ಮೈಸೂರು: ಮಕ್ಕಳು ಯಾವುದೇ ಆಟ ಆಡುತ್ತಿದ್ದರೂ ಅವರ ಕಡೆ ಪೋಷಕರು ನಿಗಾ ಇಟ್ಟಿರಬೇಕು ಇಲ್ಲದಿದ್ದರೆ ಅನಾಹುತ ತಪ್ಪಿದ್ದಲ್ಲ.ಇದಕ್ಕೆ ಜಿಲ್ಲೆಯ ಹೆಚ್ ಡಿ ಕೋಟೆಯಲ್ಲೊಂದು ಮನಮಿಡಿಯುವ ಘಟನೆ ಸಾಕ್ಷಿಯಾಗಿದೆ.
ಬಾಲಕ ಶನಿವಾರ ಶಾಲೆ ಮುಗಿಸಿ ಮನೆಗೆ ಬಂದು ಆಟವಾಡುತ್ತಿದ್ದ.ಅದೇ ವೇಳೆ ಸೀರೆಕಟ್ಟಿ ಜೋಕಾಲಿ ಆಟ ಆಡಲು ಮುಂದಾಗಿದ್ದಾನೆ.ಈ ವೇಳೆ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಮೃತಪಟ್ಟಿದ್ದಾನೆ.
ಎಚ್.ಡಿ.ಕೋಟೆ ತಾ.ಹೊಮ್ಮರಗಳ್ಳಿ ಜಿ ಹೆಚ್ ಪಿ ಎಸ್ ಶಾಲೆಯ 7 ನೆ ತರಗತಿ ವಿದ್ಯಾರ್ಥಿ ಗುರು ಮೃತಪಟ್ಟ ನತದೃಷ್ಟ ಬಾಲಕ.
ಇದನ್ನು ಕಂಡ ಬಾಲಕನ ಪೋಷಕರ ದುಖಃದ ಕಟ್ಟೆ ಒಡೆದಿತ್ತು.ಅಕ್ಕಪಕ್ಕದ ಮನೆಯವರೆಲ್ಲ ಧಾವಿಸಿ ಮಮ್ಮಲ ಮರುಗಿದರು.
ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕು ಅಣ್ಣೂರು, ಭೀಮನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಐದು ವರ್ಷಗಳಾದರೂ ಇದುವರೆಗೆ ರಿಪೇರಿ ಮಾಡಿಸದ ಕಾರಣ ಗ್ರಾಹಕರು ಶುದ್ಧ ನೀರಿಗೆ ತೊಂದರೆ ಪಡುವಂತಾಗಿದೆ.
ಈ ನೀರಿನ ಘಟಕ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲೇ ಇದೆ.ಇದೇ ರಸ್ತೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಈ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿರುವುದು ಯಾರ ಗಮನಕ್ಕೂ ಬರುವುದೇ ಇಲ್ಲ.
ಗ್ರಾಮೀಣ ಕುಡಿಯುವ ನೀರಿನ ಘಟಕದ ಇಂಜಿನಿಯರ್ ಗಳು ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿದ್ದಾರೆ.ಆದರೆ ಇದು ಕೆಟ್ಟು ಹೋಗಿದ್ದರೂ ಇತ್ತ ತಿರುಗಿ ನೋಡುವುದಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀಮನಹಳ್ಳಿಯ ಜನ 5 ರೂ ಕಾಯಿನ್ ಹಾಕಿ ಒಂದು ಕ್ಯಾನ್ ನೀರು ತೆಗೆದುಕೊಂಡು ಹೋಗುತ್ತಿದ್ದರು.ಈಗ ದೂರದ ಊರಿಗೆ ಅಲೆಯುವಂತಹ ಪರಿಸ್ಥಿತಿ ಬಂದಿದೆ ಜತೆಗೆ ಹೆಚ್ಚು ಹಣ ತೆರಬೇಕೆಂದು ಜನ ಬೇಸರ ಪಡುತ್ತಿದ್ದಾರೆ ಇದು ಜನಪ್ರತಿನಿಧಿಗಳಿಗೆ ತಿಳಿಯುವುದಿಲ್ಲವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಮೀಣ ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆಂದು ಸರ್ಕಾರ ಆಯಾಯ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಪ್ಲಾಂಟ್ ಗಳನ್ನು ಹಾಕಿಸಿದೆ, ಕೇವಲ ಐದು ರೂಪಾಯಿ ಕೊಟ್ಟರೆ ಶುದ್ಧ ನೀರು ಸಿಗುತ್ತದೆ. ಆದರೆ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಧೋರಣೆಯಿಂದ ಜನ ಕುಡಿಯುವ ನೀರಿಗೆ ತೊಂದರೆ ಪಡುವಂತಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ಹಾಕಲು ಕೋಟ್ಯಂತರ ರೂ ವೆಚ್ಚವಾಗುತ್ತದೆ.ಈಗ ಇದು ಹಾಳಾಗಿದೆ,ಹೀಗೆ ಬೇಕಾಬಿಟ್ಟಿ ಹಣ ಪೋಲು ಮಾಡುತ್ತಾರೆ.
ಕೂಡಲೇ ಸ್ಥಳೀಯ ಶಾಸಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ
ಹೆಚ್.ಡಿ.ಕೋಟೆ: ಎಚ್ ಡಿ ಕೋಟೆ ತಾಲೂಕಿನ ಹುಣಸೂರು ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ರಸ್ತೆ ಸಂಪೂರ್ಣ ಹಳ್ಳ ಕೊಳ್ಳಗಳಿಂದ ಕೂಡಿದ್ದು ವಾಹನ ಸವಾರರಿಗೆ ಯಮ ಸ್ವರೂಪಿಯಾಗಿ ಪರಿಣಮಿಸಿದೆ.
ಎಚ್ ಡಿ ಕೋಟೆ – ಹುಣಸೂರು ರಸ್ತೆ ಒಂದು ರೀತಿ ಹೈವೇ ಇದ್ದಂತಿದೆ ಹಾಗಾಗಿ ಸದಾ ವಾಹನಗಳ ಸಂಚಾರ ಇದ್ದೇ ಇರುತ್ತದೆ. ಆದರೆ ಈ ರಸ್ತೆ ಗುಂಡಿ ಬಿದ್ದು ಹಾಳಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಗ್ಯಾರಂಟಿ.
ಈಗ ಮಳೆಗಾಲ,ಗುಂಡಿಯಲ್ಲಿ ನೀರು ತುಂಬಿದರೆ ರಸ್ತೆ ಯಾವುದು ಗುಂಡಿ ಯಾವುದು ಎಂಬುದು ಗೊತ್ತಾಗುವುದಿಲ್ಲ.ಡಾಂಬರು ಕೂಡಾ ಕಿತ್ತುಹೋಗಿ ಕೆಸರುಗದ್ದೆ ಯಾಗಿದೆ.
ನಿನ್ನೆಯಷ್ಟೆ ಇದೇ ರಸ್ತೆ ಗುಂಡಿಯಲ್ಲಿ ದ್ವಿಚಕ್ರವಾಹನ ಸ್ಕಿಡ್ ಆಗಿ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ.
ಇದೇ ರಸ್ತೆಯಲ್ಲೇ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಸಂಚರಿಸುತ್ತಾರೆ,ಆದರೆ ಇವರು ಯಾರಿಗೂ ಇಲ್ಲಿನ ರಸ್ತೆ ರಾಡಿ ಹಾಗೂ ಗುಂಡಿಗಳು ಕಣ್ಣಿಗೆ ಕಾಣುವುದಿಲ್ಲವೆ?.
ಈ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾದರೂ ಗುಣಮಟ್ಟದ ಕಾಮಗಾರಿ ಮಾಡುವುದಿಲ್ಲ,ಸರ್ಕಾರದ ಹಣ,ಜನತೆಯ ತೆರಿಗೆ ಹಣ ಸುಖಾಸುಮ್ಮನೆ ಪೋಲಾಗುತ್ತಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಈ ರಸ್ತೆ ಗುಂಡಿಗಳಿಗೆ ಜಲ್ಲಿ, ಮಣ್ಣು ತುಂಬಿ ಮಟ್ಟ ಮಾಡಿದರೆ ದ್ವಿಚಕ್ರವಾಹನ ಸವಾರರು ನೆಮ್ಮದಿಯಾಗಿ ಸಂಚರಿಸಬಹುದು ಆದರೆ ಈ ದೊಡ್ಡ ದೊಡ್ಡ ಗುಂಡಿಗಳಲ್ಲಿ ಭಾರಿ ವಾಹನಗಳು ಕೂಡಾ ವಾಲುತ್ತವೆ.
ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಈ ರಸ್ತೆ ಬಗ್ಗೆ ಗಮನಹರಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.
ಹೆಚ್.ಡಿ.ಕೋಟೆ: ಬಡತನ ನಿರ್ಮೂಲನೆ ಆಗಲೇಬೇಕು ನಾಡಿನ ಪ್ರತಿಯೊಬ್ಬರಿಗೂ ಸೂರು ಸಿಗಬೇಕು ಎಂದು ಸರ್ಕಾರಗಳು ಮತ್ತು ರಾಜಕಾರಣಿಗಳು ಭಾಷಣದಲ್ಲಿ ಹೇಳುತ್ತಲೇ ಇರುತ್ತಾರೆ, ಆದರೂ ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಸೂರಿಲ್ಲದ ಹಲವಾರು ಕುಟುಂಬಗಳು ಯಾವುದೊ ಚೋಪಡಿಯಲ್ಲಿ ವಾಸ ಮಾಡುತ್ತಿವೆ.
ಇದಕ್ಕೆ ಹೆಗ್ಗಡದೇವನಕೋಟೆಯಲ್ಲಿ ಒಂದು ಸ್ಪಷ್ಟ ಉದಾಹರಣೆ ಇದೆ.
ಎಚ್ ಡಿ ಕೋಟೆ ತಾಲೂಕು ಭೀಮನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆ ಹುಂಡಿ ಗ್ರಾಮದ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ.
ಅದು ಒಂದೆರಡು ವರ್ಷಗಳಿಂದಲ್ಲ ಕಳೆದ 36 ವರ್ಷಗಳಿಂದ ಈಕೆ ಮತ್ತು ಈಕೆಯ ಮನೆಯವರು ರಸ್ತೆಬದಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ!
ಮಳೆ ಬಂದಾಗ ನೀರೆಲ್ಲ ಒಳಗೆ ಬರುತ್ತದೆ, ಬಿಸಿಲಿನ ತಾಪ, ಬಿರುಗಾಳಿಗೆ ಗುಡಿಸಲಿನ ಮೇಲ್ಚಾವಣಿ ಹಾರಿ ಹೋಗುತ್ತದೆ,ಚಳಿ ತಡೆಯಲು ಆಗುವುದಿಲ್ಲ ಆದರೂ ಈ ಗುಡಿಸಲೇ ಅವರಿಗೆ ಅರಮನೆಯಾಗಿದೆ.
ದಿವಂಗತ ರಾಮಯ್ಯ ಅವರ ಪತ್ನಿ ಕಮಲಮ್ಮ ತನ್ನ ಮೊಮ್ಮಗನೊಂದಿಗೆ ಎಲೆಹುಂಡಿ ಗ್ರಾಮದ ರಸ್ತೆ ಬದಿಯಲ್ಲಿ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಬದುಕಲು ಇವರಿಗೆ ಯಾವುದೇ ಕಸಬು ಇಲ್ಲ, ಯಾರೊ ಅವರಿವರು ಕೊಟ್ಟದ್ದನ್ನು ಮೊಮ್ಮಗನಿಗೂ ಕೊಟ್ಟು ಜೀವನ ಸವೆಸುತ್ತಿದ್ದಾರೆ.
ಈಕೆ ಇದೇ ಗ್ರಾಮದವರು ಎಂಬುದಕ್ಕೆ ಎಲ್ಲಾ ಸಾಕ್ಷಿ ಆಧಾರಗಳು ಇವೆ. ಆಧಾರ್ ಕಾರ್ಡ್, ಎಲೆಕ್ಷನ್ ಐಡಿ ಕಾರ್ಡ್,ರೇಷನ್ ಕಾರ್ಡ್ ಇದ್ದಾವೆ. ಪ್ರತಿ ಬಾರಿ ಚುನಾವಣೆಗಳು, ಸ್ಥಳೀಯ ಚುನಾವಣೆಗಳು ಬಂದಾಗ ಈ ಬಾರಿ ಗ್ಯಾರಂಟಿ ಒಂದು ಮನೆಯನ್ನು ಕಟ್ಟಿಕೊಡುವುದಾಗಿ ಜನಪ್ರತಿನಿಧಿಗಳು ಹೇಳುತ್ತಾರೆ ಗೆದ್ದ ನಂತರ ಮಾಮೂಲಿ ಮರೆತೇ ಬಿಡುತ್ತಾರೆ.
ರಸ್ತೆ ಬದಿ ಮಳೆ ಬಿಸಿಲಿನಲ್ಲಿ ಆತಂಕದಲ್ಲಿ ಬದುಕುತ್ತಿರುವ ಕಮಲಮ್ಮನ ಅವಸ್ಥೆಯನ್ನು ಕಂಡು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಅವರು ಆಕೆಯನ್ನು ಭೇಟಿಯಾಗಿ ವಸ್ತುಸ್ಥಿತಿ ಅರಿತು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.
ತಮಗೆ ಒಂದು ಪುಟ್ಟ ಮನೆಯನ್ನು ಕಟ್ಟಿಸಿ ಕೊಡಬೇಕೆಂದು ಎಚ್. ಡಿ ಕೋಟೆ ಶಾಸಕರಿಗೆ ಕಮಲಮ್ಮ ಅವರು ಪತ್ರ ಕೂಡ ಬರೆದಿದ್ದಾರೆ,ಅದೇನಾಯಿತೊ ಇದುವರೆಗೂ ಒಂದು ಮನೆ ಕಟ್ಟಿಕೊಟ್ಟಿಲ್ಲ.
ಈಗಲಾದರೂ ಸ್ಥಳೀಯ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
ಕಮಲಮ್ಮನವರಿಗೆ ಒಂದು ಸೂರನ್ನು ಕಲ್ಪಿಸಿಕೊಟ್ಟು ಚಳಿ ಮಳೆಯಿಂದ ರಕ್ಷಣೆ ಕೊಡಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.
ಮೈಸೂರು: ಜಿಲ್ಲೆಯ ಹೆಚ್ ಡಿ.ಕೋಟೆ ತಾಲೂಕು, ಸರಗೂರು ಬಳಿಯ ಗ್ರಾಮವೊಂದರಲ್ಲಿ ಗೋಬರ್ ಗ್ಯಾಸ್ ಬಾವಿಗೆ ಬಿದ್ದಿದ್ದ ಹುಲಿಯನ್ನ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸರಗೂರು ವ್ಯಾಪ್ತಿಯ ಬಿಡಗಲು ಗ್ರಾಮದಲ್ಲಿ ಆಕಸ್ಮಿಕವಾಗಿ ಗೋಬರ್ ಗ್ಯಾಸ್ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಹುಲಿಯನ್ನು ರಕ್ಷಣೆ ಮಾಡಲಾಗಿದೆ. ಕಮಲ ಮಂಂ ಗ್ರಾಮದ ನವೀನ್ ಎಂಬುವವರ ಹಳೆಯ ಗೋಬರ್ ಗ್ಯಾಸ್ ಬಾವಿಯಲ್ಲಿ ಹುಲಿ ಬಿದ್ದಿತ್ತು.
ಹುಲಿಯ ಗರ್ಜನೆ ಕೇಳಿ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗೆ ಅರವಳಿಕೆ ಮದ್ದು ನೀಡಿದರು, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಹುಲಿಗೆ ಯಾವುದೇ ತೊಂದರೆ ಆಗದಂತೆ ರಕ್ಷಿಸಿದ್ದಾರೆ.
6 ತಿಂಗಳ ಗಂಡು ಹುಲಿಯನ್ನ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು.
ಹೆಚ್ ಡಿ ಕೋಟೆ: ಹೆಚ್ ಡಿ ಕೋಟೆ ತಾಲೂಕು ಆಡಳಿತ ಸೌಧದಲ್ಲಿ ಬಹಳಷ್ಟು ಕೆಲಸ ಕಾರ್ಯಗಳು ಸದಾ ಇದ್ದೇ ಇರುತ್ತದೆ,ಸುತ್ತಮುತ್ತಲ ಗ್ರಾಮಗಳ ಜನರು,ರೈತರು ಹೀಗೆ ಯಾರಾದರೂ ಬರುತ್ತಲೇ ಇರುತ್ತಾರೆ.
ಆದರೆ ಈ ತಾಲೂಕು ಸೌಧ ಹೊರಗಿಂದ ನೋಡಲು ಚೆನ್ನಾಗಿಯೇ ಇದೆ.ಮೇಲೆ ತಳುಕು ಒಳಗೆ ಹುಳುಕು ಎಂಬ ಗಾದೆ ಮಾತಿನಂತೆ ಆಗಿದೆ ಈ ಭವನ.
ಈ ಸೌಧದಲ್ಲಿ ಸರ್ಕಾರಿ ಕಾರ್ಯಕ್ರಮಗಳು ಸಭೆಗಳು ನಡೆಯುತ್ತದೆ.ಈ ಭವನದ ಹಾಲ್ ನಲ್ಲಿ ಅಚ್ಚುಕಟ್ಟಾಗಿ ಕುರ್ಚಿಗಳನ್ನು ಜೋಡಿಸಲಾಗಿದೆ, ವೇದಿಕೆಯೂ ಸಿದ್ದವಿರುತ್ತದೆ.
ಇದೆಲ್ಲಾ ಸರಿಯಾದುದೇ,ಒಳ್ಳೆಯದು ಕೂಡಾ,ಆದರೆ ಇಲ್ಲಿ ಕುಳಿತುಕೊಳ್ಳುವವರು ಮಾತ್ರ ಮೂಗು ಮುಚ್ಚಿಕೊಂಡಿರ ಬೇಕಾಗುತ್ತದೆ.
ಏಕೆಂದರೆ ಈ ಆಡಳಿತ ಸೌಧದ ಕೊಳಕು ನೀರು ಅಂದರೆ ಶೌಚಾಲಯಗಳ ನೀರು ಹರಿದು ಬರುವ ಪೈಪ್ ಒಡೆದು ಇದೇ ಹಾಲ್ ನಲ್ಲಿ ಸೇರಿ ರಾಡಿಯಾಗುತ್ತಿದೆ.
ಈ ಸಮಸ್ಯೆ ಈಗಿನದೇನಲ್ಲ,ಹಲವು ತಿಂಗಳು ಕಳೆದಿವೆ,ಕೊಳಕು ನೀರು ಹರಿಯುತ್ತಲೇ ಇದೇ.ಆದರೂ ಇದೇ ಹಾಲ್ ನಲ್ಲಿ ಸಭೆ,ಕಾರ್ಯಕ್ರಮಗಳು ನಡೆಯುತ್ತವೆ.ಈ ಗಲೀಜಿನಲ್ಲೇ ಅತಿಥಿಗಳು ,ಸದಸ್ಯರು ಕಳಿತುಕೊಳ್ಳಬೇಕು.ಆದರೂ ಈ ಗಲೀಜಿನ ಬಗ್ಗೆ ಇವರ ಗಮನ ಹರಿದಿಲ್ಲವೆ?.
ಇನ್ನಾ ತಲೂಕು ಕಚೇರಿಯ ಹಿರಿಯ ಅಧಿಕಾರಿಗಳು,ಜನಪ್ರತಿನಿಧಿಗಳು,ತಹಸೀಲ್ದಾರ್ ಅವರಿಗೆ ಇದರ ಬಗ್ಗೆ ಗೊತ್ತಿಲ್ಲವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಮನ ಸೆಳೆದಿದ್ದು ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಈ ವಿಷಯ ತಿಳಿಸಿದ್ದಾರೆ.
ಇನ್ನಾದರೂ ಈ ಸೌಧದ ಶೌಚಾಲಯದ ನೀರು ಹರಿಯುವ ಪೈಪ್ ಸರಿಪಡಿಸಿ ಇಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಹೆಚ್.ಡಿ.ಕೋಟೆ: ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂದು ಮುಖ್ಯಮಂತ್ರಿ ಅವರಿಂದ ಹಿಡಿದು ಎಲ್ಲಾ ಜನ ಪ್ರತಿನಿಧಿಗಳು ಭಾಷಣದಲ್ಲಿ ಹೇಳುತ್ತಲೇ ಇರುತ್ತಾರೆ ಆದರೆ ಇದು ಎಷ್ಟರಮಟ್ಟಿಗೆ ಫಲ ಕೊಟ್ಟಿದೆ?.
ಗ್ರಾಮೀಣ ಪ್ರದೇಶದ ಅದೆಷ್ಟೂ ಶಾಲೆಗಳು ಅದರಲ್ಲೂ ಸರ್ಕಾರಿ ಶಾಲೆಗಳು ಈಗಲೂ ಅಭಿವೃದ್ಧಿ ಕಾಣದೆ, ಮಕ್ಕಳ ಹಾಜರಾತಿ ಇಲ್ಲದೆ ಕನಿಷ್ಠಪಕ್ಷ ರಸ್ತೆ ಸಂಪರ್ಕವು ಇಲ್ಲದೆ ಸೊರಗುತ್ತಿವೆ. ಇದಕ್ಕೆ ಎಚ್ ಡಿ ಕೋಟೆ ತಾಲೂಕು ಅಣ್ಣೂರು ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಕ್ಕಾ ಉದಾಹರಣೆಯಾಗಿದೆ.
ಅಣ್ಣೂರು ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಸುಮಾರು ಹದಿನೈದು ವರ್ಷದ ಹಿಂದೆ ಹೊಸದಾಗಿ ನಿರ್ಮಿಸಲಾಗಿದೆ. ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಶ್ರಮಪಟ್ಟು ಸುಂದರವಾದ ಕೈ ತೋಟವನ್ನು ನಿರ್ಮಿಸಿದ್ದಾರೆ ಇಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ.
ಮಕ್ಕಳೇನೊ ಉತ್ಸಾಹದಿಂದ ಶಾಲೆಗೆ ಬರಲು ಸಿದ್ದರಾಗಿರುತ್ತಾರೆ, ಆದರೆ ಈ ಅಣ್ಣೂರು ಕಾಲೋನಿಯಿಂದಲೇ ಬಹಳಷ್ಟು ಮಕ್ಕಳು ಇಲ್ಲಿಗೆ ಬರುವುದರಿಂದ ಅವರಿಗೆ ಸರಿಯಾದ ರಸ್ತೆಯೇ ಇಲ್ಲ ಹಾಗಾಗಿ ಜಮೀನು, ಕಲ್ಲು ಮುಳ್ಳು ಹಾದಿಯಲ್ಲಿ ಬರಬೇಕಾಗಿದೆ.
ಎಚ್ ಡಿ ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು ಅವರಿಗೆ ಶಾಲೆ ವತಿಯಿಂದ ಈಗಾಗಲೇ ಹಲವು ಬಾರಿ ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕೆಂದು ಪತ್ರಗಳನ್ನು ಬರೆಯಲಾಗಿದೆ, ಆದರೆ ಯಾವುದೇ ಪ್ರಯೋಜನ ಆಗಿಲ್ಲ.
ಜೊತೆಗೆ ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕೂಡ ಈ ಶಾಲೆಯ ಬಗ್ಗೆ ಗಮನಹರಿಸುವ ಅತ್ಯಗತ್ಯವಿದೆ. ಕೂಡಲೇ ಶಾಸಕ ಅನಿಲ್ ಚಿಕ್ಕಮಾದು ಅವರು ಶಾಲೆಗೆ ಒಮ್ಮೆಯಾದರೂ ಭೇಟಿ ನೀಡಿ ಇಲ್ಲಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿ ಕೊಡುವ ಜರೂರತಿ ಇದೆ.
ಪಾಪ ಪುಣ್ಯಾತ್ಮರು ತಮ್ಮ ಹಾಡಿಯಲ್ಲಿ ಶಾಲೆ ಇರಬೇಕೆಂದು ತಮ್ಮ ಜಮೀನಿನ ಹತ್ತು ಗಂಟೆ ಜಾಗವನ್ನು ಶಾಲೆಗಾಗಿ ಬಿಟ್ಟುಕೊಟ್ಟಿದ್ದಾರೆ. ಆದರೆ ಈ ಶಾಲೆ ರಸ್ತೆಯ ಭಾಗವನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವುದರಿಂದ ಈಗ ಇಂತಹ ಒಂದು ಶಾಲೆಗೆ ರಸ್ತೆಯೇ ಇಲ್ಲದಿರುವುದು ನಿಜಕ್ಕೂ ದುರ್ದೈವ.
ರಸ್ತೆ ಇಲ್ಲದೆ ಈ ಶಾಲೆಗೆ ಹೋಗಿ ಬರಲು ಮಕ್ಕಳು, ಶಿಕ್ಷಕರು ಮತ್ತು ಶಾಲೆಗೆ ಬಿಸಿಯೂಟ ತರುವವರು,ಬಿಸಿ ಊಟದ ಸಾಮಗ್ರಿಗಳನ್ನು ಹೊತ್ತು ಬರುವವರಿಗೆ ಬಹಳ ತೊಂದರೆಯಾಗುತ್ತಿದೆ.
ಇನ್ನಾದರೂ ಈ ಸರ್ಕಾರಿ ಶಾಲೆಗೆ ಸರಿಯಾದ ರಸ್ತೆ ಸಂಪರ್ಕವನ್ನು ಕಲ್ಪಿಸಲು ಸರ್ಕಾರ ಮತ್ತು ಸ್ಥಳೀಯ ಆಡಳಿತ ಹಾಗೂ ಶಾಸಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ಗಮನ ಹರಿಸಬೇಕಿದೆ.
ಕೊಡಲೇ ಅಣ್ಣೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಸ್ತೆ ಮಾಡಿಕೊಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಒತ್ತಾಯಿಸಿದ್ದಾರೆ.
ಮುಖ್ಯ ಶಿಕ್ಷಕ ಗಿರೀಶ್ ಜಂತುಹುಳ ಮಾತ್ರೆ ಎಂದು ನಂಬಿಸಿ ಮತ್ತು ಬರುವ ಮಾತ್ರೆ ಕೊಟ್ಟು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಮುಖ್ಯ ಶಿಕ್ಷಕ ಗಿರೀಶ್ ಹಲವು ದಿನಗಳಿಂದ ಇದೇ ದುರ್ವರ್ತನೆ ತೋರಿಸುತ್ತಿದ್ದು ಸಾಕಷ್ಟು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ.
ಈ ಸಂಬಂಧ ಅದೇ ಶಾಲೆಯ ಶಿಕ್ಷಕರ ಬಳಿ ವಿದ್ಯಾರ್ಥಿನಿಯರು ದೂರು ಹೇಳಿದ್ದು ಪೋಷಕರಿಗೂ ಮಾಹಿತಿ ನೀಡಿದ್ದರು. ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಬಳಿಕ ಗಿರೀಶ್ ನಾಪತ್ತೆಯಾಗಿದ್ದಾನೆ.
ಎಚ್.ಡಿ.ಕೋಟೆ: ತಾಯಿಯೇ ದೇವರೆಂದು ನಾವೆಲ್ಲ ನಂಬಿದ್ದೇವೆ,ಆದರೆ ಇಲ್ಲೊಬ್ಬೊಳು ಕೆಟ್ಟ ಅಮ್ಮ ತಾನು ಹೆತ್ತ ಮಗುವನ್ನೆ ಚರಂಡಿಯಲ್ಲಿ ಬಿಸಾಡಿ ಹೋಗಿರುವ ಹೇಯ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆಯ ರಾಜೇಗೌಡನ ಹುಂಡಿ ಗ್ರಾಮದ ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ.
ಆ ಪುಟ್ಟ ಕಂದ ಕೊರೆವ ಚಳಿಯಲ್ಲಿ ಇಡೀ ರಾತ್ರಿ ಬರಿಮೈಯಲ್ಲಿ ಚರಂಡಿ ನೀರಿನಲ್ಲಿ ಹಸಿವಿನಲ್ಲಿ ಒದ್ದಾಡಿದೆ.
ಬೆಳಗಿನ ಜಾವ ಮಗುವಿ ಅಳು ಕೇಳಿ ಗ್ರಾಮಸ್ಥರು ಮಮ್ಮಲ ಮರುಗಿ ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ,ತಕ್ಷಣ ಸ್ಥಳಕ್ಕೆ ಬಂದು ಮಗುವನ್ನುಎತ್ತಿ ಪ್ರಾಥಮಿಕ ಆರೈಕೆ ಮಾಡಿ ಎಚ್.ಡಿ.ಕೋಟೆ ತಾಯಿ ಮಗು ಆರೈಕೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಆಶಾ ಕಾರ್ಯಕರ್ತೆ ಸರೋಜಮ್ಮ ಮತ್ತು ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ ಅವರ ಮಾನವೀಯತೆಯನ್ನ ಸ್ಥಳೀಯರು ಪ್ರಶಂಸಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಎಚ್.ಡಿ.ಕೋಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.