ರೈತರ ಬಗ್ಗೆ ಕಾಳಜಿ ಇದ್ದರೆ ಟಿಟಿಡಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲಿ:ತೇಜಸ್ವಿಗೆ‌ ಆಪ್ ಸವಾಲು

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಜ್ಯದ ರೈತರ ಬಗ್ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕೂಡಲೇ ಟಿಟಿಡಿಯಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಮ್ ಆದ್ಮಿ ಪಕ್ಷ ಸವಾಲು ಹಾಕಿದೆ.

ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್ ಅನೇಕ ವರ್ಷಗಳಿಂದ ಶುದ್ಧ ತುಪ್ಪವನ್ನು ಪೂರೈಸುತ್ತಿದ್ದ ರಾಜ್ಯದ ಕೆಎಂಎಫ್ ಅನ್ನು ಕಪ್ಪುಪಟ್ಟಿಗೆ ಸೇರಿಸಿ, 250 ಕೋಟಿಗೂ ಹೆಚ್ಚು ಮೊತ್ತದ ನಕಲಿ ತುಪ್ಪವನ್ನು ಉತ್ತರಕಾಂಡದ ವ್ಯಕ್ತಿಯೊಬ್ಬನಿಂದ ಪಡೆದು ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಶೋಕ್ ಮೃತ್ಯುಂಜಯ ಅವರು ಕೇವಲ ಕಾಂಗ್ರೆಸ್ ಸರ್ಕಾರ ಇರುವಾಗ ಅನೇಕ ಕೋಮು ಪ್ರಚೋದಿತ ವಿಷಯಗಳ ಬಗ್ಗೆ ಮಾತನಾಡುವ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರಿಗೆ ನಿಜಕ್ಕೂ ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ಎನ್ ಡಿ ಎ ಮೈತ್ರಿಕೂಟದ ಆಂಧ್ರ ಪ್ರದೇಶ ಸರ್ಕಾರದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರೊಂದಿಗೆ ಮಾತನಾಡಿ ಮತ್ತೆ ಕೆಎಂಎಫ್ ಸಂಸ್ಥೆಯಿಂದ ತುಪ್ಪವನ್ನು ಪೂರೈಸುವ ಮರುಗುತ್ತಿಗೆಯನ್ನು ಕೊಡಿಸಲಿ ಎಂದು ಸವಾಲು ಹಾಕಿದರು.

ಅನೇಕ ವರ್ಷಗಳಿಂದ ಪೂರೈಸಿಕೊಂಡು ಬರುತ್ತಿದ್ದ ಕೆಎಂಎಫ್ ಸಂಸ್ಥೆಗೆ ನೀಡಬೇಕಿದ್ದ ಗುತ್ತಿಗೆ ರದ್ದಾದ ಕಾರಣದಿಂದ ರಾಜ್ಯದ ಬಡ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಅವರ ಕೂಗನ್ನು ಯಾರೂ ಕೇಳುವವರಿಲ್ಲದಂತಾಗಿದೆ.

ತೇಜಸ್ವಿ ಸೂರ್ಯ ತನಗೆ ಸಂಬಂಧಪಡದ ಎಲ್ಲ ವಿಚಾರಗಳಲ್ಲಿಯೂ ಮೂಗು ತೂರಿಸುವುದನ್ನು ಬಿಟ್ಟು ಕೂಡಲೇ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ತಮ್ಮ ಸಂಸದೀಯ ಪ್ರಭಾವವನ್ನು ಬಳಸಿಕೊಂಡು ಅನ್ಯಾಯವನ್ನು ಸರಿಪಡಿಸಿದರೆ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಅಶೋಕ್ ಮೃತ್ಯುಂಜಯ ತಿಳಿಸಿದರು.

ರೈತರ ಬಗ್ಗೆ ಕಾಳಜಿ ಇದ್ದರೆ ಟಿಟಿಡಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲಿ:ತೇಜಸ್ವಿಗೆ‌ ಆಪ್ ಸವಾಲು Read More

ನಂದಿನಿಯ ಬೆಣ್ಣೆ,ತುಪ್ಪದ ಬೆಲೆ ಸೋಮವಾರದಿಂದ ಇಳಿಕೆ

ಬೆಂಗಳೂರು: ಜಿಎಸ್‌ಟಿ ಪರಿಷ್ಕರಣೆಯಾದ ಹಿನ್ನೆಲೆಯಲ್ಲಿ ಸೆ.22 ರಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ.

ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು ಶೇ‌ 12 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5 ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.

ಪನ್ನಿರ್ ಮತ್ತು ಯುಹೆಚ್‌ಟಿ ಹಾಲಿಗೆ(ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ.ಆದ್ದರಿಂದ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.

ಹಾಲು, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್‌ಟಿ ಇಲ್ಲ, ಮೊಸರಿಗೆ 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಬೆಲೆ ಈಗಿನ ದರವೇ ಮುಂದುವರಿಯಲಿದೆ.

ಶೀಘ್ರದಲ್ಲೇ ಈ ಕುರಿತು ಕೆಎಂಎಫ್ ಪ್ರಕಟಣೆ ಹೊರಡಿಸಲಿದೆ.

ನಂದಿನಿಯ ಬೆಣ್ಣೆ,ತುಪ್ಪದ ಬೆಲೆ ಸೋಮವಾರದಿಂದ ಇಳಿಕೆ Read More

ರಾಜ್ಯದಲ್ಲಿ ತುಪ್ಪದ ಸ್ಯಾಂಪಲ್‌ಗಳ ಪರಿಶೀಲನೆ:ದಿನೇಶ್ ಗುಂಡೂರಾವ್

ಬೆಂಗಳೂರು: ನಂದಿನಿ ತುಪ್ಪ ಹೊರತುಪಡಿಸಿ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ಉಳಿದ ತುಪ್ಪದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅದರ ಗುಣಮಟ್ಟ ಕಾಪಾಡಲು ಪರಿಶೀಲನೆ ಮಾಡಬೇಕು‌ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಪ್ರಸಾದಗಳ ಸ್ಯಾಂಪಲ್ ಪರಿಶೀಲನೆ ಅಲ್ಲ, ನೇರವಾಗಿ ತುಪ್ಪವನ್ನೇ ಪರಿಶೀಲನೆ ಮಾಡಬೇಕೆಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸಚಿವರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಳಸುತ್ತಿರುವ ತುಪ್ಪದ ಬಗ್ಗೆ ತಪಾಸಣೆ ಮಾಡಲು ನಮ್ಮ ಆಹಾರ ಸುರಕ್ಷತಾ ಆಯುಕ್ತರಿಗೆ ಹೇಳಿದ್ದೇನೆ. ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಿಳಿಸಿದರು.

ತಿರುಪತಿ ಲಡ್ಡು ತಯಾರಿಕೆಯಲ್ಲಿ ಕೊಬ್ಬಿನ ಅಂಶ ಬಳಕೆಯಾಗಿದೆ ಎಂಬ ವಿಚಾರದಿಂದ ರಾಜ್ಯದಲ್ಲೂ ಎಚ್ಚರಿಕೆ ವಹಿಸಲಾಗಿದೆ, ಇಲ್ಲಿ ಬಳಕೆಯಾಗುತ್ತಿರುವ ತುಪ್ಪದಲ್ಲಿ ಕೊಬ್ಬಿನ ಇದೆಯೆ ಎಂಬುದನ್ನು ಪರಿಶೀಲಿಸಲಾತ್ತಿದೆ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತದೆ, ಎಲ್ಲಾ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ಪ್ರಸಾದದ ಪರಿಶೀಲನೆ ನಾವು ಮಾಡುತ್ತಿಲ್ಲ. ಬೇರೆ ಪದಾರ್ಥಗಳಲ್ಲಿ ಕಲಬೆರಕೆ ಆಗುವ ಸಾಧ್ಯತೆ ಕಡಿಮೆ. ಆದರೆ ಆಂಧ್ರ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ ಬೇರೆ ಕೊಬ್ಬಿನಾಂಶ ಇತ್ತೆಂದು ಹೇಳಿರುವುದು ಆತಂಕಕಾರಿಯಾದ ವಿಚಾರ. ಒಬ್ಬ ಸಿಎಂ ಹೇಳಿದ ಮೇಲೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ ದೇವರ ಬಗ್ಗೆ ಶ್ರದ್ಧೆ ಇರೋರಿಗೆ ಈ ವಿಚಾರ ಬಹಳ ಆಘಾತಕಾರಿಯಾಗಿದೆ,ಹಾಗಾಗಿ ರಾಜ್ಯದಲ್ಲಿ ಪರಿಶೀಲನೆ ಮಾಡಿ ಎಂದು ಹೇಳಿದ್ದೇವೆ ಎಂದು ಸಚಿವರು ತಿಳಿಸಿದರು.

ಜನರಿಗೆ ಈ ವಿಚಾರದಲ್ಲಿ ಬಹಳ ಗೊಂದಲ ಶುರುವಾಗಿದೆ, ತಿರುಪತಿ ಲಡ್ಡು ವಿಚಾರದಲ್ಲಿ ಈ ರೀತಿ ಇದೆ ಎಂದು ಆದಾಗ ಯಾರನ್ನ ನಂಬಬೇಕು ಅನ್ನುವ ಪ್ರಶ್ನೆ ಎದುರಾಗಿದೆ. ನಾಳೆ ಪ್ರಸಾದವನ್ನು ಸ್ವೀಕರಿಸದೆ ಇರುವಂತ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ನಮ್ಮ ಕಡೆಯಿಂದ ಪರಿಶೀಲನೆ ಮಾಡಿಸುತ್ತಿದ್ದೇವೆ. ಮೊದಲು ವರದಿ ಬರಲಿ ನೋಡೋಣ ಏನೇನು ಕ್ರಮ ತೆಗೆದುಕೊಳ್ಳಬಹುದೊ ಅದನ್ನೆಲ್ಲಾ ತೆಗೆದುಕೊಳ್ಳಲಾಗುವುದು ಎಂದು ‌ದಿನೇಶ್ ಗುಂಡೂರಾವ್ ತಿಳಿಸಿದರು.

ರಾಜ್ಯದಲ್ಲಿ ತುಪ್ಪದ ಸ್ಯಾಂಪಲ್‌ಗಳ ಪರಿಶೀಲನೆ:ದಿನೇಶ್ ಗುಂಡೂರಾವ್ Read More