ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಬೆಳೆಸಿ-ಪ್ರತಾಪ್ ಸಿಂಹ ಕರೆ

ಮೈಸೂರು: ಪುಸ್ತಕವನ್ನು ಕೊಂಡು ಓದುವವರು ಇರುವ ತನಕ ಲೇಖಕರಿಗೆ ಅಭಿರುಚಿ ಸಿಗುತ್ತದೆ. ಹಾಗಾಗಿ ಎಲ್ಲರೂ ಪುಸ್ತಕ ಓದಿ ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.

ನಗರದ ಜೆಎಲ್‌ ಬಿ ರಸ್ತೆಯಲ್ಲಿರುವ ದಿ ಇನ್ಸ್ ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಭಾಂಗಣದಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಷನ್ ಮತ್ತು ಕಲಿಸು ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಅರ್ಜುನ 2ನೇ ವರ್ಷದ ನೆನಪು ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ ಉತ್ತಪ್ಪ ರಚಿಸಿರುವ ಸಾವಿನ ಸತ್ಯ‘ಅರ್ಜುನಾ ನಿನ್ನ ಕೊಂದದ್ದು ಮದಗಜವಲ್ಲ ಪಾಪಿ ಮನುಷ್ಯ’ ಹಾಗೂ ದಸರಾ ಆನೆಗಳು ‘ಭೀಮ ಹಾಗೂ ಇತರರು’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಅತಿಹೆಚ್ಚು ಆನೆಗಳಿರುವುದು ಖುಷಿಯ ವಿಚಾರ. ಕೊಡಗು, ಮೈಸೂರು ಭಾಗಗಳಲ್ಲಿ ಹೆಚ್ಚು ಆನೆಗಳ ಉಪಟಳವಿದೆ. ಇದರಿಂದ ಮಾನವ-ಆನೆಗಳ ಸಂಘರ್ಷ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು. ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕೃತಿಗಳ ಬಗ್ಗೆ ಮಾತನಾಡಿದ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಆನೆಗಳ ಜೊತೆ ನಿಕಟ ಸಂಬಂಧ ಇರುವ ವ್ಯಕ್ತಿಗಳಷ್ಟೇ ಆನೆ ಪುಸ್ತಕ ಬರೆಯಲು ಸಾಧ್ಯ ಎಂಬುದಕ್ಕೆ ಐತಿಚಂಡ ರಮೇಶ್ ಉತ್ತಪ್ಪ ಸಾಕ್ಷಿಯಾಗಿದ್ದಾರೆ. ಅರ್ಜುನ ಸಾವನ್ನಪ್ಪಿದಾಗ ಹಲವಾರು ಕಾರಣಗಳಿದ್ದು ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಗುವುದು. ಇವರು ಬರೆದಿರುವಂತಹ ಪುಸ್ತಕ ವಿಶೇಷವಾಗಿದೆ ಎಂದು ಹೇಳಿದರು.

ಇದುವರೆಗೂ ಮನುಷ್ಯರಿಗಷ್ಟೇ ನಿವೃತ್ತಿ ವಯಸ್ಸು, ಸೇವಾ ಪುಸ್ತಕ ಇದೆ ಎಂದುಕೊಂಡಿದ್ದೆವು. ಆದರೆ ಅನೆಗಳಿಗೂ ಇದು ಇದೆ ಎಂಬುದನ್ನು ಐತಿಚಂಡ ರಮೇಶ್ ಉತ್ತಪ್ಪ ಅವರ ಪುಸ್ತಕ ಅಧ್ಯಯನ ಮಾಡಿದಾಗ ನನಗೆ ತಿಳಿಯಿತು ಎಂದು ತಿಳಿಸಿದರು.

ಅರಣ್ಯ ಇಲಾಖೆಯಲ್ಲಿ ಪಶುವೈದ್ಯರ ಕೊರತೆಯಿದ್ದು ಶೀಘ್ರವಾಗಿ ಅವರನ್ನು ನೇಮಕ ಮಾಡಬೇಕು ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಆನೆಗಳ ಸಂಬಂಧಿತ ಮ್ಯೂಸಿಯಂ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ರಮೇಶ್ ಉತ್ತಪ್ಪ ಅವರ ಕೃತಿ ವಿಶೇಷವಾಗಿದ್ದು ಪ್ರಕೃತಿ, ಪ್ರಾಣಿಗಳ ಬಾಂಧವ್ಯವನ್ನು ಈ ಪುಸ್ತಕದಲ್ಲಿ ಬರೆದಿರುವುದು ಮುಂದಿನ ಪೀಳಿಗೆಗೆ ಈ ಪುಸ್ತಕಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಡಾ ಮುಜಿಬ್ ರೆಹಮಾನ್(ಪಶುವೈದ್ಯ) ಹಾಗೂ (ಅರ್ಜುನ ಅಭಿಮಾನಿ )ಕೆ ಆರ್ ಸತ್ಯಪ್ರಭಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪತ್ರಕರ್ತ ರಮೇಶ್ ಉತ್ತಪ್ಪ, ರೈತಮುಖಂಡ ಮಂಜುಕಿರಣ್, ಅಮರನಾಥ ರಾಜೇ ಅರಸು, ಎಂಜಿಆರ್ ಅರಸು, ಕೆ.ಎಸ್.ಶಿವರಾಂ, ಮಾಜಿ ಮೇಯರ್ ಶಿವಕುಮಾರ್, ನವ ಕರ್ನಾಟಕ ಸತ್ಯನಾರಾಯಣ್, ನಂಜಯ್ಯ ಹೊಂಗನೂರು, ಮಲ್ಲಿಕಾರ್ಜುನಸ್ವಾಮಿ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್, ಪ್ರಕಾಶಕ ಎಂ.ಎಂ.ನಿಖಿಲೇಶ್ ಉಪಸ್ಥಿತರಿದ್ದರು.



ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಬೆಳೆಸಿ-ಪ್ರತಾಪ್ ಸಿಂಹ ಕರೆ Read More