ಅಲ್ ಫಲಾಹ್ ವಿವಿ, ಕ್ಯಾಂಪಸ್ ಮೇಲೆ ಪೊಲೀಸರ ಹದ್ದಿನ ಕಣ್ಣು
ಫರಿದಾಬಾದ್(ಹರಿಯಾಣ): ಕೆಂಪು ಕೋಟೆ ಬಳಿ ನಡೆದ ಕಾರು ಸ್ಪೋಟಕ್ಕೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಹರಿಯಾಣದ ಫರಿದಾಬಾದ್ ಜಿಲ್ಲೆಯ ಮುಸ್ಲಿಂ ಪ್ರಾಬಲ್ಯದ ಧೌಜ್ ಗ್ರಾಮದಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯ ಮತ್ತು ಅದರ 76 ಎಕರೆ ಕ್ಯಾಂಪಸ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಇಲ್ಲಿನ ಬೋಧಕ ಸಿಬ್ಬಂದಿ ಪಾಕಿಸ್ತಾನ ಬೆಂಬಲಿತ ಹ್ಯಾಂಡ್ಲರ್ಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದ್ದು, ತನಿಖೆ ಚುರುಕುಗೊಂಡಿದೆ.
ಅನೇಕ ಶಿಕ್ಷಣ ತಜ್ಞರ ಪ್ರಕಾರ, ಆರಂಭಿಕ ವರ್ಷದಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯ ಆಲಿಘರ್ ಮುಸ್ಲಿಂ ಯುನಿವರ್ಸಿಟಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾಗಳಿಗೆ ಅತ್ಯುತ್ತಮ ಪರ್ಯಾಯ ವಿಶ್ವವಿದ್ಯಾಲಯವಾಗಿತ್ತು.
ಈ ವಿಶ್ವವಿದ್ಯಾಲಯ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ 30 ಕಿ.ಮೀ ದೂರದಲ್ಲಿದ್ದು, ಇದರ ನಿರ್ವಹಣೆಯನ್ನು 1995ರಲ್ಲಿ ಸ್ಥಾಪಿಸಲಾದ ಅಲ್ ಫಲಾಹ್ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದೆ.
ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಮೂರು ಕಾಲೇಜುಗಳಿವೆ. ಅಲ್ ಫಲಾಹ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಬ್ರೌನ್ ಹಿಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮತ್ತು ಅಲ್ ಫಲಾಹ್ ಸ್ಕೂಲ್ ಆಫ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್ ಇಲ್ಲಿದೆ. ವಿಶ್ವವಿದ್ಯಾನಿಲಯವು 650 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯನ್ನೂ ಹೊಂದಿದ್ದು, ರೋಗಿಗಳಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ತನಿಖಾಧಿಕಾರಿಗಳು ವಿಶ್ವವಿದ್ಯಾಲಯದಲ್ಲಿ ತೀವ್ರ ತಪಾಸಣೆ ನಡೆಸಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿದ್ದ ಡಾ.ಮುಜಮ್ಮಿಲ್ ಸೇರಿದಂತೆ ಹಲವು ವೈದ್ಯರನ್ನು ಬಂಧಿಸಲಾಗಿದೆ. ಮಂಗಳವಾರ ಇಲ್ಲಿ ಧರ್ಮ ಬೋಧನೆ ಮಾಡುತ್ತಿದ್ದ ಮೌಲ್ವಿಯನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಅಲ್ ಫಲಾಹ್ ವಿವಿ, ಕ್ಯಾಂಪಸ್ ಮೇಲೆ ಪೊಲೀಸರ ಹದ್ದಿನ ಕಣ್ಣು Read More