ಮೈಸೂರು: ಕುವೆಂಪುನಗರ, ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಮೆತ್ತಾಲೋಕ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಈ ವೇಳೆ ಶೋಭನ ಬಂತೆ ಜಿ ಅವರು ಎಲ್ಲರಿಗೂ ಬುದ್ಧ ಭಗವಾನರ ದಮ್ಮ ಪ್ರವಚನ ನೀಡಿ ಎಲ್ಲರೂ ಪಂಚಶೀಲ ಪರಿಪಾಲನೆ ಮಾಡುವಂತೆ ತಿಳಿಸಿದರು.
ಹೆಚ್ಚು ಹೆಚ್ಚು ದಾನ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ, ದಾನದಿಂದ ಕುಶಲ ಕಮ್ಮ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭ ಕೋರಿದರು.
ವಿಶುದ್ಧ ಶೀಲ ಬಂತೆ ಜಿ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಿಕ್ಕ ಗರಡಿ ಅಧ್ಯಕ್ಷ ಬಿ. ನಾಗರಾಜು ( ಬಿಲ್ಲಯ್ಯ ),ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್, ಜೆ.ಡಿ.ಎಸ್. ಮುಖಂಡ ವೆಂಕಟೇಶ್, ಸ್ವಾಮಿ.ದನಗಳ್ಳಿ,ಸುಬ್ರಮಣಿ , ರಾಜೇಶ್ ಕುಮಾರ್, ಮಹೇಶ್, ವೀರಭದ್ರ ಸ್ವಾಮಿ, ಶ್ರೀಧರ್,ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಹಾಜರಿದ್ದರು.
ಬೆಂಗಳೂರು: ಸರ್ಕಾರ ಅಂಬೇಡ್ಕರ್ ಅವರು ಬಯಸಿದಂತ ಸಮಾಜವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸರ್ಕಾರ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರ ಅನುಸರಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು
ಅವರು ಇಂದು ಸಂವಿಧಾನ ಶಿಲ್ಪಿ ಡಾ: ಬಿ. ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಪೂರ್ವ ದ್ವಾರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮ ಸರ್ಕಾರ ಅತ್ಯಂತ ಗೌರವ, ನಮ್ರತೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸುತ್ತಿದೆ. ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಅನ್ಯಾಯದಿಂದ ಮುಕ್ತಿ ಪಡೆಯಬೇಕೆಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದು ಸ್ಮರಿಸಿದರು.
ಅಂಬೇಡ್ಕರ್ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಿಸಲು ಶ್ರಮಿಸಿದವರು, ಮಹಾನ್ ಮೇಧಾವಿಯಾಗಿದ್ದ ಅವರು ಸ್ವಾರ್ಥಕ್ಕಾಗಿ ಓದಿಕೊಳ್ಳದೆ ಶೋಷಿತರ, ಅಸ್ಪೃಶ್ಯತೆಯಿಂದ ನರಳುತ್ತಿರುವ ಜನರಿಗೆ ವಿಮೋಚನೆ ನೀಡಲೆಂದೇ ಜ್ಞಾನಾರ್ಜನೆ ಮಾಡಿಕೊಂಡಿದ್ದರು. ದೇಶದ ಕೆಲವೇ ಮೇಧಾವಿಗಳಲ್ಲಿ ಅವರೂ ಒಬ್ಬರು. ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ ಎಂದು ಸಿಎಂ ಬಣ್ಣಿಸಿದರು.
ಎಲ್ಲರೂ ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಬೇಕು. ಹಾಗಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಅಸ್ಪೃಶ್ಯತೆ ನಾಶವಾಗಬೇಕು ಎಂದು ಅಂಬೇಡ್ಕರ್ ಶ್ರಮಿಸಿದ್ದರು ಎಂದು ಹೇಳಿದರು.
ಮನುವಾದಿಗಳು ಇಂದು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ತಮ್ಮ ಸ್ವಂತ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ವೇಳೆ ಮುಖ್ಯ ಮಂತ್ರಿಗಳು ಟೀಕಿಸಿದರು.
ಮಹಾತ್ಮಾ ಗಾಂಧಿಯವರನ್ನು ಕೊಂದವರು, ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ ಮನುವಾದಿಗಳೇ ಇಂದು ಅವರನ್ನು ತಮ್ಮ ಸ್ವಂತ ಎನ್ನಲು ಪ್ರಾರಂಭಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ ನಾಲ್ಕೈದು ದಿನಗಳಲ್ಲೇ ‘ದಿ ಆರ್ಗನೈಜರ್’ ಪತ್ರಿಕೆಯಲ್ಲಿ ವಿರೋಧ ಮಾಡಿ ಬರೆದಿದ್ದರು. ಈಗ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತ್ತು ಎಂದು ಮಾತನಾಡುತ್ತಾರೆ. ಅಂಬೇಡ್ಕರ್ ಅವರೇ ನನ್ನನ್ನು ಸೋಲಿಸಿದವರು ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಎಸ್.ಎ ಡಾಂಗೆ ಎಂದು ಪತ್ರ ಬರೆದಿದ್ದರು. ಬಿಜೆಪಿ ಸ್ವಾರ್ಥಕ್ಕಾಗಿ ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನು ತಮ್ಮದೇ ಸ್ವಂತ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಅವರು ನಾನು ಹಿಂದೂ ಆಗಿ ಹುಟ್ಟಿದೆ ಆದರೆ ಹಿಂದೂವಾಗಿ ಸಾಯಲಾರೆ ಎಂದು ಹೇಳಿದ್ದರು. ಹಿಂದೂ ಧರ್ಮ ತ್ಯಜಿಸಿ ಭೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿ, ಅದು ಸಾಧ್ಯವಾಗುವುದಿಲ್ಲ ಎಂದು ಅರಿವಾದ ನಂತರ ಹಿಂದೂ ಧರ್ಮವನ್ನು ತ್ಯಜಿಸಿ, ಮಾನವೀಯತೆ ಮತ್ತು ಸಮಾನತೆ ಇದ್ದ ಭೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ಸಿಎಂ ಹೇಳಿದರು.
ಬಿಜೆಪಿಯವರು ಜವಾಹಾರಲಾಲ್ ನೆಹರೂ ಅಂಬೇಡ್ಕರ್ ಅವರನ್ನು ವಿರೋಧಿಸಿದರೆಂದು ಹೇಳುತ್ತಾರೆ,ಆದರೆ ಅಂಬೇಡ್ಕರ್ ಅವರನ್ನು ನೆಹರೂ ವಿರೋಧಿಸಲಿಲ್ಲ. ಹಾಗಿದ್ದರೆ,ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಲು ಆಯ್ಕೆ ಮಾಡುತ್ತಲೇ ಇರಲಿಲ್ಲ. ಹಿಂದೂ ಕೋಡ್ ಬಿಲ್ ತಂದಾಗ ನೆಹರೂ ಅದರ ಪರವಾಗಿಯೇ ಇದ್ದರು. ನಮ್ಮಲ್ಲಿರುವ ಕೆಲವು ಶಕ್ತಿಗಳು ನೆಹರೂ ಅವರು ಅದನ್ನು ಜಾರಿ ಮಾಡಲು ಬಿಡಲಿಲ್ಲ. ಆದರೆ ಹಿಂದೂ ಕೋಡ್ ಬಿಲ್ ನಲ್ಲಿರುವ ಅಂಶಗಳನ್ನು ನೆಹರೂ ಅವರು ಅವರ ಅಧಿಕಾರದ ಅವಧಿಯಲ್ಲಿ ಜಾರಿ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಏಪ್ರಿಲ್ 17 ರಂದು ಸಚಿವ ಸಂಪುಟ ಸಭೆಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಯ ಬಗ್ಗೆ ಚರ್ಚಿಸಲೆಂದೇ ಕರೆಯಲಾಗಿದೆ. ಚರ್ಚೆ ಮಾಡಿದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಸಿಎಂ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.