ಸಿ.ಟಿ ರವಿ ಪ್ರಕರಣ ಸಿಐಡಿಗೆ: ಪರಮೇಶ್ವರ್ಸ್ಪಷ್ಟ ನುಡಿ

ಹುಬ್ಬಳ್ಳಿ: ಸಿಟಿ ರವಿ ಕೆಟ್ಟ‌ ಪದ ಬಳಸಿಲ್ಲ ಎನ್ನುತ್ತಾರೆ. ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಎಂದು ಹೇಳುತ್ತಾರೆ ಸತ್ಯ ತಿಳಿಯಲು ತನಿಖೆ ಆಗಲೆಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಪ್ರಕರಣದ ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದರು.

ಸಿ.ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ಪೀಕರ್ ತಮ್ಮ ಕೆಲಸ ತಾವು ಮಾಡುತ್ತಾರೆ. ಪೊಲೀಸರು ಅವರ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು, ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ ಎಂದು ತಿಳಿಸಿದರು.

ಸಿಟಿ ರವಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಕೆಲವೊಂದು ಕಾರಣಕ್ಕೆ ವಿಳಂಬವಾಗಿರಬಹುದು. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಅದನ್ನು ಪಾಲನೆ ಮಾಡಲ್ಲ, ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಜಿ.ಪರಮೇಶ್ವರ್ ಅಸಮರ್ಥ ಗೃಹ ಸಚಿವ ಎಂಬ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಂ, ಪ್ರಹ್ಲಾದ್ ಜೋಶಿ ಅಸಮರ್ಥ ಕೇಂದ್ರ ಸಚಿವ ಎಂದರೆ ಒಪ್ಪುತ್ತಾರಾ, ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ, ಅದಕ್ಕೆ ಅವರು ಹಾಗೆ ಹೇಳಿದ್ದಾರೆ ಎಂದು ಪರಮೇಶ್ವರ್ ತಿರುಗೇಟು ನೀಡಿದರು.

ಸಿ.ಟಿ ರವಿ ಪ್ರಕರಣ ಸಿಐಡಿಗೆ: ಪರಮೇಶ್ವರ್ಸ್ಪಷ್ಟ ನುಡಿ Read More

ಸಿಎಂ 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ:ಬಿ.ಆರ್.ಪಾಟೀಲ್

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಸಿಎಂ ಆಪ್ತ ಸಲಹೆಗಾರ ಬಿ.ಆರ್.ಪಾಟೀಲ್ ಮಾರ್ಮಿಕವಾಗಿ ನುಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರುವರೊ ಇಲ್ಲವೊ ಗೊತ್ತಿಲ್ಲ, ಅವರು ಐದು ವರ್ಷ ಇರಬೇಕು ಅಂತಾ ನಾವು ಬಯಸುತ್ತೇವೆ,ಆದರೆ ಆಹೈಕಮಾಂಡ್ ಏನು ನಿರ್ಧಾರ ಮಾಡುತ್ತೊ ಗೊತ್ತಿಲ್ಲ, ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೆ ನಾವು ಏನೂ ಮಾಡಲು ಆಗಲಾರದು, ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತಾ ಯಾವ ಶಾಸಕರ ಮನಸ್ಸಿನಲ್ಲೂ ಇಲ್ಲ ಎಂದು ತಿಳಿಸಿದರು.

ದೊಡ್ಡ ಕನಸನ್ನು ಕಂಡು ಬಡವರ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ಭೌತಿಕ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿಯಿಂದ ಆರ್ಥಿಕ ಹೊರೆ ಆಗದಂತೆ ಹೊಸ ಆರ್ಥಿಕ ನೀತಿಯನ್ನು ಸಿಎಂ ನೀಡುತ್ತಾರೆ ಎಂದು ಬಿ.ಆರ್.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಒಂದಾಗಿ ವಕ್ಫ್ ಬೋರ್ಡ್ ಬಗ್ಗೆ ಜನಜಾಗೃತಿ ಮಾಡಲಿ, ಅವರಲ್ಲಿಯೇ ಒಡಕಿದೆ. ನಮ್ಮನ್ನೇನು ನೋಡ್ತಾರೆ. ಇನ್ನೂ ಎಷ್ಟು ಬಣ ಇದ್ದಾವೊ ಗೊತ್ತಿಲ್ಲ. ಯರ‍್ಯಾರು ದೆಹಲಿಯಲ್ಲಿ ಕುಳಿತು ಯರ‍್ಯಾರಿಗೆ ಆಪರೇಟಿಂಗ್ ಮಾಡತ್ತಿದ್ದಾರೋ. ಯಾರ‍್ಯಾರ ಕೈಚಳಕ ಎಲ್ಲೆಲ್ಲಿದೆಯೋ ಗೊತ್ತಿಲ್ಲ. ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಿದರು. ಇವರೆಲ್ಲಾ ಯಾವ ಲೆಕ್ಕ ಎಂದು ಪಾಟೀಲ್ ಮಾರ್ಮಿಕವಾಗಿ ನುಡಿದರು.

ಸಿಎಂ 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ:ಬಿ.ಆರ್.ಪಾಟೀಲ್ Read More

ಸುಳ್ಳು ಹೇಳೋದು ಪ್ರಧಾನಿ ಸ್ಥಾನಕ್ಕೆ ಅವಮಾನ:ಸಿದ್ದರಾಮಯ್ಯ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳೋದು ಹೊಸ ವಿಷಯ ಏನಲ್ಲ. ಆದರೆ ಈ ಮಟ್ಟದ ಸುಳ್ಳು ಹೇಳೋದು ಪ್ರಧಾನಿ ಸ್ಥಾನಕ್ಕೆ ದೊಡ್ಡ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಅಬಕಾರಿ ಇಲಾಖೆಯಲ್ಲಿ 700 ಕೋಟಿ ಎಲ್ಲಿರತ್ತೆ. ಯಾರು ಕೊಡುತ್ತಾರೆ, ಪ್ರಧಾನಿ ಆದವರಿಗೆ ಈ ಮಟ್ಟದ ತಿಳಿವಳಿಕೆ ಕೊರತೆ ಇರಬಾರದು ಎಂದು ಮೂದಲಿಸಿದರು.

ಕರ್ನಾಟಕದಲ್ಲಿ ಅಬಕಾರಿ ಇಲಾಖೆಯ 700 ಕೋಟಿ ಹಣ ತಂದು ಮಹರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸುತ್ತಿದೆ ಎಂಬುದಾಗಿ ಪ್ರಧಾನಿಯವರು ಹೇಳಿದ್ದಾರಲ್ಲಾ ಎಂಬ ವರದಿಗಾರರ ಪ್ರಶ್ನೆಗೆ ಸಿಎಂ ಮೇಲಿನಂತೆ ಉತ್ತರಿಸಿದರು.

ಕುನ್ಹಾ ಆಯೋಗದ ವರದಿಯ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಆಯೋಗದ ವರದಿ ಹೇಗೆ ಗೊಡ್ಡು ಬೆದರಿಕೆ ಆಗುತ್ತದೆ ಜನರ ಹಣ ಲೂಟಿ ಹೊಡೆದು ಆಮೇಲೆ ಗೊಡ್ಡು ಬೆದರಿಕೆ ಅಂದರೆ ಹೇಗೆ ಎಂದು ಸಿಎಂ ಮರು ಪ್ರಶ್ನಿಸಿದರು.

30 ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತಮ್ಮ ಕೊಲೆಗೆ ಯತ್ನ ನಡೆದಿತ್ತು ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಆಗ ಏಕೆ ಯಡಿಯೂರಪ್ಪ ದೂರು ಕೊಡಲಿಲ್ಲ, ಕೇಸು ಹಾಕಿಸಲಿಲ್ಲ ಎಂದು ಕೇಳಿದರು ಸಿದ್ದರಾಮಯ್ಯ.

ಮುಡಾ ಪ್ರಕರಣದಲ್ಲಿ ಸ್ಟಾಂಪ್ ಡ್ಯೂಟಿಯನ್ನು ತಹಶೀಲ್ದಾರ್ ಕಟ್ಟಿದ್ದಾರೆ ಎಂಬ‌ ವಿಷಯ ಹರಿದಾಡುತ್ತಿದೆಯಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಇದು ಹೊಸ ಸುಳ್ಳು, ತಹಶೀಲ್ದಾರ್ ಚೆಕ್ ನಲ್ಲಿ ಕೊಟ್ಟಿದ್ದಾರಂತಾ, ಯಾರು ಇಂಥಾ ಸುಳ್ಳುಗಳನ್ನು ಸೃಷ್ಟಿಸೋದು ಎಂದು ಸಿಎಂ ಗರಂ ಆಗಿ ಪ್ರಶ್ನಿಸಿದರು.

ಸುಳ್ಳು ಹೇಳೋದು ಪ್ರಧಾನಿ ಸ್ಥಾನಕ್ಕೆ ಅವಮಾನ:ಸಿದ್ದರಾಮಯ್ಯ Read More

ಯಾವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ರಾಜಕೀಯ ಉದ್ದೇಶದಿಂದ ಜೆಪಿಸಿ ಭೇಟಿ; ಡಿ.ಕೆ ಶಿ

ಹುಬ್ಬಳ್ಳಿ: ವಕ್ಫ್ ವಿವಾದ ಬಿಜೆಪಿ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜ್ಯದ ಆಸ್ತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವಕ್ಫ್ ಆಸ್ತಿ ವಿಚಾರವಾಗಿ ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ 2019ರಿಂದ ಮೊದಲು ನೋಟೀಸ್ ಕೊಟ್ಟಿದ್ದು ಬಿಜೆಪಿ,ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಾವು ಆಗಿರುವ ತಪ್ಪುಗಳನ್ನು ಸರಿಪಡಿಸಿ ರೈತರನ್ನು ರಕ್ಷಣೆ ಮಾಡುತ್ತೇವೆ. ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಜೆಪಿಸಿ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಭೇಟಿ ನೀಡುತ್ತಿದ್ದಾರೆ. ಈ ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು

ಯಾವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ರಾಜಕೀಯ ಉದ್ದೇಶದಿಂದ ಜೆಪಿಸಿ ಭೇಟಿ; ಡಿ.ಕೆ ಶಿ Read More

ಭಾರತದಲ್ಲಿ ವಕ್ಫ್ ಕಾನೂನು ತೆಗೆಯುವುದು ಸೂಕ್ತ: ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಭಾರತದಲ್ಲಿ ವಕ್ಫ್ ಕಾನೂನು ತಪ್ಪಾಗಿದೆ,ಇದನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಸೂಕ್ತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರೂ ಕಾಲದಲ್ಲಿ ಕಾಂಗ್ರೆಸ್ ಏಕೆ ವಕ್ಫ್ ಕಾನೂನನ್ನು ಜಾರಿಗೊಳಿಸಿತೊ ಗೊತ್ತಿಲ್ಲ, ದೇಶದ ಯಾವ ವಿಭಾಗಗಳಿಗೂ ಇರದ ಅಧಿಕಾರವನ್ನು 2013ರಲ್ಲಿ ವಕ್ಫ್‌ ಮಂಡಳಿಗೆ ನೀಡಲಾಗಿದೆ ಎಂದು ಕಿಡಿಕಾರಿದರು.

ವಕ್ಫ್‌ ಆಸ್ತಿ ನೋಟಿಸ್‌ ಹಿಂದೆ ಕಾಂಗ್ರೆಸ್‌ ಸರ್ಕಾರ ಮತ್ತು ಸಚಿವ ಜಮೀರ್‌ ಅಹಮದ್‌ ಖಾನ್‌ ಕುಮ್ಮಕ್ಕಿದೆ. ವಕ್ಫ್‌ ಆಸ್ತಿ ಎಂದು ರೈತರಿಗೆ ನೋಟಿಸ್‌ ನೀಡಿದ ತಹಶೀಲ್ದಾರ್ ಅಮಾನತಿಗೆ ವಿಜಯಪುರ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಮತ್ತು ಪ್ರಕರಣ ದಾಖಲಿಸಬೇಕು ಎಂದು ಜೋಶಿ ಆಗ್ರಹಿಸಿದರು.

ಭವಿಷ್ಯದಲ್ಲಿ ವಕ್ಫ್ ಬೋರ್ಡ್ ನಮ್ಮ ಮನೆಗಳು ಮತ್ತು ಜಮೀನಿನ ಮಾಲೀಕತ್ವವನ್ನು ಪಡೆದರೆ ಆಶ್ಚರ್ಯವಿಲ್ಲ. ವಕ್ಫ್ ಬೋರ್ಡ್‌ಗಳಿಗೆ ಅನಿಯಮಿತ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಇದು ಯಾವುದೇ ರೂಪದಲ್ಲಿ ಸ್ವೀಕಾರಾರ್ಹವಲ್ಲ. ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಕಾಂಗ್ರೆಸ್ ರೈತರ ಆಸ್ತಿಗಳು, ದೇವಸ್ಥಾನಗಳು, ಮಠಗಳು ಮತ್ತು ಬಡ ಮುಸ್ಲಿಮರ ಭೂಮಿಯನ್ನು ವಕ್ಫ್ ಮಂಡಳಿ ವಶಪಡಿಸಿಕೊಳ್ಳಲು ಬೆಂಬಲಿಸಿದೆ ಎಂದು ಪ್ರಹ್ಲಾದ ಜೋಶಿ ಆರೋಪಿಸಿದರು.

ಭಾರತದಲ್ಲಿ ವಕ್ಫ್ ಕಾನೂನು ತೆಗೆಯುವುದು ಸೂಕ್ತ: ಪ್ರಹ್ಲಾದ ಜೋಶಿ Read More

ಸಿ.ಪಿ.ವೈ ರಾಜೀನಾಮೆ:ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಸ್ಪರ್ಧೆ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ‌ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ಸಲ್ಲಿಸಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ‌ ಹೊರಟ್ಟಿ ಅವರು ಹುಬ್ಬಳ್ಳಿಯಲ್ಲಿ ಇದ್ದುದರಿಂದ ಸಿಪಿವೈ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಬೆಳಿಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಕಷ್ಟ ಆಗಲಿದೆ ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ, ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ಹೇಳಿದರು.

ನಾನು ಕುಮಾರಸ್ವಾಮಿ ಅವರೊಂದಿಗೆ ಮೂರು ದಿನಗಳಿಂದ ಚರ್ಚೆ ಮಾಡಿದ್ದೇನೆ ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ. ಆದರೆ ಅವರು ಆಗಲ್ಲ ಅಂತಿದ್ದಾರೆ ನೋಡೋಣ ಎಂದರು.

ಕುಮಾರಸ್ವಾಮಿಯವರ ಮನಸ್ಸಿನಲ್ಲಿ ಅವರ ಮಗನಿಗೆ ಅಥವಾ ತಮ್ಮ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎಂಬ ಆಸೆ ಇದೆ. ಅವರ ಮನಸಲ್ಲೇ ಆ ತರಹ ಇದ್ದರೆ ನಾನು ಏನು ಮಾಡೋದಕ್ಕಾಗುತ್ತೆ ಎಂದು ಪ್ರಶ್ನಿಸಿದರು ಸಿಪಿವೈ.

ಜೆಡಿಎಸ್ ಚಿನ್ಹೆಯಲ್ಲಿ ನಿಲ್ಲಿ ಎಂದು ಅವರು ಮುಕ್ತವಾಗೇನೂ ಹೇಳಿಲ್ಲ, ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದರು ಅಷ್ಟೇ. ನಾನು ನನ್ನ ತಾಲೂಕಿನ ಜನರ ಜೊತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ,ಬಹಳ ಭಿನ್ನಾಭಿಪ್ರಾಯ ಬಂದಿದೆ ಎಂದು ತಿಳಿಸಿದರು.

ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್‌ಗೆ ಹೋಗುವುದು ಬೇಡ ಅಂತ ತಾಲೂಕಿನಲ್ಲಿ ಅಭಿಪ್ರಾಯ ಬಂದಿದೆ. ಮೊದಲೇ ನನಗೆ ಪಕ್ಷಾಂತರಿ ಎಂದು ಕರೆಯುತ್ತಾರೆ. ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಎಂದು ಹೇಳುತ್ತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂದು ಯೋಗೇಶ್ವರ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದಾರೆಂಬ ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯುಸಿ, ನನ್ನ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಟಿಕೆಟ್ ಕೊಡದಿದ್ದರೆ ನಿಮ್ಮ ಮಗನಿಗೇ ಕೊಡಿ. ಆದರೆ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದೆ ಎಂದು ಹೇಳಬೇಡಿ, ನಾನು ಇಲ್ಲಿಯವರೆಗೆ ಕಾಂಗ್ರೆಸ್‌ನ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ.ಆದರೆ ಭೇಟಿ ಮಾಡಿದರೆ ತಪ್ಪೇನಿಲ್ಲ ಭೇಟಿ ಮಾಡಬೇಕೆನಿಸಿದರೆ ಭೇಟಿ ಆಗುತ್ತೇನೆ. ಮುಚ್ಚುಮರೆ ಮಾಡಲ್ಲ. ಆದರೆ ಈವರೆಗೆ ಯಾರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಈ ಸಂದರ್ಭದಲ್ಲಿ ಯಡಿಯೂರಪ್ಪನವರು ಅಂತಹ ಹೇಳಿಕೆ ಕೊಡುವ ಅಗತ್ಯವಿರಲಿಲ್ಲ, ಆದರೆ ಕುಮಾರಸ್ವಾಮಿ ಅವರಿಗೆ ದೊಡ್ಡ ಮನಸು ಇದ್ದಿದ್ದರೆ ಅನುಕೂಲ ಆಗುತ್ತಿತ್ತು ಎಂದು ಹೇಳಿದರು.

ಇನ್ನೂ ಎರಡು ದಿನ ಕಾದು ನೋಡುತ್ತೇನೆ, ನಾನು ಈ ಕ್ಷಣಕ್ಕೂ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ,ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ನಮ್ಮ ಜಿಲ್ಲಾಧ್ಯಕ್ಷರು ಹೇಳಿದ್ದಾರೆ, ಒಳ್ಳೇದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಯೋಗೇಶ್ವರ್ ತಿಳಿಸಿದ್ದರು.

ಇದೀಗ ಯೋಗೇಶ್ವರ್ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ, ಚನ್ನಪಟ್ಟಣ ಟಿಕೆಟ್ ಬಗ್ಗೆ ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.

ಸಿ.ಪಿ.ವೈ ರಾಜೀನಾಮೆ:ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಸ್ಪರ್ಧೆ Read More