ಶೋಷಿತ ಜಾತಿ-ಸಮುದಾಯಗಳು ಜಾತಿ ಸಂಘಟನೆ ಮೂಲಕ ಹಕ್ಕುಗಳನ್ನು ಪಡೆಯಿರಿ -ಸಿಎಂ

ಗದಗ: ಕರಾವಳಿ ಮತ್ತು ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ಜಾತಿಯವರ ಮಕ್ಕಳೇ ಧರ್ಮದ ಹೆಸರಿನಲ್ಲಿ ಇನ್ನೂ ಎಷ್ಟು ವರ್ಷ ಬಲಿಯಾಗಬೇಕು ಎಂದು ಪ್ರಶ್ನಿಸಿದರು.‌

ತಾಲ್ಲೂಕು ಕುರುಬರ ಸಂಘದ ರಜತ ಮಹೋತ್ಸವ ಮತ್ತು ರಾಜ್ಯ ಮಟ್ಟದ ಕನಕೋತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ,ಅಸಮಾನತೆ, ಜಾತಿ ಶೋಷಣೆಯಿಂದ ಲಾಭ ಮಾಡಿಕೊಳ್ಳುತ್ತಿರುವವರು ಸಮಾಜದ ಬದಲಾವಣೆಗೆ ವಿರೋಧವಿದ್ದಾರೆ. ಇವರು ಹಿಂದುಳಿದವರ ಮನೆಯ ಮಕ್ಕಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರುವುದನ್ನು ಸಹಿಸುವುದಿಲ್ಲ,
ಹಾಗಾಗಿ ದೇವರು, ಧರ್ಮದ ಹೆಸರಿನಲ್ಲಿ ಹಿಂದುಳಿದ ಜಾತಿಗಳ ಮನೆಯ ಮಕ್ಕಳನ್ನೇ ಬಲಿ ಆಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಹಿಂದುಳಿದವರ ಮಕ್ಕಳನ್ನು ಬಲಿ ಕೊಡುವವರ ಮಾತು ಕೇಳಿಕೊಂಡು ನಾವು ತಲೆ ಆಡಿಸುತ್ತಾ ಕೂರಬಾರದು ಎಂದು ಸಲಹೆ ನೀಡಿದರು.

ಶಿಕ್ಷಣ-ಸಂಘಟನೆ-ಹೋರಾಟ ಎನ್ನುವುದು ಅಂಬೇಡ್ಕರ್ ಅವರು ಶೋಷಿತ, ಹಿಂದುಳಿದ ಜಾತಿ ಸಮುದಾಯಗಳಿಗೆ ಕೊಟ್ಟ ಮಂತ್ರವಾಗಿದೆ. ಈ ಮೂರೂ ಮಂತ್ರಗಳನ್ನು ಅಳವಡಿಸಿಕೊಂಡು ಶೋಷಿತ ಜಾತಿ ಸಮುದಾಯಗಳು ಶಿಕ್ಷಣ ಪಡೆದು ದೊಡ್ಡ ಸಂಘಟನೆ ಮಾಡಿಕೊಳ್ಳುವ ಮೂಲಕ ಹೋರಾಟದ ಹಾದಿಯಲ್ಲಿ ತಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಶಿಕ್ಷಣ ಎಂದರೆ ಪ್ರಗತಿಪರ ಮತ್ತು ವೈಜ್ಞಾನಿಕವಾದ ಹಾಗೂ ವಿಚಾರಶೀಲವಾದ ಶಿಕ್ಷಣ ಪಡೆಯಬೇಕು. ಈಗ ಶಿಕ್ಷಿತರು ಎಂದು ಹೇಳಿಕೊಳ್ಳುವ ವೈದ್ಯರು, ಎಂಜಿನಿಯರ್ ಗಳೂ ಕೂಡಾ ಮೌಡ್ಯ, ಕಂದಾಚಾರವನ್ನು ಪಾಲಿಸುತ್ತಿದ್ದಾರೆ. ಶಿಕ್ಷಿತರೇ ಹೆಚ್ಚು ಜಾತಿವಾದಿಗಳಾಗಿ ಸಮಾಜದ ಪ್ರಗತಿಗೆ ಅಡ್ಡಿಯಾಗಿದ್ದಾರೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು.

ಸಹೋದರತ್ವ, ಸಮಾನತೆ ಮತ್ತು ಪರಧರ್ಮ ಸಹಿಷ್ಣುತೆ ನಮ್ಮ ಸಂವಿಧಾನ ನೀಡಿರುವ ಮಹೋನ್ನತ ಮೌಲ್ಯಗಳಾಗಿವೆ, ಈ ಮೌಲ್ಯಗಳೇ ಹಿಂದುಳಿದ ಜಾತಿ, ಸಮುದಾಯಗಳಿಗೆ ದೊಡ್ಡ ಶಕ್ತಿ ಆಗಿದೆ ಎಂದು ತಿಳಿಸಿದರು.

ನಾಡ ಹಬ್ಬ ದಸರಾ ಉದ್ಘಾಟನೆಗಾಗಿ ಈ ನಾಡಿಗೆ ಬೂಕರ್ ಪ್ರಶಸ್ತಿ ಮೂಲಕ ಘನತೆ ತಂದ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದೆವು, ಸುಪ್ರೀಂಕೋರ್ಟ್ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಜಾತಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಅವರವರ ಜಾತಿ ಹೆಸರನ್ನು ನಮೂದಿಸಬೇಕು. ಹಾಗೆಯೇ ಕುರುಬ ಸಮುದಾಯ ಕೂಡ ಜಾತಿ ಕಾಲಂನಲ್ಲಿ ಕೇವಲ ಕುರುಬ ಎಂದಷ್ಟೆ ದಾಖಲಿಸಿ ಎಂದು ಕರೆ ನೀಡಿದರು.

ನಾವು ಎಲ್ಲಾ ಜಾತಿ, ಎಲ್ಲಾ ಧರ್ಮ ಮತ್ತು ಎಲ್ಲಾ ಪಕ್ಷದವರಿಗಾಗಿ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳಿಂದ ರಾಜ್ಯದ ಜನತೆ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ. ತಲಾ ಆದಾಯದಲ್ಲಿ ದೇಶದಲ್ಲಿ ನಾವೇ ನಂಬರ್ ಒನ್ ಆಗಿರುವುದೇ ರಾಜ್ಯದ ಆರ್ಥಿಕತೆ ಪ್ರಗತಿಯಲ್ಲಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.

ಸಚಿವರಾದ ಎಚ್.ಕೆ.ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮದ್, ಶಾಸಕರಾದ ರಾಘವೇಂದ್ರ ಹಿಟ್ನಾಳ್ , ರಾಕೇಶ್ ಧವನ್ ಸಿದ್ದರಾಮಯ್ಯ ಸೇರಿ ಮಾಜಿ ಸಚಿವರು, ಶಾಸಕರು ಹಾಗೂ ಸಮುದಾಯದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

ಶೋಷಿತ ಜಾತಿ-ಸಮುದಾಯಗಳು ಜಾತಿ ಸಂಘಟನೆ ಮೂಲಕ ಹಕ್ಕುಗಳನ್ನು ಪಡೆಯಿರಿ -ಸಿಎಂ Read More

ಕುರಿಗಾರರ ಮೇಲಿನ ಹಲ್ಲೆ, ಹತ್ಯೆ, ಬಹಿಷ್ಕಾರ ಖಂಡಿಸಿ ಗದಗದಲ್ಲಿ ಭಾರೀ ಪ್ರತಿಭಟನೆ

ಗದಗ,ಮಾ.13: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಳವಾಟ ಗ್ರಾಮದಲ್ಲಿ ಕುರಿಗಾಹಿಯ ಕತ್ತು ಕತ್ತರಿಸಿ ಹತ್ಯೆ ಮಾಡಿರುವದು,ಮತ್ತಿತರ ದೌರ್ಜನ್ಯ ವಿರೋಧಿಸಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ‌ ನಡೆಸಿದವು.

ನಗರದ ಟಿಪ್ಪು ವೃತ್ತದಿಂದ ಕುರುಬ ಸಮಾಜ ಬಾಂಧವರು ನೂರಾರು ಕುರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ತೆರಳಿ ಪ್ರತಿಭಟನೆ ನಡೆಸಿದರು.

ಗದಗ ಜಿಲ್ಲೆಯ ಕುರುಬ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾ ಕುರಿಗಾರರ ಸಹಕಾರಿ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಕುರುಬ ಸಮಾಜದ ಮಹಿಳಾ ಪಿ.ಡಿ.ಒ ಮೇಲೆ ಹಲ್ಲೆ ಮತ್ತು ಕಲಬುರಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಕುರುಬರಿಗೆ ಬಹಿಷ್ಕಾರ ಹಾಕಿರುವದನ್ನು ಖಂಡಿಸಲಾಯಿತು‌.

ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಉಗಲವಾಟ ಗ್ರಾಮದಲ್ಲಿ ಕುರಿಗಾಹಿ ಯುವಕ ಶರಣಪ್ಪ ಜಮ್ಮನಕಟ್ಟಿಯ ಮೇಲೆ ದುಷ್ಕರ್ಮಿಗಳು ರಾಕ್ಷಸಿಕೃತ್ಯ ಮೆರೆದು ಕತ್ತು ಸೀಳಿ ಕೊಂದು ಹಾಕಿದ್ದಾರೆ. ಭಾರತ ದೇಶದ ಸಂಸ್ಕೃತಿಗೆ ಕುರುಬರ ಕೊಡುಗೆ ಬಹಳ ದೊಡ್ಡದಿದೆ. ಕುರುಬರ ವಿಶ್ವದ ಮೂಲ ಪುರುಷರು, ದೈವಾಂಶ ಸಂಭೂತರು ಎಂದೆಲ್ಲಾ ಕರೆಯಿಸಿಕೊಳ್ಳುತ್ತಿರುವ ಮುಗ್ಧ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಒಂದೇ ತಿಂಗಳಿನಲ್ಲಿ ಮೂರು ಪ್ರಕರಣಗಳು ನಡೆದಿವೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಕುರಿಗಾಹಿಗಳು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲೆನ್ನದೇ ಊರೂರು ಸುತ್ತುವ ಪ್ರಕೃತಿಯ ಮಡಿಲಿನಲ್ಲಿ ಪ್ರಕೃತಿಯ ಆರಾಧಕರಾಗಿರುವ ಕುರಿಗಾಹಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಅರಣ್ಯ ಇಲಾಖೆಯವರ ಮಾನಸಿಕ, ದೈಹಿಕ ಹಿಂಸೆಗಳು ಜೊತೆಗೆ ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯ ಜೊತೆ ಕೊಲೆಗಾರರು ನಿರ್ದಯಿಗಳಾಗಿ ಕತ್ತು ಸೀಳಿ ಕೊಂದು ಹಾಕುತ್ತಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಬಜೆಟ್‌ನಲ್ಲಿ ಕುರಿಗಾರರಿಗೆ ಘೋಷಣೆಗಳನ್ನು ಮಾಡುತ್ತಿವೆ,ಆದರೆ ಕುರಿಗಾರರಿಗೆ ಅನುಕೂಲಗಳು ಮರೀಚಿಕೆಯಾಗಿವೆ. ಸರ್ಕಾರ ಕಾಯಿದೆಗಳನ್ನು ಮಾಡಿವೆ. ಬಂದೂಕು ಲೈಸನ್ಸ್ ಬಗ್ಗೆ ಘೋಷಣೆ ಮಾಡಿದೆ ಆದರೆ ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಕುರಿಗಾಹಿಗಳು ದೇಶದ ಆವಿಭಾಜ್ಯ ಅಂಗವಾಗಿದ್ದು, ಅವರ ಜೀವನೋಪಾಯ ಮತ್ತು ಸುರಕ್ಷತೆಗೆ ರಾಜ್ಯ ಸರ್ಕಾರದ ತುರ್ತು ಗಮನ ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಪೊಲೀಸರು ಸೌಹಾರ್ದತೆಯಿಂದ, ಸ್ಥಳೀಯ ಆಡಳಿತದ ಸಹಕಾರದಿಂದ ಕುರಿಗಾರರಿಗೆ ಆತ್ಮಸ್ಥೆರ್ಯ ತುಂಬುವ ಪ್ರಾಮಾಣಿಕ ಕೆಲಸವಾಗಬೇಕಿದೆ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶವನ್ನು ಮಾಡಬೇಕೆಂದು ಮನವಿ ಮಾಡಿದರು.

ಸರಕಾರ ಕುರಿಗಾರನ ಹತ್ಯೆ ಸೇರಿದಂತೆ ಎಲ್ಲಾ ಹಿಂಸಾತ್ಮಕ ಘಟನೆಗಳಿಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಿ, ಕುರಿಗಾಹಿಗಳಿಗೆ ವಿಶೇಷ ರಕ್ಷಣೆ ಒದಗಿಸಬೇಕು. ಹತ್ಯೆಗೀಡಾದ ಕುರಿಗಾರರ ಕುಟುಂಬಕ್ಕೆ ಆರ್ಥಿಕ ಪರಿಹಾರ ನೀಡಬೇಕು ಮತ್ತು ಕುರಿಗಾರರಿಗೆ ಬಂದೂಕು ತರಬೇತಿ ನೀಡಿ, ಲೈಸನ್ಸ್ ನೀಡುವ ಪ್ರಕ್ರಿಯೆ ಸರಳೀಕೃತಗೊಳಿಸಬೇಕು ಎಂದು ಒಕ್ಕೂರಲಿನಿಂದ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕುರುಬ ಸಮಾಜದ ಹಿರಿಯರಾದ ಫಕ್ಕೀರಪ್ಪ ಹೆಬಸೂರ, ರುದ್ರಣ್ಣ ಗುಳಗುಳಿ, ವಾಸಣ್ಣ ಕುರಡಗಿ, ರವಿ ದಂಡಿನ, ಹೇಮಂತ ಗಿಡ್ಡಹನುಮಣ್ಣವರ, ಮಂಜು ಜಡಿ, ಮುತ್ತು ಜಡಿ, ಬಸವರಾಜ ಕುರಿ, ಉಮೇಶ ಪೂಜಾರ, ರವಿ ಜೋಗಿನ, ಮಲ್ಲೇಶಪ್ಪ ಕೊಣ್ಣೂರ, ಮುತ್ತಪ್ಪ ಕುರಿ, ಕುಮಾರ ಮಾರನಬಸರಿ, ಬಸಪ್ಪ ಶಿರೂರ, ನಾರಾಯಣ ಜಡಿ, ದೇವಪ್ಪ ಮಲ್ಲಸಮುದ್ರ, ಬಸವರಾಜ ಜಡಿ, ಬರಮಲಿಂಗಪ್ಪ ಬಿಂಗಿ, ಸೋಮು ಮೇಟಿ, ಚನ್ನಪ್ಪ ಕೊಪ್ಪದ, ಮುದಿಯಪ್ಪ ಬಿಸಾವಿ, ಸಿದ್ದಲಿಂಗಪ್ಪ ಕಾಡಣವರ, ಮಂಜುನಾಥ ಹುಲ್ಲೂರು, ಎಸ್.ಎಸ್.ಹಳ್ಳಿ, ಮಲ್ಲಪ್ಪ ಓಲೆಕಾರ, ಗೋಳಪ್ಪ ಕೋತಿ, ರಮೇಶ ಮಳಲಿ, ಬಸಪ್ಪ ರೋಣದ, ಬಸವರಾಜ ಅಣ್ಣಿಗೇರಿ, ಚೆನ್ನಮ್ಮ ಹುಳಕಣ್ಣವರ, ರೇಖಾ ಜಡಿಯವರು, ಸುರೇಖಾ ಕುರಿ, ಬಾಳಮ್ಮ ಶಿವಾನಂದಮಠ, ಭಾಗ್ಯಶ್ರೀ ಬಾಬಣ್ಣ, ನಾಗಪ್ಪ ಗುಗ್ಗರಿ, ನೀಲಪ್ಪ ಗಡ್ಡಣ್ಣನವರ, ಉಮೇಶ ಜೋಳದ, ಹನುಮಂತಪ್ಪ ಮುಂಡರಗಿ, ಮಾರುತಿ ಜಡಿಯವರ, ಸುರೇಶ ಮಾಳಗಿಮನಿ, ರಾಜು ಪವರ, ಉಮೇಶ ಜೋಳದ, ಹನುಮಂತ ಗಿಡ್ಡಹನಮಣ್ಣವರ, ಸತೀಶ ಗಿಡ್ಡಹನಮಣ್ಣವರ, ಶೇಖರಪ್ಪ ಚನ್ನಳ್ಳಿ, ಫಕೀರೇಶ ಪೂಜಾರ, ಕುಶಾಲ ದೇವರಮನಿ, ಮಲ್ಲೇಶ ಬಡಿಗೇರ ಮುಂತಾದವರು ಪಾಲ್ಗೊಂಡಿದ್ದರು.

ಕುರಿಗಾರರ ಮೇಲಿನ ಹಲ್ಲೆ, ಹತ್ಯೆ, ಬಹಿಷ್ಕಾರ ಖಂಡಿಸಿ ಗದಗದಲ್ಲಿ ಭಾರೀ ಪ್ರತಿಭಟನೆ Read More

ಸದನದಲ್ಲಿ ಉತ್ತರ ಕರ್ನಾಟಕದಸಮಸ್ಯೆಗಳ ಬಗ್ಗೆ ಚರ್ಚೆ :ಸಿದ್ದರಾಮಯ್ಯ

ಗದಗ: ಸೋಮವಾರದಿಂದ ಬುಧವಾರದವರೆಗೆ ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಗದಗ್ ಜಿಲ್ಲೆಯ ರೋಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಉತ್ತರ ಕರ್ನಾಟಕವಾಗಿ,ದಕ್ಷಿಣ ಕರ್ನಾಟಕ ವಾಗಲಿ ಎಲ್ಲಾ ಜಿಲ್ಲೆಗಳ ಸಮಸ್ಯೆ‌ ಪರಿಹರಿಸುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ವಿಜಯೇಂದ್ರ ಬಗ್ಗೆ ‌ಸಿಎಂ ಮಾಡಿರುವ ಆರೋಪ ಸುಳ್ಳು ಎಂದು ಮಾನಪ್ಪಾಡಿ ಹೇಳಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ,ಮಾನಪ್ಪಾಡಿ ಅವರು ಅವರದೇ ವಿಡಿಯೊದಲ್ಲಿ ನೀಡಿದ ಹೇಳಿಕೆ ಆಧಾರದ ಮೇಲೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಸಿಎಂ ತಿಳಿಸಿದರು.

ಸಿಬಿಐ ತನಿಖೆಗೆ ಕೊಟ್ಟರೆ ಕಾಂಗ್ರೆಸ್ಸಿನವರೇ ಸಿಕ್ಕಿ ಬೀಳುತ್ತಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ವರದಿಗಾರರ ಪ್ರಶ್ನೆಗೆ, ಹಾಗಿದ್ದರೆ ಸಿಬಿಐ ತನಿಖೆಗೆ ಆಗಲಿ ಎಂದು ಸಿದ್ದರಾಮಯ್ಯ ಹೇಳಿದರು.

ವಿಡಿಯೊದಲ್ಲಿರುವ ಧ್ವನಿ ಮಾನಪ್ಪಾಡಿ ಅವರದ್ದೋ ಅಲ್ವೋ ಎಂದು ಮಾಧ್ಯಮದವರಿಗೇ ಚೆನ್ನಾಗಿ ಗೊತ್ತಿರತ್ತೆ ತಾನೇ ಎಂದು ಸಿಎಂ ಮರು ಪ್ರಶ್ನಿಸಿದರು.

ಸದನದಲ್ಲಿ ಉತ್ತರ ಕರ್ನಾಟಕದಸಮಸ್ಯೆಗಳ ಬಗ್ಗೆ ಚರ್ಚೆ :ಸಿದ್ದರಾಮಯ್ಯ Read More