ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ: ಮೂಲ‌ ಸೌಕರ್ಯ ಕಲ್ಪಿಸಲು ಮಂಜುನಾಥ್ ಆದೇಶ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗಿರುವ ಚಿಕ್ಕಲ್ಲೂರಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಭಕ್ತರು ಅದನ್ನು ಲೆಕ್ಕಿಸದೆ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ,ಮುಂದಿನ ವರ್ಷ ಅಭಿವೃದ್ಧಿ ಕಾರ್ಯಗಳು ಆಗಲೇಬೇಕು ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಶ್ರೀ ಕ್ಷೇತ್ರದ ಶಾಶ್ವತ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರುಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಶಾಸಕರು ಆದೇಶಿಸಿದರು.

ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ 2026 ರ ಜ. 3 ರಿಂದ 7 ರ ವರೆಗೆ ನಡೆಯಲಿದ್ದು, ಸೌಹಾರ್ದತೆಯ ಪ್ರತೀಕವಾಗಿರುವ ಈ ಪವಾಡ ಪುರುಷನ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ ಅಗತ್ಯ ಸಿದ್ದತೆ ಕೈಗೊಳ್ಳಲು ಚಾಮರಾಜನಗರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು ಚಿಕ್ಕಲ್ಲೂರು ಜಾತ್ರೆ ತನ್ನದೆ ಆದ ಪರಂಪರೆ ಹೊಂದಿದೆ ಎಂದು ತಿಳಿಸಿದರು.

ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ 5 ದಿನಗಳ ಕಾಲ ಯಾವುದೆ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಮುಂದಾಗಬೇಕು, ಭಕ್ತಾದಿಗಳಿಗೆ ಸರಬರಾಜು ಮಾಡುವ ಉಪಾಹಾರ, ನೀರಿನ ಶುದ್ಧತೆ ಪರೀಕ್ಷಿಸಬೇಕು ಎಂದು ಸೂಚಿಸಿದರು.
ತಾತ್ಕಾಲಿಕವಾಗಿ ಹೋಟೆಲ್‌ಗಳನ್ನು ತೆರೆಯುವವರಿಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚಿಸಬೇಕು. ಪರಿಕರಗಳು, ಕುಡಿಯುವ ನೀರು, ಶುದ್ಧತೆಯಿಂದ ಇರುವಂತೆ ತಿಳಿಸಬೇಕು. ಆರೋಗ್ಯಕ್ಕೆ ಪೂರಕವಾದ ಕ್ರಮವಹಿಸುವಂತೆ ಪರವಾನಗಿ ನೀಡುವ ಹಂತದಲ್ಲಿಯೇ ಕಟ್ಟು ನಿಟ್ಟಾಗಿ ಹೇಳಬೇಕು, ಸ್ನಾನ ಮತ್ತು ಶೌಚಕ್ಕೆ ಕಡ್ಡಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರು ಹೇಳಿದರು.

ಚಿಕ್ಕಲ್ಲೂರು ಅಭಿವೃದ್ಧಿ ಪಡಿಸಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಎಂಬ ಕೂಗು ಹಲವಾರು ವರ್ಷಗಳಿಂದಲೂ ಇದೆ. ಇದನ್ನು ಹೋಗಲಾಡಿಸಲು ಶ್ರೀ ಕ್ಷೇತ್ರದ ಶಾಶ್ವತ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಮಂಜುನಾಥ್, ಪಾಳ್ಯ ಗ್ರಾಮದಿಂದ ಚಿಕ್ಕಲ್ಲೂರಿನವರೆಗೂ ನಾಲ್ಕು ಪಥದ ರಸ್ತೆ ಮಾಡಬೇಕೆಂಬುದು ನನ್ನ ಚಿಂತನೆಯಾಗಿದೆ. ಕ್ಷೇತ್ರವನ್ನು ಸಂಪರ್ಕಿಸುವ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಕೆಲವೆಡೆ ಡಾಂಬರೀಕರಣ ಆಗುತ್ತಿದೆ. ಇನ್ನೂ 6 ಕಿ.ಮೀ. ರಸ್ತೆ ಆಗಲಿದೆ. ಆದರೂ ಜಾತ್ರಾ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ಇದ್ದರೂ ಸಾಲೂರು ಮಠದ ಸ್ವಾಮೀಜಿಗಳು ಶ್ರೀ ಮಠದ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದು ಅವರ ಪೂಜಾ ಕೈಂಕರ್ಯಗಳು ಎಂದಿನಂತೆ ನಿರಂತರವಾಗಿ ಮುಂದುವರೆಯುತ್ತಿವೆ. ಮಲೈಮಹದೇಶ್ವರ ಬೆಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲಾ. ಹಾಗಾಗಿ ಚಿಕ್ಕಲ್ಲೂರಿನಲ್ಲಿ ಪ್ರಾಧಿಕಾರ ರಚನೆಗೆ ಸಾರ್ವಜನಿಕರ ಸಹಕಾರ ಅತ್ಯಮುಖ್ಯವಾಗಿದೆ. ಮಠದವರು ಎರಡು ಕಡೆಯವರು ಕುಳಿತು ಒಂದು ಒಳ್ಳೆಯ ತೀರ್ಮಾನವನ್ನು ಭಕ್ತರಿಗಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಠದ ಪರಂಪರೆ ಮತ್ತು ಆಚಾರ ವಿಚಾರಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರಾಧಿಕಾರ ರಚನೆಯಾದರೆ ಲಕ್ಷಾಂತರ ಭಕ್ತರಿಗೆ ಶಾಶ್ವತ ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯವಾಗುತ್ತದೆ ಎಂದು ಎಂ.ಆರ್.ಮಂಜುನಾಥ್ ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ ಜನವರಿ 3 ರಿಂದ 7 ರವರೆಗೂ ನಡೆಯಲಿರುವ ಚಿಕ್ಕಲ್ಲೂರು ಜಾತ್ರೆಗೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 20 ದಿನಗಳ ಮುನ್ನವೇ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಜಾತ್ರಾ ಸಂದರ್ಭದಲ್ಲಿ ವಿದ್ಯುತ್ ಸೇವೆ ನಿರಂತರವಾಗಿರ ಬೇಕು. ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ವೈದ್ಯರು ಸಿಬ್ಬಂದಿ ಯನ್ನು ನಿಯೋಜಿಸಬೇಕು, ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚು ಬಸ್‌ಗಳ ನಿಯೋಜನೆ ಮಾಡಬೇಕು, ಭಕ್ತರ ಸುರಕ್ಷತೆ, ಮತ್ತು ಭದ್ರತೆ, ಅಹಿತಕರ ಘಟನೆಗಳನ್ನು ತಡೆಗಟ್ಟಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಬಾರಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪ್ರಾಣಿಗಳನ್ನು ತಡೆದರೆ ಸ್ಥಳೀಯ ಯುವಕರ ತಂಡ ಕಟ್ಟಿಕೊಂಡು ಪೊಲೀಸರ ಕಾರ್ಯಚರಣೆಯ ವಿರುದ್ಧ ನಾವು ಕಾರ್ಯಚರಣೆ ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಹೇಳುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ಅವರು ನಾವು ನ್ಯಾಯಾಲಯದ ಆದೇಶದಂತೆ ಪಾಲನೆ ಮಾಡುತ್ತಿದ್ದೇವೆ ಕಳೆದ ವರ್ಷ ಚೆಕ್ ಪೋಸ್ಟನಲ್ಲಿ ಕುರಿ ಕೋಳಿಗಳನ್ನು ತಪಾಸಣೆ ಮಾಡಿಲ್ಲಾ, ನೀವೇ ಈ ವರ್ಷ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂದು ಹೇಳಿದ್ದೀರಿ, ಈ ಸಭೆಯಲ್ಲಿ ಪೊಲೀಸರ ವಿರುದ್ಧ ಮಾತನಾಡುವುದು ಸರಿಯಲ್ಲ, ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ಮಾಡುತ್ತಿದ್ದೇವೆ. ನಮ್ಮ ಕರ್ತವ್ಯಕ್ಕೆ ಯಾರೇ ಅಡ್ಡಿ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಖಾರವಾಗಿಯೇ ಹೇಳಿದರು.

ಜಿ.ಪಂ. ಸಿಇಒ ಮೋನಾರೋತ್, ತಹಸೀಲ್ದಾರ್ ಗಳಾದ ಬಸವರಾಜು, ಚೈತ್ರ ತೆಳ್ಳನೂರು, ಗ್ರಾಂ.ಪಂ ಪಿಡಿಒ ಶೋಭರಾಣಿ, ಪಾಳ್ಯ ನಾಡಕಚೇರಿ ಉಪತಹಸೀಲ್ದಾರ್ ವಿಜಯಕುಮಾರ್, ರಾಜಸ್ವ ನಿರೀಕ್ಷಕ ರಂಗಸ್ವಾಮಿ, ಚಿಕ್ಕಲ್ಲೂರು ಮಠದ ಭರತ್ ರಾಜೇ ಅರಸ್ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ: ಮೂಲ‌ ಸೌಕರ್ಯ ಕಲ್ಪಿಸಲು ಮಂಜುನಾಥ್ ಆದೇಶ Read More

ಪಾದಚಾರಿಗೆ ಬೈಕ್ ಡಿಕ್ಕಿ:ಹಿಂಬದಿ ಸವಾರ‌ ಸಾವು

ಹನೂರು: ಮಲೈ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನವೊಂದು ಕೊಂಗರಹಳ್ಳಿ ಸಮೀಪ
ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ.

ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕರ ತಂಡ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಕೊಂಗರಹಳ್ಳಿ ಗ್ರಾಮದ ಮಹಿಳಾ ಕಾಲೇಜು ಸಮೀಪ 60 ವರ್ಷದ ಸುರೇಶ್ ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಮಂಡ್ಯ ಮೂಲದ ಮಳವಳ್ಳಿ ತಾಲೂಕಿನ ರಾಮಾಂದೂರು ಗ್ರಾಮದ ಮನೋಹರ್ ಮೃತ ಪಟ್ಟಿದ್ದಾನೆ.

ಪಾದಚಾರಿ ಸುರೇಶ್ ಗೆ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದೆ. ಹಾಗೂ ಸವಾರ ರವಿಕುಮಾರ್ ಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:ಹಿಂಬದಿ ಸವಾರ‌ ಸಾವು Read More

ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ 2.27 ಕೋಟಿ ಸಂಗ್ರಹ

ಹನೂರು: ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು,ನಿಷೇಧಿತ 2000 ಮುಖ ಬೆಲೆಯ ನೋಟುಗಳೂ ಪತ್ತೆಯಾಗಿವೆ

28 ದಿನಗಳ ಅವಧಿಯಲ್ಲಿ 2,27, 24,757 ರೂ ಗಳು ಸಂಗ್ರಹವಾಗಿದೆ.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬೆಳಿಗ್ಗೆ ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯಸಾನಿದ್ಯದಲ್ಲಿ ಕಾರ್ಯದರ್ಶಿ ರಘು ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಭಾನುವಾರ, ರಜಾ ದಿನಗಳು, ಆಯುಧ ಪೂಜೆ ಹಾಗೂ ವಿಜಯದಶಮಿ ಇದ್ದುದ್ದರಿಂದ 28 ದಿನಗಳಲ್ಲಿ ಹುಂಡಿ ಮತ್ತು ಒಟ್ಟು ಇ- ಹುಂಡಿ ಸೇರಿದಂತೆ 2,27, 24,757 ರೂ ಗಳು ಸಂಗ್ರಹವಾಗಿದೆ.

ಚಿನ್ನ 46 ಗ್ರಾಂ, ಬೆಳ್ಳಿ 01 ಕೆ.ಜಿ 350 ಗ್ರಾಂ ದೊರೆತಿದೆ. 9 ವಿದೇಶಿ ನೋಟುಗಳು ಹಾಗೂ ನಿಷೇಧಿತ 2,000 ರೂ ಮುಖಬೆಲೆಯ 18 ನೋಟುಗಳು ಕಾಣಿಕೆಯಾಗಿ ಬಂದಿದೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಮರಿಸ್ವಾಮಿ, ಕಾಗಲವಾಡಿ, ಭಾಗ್ಯಮ್ಮ, ಕುಪ್ಯಾ, ಮಹದೇವಪ್ಪ, ಕೀಳನಪುರ, ಗಂಗನ ತಿಮ್ಮಯ್ಯ ಹಾರೋಹಳ್ಳಿ (ಮೆಲ್ಲಹಳ್ಳಿ), ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರಾದ ಮಹದೇವು.ಸಿ, ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಲೆಕ್ಕಧೀಕ್ಷಕರಾದ ಗುರುಮಲ್ಲಯ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಕಲ್ಯಾಣಮ್ಮ, ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.

ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ 2.27 ಕೋಟಿ ಸಂಗ್ರಹ Read More

ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಮಂಜುನಾಥ್

(ವರದಿ:ಸಿದ್ದರಾಜು,,ಕೊಳ್ಳೇಗಾಲ)

ಕೊಳ್ಳೇಗಾಲ: ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಪರಿಶೀಲಿಸಿದರು.

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಭಿವೃದ್ಧಿ ಕಾಣದೆ ಹದಗೆಟ್ಟಿದ್ದ ಬಂಡಳ್ಳಿ – ಹನೂರು ರಸ್ತೆ, ಮೋಡಹಳ್ಳಿ – ದೊಡ್ಡಿಂದುವಾಡಿ ಹಾಗೂ ಚಿಕ್ಕಲ್ಲೂರು ರಸ್ತೆಗಳು ಸೇರಿದಂತೆ 6 ಕಡೆ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಮೇ 19 ರಂದು ಗುದ್ದಲಿ ಪೂಜೆ ನೆರವೇರಿಸಿದ್ದರು.

ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಶಾಸರು ಕಾಮಗಾರಿಯ ವೈಖರಿಯನ್ನು ಕಂಡು ಸಿಡಿಮಿಡಿಗೊಂಡರು. ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆಯ ನೆಲಹಾಸಿಗೆ ಗುಣಮಟ್ಟದ ಮಣ್ಣು ಬಳಸದೆ ಕಳಪೆ ಮಣ್ಣು ಬಳಸುತ್ತಿದ್ದ ಕಾರಣ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು. ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಕಂಡು ಸ್ಥಳದಲ್ಲೆ ಅವರ ಮೊಬೈಲ್ ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡರು.

ಕೂಡಲೇ ಕಳಪೆ ಮಣ್ಣು ತೆಗೆದು ಗುಣಮಟ್ಟದ ಮಣ್ಣು ಹಾಕಿಸುವಂತೆ ತಾಕೀತು ಮಾಡಿದರು.

ನಂತರ ಶಾಸಕರು ಅಲ್ಲಲ್ಲಿ ರಸ್ತೆ ನಡುವೆ ನಿರ್ಮಿಸಿರುವ ಕಿರು ಸೇತುವೆಗಳ ಗುಣಮಟ್ಟ ನೋಡಿ ಬೇಸರ ವ್ಯಕ್ತಪಡಿಸಿದರು.

ಈ ನಡುವೆ ಪ್ರಕಾಶ್ ಪಾಳ್ಯ ಹಾಗೂ ಕೊತ್ತನೂರು ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಅಂಗಡಿ ಮುಂಗಟ್ಟುಗಳು ಹಾಗೂ ಮನೆಗಳವರಿಗೆ ರಸ್ತೆ ಅಭಿವೃದ್ಧಿಗೆ ಸಹಕರಿಸಿ ಎಂದು ಮಂಜುನಾಥ್ ಮನವಿ ಮಾಡಿದರು.

ಈ ವೇಳೆ ಪ್ರಕಾಶ್ ಪಾಳ್ಯದಲ್ಲಿ ಕುಟುಂಬವೊಂದು ರಸ್ತೆ ಮಾಡುವಾಗ ಅಂಗಡಿ ಮುಂಭಾಗ ಹೋಗುತ್ತದೆ ಉಳಿಸಿ ಕೊಡಿ ಎಂದು ಮನವಿ ಮಾಡಿದರು.

ಈಗ 50 ಅಡಿ ರಸ್ತೆ ಮಾಡಲಾಗುತ್ತದೆ. ಮುಂದೆ ಇನ್ನೂ ರಸ್ತೆ ಅಗಲವಾಗಲಿದ್ದು ದ್ವಿಪಥ ರಸ್ತೆ ನಿರ್ಮಾಣ ಮಾಡಿಸುವ ಯೋಜನೆ ಇದೆ ಆಗ ಇನ್ನೂ ರಸ್ತೆ ಅಗಲವಾಗಲಿದೆ. ಸದ್ಯಕ್ಕೆ ಈಗ ರಸ್ತೆ ಮಾಡಲು ಅನುವು ಮಾಡಿಕೊಡಿ ಎಂದು ಶಾಸಕರು ತಿಳಿಹೇಳಿದರು.

ಕೊತ್ತನೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳಿಸುವ ಮನೆಗಳಿಗೆ ಪರಿಹಾರ ಯಾವಾಗ ಬರುತ್ತದೇ ಎಂದು ಗ್ರಾಮಸ್ಥರು ಕೇಳಿದಾಗ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಅಕ್ರಮಿಸಿಕೊಂಡು ಮನೆ ನಿರ್ಮಾಣ ಮಾಡಿರುವುದರಿಂದ ರಸ್ತೆಯ ನಕ್ಷೆಯಂತೆ ರಸ್ತೆ ಅಭಿವೃದ್ಧಿ ಮಾಡಲಾಗುವುದು ಇದಕ್ಕೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ರಸ್ತೆ ಅಭಿವೃದ್ಧಿ ಮಾಡಲು ಸಹಕರಿಸಿ, ಇಲ್ಲ ಗ್ರಾಮದ (ಬೈಪಾಸ್) ಹೊರವಲಯದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಹೋಗುತ್ತೇವೆ ಎಂದಾಗ ಗ್ರಾಮದ ಹೊರವಲಯದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಹೋದರೆ ಗ್ರಾಮಕ್ಕೆ ಮೌಲ್ಯ ಕಡಿಮೆ ಯಾಗುತ್ತದೆ ಆದ್ದರಿಂದ ಗ್ರಾಮದೊಳಗೆ ರಸ್ತೆ ಅಭಿವೃದ್ಧಿ ಪಡಿಸಿ ಸಹಕರಿಸುವುದಾಗಿ ಜನರು ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಗಾರರೊಡನೆ ಮಾತನಾಡಿದ ಶಾಸಕ ಮಂಜುನಾಥ್, ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್ 67 ಕೋಟಿ ರೂ.ಗಳ ಅನುಧಾನದಡಿ ಕ್ಷೇತ್ರದ ರಸ್ತೆಗಳ ಸಾಗುವ ಭಾಗಗಳಲ್ಲಿ ಅಭಿವೃದ್ದಿ ಕೈಗೊಂಡಿದ್ದು,ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

25 ಕೋಟಿ ರೂ. ವೆಚ್ಚದಲ್ಲಿ ದೊಡ್ಡಿಂದುವಾಡಿ ಗ್ರಾಮದಲ್ಲಿ ಮೋಡಹಳ್ಳಿ ವೃತ್ತದಿಂದ ದೊಡ್ಡಿಂದುವಾಡಿ ವೃತ್ತದವರೆಗೆ ದೊಡ್ಡಿಂದುವಾಡಿ – ಕನಕಗಿರಿ ರಸ್ತೆ, ಕೊತ್ತನೂರು ಗ್ರಾಮದಲ್ಲಿ ಮೊಳಗನಕಟ್ಟೆಯಿಂದ ಕೊತ್ತನೂರು ಗ್ರಾಮದ ಅಂಬೇಡ್ಕರ್ ಪ್ರತಿಮೆವರೆಗಿನ ಚಿಕ್ಕಲ್ಲೂರು ರಸ್ತೆ ಭಾಗಗಳಲ್ಲಿ 9 ಕಿ.ಮೀ. ರಸ್ತೆ, 24,.80 ಕೋಟಿ ರೂ. ವೆಚ್ಚದಲ್ಲಿ ಬಂಡಳ್ಳಿಯಲ್ಲಿ ಬಂಡಳ್ಳಿ ರಸ್ತೆ, ಹಾಗೂ ಜಿ.ವಿ.ಗೌಡ ಕಾಲೇಜು ಬಳಿ ಬಂಡಳ್ಳಿ – ಹನೂರು ರಸ್ತೆ, ಭಾಗಗಳಲ್ಲಿ 10.470  ಕಿ.ಮೀ. ರಸ್ತೆ, ಹಾಗೆಯೇ 17 ಕೋಟಿ ರೂ. ವೆಚ್ಚದಲ್ಲಿ ಹನೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹನೂರು, ರಾಮಾಪುರ- ಕೌದಳ್ಳಿ ಹಾಯ್ದ ಭಾಗಗಳಲ್ಲಿ ರಸ್ತೆ ಆಭಿವೃಧ್ಧಿ, ಹಾಗೂ ಕೌದಳ್ಳಿ – ರಾಮಾಪುರ ಮುಖ್ಯ ರಸ್ತೆ ಬಳಿ ಕೌದಳ್ಳಿ ಚರ್ಚ್ ರಸ್ತೆ ಸೇರಿದಂತೆ 67 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 30 ಕಿ.ಮೀ. ರಸ್ತೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪಾಳ್ಯ – ಚಿಕ್ಕಲ್ಲೂರು ರಸ್ತೆಯನ್ನು 60 ಅಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ರಸ್ತೆಯ ಮಧ್ಯದಿಂದ ಎರಡು ಕಡೆ 30 ಅಡಿ 30 ಅಡಿ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ವಿಜಯ್ ಕುಮಾರ್. ಮಹಾದೇವ ಗೋವಿಂದ, ಚಿನ್ನವೆಂಕಟ್, ಕೃಷ್ಣ, ಚಿನ್ನಸ್ವಾಮಿ, ಶಿವು, ಅತಿಕ್, ಮಹೇಶ್, ನಟರಾಜು ಗೌಡ ಹಾಗೂ ಗುತ್ತಿಗೆ ಸಂಸ್ಥೆ ಯ ಅಭಿಯಂತರ ವಿವೇಕ್, ಸೂಪರ್ ವೈಸರ್ ಕುಮಾರ್ ಮತ್ತುತರರು ಹಾಜರಿದ್ದರು.

ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಮಂಜುನಾಥ್ Read More

ಶಿಕಾರಿಪುರ ಕಚೇರಿ ಹುದ್ದೆಗಳ ಸಹಿತಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆ

ಕೊಳ್ಳೇಗಾಲ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಉಪ ವಿಭಾಗದ ಪ್ರಸ್ತುತ ಶಿಕಾರಿಪುರ ಕಚೇರಿಯನ್ನು ಹುದ್ದೆಗಳ ಸಮೇತ ಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆ ಮಾಡಿ ಪುನರ್ ನಾಮಕರಣ ಮಾಡುವಂತೆ ಆದೇಶಿಸಲಾಗಿದೆ.

ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಘುನಾಥ್ ಗೌಡ ಎಸ್ ಪಾಟೀಲ್ ಈ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಲೋಕೋಪಯೋಗಿ ಇಲಾಖೆ ಕಟ್ಟಡಗಳ ಉಪವಿಭಾಗ ಕಚೇರಿಯನ್ನು ಹುದ್ದೆಗಳ ಸಮೇತ ಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆಗೊಳಿಸಿ ಲೋಕೋಪಯೋಗಿ ಉಪ ವಿಭಾಗ ಹನೂರು ಎಂದು ಪುನರ್ ನಾಮಕರಣ ಮಾಡಿ ಹೊಸ ಕಚೇರಿಯನ್ನು ತೆರೆಯುವಂತೆ ಆದೇಶ ಮಾಡಲಾಗಿದ್ದು, ಸಾರ್ವಜನಿಕರ ಆಡಳಿತಾತ್ಮಕ ಹಿತದೃಷ್ಟಿಯಿಂದ ಮಾರ್ಪಾಡು ಮಾಡಿ ಬೆಂಗಳೂರು ಕಚೇರಿಯನ್ನು ಕೇಂದ್ರ ಸ್ಥಾನದಲ್ಲಿ ಮುಂದುವರಿಸಲಾಗಿದೆ.

ಶಾಸಕ ಎಂ.ಆರ್. ಮಂಜುನಾಥ್ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ : ಲೋಕೋಪಯೋಗಿ ಉಪವಿಭಾಗ ಮಲೆ ಮಹದೇಶ್ವರ ಬೆಟ್ಟ ಕಚೇರಿಯ ನಿರ್ವಹಣಾ ವ್ಯಾಪ್ತಿಯನ್ನು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುವ ಕಾಮಗಾರಿಗಳ ಅನುಷ್ಠಾನಗೊಳಿಸುವ ಉಸ್ತುವಾರಿ ಮತ್ತು ನಿರ್ವಹಣೆಗೆ ಸೀಮಿತಗೊಳಿಸಿ ಸದರಿ ಉಪ ವಿಭಾಗ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ತ್ವರಿತವಾಗಿ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಉಪ ವಿಭಾಗ ಶಿಕಾರಿಪುರ ಕಚೇರಿಯನ್ನು ಹುದ್ದೆಗಳ ಸಮೇತ ಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆಗೊಳಿಸಿ ಲೋಕೋಪಯೋಗಿ ಉಪ ವಿಭಾಗ ಹನೂರು ಕಚೇರಿ ಎಂದು ಪುನರ್ ನಾಮಕರಣ ಮಾಡಿ ಹೊಸದಾಗಿ ಕಚೇರಿಯನ್ನು ತೆರೆಯಲು ಸರ್ಕಾರ ಜುಲೈ 21ರಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಆದೇಶ ಹೊರಡಿಸಿದೆ.

ಸ್ಥಳಾಂತರಿಸಲಾದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಉಪವಿಭಾಗ, ಶಿಕಾರಿಪುರ ಕಚೇರಿ ಕಾರ್ಯವ್ಯಾಪ್ತಿಯನ್ನು ಬೇರೆ ಉಪವಿಭಾಗದ ವ್ಯಾಪ್ತಿಗೆ ಒಳಪಡಿಸುವ ಕುರಿತು ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಹಾಗೂ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹನೂರು ತಾಲ್ಲೂಕು ಕೇಂದ್ರದಲ್ಲಿ ಹೆದ್ದಾರಿ ಅಭಿವೃದ್ಧಿ ಕಚೇರಿಯನ್ನು ತೆರೆಯುವಂತೆ ಮನವಿ ಸಲ್ಲಿಸಿದ್ದರು.

ಈ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಹನೂರು ತಾಲೂಕು ಕೇಂದ್ರದಲ್ಲಿ ಕಚೇರಿ ತೆರೆಯಲು ಸಹಕರಿಸಿದ್ದಾರೆ.

ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಇದಾಗಿದ್ದು, ವ್ಯಾಪ್ತಿ ದೊಡ್ಡದಾಗಿರುವುದರಿಂದ ಅಧಿಕಾರಿಗಳಿಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುಕೂಲ
ದಾಯಕವಾಗಲಿದೆ ಇಲ್ಲಿ ಕಚೇರಿ ತೆರೆಯುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.

ಶಿಕಾರಿಪುರ ಕಚೇರಿ ಹುದ್ದೆಗಳ ಸಹಿತಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆ Read More

ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮುಕ್ತಾಯ ಹಂತದಲ್ಲಿರುವ ಶಿವನಸಮುದ್ರದ ಸುಪ್ರಸಿದ್ದ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಹನೂರು ಶಾಸಕ ಎಂ.ಆರ್. ಮಂಜುನಾಥ್‌ ವೀಕ್ಷಿಸಿದರು.

ದೇವಸ್ಥಾನದ ಪಾಕಶಾಲೆ, ದೇವಾಲಯದ ಸುತ್ತ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಪುರಾತತ್ವ ಇಲಾಖೆಗೆ ತಾಕೀತು ಮಾಡಿದರಲ್ಲದೆ ದೇವಾಲಯದ ಸಂಪ್ರೋಕ್ಷಣೆಗೆ ದಿನಾಂಕ ನಿಗದಿ ಪಡಿಸಿ ಎಂದು ಅರ್ಚಕರಿಗೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ಅನುದಾನ 2.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿ ನಿರ್ವಹಣೆಯನ್ನು ಪುರತತ್ವ ಇಲಾಖೆ ವಹಿಸಿಕೊಂಡಿದೆ.

ದೇವಾಲಯದ ನವೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿಗೆ ಬಿಡುಗಡೆಯಾಗಿದ್ದ 2.50 ಕೋಟಿ ರೂ. ಅನುದಾನ ಬಳಕೆಯಾಗಿದ್ದು ಪಾಕಶಾಲೆ, ದೇವಾಲಯದ ಆವರಣದ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಷ್ಟೆ ಬಾಕಿ ಇರುವುದರ ಬಗ್ಗೆ ಕೊಳ್ಳೇಗಾಲ ಉಪವಿಭಾಗಾಕಾರಿ ಹಾಗೂ ಸಾಮೂಹಿಕ ದೇವಾಲಯಗಳ ಆಡಳಿತ ಅಧಿಕಾರಿಯೂ ಆಗಿರುವ ಬಿ.ಆರ್. ಮಹೇಶ್ ಅವರು ಶಾಸಕರಿಗೆ ವಿವರಣೆ ನೀಡಿದರು.

ಇನ್ನೇನು ಕಾಮಗಾರಿ ಮುಗಿಯುತ್ತಿದ್ದು ಆದಷ್ಟು ಬೇಗ ದೇವಾಲಯದ ಸಂಪ್ರೋಕ್ಷಣೆಗೆ ಸೂಕ್ತವಾದ ದಿನಾಂಕ ನಿಗದಿ ಪಡಿಸಿಕೊಳ್ಳಿ ಎಂದು ಅರ್ಚಕರಾದ ಶ್ರೀಧರ್ ಆಚಾರ್ ಅವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕರು ಕಾರ್ತಿಕ ಮಾಸ ಸೂಕ್ತವಾಗಿದೆ. ಹಾಗಾಗಿ ಕಾರ್ತಿಕ ಮಾಸದಲ್ಲೆ ಕಾರ್ಯಕ್ರಮ ನಡೆಸುವುದು ಒಳ್ಳೆಯದು ಎಂದು ಈ ವೇಳೆ ಶಾಸಕರಿಗೆ ಸಲಹೆ ನೀಡಿದರು.

ಭರದಿಂದ ಸಾಗುತ್ತಿರುವ ರಂಗನಾಯಕಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ: ಜಗನ್ಮೋಹನ ರಂಗನಾಥ ಸ್ವಾಮಿ ದೇವಸ್ಥಾನದ ಮಗ್ಗುಲಲ್ಲಿರುವ ಸೌಮ್ಯಲಕ್ಷ್ಮಿ(ರಂಗನಾಯಕಿ) ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಕೂಡಾ ಭರದಿಂದ ಸಾಗಿದೆ.

ಸುಮಾರು 1.25 ಕೋಟಿ ರೂ ವೆಚ್ಚದಲ್ಲಿ ದಾನಿಗಳಾದ ಆಂಧ್ರ ಪ್ರದೇಶದ ಉದ್ಯಮಿ, ಎ.ಎಂ.ಆರ್. ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ರೆಡ್ಡಿ ಅವರು ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೊಂಡಿದ್ದು ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಈ ಎರಡೂ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ವೇಳೆ ಸಾಮೂಹಿಕ ದೇವಾಲಯಗಳ ಕಾರ್ಯನಿರ್ವಹಕ ಅಧಿಕಾರಿ ಸುರೇಶ್ ಅವರು ಶಾಸಕರಿಗೆ ದೇವಾಲಯದ ರೂಪುರೇಷೆಯ ಕುರಿತು ನೀಲನಕ್ಷೆ ತೋರಿಸಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಅರ್ಚಕರುಗಳಾದ ಶ್ರೀಧರ್ ಆಚಾರ್ ಮುಖಂಡರುಗಳಾದ ಹನೂರು ಮಂಜೇಶ್, ವಿಜಯ್ ಕುಮಾರ್ ಮತ್ತಿತರರು ಹಾಜರಿದ್ದರು.

ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್ Read More

ಅಕ್ರಮ ಸಂಬಂಧ: ಬೇಸತ್ತ ಪತಿ ಕತ್ತು ಕುಯ್ದು ಪತ್ನಿಯ ಕೊಂ*ದ

(ವರದಿ:ಸಿದ್ದರಾಜು, ಕೊಳ್ಳೇಗಾಲ)

ಕೊಳ್ಳೇಗಾಲ: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹನೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಒಡೆಯರಪಾಳ್ಯ ಸಮೀಪದ ಗೂಳ್ಯದ ಬಯಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗ್ರಾಮದ ಮಾದೇವಿ (32) ಕೊಲೆಯಾದ ಮಹಿಳೆ.ಈಕೆಯ ಪತಿ ಭದ್ರ ಎಂಬಾತ ಕೊಲೆ ಮಾಡಿರುವ ಆರೋಪಿ.

ಗೂಳ್ಯದ ಬಯಲು ಗ್ರಾಮದ ಸೋಲಿಗ ಜನಾಂಗದ ಲೇ. ಶಂಭಯ್ಯ ಹಾಗೂ ಈರಮ್ಮ ಎಂಬುವವರ ಮಗಳು ಮಾದೇವಿಯನ್ನು ಕಳೆದ 10 ವರ್ಷಗಳ ಹಿಂದೆ ಅದೇ ಗ್ರಾಮದ ಲೇ.ಈರಣ್ಣನ ಮಗ ಭದ್ರ ಎಂಬಾನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ದಂಪತಿಗಳು ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದರು. ಇವರಿಗೆ 4 – 5 ವರ್ಷದವರೆಗೆ ಮಕ್ಕಳಿರಲಿಲ್ಲ. 4 ವರ್ಷದ ಒಂದು ಹಾಗೂ ಒಂದುವರೇ ವರ್ಷದ ಒಂದು ಇಬ್ಬರು ಗಂಡು ಮಕ್ಕಳಿದ್ವಾರೆ.

ಆದರೆ ಮಾದೇವಿ ಅದೇ ಗ್ರಾಮದ ಸ್ವಾಮಿ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿರಿಸಿ ಕೊಂಡಿದ್ದಳು ಇದು ಗಂಡ ಭದ್ರನಿಗೆ ತಿಳಿದು ಹುಚ್ಚನಂತಾಗಿದ್ದ.

ಪತ್ನಿಯ ನಡತೆಯಿಂದ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ವೇಳೆ ಮಗಳಿಗೆ ಬುದ್ಧಿವಾದ ಹೇಳಿದ್ದ ಮಾದೇವಿಯ ಮನೆಯವರು ಸ್ವಾಮಿಯ ಜೊತೆ ಜಗಳ ಮಾಡಿ ಇನ್ನು ಮುಂದೆ ನಮ್ಮ ಮನೆಯ‌ ಕಡೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು.

ಆದರೂ ಮಾದೇವಿ ಸ್ವಾಮಿಯ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ಧಳು ಇದರಿಂದಾಗಿ ಭದ್ರ ಮಾನಸಿಕ ನಿಯಂತ್ರಣ ಕಳೆದು ಕೊಂಡು ಹುಚ್ಚನಾಗಿದ್ದ.

ಈ ವೇಳೆ ಮಾದೇವಿ ತನ್ನ ತವರು ಮನೆಯಲ್ಲೇ ಇದ್ದಳು. ಅಲ್ಲಿಗೆ ಸ್ವಾಮಿ ರಾತ್ರಿ ಹೊತ್ತು ಬರುತ್ತಿದ್ದ ಎಂದು ಹೇಳಲಾಗಿದ್ದು. ಅದೇ ಕನವರಿಕೆಯಲ್ಲಿದ್ದ ಭದ್ರ ಇದೇ 20 ರಂದು ರಾತ್ರಿ ಮಾದೇವಿಯ ತವರು ಮನೆಗೆ ಬಂದು ಸ್ವಾಮಿ ನನ್ನ ಹೆಂಡತಿಯ ಜೊತೆ ಮಲಗಿದ್ದಾನೆ ಎಂದು ಗಲಾಟೆ ಮಾಡಿದ್ದಾನೆ.ಮನೆಯವರು ಇಲ್ಲಿ ಯಾರೂ ಇಲ್ಲ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ.

21 ರಂದು ಹೆಂಡತಿಯ ಮನೆಗೆ ಬಂದು ಊಟ ಮಾಡಿದಗದಾನೆ. ಈ ವೇಳೆ ಪತ್ನಿಯೇ ಅನ್ನ ಮಾಡಿ ಬಡಿಸಿದ್ದಾಳೆ. ಆದರೂ ಈತನ ತಲೆಯಲ್ಲಿರುವ ಅನುಮಾನ ಹೋಗಿರಲಿಲ್ಲ.

ಬದ್ರ ಒಡೆಯರಪಾಳ್ಯಕ್ಕೆ ಬಂದು ನಾಗಭೂಷಣ್ ಎಂಬುವವರ ಅಂಗಡಿಯಲ್ಲಿ ಚಾಕು ಖರೀದಿಸಿದ್ದಾನೆ.

ನಂತರ ಮಾದೇವಿಯ ತವರಿನಲ್ಲಿ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ ಮೇಲೆ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೆ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೂಲೆ ಮಾಡಿದ್ದಾನೆ.

ಚೀರಾಟ ಕೇಳಿದ ಅಕ್ಕ ಪಕ್ಕದ ಮನೆಯವರು ಓಡಿ ಬಂದಿದ್ದಾರೆ ಕೊಲೆ ಮಾಡಿ ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ಬದ್ರನನ್ನು ಹಿಡಿಯಲಿ ಯತ್ನಿಸಿದಾಗ ಆತ ಅವರಿಗೂ ಚಾಕು ತೋರಿಸಿ ಹೆದರಿಸಿ ಪರಾರಿಯಾಗಿದ್ದಾನೆ.

ವಿಷಯ ತಿಳಿದ ಕೂಡಲೇ ಹನೂರು ಠಾಣೆ ಪಿ ಎಸ್ ಐ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಾದೇವಿಯ ಶವವನ್ನು ಚಾಮರಾಜನಗರ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ವೈದ್ಯರಿಂದ ಪಂಚನಾಮೆ ನಡೆಸಿ ನಂತರ ವಾರಸುದಾರರಿಗೆ ನೀಡಿದ್ದಾರೆ

ಈ ಸಂಬಂಧ ಮೃತಳ ಸಹೋದರ ಮಾದೇಶ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹನೂರು ಠಾಣೆ ಪೊಲೀಸರು ಆರೋಪಿ ಬದ್ರನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಅಕ್ರಮ ಸಂಬಂಧ: ಬೇಸತ್ತ ಪತಿ ಕತ್ತು ಕುಯ್ದು ಪತ್ನಿಯ ಕೊಂ*ದ Read More

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬೇಸಿಗೆ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದ ಹಾಗೆ ಪರಿಸ್ಥಿತಿ ನಿಭಾಯಿಸಿ ಎಂದು ಹನೂರು ಶಾಸಕ ಎಂ.ಆರ್ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಪಾಳ್ಯ ಹೋಬಳಿ ವ್ಯಾಪ್ತಿಯ 9 ಗ್ರಾ. ಪಂ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪರಿಸ್ಥಿತಿ ನಿಭಾಯಿಸುವ ಸಂಬಂಧ ಹಾಗೂ ಸ್ವಚ್ಛತೆ ಕುರಿತು ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಕಾರ್ಯ ಪಾಲಕ ಅಭಿಯಂತರರು ಹಾಗೂ ಗ್ರಾ.ಪಂ. ಪಿ.ಡಿ.ಒ ಗಳ ಸಭೆಯಲ್ಲಿ ಮಾತನಾಡಿದ ಅವರು ಬೇಸಿಗೆಯಲ್ಲಿ ನೀರಿನ ಭವಣೆ ಎದುರಿಸಲು ತಕ್ಷಣದಿಂದಲೇ ಸಜ್ಜಾಗಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದ ಹಾಗೆ ಮುಂಜಾಗ್ರತೆ ವಹಿಸುವ ಸಲುವಾಗಿ ಮಾರ್ಚ್ 1 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಹಾಗೆಯೇ ಮಾರ್ಚ್ 7 ರಂದು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ವ್ಯಾಪ್ತಿಯ ಗ್ರಾ.ಪಂ. ಗಳ ಸಭೆ ನಡೆಸಲಾಗುತ್ತಿದೆ ಎಂದು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ ಸಭೆಯಲ್ಲಿ ತಿಳಿಸಿದರು

ಸಭೆಯಲ್ಲಿ ಭಾಗವಹಿಸಿದ್ದ ಪಾಳ್ಯ, ಚಿಕ್ಕಲ್ಲೂರು, ತೆಳ್ಳನೂರು, ಧನಗೆರೆ, ಸತ್ತೇಗಾಲ, ಮದುವನಹಳ್ಳಿ, ದೊಡ್ಡಿಂದುವಾಡಿ ಸಿಂಗನಲ್ಲೂರು, ಕೊಂಗರಹಳ್ಳಿ, ಗ್ರಾಮ ಪಂಚಾಯಿತಿಗಳ ಪಿಡಿಒಗಳು ನಮ್ಮ ಪಂಚಾಯಿತಿಗಳಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ, ಬೇಸಿಗೆ ವೇಳೆ ಕುಡಿಯುವ ನೀರಿನ ಭವಣೆ ಉಂಟಾದರೆ ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಟ್ಯಾಂಕ್ ಗಳು ತೊಂಬೆಗಳು ಹಾಗೂ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಹೇಳಿದರು.

ಈ ನಡುವೆ ಮಾತನಾಡಿದ ಧನಗೆರೆ ಗ್ರಾ.ಪಂ. ಪಿ.ಡಿ.ಒ ಕಮಲ್ ರಾಜ್, ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು 15 ನೇ ಹಣಕಾಸು ಯೋಜನೆಯಡಿ 14 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಪಿಡಿಒಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ, ಈಗಾಗಲೇ ಸ್ವಚ್ಛಗೊಳಿಸಿರುವ ಟ್ಯಾಂಕ್ ಗಳು, ತೊಂಬೆಗಳು ಹಾಗೂ ನೀರಿನ ತೊಟ್ಟಿಗಳಿಗೆಲ್ಲಾ ಒಂದೇ ರೀತಿಯ ಬಣ್ಣ ಬಳಿಸಿ ಎಂದು ತಾಕಿತು ಮಾಡಿದರು.

ಹಾಗೆಯೇ ಯಾವಾಗ ಸ್ವಚ್ಛಗೊಳಿಸಿದ್ದೀರಾ ಮುಂದೆ ಸ್ವಚ್ಛಗೊಳಿಸುವ ದಿನಾಂಕ ಯಾವುದು ಎಂಬುದನ್ನು ನೀರಿನ ಟ್ಯಾಂಕ್ ಹಾಗೂ ತೊಂಬೆಗಳ ಮೇಲೆ ಬರೆಸಬೇಕು. ಇದರಿಂದಾಗಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಈ ಅಭಿಯಾನ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಪಿ ಡಿ ಒ ಗಳಿಗೆ ಸೂಚಿಸಿದರು.

ಮದುವನಹಳ್ಳಿ ದೊಡ್ಡ ಗ್ರಾಮವಾಗಿದ್ದು ಇಲ್ಲಿ 7,574 ಜನಸಂಖ್ಯೆ ಇದೆ ಆದರೆ ಇಲ್ಲಿರುವುದು ಒಂದೇ ಶುದ್ಧ ನೀರಿನ ಕುಡಿಯುವ ನೀರಿನ ಘಟಕ ಆದ್ದರಿಂದ ಇಲ್ಲಿ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವಂತೆ ತಾ.ಪಂ. ಇಒ ಗುರು ಶಾಂತಪ್ಪ ಬೆಳ್ಳುಂಡಗಿ ಅವರಿಗೆ ಸಲಹೆ ನೀಡಿದರು.

ಇದೇ ವೇಳೆ ಕಾಡಂಚಿನ ಗ್ರಾಮಗಳ ಜನರಲ್ಲಿ ಕಾಡ್ಗಿಚ್ಚು ಬೆಂಕಿ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕುರಿತು ತಹಸಿಲ್ದಾರ್ ಬಸವರಾಜ್ ಅವರಿಗೆ ಶಾಸಕರು ಸೂಚಿಸಿದಾಗ ಪ್ರತಿಕ್ರಿಯಿಸಿದ ತಹಸಿಲ್ದಾರರು ರಾಜಸ್ವ ನಿರೀಕ್ಷಕರು, ಅಗ್ನಿಶಾಮಕ ದಳದ ಅಧಿಕಾರಿಗಳು ಪಿಡಿಒ ಹಾಗೂ ಅರಣ್ಯ ಅಧಿಕಾರಿಗಳ ತಂಡ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಬೆಂಕಿ ಅನಾಹುತದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಾಪುರ, ಹನೂರು, ಲೊಕ್ಕನಹಳ್ಳಿ ಹೋಬಳಿಗಳಿಗೆ ಹೋಲಿಕೆ ಮಾಡಿದರೆ ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ನೀರಿನ ಅಭಾವವಿಲ್ಲ,ಏಕೆಂದರೆ ಅಂತರ್ಜಲ ಇಲ್ಲಿ ಚೆನ್ನಾಗಿದೆ ಎಂದು ತಿಳಿಸಿದರು.

ಆದರೂ ಅಧಿಕಾರಿಗಳು ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿದ್ದಾರೆ. ಹಾಗೆ ಸ್ವಚ್ಛತೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ, ಇನ್ನು 15 ದಿನಗಳಲ್ಲಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ, ಸ್ವಚ್ಛತೆ ಇದ್ದರೆ ರೋಗ ಹರಡುವುದಿಲ್ಲ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ  ತಹಸೀಲ್ದಾರ್ ಎ.ಇ.ಬಸವರಾಜು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ. ಗ್ರಾಮೀಣ ಕಃಡಿಯುವ ನೀರು ಯೋಜನೆಯ ಕೊಳ್ಳೇಗಾಲ ಉಪವಿಭಾಗದ ಕಾರ್ಯ ಪಾಲಕ ಅಭಿಯಂತರ ಸುಧನ್ವ ನಾಗ್ ಹಾಗೂ ಪಾಳ್ಯ ಹೋಬಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:ಮಂಜುನಾಥ್ Read More

ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಶಾಸಕ ಎಂ.ಆರ್.ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ:‌ ತೆಳ್ಳನೂರು-ಬಂಡಳ್ಳಿ ಮಾರ್ಗದಲ್ಲಿ ಬಸ್ ಅಪಘಾತದಲ್ಲಿ ಗಾಯಗೊಂಡು ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಗ್ಯ ಗ್ರಾಮದ ಗಾಯಾಳುಗಳನ್ನ,
ಹನೂರು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಈ ವೇಳೆ ಗಾಯಾಳುಗಳಿಗೆ ಸಾಂತ್ವಾನ ಹೇಳಿ ವೈಯಕ್ತಿ ಆರ್ಥಿಕ ಸಹಾಯ ಮಾಡಿದರು.

ನಂತರ ಮಾಧ್ಯಮದವರಿಗೆ ಪ್ರತಿಕ್ರಿಸಿದ ಶಾಸಕರು,ಅಪಘಾತ ಆಗಬಾರದಿತ್ತು, ಇದು ಬಹಳ ಘೋರ ದುರಂತ, ಈ ಘಟನೆ ನನಗೂ ಬಹಳ ಬೇಸರ ತಂದಿದೆ. ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದರು.

ನಾನು ಅಧಿವೇಶನದಲ್ಲಿ ಇದ್ದ ಕಾರಣ ತಡವಾಗಿ ಬಂದು ಗಾಯಗೊಂಡಿರುವ ೫೪ ಜನರ ಯೋಗ ಕ್ಷೇಮ ವಿಚಾರಿಸಿದ್ದೇನೆ. ಅಲ್ಲಿಯ ವರೆಗೆ ಸಂಬಧಪಟ್ಟ ಅಧಿಕಾರಿಗಳಿಂದ ಗಾಯಾಳುಗಳ ಸ್ಥಿತಿಗತಿಗಳ ಕುರಿತು ಕ್ಷಣಕ್ಷಣಕ್ಕೂ ಮಾಹಿತಿ ಪಡೆದು ಕೊಳ್ಳುತ್ತಿದ್ದೆ. ಮತ್ತು ಎಲ್ಲರೂ ಗುಣಮುಖರಾಗುವಂತೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಸಂಬಂಧಪಟ್ಟ ವೈದ್ಯರಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.

ತೆಳ್ಳನೂರು, ಬಂಡಳ್ಳಿ,ಶಾಗ್ಯ ಮಾರ್ಗದ ರಸ್ತೆ ಅತ್ಯಂತ ಕಿರಿದಾಗಿದ್ದು, ಈ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ಅನುಮೋದನೆಗೊಂಡಿದೆ, ಶೀಘ್ರದಲ್ಲೇ ಉತ್ತಮ ರಸ್ತೆ ನಿರ್ಮಾಣ ಮಾಡಿ ಆ ಭಾಗದ ಜನರ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಾರ್ವಜನಿಕರು ಕೂಡ ಸಂಚಾರಿ ನಿಯಮಗಳನ್ನು ಪಾಲಿಸಿ ಮತ್ತು ರಾತ್ರಿಯ ವೇಳೆ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಸಲಹೆ ನೀಡಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಅಪಘಾತಗಳು ಹೆಚ್ಚುತ್ತಿವೆಯಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ,ಹೆದ್ದಾರಿ ರಸ್ತೆ ಮತ್ತು ಹೊಸ ರಸ್ತೆಗಳು ನಿರ್ಮಾಣವಾದ ನಂತರ ಸಾರ್ವಜನಿಕರು ಆತುರ ಪಡದೆ ನಿಧಾನವಾಗಿ ಚಲಿಸಬೇಕಿದೆ,ಯಾವುದೇ ರೀತಿಯ ಮಧ್ಯ ಸೇವಿಸಿ ಚಾಲನೆ ಮಾಡಬಾರದು ಎಂದು ಹೇಳಿದರು.

ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ನನ್ನ ಗಮನದಲ್ಲೂ ಇದ್ದು ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಅಪಘಾತ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ‌ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪಘಾತದಲ್ಲಿ ಮೃತಪಟ್ಟ ಖಾಸಗಿ ಬಸ್ ನಿರ್ವಾಹಕ ದೊಡ್ಡಿಂದುವಾಡಿಯ ನವೀನ್ ಕುಟುಂಬಕ್ಕೆ ಬಸ್ ನ ಮಾಲೀಕರು ೫ ಲಕ್ಷ ರೂ. ವೈಯಕ್ತಿಕ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿರುವುದು, ಅದರೊಟ್ಟಿಗೆ ಬಸ್ ನ ಇನ್ಸೂರೆನ್ಸ್ ಕ್ಲೇಮ್ ಮಾಡಿಕೊಳ್ಳುವಂತೆ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ಇದೆ,ಜತೆಗೆ ಸರ್ಕಾರದ ವತಿಯಿಂದಲೂ ಅವರ ಕುಟುಂಬ ವರ್ಗದವರಿಗೆ ನೆರವಾಗಲು ಬದ್ಧ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಹನೂರು ತಹಶೀಲ್ದಾರ್ ಗುರುಪ್ರಸಾದ್, ಮುಖಂಡರಾದ ಮಂಜೇಶ್, ಸಿಂಗಾನಲ್ಲೂರು ರಾಜಣ್ಣ, ಕರಿಯನಪುರ ಸಿದ್ದಯ್ಯ, ಬಂಡಳ್ಳಿ ಬಾಬು, ಗೋವಿಂದ, ಮಧುವನಹಳ್ಳಿ ಮಾದೇಶ್, ಬಾಬು, ಪಾಳ್ಯ ಗೋಪಾಲನಾಯಕ, ಸಿದ್ದರಾಜು, ರಾಚಯ್ಯ, ಕುಮಾರ, ರಾಜು, ಮಂಗಲ ಚಿಕ್ಕಯ್ಯ ಮತ್ತಿತರರು ಹಾಜರಿದ್ದರು.

ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಶಾಸಕ ಎಂ.ಆರ್.ಮಂಜುನಾಥ್ Read More