ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ಗೌರ್ನರ್:ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಮಸೂದೆ ಕುರಿತು ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.

ಹಲವು ಲೋಪದೋಷಗಳನ್ನ ಗುರುತಿಸಿ ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ.

ವಿಧಾನಮಂಡಲ ಅಧಿವೇಶನದಲ್ಲೇ ಮಸೂದೆ ಮಂಡಿಸಿ ಚರ್ಚೆ ಮಾಡಿ ಕಳುಹಿಸಿ ಎಂದು ಸೂಚಿಸಿದ್ದಾರೆ.

ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದ ಸರ್ಕಾರ ಈಗ ಸುಗ್ರೀವಾಜ್ಞೆ ಕರಡು ಬಿಲ್ ಪರಿಷ್ಕರಣೆ ಮಾಡಿ ಮಸೂದೆ ತರಬೇಕಿದೆ.

ಮಸೂದೆಯಲ್ಲಿ ಸಾಲ ಪಡೆದವರಿಗೆ ರಕ್ಷಣೆ ಇದೆ. ಆದರೆ ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಇಲ್ಲ. ಅಲ್ಲದೇ ಆರ್‌ಬಿಐ ನಿಯಮಗಳು, ಪೊಲೀಸ್ ನಿಯಮಗಳಲ್ಲಿ ವ್ಯತಿರಿಕ್ತ ಪರಿಣಾಮಗಳಿವೆ. ಸಾಲಪಡೆದವರಿಗೆ ರಕ್ಷಣೆ ಇರುವಂತೆ, ಸಾಲ ಕೊಡುವವರಿಗೂ ರಕ್ಷಣೆ ಇರಬೇಕು, ವಿಧಾನ ಮಂಡಲ ಅಧಿವೇಶನ ಹತ್ತಿರದಲ್ಲೇ ಇದೆ, ಅಲ್ಲೇ ಮಸೂದೆ ಮಂಡನೆ ಮಾಡಿ, ಚರ್ಚೆ ಬಳಿಕ ಅಂಗೀಕಾರ ಮಾಡಬಹುದು ಎಂದು ರಾಜ್ಯಪಾಲರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ಗೌರ್ನರ್:ಸರ್ಕಾರಕ್ಕೆ ಹಿನ್ನಡೆ Read More

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನೆ

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಚಾಮುಂಡಿ ಬೆಟ್ಟದ ಆವ್ಯವಸ್ಥೆ ಹಾಗೂ ಪ್ರಾಧಿಕಾರ ವಿರೋದಿಸಿ ಮೈಸೂರಿನ ಹಳೆ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ರಾಜ್ಯ ಸರ್ಕಾರ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ, ಸ್ಮಾರ್ಟ್ ಕಾರ್ಡ್ ಜಾರಿಗೊಳಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಲಾಯಿತು.

ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಹೊಸದಾಗಿ ಪ್ರಾಧಿಕಾರ ರಚಿಸುತ್ತಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಾನಿರತರು ಘೋಷಣೆ ಕೂಗಿದರು.

ಮೈಸೂರು ಅರಸರ ಸಂಸ್ಥಾನದ ಆದಿದೇವತೆ, ನಾಡದೇವತೆ, ತಾಯಿ ಚಾಮುಂಡೇಶ್ವರಿ ದೇವಿ ಬೆಟ್ಟವನ್ನು ಶ್ರದ್ಧಾಭಕ್ತಿಯಿಂದ ಅಭಿವೃದ್ಧಿಪಡಿಸಿದ್ದು, ದೇವಿಯ ಮಹಾನ್ ಆರಾಧಕರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು.

ಬೆಟ್ಟದಲ್ಲಿ, ದೇವಸ್ಥಾನಕ್ಕೆ ಪೂಜೆ ಮಾಡುವ ಅರ್ಚಕರಿಂದ ಹಿಡಿದು ಎಲಾ ವರ್ಗದವರಿಗೂ ಆಗಿನ ಕಾಲದಲ್ಲಿಯೇ ಅಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟದ್ದಾರೆ. ಜೊತೆಗೆ ಚಾಮುಂಡಿ ಬೆಟ್ಟ ಈಗ ಒಂದು ಗ್ರಾಮವಾಗಿದೆ, ಗ್ರಾಮ ಪಂಚಾಯಿತಿಯೂ ಇದೆ.

ಈಗ ಪ್ರಾಧಿಕಾರ ರಚನೆಯಾದರೆ ಸುಮಾರು 300 ಮೀಟರ್ ಸುತ್ತಳತೆ (ಅಂದರೆ 1000 ಅಡಿ ಸುತ್ತಮುತ್ತ) ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಆಗ ಇಡೀ ಗ್ರಾಮವೇ ಇಲ್ಲದಂತಾಗುತ್ತದೆ ಎಂದು ಸೇನಾಪಡೆ ಮುಖಂಡರು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ 10,000 25000 ಹಾಗೂ ರೂ.1,00,000 ನಿಗದಿಪಡಿಸಲು ಉದ್ದೇಶಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ನಗರದಲ್ಲಿ ಚಾಮುಂಡಿ ಬೆಟ್ಟ ಇರುವುದರಿಂದ ಪ್ರಾಧಿಕಾರದ ಅವಶ್ಯಕತೆಯೇ ಇಲ್ಲ, ಈಗಾಗಲೇ ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆ, ಧಾರ್ಮಿಕ ದತ್ತಿ ಗೆ ಒಳಪಟ್ಟು ಭಕ್ತಾದಿಗಳಿಂದ ಕೋಟ್ಯಂತರ ಆದಾಯ ಬರುತ್ತಿದೆ.

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಈ ಹಣವನ್ನೇ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹಾಗೂ ಸ್ಮಾರ್ಟ್ ಕಾರ್ಡ್ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಪ್ರಭುಶಂಕರ್ ಎಂ ಬಿ, ಪ್ರಜೀಶ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಶಿವಲಿಂಗಯ್ಯ, ನಾರಾಯಣ ಗೌಡ, ಕುಮಾರ್ ಗೌಡ, ಸಿಂದುವಳ್ಳಿ, ಶಿವಕುಮಾರ್, ವರಕೂಡು ಕೃಷ್ಣಗೌಡ, ಮಂಜುಳ, ವಿಜಯೇಂದ್ರ, ಭಾಗ್ಯಮ್ಮ, ರಘು ಅರಸ್, ಎಳನೀರು ರಾಮಣ್ಯ, ಪ್ರದೀಪ, ಗುರು ಮಲ್ಲಪ್ಪ, ಶಂಕರ್ ಗುರು, ಚಂದ್ರಶೇಖರ್, ಶಾಂತಕುಮಾರ್, ರಾಧಾಕೃಷ್ಣ ಅಕ್ಟರ್ ತ್ಯಾಗರಾಜ್, ಮಹಾದೇವ,ಸ್ವಾಮಿ ಗೌಡ, ಕೃಷ್ಣಮೂರ್ತಿ, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನೆ Read More

ವಿಚಾರಣೆ ನಡೆಸುವ ಮೊದಲೇ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ :‌ ಅಶೋಕ್ ಕಿಡಿ

ಬೆಂಗಳೂರು: ನಾಗಮಂಗಲದಲ್ಲಿ ವಿಚಾರಣೆ ನಡೆಸುವ ಮೊದಲೇ ರಾಜ್ಯ ಸರ್ಕಾರ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ ಕೊಡಲು ಹೊರಟಿದೆ‌ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪಿಸಿದ್ದಾರೆ.

ಮೊದಲು ತನಿಖೆ ನಡೆಸಿ, ನಂತರ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಲಿ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಕೂಗಿದಾಗ ಹಾಗೆ ಆಗಿಯೇ ಇಲ್ಲ ಎಂದಿದ್ದರು, ಬಾಂಬ್‌ ಸ್ಫೋಟವಾದಾಗಲೂ ಅದು ವ್ಯಾಪಾರದ ಜಗಳ ಎಂದು ಹೇಳಿದ್ದರು. ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆಯೂ ಇದೇ ರೀತಿ ಹೇಳಿದ್ದರು. ನಾಗಮಂಗಲದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವುದರ ಬಗ್ಗೆ ಮೊದಲು ಪರಿಶೀಲಿಸಲಿ,ಇದನ್ನೂ ಹಾಗೆಯೇ ಬಿಡಬೇಡಿ ಎಂದು ತಿಳಿಸಿದರು.

ವಿದೇಶಕ್ಕೆ ಹೋದ ರಾಹುಲ್‌ ಗಾಂಧಿ, ಭಾರತದ ವಿರುದ್ಧ ಮಾತಾಡುವುದರ ಜೊತೆಗೆ ಮೀಸಲಾತಿ ತೆಗೆದುಹಾಕುವ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್‌ ಆಡಳಿತ ಇರುವ ಕಡೆಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ಹಬ್ಬದ ವಾತಾವರಣ ಇರುತ್ತದೆ. ಸವಾಲು ಹಾಕುವವರನ್ನು ಜೈಲಿಗೆ ಹಾಕುವ ಬದಲು ಪೊಲೀಸರು ಅವರನ್ನು ಕರೆದು ಕಾಫಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಒಕ್ಕಲಿಗ ಸಮುದಾಯದ ಸರ್ವೋಚ್ಛ ನಾಯಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಗೌರವ ಹಾಳು ಮಾಡಲು ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ. ಒಕ್ಕಲಿಗರ ಮೇಲೆ ಅಷ್ಟು ಒಲವಿದ್ದರೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ತೆಗೆದು ಒಕ್ಕಲಿಗರನ್ನೇ ಮುಖ್ಯಮಂತ್ರಿ ಮಾಡಲಿ ಎಂದು ಅಶೋಕ್ ಸವಾಲು ಹಾಕಿದರು.

ಜನಪ್ರಿಯ ನಾಯಕ, ವಿಶ್ವನಾಯಕ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ. 25,000 ಕಾರ್ಯಕರ್ತರು 58,000 ಬೂತ್‌ಗಳಲ್ಲಿ ರಕ್ತದಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ವಿಚಾರಣೆ ನಡೆಸುವ ಮೊದಲೇ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ :‌ ಅಶೋಕ್ ಕಿಡಿ Read More

ಕೆಪಿಎಸ್ ಸಿ ಮರು ಪರೀಕ್ಷೆ: ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ-ಅಶೋಕ್

ಬೆಂಗಳೂರು: ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ಲೋಪಗಳನ್ನ ಒಪ್ಪಿಕೊಂಡು ಮರುಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಮತ್ತು ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ,
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಸರ್ಕಾರ ಎಚ್ಚೆತ್ತುಕೊಂಡು ಮರು ಪರೀಕ್ಷೆಯನ್ನ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಸೂಕ್ತ ಪರೀಕ್ಷಾ ದಿನಾಂಕ ನಿಗದಿ ಮಾಡುವುದು, ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಮಾಡುವುದು, ಪ್ರಶ್ನೆ ಪತ್ರಿಕೆ ರಚನೆ, ಕನ್ನಡಕ್ಕೆ ತರ್ಜುಮೆ ಸೇರಿದಂತೆ ಎಲ್ಲ ಅಂಶಗಳನ್ನ ಪರಿಗಣಿಸಿ ತಪ್ಪುಗಳು,ಲೋಪದೋಷಗಳು ಮರುಕಳಿಸದಂತೆ ಜಾಗರೂಕತೆಯಿಂದ ಪರೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಪಿಎಸ್ ಸಿ ಪರೀಕ್ಷೆ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಪ್ರಶ್ನೆಯಾಗಿದೆ,ಈಗ ನಡೆದಿರುವ ಪರೀಕ್ಷೆಯಲ್ಲಿನ ಎಡವಟ್ಟುಗಳಿಗೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನ ಮುಲಾಜಿಲ್ಲದೆ ಕಪ್ಪುಪಟ್ಟಿಗೆ ಸೇರಿಸಬೇಕು, ಮುಂದೆ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳ ಕರ್ತವ್ಯಕ್ಕೂ ಅವರು ನಿಯೋಜನೆ
ಯಾಗದಂತೆ ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಮರು ಪರೀಕ್ಷೆ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಿ ಎಂದು ಅಶೋಕ್ ಹೇಳಿದ್ದಾರೆ.

ಕೆಪಿಎಸ್ ಸಿ ಮರು ಪರೀಕ್ಷೆ: ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ-ಅಶೋಕ್ Read More