ಮೈಸೂರಿನಲ್ಲಿ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಸ್ಥಾಪನೆ: ಪರಮೇಶ್ವರ್
ಮೈಸೂರು: ಮೈಸೂರಿನಲ್ಲಿ ಸುಸಜ್ಜಿತವಾದ ಕರ್ನಾಟಕ ಪೊಲೀಸ್ ವಸ್ತು ಸಂಗ್ರಹಾಲಯ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ಮೈಸೂರು ಜಿಲ್ಲಾ ಪ್ರವಾಸದ ವೇಳೆ ಕೆಎಸ್‌ಆರ್‌ಪಿ ಆಶ್ವಾರೋಹಿ ದಳ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು.
ನಂತರ ಆರಕ್ಷಕ ಅಶ್ವದಳದ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು.ಇದೇ ವೇಳೆ ನಜರ್‌ಬಾದ್ ಪೊಲೀಸ್ ಠಾಣೆಗೆ ದೀಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆರಂಭದಿಂದ ಇಲ್ಲಿಯವರೆಗೆ ಬೆಳೆದುಬಂದ ರೀತಿ ಹಾಗೂ ಇಲಾಖೆಗೆ ಸಂಬಂಧಿಸಿದ ನೆನಪಿನಲ್ಲಿ ಉಳಿಯುವಂತಹ ವಸ್ತುಗಳನ್ನು ಕಾಪಾಡಬೇಕಿದೆ,ಹಾಗಾಗಿ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಮಾಡಲಾಗುವುದು ಎಂದು ತಿಳಿಸಿದರು.
ನಜರ್‌ಬಾದ್ ಪೊಲೀಸ್ ಠಾಣೆ ಮೈಸೂರಿನಲ್ಲಿ ಅತ್ಯಂತ ಹಳೆಯ ಪೊಲೀಸ್ ಠಾಣೆ. ಬಹಳ ದಿನದಿಂದ ಭೇಟಿ ನೀಡಬೇಕು ಎಂದುಕೊಂಡಿದೆ. ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ಪರಿಶೀಲಿಸಲು ದಿಢೀರ್ ಭೇಟಿ ನೀಡಿದ್ದೇನೆ ಎಂದು ಹೇಳಿದರು.
ರೆಕಾರ್ಡ್, ಸಶಸ್ತ್ರಗಳನ್ನು ಇಟ್ಟುಕೊಳ್ಳುವುದು ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಿದ್ದೇನೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದೇನೆ. ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ನಾಲ್ಕೈದು ಜನರಿಗೆ ಖುದ್ದು ಕರೆ ಮಾಡಿ ವಿಚಾರಿಸಿದ್ದೇನೆ ಎಂದು ಹೇಳಿದರು.
ನಜರ್‌ಬಾದ್ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
ಪೊಲೀಸ್ ಕಮಿಷನರ್ ಕಚೇರಿಯಲ್ಲೂ ಪರಿಶೀಲನೆ ನಡೆಸಿದ್ದೇನೆ. ಹೆಚ್ಚಿನಂಶ ಸೈಬರ್ ವಂಚನೆಗೊಳಗಾಗುತ್ತಿದ್ದಾರೆ. ಮೈಸೂರಿನಲ್ಲಿ ಡಿಜಿಟಲ್ ಅರೆಸ್ಟ್, ಹೂಡಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಸುಮಾರು 30 ಕೋಟಿ ರೂ. ಸೈಬರ್ ವಂಚನೆಯಾಗಿದೆ. ಕಳೆದ ವರ್ಷ 40 ಕೋಟಿ ರೂ.ಯಷ್ಟು ವಂಚನೆಯಾಗಿತ್ತು. ಈ ವರ್ಷ ಕಡಿಮೆಯಾಗಿದೆ. 30 ಕೋಟಿ ರೂಪಾಯಿ ವಂಚನೆಯಲ್ಲಿ 5 ಕೋಟಿ ರೂ. ಪತ್ತೆಹಚ್ಚಲಾಗಿದೆ. ಇದನ್ನು ಯಾವ ರೀತಿ ನಿಯಂತ್ರಣಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಚರ್ಚಿಸಲಾಗಿದೆ,ಬೆಂಗಳೂರಿನಲ್ಲಿ ಕುಳಿತು ಅಮೆರಿಕಾದವರಿಗೆ ಡಿಜಿಟಲ್ ಅರೆಸ್ಟ್ ವಂಚನೆ ಮಾಡುತ್ತಿದ್ದವರ ಬಗ್ಗೆ ಪತ್ತೆಹಚ್ಚಿ ಬಂಧಿಸಿದ್ದೇವೆ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೈಬರ್ ಲ್ಯಾಬ್ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಸೈಬರ್ ಲ್ಯಾಬ್ ಮಾಡಲಾಗಿದೆ. ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿರಿಯ ಪೊಲೀಸ್ ಅಧಿಕಾರಿವರೆಗೂ ಸೈಬರ್ ಅಪರಾಧದ ಕುರಿತು ತಾಂತ್ರಿಕ ಜ್ಞಾನ ಹಾಗೂ ತರಬೇತಿ ಇರಬೇಕು. ಈ ಎರಡು ವರ್ಷದೊಳಗೆ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೂ ಹಂತಹಂತವಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯ ಐಜಿಪಿ ಡಾ. ಎಂ.ಬಿ.ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿ ಬಿಂದುಮಣಿ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಮತ್ತಿತರರು ಹಾಜರಿದ್ದರು.
ಮೈಸೂರಿನಲ್ಲಿ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಸ್ಥಾಪನೆ: ಪರಮೇಶ್ವರ್ Read More