ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಮಂಡಲಗಳ ಪ್ರತಿಭಟನೆ

ಮೈಸೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಶನಿವಾರ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಮಂಡಲಗಳವರು ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿ ರೈತರಿಗೆ ಅಪಾರ ನಷ್ಟವಾಗಿದೆ,ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಖುರ್ಚಿ ಕಿತ್ತಾಟದಲ್ಲಿ ನಿರತವಾಗಿದೆ, ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಲು ವಿಳಂಬ ನೀತಿ ತೋರಿದ್ದು ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ದರ ದೊರಕುತ್ತಿಲ್ಲ, ರಾಗಿ ಹಾಗೂ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಪೈ. ಟಿ. ರವಿ ಲಕ್ಷ್ಮೀಪುರ, ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ರೈತ ಮೋರ್ಚಾ ನಗರಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಈರಪ್ಪ, ಉಪಾಧ್ಯಕ್ಷ ನಾಣಿಗೌಡ, ಹಿರಿಯ ಮುಖಂಡರಾದ ಎಸ್ ಡಿ ಮಹೇಂದ್ರ, ಹಿನಕಲ್ ಶ್ರೀನಿವಾಸ್, ಚಾಮುಂಡೇಶ್ವರಿ ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷರಾದ ಚಂದ್ರಶೇಖರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ. ರಾಘವೇಂದ್ರ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಅಪ್ಪಾಜಿಗೌಡ, ಶಿವಕುಮಾರ್ ಚಿಕ್ಕಕಾನ್ಯ, ಈರೇಗೌಡ, ಉಪಾಧ್ಯಕ್ಷರಾದ ಶ್ರೀಕಂಠಸ್ವಾಮಿ, ಬಿ.ಸಿ.ಶಶಿಕಾಂತ್, ಸುನಿಲ್ ದಾರಿಪುರ, ಮುಖಂಡರಾದ ಮೋನಿಕಾ, ನಾರಾಯಣ, ಮಧು ಬ್ಯಾತಹಳ್ಳಿ, ಚೇತನ್, ರೈತ ಮೋರ್ಚಾ ಪದಾಧಿಕಾರಿಗಳಾದ ದೇವರಾಜ್, ಮಂಜುನಾಥ್ ಅರಸ್, ಗೋಪಾಲ್ ಅಯ್ಯಂಗಾರ್,
ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಎಸ್ ಮಹೇಶ್ ಕುಮಾರ್, ಪುಟ್ಟಮ್ಮಣ್ಣಿ, ವಸುಮತಿ, ರಾಧಾ, ಉಮೇಶ್, ಪ್ರದೀಪ್, ಸಂಪ್ರೀತ್, ಸದಾಶಿವರಾವ್, ಶ್ರೀರಂಗ, ಕೃಷ್ಣಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಮಂಡಲಗಳ ಪ್ರತಿಭಟನೆ Read More

ತನ್ವೀರ್ ಸೇಠ್ ಮನವಿಗೆ ಸ್ಪಂದನೆ:ಉದಯಗಿರಿಗೆ ಹೆಚ್ಚುವರಿ ಪೊಲೀಸ್‌ ಠಾಣೆ

ಮೈಸೂರು: ಮೈಸೂರಿನ ಉದಯಗಿರಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಠಾಣೆ ಸ್ಥಾಪಿಸಲು ಅನುಮೋದನೆ ನೀಡಿದೆ.

ಉದಯಗಿರಿಯಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಯ ಅಗತ್ಯವನ್ನು‌ ಶಾಸಕ ತನ್ವೀರ್‌ಸೇಠ್ ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.ಇದಕ್ಕೆ‌ ಸರ್ಕಾರ ‌ಸ್ಪಂದಿಸಿದೆ.

ನ.18 ರಂದು ಗೃಹ ಇಲಾಖೆ ಹೊರಡಿಸಿದ ಅಧಿಕೃತ ಅಧಿಸೂಚನೆಯು ಅಸ್ತಿತ್ವದಲ್ಲಿರುವ ಉದಯಗಿರಿ ಪೊಲೀಸ್ ಠಾಣೆಯನ್ನು ಉದಯಗಿರಿ ಉತ್ತರ ಮತ್ತು ಉದಯಗಿರಿ ದಕ್ಷಿಣ ಎಂದು ಎರಡು ಘಟಕಗಳಾಗಿ ವಿಭಜಿಸಲು ನಿರ್ಧರಿಸಿದೆ.

ಈಗ ಇರುವ ಪೊಲೀಸ್ ಠಾಣೆಯನ್ನು ಉದಯಗಿರಿ ದಕ್ಷಿಣ ಎಂದು ಮರು ನಾಮಕರಣ ಮಾಡಲಾಗುವುದು ಮತ್ತು ಹೊಸದಾಗಿ ರಚಿಸಲಾದ ಘಟಕವನ್ನು ಉದಯಗಿರಿ ಉತ್ತರ ಪೊಲೀಸ್ ಠಾಣೆ ಎಂದು ಕರೆಯಲಾಗುತ್ತದೆ.

ಸರ್ಕಾರದ ಆದೇಶದ ಪ್ರಕಾರ, ಎರಡೂ ಠಾಣೆಗಳಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ನಾಲ್ವರು ಸಬ್ ಇನ್ಸ್‌ಪೆಕ್ಟರ್‌ಗಳು, ಎಂಟು ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳು, ೨೪ ಹೆಡ್ ಕಾನ್ಸ್‌ಟೇಬಲ್‌ಗಳು ಮತ್ತು ೪೮ ಕಾನ್ಸ್‌ಟೇಬಲ್‌ಗಳನ್ನು ನೇಮಿಸಲಾಗುತ್ತದೆ.

ಹೆಚ್ಚುವರಿಯಾಗಿ ಉದಯಗಿರಿ ಉತ್ತರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಬಲಪಡಿಸಲು ಇಬ್ಬರು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳಲಿದೆ.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ರಾಜೀವ್‌ನಗರ ೨ನೇ ಹಂತದ ಗುಪ್ತಾ ಸ್ಟೋರ್ಸ್ ಬಳಿ ಹೊಸ ಠಾಣೆಯನ್ನು ನಿರ್ಮಿಸಲು ಖಾಸಗಿ ಕಟ್ಟಡವನ್ನು ಗುರುತಿಸಿದ್ದಾರೆ.

ಬಾಡಿಗೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಕ್ಷಣವೇ ಠಾಣೆಯು ಕಾರ್ಯಾರಂಭ ಮಾಡಲಿದೆ.

ತನ್ವೀರ್ ಸೇಠ್ ಮನವಿಗೆ ಸ್ಪಂದನೆ:ಉದಯಗಿರಿಗೆ ಹೆಚ್ಚುವರಿ ಪೊಲೀಸ್‌ ಠಾಣೆ Read More

ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು

ಬೆಂಗಳೂರು: ಜನತೆಯನ್ನು ಕುಡುಕರನ್ನಾಗಿಸುವ ಸರ್ಕಾರದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮಧ್ಯ ಹಾಗೂ ಡ್ರಗ್ಸ್ ಹಾವಳಿಯಿಂದಾಗಿ ಯುವಜನತೆ ಮತ್ತು ಸಮಾಜ ನೈತಿಕ ಅಧಃಪತನಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಸರ್ಕಾರವು ಮತ್ತಷ್ಟು ಮಧ್ಯದ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

ಪಕ್ಕದ ತಮಿಳುನಾಡು, ಕೇರಳ ಇನ್ನಿತರ ರಾಜ್ಯಗಳಲ್ಲಿ ಊರಾಚೆ ಮಧ್ಯದ ಅಂಗಡಿಗಳು ಇವೆ. ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಪೂರ್ಣ ಮದ್ಯಪಾನ ನಿಷಿದ್ಧವಾಗಿದೆ.ಈ ಹಿಂದೆ ಬಂಗಾರಪ್ಪ ಸರ್ಕಾರದ ಅವಧಿಯಲ್ಲಿ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಲೈಸೆನ್ಸ್ ಗಳನ್ನು ನೀಡಿದ ಪರಿಣಾಮದಿಂದ ಈಗಾಗಲೇ ಸಮಾಜವು ದುಷ್ಪರಿಣಾಮವನ್ನು ಎದುರಿಸುವಂತಾಗಿದೆ ಎಂದು ಚಂದ್ರು‌ ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರವು ಯುವಜನತೆಯನ್ನು ನಶೆ ಮುಕ್ತರನ್ನಾಗಿಸಲು ಅಲ್ಲಲ್ಲಿ ಕೇಂದ್ರಗಳನ್ನು ತೆರೆಯುವುದನ್ನು ಬಿಟ್ಟು ಸರ್ಕಾರವೇ ಎಂ ಎಸ್ ಐ ಎಲ್ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಮಧ್ಯದ ಅಂಗಡಿಗಳನ್ನು ತೆರೆದು ಜನತೆಯನ್ನು ಮತ್ತಷ್ಟು ಕುಡುಕರನ್ನಾಗಿಸುತ್ತಿದೆ. ಅಲ್ಲದೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ವೈಫಲ್ಯಗಳಿಂದಾಗಿ ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮಧ್ಯ ರಾಜಾರೋಶವಾಗಿ ಸರಬರಾಜಾಗುತ್ತಿದೆ. ಇವುಗಳನ್ನು ತಡೆಗಟ್ಟುವುದನ್ನು ಬಿಟ್ಟು ಮುಖ್ಯಮಂತ್ರಿಗಳೇ ಮುಂದೆ ನಿಂತು ತಮ್ಮ ಕಮಿಷನ್ ಧನದಾಹದಿಂದ ಮತ್ತಷ್ಟು ಲೈಸೆನ್ಸ್ ಗಳನ್ನು ವಿತರಿಸಲು ಹೊರಟಿರುವುದನ್ನು ರಾಜ್ಯದ ಮಹಿಳೆಯರು ಸೇರಿದಂತೆ ಯಾರು ಸಹ ಒಪ್ಪುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಮಾಜವನ್ನು ಹಾಳು ಗೆಡವಿ ಅಬಕಾರಿ ಆದಾಯದಿಂದಲೇ ಸರ್ಕಾರವನ್ನು ನಡೆಸಲು ಹೊರಟಿರುವ ಮುಖ್ಯಮಂತ್ರಿಗಳ ಆರ್ಥಿಕ ನೀತಿಯ ವಿರುದ್ಧ ಆಮ್ ಆದ್ಮಿ ಪಕ್ಷವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.

ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು Read More

ಬೆಲೆ ಇಳಿಕೆ ಯಾವಾಗ:ಸರ್ಕಾರಕ್ಕೆ ಅಶೋಕ್ ಪ್ರಶ್ನೆ

ಬೆಂಗಳೂರು: ಜಿಎಸ್ಟಿ ಸುಧಾರಣೆ ನಂತರ ದಿನಬಳಕೆ ವಸ್ತುಗಳಿಂದ ಹಿಡಿದು ಬೈಕು-ಕಾರುಗಳವರೆಗೆ ದೇಶಾದ್ಯಂತ ವ್ಯಾಪಾರ ವಹಿವಾಟು ಜೋರಾಗಿದ್ದು, ಜನಸಾಮಾನ್ಯರು ಸಂತೋಷದಿಂದ ಜಿಎಸ್ಟಿ ಉಳಿತಾಯದ ಲಾಭ ಪಡುತ್ತಿದ್ದಾರೆ. ವ್ಯಾಪಾರಸ್ಥರು, ವರ್ತಕರು ಸಂತೋಷಗೊಂಡಿದ್ದಾರೆ.

ಆದರೆ ರಾಜ್ಯದಲ್ಲಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಸತತವಾಗಿ ಏರಿಸಿರುವ ಹಾಲು, ಪೆಟ್ರೋಲ್, ಡಿಸೇಲ್, ನೀರು, ವಿದ್ಯುತ್ ಬೆಲೆಯನ್ನು ಇಳಿಸುವುದು ಯಾವಾಗ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಜಿ ಎಸ್ ಟಿ: ಗ್ಯರೆಂಟಿ ಸಿದ್ದರಾಮಯ್ಯ ಟ್ಯಾಕ್ಸ್
ನಿಂದ ಕನ್ನಡಿಗರಿಗೆ ಮುಕ್ತಿ ಯಾವಾಗ ಎಂದು ಟೀಕಿಸಿದ್ದಾರೆ.

ಬೆಲೆ ಇಳಿಕೆ ಯಾವಾಗ:ಸರ್ಕಾರಕ್ಕೆ ಅಶೋಕ್ ಪ್ರಶ್ನೆ Read More

ಪಾಲಿಕೆ ಸಿಬ್ಬಂದಿಗಳ ಮುಷ್ಕರ ಸಿಂ ಕಣ್ಣಿಗೆ ಕಾಣುತ್ತಿಲ್ಲ.ಅಶೋಕ್ ಆಕ್ರೋಶ

ಬೆಂಗಳೂರು: ಐದು ವರ್ಷ ನಾನೇ ಅಂತ ದಿಲ್ಲಿತನಕ ಹಾದಿ ಬೀದಿಯಲ್ಲಿ ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಾದ್ಯಂತ 10 ಪಾಲಿಕೆಗಳ 25,000ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ಮಾಡುತ್ತಿರುವುದು ಕಾಣುತ್ತಿಲ್ಲ, ಕಿವಿಗೂ ಬಿದ್ದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಕುರ್ಚಿ ಕಿತ್ತಾಟದಲ್ಲಿ, ಬಣ ಬಡಿದಾಟದಲ್ಲಿ ಸಂಪೂರ್ಣವಾಗಿ ಮೈಮರೆತಿರುವ ರಾಜ್ಯ ಸರ್ಕಾರದ ಯಾವ ಮಂತ್ರಿಗಳೂ ಇದುವರೆಗೆ ಪ್ರತಿಭಟನಾ ನಿರತ ಪಾಲಿಕೆ ಸಿಬ್ಬಂದಿಯನ್ನು ಭೇಟಿ ಮಾಡುವ ಗೋಜಿಗೇ ಹೋಗಿಲ್ಲ ಎಂದು ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತೆ ಅಧಿಕಾರವಿಲ್ಲದ ಕುರ್ಚಿಯಲ್ಲಿ ಎಷ್ಟು ದಿನ ಅಂಟಿಕೊಂಡು ಕೂರುತ್ತೀರಿ,ರಾಜೀನಾಮೆ ಕೊಟ್ಟು ಹೊರಡಿ. ಒಂದು ಸುಭದ್ರ, ಸುಸ್ಥಿರ, ಜನಪರ ಆಡಳಿತ ಕೊಡಬಲ್ಲ ಬಲಿಷ್ಠ ಮುಖ್ಯಮಂತ್ರಿಗಾಗಿ ಕನ್ನಡಿಗರು ಕಾಯುತ್ತಿದ್ದಾರೆ ಎಂದು ಅಶೋಕ್ ವ್ಯಂಗ್ಯ ಸಲಹೆ ನೀಡಿದ್ದಾರೆ.

ಪಾಲಿಕೆ ಸಿಬ್ಬಂದಿಗಳ ಮುಷ್ಕರ ಸಿಂ ಕಣ್ಣಿಗೆ ಕಾಣುತ್ತಿಲ್ಲ.ಅಶೋಕ್ ಆಕ್ರೋಶ Read More

ಜನೌಷಧಿ ಕೇಂದ್ರ‌‌: ಹೈಕೋರ್ಟ್‌ ಆದೇಶ;ಸರ್ಕಾರಕ್ಕೆ ಹಿನ್ನಡೆ-ಅಶೋಕ್

ಬೆಂಗಳೂರು: ಜನೌಷಧಿ ಕೇಂದ್ರಗಳ ಸ್ಥಗಿತ ಕುರಿತು ಹೈಕೋರ್ಟ್‌ ನೀಡಿದ ಮಧ್ಯಂತರ ತಡೆ ಆದೇಶವನ್ನು ಸ್ವಾಗತಿಸಿರುವ ಪ್ರತಿಪಕ್ಷ ನಾಯಕ‌ ಆರ್.ಅಶೋಕ್,
ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಜನೌಷಧಿ ಕೇಂದ್ರಗಳ ಸ್ಥಗಿತದ ಬಗ್ಗೆ ಹೈಕೋರ್ಟ್‌ ಮಧ್ಯಂತರ ತಡೆ ಆದೇಶ ನೀಡಿದೆ. ಈ ಕುರಿತು ನಮ್ಮ ಪಕ್ಷದಿಂದ ಹೋರಾಟ ಮಾಡಿದ್ದೆವು, ಖಾಸಗಿ ಮೆಡಿಕಲ್‌ ಫಾರ್ಮಾಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತು. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ. ಇನ್ನಾದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಜನರಿಗೆ ಏನು ಬೇಕೆಂದು ಅರಿತು ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ 260-270 ಔಷಧಿಗಳನ್ನು ನೀಡಬೇಕಾಗುತ್ತದೆ. ಆದರೆ ಅಷ್ಟೊಂದು ಔಷಧಿ ಇಲ್ಲ. ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇತ್ತೀಚೆಗೆ ಹಾಸನ ಆಸ್ಪತ್ರೆಗೆ ಹೋದಾಗ ಒಬ್ಬರೇ ಹೃದ್ರೋಗ ತಜ್ಞ ವೈದ್ಯರು ಇರುವುದು ಕಂಡುಬಂತು. ಹೃದಯ ಸಂಬಂಧಿ ರೋಗದ ತುರ್ತು ಪರಿಸ್ಥಿತಿಯಲ್ಲಿ ಅವರು ಇಂಜೆಕ್ಷನ್‌ ಕೊಟ್ಟು ಬೆಂಗಳೂರಿಗೆ ಕಳಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿದರೆ ಬಹಳ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.

ಜೈಲಿನಲ್ಲೇ ಭಯೋತ್ಪಾದಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಗೃಹ ಇಲಾಖೆ ಸತ್ತುಹೋಗಿದೆ. ರಾಜ್ಯ ಸರ್ಕಾರ ಕೂಡಲೇ ಬಾಂಗ್ಲಾ ಹಾಗೂ ಪಾಕ್‌ ಪ್ರಜೆಗಳನ್ನು ಹೊರಕ್ಕೆ ಕಳಿಸಬೇಕು,ಅದಕ್ಕಾಗಿ ವಿಶೇಷ ಪಡೆ ರಚಿಸಬೇಕು, ಕೈದಿಗಳ ಚಲನವಲನಗಳ ಬಗ್ಗೆ ನಿಗಾ ಇರಿಸಲು ಕ್ರಮ ವಹಿಸಬೇಕು,ಜೈಲಿನಲ್ಲಿ ಮೊಬೈಲ್‌ ಬಳಕೆ ತಡೆಗಟ್ಟಬೇಕು ಎಂದು ಅಶೋಕ್ ಆಗ್ರಹಿಸಿದರು.

ಜನೌಷಧಿ ಕೇಂದ್ರ‌‌: ಹೈಕೋರ್ಟ್‌ ಆದೇಶ;ಸರ್ಕಾರಕ್ಕೆ ಹಿನ್ನಡೆ-ಅಶೋಕ್ Read More

ಬಿಬಿಎಂಪಿ ಅರಣ್ಯಾಧಿಕಾರಿಗಳ ಅಮಾನತಿಗೆ ಆಪ್ ಆಗ್ರಹ

ಬೆಂಗಳೂರು: ಬೆಂಗಳೂರಿನಲ್ಲಿ ಮರಗಳು ಬಿದ್ದು ಸಾವು,ನೋವು ಉಂಟಾಗುವುದು ಹೆಚ್ಚುತ್ತಲೇ ಇದ್ದು,ಇದಕ್ಕೆ ಬಿಬಿಎಂಪಿ ಅರಣ್ಯಾಧಿಕಾರಿಗಳೆ ಹೊಣೆ ಎಂದು ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.

ಮರ ಬಿದ್ದು ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಂಡು‌ ಒಣಗಿದ ಹಾಗೂ ಶಿಥಿಲವಾದ ಮರಗಳನ್ನು ಕತ್ತರಿಸಬೇಕಿತ್ತು.ಹಾಗೆ ಮಾಡದೆ ಜನರ ಪ್ರಾಣದ ಜತೆ ಚೆಲ್ಲಾಟವಾಡುವ ಅರಣ್ಯಾಧಿಕಾರಿಗಳನ್ನು ತಕ್ಷಣ ಅಮಾನತು ಪಡಿಸಬೇಕೆಂದು ಆಪ್ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಒತ್ತಾಯಿಸಿದರು.

ನಿನ್ನೆ ಬೆಂಗಳೂರಿನ ಶ್ರೀನಗರದಲ್ಲಿ ಮರದ ಕೊಂಬೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿರುವ ಯುವಕ ಅಕ್ಷಯ್ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ಆರೋಗ್ಯ ವಿಚಾರಿಸಿದ ನಂತರ ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ದುರ್ಘಟನೆಗೆ ಕಾರಣವಾಗಿರುವ ಬಿಬಿಎಂಪಿಯ ಅರಣ್ಯ ವಿಭಾಗದ ಉನ್ನತ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರು ಹಲವು ಬಾರಿ ಹಳೆಯ ಮರಗಳು ಹಾಗೂ ಕೊಂಬೆಗಳನ್ನು ತೆಗೆಯುವಂತೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಬಿಬಿಎಂಪಿಯ ಅರಣ್ಯ ವಲಯದ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಈ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಅಕ್ಷಯ್ ನಂತಹ ಹಕವಾರು ನಾಗರಿಕರ ಪ್ರಾಣಕ್ಕೆ ಸಂಚಕಾರ ಬಂದಿದೆ ಎಂದು ಸೀತಾರಾಮ್ ಗುಂಡಪ್ಪ ಆತಂಕ ವ್ಯಕ್ತಪಡಿಸಿದರು.

ಇಂತಹ ಅನೇಕ ದುರ್ಘಟನೆಗಳು ಪದೇಪದೇ ಸಂಭವಿಸಿದ್ದರೂ ಸಹ ಎಚ್ಚೆತ್ತುಕೊಳ್ಳುವಲ್ಲಿ ಅಧಿಕಾರಯ ವಿಫಲರಾಗುತ್ತಿದ್ದಾರೆ,
ಸರ್ಕಾರ ಅಧಿಕಾರಿಗಳ
ಉತ್ತರದಾಯಿತ್ವವನ್ನು ಪ್ರಶ್ನಿಸುವ ತಾಕತ್ತು ಹೊಂದಿದ್ದಲ್ಲಿ ಕೂಡಲೇ ಈ ವಿಭಾಗದ ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.

ಪಕ್ಷದ ಮುಖಂಡರುಗಳಾದ ಸರವಣ, ಇರ್ತಾದ್, ವೀಣಾ ಸರಾವ್, ಮಣಿಕಂಠ ಸೇರಿದಂತೆ ಅನೇಕ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಅರಣ್ಯಾಧಿಕಾರಿಗಳ ಅಮಾನತಿಗೆ ಆಪ್ ಆಗ್ರಹ Read More

ಪೊಲೀಸರನ್ನು ಹರಕೆಯ ಕುರಿ ಮಾಡಿದ ಸರ್ಕಾರ:ಅಶೋಕ್ ಆರೋಪ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಡೆದ ಕಾಲ್ತುಳಿತದ ಘಟನೆಯಲ್ಲಿ ಸರ್ಕಾರವೇ ಅಪರಾಧಿ, ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಅಶೋಕ ತಿಳಿಸಿದರು.

ಈ ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಈ ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಕಾನೂನನ್ನು ಕಗ್ಗತ್ತಲಿನಲ್ಲಿಟ್ಟಿದ್ದಾರೆ. ಗ್ರೇಟ್‌ ಸಮಾಜವಾದಿ, ಮಜಾವಾದಿ ಸಿದ್ದರಾಮಯ್ಯನವರಿಂದ ಹೀಗಾಗಿದೆ. ಆರ್‌ಸಿಬಿ ತಂಡ ಐಪಿಎಲ್‌ ಗೆದ್ದಿದ್ದರೆ, ಕೆಪಿಸಿಸಿ ತಂಡ ಫೋಟೋಗೆ ಫೋಸ್‌ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬ್ಯಾಟ್ಸ್‌ಮನ್‌ ಹಾಗೂ ಡಿ.ಕೆ.ಶಿವಕುಮಾರ್‌ ಬೌಲರ್‌ ಎಂದು ‌ಲೇವಡಿ ಮಾಡಿದರು.

ಸಿದ್ದರಾಮಯ್ಯನವರನ್ನು ಬೋಲ್ಡ್‌ ಮಾಡಬೇಕೆಂದು ಡಿ.ಕೆ.ಶಿವಕುಮಾರ್‌ ಪ್ರಯತ್ನ ಮಾಡುತ್ತಿದ್ದರೆ, ಐದು ವರ್ಷ ಸೆಂಚುರಿ ಹೊಡೆಯಬೇಕೆಂದು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ರಾಜ್ಯದ ಜನರು ಹಿಟ್‌ ವಿಕೆಟ್‌ ಆಗಿದ್ದಾರೆ. 11 ಪ್ರತಿಭಾವಂತ ಯುವಜನರು ಬಲಿಯಾಗಿದ್ದಾರೆ ಎಂದು ಕಿಡಿಕಾರಿದರು.

ವೇದಿಕೆಯಲ್ಲಿ ಕಾಂಗ್ರೆಸ್‌ ನಾಯಕರ ಕೈಯಲ್ಲೇ ಟ್ರೋಫಿ ಇತ್ತು. ವರ್ಷಾನುಗಟ್ಟಲೆ ಶ್ರಮವಹಿಸಿ ಆಟವಾಡಿದ ಆಟಗಾರರನ್ನು ಮೂಲೆಗೆ ತಳ್ಳಿದ್ದರು. ಈ ಸಂಭ್ರಮಾಚರಣೆ ಆತುರದ ತೀರ್ಮಾನವೆಂದು ಕಾಂಗ್ರೆಸ್‌ನ ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಸಮರ್ಪಣಾ ಸಮಾವೇಶ ಮಾಡುವ ಮುನ್ನ, ಬೆಂಗಳೂರಿನಲ್ಲಿ ಪ್ರವಾಹ ಬಂದರೂ ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಯುವಜನರಿಗೆ ಸಂಬಂಧಿಸಿದಂತೆ ಕ್ರೀಡಾ ಕಾರ್ಯಕ್ರಮ ಮಾಡುವಾಗ ಸಿದ್ಧತೆಯನ್ನೇ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್‌ನ ಸಮಾವೇಶಕ್ಕೆ ಮಾಡಿದ್ದ ಸಿದ್ಧತೆಯ ಒಂದು ಪರ್ಸೆಂಟ್‌ ಸಮಯವನ್ನು ಇಲ್ಲಿ ನೀಡಿದ್ದರೆ ಯುವಜನರ ಬದುಕು ಉಳಿಯುತ್ತಿತ್ತು ಎಂದು ಹೇಳಿದರು.

ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಲ ಪೊಲೀಸ್‌ ಆಯುಕ್ತರನ್ನು ಅಮಾನತು ಮಾಡಲಾಗಿದೆ. ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಜೊತೆಗಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾಲ್ತುಳಿತಕ್ಕೆ ಸಿಲುಕಿ ನಿತ್ರಾಣರಾಗಿದ್ದ ಯುವಕ ಯುವತಿಯರನ್ನು ಪೊಲೀಸರು ಕೈಯಲ್ಲಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಯಾವುದೇ ಕಾಂಗ್ರೆಸ್‌ ಕಾರ್ಯಕರ್ತರು ಇರಲಿಲ್ಲ. ಆದರೆ ಈಗ ಪೊಲೀಸರನ್ನೇ ಅಮಾನತು ಮಾಡಲಾಗಿದೆ. ನಾವು ನ್ಯಾಯ ಸಿಗುವವರೆಗೂ ರಾಜಕಾರಣ ಮಾಡುತ್ತೇವೆ. ಯಾರನ್ನೋ ಹರಕೆಯ ಕುರಿ ಮಾಡುವುದರ ವಿರುದ್ಧ ನಾವು ರಾಜಕಾರಣ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.

ಎರಡು ಕಡೆ ಕಾರ್ಯಕ್ರಮ ನಡೆಸುವುದು ಬೇಡ ಎಂದು ಪೊಲೀಸರು ಹೇಳಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಘಟನೆ ನಡೆದಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಈ ಎರಡೂ ಸ್ಥಳಗಳು ಅಕ್ಕಪಕ್ಕದಲ್ಲೇ ಇವೆ. ಪೊಲೀಸರು ಅನುಮತಿ ನೀಡದಿದ್ದರೂ, ಕಾಂಗ್ರೆಸ್‌ ಸರ್ಕಾರ ಕಾನೂನು ಕೈಗೆ ತೆಗೆದುಕೊಂಡು ಕಾರ್ಯಕ್ರಮ ನಡೆಸಿದೆ. ಎಲ್ಲರೂ ಫೋಟೋ ಶೂಟ್‌ನಲ್ಲಿ ನಿರತರಾಗಿದ್ದರೇ ಹೊರತು, ಜನರ ಬಗ್ಗೆ ಯಾರೂ ಯೋಚಿಸಲಿಲ್ಲ ಎಂದು ದೂರಿದರು.

ಮೊದಲು ಜಿಲ್ಲಾಧಿಕಾರಿಯಿಂದ ತನಿಖೆ ನಡೆಯಲಿದೆ ಎಂದು ಹೇಳಿದರು. ಮತ್ತೆ ಸಿಐಡಿಯಿಂದ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ. ಇದು ಕೂಡ ಮುಡಾ, ವಾಲ್ಮೀಕಿ ನಿಗಮದ ಹಗರಣದಂತೆಯೇ ಮುಚ್ಚಿಹೋಗಲಿದೆ. ಇಲ್ಲಿ ಸರ್ಕಾರವೇ ಅಪರಾಧಿಯಾಗಿರುವುದರಿಂದ, ಸರ್ಕಾರದಲ್ಲಿರುವ ಯಾರೂ ತನಿಖೆ ಮಾಡಬಾರದು. ಇದನ್ನು ನ್ಯಾಯಾಧೀಶರೇ ತನಿಖೆ ಮಾಡಬೇಕು ಪ್ರತಿಪಕ್ಷ ನಾಯಕ ಆಗ್ರಹಿಸಿದರು.

ಪೊಲೀಸರನ್ನು ಹರಕೆಯ ಕುರಿ ಮಾಡಿದ ಸರ್ಕಾರ:ಅಶೋಕ್ ಆರೋಪ Read More

ಕನ್ನಡದ ಕೀರ್ತಿ ಹೆಚ್ಚಿಸಿದ ಬಾನು ; ಇಡೀ ಕನ್ನಡ ಜಗತ್ತಿಗೆ ಹೆಮ್ಮೆ: ಸಿಎಂ

ಬೆಂಗಳೂರು, ಜೂ 2: ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ.ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಆಯೋಜಿಸಿದ್ದ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರ ಸರ್ಕಾರಿ ಅಭಿನಂದನಾ ಕಾರ್ಯಕ್ರಮದಲ್ಲಿ ಬಾನು ಅವರನ್ನು ಅಭಿನಂದಿಸಿ, ಸನ್ಮಾನಿಸಿ ಸಿಎಂ ಮಾತನಾಡಿದರು.

ಬಾನು ಮುಷ್ತಾಕ್ ಅವರು ನಮ್ಮ ಭಾಷೆಗೆ ಬುಕರ್ ಒದಗಿಸಿಕೊಡುವ ಮೂಲಕ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ಜಗತ್ತಿನ ಹೆಮ್ಮೆ‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್ , ದೀಪಾ ಬಾಸ್ತಿ ಅವರಿಗೆ ತಲಾ 10 ಲಕ್ಷ ಪುರಸ್ಕಾರ ನೀಡಲಾಗುವುದು ಎಂದು ಇದೇ ವೇಳೆ ಸಿಎಂ ಘೋಷಿಸಿದರು.

ಬಾನು ಅವರ ಕತೆಗಳನ್ನು ಇಂಗ್ಲಿಷ್ ಗೆ ಪ್ರಕಟಿಸಲು ಮತ್ತು ಅನುವಾದಿಸಲು ಸರ್ಕಾರದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ ಎಂದು ವಿಶ್ಲೇಷಿಸಿದರು.

ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಬಾನು ಮುಷ್ತಾಕ್ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಇವು ಸಾಕ್ಷಿ ಎಂದು ಸಿದ್ದರಾಮಯ್ಯ ನುಡಿದರು.

ಮುಸ್ಲಿಂ ಸಮುದಾಯದ ಹೆಣ್ಣು‌ಮಕ್ಕಳ ಧ್ವನಿಯಾಗಿ ಮೌಡ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿ ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ.

ಕವಿರಾಜಮಾರ್ಗದಲ್ಲಿ ಪರಧರ್ಮ ಮತ್ತು ಪರ ವಿಚಾರಗಳನ್ನು ಸಹಾನುಭೂತಿಯಿಂದ ನೋಡುಬೇಕು ಎಂದು ಕರೆ ನೀಡಿದ್ದರೆ,
ಆದಿಕವಿ ಪಂಪ ಅವರು ಮನುಷ್ಯ ಜಾತಿ ತಾನೊಂದೇ ವಲಂ ಎಂದಿದ್ದಾರೆ, ಬಸವಣ್ಣನವರು ಇವ ನಮ್ಮವ ಎಂದು ಹೇಳಿದ್ದಾರೆ. ಹೆಣ್ಣಿನ ಧ್ವನಿಯಾದ ಅಕ್ಕಮಹಾದೇವಿ ಅವರೂ ಇದನ್ನೇ ಧ್ವನಿಸಿದ್ದಾರೆ. ಇವರೆಲ್ಲರ ಆಶಯಗಳ ಮುಂದುವರಿಕೆಯಾಗಿ ಬಾನು ಮುಷ್ತಾಕ್ ಕೆಲಸ ಮಾಡಿದ್ದಾರೆ ಎಂದು ಮುಖ್ಯ ಮಂತ್ರಿಗಳು ಬಣ್ಣಿಸಿದರು.

ಅಭಿನಂದನೆಗೂ ಮೊದಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಾನು ಮುಷ್ತಾಕ್ ಮತ್ತು ‌ದೀಪಾ ಬಸ್ತಿ ಅವರು‌ ಕುಳಿತಿದ್ದ ಕಡೆಗೇ ಬಂದು ನಮಸ್ಕಾರ ಹೇಳಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಚಲನಚಿತ್ರ ರಂಗದವರು,ಸಾಹಿತಿಗಳು ಹೀಗೆ‌ ಹಲವಾರು ಮಂದಿ ಪಾಲ್ಗೊಂಡಿದ್ದರು.

ಕನ್ನಡದ ಕೀರ್ತಿ ಹೆಚ್ಚಿಸಿದ ಬಾನು ; ಇಡೀ ಕನ್ನಡ ಜಗತ್ತಿಗೆ ಹೆಮ್ಮೆ: ಸಿಎಂ Read More

ಅಭಿವೃದ್ಧಿ ಶೂನ್ಯ ರಾಜ್ಯಸರ್ಕಾರ ಗೌರ್ನರ್ ಬಾಯಲ್ಲಿ ಸುಳ್ಳು ಹೇಳಿಸಿದೆ:ಅಶೋಕ್

ಬೆಂಗಳೂರು, ಮಾ.3: ರಾಜ್ಯಪಾಲರ ಅಧಿಕಾರ ಕಿತ್ತುಕೊಂಡು ಈಗ ಅವರ ಮೂಲಕವೇ ಸಾಧನೆ ಮಾಡಿದ್ದೇವೆ ಎಂದು ಸುಳ್ಳು ಹೇಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಭಾಷಣದ ಬಳಿಕ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ಅಶೋಕ ಮಾತನಾಡಿದರು.

ಅಭಿವೃದ್ಧಿ ಶೂನ್ಯವಾದ ಕಾಂಗ್ರೆಸ್‌ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ. ಅಭಿವೃದ್ಧಿ ಹಾಗೂ ವಿಕಾಸ ಎಂಬ ಮಾತನ್ನು ಅವರ ಬಾಯಲ್ಲಿ ಹೇಳಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಜೇಬು ತುಂಬಿದೆ, ಕಾಂಗ್ರೆಸ್‌ ಶಾಸಕರ ಮನೆ ತುಂಬಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಆಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯಪಾಲರನ್ನು ಹೀಯಾಳಿಸುವ ಮಾತಾಡಿ, ಅವರ ಅಧಿಕಾರಗಳನ್ನು ಕಿತ್ತುಕೊಂಡು, ಈಗ ಅವರ ಕೈಯಲ್ಲೇ ನಾವೇ ನಂ.1 ಎಂಬ ರೀತಿಯಲ್ಲಿ ಹೇಳಿಸಲಾಗಿದೆ ಎಂದು ಟೀಕಿಸಿದರು ‌

ಆರೋಗ್ಯ ಕೈಗೆಟುಕುತ್ತಿದೆ ಎನ್ನಲಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿದ್ದಾರೆ. ಆದರೆ ಮಕ್ಕಳನ್ನು ಕಾಪಾಡಲು ಕಟಿಬದ್ಧ ಎನ್ನಲಾಗಿದೆ. ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎನ್ನುತ್ತಾರೆ. ಇತ್ತ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಮಾಡಲಾಗಿದೆ. ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿವೆ. ಕಸದ ರಾಶಿ ರಾಜರಾಜೇಶ್ವರಿಸಿದೆ. ಇಂತಹ ಸಮಯದಲ್ಲಿ ಹೊಸ ರಸ್ತೆಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಇ-ಖಾತಾ ಮಾಡಿಸಿಕೊಡಲು ಹಣ ಕೊಡಿ ಎಂದು ಜಾಹೀರಾತು ನೀಡಲಾಗುತ್ತಿದೆ. ನೀರಾವರಿಗೆ ಆದ್ಯತೆ ಎಂದಿದ್ದಾರೆ. ಈವರೆಗೆ ಎಷ್ಟು ಯೋಜನೆ ತರಲಾಗಿದೆ, ಗುದ್ದಲಿ ಪೂಜೆ ಮಾಡಲಾಗಿದೆ ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ ಎಂದು ಒತ್ತಾಯಿಸಿದರು.

ಕಳೆದ 19 ತಿಂಗಳಲ್ಲಿ ಗಂಭೀರ ಕಾನೂನು ಉಲ್ಲಂಘನೆಯಾದ ಪ್ರಕರಣ ನಡೆದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಅತ್ಯಾಚಾರಗಳು, ಬ್ಯಾಂಕ್‌ ದರೋಡೆ, ಮೈಸೂರಿನಲ್ಲಿ ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿದಂತೆ ಅನೇಕ ಘಟನೆಗಳು ನಡೆದಿವೆ. ಆದರೂ ಸರ್ಕಾರದ ಪ್ರಕಾರ ಇವೆಲ್ಲ ಗಂಭೀರ ಘಟನೆಗಳಲ್ಲ. ಮೈಕ್ರೋ ಫೈನಾನ್ಸ್‌ನಿಂದ ಜನರು ಸಾಯುತ್ತಿದ್ದರೂ ಅದು ಸರ್ಕಾರಕ್ಕೆ ಗಂಭೀರವಾಗಿ ಕಂಡಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ, ಮುಂದೆ ಏನನ್ನಾದರೂ ಮಾಡಲು ಯಾವ ದೂರದೃಷ್ಟಿಯೂ ಹೊಂದಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿ, ಅವರ ದಾರಿ ತಪ್ಪಿಸಿದೆ ಜತೆಗೆ ನಾಡಿನ ಜನರ ದಿಕ್ಕನ್ನೂ ತಪ್ಪಿಸಿದೆ ಎಂದು ಆರೋಪಿಸಿದರು.

ಅಭಿವೃದ್ಧಿ ಶೂನ್ಯ ರಾಜ್ಯಸರ್ಕಾರ ಗೌರ್ನರ್ ಬಾಯಲ್ಲಿ ಸುಳ್ಳು ಹೇಳಿಸಿದೆ:ಅಶೋಕ್ Read More