ನ್ಯಾಯಬೆಲೆ ಅಂಗಡಿಗಳಿಗೆ ಕಲಬೆರಕೆ ರಾಗಿ ಸರಬರಾಜು: ಕ್ರಮಕ್ಕೆ ರಾಜೇಂದ್ರ ಸೂಚನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ನ್ಯಾಯಬೆಲೆ ಅಂಗಡಿಗಳಿಗೆ ಕಲಬೆರಕೆ ರಾಗಿ ಸರಬರಾಜಾಗುತ್ತಿರುವ ಬಗ್ಗೆ
ದೂರುಗಳು ಕೇಳಿಬರುತ್ತಿದ್ದು,ಕೂಡಲೆ ಕ್ರಮ ವಹಿಸಿ ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ ಸೂಚಿಸಿದರು.

ಪಡಿತರದಾರರಿಗೆ ಅದೇ ಕಲಬೆರಕೆ ರಾಗಿ ವಿತರಣೆಯಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ ಕೂಡಲೇ ಪರಿಶೀಲಿಸಿ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು‌

ಪಟ್ಟಣದ ಕೊಳ್ಳೇಗಾಲ ಮೋಳೆಯ ಸರ್ಕಾರಿ ಶಾಲೆ ಆವರಣದಲ್ಲಿ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಮ್ಮಿಕೊಂಡಿದ್ದ ಪಂಚ ಗ್ಯಾರೆಂಟಿ ಯೋಜನೆ ನಡೆ, ಹಳ್ಳಿಯ ಕಡೆ, ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮ ಮತ್ತು ವಾರ್ಷಿಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಬಹುತೇಕ ನ್ಯಾಯಬೆಲೆ ಅಂಗಡಿಗಳಿಗಲ್ಲಿ ಪಡಿತರ ಜೊತೆಗೆ ಇದೇ ರಾಗಿಯನ್ನು ವಿತರಿಸುತ್ತಿದ್ದಾರೆ ಎಂದು ಪಡಿತರದಾರರು ಆರೋಪಿಸುತ್ತಿದ್ದಾರೆ. ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಗುಣಮಟ್ಟದ ಆಹಾರ ನೀಡಲು ಶ್ರಮಿಸುತ್ತಿದೆ. ಆದರೆ ಕಲಬೆರಕೆ ರಾಗಿ ವಿತರಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕೂಡಲೇ ಪರಿಶೀಲಿಸಿ ಕ್ರಮ ವಹಿಸಿ ಎಂದು ಆಹಾರ ಇಲಾಖೆ ಶಿರಸ್ತೇದಾರ್ ವಿಶ್ವನಾಥ್ ರವರಿಗೆ ಖಡಕ್ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು ಒಂದೆರಡು ಅಂಗಡಿಗಳಲ್ಲಿ ಕಲಬೆರಕೆ ರಾಗಿ ಸರಬರಾಜಾಗಿರುವ ಬಗ್ಗೆ ಮಾಹಿತಿ ಇದೆ, ಕೂಡಲೇ ಪರಿಶೀಲಿಸಿ ಆ ನ್ಯಾಯಬೆಲೆ ಅಂಗಡಿಗಳಲ್ಲಿ ಬೇರೆ ರಾಗಿ ವಿತರಣೆ ಮಾಡವುದಾಗಿ ಅಥವಾ ರಾಗಿಯ ಬದಲು ಅಕ್ಕಿ ವಿತರಣೆ ಮಾಡಲಾಗುವುದು ಪಡಿತರದಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಗೃಹ ಜ್ಯೋತಿ ಯೋಜನೆಗೆ ಇನ್ನೂ 40 ಫಲಾನುಭವಿಗಳು ನೊಂದಣಿ ಮಾಡಿಸಿಲ್ಲ ಎಂದು ಬೆಸ್ಕಾಂ ಎಇಇ ರಾಜು ಸಭೆಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಾಹಕಿ ಶಿವಲೀಲಾ ಇನ್ನೂ 24 ಮಂದಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಿಲ್ಲ ಎಂದು ತಿಳಿಸಿದರು.

ಕೂಡಲೇ ಬಾಕಿ ಇರುವ ಫಲಾನುಭವಿಗಳನ್ನು ಯೋಜನೆಗೆ ನೊಂದಣಿ ಮಾಡಿಸಿ ಎಂದು ಅಧ್ಯಕ್ಷ ರಾಜೇಂದ್ರ ಸೂಚಿಸಿದರು ಹಾಗೂ ಕೊಳ್ಳೇಗಾಲ ಪಟ್ಟಣದಲ್ಲಿರುವ ಮೋಳೆ ಬಡಾವಣೆಯ ವಿದ್ಯುತ್ ಸಂಪರ್ಕವನ್ನು ಚಿಲಕವಾಡಿ ವಿಭಾಗಕ್ಕೆ ಸೇರಿಸಿದ್ದು ಆ ಸಂಪರ್ಕವನ್ನು ಪಟ್ಟಣ ವಿಭಾಗಕ್ಕೆ ಸೇರಿಸುವಂತೆ ಬೆಸ್ಕಾಂ ಎಇಇ ರಾಜು ಅವರಿಗೆ ತಾಕೀತು ಮಾಡಿದರು.

ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಪ್ರಸಕ್ತ ವರ್ಷದ ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾ.ಪಂ. ಇ.ಒ ಗುರು ಶಾಂತಪ್ಪ ಬೆಳ್ಳುಂಡಗಿ, ಸದಸ್ಯರುಗಳಾದ ರಾಜುಗೌಡ, ಶಿವಕುಮಾರ, ಶಾಂತರಾಜು, ನಿಂಗರಾಜು, ಪರಮೇಶ್, ನಾರಾಯಣ, ಬಾಬು, ಪರಶಿವ, ನಾಗವೇಣಿ ಹಾಗೂ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ನ್ಯಾಯಬೆಲೆ ಅಂಗಡಿಗಳಿಗೆ ಕಲಬೆರಕೆ ರಾಗಿ ಸರಬರಾಜು: ಕ್ರಮಕ್ಕೆ ರಾಜೇಂದ್ರ ಸೂಚನೆ Read More