ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ರೈತರ‌ ಬೃಹತ್ ಪ್ರತಿಭಟನೆ

ಹುಣಸೂರು: ಕಾಡು ಪ್ರಾಣಿಗಳ ಹಾವಳಿ ತಪ್ಪಸಿ ಜನರ ಪ್ರಾಣ ಉಳಿಸಿ, ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮತ್ತು ಅರಣ್ಯದಂಚಿನ ರೈತರನ್ನು ಒಕ್ಕಲೆಬ್ಬಿಸುವುದನ್ನು ಖಂಡಿಸಿ, ಹುಣಸೂರು ಡಿ.ಎಫ್.ಒ. ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳವರು ಬೃಹತ್ ಪ್ರತಿಭಟನೆ ನಡೆಸಿದರು.

ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿ ನಂತರ ಡಿಎಫ್ಒ ಸೀಮಾ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾಡಂಚಿನ ರೈತರು, ಜನರು ಆತಂಕದಲ್ಲೇ ಕಳೆಯುವಂತಾಗಿದೆ, ಕಾಡಾನೆ ಮತ್ತು ಹುಲಿ-ಚಿರತೆ ಹಾವಳಿಯಿಂದ ಜನ-ಜಾನುವಾರುಗಳು ಸಾವು ನೋವುಗಳನ್ನು ಅನುಭವಿಸುತ್ತಾ ಕಾಡಂಚಿನ ಪ್ರದೇಶದಲ್ಲಿ ಬದುಕುವುದೇ ನರಕಯಾತನೆ ಯಾಗಿದೆ ಎಂದು ರೈತ ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದರು.

ಜನರ ಪ್ರಾಣ ಹಾನಿ ಒಂದಾದ ಮೇಲೊಂದು ಆಗುತ್ತಿದ್ದರೂ ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಈ ಬಗ್ಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ,ಕಾಡುಪ್ರಾಣಿಗಳ ತಡೆಗೆ ಗಂಭೀರವಾಗಿ ಪ್ರಯತ್ನ ಮಾಡಲೇ ಇಲ್ಲ ಎಂದು ಕಿಡಿಕಾರಿದರು.

ಕಾಡಾನೆ ಹಾವಳಿಯನ್ನು ತಪ್ಪಿಸಲು ಕಾಡಂಚಿನ ಪ್ರದೇಶದಲ್ಲಿ ರೈಲು ಕಂಬಿಯನ್ನು ಆಳವಡಿಕೆ ಕಾಮಗಾರಿಯನ್ನು ಪೂಣಗೊಳಿಸಬೇಕು,
ಹುಲಿ-ಚಿರತೆ ಹಾವಳಿಯನ್ನು ನಿಯಂತ್ರಿಸಲು ಪರಿಣಿತರು ಹಾಗೂ ಹಿರಿಯ ಅಧಿಕಾರಿಗಳೊಳಗೊಂಡ ತಂಡವನ್ನು ರಚಿಸಬೇಕು,ಕಾಡಾನೆ ಮತ್ತು ಹುಲಿ ಹಾವಳಿಯಿಂದ ಪ್ರಾಣ ಹಾನಿಯಾದಲ್ಲಿ 25 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಖಾಯಂ ಸರ್ಕಾರಿ ಉದ್ಯೋಗ ದೊರಕಿಸಬೇಕು, ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಪೂರ್ಣವಾಗಿ ಭರಿಸಬೇಕು, ಕಾಡಾನೆ ಹಾವಳಿಯಿಂದ ಫಸಲು ನಷ್ಟವಾದಲ್ಲಿ ವೈಜ್ಞಾನಿಕ ಪರಿಹಾರ ನೀಡಬೇಕು,ಹಂದಿ ಮತ್ತು ಕೋತಿಗಳಿಂದಲೂ ಫಸಲು ನಷ್ಟವಾಗುತ್ತಿದ್ದು,ಅದನ್ನು ನಿಯಂತ್ರಿಸಬೇಕು,
ಕಾಡಂಚಿನ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಪ್ರತಿಭಟನಾ ನಿರತರು‌ ಸರ್ಕಾರವನ್ನು ಆಗ್ರಹಿಸಿದರು.

ರೈತನಾಯಕ ಹಾಗೂ ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ,
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್,ಹುಣಸೂರು ತಾಲೂಕು ಅಧ್ಯಕ್ಷ ಚಿಕ್ಕಣ್ಣ ಬೆಂಕಿಪುರ,
ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ‌ ಚಲುವರಾಜು ಹಾಗೂ ದಲಿತ ಸಂಘಟನೆ ಸದಸ್ಯರು, ರೈತರು, ಅರಣ್ಯದಂಚಿನ ಗ್ರಾಮವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ರೈತರ‌ ಬೃಹತ್ ಪ್ರತಿಭಟನೆ Read More

ಹೊನ್ನಿಕುಪ್ಪೆ ಗ್ರಾಮಕ್ಕೆಸಿಕ್ಕಿತು ಸ್ಮಶಾನ ಜಾಗ- 7 ದಶಕಗಳ ಹೋರಾಟಕ್ಕೆ ಸಂದ ಜಯ

ಹುಣಸೂರು: ಸ್ಮಶಾನ‌ ಜಾಗಕ್ಕಾಗಿ ಏಳು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ,ಹೊನ್ನಿಕುಪ್ಪೆ ಗ್ರಾಮದ ಜನತೆಗೆ ಕಡೆಗೂ ಜಯ ಸಿಕ್ಕಿದೆ.

ಉದ್ದೂರು ಕಾವಲ್‌ ಗ್ರಾಮದ
ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಇದೇ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ಮೀಸಲಿಡುವಂತೆಯೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ, ಹೊನ್ನಿಕುಪ್ಪೆ ಗ್ರಾಮ, ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಅವರು 17-8-2024 ರಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.

ಆ ಮನವಿ ಪತ್ರದಲ್ಲಿ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಡುವಂತೆ ಚಲುವರಾಜು ಕೋರಿದ್ದರು.

ಇದೇ‌ ವಿಷಯಕ್ಕೆ ಸಂಬಂದಿಸಿದಂತೆ ಸುಮಾರು 70 ವರ್ಷಗಳಿಂದ ಗ್ರಾಮದ ಹಲವಾರು ಮುಖಂಡರು ಹೋರಾಟ ಮಾಡಿದ್ದರು.ಅವರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ.

ಇತ್ತೀಚೆಗೆ ಚಲುವರಾಜು ಅವರು ತಮ್ಮ ಗ್ರಾಮಕ್ಕೆ ಸ್ಮಶಾನ ಬೇಕೇಬೇಕೆಂದು ಪಟ್ಟುಹಿಡಿದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಲುವರಾಜು ಅವರು ಸಲ್ಲಿಸಿದ ಮನವಿ ಪತ್ರದ ಬಗ್ಗೆ ಪರಿಶೀಲಿಸಿದ ಮೈಸೂರು ಜಿಲ್ಲಾಧಿಕಾರಿಗಳು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನನ್ನು ಹೊನ್ನಿಕುಪ್ಪೆ ಗ್ರಾಮದ ಎಲ್ಲಾ ಜನಾಂಗದವರ ಸ್ಮಶಾನ ಉದ್ದೇಶಕ್ಕಾಗಿ ಕಾಯ್ದಿರಿಸುವಂತೆ ಆದೇಶಿಸಿದ್ದಾರೆ.

ಅದರಂತೆ ಸಂಬಂಧಪಟ್ಟ ಹೋಬಳಿಯ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ತಾಲ್ಲೂಕು ಭೂಮಾಪಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನಿನ ಸ್ಥಳ ತನಿಖೆ ನಡೆಸಿ,ಆ ಜಮೀನನ್ನು ಅಳತೆ ಮಾಡಿ, ಸ್ಮಶಾನ ಜಮೀನನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು,
ಚಲುವರಾಜು ಅವರ ಸಮ್ಮುಖದಲ್ಲಿ ಸ್ಮಶಾನ ಜಾಗದ ಬೋರ್ಡ್ ಅಳವಡಿಸಲಾಗಿದೆ.

ಹೊನ್ನಿಕುಪ್ಪೆ ಗ್ರಾಮಕ್ಕೆಸಿಕ್ಕಿತು ಸ್ಮಶಾನ ಜಾಗ- 7 ದಶಕಗಳ ಹೋರಾಟಕ್ಕೆ ಸಂದ ಜಯ Read More

ಒಂದೇ ವಾರದಲ್ಲಿ ಡಾಂಬರು ಕಿತ್ತು ಜಲ್ಲಿಕಲ್ಲು ಹೊರಬಂದ ಹುಣಸೂರಿನ ಪಿಂಜಳ್ಳಿ ರಸ್ತೆ

ಹುಣಸೂರು: ಹುಣಸೂರು ತಾಲೂಕಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಲೇ ಇದ್ದು ಇದಕ್ಕೆ ಹುಣಸೂರು-ಪಾಲ ಪಿಂಜಳ್ಳಿ ರಸ್ತೆ ಅಪ್ಪಟ ಉದಾಹರಣೆಯಾಗಿದೆ.

ಹುಣಸೂರಿನಿಂದ ನಾಗರಹೊಳೆಗೆ ಹೋಗಿ ಅಲ್ಲಿಂದ ಪಿಂಜಳ್ಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಕಳೆದ ಒಂದು ವಾರವಷ್ಟೇ ಡಾಂಬರು ಹಾಕಲಾಗಿತ್ತು.

ಆದರೆ ಇದು ಅದೆಷ್ಟು ಕಳಪೆ ಮಟ್ಟದಿಂದ ಕೂಡಿದೆ ಎಂದರೆ ಕೈ ನಲ್ಲಿ ಮುಟ್ಟಿದರೆ ಸಾಕು ಡಾಂಬರು ಕಿತ್ತು ಬರುತ್ತದೆ.

ಡಾಂಬರು ಕಿತ್ತು ರಸ್ತೆ ತುಂಬಾ ಸಣ್ಣ ಸಣ್ಣ ಜಲ್ಲಿಕಲ್ಲುಗಳು ರಾಡಿಯಾಗಿ ಬಿದ್ದಿದೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಸಂಚರಿಸಿದರೆ ಸ್ಕಿಡ್ಡಾಗಿ ಬೀಳುತ್ತಾರೆ.

ಸಂಬಂಧಪಟ್ಟ ಇಂಜಿನಿಯರ್ ಗಳು ಇದಕ್ಕೆ ಉತ್ತರ ಕೊಡಬೇಕಿದೆ.

ಇನ್ನು ಅದೆಷ್ಟು ಭ್ರಷ್ಟಾಚಾರ ಮಾಡಲಾಗಿದೆಯೋ ತಿಳಿಯದು ಈ ರಸ್ತೆ ಕಾಮಗಾರಿಗೆ ಸುಮಾರು 15 ಲಕ್ಷ ರೂ ವೆಚ್ಚ ಮಾಡಲಾಗಿದೆ.ಕಾಮಗಾರಿ ಮಾಡಿದ ಒಂದು ವಾರದಲ್ಲೇ ಡಾಂಬರು ಕಿತ್ತು ಬಂದಿರುವುದು ನೋಡಿದರೆ ಅದೆಷ್ಟು ಕಳಪೆ ಕಾಮಗಾರಿ ಮಾಡಿರಬಹುದು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕಿಡಿ ಕಾರಿದ್ದಾರೆ.

ಈ‌ ಕಳಪೆ ರಸ್ತೆ ಕಾಮಗಾರಿ ಮಾಡಿ ಹಣ ಕೊಳ್ಳೆ ಹೊಡೆಯಲು ಕಾರಣರಾದ ಎಲ್ಲ ಇಂಜಿನಿಯರುಗಳು, ಪಿಡಬ್ಲ್ಯಡಿ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಚಲುವರಾಜು ಒತ್ತಾಯಿಸಿದ್ದಾರೆ.

ಕೂಡಲೇ ಸಂಬಂದಪಟ್ಟವರು ಪಿಂಜಳ್ಳಿ ರಸ್ತೆಗೆ ಗುಣಮಟ್ಟದ ಕಾಮಗಾರಿ ಮಾಡಿ ಸರಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಒಂದೇ ವಾರದಲ್ಲಿ ಡಾಂಬರು ಕಿತ್ತು ಜಲ್ಲಿಕಲ್ಲು ಹೊರಬಂದ ಹುಣಸೂರಿನ ಪಿಂಜಳ್ಳಿ ರಸ್ತೆ Read More

ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿದೆ ಹುಣಸೂರು ಬಸ್ ನಿಲ್ದಾಣ!

ಹುಣಸೂರು: ಹುಣಸೂರು ಬಸ್ ನಿಲ್ದಾಣ ಕೆಎಸ್ಆರ್ಟಿಸಿ ಬಸ್ ಗಳು ನಿಲುಗಡೆ ಮಾಡಲು ಇರುವುದೊ ಅಥವಾ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಇರುವುದಾ ಎಂಬ ಸಂಶಯ ಬರುವಂತಾಗಿದೆ.

ಏಕೆಂದರೆ ಬೆಳಗಿನಿಂದ ರಾತ್ರಿವರೆಗೂ ಹುಣಸೂರು ಬಸ್ ನಿಲ್ದಾಣದಲ್ಲಿ ನೂರಾರು ದ್ವಿಚಕ್ರ ವಾಹನಗಳು ಪಾರ್ಕಿಂಗ್ ಮಾಡಲಾಗಿರುತ್ತದೆ,ಜತೆಗೆ ಅಲ್ಲೇ ಸಮೀಪದಲ್ಲೇ ಸಣ್ಣ ವಾಹನಗಳು ಕೂಡಾ ಬಸ್ ನಿಲ್ದಾಣದ ಮುಂದುಗಡೆ ಪಾರ್ಕಿಂಗ್ ಮಾಡಲಾಗಿರುತ್ತದೆ ಇದನ್ನು ಹೇಳುವವರು ಕೇಳುವವರು ಯಾರು ಇಲ್ಲವೆ?.

ಹೀಗೆ ನೂರಾರು ದ್ವಿಚಕ್ರ ವಾಹನಗಳು ಬಸ್ ನಿಲ್ದಾಣದ ಒಳಗೆ ನಿಂತರೆ ಗ್ರಾಮಾಂತರ ಪ್ರದೇಶಗಳಿಗೆ ಹುಣಸೂರು ಬಸ್ ನಿಲ್ದಾಣದಿಂದ ಹೋಗಲು ಮತ್ತು ಬಸ್ ನಿಲ್ದಾಣದ ಒಳಗೆ ಬರಲು ಬಸ್ ಚಾಲಕರಿಗೆ ತೊಂದರೆ ಆಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಕೂಡ ಈ ವಾಹನ ಸವಾರರಿಗೆ ಇಲ್ಲದಿರುವುದು ದುರ್ದೈವ.

ಹೀಗೆ ಅಡ್ಡದಿಡ್ಡಿಯಾಗಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಹೋಗಿಬಿಟ್ಟರೆ ನಿಲ್ದಾಣದಿಂದ ಹೊರಡುವ ಮತ್ತು ಒಳಗೆ ಬರುವ ಬಸ್ ಗಳು ಹೇಗೆ ಸಂಚರಿಸಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಪ್ರಶ್ನಿಸಿದ್ದಾರೆ.

ಇಲ್ಲೇ ಸುತ್ತಮುತ್ತಲ ಅಂಗಡಿಗಳವರು ವಿವಿಧ ಕಚೇರಿಗೆ ಹೋಗುವವರು ಇಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನ ಪಾರ್ಕಿಂಗ್ ಮಾಡಿ ಹೋಗುತ್ತಿರಬಹುದು ಎಂಬ ಸಂಶಯ ಕಾಡುತ್ತಿದೆ ಕೂಡಲೇ ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳು ಮತ್ತು ಬಸ್ ನಿಲ್ದಾಣದ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಲ್ಲವೇ ಬಸ್ ನಿಲ್ದಾಣದ ಆವರಣದ ಒಂದು ಭಾಗದಲ್ಲಿ ಸ್ಥಳಾವಕಾಶ ಮಾಡಿ ಪಾರ್ಕಿಂಗ್ ಮಾಡಲು ಅವಕಾಶ ಕೊಟ್ಟು ಅವರಿಂದ ದಿನಕ್ಕೆ ಇಷ್ಟು ಎಂದು ಬಾಡಿಗೆ ಪಡೆದರೆ ಬಸ್ ನಿಲ್ದಾಣದ ಅಭಿವೃದ್ಧಿಗೊ ಹಣ ಸಿಗುತ್ತದೆ ಆ ಬಗೆಯಾದರೂ ಚಿಂತನೆ ಮಾಡಬಹುದು. ಇಲ್ಲದಿದ್ದರೆ ಹೀಗೆ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದರೆ ಬಸ್ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಬೇಡವೇ ಎಂದು ಚೆಲುವರಾಜು ಕಿಡಿಕಾರಿದ್ದಾರೆ.

ಹೀಗೆ ದ್ವಿಚಕ್ರವಾಹನ ಅಡ್ಡಾದಿಡ್ಡಿ ನಿಲ್ಲಿಸಿದ್ದರ ಬಗ್ಗ ಪ್ರಶ್ನೆ ಮಾಡಿದ್ದಕ್ಕೆ ಹೋಂ ಗಾರ್ಡ್ ಒಬ್ಬರಿಗೆ ವಾಹನ ಸವಾರ ಹಲ್ಲೆ ಮಾಡಿದ ಉದಾಹರಣೆ ಕೂಡ ಇದೆ. ಹೀಗೆ ಗಲಾಟೆಗೆ ಅವಕಾಶ ಮಾಡಿಕೊಡುವ ಬದಲು ನ್ಯಾಯ ರೀತಿಯಲ್ಲಿ ಪಾರ್ಕಿಂಗ್ ಗೆ ದ್ವಿಚಕ್ರ ವಾಹನ ಸವಾರರಿಂದ ಹಣ ಪಡೆಯುವುದರಿಂದ ಸರ್ಕಾರಕ್ಕೆ ಹಣ ಬರುತ್ತದೆ ಎಂದು ಚಲುವರಾಜು ಅವರು ಸಲಹೆ ನೀಡಿದ್ದಾರೆ.

ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿದೆ ಹುಣಸೂರು ಬಸ್ ನಿಲ್ದಾಣ! Read More

ಕಾಲುವೆ ಹೂಳು ಏರಿ ಮೇಲೆ:ಜನರಿಗೆ ಪ್ರಾಣ ಸಂಕಟ-ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

ಹುಣಸೂರು: ದೇವರು ವರ ಕೊಟ್ರು ಪೂಜಾರಿ ಬಿಡ ಅಂತ ಗಾದೆ ಮಾತಿದೆಯಲ್ಲ ಅದು ಹುಣಸೂರಿನಲ್ಲಿ ನಡೆದಿರುವ ಹೂಳೆತ್ತುವ ಕಾರ್ಯಕ್ಕೆ ಸಾಕ್ಷಿಯಾಗಿದೆ.

ಇದೇನಂತೀರಾ? ಸರ್ಕಾರ ರೈತರಿಗೆ, ಗ್ರಾಮಾಂತರ ಪ್ರದೇಶಗಳ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕಾಲುವೆಗಳ ಹೂಳು ತೆಗೆದು ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಕೆರೆಗಳಿಗೆ ಸೇರಲಿ ಎಂಬ ಉದ್ದೇಶದಿಂದ ಕಾಲುವೆ ಹೂಳೆತ್ತುವ ಟೆಂಡರ್ ಕರೆದಿರುತ್ತದೆ.

ಆದರೆ ಈ ಟೆಂಡರ್ ಪಡೆದ ಮಹಾನುಭಾವರು ಅರೆಬರೆ ಕೆಲಸ ಮಾಡಿ ಇತ್ತ ಸರ್ಕಾರಕ್ಕೂ ಕೆಟ್ಟ ಹೆಸರು ಬರಬೇಕು ಜನರಿಗೂ ಒಳಿತಾಗಬಾರದು ಹಾಗೆ ಹಣ ನುಂಗಿ ಕೆಲಸ ಕಾರ್ಯವನ್ನು ಹಾಳು ಮಾಡುತ್ತಿದ್ದಾರೆ ಇದಕ್ಕೆ ಹುಣಸೂರು ನಗರದ ಕಾಲುವೆಗಳು ಉದಾಹರಣೆಯಾಗಿವೆ.

ಇತ್ತೀಚೆಗೆ ಹುಣಸೂರಿನ ಕಾಲುವೆಗಳ ಹೂಳು ತೆಗೆಯುವ‌ ಕೆಲಸ ಮಾಡಲಾಗಿದೆ, ಆದರೆ ಹೂಳು ತೆಗೆಯುವ ಕಾರ್ಯ ಅರೆಬರೆ ಕೆಲಸ ಮಾಡಿದ್ದಾರೆ. ಅಂದರೆ ಸುಮಾರು ಒಂದು ಕಿಲೋಮೀಟರ್ ಗೂ ಹೆಚ್ಚು ದೂರ ಕಾಲುವೆಯ ಹೂಳು ತೆಗೆದು ಅದನ್ನು ಬೇರೆ ಕಡೆ ಸಾಗಿಸುವುದು ಬಿಟ್ಟು ರಸ್ತೆ ಉದ್ದಕ್ಕೂ ಹಾಕಿದ್ದಾರೆ. ಅಂದರೆ ಕಾಲುವೆಯ ಏರಿ ಮೇಲೆ ಸುರಿದಿದ್ದಾರೆ.ಅದು ಈಗ ರಾಡಿಯಾಗಿ ಕೆಸರು ಗದ್ದೆಯಾಗಿಬಿಟ್ಟಿದೆ.

ಹುಣಸೂರಿನ ಜನರು ಜಮೀನು ಕಡೆ ತೋಟದ ಕಡೆ ಹೋಗಬೇಕಾದರೆ ಇಂತಹ ಕಾಲುವೆ ಏರಿ ಮೇಲೆಯೇ ಹೋಗಬೇಕು. ಆದರೆ ಇತ್ತೀಚೆಗೆ ಮಳೆ ಸತತವಾಗಿ ಬರುತ್ತಿದೆ ಈ ಹೂಳಿನ ಕೆಸರಿನಲ್ಲಿ ಜಾರಿ ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ.ಅಷ್ಟೇ ಏಕೆ ಟ್ರ್ಯಾಕ್ಟರ್ ಕೂಡಾ ಮಗಚಿ ಬಿದ್ದಿತ್ತು ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯವಾಗಲಿಲ್ಲ.

ಆದರೆ ಪ್ರತಿನಿತ್ಯ ಕೆರೆ ಏರಿ ಮೇಲೆ ಜನ ಓಡಾಡಲು ಅಂಜುವಂತಾಗಿದೆ ಹೂಳು ಕೆಸರು ಗದ್ದೆಯಂತಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು
ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಈ ಹೂಳನ್ನು ತೆಗೆದು ಜಮೀನು ಅಥವಾ ಗದ್ದೆಗೆ ಹಾಕಿಸಬೇಕು ಆಗ ರೈತರಿಗಾದರೂ ಇದು ಗೊಬ್ಬರವಾಗಿ ಅನುಕೂಲವಾಗುತ್ತದೆ ಎಂದು ಚಲುವರಾಜು ಹೇಳಿದ್ದಾರೆ.

ಹೀಗೆ ಸುಖಾ ಸುಮ್ಮನೆ ಯಾರಿಗೂ ಉಪಯೋಗವಾಗದಂತೆ ಮಾಡಿ ಹೂಳೆತ್ತುವ ನೆನಪಲ್ಲಿ ಹಣ ಹೊಡೆದು ಜನರಿಗೆ ಅನಾನುಕೂಲ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲುವೆ ಹೂಳು ಏರಿ ಮೇಲೆ:ಜನರಿಗೆ ಪ್ರಾಣ ಸಂಕಟ-ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು Read More

ಕೆರೆ ಕಾಲುವೆ ಹೂಳು ತೆಗೆಯುವಲ್ಲಿ ಗೋಲ್ ಮಾಲ್;ಹುಣಸೂರಲ್ಲಿ ಲಕ್ಷಾಂತರ ಹಣ ಪೋಲು

ಹುಣಸೂರು,ಜು.1: ಹುಣಸೂರಿನಲ್ಲಿ ಕಳಪೆ ಕಾಮಗಾರಿ ಮಾಡಿ ದುಡ್ಡು ಹೊಡೆಯುವುದರಲ್ಲಿ ಅಧಿಕಾರಿಗಳು ನಿಸ್ಸೀಮರು ಎಂಬುದಕ್ಜೆ ಕಾವೇರಿ ನೀರಾವರಿ ನಿಗಮ ಒಂದು ಸ್ಪಷ್ಟ ಉದಾಹರಣೆಯಾಗಿದೆ.

ಮಳೆ ಬಂದಾಗ ನೀರು ಸರಾಗವಾಗಿ ಹೋಗಬೇಕು ಕೆರೆಕಟ್ಟೆಗಳು ತುಂಬಬೇಕು ಎಂಬ ಮಹತ್ವದ ಉದ್ದೇಶದಿಂದ ಕೆರೆಗಳಿಗೆ ಕಾಲುವೆಗಳನ್ನು ತೋಡಲಾಗಿರುತ್ತದೆ ಈ ಕಾಲುವೆಗಳು ನಾನ ಕಾರಣಗಳಿಂದ ಕಲ್ಲು ಮಣ್ಣು ಸೇರಿಯೋ ಹಾಗೂ ಜೊಂಡು ಬೆಳೆದುಕೊಂಡೋ ಹೂಳು ತುಂಬಿಕೊಂಡಿರುತ್ತವೆ.

ಹೀಗೆ ಹೂಳು ತುಂಬಿಕೊಂಡರೆ ಕೆರೆಯಲ್ಲೂ ಸರಿಯಾಗಿ ನೀರು ನಿಲ್ಲಲು ಸಾಧ್ಯವಿಲ್ಲ ಹಾಗೆಯೇ ಕಾಲುವೆಗಳಲ್ಲೂ ನೀರು ಸರಿಯಾಗಿ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಮಳೆಗಾಕದಲ್ಲಿ ನೀರು ಸರಿಯಾಗಿ ಹೋಗಬೇಕೆಂಬ ಉದ್ದೇಶದಿಂದ ಕಾಲುವೆಗಳ ಹೂಗಳನ್ನು ಸರ್ಕಾರದ ವತಿಯಿಂದ ತೆಗೆಸಲಾಗುತ್ತದೆ.

ಹುಣಸೂರು ಮತ್ತು ಹುಣಸೂರು ತಾಲೂಕಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಟೆಂಡರ್ ಕರೆದು ಹೂಳು ತೆಗೆಸುವ ಕಾರ್ಯವನ್ನು ಮಾಡಲಾಗಿದೆ.

ಆದರೆ ಈ ಹೂಳು ತೆಗೆಯುವ ಕಾರ್ಯ ಅದೆಷ್ಟು ಕಳಪೆಯಿಂದ ಕೂಡಿದೆ ಎನ್ನುವುದಕ್ಕೆ ಕೆಂಚನಕೆರೆಯಿಂದ ಉದ್ದೂರು ಕೆರವರೆಗೆ ತೆಗೆದಿರುವ ಕಾಲುವೆ ಹೂಳೆತ್ತುವ ಕಾರ್ಯ ಸ್ಪಷ್ಟ ಉದಾರಣೆಯಾಗಿದೆ.

ಕೆಂಚನಕೆರೆಯಿಂದ ಉದ್ದೂರು ಕೆರೆ ವರೆಗಿನ ಕಾಲುವೆಯಲ್ಲಿ ಹೂಳೆತ್ತಲಾಗಿದ್ದು ಅತ್ಯಂತ ಕಳಪೆ ಕಾಮಗಾರಿ ಮಾಡಿರುವುದು ಮೇಲ್ನೋಟಕ್ಕೆ ಯಾರೇ ನೋಡಿದರೂ ಗೊತ್ತಾಗುತ್ತದೆ.

ಕಾಲುವೆ ಉದ್ದಕ್ಕೂ ಜೊಂಡು ಒಳ್ಳೆ ಭತ್ತದ ಪೈರಿನಂತೆ ಬೆಳೆದು ನಿಂತಿದೆ. ಇದನ್ನೆಲ್ಲ ತೆಗೆದು ಕಾಲುವೆ ಸ್ವಚ್ಛಪಡಿಸಬೇಕಾದ್ದು ಟೆಂಡರ್ ಪಡೆದವರ ಜವಾಬ್ದಾರಿ. ಆದರೆ ಇಲ್ಲಿ ಕಾವೇರಿ ನೀರಾವರಿ ನಿಗಮದವರ ಸಿಬ್ಬಂದಿ ಹಾಗೂ ಅಧಿಕಾರಿಗಳು ಮತ್ತು ಯಾರು ಟೆಂಡರ್ ಪಡೆದಿದ್ದಾರೋ ಅವರು ಕಳಪೆ ಕಾಮಗಾರಿಯ ಜವಾಬ್ದಾರಿಯನ್ನು ಹೊರಬೇಕಿದೆ.

ಇದರಲ್ಲಿ ನೀರು ಹೋಗುವುದಿರಲಿ, ಮಳೆ ಬಂದರೆ ಮತ್ತೆ ಜುಂಡು ಆಳೆತ್ತರಕ್ಕೆ ಬೆಳೆದು ಯಾವುದಾದರೂ ಪ್ರಾಣಿಗಳು ಇದರಲ್ಲಿ ಸೇರಿದರು ಅಚ್ಚರಿ ಪಡಬೇಕಿಲ್ಲ.

ಆಕಸ್ಮಾತಾಗಿ ರೈತರು, ರೈತಪಿ ಮಕ್ಕಳು ಈ ಕಾಲುವೆ ಸಮೀಪ ಹೋಗಿ ಇದರಲ್ಲಿ ಬಿದ್ದರೂ ಹೇಳುವವರು ಗತಿ ಇಲ್ಲ. ಅಷ್ಟು ಕಳಪೆ ಮಟ್ಟದಲ್ಲಿದೆ ಈ ಕಾಲಯವೆ ಹೂಳು ತೆಗೆಯುವ ಕಾಮಗಾರಿ.ಜೊಂಡು ಅತಿಯಾಗಿ ಬೆಳೆದು ನಿಂತಿದೆ ಇದಕ್ಕೆ ಕಾವೇರಿ ನೀರಾವರಿ ನಿಗಮದವರು ಉತ್ತರಿಸಬೇಕಿದೆ.

ಸರ್ಕಾರದ ಹಣ ಈ ಮಟ್ಟದಲ್ಲಿ ಪೋಲಾಗುತ್ತಿದ್ದರೂ ಇದನ್ನು ಪ್ರಶ್ನಿಸುವ ಯಾವುದೇ ಜನಪ್ರತಿನಿಧಿಯು ಕಾಣಿಸುತ್ತಿಲ್ಲ.

ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸರಿಯಾದ ಕಾಮಗಾರಿ ಮಾಡಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕೆಂದೂ,ಕಳಪೆ ಕಾಮಗಾರಿ ಮಾಡಿ ಹಣ ಹೊಡೆದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ.

ಕೆಂಚನಕೆರೆಯಿಂದ ಉದ್ದೂರು ಕೆರೆವರೆಗೆ ಕಾಲುವೆ ಹೂಳು ತೆಗೆದಿರುವುದು ಒಂದು ಸಣ್ಣ ಉದಾಹರಣೆ. ಇಡೀ ಹುಣಸೂರಿನ ಕಾಲುವೆಗಳ ಕಥೆ ಹೀಗೆಯೇ ಇದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದರಲ್ಲಿ ಲಕ್ಷಾಂತರ ಹಣ ಪೋಲಾಗಿದೆ ಕೂಡಲೇ ಇದರ ಬಗ್ಗೆ ತನಿಖೆ ನಡೆಯಲೇಬೇಕಿದೆ.

ಕೆರೆ ಕಾಲುವೆ ಹೂಳು ತೆಗೆಯುವಲ್ಲಿ ಗೋಲ್ ಮಾಲ್;ಹುಣಸೂರಲ್ಲಿ ಲಕ್ಷಾಂತರ ಹಣ ಪೋಲು Read More

ನೇರಳಕುಪ್ಪೆ ಸ ಹಿ ಪ್ರಾ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಹುಣಸೂರು: ಹುಣಸೂರು ತಾಲೂಕು ನೇರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಈ ವರ್ಷ ಸುಮಾರು ಒಂದು ಸಾವಿರ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿ ವಿತರಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಏಳೂರು ಮಕ್ಕಳಿಗೆ ಇವುಗಳನ್ನು ವಿತರಿಸಲಾಗಿದೆ.

ಇಂದು ನೇರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಈ ಶಾಲೆಯ ಮುಖ್ಯ ಶಿಕ್ಷಕರಾದ ದೊಡ್ಡಸ್ವಾಮಿ ಅವರು ವಯೋನಿವೃತ್ತಿ ಹೊಂದಿದ್ದು ಅವರಿಗೆ ಚೆಲುವರಾಜು ಮತ್ತು ಶಾಲೆಯವರು ಬೀಳ್ಕೊಡುಗೆ ನೀಡಿ ಅಭಿನಂದಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರುಗಳಾದ ಗಂಗರಾಜು, ರೂಪ, ಲಿಖಿನ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಕುಮಾರಸ್ವಾಮಿ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಧರ್ಮರಾಜ್ ಮತ್ತು ನಂದಿನಿ ಅವರುಗಳು ಉಪಸಿತರಿದ್ದರು.

ನೇರಳಕುಪ್ಪೆ ಸ ಹಿ ಪ್ರಾ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ Read More

ಹುಣಸೂರಿನಿಂದ ಮೋರ್ ಸೂಪರ್ ಮಾರ್ಕೆಟ್ ಎತ್ತಂಗಡಿಗೆ ಕೆಪಿಪಿ ಆಗ್ರಹ

ಹುಣಸೂರು: ಹುಣಸೂರಿನ ನಗರಸಭೆ ಜಾಗದಲ್ಲಿ ಯಾರೊ ಖಾಸಗಿ ವ್ಯಕ್ತಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ಈ ಕಟ್ಟಡದಲ್ಲಿ ಇತ್ತೀಚೆಗೆ ಮೋರ್ ಸೂಪರ್ ಮಾರ್ಕೆಟ್ ತೆರೆದಿರುವುದರಿಂದ ಸ್ಥಳೀಯ ಸಣ್ಣ,ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.

ಮೋರ್ ಎಂಬ ಸೂಪರ್ ಮಾರ್ಕೆಟ್ ತೆರೆಯಲು ಸಂಬಂಧಪಟ್ಟ ಪ್ರಾಧಿಕಾರದಿಂದ ಲೈಸೆನ್ಸ್ ತೆಗೆದುಕೊಳ್ಳದೆ ಆಕ್ರಮವಾಗಿ ಪ್ರಾರಂಭ ಮಾಡಿದ್ದಾರೆ ಎಂದು‌ ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ) ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.

ಕೇವಲ ಒಂದು ಅರ್ಜಿ ಮುಖಾಂತರ ಅನುಮತಿ ಪಡೆದು ಈ ಸೂಪರ್ ಮಾರ್ಕೆಟ್ ತೆರೆಯಲಾಗಿದೆ,ಇಲ್ಲಿ ಕಟ್ಟಡ‌ ನಿರ್ಮಾಣ ಮಾಡಿರುವುದೇ ಅಕ್ರಮ. ವಾಣಿಜ್ಯ ಮಳಿಗೆಯಲ್ಲಿ ಈ ಅಕ್ರಮ ಕಟ್ಟಡಕ್ಕೆ ಸಂಬಂಧಪಟ್ಟಂತೆ ಹುಗಾನೂರಿನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಈ ಕಟ್ಟಡದ ಲೈಸೆನ್ಸ್ ಈಗಾಗಲೇ ರದ್ದುಪಡಿಸಲಾಗಿದ್ದರೂ ಮಳಿಗೆಯನ್ನು ತೆರೆದು ವ್ಯಾಪಾರ ವಹಿವಾಟು ಪ್ರಾರಂಭಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕಟ್ಟಡದ ತೀರ್ಮಾನವು ಇನ್ನು ಬಾಕಿ ಇದೆ ಆದ್ದರಿಂದ ನ್ಯಾಯಾಲಯದ ಆದೇಶ ಬರುವವರೆಗೂ ಈ ಕಟ್ಟಡದಲ್ಲಿ ಯಾವುದೇ ಮಳಿಗೆಯನ್ನು ತೆರೆಯಲು ಅನುಮತಿ ಕೊಡಬಾರದು ಹಾಗೂ ಮೋರ್ ಸೂಪರ್ ಮಾರ್ಕೆಟ್ ವ್ಯಾಪರವನ್ನು ಸ್ಥಗಿತಗೊಳಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಈ ಮಳಿಗೆಯನ್ನು ತೆರೆಯಲು ಅನುಮತಿ ಕೊಟ್ಟರುವ ಅಧಿಕಾರಿಗಳ ಮೇಲೆ ಹಾಗೂ ಮೋರ್ ಸೂಪರ್ ಮಾರ್ಕೆಟ್ ರದ್ದುಪಡಿಸಿ ಇದರ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ)ದ ಪರವಾಗಿ ತಾಲೂಕು ಅಧ್ಯಕ್ಷ ಚೆಲುವರಾಜು ಮೈಸೂರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಮೋರ್ ಒಂದು ಮಾಯಾಜಾಲ ಇದ್ದಂತೆ. ಜನರನ್ನು ಮರುಳು ಮಾಡುತ್ತಿದೆ.ಹೊರಗೆ ಬೇರೆ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ವಸ್ತುಗಳು,ದಿನಸಿ, ಮನೆಗೆ ಬೇಕಾದ ಸಾಮಾನುಗಳು ಸಿಗುತ್ತವೆ.ಆದರೆ ಮೋರ್ ನಲ್ಲಿ ಎಲ್ಲವೂ ದುಬಾರಿ.ಈ ಸೂಪರ್ ಮಾರ್ಕೆಟ್ ಇಲ್ಲೇ ಮುಂದುವರಿದರೆ ಗ್ರಾಮೀಣ ಭಾಗದ ಬಡ ರೈತರು ವ್ಯಾಪಾರಗಾರರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ.

ತಕ್ಷಣ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರಿಗಳು ಎಚ್ಚತ್ತುಕೊಂಡು ಮೋರ್ ಸೂಪರ್ ಮಾರ್ಕೆಟ್ ಓಡಿಸಬೇಕು ಎಂದು ಚಲುವರಾಜು ಆಗ್ರಹಿಸಿದ್ದಾರೆ.

ಹುಣಸೂರಿನಿಂದ ಮೋರ್ ಸೂಪರ್ ಮಾರ್ಕೆಟ್ ಎತ್ತಂಗಡಿಗೆ ಕೆಪಿಪಿ ಆಗ್ರಹ Read More

ಚಿಲಕುಂದ ಸ ‌ಹಿ ಪ್ರಾ ಶಾಲೆ‌ ಮಕ್ಕಳಿಗೆ ಕೆಪಿಪಿ ರೈತಪರ್ವ‌ ದಿಂದ ನೋಟ್ ಬುಕ್ ವಿತರಣೆ

ಹುಣಸೂರು: ಹುಣಸೂರು ತಾಲೂಕು ಚಿಲಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ನೋಟ್ ಬುಕ್, ಪೆನ್ಸಿಲ್ ಮತ್ತು ಪೆನ್ನುಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಅಧ್ಯಕ್ಷ ಶಿವಣ್ಣ ಮತ್ತು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಎಲ್ಲ ಪದಾಧಿಕಾರಿಗಳ ಸಹಮತದಲ್ಲಿ ಸರ್ಕಾರಿ ಶಾಲೆಗಳ ಸುಮಾರು ಸಾವಿರ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ಕೊಡುವ ಗುರಿಯನ್ನು ಹೊಂದಲಾಗಿದ್ದು ಈಗಾಗಲೇ 600 ವಿದ್ಯಾರ್ಥಿಗಳಿಗೆ ಇವುಗಳನ್ನು ನೀಡಲಾಗಿದೆ.

ಇಂದು ಚಿಲಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹುಣಸೂರು ತಾಲೂಕು ತಾಸಿಲ್ದಾರ್ ಮಂಜುನಾಥ್, ಬಿಇಒ ಮಹದೇವ್, ಹುಣಸೂರು ಡಿ ವೈ ಎಸ್ ಪಿ ಗೋಪಾಲಕೃಷ್ಣ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ, ನಗರಸಭೆ ಆಯುಕ್ತರಾದ ಮಾನಸ‌ ಪಾಲ್ಗೊಂಡಿದ್ದರು.

ಈ ವೇಳೆ ತಹಸಿಲ್ದಾರ್ ಮಂಜುನಾಥ್ ಅವರು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಕಾರ್ಯವನ್ನು ಶ್ಲಾಘಿಸಿದರು.

ಇದೇ ವೇಳೆ ಶಾಲೆಯ 115 ಮಕ್ಕಳಿಗೂ ಉಪ್ಪಿಟ್ಟು ಮತ್ತು ಕೇಸರಿ ಬಾತ್ ಅನ್ನು ಊಟಕ್ಕೆ ಬಡಿಸಲಾಯಿತು ಮಕ್ಕಳು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಕಾರ್ಯದರ್ಶಿ ಹಾಗೂ ವಕೀಲರಾದ ಮಂಜು, ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ರವಿ, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಚಿಲಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಮಾದೇವಿ ಜಿ, ಶಿಕ್ಷಕರುಗಳಾದ ಪುಷ್ಪಲತಾ, ಸುಶೀಲ, ನಜತ್ ಬಾನು, ಸಂತೋಷ್, ಹರೀಶ್ ಸೀರಿದಂತೆ ಅನೇಕರು ಹಾಜರಿದ್ದರು.

ಇದೇ ವೇಳೆ ಶಾಲೆಯ ಶಿಕ್ಷಕಿಯರು ಮತ್ತು ಎಲ್ಲಾ ಮಹಿಳೆಯರಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅವರು ಮಹಿಳಾ ದಿನಾಚರಣೆಯ ಶುಭ ಕೋರಿದರು.

ಚಿಲಕುಂದ ಸ ‌ಹಿ ಪ್ರಾ ಶಾಲೆ‌ ಮಕ್ಕಳಿಗೆ ಕೆಪಿಪಿ ರೈತಪರ್ವ‌ ದಿಂದ ನೋಟ್ ಬುಕ್ ವಿತರಣೆ Read More

ಹನಗೋಡಿನಲ್ಲಿ ಕೆಟ್ಟು ಕೆರ ಹಿಡಿದ ಶುದ್ಧ ಕುಡಿಯುವ ನೀರಿನ ಘಟಕಗಳು

ಹುಣಸೂರು: ಹುಣಸೂರು ತಾಲೂಕು ಹನುಗೋಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿ ಎರಡು ವರ್ಷಗಳಾಗಿದ್ದು ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ.

ಅದರಲ್ಲೂ ಹನಗೋಡು ಸರ್ಕಾರಿ ಆಸ್ಪತ್ರೆ ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳು ಪಕ್ಕದಲ್ಲೇ ಇದ್ದು ಇದಕ್ಕೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ.

ಆಸ್ಪತ್ರೆಗೆ ಬರುವ ರೋಗಿಗಳು, ಅವರ ಕಡೆಯವರು, ಗ್ರಾಮ ಪಂಚಾಯಿತಿಗೆ ಬರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಈ ಘಟಕ ಆಸರೆಯಾಗಿತ್ತು.

ಸುಮಾರು ಐದು ಆರು ಲಕ್ಷ ಖರ್ಚು ಮಾಡಿ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಲ್ಲಿ ಸ್ಥಾಪಿಸಲಾಗಿದೆ. ಆದರೆ ಸ್ಥಾಪನೆಯಾದ ಆರು ತಿಂಗಳಲ್ಲೇ ಇದು ಕೆಲಸ ನಿರ್ವಹಿಸುತ್ತಿಲ್ಲ, ಕೆಟ್ಟು ಹೋಯಿತು. ಆದರೆ ರಿಪೇರಿ ಮಾಡಬೇಕಾದವರು ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಪಿಡಿಒ ಗಳನ್ನು ಕೇಳಿದರೆ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಮಗೆ ನಿರ್ವಹಣೆ ಮಾಡಲು ಬಿಟ್ಟು ಕೊಟ್ಟಿಲ್ಲ ಎನ್ನುತ್ತಾರೆ,ಇಂಜಿನಿಯರ್ ಗಳನ್ನು ಕೇಳಿದರೆ ನಮಗೂ ಇದಕ್ಕೂ ಸಂಬಂಧವೇ ಎಂಬಂತೆ ಮಾತನಾಡುತ್ತಾರೆ ಎಂದು ಚಲುವರಾಜು ಹೇಳಿದ್ದಾರೆ.

ನೀರು‌ ಸರಬರಾಜು ಮಂಡಳಿಯವರು ಈ ಘಟಕಗಳನ್ನು ಸ್ಥಾಪಿಸಿದ ಮೇಲೆ ಅದನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಕೊಡಬೇಕಿತ್ತು, ಆದರೆ ಅವರು ಕೊಡಲಿಲ್ಲ ಇದರ ನಿರ್ವಹಣೆಯನ್ನೂ ಸರಿಯಾಗಿ ಮಾಡುತ್ತಿಲ್ಲ.

ಹನಗೋಡು ಹೋಬಳಿಯಲ್ಲಿ ಇನ್ನೂ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳು ಹೀಗೆಯೇ ಕೆಟ್ಟು ಹೋಗಿವೆ.ಅಷ್ಟೇ ಅಲ್ಲಾ ಹುಣಸೂರು ತಾಲೂಕಿನಲ್ಲಿ ಸುಮಾರು 40 ರಿಂದ 50 ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಆದರೆ ಯಾರೊಬ್ಬರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಚಲುವರಾಜು ಆರೋಪಿಸಿದ್ದಾರೆ.

ಒಂದು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಐದರಿಂದ ಆರು ಲಕ್ಷ ವೆಚ್ಚವಾದರೆ ಇಂತಹ ಎಷ್ಟೋ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರ್ಕಾರ ಸ್ಥಾಪಿಸಲು ಲಕ್ಷಾಂತರ ಹಣ ನೀಡಿರುತ್ತದೆ. ಆದರೆ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.ಅಲ್ಲದೆ ರಿಪೇರಿ ಮಾಡಲೂ ಹಣ ನೀಡಲಾಗಿರುತ್ತದೆ, ಸರ್ಕಾರಕ್ಕೆ ನಷ್ಟ ಉಂಟು ಮಾಡುವುದು ಬಿಲ್ ಬರೆಸಿ ತಮ್ಮ ಜೇಬಿಗೆ ಹಣ ಬಿಡುವುದು ಅಧಿಕಾರಿಗಳ ಕಾಯಕವಾಗಿಬಿಟ್ಟಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ನೋಡಿಕೊಳ್ಳುವವರು ಯಾರು? ನೀರು ಸರಬರಾಜ ಮಂಡಳಿಯವರ ಸುಪರ್ದಿಯಲ್ಲಿದ್ದರೆ ಇವುಗಳನ್ನು ಸರಿಪಡಿಸಿ ಸಂಬಂಧಪಟ್ಟ ಇಂಜಿನಿಯರ್ ಗಳು ಸರಿಯಾಗಿ ಕೆಲಸ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು,ಇಲ್ಲಾ ಪಂಚಾಯಿತಿ ಸುಪರ್ದಿಗೆ ಬಿಟ್ಟು ಕೊಡಬೇಕು ಅವುಗಳ ನಿರ್ವಹಣೆಯನ್ನೂ ಅವರಿಗೆ ಬಿಡಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಈ ಶುದ್ಧ ನೀರಿನ ಘಟಕಗಳನ್ನು ಕೆಲವು ಕಿಡಿಗೇಡಿಗಳು,ಕುಡುಕರು ಇನ್ನಷ್ಟು ಹಾಳು ಮಾಡಿದ್ದಾರೆ,ಕಸಕಡ್ಡಿ,ಬಾಟಲಿಗಳನ್ನು ಹಾಕಿ ಕಸದ‌ ತೊಟ್ಟಿಯಂತೆ ಮಾಡಿದ್ದಾರೆ ಇದರ ಬಗ್ಗೆಯೂ ಸಂಬಂದಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನಾದರೂ ಈ ಶುದ್ಧ ಕುಡಿಯುವ ನೀರಿನ ಘಟಕಗಳು ಜನರ ನೀರಿನ ದಾಹ ನೀಗಿಸುವಂತೆ ಸಂಬಂಧಪಟ್ಟವರು ಮಾಡುತ್ತಾರಾ ಕಾದು ನೋಡಬೇಕಿದೆ.

ಹನಗೋಡಿನಲ್ಲಿ ಕೆಟ್ಟು ಕೆರ ಹಿಡಿದ ಶುದ್ಧ ಕುಡಿಯುವ ನೀರಿನ ಘಟಕಗಳು Read More