ದತ್ತಪೀಠದಲ್ಲಿ ಹನುಮ ಜಯಂತಿ ಸಂಭ್ರಮ: ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ

ಮೈಸೂರು: ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಕಾರ್ಯಸಿದ್ಧಿ ಆಂಜನೇಯನ ಮಹತ್ವ ಮತ್ತು ರಾಮಾಯಣದ ಹಿನ್ನೆಲೆಯನ್ನು ವಿವರಿಸಿದರು.
ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕಿಕೊಡುವಂತೆ ಹನುಮಂತನಿಗೆ ಕೇಳಿಕೊಂಡಾಗ ಮತ್ತು ಲಂಕಾ ಪ್ರವೇಶದ ನಂತರ ಸೀತೆಯು ಶ್ರೀರಾಮನನ್ನು ಸೇರಿಸುವಂತೆ ಹನುಮಂತನನ್ನು ಕೋರಿದಾಗ, ಇಬ್ಬರೂ “ನನ್ನ ಕಾರ್ಯಸಿದ್ಧಿ ಮಾಡಿಕೊಡು” ಎಂದು ಹನುಮಂತನನ್ನೇ ಪ್ರಾರ್ಥಿಸಿದ್ದರು. ಹಾಗಾಗಿ ಹನುಮಂತನು ಭಕ್ತರ ಪಾಲಿನ ‘ಕಾರ್ಯಸಿದ್ಧಿ ಹನುಮಂತ’ನಾಗಿದ್ದಾನೆ ಎಂದು ಶ್ರೀಗಳು ತಿಳಿಸಿದರು.
ಸಾಮಾನ್ಯವಾಗಿ ಭಾರತದಲ್ಲಿ ವರ್ಷಕ್ಕೆ ಆರು ಬಾರಿ ಹನುಮ ಜಯಂತಿ ಬರುತ್ತದೆ. ಆದರೆ ದತ್ತಪೀಠದಲ್ಲಿರುವ ಹನುಮಂತನು ವಿಶೇಷವಾಗಿದ್ದು, ಆಕಾಶ, ಭೂಮಿ ಮತ್ತು ಪಾತಾಳ ಹೀಗೆ ಮೂರು ಲೋಕಗಳನ್ನು ಪ್ರತಿನಿಧಿಸುವ ವಿಶ್ವರೂಪವನ್ನು ಹೊಂದಿದ್ದಾನೆ.
ದಶಕಂಠ ರಾವಣ, ಶತಕಂಠ ಮತ್ತು ಪಾತಾಳ ರಾವಣ (ಮೈರಾವಣ) ಎಂಬ ಮೂವರು ರಾವಣರನ್ನು ಸಂಹರಿಸಿ, ಆ ಅಸುರರಿಗೆ ಮುಕ್ತಿಯನ್ನು ನೀಡಿ ತನ್ನಲ್ಲೇ ಐಕ್ಯ ಮಾಡಿಕೊಂಡ ಸಂಕೇತವಾಗಿ ಇಲ್ಲಿನ ವಿಗ್ರಹವಿದೆ ಎಂದು ತಿಳಿಸಿದರು.
ಇಲ್ಲಿ ‘ಫಲ ಸಮರ್ಪಣೆ’ ಮಾಡುವುದು ಅತ್ಯಂತ ಪ್ರಸಿದ್ಧ ವ್ರತವಾಗಿದ್ದು, ಭಕ್ತರು ಕೇವಲ ಒಂದು ತೆಂಗಿನ ಕಾಯಿ ಸಮರ್ಪಿಸಿದರೆ ಸಾಕು, ಹನುಮಂತನು ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಹೇಳಿದರು.
ಜಗತ್ತಿನಲ್ಲಿ ಯುದ್ಧದ ಭೀತಿ ತೊಲಗಿ, ಎಲ್ಲೆಡೆ ಶಾಂತಿ ನೆಲೆಸಲಿ ಮತ್ತು ಸಮಸ್ತ ಜನರಿಗೂ ಒಳಿತಾಗಲಿ ಎಂದು ಈ ಶುಭದಿನದಂದು ಸ್ವಾಮೀಜಿ ಪ್ರಾರ್ಥಿಸಿದರು.
ಭಕ್ತರು ಜೈ ವೀರ ಹನುಮಾನ್ ಎಂಬ ಘೋಷಣೆ ಕೂಗುತ್ತಾ ಪ್ರಾರ್ಥನೆ ಮಾಡಿದರು.
ಗರ್ ವಾಪಸಿ:
ಇದೆ ವೇಳೆ ಚಾಮರಾಜನಗರ, ಗುಂಡ್ಲುಪೇಟೆ ಮತ್ತಿತರ ಕಡೆಯಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದವರು ಇಂದು ಸ್ವಾಮೀಜಿಯವರ ಸಮ್ಮುಖದಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸಾಗಿದ್ದು ನಿಜಕ್ಕೂ ವಿಶೇಷವಾಗಿತ್ತು.
ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಿಂದೂ ಧರ್ಮಕ್ಕೆ ವಾಪಸಾದವರೆಲ್ಲರಿಗೂ ಆಶೀರ್ವಾದ ನೀಡಿ,ಪ್ರತಿದಿನ ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ದೇವರಿಗೆ‌ ನಮಸ್ಕರಿಸಬೇಕೆಂದು ಸಲಹೆ ನೀಡಿದರು.
ಒಂದು ವೇಳೆ ದೇವಸ್ಥಾನಕ್ಕೆ ಹೋಗಲಾಗದೇ ಇದ್ದರೆ ನಾವೇ ಒಂದು ದೇವಸ್ಥಾನವನ್ನೇ ಕಟ್ಟೋಣ ಎಂದು ನುಡಿದರು.
ಈ‌ ವೇಳೆ ಶ್ರೀಗಳು ಮಹಿಳೆಯರಿಗೆ ಸೀರೆಗಳನ್ನು ವಿತರಿಸಿ ಆಶೀರ್ವದಿಸಿ ದರು.

ದತ್ತಪೀಠದಲ್ಲಿ ಹನುಮ ಜಯಂತಿ ಸಂಭ್ರಮ: ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ Read More

ಗಣಪತಿ ಶ್ರೀಗಳ‌ ವರ್ಧಂತಿ: ಶೋಭಾಯಾತ್ರೆ ಪ್ರಚಾರ ಪೋಸ್ಟರ್ ಬಿಡುಗಡೆ

ಮೈಸೂರು: ಅವಧೂತ ದತ್ತಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ವರ್ಧಂತಿ ಅಂಗವಾಗಿ ದತ್ತಸೇನೆ ವತಿಯಿಂದ ಜೂನ್ 1ರಂದು ಬೃಹತ್ ಶೋಭಾಯತ್ರೆ ಹಮ್ಮಿಕೊಳ್ಳಲಾಗಿದೆ.

ಜೂನ್ 1 ರಂದು ಬೆಳಗ್ಗೆ 10ಘಂಟೆಗೆ ಮೈಸೂರಿನ ಚಾಮುಂಡಿಪುರಂ ವೃತ್ತದಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ಬೃಹತ್ ಶೋಭಾಯತ್ರೆಯನ್ನು ಹಮ್ಮಿಕೊಂಡಿದ್ದು ಇದರ ಪ್ರಚಾರ ಭಿತ್ತಿಪತ್ರವನ್ನ ಇಂದು ಶಾಸಕ ಟಿಎಸ್. ಶ್ರೀವತ್ಸ ರವರು ಬಿಡುಗಡೆ ಮಾಡಿದರು.

ಈ ವೇಳೆ ಟಿ.ಎಸ್. ಶ್ರೀವತ್ಸ ಅವರು ಮಾತನಾಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರು ಮೈಸೂರಿಗೆ ಆಧ್ಯಾತ್ಮಿಕ ಧಾರ್ಮಿಕ ಸಾಮಾಜಮುಖಿ ಜೊತೆಯಲ್ಲೆ ಸಾಂಸ್ಕೃತಿಕವಾಗಿ ಸಾಕಷ್ಟು ಕೊಡುಗೆಯನ್ನ ನೀಡಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಸಂಧರ್ಭದಲ್ಲಿ ಶ್ರೀಗಳು ಪ್ರತಿದಿನ ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕೀಯ ನೆರವು ಅನ್ನದಾಸೋಹ ನೆರವನ್ನ ನೀಡಿದ್ದರು ಎಂದು ಸ್ಮರಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಾಮುಂಡಿಪುರಂ ವೃತ್ತದಿಂದ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ನಡೆಯುವ ಶೋಭಾಯಾತ್ರೆಯಲ್ಲಿ ಮಂಗಳವಾದ್ಯ ನಾದಸ್ವರ, ವೇದಬಳಗ, ಭಜನಾಮಂಡಳಿ, ಸ್ವಾಮೀಜಿ ಅವರ ಸಾರೋಟು ರಥ ಸಾಗಲಿದ್ದು ಮೈಸೂರಿನ ಸಂಘ ಸಂಸ್ಥೆಗಳು ಭಾಗವಹಿಸಬೇಕೆಂದು ಶ್ರೀವತ್ಸ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಜೋಗಿ ಮಂಜು, ಜಿ. ರಾಘವೇಂದ್ರ, ದತ್ತಸೇನೆ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ, ನಿರೂಪಕ ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.

ಗಣಪತಿ ಶ್ರೀಗಳ‌ ವರ್ಧಂತಿ: ಶೋಭಾಯಾತ್ರೆ ಪ್ರಚಾರ ಪೋಸ್ಟರ್ ಬಿಡುಗಡೆ Read More