ಪಂಜಾಬ್ ರೀತಿ ರಾಜ್ಯದ ರೈತರಿಗೂ ಪ್ರತಿ ಎಕರೆಗೆ 20 ಸಾವಿರ ಪರಿಹಾರಕ್ಕೆ ಆಪ್ ಆಗ್ರಹ

ಬೆಂಗಳೂರು: ಪಂಜಾಬ್ ರಾಜ್ಯದ ಆಮ್ ಆದ್ಮಿ ಪಕ್ಷದ ಸಿಎಂ ಭಗವಂತ ಮಾನ್ ಸರ್ಕಾರ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರ ಜಮೀನಿಗೆ ಘೋಷಿಸಿರುವಂತೆ ರಾಜ್ಯದ ರೈತರಿಗೂ ಸಹ ಪ್ರತಿ ಎಕರೆಗೆ 20 ಸಾವಿರ ರೂ ಪರಿಹಾರ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಈ ಕುರಿತು ಮಾತನಾಡಿದ್ದು, ರಾಜ್ಯ ಸರ್ಕಾರವು ಹೆಕ್ಟೇರ್ ಲೆಕ್ಕದಲ್ಲಿ ಘೋಷಿಸಿರುವ 17,000 ಮತ್ತು 25,000 ರೂ.ಗಳು ಅರೆಕಾಸಿನ ಮಜ್ಜಿಗೆಯಂತಿದೆ, ಉತ್ತರ ಕರ್ನಾಟಕದ ರೈತರು ಖಾಸಗಿಯವರಿಂದ ಸಾಲ,ಸೋಲ ಮಾಡಿ ಅತಿವೃಷ್ಟಿಯಿಂದಾದ ಅನಾಹುತಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಸರ್ಕಾರ ನೀಡುವ ಪರಿಹಾರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರನ್ನು ಪಾರು ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಪಂಜಾಬ್ ಸರ್ಕಾರವು ಕ್ಷಿಪ್ರಗತಿಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ಪೂರ್ಣಗೊಳಿಸಿ ದೇಶದಲ್ಲಿಯೇ ಅತಿ ಹೆಚ್ಚಿನ ಪರಿಹಾರ ಧನವನ್ನು ಘೋಷಿಸಿದೆ, ರಾಜ್ಯದಲ್ಲಿ ಇದುವರೆಗೂ ಜಂಟಿ ಸಮೀಕ್ಷೆ ಕಾರ್ಯ ಪೂರ್ಣ ಗೊಂಡಿಲ್ಲ, ಕೃಷಿ ಅಧಿಕಾರಿಗಳ ನಿಧಾನ ಗತಿಯ ಸರ್ವೆ ಕಾರ್ಯಗಳನ್ನು ನೋಡಿದರೆ ಮೂರ್ನಾಲ್ಕು ತಿಂಗಳಾದರೂ ಮುಗಿಯುವುದಿಲ್ಲ. ಆದರೆ ಕೃಷಿ ಸಚಿವರು ಪರಿಹಾರವನ್ನು ಈಗಲೇ ಘೋಷಿಸಿಬಿಟ್ಟಿದ್ದಾರೆ, ಯಾವ ರೀತಿ ರೈತರಿಗೆ ಈ ಅಲ್ಪ ಮೊತ್ತ ತಲುಪಲು ಸಾಧ್ಯ ಎಂಬುದನ್ನು ಕೃಷಿ ಸಚಿವರು ಉತ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ರೀತಿಯ ಸೋಗಲಾಡಿತನ ವರ್ತನೆಯನ್ನು ಬಿಟ್ಟು ಕೂಡಲೇ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ಶೀಘ್ರವೇ ಜಂಟಿ ಸರ್ವೆ ಕಾರ್ಯ ಮುಗಿಸಿ ಪಂಜಾಬ್ ಸರ್ಕಾರದ ಮಾದರಿಯಲ್ಲಿ ಎಕರೆಗಳಲ್ಲಿ ಪರಿಹಾರ ಧನವನ್ನು ಮರು ಘೋಷಿಸಬೇಕೆಂದು ಜಗದೀಶ್ ವಿ. ಸದಂ ಒತ್ತಾಯಿಸಿದ್ದಾರೆ.

ಪಂಜಾಬ್ ರೀತಿ ರಾಜ್ಯದ ರೈತರಿಗೂ ಪ್ರತಿ ಎಕರೆಗೆ 20 ಸಾವಿರ ಪರಿಹಾರಕ್ಕೆ ಆಪ್ ಆಗ್ರಹ Read More

ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿಯ ಲಕ್ಷಣಗಳು-ಅಶೋಕ್ ಭವಿಷ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮೊದಲು ಪರಿಹಾರ ಘೋಷಣೆ ಮಾಡಿ ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಪರಿಹಾರವನ್ನೇ ತಿಳಿಸದೆ ಕೇವಲ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಗಿರುವ ಪ್ರವಾಹದ ಸ್ಥಿತಿ ವೀಕ್ಷಿಸಲು ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಎಲ್ಲ ರಸ್ತೆಗಳಲ್ಲಿ ಗುಂಡಿ ಇರುವುದರಿಂದ ಹಾಗೂ ರಸ್ತೆ ತಡೆದು ಜನರು ಪ್ರತಿಭಟಿಸುತ್ತಾರೆಂಬ ಭಯದಿಂದ ಮುಖ್ಯಮಂತ್ರಿ ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಜೋಳ ತೊಗರಿ ಸೇರಿದಂತೆ ಪ್ರತಿ ಬೆಳೆಗಳ ಹಾನಿ, ಮನೆ ಹಾನಿ, ಶಾಲೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಬೇಕಿತ್ತು. ಆದರೆ ಈವರೆಗೆ ಸರ್ಕಾರ ಆದೇಶ ಮಾಡಿಲ್ಲ. ಒಂದು ಕಡೆ ಖಜಾನೆ ಖಾಲಿಯಾಗಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲು ಸಿದ್ಧತೆ ನಡೆದಿದೆ ಎಂದು ದೂರಿದರು.

ಮುಖ್ಯಮಂತ್ರಿಗಳು ಸಚಿವರ ತಂಡ ರಚಿಸಬೇಕಿತ್ತು. ಅಧಿಕಾರಿಗಳ ಸಭೆ ಕರೆದು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಬೇಕಿತ್ತು. ಪುನರ್ವಸತಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕಿತ್ತು. ಏನೂ ಮಾಡದೆಯೇ ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಅಶೋಕ್ ಕಿಡಿ ಕಾರಿದರು.

ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿಯಾಗುವ ಲಕ್ಷಣಗಳು ಕಂಡುಬಂದಿವೆ. ಕ್ರಾಂತಿಯ ನಂತರ ಸಿಎಂ ಬದಲಾವಣೆಯಾಗುವ ಲಕ್ಷಣವಿದೆ. ಸರ್ಕಾರ ಅಸ್ಥಿರಗೊಂಡು ಬಿದ್ದುಹೋದರೆ ಚುನಾವಣೆ ಮಾಡುವುದೇ ಸೂಕ್ತ ಎಂದು ಇದೇ ವೇಳೆ ಪ್ರತಿಪಕ್ಷ ನಾಯಕರು ಹೇಳಿದರು.

ಬೆಂಗಳೂರಿನ ರಸ್ತೆ ಗುಂಡಿಗಳು ಸಾವಿನ ಗುಂಡಿಗಳಾಗಿವೆ. ಬೆಂಗಳೂರಿನಲ್ಲಿ ಒಬ್ಬ ಯುವತಿ ರಸ್ತೆ ಗುಂಡಿಯಿಂದಾಗಿ ಜೀವ ಕಳೆದುಕೊಂಡಿದ್ದಾಳೆ. ಈ ಸಾವಿಗೆ ಕಾರಣ ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಬೈಕ್‌ನಲ್ಲಿ ಓಡಾಡಿದರೂ, ಸಿಎಂ ನಗರ ಪ್ರದಕ್ಷಿಣೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿಯ ಲಕ್ಷಣಗಳು-ಅಶೋಕ್ ಭವಿಷ್ಯ Read More

ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರ ಸಾಲ ಮನ್ನಾಗೆ ನಿಖಿಲ್ ಆಗ್ರಹ

ಕಲಬುರಗಿ: ರಾಜ್ಯಾದ್ಯಂತ ಭಾರೀ ಮಳೆ ಮತ್ತು ಪ್ರವಾಹದಿಂದ ವ್ಯಾಪಕ ಬೆಳೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕೆಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.

ಕಲಬುರಗಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿಯಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ,ಆದರೂ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡುವುದು ಬಿಟ್ಟರೆ ಬೇರೆ ಏನು ಮಾಡಲಿಲ್ಲ. ರಾಜ್ಯದಿಂದ ಕೃಷಿ ಸಚಿವರು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಕೃಷಿ ಸಚಿವರು ರೈತರ ಸಂಕಷ್ಟವನ್ನು ಆಲಿಸಲಿಲ್ಲ ಎಂದು ಕಾಲ ಕಿಡಿ ಕಾರಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಒಂದೇ ಒಂದು ಪ್ರದೇಶಕ್ಕೂ ಸಿಎಂ ಇದುವರೆಗೂ ಭೇಟಿ ನೀಡಿಲ್ಲ.ರಾಜ್ಯದ ಕೃಷಿ ಸಚಿವರಂತೂ ಅವರ ಮತಕ್ಷೇತ್ರ ಬಿಟ್ಟು ಹೊರಗೆ ಬಂದೇ ಇಲ್ಲ. ಕಲಬುರಗಿ ಜಿಲ್ಲೆಗಳನ್ನ ಕೃಷಿ ಸಚಿವರು ಮರತೇ ಬಿಟ್ಟಿದ್ದಾರೆ.ಈ ಭಾಗದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದರೂ ಸಹ ಕೃಷಿ ಸಚಿವರು ಭೇಟಿ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಲಬುರಗಿಯಲ್ಲಿ ಒಂದು ಲಕ್ಷದ ಐದು ಸಾವಿರ ಹೆಕ್ಟೇರ್ ಪ್ರದೇಶ ಹನಿಗೊಳಗಾಗಿದೆ. ಅದರಲ್ಲಿ 58 ಸಾವಿರ ಹೆಕ್ಟೇರ್ ತೊಗರಿ ಪ್ರದೇಶ ಹಾನಿಯಾಗಿದೆ. ಹತ್ತಿ, ಸೋಯಾಬಿನ್ ಅನೇಕ ಬೆಳೆಗಳು ನಾಶವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ 50 ರಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷಕ್ಕೆ ಅಧಿಕಾರ ಇರಲಿ ಬಿಡಲಿ ರೈತರ ಪರವಾಗಿ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ. ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಕೆಕೆಆರ್ ಡಿ ಬಿ ವತಿಯಿಂದ ಐದು ಸಾವಿರ ಕೋಟಿ ಹಣ ಅಭಿವೃದ್ಧಿ ಮಾಡಲು ಮೀಸಲಿಟ್ಟಿದ್ದೇವೆ ಎಂದು ಭಾಷಣ ಮಾಡುತ್ತಾರೆ. ಇಂತಹ ಸಮಯದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ಗಳನ್ನು ನೀಡುವುದರ ಮೂಲಕ ರೈತರ ಸಾಲದ ಹೊರೆಯನ್ನ ಕಡಿಮೆ ಮಾಡಬೇಕೆಂದು ನಿಖಿಲ್‌ ಒತ್ತಾಯಿಸಿದರು.

ಎನ್ ಡಿ ಆರ್ ಎಫ್ ನಿಯಮ ತಿದ್ದುಪಡಿಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂಬ ಪ್ರಿಯಾಂಕಾ ಖರ್ಗೆ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.

ಈ ವಿಚಾರದಲ್ಲಿ ಆ ಸರಕಾರ ಈ ಸರಕಾರ ಎನ್ನದೇ ಹಾನಿಗೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕಿದೆ. ಈ ದಿಕ್ಕಿನಲ್ಲಿ ಎಲ್ಲರೂ ಒಂದಾಗಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರ ಸಾಲ ಮನ್ನಾಗೆ ನಿಖಿಲ್ ಆಗ್ರಹ Read More

ಉಕ್ಕಿ ಹರಿದ ಕಾವೇರಿ; ಜಮೀನು ಮುಳುಗಡೆ-ಪ್ರವಾಹ ಭೀತಿಯಲ್ಲಿ ಜನತೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೆಗಾಲ: ಕಾವೇರಿ ನದಿ ಉಕ್ಕಿ  ಹರಿಯುತ್ತಿರುವುದರಿಂದ ಕೊಳ್ಳೇಗಾಲ
ತಾಲ್ಲೂಕಿನ ನದಿ ತೀರದ ಗ್ರಾಮಗಳು ಮತ್ತೊಮ್ಮೆ ಪ್ರವಾಹದ ಭೀತಿ ಎದುರಿಸುವಂತಾಗಿದೆ.

ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರ ಹಾಗೂ ಮುಳ್ಳೂರು ಗ್ರಾಮಗಳಲ್ಲಿ ಜಮೀನುಗಳು ಪ್ರವಾಹದಿಂದ ಜಲಾವೃತವಾಗಿದ್ದು ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳು ಕಳೆದ 20 ದಿನಗಳ ಹಿಂದೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಜಮೀನುಗಳು ಮುಳುಗಡೆಯಾಗಿ ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿದ್ದುದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು.

ರಾತ್ರಿ ಜಮೀನುಗಳು ಮುಳುಗಡೆಯಾಗಿರುವುದರಿಂದ
ಮತ್ತೊಮ್ಮೆ ಪ್ರವಾಹ ಭೀತಿ ಎದುರಿಸುವಂತಾಗಿದೆ.

ಕರ್ನಾಟಕ ರಾಜ್ಯದ ಹಾಗೂ ಕೇರಳದ ಕರಾವಳಿ ತೀರದ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಿಂದ ವರುಣ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ಕಬಿನಿ ಹಾಗೂ ಕೆ ಆರ್ ಎಸ್ ಜಲಾಶಯಗಳಿಗೆ  ನಿರಂತರವಾಗಿ ಹರಿದು ಬರುತ್ತಿದೆ.

ಹಾಗಾಗಿ ಜಲಾಶಯಗಳು ಅದಾಗಲೇ ತುಂಬಿ ಭರ್ತಿಯಾಗಿದ್ದು 2 ಜಲಾಶಯಗಳಿಂದ 1.25 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರನ್ನು ಕಾವೇರಿ, ಕಪಿಲ ನದಿಗಳಿಗೆ ಹರಿ ಬಿಡಲಾಗುತ್ತಿದೆ.
           
ಕೆ ಆರ್ ಎಸ್ ಜಲಾಶಯದಿಂದ 80 ಸಾವಿರ ಕ್ಯೂಸೆಕ್, ಹಾಗೆಯೇ ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ನದಿಗಳಿಗೆ ಹರಿಬಿಡಲಾಗುತ್ತಿದೆ.

ಕಬಿನಿ ಹಾಗೂ ಕೆ.ಆರ್,ಎಸ್ 2 ಅಣೆಕಟ್ಟೆಗಳಿಂದ 1.25 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿರುವುದರಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ಕಬಿನಿ ಹಾಗೂ ಕಾವೇರಿ ನದಿಗಳು ಟಿ.ನರಸೀಪುರದ ಬಳಿ ಒಂದಾಗುತ್ತವೆ. ಇದರಿಂದ ಮುಂದೆ ಸಾಗುವ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಹಾಗಾಗಿ ಕೆಳಭಾಗದಲ್ಲಿರುವ ಕೆಲವು ನದಿ ಪಾತ್ರದ ಗ್ರಾಮಗಳು ಪ್ರತಿವರ್ಷ ಪ್ರವಾಹ ಭೀತಿ ಎದುರಿಸುತ್ತವೆ.

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಹಳೇ ಹoಪಾಪುರ ಗ್ರಾಮಗಳ ರೈತರ ಜಮೀನುಗಳು ಪ್ರವಾಹದಿಂದ ಜಲಾವೃತವಾಗಿದ್ದು ಈ ಗ್ರಾಮಗಳೊಡನೆ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನ ಕಳೆದ ಭಾರಿಯಂತೆ ಈ ಭಾರಿಯು ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ.

ನಿನ್ನೆ ವರೆಗೂ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನೀರು ಇಂದು ಜಮೀನುಗಳಿಗೂ ನುಗ್ಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರನ್ನು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರು ಅಪಾಯದ ಮಟ್ಟ ಮೀರ ಬಹುದು ಎಂದು ಜನ ಆತಂಕಕ್ಕೊಳಗಾಗಿದ್ದಾರೆ.

ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಈಗಾಗಲೆ ಕಟ್ಟೆಚ್ಚರ ವಹಿಸಿದೆ ಜನರಿಗೆ ಆತಂಕಪಡದಂತೆ ಮನವಿ ಮಾಡಿದೆ.

ಉಕ್ಕಿ ಹರಿದ ಕಾವೇರಿ; ಜಮೀನು ಮುಳುಗಡೆ-ಪ್ರವಾಹ ಭೀತಿಯಲ್ಲಿ ಜನತೆ Read More

ಭೀಮಾ ನದಿ‌ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು

ಯಾದಗಿರಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಜೋರಾದ ಹಿನ್ನೆಲೆಯಲ್ಲಿ ಭೀಮಾನದಿಯಲ್ಲಿ ಪ್ರವಾಹ ಉಂಟಾಗಿದ್ದು, ಇಬ್ಬರು ಯುವಕರ ಬಲಿಯಾಗಿದ್ದಾರೆ.

ಭೀಮಾನದಿಗೆ ದನಗಳಿಗೆ ನೀರು ಕುಡಿಸಲು ಯುವಕರು ಬಂದಿದ್ದರು,ಆಗ ಭೀಮಾನದಿಯಲ್ಲಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ರಮೇಶ್ (17) ಸಿದ್ದಪ್ಪ (21) ಭೀಮಾನದಿ ಪಾಲಾದ ದನಗಾಹಿ ಯುವಕರು.

ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು,
ಅಪಾಯದ ಮಟ್ಟ ಮೀರಿ ನದಿ‌ ಹರಿಯುತ್ತಿದೆ.

ನದಿಪಾಲಾದ ಯುವಕರಿಗೆ ಭೀಮಾನದಿಯಲ್ಲಿ ಶೋಧ ಕಾರ್ಯ

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭೀಮಾನದಿಯಲ್ಲಿ ದನಗಾಹಿ ಯುವಕರಿಗೆ ಶೋಧ ಕಾರ್ಯ
ನಡೆಸಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಮೃತ ಯುವಕರ ಶವಕ್ಕಾಗಿ ಶೋಧ ಕಾರ್ಯ ನಡೆದಿದ್ದರೂ ದೇಹಗಳು ಪತ್ತೆಯಾಗಿಲ್ಲ.

ಭೀಮಾ ನದಿ‌ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು Read More