ಮೈಸೂರು: ಈ ಬಾರಿ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಸಾಗಿದ ಸ್ತಬ್ಧಚಿತ್ರ ಮೆರವಣಿಗೆ ಹಾಗೂ ಕಲೆಗಳು ವಿಶೇಷವಾಗಿತ್ತು.
ಇದೇ ಮೊದಲ ಬಾರಿಗೆ 31 ಜಿಲ್ಲೆಗಳಿಂದ 51 ಕಲಾಕೃತಿಗಳು ಭಾಗವಹಿಸಿ ನೋಡುಗರ ಕಣ್ಮನ ಸೆಳೆದವು.
ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನ, ದಕ್ಷಿಣ ಕನ್ನಡದ ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ, ಹಾಸನ ಜಿಲ್ಲೆಯ ವಿಶ್ವಪರಂಪರೆಯ ಬೇಲೂರು ಚೆನ್ನಕೇಶವ ದೇವಾಲಯ, ಹಳೆಬೀಡು ಹೊಯ್ಸಳೇಶ್ವರ ದೇವಾಲಯ, ದಾವಣಗೆರೆ ಜಿಲ್ಲೆಯ ನಾವು ಮನುಜರು, ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್‌ರಾಜ್ ವಿಶ್ವವಿದ್ಯಾಲಯ, ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ, ಕಿನ್ನಾಳೆ ಕಲೆ, ಇಟಗಿ ದೇವಸ್ಥಾನ, ಬೀದರ್ ಜಿಲ್ಲೆಯ ಚೆನ್ನ ಬಸವಪಟ್ಟ ದೇವರು, ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡನ್ನೊಮ್ಮೆ ಬಂದು ನೋಡು, ಕೊಡಗು ಜಿಲ್ಲೆಯ
ಭೂಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ, ಕಾಳುಮೆಣಸು, ಆನೆ ಕ್ಯಾಂಪ್, ಮುಖ್ಯಮಂತ್ರಿಯ ತವರು ಜಿಲ್ಲೆಯಿಂದ ಮನುಷ್ಯ ಜಾತಿ ತಾನೊಂದೇ ವಲಂ, ಸಂಸತ್ ಭವನ, ಅನುಭವ ಮಂಟಪ, ಬುದ್ಧ, ಬಸವ, ಅಂಬೇಡ್ಕರ್ ಅವರ ಮಾದರಿಗಳು, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವಸ್ಥಾನ ಹಾಗೂ ಶಿವನ ಸ್ತಬ್ಧಚಿತ್ರ,ಜಂಬೂ ಸವಾರಿ ಮೆರವಣಿಗೆಯ ಸ್ತಬ್ಧಚಿತ್ರಗಳು ಎಲ್ಲರ ಮನಸೆಳೆದವು.
ಜಂಬೂಸವಾರಿ ಮೆರವಣಿಗೆಗೆ ಜಾನಪದ ಕಲಾಕಾರರು ಮೆರಗು ನೀಡಿದರು.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಕ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು,ಅ.12 ರಂದು ವಿದ್ಯುಕ್ತ ಚಾಲನೆ ದೊರೆಯಲಿದೆ.
ಮೈಸೂರು ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿಯಲ್ಲಿ ಸರ್ವಾಲಂಕಾರ ಭೂಷಿತೆ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.
ಶನಿವಾರ ಸಂಜೆ 4 ರಿಂದ 4.30ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಮೈಸೂರು ಅರಮನೆ ಬಲರಾಮ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಧ್ಯಾಹ್ನ 1.41ರಿಂದ 2.10ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವರು.
ನಂತರ ಸಂಜೆ 4 ರಿಂದ 4.30ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆಯ ಆವರಣದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಳಾಗುವ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಲಿದ್ದಾರೆ.
ಈ ಬಾರಿಯ ದಸರಾ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಸಾಗಿ ಬರಲಿದೆ. ಇದರೊಂದಿಗೆ 60ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಸರ್ಕಾರದ ಸಾಧನೆ, ಗ್ಯಾರಂಟಿ ಯೋಜನೆ, ಸಂವಿಧಾನ ಪ್ರಜಾಪ್ರಭುತ್ವ, ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರ, ಬುಡಕಟ್ಟು ಪರಂಪರೆ ಯಂತಹ ವೈವಿಧ್ಯಮಯ ಸ್ಥಬ್ಧ ಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಕರ್ನಾಟಕ ಪೊಲೀಸ್ ವಾದ್ಯ, ಅಶ್ವದಳ ಜತೆ ಸಾಗಲಿರುವ ಅಂಬಾರಿ ಹೊರುವ ಅಭಿಮನ್ಯು ಜೊತೆ ಲಕ್ಷ್ಮಿ ಮತ್ತು ಹಿರಣ್ಯ ಸಾತ್ ನೀಡಲಿದ್ದಾರೆ. ಇವರೊಂದಿಗೆ ಕೆಎಸ್ಆರ್ ಪಿ ತುಕಡಿಗಳು, ಅರಮನೆಯ ಲಾಂಛನಗಳು, ಡೊಳ್ಳು ಕುಣಿತ, ಪಟದ ಕುಣಿತ, ವೀರಗಾಸೆ, ಕರಡಿ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರೇಕ್ಷಕರ ಮನ ಸೆಳೆಯಲಿವೆ.
ಅರಮನೆಯಿಂದ ಹೊರಡಲಿರುವ ಜಂಬೂ ಸವಾರಿ ಮೆರವಣಿಗೆಯು ಉತ್ತರ ದ್ವಾರದ ಮೂಲಕ ತೆರಳಿ ಕೆಆರ್ ಸರ್ಕಲ್, ಸಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಸಂಜೆ ವೇಳೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಲಿದೆ.
ಇದೇ ದಿನ ಸಂಜೆ ಬನ್ನಿಮಂಟಪ ಮೈದಾನದಲ್ಲಿ ಅತ್ಯಾಕರ್ಷಕ ಪಂಜಿನ ಕವಾಯತು ಪ್ರದರ್ಶನ ನಡೆಯಲಿದೆ.
ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಜವಂಶಸ್ಥರೂ ಸಂಸದರಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಸಚಿವರುಗಳಾದ ಶಿವರಾಜ್ ತಂಗಡಗಿ ಸೇರಿದಂತೆ ಸಂಪುಟದ ಇನ್ನಿತರ ಸಚಿವರು, ಶಾಸಕರು, ಸಂಸತ್ ಸದಸ್ಯರು ಭಾಗವಹಿಸ ಲಿದ್ದಾರೆ.
ಇವರೊಂದಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಸಹ ಭಾಗವಹಿಸಲಿದ್ದಾರೆ.
ಸಂಜೆ ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆಯಲಿರುವ ಅತ್ಯಾಕರ್ಷಕ ಪಂಚಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ರಾಜ್ಯ ಸಚಿವರು ಸಂಸದರು ಶಾಸಕರುಗಳು ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮೈಸೂರು: ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಗುರುವಾರ ಜಂಬೂಸವಾರಿ ಮೆರವಣಿಗೆಯ ಪುಷ್ಪಾರ್ಚನೆ ರಿಹರ್ಸಲ್ ನಡೆದಿದೆ. ಅಂತಿಮ ಹಂತದ ರಿಹರ್ಸಲ್‌ನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ, ಅಶ್ವರೋಹಿ ದಳ, ಪೊಲೀಸ್ ಇಲಾಖೆಯ ಎಂಟು ತುಕಡಿಗಳು ಭಾಗಿಯಾಗಲಿವೆ ಎಂದು ಹೇಳಿದರು
ಈ ಬಾರಿಯ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ಕೈಗೊಳ್ಳಲಾಗಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಭಾರೀ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲೆ ಮಾತ್ರದವಲ್ಲದೇ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಫ್ತಿಯಲ್ಲಿರುವ ಪೊಲೀಸರು ಎಲ್ಲೆಡೆ ನಿಗಾ ವಹಿಸಲಿದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗ ಸೇರಿದಂತೆ ಆಯಕಟ್ಟಿನ ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.