ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು:ಎಸ್ ಎಲ್ ಚೆನ್ನಬಸವಣ್ಣ

ಮೈಸೂರು: ವೃತ್ತಿ ಪರತೆಯ ಬಗ್ಗೆ ಇತರರನ್ನು ಅನುಕರಣೆಯನ್ನು ಅಳವಡಿಸಿಕೊಳ್ಳುವ ಬದಲು ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು ಎಂದು ಪೋಲಿಸ್ ಆಕಾಡೆಮಿ ನಿರ್ದೇಶಕ ಎಸ್ ಎಲ್ ಚೆನ್ನಬಸವಣ್ಣ ತಿಳಿಸಿದರು.
ಮೈಸೂರಿನ ಲಕ್ಷ್ಮಿಪುರಂನಲ್ಲಿರುವ ಜ್ಞಾನಬುತ್ತಿ ಕೇಂದ್ರದಲ್ಲಿ ನಡೆದ 2025-26ನೇ ಸಾಲಿನ ಐಎಎಸ್/ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ, ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪದವಿ ಮತ್ತು ಸ್ನಾತಕೋತ್ತರ ಪದವಿಯ ಹಾಗೆ ಈ ಸ್ಪರ್ಧಾತ್ಮಕ ಉಚಿತ ತರಬೇತಿ ಶಿಬಿರವು ಅಕಾಡೆಮಿಕ್ ಕೋರ್ಸ್ ಆಗಿರುವುದಿಲ್ಲ, ಅಲ್ಲಿ ಒಂದೇ ರೀತಿಯ ವಿಷಯದ ಬಗ್ಗೆ 3 ವರ್ಷಗಳ ಕಾಲ ಓದುತ್ತೇವೆ ಆದರೆ ಈ ತರಬೇತಿಯಲ್ಲಿ ಹತ್ತಾರು ವಿಷಯಗಳ ಬಗ್ಗೆ ಒಟ್ಟಿಗೆ ನಾವು ಕಲಿಯುತ್ತೇವೆ ಎಂದು ಹೇಳಿದರು.
ಸಿವಿಲ್ ಸರ್ವಿಸ್ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ತಮ್ಮ ವಿಷಯದ ಕೌಶಲ್ಯವನ್ನು ಹೇಗೆ ಅರ್ಥ ಮಾಡಿಕೊಂಡು ಪ್ರಪಂಚ ಜ್ಞಾನವನ್ನು ತಿಳಿದುಕೊಂಡಿರುತ್ತಾರೆ ಎಂಬುದನ್ನು ತಿಳಿಯಲು ಸಿವಿಲ್ ಸರ್ವಿಸ್ ಪರೀಕ್ಷೆಯ ಮುಖಾಂತರ ಅಧಿಕಾರಿಯಾಗಿ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸುತ್ತಮುತ್ತಲಿನ ವಿಚಾರಗಳನ್ನು ತಿಳಿದುಕೊಂಡರೇ ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ತಿಳಸಿದರು.
ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಕವಿತಾ ರಾಜರಾಮ್‌ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಂದು ಹುಚ್ಚುತನದ ಭಾವನೆಯನ್ನು ಅಳವಡಿಸಿಕೊಂಡರೇ ಮಾತ್ರ ಪಾಸ್ ಮಾಡಬಹುದು. ಪ್ರಸ್ತುತ ದಿನಗಳಲ್ಲಿ ಓದುವ ಮನಸ್ಥಿತಿ ಕಡಿಮೆಯಾಗುತ್ತಿದೆ ಅದಕ್ಕೆ ಬದಲಾಗಿ ಇಂದು ಎಐ ಮೂಲಕ ತರಗತಿಗಳಲ್ಲಿ ಮಾನವರ ಬದಲು ಮಾನವರು ತಯಾರಿಸಿದ ಯಂತ್ರಗಳ ಮ‌ೂಲಕವೇ ಉದ್ಯೋಗಗಳು ಕಡಿತಗೊಳಿಸುತ್ತಿವೆ ಅದಕ್ಕೇ ನಾವೇ ನೇರವಾದ ಕಾರಣಕರ್ತರಾಗಿದ್ದೇವೆ. ಗಂಭೀರತೆಯನ್ನು ಅಳವಡಿಸಿಕೊಂಡರೆ ಮಾತ್ರ ಓದುವ ಕಾರ್ಯದಲ್ಲಿ ಮುಂದುವರೆಯಬೇಕು ಇಲ್ಲದಿದ್ದರೆ ಸುಖಾಸುಮ್ಮನೆ ಸಮಯ ಮತ್ತು ವಯಸ್ಸು ಕಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮೊದಲು ಓದುವ ಗುಣವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ವ್ಯಾಗ್ಮಿ ಪ್ರೋ ಕೃಷ್ಣೇಗೌಡ, ಇಂದಿನ GEN-Z ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟಕರವಾದ ಸ್ಥಿತಿ, ಸರ್ಕಾರ ಕೆಲಸ ಕೊಡುತ್ತದೆ ಎಂದು ಕಾಯುತ್ತ ಕುಳಿತಿದ್ದರೆ ಯಾವ ಸರ್ಕಾರಗಳು ಸಹ ಕೆಲಸ ಕೊಡುವುದಿಲ್ಲ. ಆದ್ದರಿಂದ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳ ಜೊತೆಗೆ ಅನ್ಯ ಉದ್ಯೋಗಗಳನ್ನು ಮಾಡಬೇಕು ಆಗ ಮಾತ್ರ ನಾವು ಬದುಕಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಪಶುಪತಿ ಜಯಪ್ರಕಾಶ್, ರಾಜೀವ್ ಶರ್ಮ, ಜ್ಞಾನಬುತ್ತಿಯ ಕಾರ್ಯದರ್ಶಿಗಳಾದ ಬಾಲಕೃಷ್ಣ, ಸಹ ಪ್ರಾಧ್ಯಾಪಕರಾದ ಕೃ. ಪಾ. ಗಣೇಶ್ , ಸಿ.ಕೆ ಕಿರಣ್ ಕೌಶಿಕ್ ಮತ್ತು ರೋಹನ್, ರವಿ ಕುಮಾರ್ ಉಪಸ್ಥಿತರಿದ್ದರು.

ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು:ಎಸ್ ಎಲ್ ಚೆನ್ನಬಸವಣ್ಣ Read More

ಅಪಘಾತ: ಬೆಸ್ಕಾಂ ಎಮ್‌ ಡಿ ಮಹಾಂತೇಶ್ ಬೀಳಗಿ ಸೇರಿ ಮೂವರು ನಿಧನ

ಕಲಬುರಗಿ: ಕಲಬುರಗಿ ಯ ಜೇವರ್ಗಿ ಬಳಿ ನಡೆದ ರಸ್ತೆ ಅಪಘಾತದಲ್ಲಿ
ಬೆಸ್ಕಾಂ ಎಮ್‌ಡಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ವಿಜಯಪುರದಿಂದ ಕಲಬುರಗಿಗೆ ಸಂಬಂಧಿಕರ ಮದುವೆ ಕಾರ್ಯಕ್ಕೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ‍ಬೀಳಗಿ ಅವರ ಇನ್ನೋವಾ ಕಾರು ಮರಕ್ಕೆ ಅಪ್ಪಳಿಸಿದೆ.

ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು.

ಆಸ್ಪತ್ರೆಗೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿಎಚ್‌ಒ ಶರಣಬಸಪ್ಪ ಕ್ಯಾತನಾಳ್ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರಿಗೆ 51 ವರ್ಷ. ಅವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಅಪಘಾತ: ಬೆಸ್ಕಾಂ ಎಮ್‌ ಡಿ ಮಹಾಂತೇಶ್ ಬೀಳಗಿ ಸೇರಿ ಮೂವರು ನಿಧನ Read More

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ:ಡಾ. ಎಂ. ಬಿ ಬೋರಲಿಂಗಯ್ಯ

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ ಎಂದು ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎಂ. ಬಿ ಬೋರಲಿಂಗಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 50 ದಿನಗಳ ಐಎಎಸ್‌ ಹಾಗೂ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಫಿಕೇಷನ್ ಪ್ರಕಟವಾಗಲಿ ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ,ಸರ್ಕಾರಿ ನೌಕರಿಗಿರುವ ಸೆಳೆತನ ಅಂತದ್ದು ಎಂದು ಅಭಿಪ್ರಾಯ ಪಟ್ಟರು.

ಕಠಿಣ ಪರಿಶ್ರಮ ಇದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದು ಎಂದು‌ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಕೂಡ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ‌ ಓದಿ ಯುಪಿಎಸ್ಸಿ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಿದ್ದೆ. ಇಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಇದ್ದೀರಿ ಶ್ರಮಪಟ್ಟು ಓದಿ ಎಂದು ಸಲಹೆ ನೀಡಿದರು.

ಪ್ರಸ್ತುತ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಬೇಕೆಂದಿಲ್ಲ, ಮೈಸೂರಿನ ಕೆಎಸ್ಒಯು ನಡೆಸುತ್ತಿರುವ ತರಬೇತಿಯು ಅತ್ಯುತ್ತಮ ತರಬೇತಿ ಕೇಂದ್ರವಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದರು.

ಹಾರ್ಡ್ ವರ್ಕ್ ಜೊತೆಗೆ ಓದಿನಲ್ಲಿ ತಯಾರಿ ಇರಲಿ,ಜತೆಗೆ ನಿದ್ರೆಯು ಮುಖ್ಯ. ನಿದ್ದೆಗೆಟ್ಟು ಓದುವುದು ಬೇಡ,ಎಲ್ಲದಕ್ಕೂ ಸಮಯಪಾಲನೆ ಇದ್ದರೆ ಒಳಿತು, ತಯಾರಿ ಸಮಯದಲ್ಲಿ ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ಆಯ್ಕೆವಾರು ವಿಷಯಗಳನ್ನು ಚರ್ಚಿಸಿ ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣದ ಗೀಳಿನಿಂದ ‌‌ದೂರವಿದ್ದು, ದೈನಂದಿನ ದೈಹಿಕ ಚಟುವಟಿಕೆ ಕಡೆಗೆ ಗಮನಹರಿಸಿ ಎಂದು ತಿಳಿಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ಜಿ.ಎಸ್ ಸೋಮಶೇಖರ್ ಮಾತನಾಡಿ, ಪರೀಕ್ಷೆ ಎದುರಿಸುವುದಕ್ಕೆ ದೃಢ ಮನಸ್ಸು ಇರಬೇಕು, ಆತ್ಮವಿಶ್ವಾಸ, ಸಮಯಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದೆ ಎಂದು ಹೇಳಿದರು.

ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆಪ್ರತ್ರಿಕೆಗಳ ಅಧ್ಯಯನದ ಜೊತೆಗೆ ಪ್ರತಿ ನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆನೀಡಿದರು.

ಕುಲಪತಿ ಪ್ರೊ.ಶರಣಪ್ಪವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟು ಓದಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಶಿಕ್ಷಣ ಉದ್ಯೋಗದ ಜೊತೆಗೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ.ಬಿ ಪ್ರವೀಣ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ್ ವರ್ಕ್ ಮಾಡಬೇಕು. ಆಸೆ ಪಟ್ಟು ಓದಿ. ವಿವಿಯ ಆವರಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿವೆ. ಇವುಗಳನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್.ವಿಶ್ವನಾಥ್, ಹಣಕಾಸು ಅಧಿಕಾರಿ ಪ್ರೊ. ನಿರಂಜನ್‌ ರಾಜ್‌, ಅಧ್ಯಯನ ಕೇಂದ್ರದ ಡೀನ್‌ ಪ್ರೊ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್‌ ಹೊನ್ನೂರ್‌, ಗಣೇಶ್‌ ಕೆ.ಜಿ. ಕೊಪ್ಪಲ್‌, ಇದ್ದರು.

ಕಾರ್ಯಕ್ರಮದಲ್ಲಿ ದಕ್ಷಿಣವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ.ಎಂ.ಬಿ ಬೋರಲಿಂಗಯ್ಯ ಮತ್ತು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್ ಸೋಮಶೇಖರ್ ಅವರನ್ನು ಕರಾಮುವಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ:ಡಾ. ಎಂ. ಬಿ ಬೋರಲಿಂಗಯ್ಯ Read More

ಯುವ ಜನತೆಯ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸಿ: ಸಿಎಂ

ಬೆಂಗಳೂರು, ಜ.1: ಯುವ ಜನತೆ ನಮ್ಮ ಆಸ್ತಿ,ಅವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲನ್ನು ಸ್ವೀಕರಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಐಎಎಸ್,ಐಪಿಎಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿ ಸಿಎಂ ಮಾತನಾಡಿದರು.

ಡ್ರಗ್ಸ್ ಹಾವಳಿ, ಅಪರಾಧಿಕ ಜಗತ್ತಿನ‌ ಕಡೆಗೆ ಯುವ ಜನತೆ ಆಕರ್ಷಿತರಾಗದಂತೆ ಎಚ್ಚರ ವಹಿಸಿ. ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿ ಆಗುತ್ತಿದೆ. ಈ ಪ್ರಗತಿ ಅಪರಾಧಗಳಿಗೆ ಬಳಕೆ ಆಗದೆ ಯುವ ಜನರ ಭವಿಷ್ಯ ರೂಪಿಸಲು ಸಹಕಾರಿ ಆಗುವಂತೆ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ನಿಮ್ಮ ಸಹಕಾರ ಹೆಚ್ಚು ಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಬದುಕಿನಲ್ಲಿ ಏಳು ಬೀಳು ಸಹಜ ಮತ್ತು ನಿರಂತರ, ಪರಿಸ್ಥಿತಿಗಳು ಸದಾ ನಮ್ಮ ಪರವಾಗಿ ಇರುವುದಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಮಸ್ಯೆಗಳನ್ನು, ಸಂದರ್ಭಗಳನ್ನು ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಆಡಳಿತಾಂಗದಲ್ಲಿ ಐಎಎಸ್,ಐಪಿಎಸ್,ಐಆರ್ ಎಸ್, ಐಎಫ್ಎಸ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ನಾವು ಕಾನೂನುಗಳನ್ನು ರಚಿಸಿ, ಜಾರಿ ಆಗುವ ದಿಕ್ಕಿನಲ್ಲಿ ನಿರಂತರ ನಿಗಾ ವಹಿಸುತ್ತೇವೆ. ಅಧಿಕಾರಿ ವರ್ಗ ಸಮಾಜಕ್ಕೆ ಪೂರಕವಾಗಿ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಿಎಂ ಹೇಳಿದರು.

ಭಾರತದ ಆರ್ಥಿಕತೆ ಕುಸಿತ ಕಂಡಿದ್ದಾಗ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದರು. ದೇಶದ ಆರ್ಥಿಕ‌ ಬೆಳವಣಿಗೆ ಆಗಿ ಇದರ ಲಾಭ ದೇಶದ ಜನರಿಗೆ ಲಭಿಸುವಂತೆ ಮಾಡಿದರು. ಸಂವಿಧಾನದ ನಿರ್ದೇಶಕ ತತ್ವಗಳಾದ ಸಮಾನತೆ, ಜಾತ್ಯತೀತತೆ, ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ದೇಶದ ಜನರ ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು. ಮಾಹಿತಿ ಹಕ್ಕು, ಆಹಾರದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಕಡ್ಡಾಯ ಮಾಡಿದರು. ಆ ಮೂಲಕ ಸಮಾನತೆಯೆಡೆಗೆ ದೇಶವನ್ನು ಮುನ್ನಡೆಸಿದರು ಎಂದು ವಿವರಿಸಿದರು.

ಸಮಾನ ಅವಕಾಶಗಳು ಸಿಕ್ಕಾಗ ಸಮಾನತೆ ದಿಕ್ಕಿಗೆ ನಾವು ಸಾಗಬಹುದು ಎನ್ನುವ ಕಾರಣದಿಂದಲೇ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಜನರ ಕೈಯಲ್ಲಿ ಕಾಸು ಇರಬೇಕು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಇದಕ್ಕೆ ತಕ್ಕಂತೆ ರಾಜ್ಯದ ಜನರ ಜೇಬಲ್ಲಿ ಹಣ ಇರುವ ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದೆವು. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರ ಜನರಿಗೆ ಹಣ ತಲುಪಿಸುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನೀವು ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ರಾಜ್ಯದಲ್ಲಿ ಅದ್ಭುತ ಬದಲಾವಣೆ, ಸುಧಾರಣೆಗಳನ್ನು ತರಲು ಸಾಧ್ಯವಿದೆ. ಇದಕ್ಕಾಗಿ ನಿಮ್ಮ ಕಾರ್ಯಕ್ಷಮತೆ ಬಳಕೆಯಾಗಲಿ ಎಂದು ಹೇಳಿದರು.

ಅಧಿಕಾರಿ ವರ್ಗಕ್ಕೆ ನಮ್ಮ ಸಲಹೆಯ ಅಗತ್ಯ ಇಲ್ಲ. ನೀವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು. ಭ್ರಷ್ಟಾಚಾರ ವ್ಯವಸ್ಥೆ ಕಡಿಮೆ ಆಗುವ ಬದಲಿಗೆ ಹೆಚ್ಚಾಗುತ್ತಿರುವುದು ದುರಂತ. ಆದ್ದರಿಂದ ನಾವೆಲ್ಲರೂ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ ಎಂದು ತಿಳಿಸಿದರು.

ಹಣ ಸಂಗ್ರಹಿಸುವ ಇಲಾಖೆಗಳು ಮತ್ತು ಹಣ ಖರ್ಚು ಮಾಡುವ ಇಲಾಖೆಗಳೆರಡೂ ಸಮತೂಕದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ
ಸಚಿವ ಜಮೀರ್ ಅಹಮದ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಉಪಸ್ಥಿತರಿದ್ದರು.

ಯುವ ಜನತೆಯ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸಿ: ಸಿಎಂ Read More