ್ಬು ಬೆಳೆಗಾರರಿಗೆ ಹುಣಸೂರಿನಲ್ಲಿ ವಿವಿಧ ಸಂಘಟನೆಗಳ ಬೆಂಬಲ

ಹುಣಸೂರು: ಹುಣಸೂರು ತಾಲೂಕಿನಲ್ಲಿ ಕಬ್ಬು ಬೆಳೆಗಾರರಿಗೆ ಭಾರಿ ಬೆಂಬಲ ವ್ಯಕ್ತವಾಯಿತು.

ನಿನ್ನೆ ಅಂದರೆ ಶುಕ್ರವಾರ ಕರ್ನಾಟಕ ರೈತ ಸಂಘ ಪುಟ್ಟಣ್ಣಯ್ಯ ಬಣ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಸೇರಿದಂತೆ ತಾಲೂಕಿನ ಅನೇಕ ಸಂಘಟನೆಗಳು ಮತ್ತು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸರ್ಕಾರ ಪೂರ್ಣವಾಗಿ ಈಡೇರಿಸಬೇಕೆಂದು ಒತ್ತಾಯಿಸಿದರು.

ಹುಣಸೂರಿನಲ್ಲಿ ಹೆದ್ದಾರಿ ತಡೆದು ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ಕರ್ನಾಟಕ ರೈತ ಸಂಘ ಪುಟ್ಟಣ್ಣಯ್ಯ ಬಡದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ನೇತೃತ್ವದಲ್ಲಿ ನಡೆಯಿತು.

ಆನಂತರ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕಬ್ಬು ಬೆಳೆಗಾರರು ಇಟ್ಟಿರುವ ಬೇಡಿಕೆಯಂತೆ ಟನ್ ಕಬ್ಬಿಗೆ 3500 ರೂ ನೀಡುವಂತೆ ಒತ್ತಾಯಿಸಿದರು.

ಕಬ್ಬು ಬೆಳೆಗಾರರಿಗೆ ಹುಣಸೂರಿನಲ್ಲಿ ವಿವಿಧ ಸಂಘಟನೆಗಳ ಬೆಂಬಲ Read More

ರೈತರ ಬೇಡಿಕೆ ಈಡೇರಿಸಿದ ಸರಕಾರ:ಪ್ರತಿ ಟನ್ ಕಬ್ಬಿಗೆ 3300 ರೂ ದರ ನಿಗದಿ

ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3500 ರೂ ದರ ನಿಗದಿ ಮಾಡುವಂತೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ಕಬ್ಬುಬೆಳೆಗಾರರಿಗೆ ಸರ್ಕಾರ ಸ್ವಲ್ಪಮಟ್ಟಿಗೆ‌ ಸಿಹಿ ಕೊಟ್ಟಿದೆ.

ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಸುತ್ತಿರುವ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, 3300 ರೂ ದರ ನಿಗದಿ ಮಾಡಿದೆ.

ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆಗೆ ಸಿಎಂ ನಡೆಸಿದ ಸಭೆಯಲ್ಲಿ ರೈತರ ಪ್ರತಿಭಟನೆ ಬಗ್ಗೆ, ಎಫ್‌ಆರ್ ಸಿ ಬಗ್ಗೆ ಚರ್ಚಿಸಿದರು.

ನಂತರ ರೈತರ ಬೇಡಿಕೆಯಲ್ಲಿ 3500 ರೂ ಬದಲಿಗೆ‌ 3300 ರೂ ದರ ನಿಗದಿ ಮಾಡಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.ಬಹಳಷ್ಟು ರೈತರು ಖುಷಿಯಿಂದ ಇದನ್ನು ಸ್ವಾಗತಿಸಿದ್ದಾರೆ.ಕೆಲವರು ನಾಳೆ ಸಭೆ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.

ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಈ ಬೆಳವಣಿಗೆ ಬೆನ್ನಲ್ಲೇಯಲ್ಲಿ ಎಚ್ಚೆತ್ತ ಸರಕಾರ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದಿದೆ.

ಸದ್ಯಕ್ಕೆ ಕಬ್ಬು ಬೆಳೆಗಾರರ ಹೋರಾಟ ಅಂತ್ಯವಾಗಿದೆ, ಬೆಳಗಾವಿ ಅಷ್ಟೇ ಅಲ್ಲದೇ ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ ಜಿಲ್ಲೆಯ ರೈತರು ಸಹಿ ಹಂಚಿ ಸಂಭ್ರಮಿಸಿದ್ದಾರೆ.

ಇದು ಬದುಕಿನ ಹೋರಾಟ ಎಂದ ರೈತರು: ನಿರಂತರ ಒಂಬತ್ತು ದಿನಗಳಿಂದ ರೈತರು ಕೊರೆಯುವ ಚಳಿಯಲ್ಲಿ, ಬಿಸಿಲೂ, ಗಾಳಿ ಯಾವುದೇ ಲೆಕ್ಕಿಸದೆ ನಿರಂತರವಾಗಿ ಸರಕಾರದ ವಿರುದ್ದ ಹೋರಾಟ ನಡೆಸಿದ್ದರು.
ಇದು ಕೇವಲ ಕಬ್ಬಿನ ಹೋರಾಟ ಅಷ್ಟೇ ಅಲ್ಲ, ಬದುಕಿನ ಹೋರಾಟ, ಎಂದು ಗುರ್ಲಾಪುರದ ರೈತರು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ನಿರಂತರ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ರೈತರ ಸಂತೋಷ ವ್ಯಕ್ತಪಡಿಸಿದರು. ‌

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸರಕಾರ ಪ್ರತಿ ಟನ್ ಕಬ್ಬಿಗೆ 3300 ರೂ ದರ ನಿಗದಿ ಮಾಡಲು ನಿರ್ಧರಿಸಿದೆ.

ಸರಕಾರದಿಂದ 50 ರೂಪಾಯಿ ಹಾಗೂ ಕಾರ್ಖಾನೆಯಿಂದ 50 ರೂಪಾಯಿ ನೀಡಲಾಗುವುದು. ಈ ಮೂಲಕ ಒಟ್ಟು 3300 ರೂಪಾಯಿ ನೀಡಲು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರೈತರ ಬೇಡಿಕೆ ಈಡೇರಿಸಿದ ಸರಕಾರ:ಪ್ರತಿ ಟನ್ ಕಬ್ಬಿಗೆ 3300 ರೂ ದರ ನಿಗದಿ Read More

ಹೆದ್ದಾರಿ ತಡೆದು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು

ಬೆಳಗಾವಿ: ಪ್ರತಿ ಟನ್‌ ಕಬ್ಬಿಗೆ 3,500 ರೂ. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಬೆಳಗಾವಿ ಸಮೀಪದಲ್ಲಿರುವ ಹತ್ತರಗಿ ಹೆದ್ದಾರಿ ತಡೆದು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದರು.

ಹೆದ್ದಾರಿಯನ್ನು ಬಂದ್ ಮಾಡಿ ಘೋಷಣೆ ಕೂಗಲಾರಂಭಿಸಿದ ಕಬ್ಬು ಬೆಳೆಗಾರರು ಸಾವಿರಾರು ಸಂಖ್ಯೆಯಲ್ಲಿ ಇಡೀ ರಸ್ತೆಯನ್ನು ಆವರಿಸಿಕೊಂಡಿದ್ದರು.

ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಸವಾರರು ಕೂಡಾ ಪರದಾಡಬೇಕಾಯಿತು.
ಪೊಲೀಸರು ಬೆಳೆಗಾರರನ್ನು ತೆರವುಗೊಳಿಸಲು ಹರಸಾಹಸ‌ ಪಡಬೇಕಾಯಿತು.

ನ್ಯಾಯಯುತವಾದ ದರ ಸಿಗದೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಶೀಘ್ರ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ನಾವು ಹೋರಾಟ ಮಾಡುತ್ತಿದ್ದರೂ ಕೂಡ ಯಾವೊಬ್ಬ ಜನಪ್ರತಿನಿಧಿ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ತಡೆದು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು Read More

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ – ಹೆಚ್ ಡಿ ಕೆ

ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲಾಗದ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಮೈಸೂರಿನಲ್ಲಿ ಶುಕ್ರವಾರ ದಿಶಾ ಸಮಿತಿ‌ ಸಭೆಯಲ್ಲಿ‌ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಇರಾದೆಯೇ ಈ ಸರ್ಕಾರಕ್ಕಿಲ್ಲ. ಪ್ರತಿಯೊಂದು ವಿಷಯವನ್ನೂ ಕೇಂದ್ರದ ಮೇಲೆ ಹಾಕಿ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿಗಳು ಮನಸು ಮಾಡಿದರೆ ಇದು ಅತ್ಯಂತ ಚಿಕ್ಕ‌ ವಿಚಾರ. ಕೆಲವು ನಿಮಿಷಗಳಲ್ಲಿ ಬಗೆಹರಿಸಬಹುದಾದ ವಿಷಯ,ಆದರೆ, ಸಿಎಂ ಅವರು ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ಟೀಕಿಸಿದರು.

ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ ಹೇಳಿ ಎಂದು ಹೆಚ್ ಡಿ ಕೆ ಪ್ರಶ್ನಿಸಿದರು.

ಈ ಸಮಸ್ಯೆ ವಿಚಾರದಲ್ಲಿ ಜನ ಪ್ರತಿನಿಧಿಗಳನ್ನು ಕರೆದು ಮಾತನಾಡುವುದು ಏನಿದೆ ಮುಖ್ಯಮಂತ್ರಿಗಳೇ ನೇರವಾಗಿ ನಿರ್ಧಾರ ಕೈಗೊಳ್ಳಬಹುದು. ನೇರವಾಗಿ ಬೆಳೆಗಾರರ ಜತೆ ಮಾತನಾಡಿ ಬಿಕ್ಕಟ್ಟನ್ನು ಬಗೆಹರಿಸಬಹುದು. ಅದನ್ನು ಮಾಡದೇ ಕೇವಲ ರಾಜಕೀಯ ಮಾಡುವುದರಲ್ಲೇ ಮುಳುಗಿದ್ದಾರೆ ಎಂದು ಕುಟುಕಿದರು.

ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ, ಅಂತಹ ಒತ್ತಡಕ್ಕೆ ಮಣಿಯದೆ ಮೊದಲು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಬೆಳಗಾವಿಯ ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿದ್ದನ್ನು ಗಮನಿಸಿದ್ದೇನೆ. ಜೆಡಿಎಸ್ ಪಕ್ಷದ ಯಾವ ನಾಯಕ ಕೂಡ ಕಬ್ಬು ಕಾರ್ಖಾನೆ ಹೊಂದಿಲ್ಲ,ಆದರೆ ಬಂಡೆಪ್ಪ ಕಾಶಂಪೂರ ಅವರ ಕಾರ್ಖಾನೆ ಒಂದಿತ್ತು. ಕೆಲವು ದಿನಗಳ ಹಿಂದೆ ಅವರು ಅದನ್ನು ಕೂಡ ಮಾರಿಬಿಟ್ಟಿದ್ದಾರೆ ಎಂದು ‌ಹೆಚ್ ಡಿ ಕೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಹಾಗೂ ನವೆಂಬರ್ ಕ್ರಾಂತಿ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದಾಗ ಅವರು ಹೇಳಿದ್ದಿಷ್ಟು; ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ಆಗಲ್ಲ ವಾಂತಿಯೂ ಆಗಲ್ಲ. ನನಗೆ ಸಿದ್ದರಾಮಯ್ಯನವರ ಗುಣ ಗೊತ್ತಿದೆ. ಅವರು ನಮ್ಮ ಪಕ್ಷದಲ್ಲೇ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ ಯಾವ ಬದಲಾವಣೆಯೂ ಅಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ‌ ಸಚಿವರು,ಡಿ.ಕೆ ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ. ದೇವರು ಅವರಿಗೆ ಏನೇನು ಹೇಳಿದ್ದಾನೋ ನಮಗೇನು ಗೊತ್ತು ಅದೇನಿದ್ದರೂ ಡಿ.ಕೆ. ಶಿವಕುಮಾರ್ ಹಾಗೂ ದೇವರಿಗೆ ಸಂಬಂಧಪಟ್ಟ ವಿಚಾರ. ಹಾಗಂತ ಡಿಕೆಶಿ ಅವರೇ ಹೇಳಿದ್ದಾರೆ ಎಂದು ಉತ್ತರಿಸಿದರು.

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ – ಹೆಚ್ ಡಿ ಕೆ Read More