ಹೆಚ್ ಡಿ ಕೆ ಹುಟ್ಟುಹಬ್ಬ:ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಣ್ಣು ವಿತರಣೆ

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ
ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಮೈಸೂರಿನ ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಮೆತ್ತಲೋಕ ವಿದ್ಯಾರ್ಥಿ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್,ಹಣ್ಣು ಹಂಪಲು ವಿತರಿಸಿ ಎಚ್ ಡಿ ಕುಮಾರಸ್ವಾಮಿ ಅವರ ಜನ್ಮದಿನವನ್ನು ಆಚರಿಸಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಅವರು, ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ದೇಶದ ಅಭಿವೃದ್ಧಿ ಜೊತೆಗೆ ಹೆಚ್ಚಿನ ಆದ್ಯತೆಯ ಮೇಲೆ ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ, ಇವರಿಗೆ ತಾಯಿ ಚಾಮುಂಡೇಶ್ವರಿ ಹೆಚ್ಚಿನ ಆರೋಗ್ಯ ಕರುಣಿಸಲಿ ಎಂದು ಹಾರೈಸಿದರು.

ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ,
ಲಾಟರಿ ನಿಷೇಧ, ಸಾರಾಯಿ ನಿಷೇಧ, ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾ ಮತ್ತಿತರ ಒಳ್ಳೆಯ ಕೆಲಸ ಮಾಡಿ ಜನಪರ ಆಡಳಿತ ನೀಡಿದ್ದಾರೆ, ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಅವರು ತಾಯಿ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ನಂತರ ಸ್ನೇಹ ಬಳಗದ ಸದಸ್ಯರು ವಿದ್ಯಾರ್ಥಿಗಳು ಎಚ್ ಡಿ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್,ಸಿಂಚನಗೌಡ, ವಿದ್ಯಾ, ನಾಗಶ್ರೀ ಸುಚಿಂದ್ರ, ಛಾಯಾ,ಗಾಯಕ ಯಶವಂತ್ ಕುಮಾರ್, ಜಗದೀಶ್,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್ ,ದತ್ತ ಮತ್ತಿತರರು ಹಾಜರಿದ್ದರು.

ಹೆಚ್ ಡಿ ಕೆ ಹುಟ್ಟುಹಬ್ಬ:ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಣ್ಣು ವಿತರಣೆ Read More

ನನ್ನದು ಕೃಷ್ಣತತ್ತ್ವ, ಕಾಂಗ್ರೆಸ್ ಪಕ್ಷದ್ದು ಕಂಸತತ್ತ್ವ:ಹೆಚ್ ಡಿ ಕೆ ತಿರುಗೇಟು

ನವದೆಹಲಿ: ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸಬೇಕು ಎಂದು ಪುನರುಚ್ಚರಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು,ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ
ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್ ಡಿ ಕೆ,ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ, ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಲಿ ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ ಎಂದು ಕಾರವಾಗಿ ಟೀಕಿಸಿದ್ದಾರೆ.

ಭಗವದ್ಗೀತೆ ಜಗದ ಬೆಳಕು, ಅರಿವು. ಸನ್ಮಾರ್ಗದ ದೀವಿಗೆ. ಆದರ್ಶಗಳ ಮಹಾಸಾರ. ಮಕ್ಕಳನ್ನು ಬಾಲ್ಯದಿಂದಲೇ ಒಳ್ಳೇ ಮಾರ್ಗದಲ್ಲಿ ನಡೆಸುವ ಸುದುದ್ದೇಶದಿಂದ ನಾನು ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ವಿನಂತಿಸಿದ್ದೇನೆ. ಬಹುಶಃ; ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ. ಅವರಿಗೆ ಇನ್ನಾವುದೋ ಗ್ರಂಥದ ಸಾರ ಗಾಢವಾಗಿ ಇಳಿದಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನಾನೂ ಸೇರಿ ಜನಪ್ರತಿನಿಧಿಗಳೆಲ್ಲರೂ ಪ್ರಮಾಣ ಸ್ವೀಕರಿಸುವುದು ಸಂವಿಧಾನಬದ್ಧವಾಗಿಯೇ. ದೇವರು, ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇವೆ. ಇದು ಕೂಡ ಸನ್ಮಾರ್ಗವೇ. ಹಾಗಾದರೆ ಮಹದೇವಪ್ಪನವರ ಮಾರ್ಗ ಯಾವುದು ಕಂಸ ಮಾರ್ಗವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಹದೇವಪ್ಪನವರೇ.. ನಿಮಗೆ ತಿಳಿದಿರಲಿ. ಇವತ್ತು ಭಾರತದ ರಾಜನೀತಿ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ. ಸಮರ, ರಾಜಕೀಯ, ಜ್ಞಾನ, ಆಡಳಿತ, ಮನುಷ್ಯ ಸಂಬಂಧಗಳು ಎಲ್ಲಕ್ಕೂ ಭಗವದ್ಗೀತೆಯೇ ದೀವಿಗೆ. ಕೃಷ್ಣಬೋಧೆ ಸಾರ್ವಕಾಲಿಕ, ಭಗವದ್ಗೀತೆ ಕಾಲಾತೀತ. ನಿಮ್ಮನ್ನು ಅಜ್ಞಾನಿ ಎನ್ನುವುದು ನನಗೆ ಇಷ್ಟವಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಎಂದು ಸದಾ ಜಪಿಸುವ ನೀವು, ಭಗವದ್ಗೀತೆಯ ಜತೆಗೆ ರಾಮಾಯಣ, ಮಹಾಭಾರತವನ್ನೂ ಓದಿ. ಇದು ನನ್ನ ಸಲಹೆಯಷ್ಟೇ. ಭಗವದ್ಗೀತೆ ಓದಬೇಡಿ ಎಂದು ನಾನೆಂದೂ ಹೇಳಿಲ್ಲ,ಹೇಳುವುದೂ ಇಲ್ಲ ಎಂದು ಹೆಚ್ ಡಿ ಕೆ ತಿಳಿಸಿದ್ದಾರೆ.

ನನ್ನದು ಕೃಷ್ಣತತ್ತ್ವ, ಕಾಂಗ್ರೆಸ್ ಪಕ್ಷದ್ದು ಕಂಸತತ್ತ್ವ:ಹೆಚ್ ಡಿ ಕೆ ತಿರುಗೇಟು Read More

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ – ಹೆಚ್ ಡಿ ಕೆ

ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲಾಗದ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಮೈಸೂರಿನಲ್ಲಿ ಶುಕ್ರವಾರ ದಿಶಾ ಸಮಿತಿ‌ ಸಭೆಯಲ್ಲಿ‌ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಇರಾದೆಯೇ ಈ ಸರ್ಕಾರಕ್ಕಿಲ್ಲ. ಪ್ರತಿಯೊಂದು ವಿಷಯವನ್ನೂ ಕೇಂದ್ರದ ಮೇಲೆ ಹಾಕಿ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿಗಳು ಮನಸು ಮಾಡಿದರೆ ಇದು ಅತ್ಯಂತ ಚಿಕ್ಕ‌ ವಿಚಾರ. ಕೆಲವು ನಿಮಿಷಗಳಲ್ಲಿ ಬಗೆಹರಿಸಬಹುದಾದ ವಿಷಯ,ಆದರೆ, ಸಿಎಂ ಅವರು ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ಟೀಕಿಸಿದರು.

ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ ಹೇಳಿ ಎಂದು ಹೆಚ್ ಡಿ ಕೆ ಪ್ರಶ್ನಿಸಿದರು.

ಈ ಸಮಸ್ಯೆ ವಿಚಾರದಲ್ಲಿ ಜನ ಪ್ರತಿನಿಧಿಗಳನ್ನು ಕರೆದು ಮಾತನಾಡುವುದು ಏನಿದೆ ಮುಖ್ಯಮಂತ್ರಿಗಳೇ ನೇರವಾಗಿ ನಿರ್ಧಾರ ಕೈಗೊಳ್ಳಬಹುದು. ನೇರವಾಗಿ ಬೆಳೆಗಾರರ ಜತೆ ಮಾತನಾಡಿ ಬಿಕ್ಕಟ್ಟನ್ನು ಬಗೆಹರಿಸಬಹುದು. ಅದನ್ನು ಮಾಡದೇ ಕೇವಲ ರಾಜಕೀಯ ಮಾಡುವುದರಲ್ಲೇ ಮುಳುಗಿದ್ದಾರೆ ಎಂದು ಕುಟುಕಿದರು.

ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ, ಅಂತಹ ಒತ್ತಡಕ್ಕೆ ಮಣಿಯದೆ ಮೊದಲು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಬೆಳಗಾವಿಯ ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿದ್ದನ್ನು ಗಮನಿಸಿದ್ದೇನೆ. ಜೆಡಿಎಸ್ ಪಕ್ಷದ ಯಾವ ನಾಯಕ ಕೂಡ ಕಬ್ಬು ಕಾರ್ಖಾನೆ ಹೊಂದಿಲ್ಲ,ಆದರೆ ಬಂಡೆಪ್ಪ ಕಾಶಂಪೂರ ಅವರ ಕಾರ್ಖಾನೆ ಒಂದಿತ್ತು. ಕೆಲವು ದಿನಗಳ ಹಿಂದೆ ಅವರು ಅದನ್ನು ಕೂಡ ಮಾರಿಬಿಟ್ಟಿದ್ದಾರೆ ಎಂದು ‌ಹೆಚ್ ಡಿ ಕೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಹಾಗೂ ನವೆಂಬರ್ ಕ್ರಾಂತಿ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದಾಗ ಅವರು ಹೇಳಿದ್ದಿಷ್ಟು; ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ಆಗಲ್ಲ ವಾಂತಿಯೂ ಆಗಲ್ಲ. ನನಗೆ ಸಿದ್ದರಾಮಯ್ಯನವರ ಗುಣ ಗೊತ್ತಿದೆ. ಅವರು ನಮ್ಮ ಪಕ್ಷದಲ್ಲೇ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ ಯಾವ ಬದಲಾವಣೆಯೂ ಅಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ‌ ಸಚಿವರು,ಡಿ.ಕೆ ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ. ದೇವರು ಅವರಿಗೆ ಏನೇನು ಹೇಳಿದ್ದಾನೋ ನಮಗೇನು ಗೊತ್ತು ಅದೇನಿದ್ದರೂ ಡಿ.ಕೆ. ಶಿವಕುಮಾರ್ ಹಾಗೂ ದೇವರಿಗೆ ಸಂಬಂಧಪಟ್ಟ ವಿಚಾರ. ಹಾಗಂತ ಡಿಕೆಶಿ ಅವರೇ ಹೇಳಿದ್ದಾರೆ ಎಂದು ಉತ್ತರಿಸಿದರು.

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ – ಹೆಚ್ ಡಿ ಕೆ Read More

ಕೇವಲ ಹದಿನೈದೇ ದಿನದಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ?:ಹೆಚ್ ಡಿ ಕೆ ಪ್ರಶ್ನೆ

ಬೆಂಗಳೂರು: ಶೈಕ್ಷಣಿಕ-ಸಾಮಾಜಿಕ ಸಮೀಕ್ಷೆ ಬಗ್ಗೆ ನಮಗೇನೂ ತಕರಾರಿಲ್ಲ,ಸುಪ್ರೀಂ ಕೋರ್ಟ್ ಆದೇಶದಂತೆ ಕಾಲ ಕಾಲಕ್ಕೆ ಸಮೀಕ್ಷೆ ನಡೆಯಬೇಕು, ನಡೆಯಲಿ ನಾನು ಬೇಡವೆನ್ನುವುದಿಲ್ಲ,ಆದರೆ, ಕೇವಲ ಹದಿನೈದೇ ದಿನದಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈಗ ಪವಿತ್ರ ನಾಡಹಬ್ಬ, ನವರಾತ್ರಿಗಳ ಸಂದರ್ಭ. ಸಮೀಕ್ಷೆ ನಡೆಸುವ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಸರಕಾರಿ ಅಧಿಕಾರಿ -ಸಿಬ್ಬಂದಿಗೆ ಹಬ್ಬ, ಆಚರಣೆ, ಸಂಭ್ರಮ ಇರುವುದಿಲ್ಲವೇ, ನಿಮಗೆ ಮಾತ್ರವೇ ನವರಾತ್ರಿಯೇ ಎಂದು ಟ್ವೀಟ್ ಮಾಡಿ ಕಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನವದುರ್ಗೆಯರನ್ನು ಪೂಜಿಸುವ ಈ ಕಾಲದಲ್ಲಿ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ನೆರವೇರಿಸಲೇಬೇಕಾದ ಧಾರ್ಮಿಕ ಕಾರ್ಯಗಳು ಇರುತ್ತವೆ ಈ ಸಮಯದಲ್ಲಿ ಸಮೀಕ್ಷೆ ಹೇಗೆ ಸಾಧ್ಯ ಎಂದಿದ್ದಾರೆ.

ಹಾಗಾಗಿ ಇದು ಸಮೀಕ್ಷೆಗೆ ಸಕಾಲವಲ್ಲ. ಮುಂದಕ್ಕೆ ಹಾಕಿ ಅಥವಾ ಸಮಯ ವಿಸ್ತರಿಸಿ ಎಂದು ಸಲಹೆ ನೀಡಿದ್ದಾರೆ.

ಜನರಿಗೆ ಪ್ರಾಮಾಣಿಕ, ವಸ್ತುನಿಷ್ಠ, ಸತ್ಯನಿಷ್ಠ ಸಮೀಕ್ಷೆ ಬೇಕು. ಇಲ್ಲವಾದರೆ ಇದಕ್ಕೂ ಹಿಂದಿನ ಎರಡು ಸಮೀಕ್ಷಾ ವರದಿಗಳ ಗತಿಯೇ ಆಗಲಿದೆ. ಜನರ ತೆರಿಗೆ ಹಣ ಪೋಲಾಗಬೇಕೆ, ಇನ್ನೂ ಎಷ್ಟು ಕೋಟಿ  ಖರ್ಚಾಗಬೇಕು, ಕೊನೇಪಕ್ಷ 3 ತಿಂಗಳ ಕಾಲಾವಕಾಶ ಬೇಕೇಬೇಕು,ಹಂತ ಹಂತವಾಗಿ ಸಮೀಕ್ಷೆ ನಡೆಸಿ ಅದಕ್ಕೇನು ಸಮಸ್ಯೆ ಎಂದು ಕೇಳಿದ್ದಾರೆ.

ಆತುರಾತುರ ಸಮೀಕ್ಷೆ ಯಾರ ಆನಂದಕ್ಕೆ? ಎಲ್ಲರನ್ನೂ ಒಳಗೊಳ್ಳುವ, ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಆದರ್ಶ ಸಮೀಕ್ಷೆ ಅಗತ್ಯವಿದೆ, ತಪ್ಪಿದರೆ ಈ ಸಮೀಕ್ಷೆಯ ಹಿಂದಿರುವ ಶಕ್ತಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಕೇವಲ ಹದಿನೈದೇ ದಿನದಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ?:ಹೆಚ್ ಡಿ ಕೆ ಪ್ರಶ್ನೆ Read More

ಜನ ಅಗ್ಗದ ಪಂಚ ಗ್ಯಾರಂಟಿಗೆ ಮಾರುಹೋದರು:ಹೆಚ್ ಡಿ ಕೆ ಬೇಸರ

ಬೆಂಗಳೂರು: ನಾನು ಪಂಚರತ್ನ ಎಂಬ ಐದು ಶಾಶ್ವತ ಕಾರ್ಯಕ್ರಮಗಳನ್ನು ಕೊಡಲು ನಿರ್ಧರಿಸಿದ್ದೆ, ಆದರೆ, ಜನ ಪಂಚ ಗ್ಯಾರಂಟಿ ಎಂಬ ಅಗ್ಗದ ಕಾರ್ಯಕ್ರಮಗಳಿಗೆ ಮಾರು ಹೋದರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಾನು ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉಚಿತ ಮನೆ ಸೇರಿದಂತೆ ಪಂಚರತ್ನ ಎಂಬ ಶಾಶ್ವತ ಕಾರ್ಯಕ್ರಮ ಕೊಡಲು ನಿರ್ಧರಿಸಿದ್ದೆ.ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಹೆಬ್ಬಗೋಡಿಯಲ್ಲಿ ಕೆ.ಹೆಚ್. ಶಿಕ್ಷಣ ಟ್ರಸ್ಟ್ ನ
ವಿನಾಯಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು,ಈಗ ಮಕ್ಕಳ ಶಿಕ್ಷಣ ಕಷ್ಟವಾಗಿದೆ. ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಕೈಗೆಟುಕುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ, ಸರ್ಕಾರಿ ಶಾಲೆಗಳು ಬಹಳ ದುಸ್ಥಿತಿಯಲ್ಲಿ ಇವೆ ಎಂದು ಅತೀ‌ ಬೇಸರ ವ್ಯಕ್ತಪಡಿಸಿದರು.

ಎಲ್ ಕೆಜಿ ಯಿಂದ ಪಿಯುಸಿವರೆಗೆ ಒಂದೇ ಸಮುಚ್ಚಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಶಿಕ್ಷಣ ಕೊಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿ ಅದರಲ್ಲಿ ಶಿಕ್ಷಣವನ್ನು ಸೇರಿಸಿದ್ದೆ. ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಉಚಿತವಾಗಿ ಹೈಟೆಕ್ ಶಿಕ್ಷಣ ಕೊಡುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದರು.

ಆದರೆ, ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಎಂದು ನೀಡುತ್ತಿದೆ. ಅ ಪಂಚ ಗ್ಯಾರಂಟಿ ಕೊಡುವುದಕ್ಕೆ ಜನರ ಮೇಲೆ ಅಪಾರ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಿದೆ. ಈ ರೀತಿ ತೆರಿಗೆ ಹಾಕುವುದೇ ಆಗಿದ್ದರೆ ನಾನೇ ಅಧಿಕಾರದಲ್ಲಿ ಇದ್ದಿದ್ದರೆ ತಿಂಗಳಿಗೆ ಐದು ಸಾವಿರ ರೂಪಾಯಿ ಕೊಡುತ್ತಿದ್ದೆ. ನಿಮ್ಮ ಹಣ ನಿಮಗೆ ಕೊಡುವುದಕ್ಕೆ ಸರ್ಕಾರ ಸುಲಿಗೆ ಮಾಡುತ್ತಿದೆ. ನಾನು ಇಂತಹ ಅಗ್ಗದ ಕಾರ್ಯಕ್ರಮ ಬಿಟ್ಟು ಶಾಶ್ವತ ಪರಿಹಾರ ಕೊಡುವ ಯೋಜನೆಗಳನ್ನು ಹಾಕಿಕೊಂಡಿದ್ದೆ. ಅದನ್ನು ಕಳೆದ ಚುನಾವಣೆಯಲ್ಲಿ ಜನರು ಗಂಭೀರವಾಗಿ ಪರಿಗಣನೆ ಮಾಡಲಿಲ್ಲ ಎಂದು ಅವರು ಹೆಚ್ ಡಿ ಕೆ ಬೇಸರ ಪಟ್ಟರು.

ಮಕ್ಕಳು ಸ್ವಾಮಿ ವಿವೇಕಾನಂದರ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು, ತಂದೆ ತಾಯಿಗೆ ನೋವು ಕೊಡಬೇಡಿ,ಕಡಿಮೆ ಅಂಕ ಬಂತು ಎಂದು ತಪ್ಪು ನಿರ್ಧರ ಮಾಡಬೇಡಿ ಎಂದು ಕುಮಾರಸ್ವಾಮಿ ಮಕ್ಕಳಿಗೆ ಕಿವಿ ಮಾತು ಹೇಳಿದರು.

ನಾನು ಕೂಡ ಕೊನೆ ಬೆಂಚಿನ ವಿದ್ಯಾರ್ಥಿ. ಹೆಚ್ಚೇನು ಅಂಕ ಪಡೆಯುತ್ತಿರಲಿಲ್ಲ,ಆದರೂ ಜೀವನದಲ್ಲಿ ಏನೋ ಒಂದನ್ನು ಸಾಧನೆ ಮಾಡಿದ ಸಂತೋಷ ಇದೆ, ಕಡಿಮೆ ಅಂಕ ಬಂತು ಧೃತಿಗೆಡಬೇಡಿ ಎಂದು ಕುಮಾರಸ್ವಾಮಿ ಮಕ್ಕಳಿಗೆ ಹಿತವಚನ ಹೇಳಿದರು.

ಯಲಹಂಕದ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಶ್ರೀ ಅಭಯಾನಂದ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.

ಇದೇ ವೇಳೆ ಸಚಿವರು ಶಾಲೆಯ ಆಪ್ ಲೋಕಾರ್ಪಣೆ ಮಾಡಿದರು. ಶಾಲೆಯ ಸಂಸ್ಥಾಪಕ ನಾಗರಾಜ್, ನೀರಜ್ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

ಜನ ಅಗ್ಗದ ಪಂಚ ಗ್ಯಾರಂಟಿಗೆ ಮಾರುಹೋದರು:ಹೆಚ್ ಡಿ ಕೆ ಬೇಸರ Read More

ಕೆಂಪೇಗೌಡ ಜಯಂತಿ:ಜೂ. 26 ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಮೈಸೂರು: ಶ್ರೀ ಚಾಮುಂಡೇಶ್ವರಿ ಬಳಗದ ವತಿಯಿಂದ ನಾಡಪ್ರಭು ಕೆಂಪೇಗೌಡ 516ನೇ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜೂ.26 ರಂದು ಏರ್ಪಡಿಸಲಾಗಿದೆ.

ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಜೂನ್ 26ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2ರವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸ್ವಯಂ ಪ್ರೇರಿತ ರಕ್ತದಾನ ಮಾಡಬೇಕೆಂದು ಚಾಮುಂಡೇಶ್ವರಿ ಬಳಗದ ಸಂಚಾಲಕ ರವಿಚಂದ್ರ ಮನವಿ ಮಾಡಿದ್ದಾರೆ.

ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಗೌಡ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್,ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಆಯುಬ್ ಖಾನ್, ಪ್ರದೇಶ ಕುರುಬರ ಸಂಘದ ನಿಕಟಪೂರ್ವ ರಾಜ್ಯ ಅಧ್ಯಕ್ಷ ಸುಬ್ರಹ್ಮಣ್ಯ ( ಸುಬ್ಬಣ್ಣ), ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ಕೆಂಪೇಗೌಡ ಜಯಂತಿ:ಜೂ. 26 ಸ್ವಯಂ ಪ್ರೇರಿತ ರಕ್ತದಾನ ಶಿಬಿರ Read More

ಕಾಂಗ್ರೆಸ್ ಸರ್ಕಾರದ ಕಮೀಶನ್ ದಂಧೆ: 224 ಶಾಸಕರಿಗೂ ಗೊತ್ತಿದೆ-ಹೆಚ್.ಡಿ.ಕೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕಮೀಶನ್ ವ್ಯವಹಾರದ ಬಗ್ಗೆ 224 ಶಾಸಕರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ‌ ಅವರು, ಶಾಸಕರ ಹಣೆಬರಹವೋ ಏನೋ, ತಮ್ಮ ಕ್ಷೇತ್ರಗಳಿಗೆ ಸರ್ಕಾರದ ಯಾವುದೇ ಕಾರ್ಯಕ್ರಮ ತೆಗೆದುಕೊಂಡು ಹೋಗಬೇಕಾದರೆ ಪೇಮೆಂಟ್ ಆಗಲೇಬೇಕು ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗೆ ಮಾನ‌ ಮರ್ಯಾದೆ ಎನಾದರೂ ಇದೆಯಾ ಇಂಥ ಭ್ರಷ್ಟನನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಯನ್ನು ಇನ್ನೂ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮೀಶನ್ ವ್ಯವಹಾರ ಅವ್ಯಾಹತವಾಗಿ ಸಾಗಿದೆ. ಅದಕ್ಕೆ ಕೊನೆ ಎಂಬುದೇ ಇಲ್ಲ. ಪ್ರತಿಯೊಬ್ಬ ಶಾಸಕರು ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೆಚ್ ಡಿ ಕೆ ಕಿಡಿಕಾರಿದರು.

ವಸತಿ ಇಲಾಖೆಯ ಕರ್ಮಕಾಂಡದ ಬಗ್ಗೆ ಬೀದಿ ಬೀದಿಯಲ್ಲಿ ಚರ್ಚೆ ಆಗುತ್ತಿದೆ. ಇವೆಲ್ಲವನ್ನು ಇಲಾಖೆಗಳಾ,ಇವರೆಲ್ಲಾ ಮಂತ್ರಿಗಳಾ ಈ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಬೇರೆ ಮಾಡಬೇಕಿತ್ತಂತೆ ಎಂದು ಯಾರ ಹೆಸರು ಪ್ರಸ್ತಾಪಿಸದೆ ಕುಮಾರಸ್ವಾಮಿ ಆಕ್ರೋಶ‌ ವ್ಯಕ್ತಪಡಿಸಿದರು.

ಗಣಿಗಾರಿಕೆ ಬಗ್ಗೆ ತನಿಖೆ ಮಾಡುವಂತೆ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ‌. ಪಾಟೀಲ್ ಅವರು ಪತ್ರ ಬರೆದಿದ್ದಾರೆ. ಅವರು ಈ ಸರ್ಕಾರದಲ್ಲಿ ಎರಡು ವರ್ಷದಿಂದ ಸಚಿವರಾಗಿದ್ದಾರೆ. ಈಗ ಪತ್ರ ಬರೆದಿದ್ದಾರೆ. ಅವರು ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಹೆಚ್ ಡಿ ಕೆ ಕಾರವಾಗಿ ಪ್ರಶ್ನಿಸಿದರು.

2015 – 16ರಲ್ಲಿ ತನಿಖೆ ನಡೆಸುವಂತೆ ಇದೇ ಹೆಚ್.ಕೆ. ಪಾಟೀಲ್ ಶಿಫಾರಸು ಮಾಡಿದ್ದರು, ಆ ವರದಿ ಇಟ್ಟುಕೊಂಡು ಅವರು ದಿನವೂ ಪೂಜೆ ಮಾಡುತ್ತಿದ್ದರಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಕಮೀಶನ್ ದಂಧೆ: 224 ಶಾಸಕರಿಗೂ ಗೊತ್ತಿದೆ-ಹೆಚ್.ಡಿ.ಕೆ Read More

ಎಲೆಕ್ಟ್ರಿಕ್ ಕಾರು ತಯಾರಿಕೆಯ‌ ಬೃಹತ್ಯೋಜನೆ ಪ್ರಕಟಿಸಿದ‌ ಹೆಚ್ ಡಿ ಕೆ

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದ ರೂಪಿಸಲಾದ 4,150 ಕೋಟಿ ಮೊತ್ತದ ಹೂಡಿಕೆ ಯೋಜನೆಯನ್ನು ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ನವದೆಹಲಿಯ ಸಚಿವಾಲಯದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ, ದೇಶದಲ್ಲಿ ಭೂ ಸಾರಿಗೆ ಕ್ಷೇತ್ರದಲ್ಲಿ ಇಂಗಾಲದ ಹೊರ ಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಪ್ರಧಾನಿಗಳ ಸಂಕಲ್ಪವನ್ನು ಈಡೇರಿಸುವ ಗುರಿಯೊಂದಿಗೆ ಈ ಹೂಡಿಕೆ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ದೇಶಾದ್ಯಂತ ಎಲೆಕ್ಟ್ರಿಕ್‌ ವಾಹನಗಳನ್ನು ಹೆಚ್ಚು ರಸ್ತೆಗಿಳಿಸುವ ನಿಟ್ಟಿನಲ್ಲಿ ರೂಪಿಸಲಾದ ಈ ಯೋಜನೆ ಇದಾಗಿದೆ, ಈ ಯೋಜನೆಯು ಜಾಗತಿಕ ಮಟ್ಟದ ಎಲೆಕ್ಟ್ರಿಕ್ ವಾಹನ ತಯಾರಕರನ್ನು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ದೇಶಿಯವಾಗಿಯೇ ಕಾರುಗಳನ್ನು ತಯಾರಿಸಲು ಆಕರ್ಷಿಸುವ ಗುರಿಯನ್ನು ಹೊಂದಿದೆ. ಮೂರು ವರ್ಷಗಳಲ್ಲಿ 4,150 ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಈ ಯೋಜನೆಯು ಪ್ರಯಾಣಿರ ವಾಹನ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಪ್ರಧಾನಮಂತ್ರಿಗಳ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಆರ್ಥಿಕ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಈ ಮೂರು ಗುರಿಗಳನ್ನು ಒಟ್ಟೊಟ್ಟಿಗೆ ಸಾಕಾರಗೊಳಿಸುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಅವರು ಹೇಳಿದರು.

ಈ ಯೋಜನೆಯು ಭಾರತದ ಆಟೋಮೋಟಿವ್ ವಲಯಕ್ಕೆ ಒಂದು ದಿಕ್ಕನ್ನೇ ಬದಲಾಯಿಸುವಂತಿದೆ. ವಿಶೇಷವಾಗಿ ಇದು ಇಂಗಾಲ ಹೊರಸೂಸುವಿಕೆ ತಡೆಯುವುದು ಮತ್ತು ವಿದ್ಯುತ್ ಚಲನಶೀಲತೆಯ ಕಡೆಗೆ ಜಾಗತಿಕ ಪ್ರವೃತ್ತಿಗಳಿಗೆ ಹೊಂದಿಕೆಯಾಗುವುದರಿಂದ ಬಲವಾದ ಪ್ರೋತ್ಸಾಹ, ಕಟ್ಟುನಿಟ್ಟಾದ ಸ್ಥಳೀಕರಣ ಮಾನದಂಡಗಳು ಮತ್ತು ಮೇಕ್ ಇನ್ ಇಂಡಿಯಾಗೆ ಸ್ಪಷ್ಟ ಬದ್ಧತೆಯೊಂದಿಗೆ, ಈ ಯೋಜನೆಯನ್ನು ಜಗತ್ತಿನ ಕೆಲ ಉನ್ನತ ವಿದ್ಯುತ್ ತಯಾರಕರು ದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಒಂದು ಕಾರ್ಯತಂತ್ರದ ಆಹ್ವಾನವೆಂದು ಪರಿಗಣಿಸಲಾಗಿದೆ ಎಂದು ಸಚಿವ ಕುಮಾರಸ್ವಾಮಿ ವಿವರಿಸಿದರು.

ಎಲೆಕ್ಟ್ರಿಕ್ ಕಾರು ತಯಾರಿಕೆಯ‌ ಬೃಹತ್ಯೋಜನೆ ಪ್ರಕಟಿಸಿದ‌ ಹೆಚ್ ಡಿ ಕೆ Read More

ರಾಜ್ಯದಲ್ಲಿ ದರ ಬೀಜಾಸುರ ಸರಕಾರ ಜನರ ರಕ್ತ ಹೀರುತ್ತಿದೆ:ಹೆಚ್ ಡಿ ಕೆ ಕಿಡಿ

ಬೆಂಗಳೂರು: ರಾಜ್ಯದಲ್ಲಿ ದರ ಬೀಜಾಸುರ ಸರಕಾರ ಜನರ ರಕ್ತ ಹೀರುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೂ ಸೆಸ್ ವಿಧಿಸುವ ಮೂಲಕ ಜನರ ರಕ್ತ ಹೀರುತ್ತಿದೆ ಎಂದು ಟೀಕಿಸಿದ್ದಾರೆ.

ರಾಜ್ಯ ಸರಕಾರ ದಿನಕ್ಕೊಂದು ಸುಳ್ಳು ಹೇಳುತ್ತಿದೆ. ತಿಂಗಳಿಗೊಂದು ದರ ಏರಿಕೆ ಮಾಡುತ್ತಿದೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು ಎಂದು ಲೇವಡಿ ಮಾಡಿದ್ದಾರೆ.

ದರ ಏರಿಕೆಗೆ ಪಂಚ ಗ್ಯಾರೆಂಟಿಯನ್ನು ನೆಪ ಮಾಡಿಕೊಂಡಿದೆ. ಆದರೆ ಸರ್ಕಾರದ ದುರುದ್ದೇಶ ಜನರ ಲೂಟಿ ಮಾಡುವುದಷ್ಟೇ. ಭಾರತದ ಮೇಲೆ ಆಕ್ರಮಣ ನಡೆಸಿ ನಿರಂತರ ಲೂಟಿ ಮಾಡಿದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಅವರಿಬ್ಬರೂ ನಾಚುವಂತೆ ಕನ್ನಡಿಗರ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ದರ ಏರಿಕೆ ದಂಡಯಾತ್ರೆ ನಡೆಸುತ್ತಿದೆ ಎಂದು ಕುಮಾರಸ್ವಾಮಿ ವ್ಯಂಗ್ಯ ವಾಡಿದ್ದಾರೆ

ನೀರು, ಮೆಟ್ರೋ ರೈಲು, ಬಸ್ ಟಿಕೆಟ್, ಹಾಲು (3 ಸಲ ದರ ಏರಿಕೆ), ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬ್ಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್ ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಏರಿಕೆ ಮಾಡಿದೆ. ಇದು ದರ ಬೀಜಾಸುರ ಕಾಂಗ್ರೆಸ್ ಸರಕಾರ ಎಂದು ಆರೋಪಿಸಿದ್ದಾರೆ.

ಇಷ್ಟು ಸಾಲದೆಂಬಂತೆ ಜನರ ಮೇಲೆ ಏಪ್ರಿಲ್ 1ರಿಂದ ಕಸದ ಸೆಸ್ ಹೇರುತ್ತಿದೆ ಈ ದರಬೀಜಾಸುರ ಸರಕಾರ ಕಸ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಗುರಿ ಹಾಕಿಕೊಂಡಿದೆ ಎಂದು ಹೆಚ್ ಡಿ ಕೆ ಟೀಕಿಸಿದ್ದಾರೆ.

ರಾಜ್ಯದಲ್ಲಿ ದರ ಬೀಜಾಸುರ ಸರಕಾರ ಜನರ ರಕ್ತ ಹೀರುತ್ತಿದೆ:ಹೆಚ್ ಡಿ ಕೆ ಕಿಡಿ Read More

ಹೆಚ್ ಡಿ ಕೆ ಕುಟುಂಬದ ಜಮೀನಿನಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭ

ರಾಮನಗರ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ್ದ ಕೇತಗಾನಹಳ್ಳಿ ಜಮೀನಿನಲ್ಲಿ ಒತ್ತುವರಿ ಭೂಮಿ ತೆರವು ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ.

ಬಿಡದಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯಿಂದ ಜಂಟಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇಂದು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಮಾಡುತ್ತಿದೆ.

ಸ್ಥಳಕ್ಕೆ ಡಿಸಿ ಯಶವಂತ್ ವಿ ಗುರುಕರ್, ಎಎಸ್‍ಪಿ ಸುರೇಶ್, ಎಎಸ್‍ಪಿ ರಾಮಚಂದ್ರಯ್ಯ ಭೇಟಿ ನೀಡಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಹಿಂದೆ ನನ್ನನ್ನು ಟಾರ್ಗೆಟ್ ಮಾಡಲು ಸರ್ಕಾರ ಒತ್ತುವರಿ ಆರೋಪ ಮಾಡುತ್ತಿದೆ. ಯಾವುದೇ ತನಿಖೆಗೆ ನಾನು ಸಿದ್ಧ. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ‌ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.

ಹೆಚ್ ಡಿ ಕೆ ಕುಟುಂಬದ ಜಮೀನಿನಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭ Read More