ಬಡವರ ಪಾಲಿಗೆ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ಇದ್ದರೂ ಇಲ್ಲದಂತೆ!

ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ಸುಸಜ್ಜಿತವಾಗಿದ್ದು ಎಲ್ಲಾ ಸೌಲಭ್ಯಗಳನ್ನು ಉಳ್ಳ ಒಂದು ದೊಡ್ಡ ಆಸ್ಪತ್ರೆ. ಆದರೆ ಈ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಸರ್ಕಾರವೇನೊ ಬಡಜನರಿಗೆ ಉತ್ತಮ ಆರೋಗ್ಯ ಭಾಗ್ಯ ಸಿಗಲಿ ಎಂದು ಎಲ್ಲಾ ಪಟ್ಟಣಗಳಲ್ಲೂ ಉತ್ತಮವಾದ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ಕೊಟ್ಟಿದೆ,ಜತೆಗೆ ಉತ್ತಮ ಸಲಕರಣೆಗಳು, ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.

ಆದರೆ ಈ‌ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರುಗಳು, ನರ್ಸ್ ಗಳು ಎಲ್ಲರೂ ಇದ್ದಾರೆ ಆದರೆ ಸಮಯಕ್ಕೆ ಸರಿಯಾಗಿ ಬರುವುದೂ ಇಲ್ಲ,ಒಂದೊಮ್ಮೆ ಬಂದರೂ ಅತ್ಯವಶ್ಯಕವಾದಾಗ ಇವರುಗಳು ಸಿಗುವುದೇ ಇಲ್ಲ.

ವೈದ್ಯರು ತಮ್ಮ ಇಷ್ಟ ಬಂದ ವೇಳೆಗೆ ಬರುತ್ತಾರೆ, ಒಮ್ಮೊಮ್ಮೆ 12,1 ಗಂಟೆ ಆದರೂ ಬರುವುದಿಲ್ಲ,ಇವರನ್ನು ಕೇಳುವವರು ಯಾರು ಇಲ್ಲ.ರೋಗಿಗಳು ಕ್ಯೂನಲ್ಲಿ ನಿಂತು ಕಾಯುತ್ತಿರುತ್ತಾರೆ ಅಷ್ಟೆ.ಇಲ್ಲಿ ವೈದ್ಯಾಧಿಕಾರಿಗಳು ಇದ್ದಾರೆಯೊ ಇಲ್ಲವೊ ಎಂಬ ಅನುಮಾನ ಕಾಡುತ್ತಿದೆ.

ಬಿಪಿಎಲ್ ಕಾರ್ಡ್ ಇದ್ದವರು ಅಂದರೆ ಕಡುಬಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನ್, ಎಕ್ಸರೇ ಮತ್ತಿತರ ಸೌಲಭ್ಯಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗಬೇಕು. ಆದರೆ ಇಲ್ಲಿ ಬಡವರನ್ನೂ ಬಿಡದೆ ಕಿತ್ತು ತಿನ್ನುತ್ತಾರೆ.ನೂರು,ಇನ್ನೂರು ರೂಪಾಯಿ ತೆಗೆದುಕೊಳ್ಳುತ್ತಾರೆ. ಹೀಗಾದರೆ ಕಡುಬಡವರು ಹಣ ಎಲ್ಲಿಂದ ತರಬೇಕು ದೇವರು ವರ ಕೊಟ್ಟರು ಪೂಜಾರಿ ಕೊಡುವುದಿಲ್ಲ ಎಂಬ ಗಾದೆಯಂತೆ ಈ ಆಸ್ಪತ್ರೆಯ ಕಥೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ‌ ಹುಣಸೂರು ತಾಲೂಕು ಅಧ್ಯಕ್ಷ‌ ಚಲುವರಾಜು‌ ಗಂಭೀರ ಆರೋಪ ಮಾಡಿದ್ದಾರೆ.

ನಾನೇ ಖುದ್ದಾಗಿ ನಮ್ಮ ಕಡೆಯ ರೋಗಿಯೊಬ್ಬರನ್ನು ಬಿಪಿಎಲ್ ಕಾರ್ಡ್ ತೋರಿಸಿಯೇ ಪಿರಿಯಾಪಟ್ಟಣದ ಈ‌ ಸರ್ಕಾರಿ ಆಸ್ಪತ್ರೆಗೆ ‌ಕರೆದುಕೊಂಡು ಹೋಗಿದ್ದೆ. ಅವರಿಗೆ ಔಷಧಿಯನ್ನು ಚೀಟಿಯಲ್ಲಿ ವೈದ್ಯರು ಬರೆದುಕೊಟ್ಟರು.ಆದರೆ ಆಸ್ಪತ್ರೆಯಲ್ಲಿ ಔಷಧಿ ವಿಭಾಗದವರು ಔಷಧಿ ಮುಗಿದಿದೆ,ಹೊರಗಡೆ ತೆಗೆದುಕೊಳ್ಳಿ ಎಂದು ಖಾಸಗಿ ಕ್ಲಿನಿಕ್ ಗಳಿಗೆ ಬರೆದುಕೊಡುತ್ತಾರೆ. ಜೊತೆಗೆ ಸ್ಕ್ಯಾನ್ ಮತ್ತಿತರ ಸೌಲಭ್ಯಗಳನ್ನು ಹೊರಗಡೆ ಮಾಡಿಸಿ ಎಂದು ಹೇಳಿದ್ದಾರೆ. ನಾನೇ ಖುದ್ದಾಗಿ ಇದನ್ನು ಅನುಭವಿಸಿದ್ದೇನೆ ಎಂದು ತಮ್ಮ ಬೇಸರವನ್ನು ವರ್ಷಿಣಿ ನ್ಯೂಸ್ ವೆಬ್‌ ಪೋರ್ಟಲ್ ನೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನು ಈ ಆಸ್ಪತ್ರೆಯ ವಾಚ್ ಮ್ಯಾನ್ ಅಂತೂ ತಾನೇ ಸರ್ವಾಧಿಕಾರಿ ಅಂತೆ ಆಡುತ್ತಾರೆ. ಯಾರೇ ಬಂದರೂ ಧಮ್ಕಿ ಹಾಕುವುದು,ಡಾಕ್ಟರ್ ಇಲ್ಲ ಹೋಗಿ ನಾಳೆ ಬನ್ನಿ ಎಂದು ಹೇಳುವುದು ಮಾಡುತ್ತಾರೆ.ಇಲ್ಲಿನ ವೈದ್ಯರು ಕೂಡಾ ಎಲ್ಲ ರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ ಹಿರಿಯ ನಾಗರಿಕರು ಬಂದಾಗ ಅವರಿಗೆ ಬೇಸರವಾಗುವುದಿಲ್ಲವೆ ಎಂದು ‌ಅವರು ಪ್ರಶ್ನಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಉತ್ತಮ ದರ್ಜೆಗೆ ಏರಬೇಕು ಕಟ್ಟ ಕಡೆಯ ವ್ಯಕ್ತಿಗೂ ಅತ್ಯುತ್ತಮ ಆರೋಗ್ಯ ಸೌಲಭ್ಯ ಸಿಗಬೇಕು ಎಂದು ಸರ್ಕಾರ ಏನೆಲ್ಲಾ ಸೌಲಭ್ಯಗಳನ್ನು ಕೊಟ್ಟರೂ ಇಂತಹ ಆಸ್ಪತ್ರೆಯ ವೈದ್ಯರು,ದಾದಿಯರು,ನೌಕರರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಲ್ಲಿ ಎಲ್ಲವೂ ಕಮಿಷನ್ ನಿಂದಲೇ ನಡೆಯುತ್ತಿದೆ ಎಂದು ಚೆಲುವರಾಜು ದೂರಿದ್ದಾರೆ.

ಪ್ರಿಯಾಪಟ್ಟಣದ ಶಾಸಕರು ಆದ ಸಚಿವ ಕೆ ವೆಂಕಟೇಶ್ ಅವರು ಕೂಡಲೇ ಈ ಆಸ್ಪತ್ರೆಯ ಬಗ್ಗೆ ಗಮನಹರಿಸಬೇಕು ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗ್ರಾಮಾಂತರ ಪ್ರದೇಶಗಳ ಆಸ್ಪತ್ರೆ ಕಡೆಗೆ ಒಮ್ಮೆಯಾದರೂ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕು, ಬಡವರನ್ನು ಸರಿಯಾಗಿ ನೋಡಿಕೊಳ್ಳಬೇಕು ಉತ್ತಮ ಔಷಧೋಪಚಾರಗಳನ್ನು ಉಚಿತವಾಗಿ ನೀಡಬೇಕೆಂದು ತಾಕೀತು ಮಾಡಲಿ ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಬಡವರ ಪಾಲಿಗೆ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ಇದ್ದರೂ ಇಲ್ಲದಂತೆ! Read More

ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದರೂ ಮಿಷನ್ ಗಳಿಗೆ ಗ್ರಹಣ!

ಹುಣಸೂರು: ಹುಣಸೂರಿನ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆಯನ್ನು ಹಿಂದೆ ದಿವಂಗತ ಡಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಆರೋಗ್ಯ ಭಾಗ್ಯಕ್ಕಾಗಿ ನಿರ್ಮಿಸಿದ್ದರು.

ಈ ಹುಣಸೂರಿನ ಸರ್ಕಾರಿ ಆಸ್ಪತ್ರೆ ಹುಣಸೂರು ಪಟ್ಟಣ ಹಾಗೂ ಸುತ್ತಮುತ್ತಲ ಬಹಳಷ್ಟು ಗ್ರಾಮಗಳ ಜನರಿಗೆ ಆರೋಗ್ಯ ಭಾಗ್ಯ ನೀಡುತ್ತಾ ಸಂಜೀವಿನಿ ಯಾಗಿದೆ.

ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯರು, ಉತ್ತಮ ಸಿಬ್ಬಂದಿಗಳು, ನರ್ಸ್ ಗಳು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಈ ಆಸ್ಪತ್ರೆ ಹುಣಸೂರು ತಾಲೂಕಿನಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ.

ಉತ್ತಮ ವೈದ್ಯರಿಗೆ ತಕ್ಕಂತೆ ಉತ್ತಮ ಸಲಕರಣೆಗಳು ಮತ್ತು ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಸಿಕ್ಕಿದ್ದಿದ್ದರೆ ಇನ್ನು ಅದೆಷ್ಟೋ ಮಂದಿಗೆ ಕಾಯಿಲೆಗಳು ಶೀಘ್ರವಾಗಿ ಉಚಿತವಾಗಿ ಗುಣವಾಗುತ್ತಿತ್ತು.

ಆದರೆ ಈ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಿಷನ್, ಎಕ್ಸರೇ ಮಿಷನ್ ಮತ್ತಿತರ ಉಪಕರಣಗಳು ಕೆಟ್ಟುಹೋಗಿವೆ. ಈ ಮಿಷನ್ ಗಳು ಕೆಟ್ಟು ಮೂರ್ನಾಲ್ಕು ತಿಂಗಳುಗಳಾಗಿದ್ದು,ಗ್ರಹಣ ಹಿಡಿದಿದೆ.

ಈ ಯಂತ್ರಗಳು ಕೆಟ್ಟು ನಿಂತಿರುವುದರಿಂದ ಅನಿವಾರ್ಯವಾಗಿ ಇಲ್ಲಿನ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಬರೆದುಕೊಡುತ್ತಿದ್ದಾರೆ.

ಹಳ್ಳಿಯ ಜನರಿಗೆ ಉಪಯೋಗವಾಗಲಿ ಎಂದು ಮಾಜಿ ಮುಖ್ಯಮಂತ್ರಿಗಳು ಈ ಆಸ್ಪತ್ರೆಯನ್ನು ಕಟ್ಟಿಸಿದ್ದರು.ಆದರೆ ಯಂತ್ರೋಪಕರಣಗಳ ಸೌಲಭ್ಯ ಲಭ್ಯವಾಗದೆ ಜನರು ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ.

ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರ ಹಣ ಮತ್ತು ಸಮಯ ಎರಡು ವ್ಯರ್ಥವಾಗುತ್ತಿದೆ ಅಲ್ಲದೆ ಬಹಳಷ್ಟು ಜನ ಬಡವರೇ ಇರುವುದರಿಂದ ಕಾಯಿಲೆ ಗುಣಪಡಿಸಿಕೊಳ್ಳಲು ಬೇರೆ ಸರ್ಕಾರಿ ಆಸ್ಪತ್ರೆಗೆ ‌ಅಥವಾ ಮೈಸೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹುಣಸೂರಿನ ಜನಪ್ರತಿನಿಧಿಗಳು ಅದರಲ್ಲೂ ಮುಖ್ಯವಾಗಿ ಇಲ್ಲಿನ ಶಾಸಕರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳೀಯ ಜನರಿಗೆ ಜರೂರಾಗಿ ಬೇಕಾಗಿರುವ ಸ್ಕ್ಯಾನಿಂಗ್ ಮಿಷನ್, ಎಕ್ಸರೆ ಮಿಷನ್ ಮತ್ತಿತರ ಉಪಕರಣಗಳನ್ನು ಹೊಸದಾಗಿ ತರಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಸ್ಕ್ಯಾನಿಂಗ್ ಮಿಷನ್, ಎಕ್ಸರೆ ಮಿಷನ್
ಗಳು ಆಗಾಗ ಕೆಡುತ್ತಲೇ ಇರುತ್ತವೆ, ಹಲವು ಬಾರಿ ರಿಪೇರಿ ಮಾಡಿಸಿ ಅದನ್ನೇ ತಂದು ಇಲ್ಲಿ ಹಾಕಲಾಗಿದೆ.ಹೀಗೆ ಪದೇ,ಪದೇ ರಿಪೇರಿ ಮಾಡಿಸುವ‌ ಬದಲು ಹೊಸದಾದ ಮಿಷನ್ ಗಳನ್ನು ಸರ್ಕಾರಕ್ಕೆ ಮಾಹಿತಿ ನೀಡಿ ಇಲ್ಲಿನ ಜನ ಪ್ರತಿನಿಧಿಗಳು ತರಿಸಿ ಹಾಕಿದರೆ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಉಪಕಾರವಾಗುತ್ತದೆ. ಖಾಸಗಿ ಆಸ್ಪತ್ರೆಗೆ ಹಣ ತೆರುವುದು ತಪ್ಪುತ್ತದೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲೇ ಉತ್ತಮ ಸೌಲಭ್ಯ ಸಿಗುತ್ತದೆ.

ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದರೂ ಮಿಷನ್ ಗಳಿಗೆ ಗ್ರಹಣ! Read More

ಸರ್ಕಾರಿ ಆಸ್ಪತ್ರೆಗಳಿಗೆ ಅಪರ ಜಿಲ್ಲಾಧಿಕಾರಿಡಾ. ಪಿ.ಶಿವರಾಜು ದಿಢೀರ್ ಭೇಟಿ

ಮೈಸೂರು: ಮೈಸೂರು ತಾಲೂಕಿನ ಹಲವು
ಸರ್ಕಾರಿ ಆಸ್ಪತ್ರೆಗಳಿಗೆ ಅಪರ ಜಿಲ್ಲಾಧಿಕಾರಿ
ಡಾ. ಪಿ.ಶಿವರಾಜು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಮೈಸೂರು ತಾಲೂಕಿನ ತಾಲೂಕು ಉಸ್ತುವಾರಿ ಅಧಿಕಾರಿಯೂ ಆಗಿರುವ ಡಾ.ಪಿ. ಶಿವರಾಜು ಅವರು ತಾಲೂಕಿನ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಗೆ ಉತ್ತಮವಾದ ವೈದ್ಯಕೀಯ ಸೇವೆ , ಔಷಧೋಪಚಾರಗಳನ್ನು ಸಮರ್ಪಕವಾಗಿ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ
ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗಾಗಿ ಹಾಗೂ ರೋಗಿಗಳಿಗೆ ಸರ್ಕಾರಿ ಸೇವೆಗಳು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಶಿವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ರೋಗಿಗಳು ಮತ್ತು ಅವರ ಕುಟುಂಬದವರ ಜೊತೆ ಔಷಧೋಪಚಾರ ಕುರಿತು ಚರ್ಚೆ ನಡೆಸಿದರು.

ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ರೋಗಿಗಳಿಗೆ ಉತ್ತಮವಾದ ವೈದ್ಯಕೀಯ ಸೇವೆ ಮತ್ತು ಉಪಚಾರ ಔಷಧೋಪಚಾರ
ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು

ಈ ಸಂದರ್ಭದಲ್ಲಿ ಟಿಹೆಚ್ಒ ಡಾ. ಪುಟ್ಟತಾಯಮ್ಮ ಹಾಗು ವೈದ್ಯರುಗಳು ಹಾಜರಿದ್ದರು.

ಸರ್ಕಾರಿ ಆಸ್ಪತ್ರೆಗಳಿಗೆ ಅಪರ ಜಿಲ್ಲಾಧಿಕಾರಿಡಾ. ಪಿ.ಶಿವರಾಜು ದಿಢೀರ್ ಭೇಟಿ Read More