ಹೈಕಮಾಂಡ್‌ ತೀರ್ಮಾನ ಅಂತಿಮ:ತನ್ವೀರ್ ಸೇಠ್

ಮೈಸೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ,ಅದೇ ಅಂತಿಮ,ಅದಕ್ಕೆ ನಾವೆಲ್ಲ‌ ಬದ್ದರಾಗಿರುತ್ತೇವೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ತನ್ವೀರ್‌ ಸೇಠ್‌ ಅವರು, ರಾಜ್ಯದ ಜನ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ, ನಮ್ಮ ಸರ್ಕಾರ ಈಗ ಎರಡೂವರೆ ವರ್ಷ ಪೂರೈಸಿದೆ. ಎಲ್ಲದಕ್ಕೂ ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದರು.

ಅಧಿಕಾರ‌ ಹಂಚಿಕೆ‌ ಸೂತ್ರ ನಮಗೆ ಗೊತ್ತಿಲ್ಲ, ನಾನು ಯಾವ ಬಣದಲ್ಲೂ ಇಲ್ಲ, ನಾವು ನಾಯಕರ ಪೂಜೆ, ಆರಾಧನೆ ಮಾಡುವುದಿಲ್ಲ. ಕೇವಲ ರಾಜಕಾರಣ ಮಾಡಲು ಪಕ್ಷದಲ್ಲಿಲ್ಲ. ಡಿ.ಕೆ ಸುರೇಶ್, ರಾಜಣ್ಣ ಅವರ ಹೇಳಿಕೆಗೆ ವೈಯ್ಯಕ್ತಿಕ ಸ್ವಾತಂತ್ರ್ಯವಿದೆ. ಡಿಕೆಶಿ ಋಣ ನನ್ನ ಮೇಲೆ ಇದ್ದೆ ಇದೆ. ಈ ಹಿಂದೆ ನನ್ನ ತಂದೆ ತೀರಿ ಹೋದ ಸಮಯದಲ್ಲಿ ಉಪಚುನಾವಣೆ ಬಂತು.ಲೋಕಸಭಾ ಸೋತಿದ್ರೂ ಡಿಕೆಶಿ ನನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ರು. ನಾನು ಅದನ್ನು ಮರೆಯುವುದಿಲ್ಲ. ನಾನು ಪಕ್ಷೇತರವಾಗಿ ನಗರ ಪಾಲಿಕೆಗೆ ಆಯ್ಕೆಯಾಗಿದ್ದೆ. ಆ ಸಮಯದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು. ನನ್ನನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಆದ್ರೆ ನಾನು ಮೇಯರ್ ಆಗಲಿಲ್ಲ. ಅದು ಬೇರೆ ವಿಚಾರ. ಸಿದ್ದರಾಮಯ್ಯ ಋಣ ಕೂಡ ನನ್ನ ಮೇಲಿದೆ ಎಂದು ಸ್ಮರಿಸಿದರು.

ಬದಲಾವಣೆ ಬಗ್ಗೆ ಏನು ಮಾತನಾಡಬೇಡಿ ಎಂದು ಹೈಕಮಾಂಡ್ ಹೇಳಿದೆ, ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಬೆಂಬಲವಿದೆ. ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದ್ರು ನಾನು ಬೆಂಬಲಿಸುತ್ತೇನೆ. ಪಕ್ಷದ ಪರ ನಾನು ನಿಲ್ಲುತ್ತೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಹೈಕಮಾಂಡ್‌ ತೀರ್ಮಾನ ಅಂತಿಮ:ತನ್ವೀರ್ ಸೇಠ್ Read More

ಸಿಎಂ ಮುಂದುವರಿಕೆ; ಹೈಕಮಾಂಡ್ ತೀರ್ಮಾನ ಅಂತಿಮ-ಸಿದ್ದರಾಮಯ್ಯ

ಮಂಗಳೂರು: ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್
ತೆಗೆದುಕೊಳ್ಳುತ್ತಾರೆ,ಅದನ್ನು ನಾವೆಲ್ಲ ಪಾಲಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೆಲ ಸಚಿವರು ಹೇಳಿಕೆ ನೀಡುತ್ತಿರುವ ಬಗ್ಗೆ ಮೇಲಿನಂತೆ ಪ್ರತಿಕ್ರಿಯಿಸಿ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್ ಗೆ ಸೇರಿದ್ದು, ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಿದ್ದರಾಮಯ್ಯ ಕಠಿಣವಾಗಿ ಹೇಳಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿ,ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್ ಐ ಆರ್ ದಾಖಲಾಗುತ್ತದೆ. ಅವರು ಮಹಿಳೆಯರಿಗೆ ಅಗೌರವವಾಗಿ ಭಾಷಣದಲ್ಲಿ ಮಾತನಾಡಿದ್ದಾರೆ ಎಂದು ತಿಳಿಸಿದರು.

ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್ ಐ ಟಿ ವರದಿ ಸಲ್ಲಿಕೆ ಬಗ್ಗೆ ಪ್ರಶ್ನೆಗೆ, ಎಸ್ ಐ ಟಿ ತನಿಖೆಗೆ ಮಧ್ಯಪ್ರವೇಶ ಮಾಡುವುದಿಲ್ಲ. ಈ ತಿಂಗಳಾಂತ್ಯದಲ್ಲಿ ಎಸ್ ಐ ಟಿ ವರದಿ ಸಲ್ಲಿಕೆಯಾಗಲಿದೆ ಎಂದು ಎಸ್ ಐ ಟಿ ತಿಳಿಸಿದೆ ಎಂಬುದಾಗಿ ಗೃಹಸಚಿವರು ಮಾಹಿತಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿಎಂ ಮುಂದುವರಿಕೆ; ಹೈಕಮಾಂಡ್ ತೀರ್ಮಾನ ಅಂತಿಮ-ಸಿದ್ದರಾಮಯ್ಯ Read More

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧರಿಸುತ್ತೆ:ಖರ್ಗೆ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆಯಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ, ಈ ಬಗ್ಗೆ ಅನಗತ್ಯ ಸಮಸ್ಯೆ ಸೃಷ್ಟಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಡಕ್ಕಾಗಿ ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ಖರ್ಗೆ ಅವರ ಈ ಹೇಳಿಕೆ ಕೆಲವರಿಗೆ ಚುರುಕು ಮುಟ್ಟಿಸಿದೆ.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಖರ್ಗೆ ಅವರು,
ನೋಡಿ,ಮುಖ್ಯ ಮಂತ್ರಿ ಬದಲಾವಣೆ ಮತ್ತಿತರ ನಮ್ಮ ಪಕ್ಷದ ಆಂತರಿಕ ವಿಷಯ ಹೈಕಮಾಂಡ್ ಕೈಯಲ್ಲಿದೆ. ಹೈಕಮಾಂಡ್‌ನಲ್ಲಿ ಏನು ನಡೆಯುತ್ತಿದೆ ಎಂದು ಇಲ್ಲಿ ಯಾರೂ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್‌ಗೆ ಬಿಟ್ಟ ವಿಷಯ ಮತ್ತು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೈಕಮಾಂಡ್‌ಗೆ ಇದೆ. ಆದರೆ, ಅನಗತ್ಯವಾಗಿ ಯಾರೊಬ್ಬರೂ ಸಮಸ್ಯೆ ಸೃಷ್ಟಿಸಬಾರದು ಎಂದು ಹೇಳಿದರು.

2023ರಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಮಾತುಕತೆ ನಡೆದಿದ್ದು, ಉಭಯ ನಾಯಕರು ತಲಾ 2.5 ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆದರೆ, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಸ್ಪಷ್ಟನೆ ನೀಡಿಯೂ ಇಲ್ಲಾ ತಿರಸ್ಕರಿಸಿಯೂ ಇಲ್ಲ.

ಆದರೆ ರಾಜ್ಯದಲ್ಲಿ ಕೆಲವು ನಾಯಕರು ತಮಗೆ ಹೇಗೆ ಬೇಕೊ ಹಾಗೆಲ್ಲಾ ಹೇಳಿಕೆ ನೀಡಿ ಚರ್ಚೆ ಹುಟ್ಟು ಹಾಕುತ್ತಿರುವುದಂತೂ ಸತ್ಯ.

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧರಿಸುತ್ತೆ:ಖರ್ಗೆ Read More

ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಕೇಂದ್ರ ಬಿಜೆಪಿ ಶಿಸ್ತು ಸಮಿತಿ

ಬೆಂಗಳೂರು: ಪದೇಪದೇ ಪಕ್ಷದ ನಾಯಕತ್ವದ ಕುರಿತು ಮುಜುಗರ ತರುವ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತುಸಮಿತಿ ಶೋಕಾಸ್ ನೋಟಿಸ್ ನೀಡಿದೆ.

ಯತ್ನಾಳ್ ಗೆ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಹತ್ತು ದಿನಗಳೊಳಗೆ ಸ್ಪಷ್ಟನೆ ಕೊಡದಿದ್ದಲ್ಲಿ ನಿಮ್ಮ ತಪ್ಪು ನೀವೇ ಒಪ್ಪಿಕೊಂಡಂತೆ. ನಾವು ಕ್ರಮಕ್ಕೆ ಮುಂದಾಗಲು ನಿಮ್ಮ ಒಪ್ಪಿಗೆ ಇದೆಯೆಂದು ಭಾವಿಸುತ್ತೇವೆ. ಈ ಹಿಂದೆಯೂ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ತಪ್ಪು ಸರಿಪಡಿಸಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದಿರಿ. ಆದರೆ ಯಾವುದೂ ಬದಲಾವಣೆ ಆಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹೈಕಮಾಂಡ್ ನಮ್ಮ ಪರ ಇದೆ ಎನ್ನುತ್ತಿದ್ದ ಯತ್ನಾಳ್ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ಸದ್ಯಕ್ಕೆ ವಿಜಯೇಂದ್ರ ಮೇಲುಗೈ ಸಾಧಿಸಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನೀಡಿದ್ದ ಬಹಿರಂಗ ಹೇಳಿಕೆಗಳ ಕುರಿತು ಹೈಕಮಾಂಡ್ ಗರಂ ಆಗಿದೆ.

ಶೋಕಾಸ್ ನೊಟೀಸ್ ಜಾರಿಯಾದ ಕಾರಣ, ಶೋಕಾಸ್ ನೊಟೀಸ್‌ಗೆ ಉತ್ತರ ಕೊಡುವುದಾಗಿ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಕೊಡುತ್ತೇನೆ,ಹಾಗೆಯೇ ರಾಜ್ಯ ಬಿಜೆಪಿಯ ವಸ್ತುಸ್ಥಿತಿಯನ್ನೂ ವರಿಷ್ಠರಿಗೆ ತಿಳಿಸುತ್ತೇನೆ ಎಂದು ಯತ್ನಾಳ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಕೇಂದ್ರ ಬಿಜೆಪಿ ಶಿಸ್ತು ಸಮಿತಿ Read More