ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಮಹತ್ವದ ವೇದಿಕೆ ಎನ್ಎಸ್ಎಸ್-ಸಿ.ಆರ್.ದಿನೇಶ್

ಹುಣಸೂರು: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಸಿ ಆರ್ ದಿನೇಶ್ ತಿಳಿಸಿದರು.

ತಟ್ಟೆಕೆರೆ ಗ್ರಾಮದಲ್ಲಿ ಅಯೋಜಿಸಲಾಗಿದ್ದ
ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ
ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ, ಪುಸ್ತಕದ ಜ್ಞಾನಕ್ಕಿಂತ ಹೊರತಾಗಿ ಸಮಾಜದ ನೈಜ ಸಮಸ್ಯೆಗಳನ್ನು ಅರಿಯಲು ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತವೆ ಎಂದು ಹೇಳಿದರು.

ಎನ್ಎಸ್ಎಸ್ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ, ಆರೋಗ್ಯ ತಪಾಸಣೆ ಶಿಬಿರಗಳು, ಮಹಿಳಾ ಸಬಲೀಕರಣ, ಮತದಾರರ ಜಾಗೃತಿ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ಡಿಜಿಟಲ್ ಸಾಕ್ಷರತೆ ಹಾಗೂ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವುದನ್ನು ದಿನೇಶ್ ಅವರು ಪ್ರಶಂಸಿಸಿದರು.

ಈ ಎಲ್ಲ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವಲ್ಲಿ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಹುಣಸೂರಿನ ತಹಸಿಲ್ದಾರರಾದ ಮಂಜುನಾಥ್ ಅವರು ಮಾತನಾಡಿ ಇಂದಿನ ಯುವ ಪೀಳಿಗೆ ರಾಷ್ಟ್ರದ ಭವಿಷ್ಯ ಎಂದು ತಿಳಿಸಿದರು.

ಸೇವೆಯ ಮೂಲಕ ಸ್ವಭಾವ ನಿರ್ಮಾಣವೇ ಎನ್ ಎಸ್ ಎಸ್ ಮೂಲ ತತ್ವ. ಸೇವೆಯ ಅನುಭವದಿಂದ ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ನಾಯಕತ್ವ ಮತ್ತು ಶಿಸ್ತು ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.

ಪ್ರತಿಯೊಬ್ಬ ಎನ್ಎಸ್ಎಸ್ ಸ್ವಯಂಸೇವಕರು ತಮ್ಮ ಜೀವನದಲ್ಲಿಯೂ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪತ್ರಕರ್ತ ಹನುಗೋಡು ನಟರಾಜ್ ಅವರು ಮಾತಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ. ಉನ್ನತ ಹುದ್ದೆ ಪಡೆದವರು ಅವರ ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರದಲ್ಲಿ ಭಾಗವಹಿಸಿದ ಪರಿಣಾಮವಾಗಿ ಅವರುಗಳು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕೊಡಗಿನ ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಐಎಎಸ್ ಅಧಿಕಾರಿ ಶ್ರೀವಿದ್ಯಾ ಇದಕ್ಕೆ ಉದಾಹರಣೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ರಾಮೇಗೌಡ ಅವರು ಅಧ್ಯಕ್ಷೀಯ ಭಾಷಣ ಮಾಡಿ ರಾಷ್ಟ್ರೀಯ ಸೇವಾ ಯೋಜನೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ತಟ್ಟೆಕೆರೆ ಶ್ರೀನಿವಾಸ್ ವಿದ್ಯಾರ್ಥಿನಿಯರು ನಮ್ಮ ಗ್ರಾಮಕ್ಕೆ ಆಗಮಿಸಿ ಬಹಳ ಅಚ್ಚುಕಟ್ಟಾಗಿ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ನಮ್ಮ ಗ್ರಾಮಸ್ಥರು ಎಲ್ಲಾ ರೀತಿಯಲ್ಲೂ ಅವರಿಗೆ ಸಹಕಾರ ನೀಡಿದ್ದಾರೆ. ಅದಕ್ಕಾಗಿ ಎಲ್ಲಾ ಗ್ರಾಮಸ್ಥರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದೇವರಾಜ್ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಸ್ವಯಂಸೇವಕರ ಶ್ರಮ, ತ್ಯಾಗ ಮತ್ತು ಸೇವಾಭಾವವನ್ನು ಸ್ಮರಿಸಿದರು.

ಸಮಾರಂಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಎನ್ಎಸ್ಎಸ್ ಸ್ವಯಂಸೇವಕರಿಗೆ ಹಾಗೂ ತಂಡಗಳಿಗೆ ಪ್ರಮಾಣಪತ್ರಗಳು ಮತ್ತು ಗೌರವ ಪತ್ರಗಳನ್ನು ವಿತರಿಸಲಾಯಿತು.

ಸುಶ್ಮಿತಾ ತಮ್ಮ ಶಿಬಿರ ಅನುಭವಗಳನ್ನು ಹಂಚಿಕೊಂಡು,ಎನ್ಎಸ್ಎಸ್ ಜೀವನದಲ್ಲಿ ತಂದಿರುವ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ನಟರಾಜು ,ಉಪನ್ಯಾಸಕರು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಮಹತ್ವದ ವೇದಿಕೆ ಎನ್ಎಸ್ಎಸ್-ಸಿ.ಆರ್.ದಿನೇಶ್ Read More

ರತ್ನಪುರಿ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಿಸಿದ ಕ ಪ್ರ ಪಾ ರೈತ ಪರ್ವ

ಹುಣಸೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ಹುಣಸೂರಿನ ರತ್ನಪುರಿ ಕಾಲೋನಿಯ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನಿಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಮುಖಂಡರು ರಾಜ್ಯದಲ್ಲೆಡೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು, ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಇಒ ಮಹದೇವ್, ಸರ್ಕಲ್ ಇನ್ಸ್ಪೆಕ್ಟರ್ ರವಿ, ನಗರಸಭಾ ಆಯುಕ್ತರಾದ ಮಾನಸ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮುರುಗ ಪಾಲ್ಗೊಂಡಿದ್ದರು.

ಕರ್ನಾಟಕ ಪ್ರಜಾ ಪಾರ್ಟಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ರವಿ ಅವರ ನೇತೃತ್ವದಲ್ಲಿ ನೋಟ್ ಬುಕ್ ಹಾಗೂ ಲೇಖನಿ ವಿತರಿಸಲಾಯಿತು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸಿಬ್ಬಂದಿ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು ಹಾಜರಿದ್ದರು.

ರತ್ನಪುರಿ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಿಸಿದ ಕ ಪ್ರ ಪಾ ರೈತ ಪರ್ವ Read More

ದೇವರಾಜ ಅರಸು ಸರ್ಕಾರಿ ಆಸ್ಪತ್ರೆ ಆವರಣ ಶುಚಿಗೊಳಿಸಿ:ಚೆಲುವರಾಜು ಆಗ್ರಹ

ಹುಣಸೂರು: ಹುಣಸೂರಿನ ಹೆಸರಾಂತ ಡಿ. ದೇವರಾಜ ಅರಸು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣವನ್ನು ಶುಚಿಗೊಳಿಸಿ ಕಸವಿಲೇವಾರಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು‌ ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಒತ್ತಾಯಿಸಿದ್ದಾರೆ.

ಹುಣಸೂರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗಿಡಗಂಟೆಗಳು ಬೆಳೆದು ಅಶುಚಿತ್ವದಿಂದ ಕೂಡಿದೆ. ಈ ಗಿಡಗಂಟಿಗಳ ಮಧ್ಯದಲ್ಲಿ ಹಾವುಗಳು ವಾಸಸ್ಥಾನ ಮಾಡಿಕೊಂಡು ಆಸ್ಪತ್ರೆಗೆ ಬರುವ ರೋಗಿಗಳು ಭಯದಿಂದ ಓಡಾಡುವಂತಾಗಿದೆ‌ ಎಂದು ಚೆಲುವರಾಜು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಆಸ್ಪತ್ರೆಯ ಸುತ್ತಾಮುತ್ತಲಿನ ಪ್ರದೇಶವನ್ನು ಶುಚಿಗೊಳಿಸದೇ ಇರುವುದರಿಂದ ಹೀಗೆ ಗಿಡಗಂಟಿಗಳು ಬೆಳೆದಿದೆ. ಆಸ್ಪತ್ರೆಯ ಡ್ರೈನ್‌ಗಳನ್ನು ಸಹ ಕ್ಲೀನ್ ಮಾಡಿಸುತ್ತಿರುವುದಾಗಿ ತಿಳಿದುಬಂದಿದೆ. ನಗರಸಭೆಯ ಗಮನಕ್ಕೆ ತಂದು ಆಸ್ಪತ್ರೆಯ ಆವರಣ ಶುಚಿಗೊಳಿಸಬೇಕಾಗಿತ್ತು. ಆದರೆ ಸಿಬ್ಬಂದಿಗಳಲ್ಲಿ ಈ ಕೆಲಸ ಮಾಡಿಸುತ್ತಿರುವುದು ಎಷ್ಟರ ಮಟ್ಟಿಗೆ.
ಸರಿ ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.

ಆಸ್ಪತ್ರೆಯ ಅವರಣವನ್ನು ಶುಚಿಗೊಳಿಸಲು ನಗರಸಭೆಯ ಹಿಟಾಚಿಯಿಂದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಗಿಡಗಂಟೆಗಳನ್ನು ತೆರವುಗೊಳಿಸಿ ಕಸ ವಿಲೇವಾರಿ ಮಾಡಿ ಸ್ವಚ್ಛತೆಗೊಳಿಸಲು ನಗರಸಭೆ ಆಯುಕ್ತರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ದೇವರಾಜ ಅರಸು ಸರ್ಕಾರಿ ಆಸ್ಪತ್ರೆ ಆವರಣ ಶುಚಿಗೊಳಿಸಿ:ಚೆಲುವರಾಜು ಆಗ್ರಹ Read More

ಹೊನ್ನಿಕುಪ್ಪೆಯಲ್ಲಿ ಜಾನಪದ ಮೆರಗು16 ದಿನ ಪೂಜಿಸಿದ ಕೊಂತಿಗುಡಿ ವಿಸರ್ಜನೆ

ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದಲ್ಲಿ ಊರಿನ ಹಿರಿಯರು ಹಿಂದಿನಿಂದ ನಡೆಸಿಕೊಂಡು ಬಂದ ಪದ್ದತಿಯನ್ನು ಈಗಲೂ ಮುಂದುವರಿಸುತ್ತಾ ಜಾನಪದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಇಟ್ಟಿಗೆ ಮತ್ತು ಮಣ್ಣಿನಿಂದ ಕೊಂತಿಗುಡಿ ನಿರ್ಮಿಸಿ ಕಳಶ ಇಟ್ಟು ಪೂಜೆ ಮಾಡಲಾಯಿತು. ಇದಕ್ಕೆ ತಿಂಗಳ ಮಾಮನ ಪೂಜೆ ಎಂದು ಕರೆಯಲಾಗುತ್ತದೆ.

ದೀಪಾವಳಿ ಹಬ್ಬ ಮುಗಿದ ತಕ್ಷಣ ಕೊಂತಿಗುಡಿ ಅಂದರೆ ತಿಂಗಳ ಮಾಮನ ಪೂಜೆಯನ್ನು ನೆರವೇರಿಸ್ತಾ 16 ದಿನಗಳ ಕಾಲ ತಿಂಗಳ ಮಾಮನ ಪೂಜೆಯನ್ನು ಮಾಡಲಾಯಿತು.

ಊರಿನ ಮುಖಂಡರಲ್ಲಿ ಒಬ್ಬರು ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷರೂ ಆದ ಚೆಲುವರಾಜು ಮತ್ತಿತರ ನಾಯಕರ ಮುಂದಾಳತ್ವದಲ್ಲಿ 15 ದಿನ ಪೂಜೆ‌ ನೆರವೇರಿಸಿ 16ನೆ ದಿನ ಅಂದರೆ ಇಂದು ಮುಂಜಾನೆ ಕೊಂತಿಗುಡಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಕೊಂತಿ ಗುಡಿ ಪ್ರತಿಷ್ಠಾಪನೆ ಮಾಡಿ ಶಿವನನ್ನು ಆರಾಧನೆ ಮಾಡುವುದು ವಿಶೇಷ. ಇದನ್ನು ಕಳೆದ 70 ವರ್ಷಗಳಿಂದ ಊರಿನ ಹಿರಿಯರು ಮುಂದುವರಿಸಿಕೊಂಡು ಬಂದಿದ್ದು ಈ ಮೂಲಕ ಜಾನಪದ ಕಲೆಯನ್ನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ.

ತಿಂಗಳ ಮಾಮನ ಆರಾಧನೆ ಪ್ರಾರಂಭವಾದ ಮೇಲೆ ಪ್ರತಿದಿನ ಸಂಜೆ ಊರಿನ ಪ್ರತಿಯೊಂದು ಮನೆಯವರು ತಮ್ಮ ಮನೆಯಿಂದ ದೀಪವನ್ನು ತಂದು ಇಲ್ಲಿ ಇಟ್ಟು ಹಚ್ಚಿ ಪೂಜೆ ಮಾಡಿ ಮಧ್ಯರಾತ್ರಿ 12 ಗಂಟೆವರೆಗೂ ಜಾನಪದ ಗೀತೆಗಳನ್ನು ಹಾಡುವುದು, ಭಜನೆ ಮಾಡುವುದು ಕೋಲಾಟ ಆಡುವುದು ಹೀಗೆ ಒಂದೊಂದು ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಜತೆಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳುವುದು,ಅಪಚಾರವಾಗದಂತೆ ಎಚ್ಚರಿಕೆಯಿಂದ ಇದ್ದು ಕೊಂತಿಗುಡಿಗೆ ನಿನ್ನೆವರೆಗೂ ಪೂಜೆ ನೆರವೇರಿಸಲಾಯಿತು.

ನಗರ ಪ್ರದೇಶದ ಜನರಿಗೆ ತಿಂಗಳ ಮಾಮನ ಪೂಜೆ ಕೊಂತಿಗುಡಿ ಇದು ಯಾವುದು ಗೊತ್ತಿಲ್ಲ. ಆದರೆ ಹೀಗೆ ಸಣ್ಣ ಪುಟ್ಟ ಗ್ರಾಮದವರು ಶಿವನ ಆರಾಧನೆಯನ್ನು ಈ ರೀತಿ ಆಚರಿಸುತ್ತಾ ಜಾನಪದ ಕಲೆಯನ್ನು ಬೆಳೆಸುತ್ತಾ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಮತ್ತು ಇದು ಮುಂದಿನ ಪೀಳಿಗೆಗೂ ಮುಂದುವರಿಯುವ ಅಗತ್ಯವಿದೆ.

ನಿನ್ನೆ ಮಧ್ಯರಾತ್ರಿವರೆಗೂ ಇಡೀ ಹೊನ್ನಿಕುಪ್ಪೆ ಜನ ತಿಂಗಳ ಮಾಮನ ಪೂಜೆ,ಜನಪದಗೀತೆ,ಕೋಲಾಟದಲ್ಲಿ ತೊಡಗಿದರು.

ಊರಿನ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿದ್ದ ಒಬ್ಬಟ್ಟು, ಪಾಯಸ, ಚಿರೋಟಿ ವಡೆ, ರವೆ ಉಂಡೆ ಹೀಗೆ ಅನೇಕ ಭಕ್ಷ ಭೋಜಗಳನ್ನು ತಂದು ಕೊಂತಿ ಗುಡಿಗೆ ನೈವೇದ್ಯ ಮಾಡಲಾಯಿತು.

ನಂತರ ಎಲ್ಲರೂ ಸೇರಿ ಆಹಾರ ಸಿದ್ಧಪಡಿಸಿ ಅನ್ನದಾನ ಕೂಡ ಮಾಡಲಾಯಿತು. ಕೊನೆಯಲ್ಲಿ ಕೊಂತಿ ಗುಡಿಯನ್ನು ಹುರುಳಿ ಮತ್ತು ಹುಚ್ಚೆಳ್ಳು ಬೆಳೆ ಬೆಳೆದ ಹೊಲದಲ್ಲಿ ತೆಗೆದುಕೊಂಡು ಹೋಗಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡುವ ಮೂಲಕ ತಿಂಗಳ ಮಾಮನ ಪೂಜೆ ಮುಕ್ತಾಯ ಹಾಡಿದರು.

ಕುಂತಿ ಗುಡಿಯನ್ನು ಹುರುಳಿ ಮತ್ತು ಹುಚ್ಚೆಳ್ಳು ಹೊಲದಲ್ಲಿಯೇ ವಿಸರ್ಜನೆ ಮಾಡಬೇಕೆಂಬ ಪದ್ಧತಿಯು ಇದೆ.

ಹೊನ್ನಿಕುಪ್ಪೆಯಲ್ಲಿ ಜಾನಪದ ಮೆರಗು16 ದಿನ ಪೂಜಿಸಿದ ಕೊಂತಿಗುಡಿ ವಿಸರ್ಜನೆ Read More

ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಮಾಸದ ಪೂಜೆ

ಹುಣಸೂರು: ಹುಣಸೂರು ತಾಲೂಕು,ಹೊನ್ನಿಕುಪ್ಪೆ ಗ್ರಾಮದ ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಶ್ರೀ ದೊಡ್ಡಮ್ಮ‌ತಾಯಿ ದೇವಾಲಯ ನಿರ್ಮಾಣಕ್ಕೆ ಅಂದಿನ ಮುಖ್ಯ ಮಂತ್ರಿಯಾಗಿದ್ದ ಡಿ.ದೇವರಾಜ ಅರಸರು ಕಾರಣಕರ್ತರು.

ಸುತ್ತಲಿನ ಹಳ್ಳಿಗಳ ಜನರು‌ ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವರಾಜ ಅರಸು ಅವರು ಜಾಗ ಕೊಟ್ಟು, ದೊಡ್ಡದಾದ ಬೆಳ್ಳಿಯ ಮುಖವಾಡವನ್ನು ಕೊಡುಗೆಯಾಗಿ ನೀಡಿದ್ದರು.

ಮತ್ತು ಲೋಹದ ಕುದುರೆ ಹಾಗೂ ಕತ್ತಿಯನ್ನು ಕೊಟ್ಟಿದ್ದರು.ಅಂದಿನಿಂದ ಇದೇ ಜಾಗದಲ್ಲಿ ಗುಡಿ ಕಟ್ಟಿ ದೊಡ್ಡಮ್ಮ ತಾಯಿ ಮತ್ತು ಸಿದ್ದಪ್ಪಾಜಿ ದೇವರನ್ನು ನಾವೆಲ್ಲ ಹಳ್ಳಿವರು ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿದ್ದೇವೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ‌ ಹುಣಸೂರು ತಾಲೂಕು ಅಧ್ಯಕ್ಷರೂ ಹೊನ್ನಿಕುಪ್ಪೆ ಗ್ರಾಮದವರೇ‌ ಆದ ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದರು

ನಿನ್ನೆ ರಾತ್ರಿ ದೊಡ್ಡಮ್ಮ ತಾಯಿ ಮತ್ತು ಸಿದ್ದಪ್ಪಾಜಿ‌ ದೇವರಿಗೆ ಕಾರ್ತೀಕ ಮಾಸದ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಾರ್ತೀಕ ಮಾಸದ ಪೂಜೆ Read More

ಹುಣಸೂರು ತಾಲೂಕು ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ

ಹುಣಸೂರು: ಹುಣಸೂರಿನ ತಾಲೂಕು ಕಚೇರಿಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು.

ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ್‌ ಅವರ ನೇತೃತ್ವದಲ್ಲಿ ನಡೆದ ಕನಕ ಜಯಂತಿ ಯಲ್ಲಿ ಎಲ್ಲ ಗಣ್ಯರು ದಾಸ ಶ್ರೇಷ್ಠರನ್ನು ಸ್ಮರಿಸಿದರು.

ನಗರಸಭಾ ಆಯುಕ್ತರಾದ ಮಾನಸ ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಕುರುಬ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ಸಮಾಜದ ಮುಖಂಡರು ಪಟ್ಟಣದ ನಾಗರೀಕರು ಪಾಲ್ಗೊಂಡಿದ್ದರು.

ಈ ವೇಳೆ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರ ಇಟ್ಟು ಪೂಜಿಸಿ ನಮನ ಸಲ್ಲಿಸಿದರು.

ಹುಣಸೂರು ತಾಲೂಕು ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ Read More

ಕಬ್ಬು ಬೆಳೆಗಾರರಿಗೆ ಹುಣಸೂರಿನಲ್ಲಿ ವಿವಿಧ ಸಂಘಟನೆಗಳ ಬೆಂಬಲ

ಹುಣಸೂರು: ಹುಣಸೂರು ತಾಲೂಕಿನಲ್ಲಿ ಕಬ್ಬು ಬೆಳೆಗಾರರಿಗೆ ಭಾರಿ ಬೆಂಬಲ ವ್ಯಕ್ತವಾಯಿತು.

ನಿನ್ನೆ ಅಂದರೆ ಶುಕ್ರವಾರ ಕರ್ನಾಟಕ ರೈತ ಸಂಘ ಪುಟ್ಟಣ್ಣಯ್ಯ ಬಣ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಸೇರಿದಂತೆ ತಾಲೂಕಿನ ಅನೇಕ ಸಂಘಟನೆಗಳು ಮತ್ತು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸರ್ಕಾರ ಪೂರ್ಣವಾಗಿ ಈಡೇರಿಸಬೇಕೆಂದು ಒತ್ತಾಯಿಸಿದರು.

ಹುಣಸೂರಿನಲ್ಲಿ ಹೆದ್ದಾರಿ ತಡೆದು ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ಕರ್ನಾಟಕ ರೈತ ಸಂಘ ಪುಟ್ಟಣ್ಣಯ್ಯ ಬಡದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ನೇತೃತ್ವದಲ್ಲಿ ನಡೆಯಿತು.

ಆನಂತರ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕಬ್ಬು ಬೆಳೆಗಾರರು ಇಟ್ಟಿರುವ ಬೇಡಿಕೆಯಂತೆ ಟನ್ ಕಬ್ಬಿಗೆ 3500 ರೂ ನೀಡುವಂತೆ ಒತ್ತಾಯಿಸಿದರು.

ಕಬ್ಬು ಬೆಳೆಗಾರರಿಗೆ ಹುಣಸೂರಿನಲ್ಲಿ ವಿವಿಧ ಸಂಘಟನೆಗಳ ಬೆಂಬಲ Read More

ಹರಕಪ್ಪ ದೇವಾಲಯದಲ್ಲಿ ಕಳವು: ಗೋಲಕ ಹೊತ್ತೊಯ್ದ ಕಳ್ಳರು

ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದ ಸಮೀಪ ಇರುವ ಹರಕಪ್ಪ ದೇವಸ್ಥಾನದಲ್ಲಿ ಮಧ್ಯರಾತ್ರಿ ಕಳ್ಳರು ಬೆಳ್ಳಿವಸ್ತುಗಳು ಮತ್ತು ಗೋಲಕದ ಹಣ ದೋಚಿದ್ದಾರೆ.

ದೇವಾಲಯದ ಮುಂದಿನ ಬಾಗಿಲಿನ ಗ್ರಿಲ್‌ಗಳನ್ನು ಮಿಷನ್ ನಿಂದ ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಬೆಳ್ಳಿ ತಟ್ಟೆ ದೀಪಾಲೆ ಕಂಬಗಳು ದೇವರಿಗೆ ಧರಿಸುವ ಬೆಳ್ಳಿ ಕಣ್ಣುಗಳು ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ.

ಈ ದೇವಾಲಯ ಸುಮಾರು 2 ಎಕರೆ ಜಾಗದಲ್ಲಿ ಇದ್ದು ಕಲ್ಯಾಣ ಮಂಟಪ ಕೂಡ ಇದೆ. ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿ ವಿವಾಹಗಳನ್ನು ಮಾಡುತ್ತಾರೆ.

ದೇವಾಲಯದಲ್ಲಿ ಸದಾ ಪೂಜೆ ನಡೆಯುತ್ತದೆ.
ಹಾಗಾಗಿ ಕಲ್ಯಾಣ ಮಂಟಪದಲ್ಲಿ ಗೋಲಕವನ್ನು ಇಟ್ಟಿದ್ದು ಸದಾ ತುಂಬಿರುತ್ತದೆ, ಹಾಗಾಗಿ ಲಕ್ಷಾಂತರ ಹಣ ಇದರಲ್ಲಿ ಇತ್ತು ಗೋಲಕವನ್ನೆ‌ ಹೊತ್ತೊಯ್ದಿರುವ ಕಳ್ಳರು, ಹಣ ತೆಗೆದುಕೊಂಡು ಗೋಲಕವನ್ನು‌ ಕಾಲುವೆಯಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.

ಹಿಂದೆ ಮೈಸೂರು ಮಹಾರಾಜರು ಬೇರೆ ಕಡೆ ಹೋಗಿ ವಾಪಸ್ ಬರುವಾಗ ಈ ದೇವಸ್ಥಾನ ಇರುವ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಇದ್ದು ವಿಶ್ರಾಂತಿ ಪಡೆದು ಬರುತ್ತಿದ್ದರಂತೆ ಹಾಗಾಗಿ ಮಹಾರಾಜರು ಈ ದೇವಸ್ಥಾನವನ್ನು ಕಟ್ಟಿಸಿ ಕೊಟ್ಟಿದ್ದಾರೆ ಎಂದು ಊರಿನ ಹಿರಿಯರು ಹೇಳುತ್ತಾರೆ.

ಯಾವುದಾದರೂ ಹರಕೆ ಹೊತ್ತರೆ ಈ ದೇವರು ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ ಅದಕ್ಕಾಗಿ ಈ ದೇವಾಲಯಕ್ಕೆ ಹರಕಪ್ಪ ದೇವಸ್ಥಾನ ಎಂದೆ ಹೆಸರು ಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಹುಣಸೂರು‌ ಗ್ರಾಮಾಂತರ ಪೊಲೀಸರು ಧಾವಿಸಿ ಪರಿಶೀಲಿಸಿ,ಮಹಜರು ನಡೆಸಿದರು.

ಇದೊಂದು ಪ್ರಸಿದ್ಧ ದೇವಾಲಯವಾಗಿದ್ದು‌ ದೇವಾಲಯಕ್ಕೆ ಭದ್ರತೆ ಒದಗಿಸಬೇಕು ಮತ್ತು ಕೂಡಲೇ ಕಳ್ಳರನ್ನು‌ ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ‌ಚೆಲುವರಾಜು ಮತ್ತು ಗ್ರಾಮಸ್ಥರು ‌ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಹರಕಪ್ಪ ದೇವಾಲಯದಲ್ಲಿ ಕಳವು: ಗೋಲಕ ಹೊತ್ತೊಯ್ದ ಕಳ್ಳರು Read More

ಹೊನ್ನಿಕುಪ್ಪೆ ಗ್ರಾಮದಲ್ಲಿ ಕೊಂತಿಗುಡಿ ಪ್ರತಿಷ್ಠಾಪನೆ- ಜನಪದ ಕಲೆ ಅನಾವರಣ

ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದಲ್ಲಿ ಊರಿನ ಹಿರಿಯರು ಹಿಂದಿನಿಂದ ನಡೆಸಿಕೊಂಡು ಬಂದ ಪದ್ದತಿಯನ್ನು ಈಗಿನವರು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷ.

ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಇಟ್ಟಿಗೆ ಮತ್ತು ಮಣ್ಣಿನಿಂದ ಕೊಂತಿಗುಡಿ ನಿರ್ಮಿಸಿ ಕಳಶ ಇಟ್ಟು ಪೂಜೆ ಮಾಡಲಾಗುತ್ತಿದೆ. ಇದಕ್ಕೆ ತಿಂಗಳ ಮಾಮನ ಪೂಜೆ ಎಂದು ಕರೆಯುವುದು ವಾಡಿಕೆ.

ದೀಪಾವಳಿ ಹಬ್ಬ ಮುಗಿದ ತಕ್ಷಣ ಕೊಂತಿಗುಡಿ ಅಂದರೆ ತಿಂಗಳ ಮಾಮನ ಪೂಜೆಯನ್ನು ನೆರವೇರಿಸ್ತಾ ಬರಲಾಗುತ್ತಿದೆ.

ಈ ಬಾರಿ 16 ದಿನಗಳ ಕಾಲ ತಿಂಗಳ ಮಾಮನ ಪೂಜೆಯನ್ನು ಮಾಡಬೇಕೆಂದು ಊರಿನವರು ನಿರ್ಧರಿಸಿದ್ದೇವೆ ಎಂದು ಊರಿನ ಮುಖಂಡರಲ್ಲಿ ಒಬ್ಬರು ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷರೂ ಆದ ಚೆಲುವರಾಜು ವರ್ಷಿಣಿ‌ ನ್ಯೂಸ್ ವೆಬ್ ಪೋರ್ಟಲ್ ‌ಗೆ ಮಾಹಿತಿ ನೀಡಿದ್ದಾರೆ.

ಐದು ದಿನ,ಎಂಟು ದಿನ 16 ದಿನ ಹೀಗೆ ಒಂದೊಂದು ಕಡೆ ಒಂದೊಂದು ರೀತಿ ಪೂಜೆ ಮಾಡಲಾಗುತ್ತದೆ. ಕೊನೆಯ ದಿನ ಕೊಂತಿಗುಡಿಯನ್ನು ವಿಸರ್ಜನೆ ಮಾಡುತ್ತಾರೆ.

ಕೊಂತಿ ಗುಡಿ ಪ್ರತಿಷ್ಠಾಪನೆ ಮಾಡಿ ಶಿವನನ್ನು ಆರಾಧನೆ ಮಾಡುವುದು ವಿಶೇಷ. ಇದನ್ನು ಕಳೆದ 70 ವರ್ಷಗಳಿಂದ ಊರಿನ ಹಿರಿಯರು ಮುಂದುವರಿಸಿಕೊಂಡು ಬಂದಿದ್ದು ಈ ಮೂಲಕ ಜಾನಪದ ಕಲೆಯನ್ನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ.

ಕೊಂತಿಗುಡಿ ಅಂದರೆ ತಿಂಗಳ ಮಾಮನ ಆರಾಧನೆ ಪ್ರಾರಂಭವಾದ ಮೇಲೆ ಪ್ರತಿದಿನ ಸಂಜೆ ಊರಿನ ಪ್ರತಿಯೊಂದು ಮನೆಯವರು ತಮ್ಮ ಮನೆಯಿಂದ ದೀಪವನ್ನು ತಂದು ಇಲ್ಲಿ ಇಟ್ಟು ಹಚ್ಚಿ ಪೂಜೆ ಮಾಡಿ ಮಧ್ಯರಾತ್ರಿ 12 ಗಂಟೆವರೆಗೂ ಜಾನಪದ ಗೀತೆಗಳನ್ನು ಹಾಡುವುದು, ಭಜನೆ ಮಾಡುವುದು ಕೋಲಾಟ ಆಡುವುದು ಹೀಗೆ ಒಂದೊಂದು ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬರುತ್ತಾರೆ.ಜತೆಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳುವುದು,ಅಪಚಾರವಾಗದಂತೆ ಎಚ್ಚರಿಕೆಯಿಂದ ಇರುವುದು ವಿಶೇಷ.

ಮನೆಗೆ ವಾಪಸು ಹೋಗುವಾಗ ತಾವು ತಂದ ದೀಪವನ್ನು ತೆಗೆದುಕೊಂಡು ಹೋಗುತ್ತಾರೆ.ಹೀಗೆ 16 ದಿನಗಳ‌ ಕಾಲವೂ ಮುಂದುವರಿಯುತ್ತದೆ.

ನಗರ ಪ್ರದೇಶದ ಜನರಿಗೆ ತಿಂಗಳ ಮಾಮನ ಪೂಜೆ ಕುಂತಿಗುಡಿ ಇದು ಯಾವುದು ಗೊತ್ತಿಲ್ಲ. ಆದರೆ ಹೀಗೆ ಸಣ್ಣ ಪುಟ್ಟ ಗ್ರಾಮದವರು ಶಿವನ ಆರಾಧನೆಯನ್ನು ಈ ರೀತಿ ಆಚರಿಸುತ್ತಾ ಜಾನಪದ ಕಲೆಯನ್ನು ಬೆಳೆಸುತ್ತಾ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಮತ್ತು ಇದು ಮುಂದಿನ ಪೀಳಿಗೆಗೂ ಮುಂದುವರಿಯುವ ಅಗತ್ಯವಿದೆ.

ಹೊನ್ನಿಕುಪ್ಪೆ ಗ್ರಾಮದಲ್ಲಿ ಕೊಂತಿಗುಡಿ ಪ್ರತಿಷ್ಠಾಪನೆ- ಜನಪದ ಕಲೆ ಅನಾವರಣ Read More

ಹುಣಸೂರಲ್ಲಿ ವಿವಿಧ‌ ಸಂಘಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಹುಣಸೂರು,ನವೆಂಬರ್.೧: ಹುಣಸೂರಿನ ಮಂಟಿ ವೃತ್ತದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ, ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಹಣ್ಣು ಹಂಪಲು ವಿತರಿಸಲಾಯಿತು, ಮಧ್ಯಾಹ್ನ ಅನ್ನದಾನ ಹಮ್ಮಿಕೊಳ್ಳಲಾಗಿತ್ತು.

ನಂತರ‌ ಸಂಗೀತ ರಸಸಂಜೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರನ್ನು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮೂರೂ ಸಂಘಗಳ ಅಧ್ಯಕ್ಷರು,ಪದಾಧಿಕಾರಿಗಳು‌ ಹಾಗೂ ಕನ್ನಡಾಭಿಮಾನಿಗಳು‌ ಹಾಜರಿದ್ದರು.

ಹುಣಸೂರಲ್ಲಿ ವಿವಿಧ‌ ಸಂಘಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ Read More