ರಾ. ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧ: ಮಂಜುನಾಥ್
(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಬೆಂಗಳೂರು-ದಿಂಡಿಗಲ್ (ಕೊಳ್ಳೇಗಾಲ) ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ. ಅಂಡರ್ ಪಾಸ್ ಕಾಮಗಾರಿ ಕೂಡಾ ಡಿಪಿಆರ್‌ನಲ್ಲಿ ಸೇರಿದೆ
ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಮೇಲ್ಸೇತುವೆ ಕಾರ್ಯವನ್ನು ಡಿಪಿಆರ್‌ನಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ಮಾಡಿದ್ದೇನೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ ಆದಾಗ ಸಮಸ್ಯೆ ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ತಾಲ್ಲೂಕಿನ ನರೀಪುರ ಹಾಗೂ ಸತ್ತೇಗಾಲದ ಬಳಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿ ಶಾಸಕರು ಮಾತನಾಡಿದರು.
ಈ ವೇಳೆ ಸತ್ತೇಗಾಲ ಗ್ರಾಮಸ್ಥರು ನಾವು ಜೂನ್ ತಿಂಗಳಲ್ಲಿ ಶಾಸಕರು, ಜಿಲ್ಲಾಧಿ ಕಾರಿಗಳು ಹಾಗೂ ಎನ್‌ಹೆಚ್ ಅಧಿಕಾರಿಗಳಿಗೆ ಸತ್ತೇಗಾಲ ರಸ್ತೆಯಲ್ಲಿ ಹಿಂದೆ ಅಪಘಾತಗೊಂಡು ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಇಲ್ಲಿಯವರೆಗೂ ಎರಡು ಕಡೆ ಹಂಪ್ಸ್ ಬಿಟ್ಟರೆ ಯಾವುದೇ ಸಮಸ್ಯೆ ಬಗೆ ಹರಿದಿಲ್ಲ. ನಾವು ಹೆದ್ದಾರಿಗೆ ಭೂಮಿ ಕೊಟ್ಟಿದ್ದೇವೆ, ಆದರೆ ಇಂದು ನಮ್ಮ ಜಮೀನಿಗೆ ನಾವು ಇಳಿಯಲು ಆಗುತ್ತಿಲ್ಲ, ಸಮಸ್ಯೆ ಬಗೆ ಹರಿಯುವವರೆಗೂ ನಾವು ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಆಗ್ರಹಿಸಿದರು.
ಆಗ ಶಾಸಕರು, ತಕ್ಷಣಕ್ಕೆ ಮೇಲ್ಲೇತುವೆ ನಿರ್ಮಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಡಿಪಿಆರ್ ತಯಾರು ಮಾಡಿ ಸರ್ಕಾರದ ಅನುಮೋದನೆ ಪಡೆಯಬೇಕಾಗಿದೆ. ಕನಿಷ್ಠ ಆರು ತಿಂಗಳಾದರೂ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಸುರಕ್ಷಿತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಶಾಸಕ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಎನ್,ಹೆಚ್ ಅಧಿಕಾರಿಗಳಿಗೆ ನಿಮಗೆ ನಾವು ಇದಕ್ಕಿಂತ ಹೆಚ್ಚು ಸಹಾಯ ಮಾಡಲು ಆಗುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಸಮಸ್ಯೆ ಬಗ್ಗೆ ಹರಿಸಿ ಶಾಶ್ವತ ಪರಿಹಾರಕ್ಕಾಗಿ ಹೆದ್ದಾರಿಗೆ ಮೇಲ್ಲೇತುವೆ ನಿರ್ಮಿಸಬೇಕು, ಗ್ರಾಮಕ್ಕೆ ಸಂಪರ್ಕ ಕಲಿಸಲು ಅಂಡರ್ ಪಾಸ್ ರಸ್ತೆ ಕಲ್ಪಿಸಬೇಕೆಂದು ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಈ ಹೆದ್ದಾರಿ 2012-13ರಲ್ಲಿ ವಿನ್ಯಾಸವಾಗಿ ಕಾಮಗಾರಿ ಪ್ರಾರಂಭಿಸಿ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಇಷ್ಟೆಲ್ಲ ಸಮಸ್ಯೆ ಅವಘಡಕ್ಕೆ ಕಾರಣವಾಗಿದೆ ಕಳೆದ ಹತ್ತು ವರ್ಷಗಳಿಂದ ದಟ್ಟಣೆ ವೇಗವಾಗಿ ಬೆಳೆಯುತ್ತಿರುವುದರಿಂದ ನಾಲ್ಕು ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ವಿಸ್ತೃತ ವರದಿ ಸಿದ್ಧವಾಗುತ್ತಿದೆ ಎಲ್ಲಾ ಘಟನೆಗಳಾಗಿರುವು ದರಿಂದ ಸೂಕ್ಷ್ಮವಾಗಿ ಗಮನಿಸಿ ಈ ”ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ (ಕೆಳಸೇತುವೆ) ಆದಾಗ ಈ ಸಮಸ್ಯೆ ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ. ಹಾಗೆಯೇ ಉಪ್ಪಾರರ ಬೀದಿಯ ರಸ್ತೆ, ಅವರು ಈ ಅಂಡರ್ ಪಾಸ್ ನಲ್ಲೇ ಓಡಾಡಿಕೊಂಡರೆ ಸಮಸ್ಯೆ ಬರುವುದಿಲ್ಲ ಆಗ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
10 ದಿನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದೇವೆ. ಏನಾಗಬೇಕು ಎಂಬುದನ್ನು ಲಿಸ್ಟ್ ಮಾಡಿ ಸ್ಪೀಡ್ ಬ್ರೇಕರ್ ಹಾಕಿದ್ದಾರೆ, ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಬಾಕಿ ಇದ್ದು ಅದನ್ನು ಮಾಡಿಕೊಡುವಂತೆ ಒತ್ತಾಯ ಮಾಡಿದ್ದೇನೆ. ಬಾಕಿ ಇರುವುದನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಮಾಡುತ್ತಾರೆ ಮಾಡದೇ ಹೋದರೆ ಇದೇ 14ರಂದು ಡಿಸಿ ವರ್ಚುಯಲ್ ಸಭೆ ತೆಗೆದುಕೊಳ್ಳಲು ಸೂಚಿಸಿದ್ದೇನೆ ಅಲ್ಲಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಎನ್.ಹೆಚ್ ಅಧಿಕಾರಿಗಳಾದ ಚಾರುಲತಾ ಜೈನ್, ವಿಶ್ವ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಲೋಕೋಪಯೋಗಿ ಎಇಇ ಪುರುಷೋತ್ತಮ್, ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ ಮತ್ತಿತರ ಅಧಿಕಾರಿಗಳು ಹಾಜರಿದ್ದರು.




