ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು

ಮೈಸೂರು: ವಿವಾಹವಾಗಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಚಲ್ಲಾಟವಾಡಿ,ಕೊನೆಗೆ ಆಕೆಯನ್ನ ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.

ಯುವತಿ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪ್ರಿಯಕರ ಆಲ್ಬರ್ಟ್, ಈತನ ತಮ್ಮ ಗೋಕುಲ್ ಹಾಗೂ ಪತ್ನಿ ಸುಭಿತ ಮೇಲೆ ಯುವತಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ಹಾಗೂ ಆಲ್ಬರ್ಟ್ ಬೆಂಗಳೂರಿನ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಒಂದು ವರ್ಷದ ಹಿಂದೆ ಆಲ್ಬರ್ಟ್ ಮೈಸೂರಿನಲ್ಲಿ ನೆಲೆಸಿದ್ದು ಖಾಸಗಿ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ. 4 ತಿಂಗಳ ಹಿಂದೆ ಪ್ರೇಯಸಿಯನ್ನೂ ಸಹ ಮೈಸೂರಿಗೆ ಕರೆಸಿಕೊಂಡು ವಿಜಯನಗರದಲ್ಲಿ ಮನೆ ಮಾಡಿ ಇರಿಸಿದ್ದ.

ವಿವಾಹಿತನಾಗಿದ್ದ ಆಲ್ಬರ್ಟ್ ನನ್ನ ಹಾಗೂ ಪತ್ನಿ ನಡುವೆ ವೈವಾಹಿಕ ಜೀವನ ಸರಿ ಇಲ್ಲ, ಡೈವೋರ್ಸ್ ಕೊಡುತ್ತಿದ್ದೇನೆ ನಂತರ ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿದ್ದ.

ಕಳೆದ ನಾಲ್ಕಾರು ದಿನಗಳಿಂದ ಆಲ್ಬರ್ಟ್ ಮನೆಗೆ ಬಂದಿರಲಿಲ್ಲ.ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಆಲ್ಬರ್ಟ್ ಕೆಲಸ ಮಾಡುತ್ತಿದ್ದ ಕಾರ್ ಶೋರೂಂ ಗೆ ಹೋಗಿ ಪರಿಶೀಲಿಸಿದಾಗ ಅಲ್ಲೂ ಬಂದಿರಲಿಲ್ಲ.

ತಕ್ಷಣ ದಟ್ಟಗಳ್ಳಿಯಲ್ಲಿದ್ದ ಆಲ್ಬರ್ಟ್ ಮನೆಗೆ ಯುವತಿ ಹೋದಾಗ ಆತನ ಪತ್ನಿ ಸುಭಿತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ನಂತರ ಆಲ್ಬರ್ಟ್ ತಮ್ಮ ಗೋಕುಲ್ ಕೂಡಾ ಯುವತಿಯನ್ನ ನಿಂದಿಸಿದ್ದಾರೆ.ಈ‌ ವೇಳೆ ಆಲ್ಬರ್ಟ್ ಬಂದು ಮಹಡಿಯಿಂದ ಕೆಳಗೆ ತಳ್ಳುವಂತೆ ಗೋಕುಲ್ ಗೆ ಸೂಚಿಸಿದ್ದಾನೆ.ನಂತರ ಆತನೂ ಎರಡನೇ ಮಹಡಿಗೆ ಹೋಗಿ ತಮ್ಮನೊಂದಿಗೆ ಸೇರಿ ಯುವತಿಯನ್ನ ಕೆಳಗೆ ತಳ್ಳಿದ್ದಾರೆ.

ಇದರಿಂದಾಗಿ ಯುವತಿ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಮಾಡಲೆಂದೇ ಮಹಡಿಯಿಂದ ಕೆಳಗೆ ತಳ್ಳಿದ್ದಾರೆಂದು ಆರೋಪಿಸಿ ಯುವತಿ ಆಲ್ಬರ್ಟ್ ಸೇರಿದಂತೆ ಮೂವರ ವಿರುದ್ದ ದೂರು ದಾಖಲಿಸಿದ್ದಾರೆ.

ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು Read More

ಡಾ.ಕೆ.ಸುಧಾಕರ್‌ ರನ್ನು ಗುರಿಯಾಗಿಸಿ ಎಫ್‌ಐಆರ್:‌ ಅಶೋಕ ಕಿಡಿ

ಬೆಂಗಳೂರು: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಅವರ ಪಾತ್ರ ಇಲ್ಲದಿದ್ದರೂ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಡಾ.ಕೆ.ಸುಧಾಕರ್‌ ವಿರುದ್ಧ ಎಫ್‌ಐಆರ್‌ ಮಾಡಿ ಎ1 ಆರೋಪಿ ಮಾಡಿದ್ದಾರೆ. ಆತ್ಮಹತ್ಯೆಗೆ ಅವರೇ ಸಂಪೂರ್ಣ ಒತ್ತಡ ಹೇರಿದರೆ ಮಾತ್ರ ಈ ರೀತಿ ಎಫ್‌ಐಆರ್‌ ಮಾಡಬೇಕಾಗುತ್ತದೆ. ಆದರೆ ಸುಧಾಕರ್‌ ಗೆ ಚಾಲಕ ಬಾಬು ಅವರ ಜೊತೆ ಆಪ್ತ ಸಂಬಂಧವೇನೂ ಇಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಜಾತಿ ನಿಂದನೆಯ ಆರೋಪ ಬರುವುದೇ ಇಲ್ಲ ಎಂದು ಹೇಳಿದರು.

ಸುಧಾಕರ್‌ ಆ ವ್ಯಕ್ತಿಯನ್ನು ಎದುರಿಗೆ ನಿಲ್ಲಿಸಿಕೊಂಡು ನಿಂದಿಸಿಲ್ಲ, ಅಥವಾ ಸಂದೇಶ ಕಳುಹಿಸಿಲ್ಲ. ಕಾಂಗ್ರೆಸ್‌ ಸರ್ಕಾರ ವಿಪಕ್ಷಗಳ ನಾಯಕರನ್ನು ಗುರಿಯಾಗಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.

ಈ ಹಿಂದೆ ಶಾಸಕ ಬೈರತಿ ಬಸವರಾಜ್‌ ಅವರ ಮೇಲೂ ಇದೇ ರೀತಿ ಕ್ರಮ ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಡೆತ್‌ನೋಟ್‌ ಬರೆದಿಟ್ಟು ಸತ್ತಿದ್ದರು. ಆದರೆ ಕಾಂಗ್ರೆಸ್‌ ಶಾಸಕರಾದ ಎ.ಎಸ್‌.ಪೊನ್ನಣ್ಣ ಹಾಗೂ ಮಂಥರ್‌ ಗೌಡ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಲೇ ಇಲ್ಲ. ಪೊಲೀಸರು ಎಲ್ಲರಿಗೂ ಸಮಾನವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಚಾಲಕ ಬಾಬು ಬೇರೆ ಬೇರೆ ಕಾರಣಗಳಿಂದ ಸಾಲ ಮಾಡಿದ್ದರು. ಅವರಿಗೆ ಕೆಲ ಮಂದಿ ವಂಚನೆ ಮಾಡಿದ್ದರು. ಆದರೆ ಇದರಲ್ಲಿ ಡಾ.ಕೆ.ಸುಧಾಕರ್‌ ಪಾತ್ರವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಶೋಕ್ ಹೇಳಿದರು.

ಈ ಪ್ರಕರಣದಲ್ಲಿ ಡೆತ್‌ನೋಟ್‌ ಮುಂಚಿತವಾಗಿಯೇ ಸಿಕ್ಕರೂ ಅದನ್ನು ಪೊಲೀಸರಿಗೆ ತಿಳಿಸಿಲ್ಲ. ಚಾಲಕ ಬಾಬು ಅವರ ಕುಟುಂಬದವರು ಡಾ.ಕೆ.ಸುಧಾಕರ್‌ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದರೂ, ಅವರನ್ನು ಎ1 ಆರೋಪಿ ಮಾಡಿದ್ದಾರೆ ಎಂದು ದೂರಿದರು.

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಶಾಸಕರಾದ ಮುನಿರತ್ನ, ಸಿ.ಟಿ.ರವಿ, ರವಿಕುಮಾರ್‌ ಮೊದಲಾದ ಬಿಜೆಪಿ ನಾಯಕರನ್ನು ಕಾಂಗ್ರೆಸ್‌ ಟಾರ್ಗೆಟ್‌ ಮಾಡಿದೆ. ಮಂಜುನಾಥ್‌ ಹಾಗೂ ನಾಗೇಶ್‌ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಚಾಲಕ ಬಾಬು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಹಾಗೆಯೇ ಆನ್‌ಲೈನ್‌ ಗೇಮ್‌ನಿಂದಲೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಎಲ್ಲೂ ಸಂಸದ ಡಾ.ಕೆ.ಸುಧಾಕರ್‌ ಅವರ ಬಗ್ಗೆ ಆರೋಪ ಮಾಡಿಲ್ಲ. ನಮ್ಮ ಬಳಿ ಯಾರೇ ಬಂದರೂ ಸಹಾಯ ಮಾಡುತ್ತೇವೆ. ಆದರೆ ಹಾಗೆ ಸಹಾಯ ಕೇಳಿ ಹೋದವರು ಸುಸೈಡ್‌ ಮಾಡಿಕೊಂಡರೆ ಅದಕ್ಕೆ ನಾವೇ ಕಾರಣರಾಗುವುದಿಲ್ಲ ಎಂದು ತಿಳಿಸಿದರು.

ಈ ಹಿಂದೆ ಕೊಡಗು ಶಾಸಕರಾದ ಮಂಥರ್‌ ಗೌಡ ಹಾಗೂ ಎ.ಎಸ್‌.ಪೊನ್ನಣ್ಣ, ಸಚಿವ ಪ್ರಿಯಾಂಕ್‌ ಖರ್ಗೆ ಹೆಸರುಗಳು ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷ್ಯಾಧಾರಗಳೂ ಇತ್ತು. ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಅನೇಕ ಬಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಸಚಿನ್‌ ಸಚಿವರ ಜೊತೆಗೆ ಮಾತಾಡಿದ್ದರು. ಅಷ್ಟೆಲ್ಲ ಸಾಕ್ಷಿಗಳಿದ್ದರೂ ಸಚಿವರ ವಿರುದ್ಧ ಪೊಲೀಸರು ಕ್ರಮ ವಹಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಕೆ.ಸುಧಾಕರ್‌ ರನ್ನು ಗುರಿಯಾಗಿಸಿ ಎಫ್‌ಐಆರ್:‌ ಅಶೋಕ ಕಿಡಿ Read More

ಅಕ್ರಮ ಪಡಿತರ ವಶ:ಮೂವರ ವಿರುದ್ಧ ಪ್ರಕರಣ ದಾಖಲು

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೆಗಾಲ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದ ವೇಳೆ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ
ಚುರುಕು ಮುಟ್ಟಿಸಿದ್ದಾರೆ.

ಈ ವೇಳೆ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ನೆನ್ನೆ 4:30 ರ ವೇಳೆ ಸತ್ತೆಗಾಲ ರಸ್ತೆಯಲ್ಲಿ ಚಾ.ನಗರ ಪಟ್ಟಣದ ಮೂವರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದರು.

ಆಹಾರ ಇಲಾಖೆ ಶಿರಸ್ತೆದಾ‌ರ್ ವಿಶ್ವನಾಥ್ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೆಲುವನಹಳ್ಳಿ ಅಡ್ಡರಸ್ತೆ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ‌. ಈ ವೇಳೆ ಕೆ.ಎ.05_ಎಂ.ಟಿ. 3778 ಸಂಖ್ಯೆಯ ಸ್ವಿಪ್ಟ್ ಕಾರಿನಲ್ಲಿದ್ದ 248 ಕೆ.ಜಿ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಇದಾಯತ್, ಜುಬೇದ್ ಮತ್ತು ವಾಸೀಂ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪಡಿತರ ಅಕ್ಕಿ ಖರೀದಿಸಿ ಸಾಗಾಟ ಮಾಡುವ ಜಾಲಗಳ ಮೇಲೆ ಪೊಲೀಸರು ಮತ್ತೆ ಆಹಾರ ಇಲಾಖೆ ಅಧಿಕಾರಿಗಳು ಎಷ್ಟೇ ಧಾಳಿ ನಡೆಸಿ ಅಕ್ರಮವನ್ನು ಬೇಧಿಸುತಿದ್ದರೂ ಮತ್ತೆ ಈ ಜಾಲಗಳು ಕವಲೊಡೆಯುತಿದೆ.

ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ರೈಸ್ ಮಿಲ್ ಮಾಲೀಕರಿಗೆ ಸಾಗಿಸುವ ವ್ಯವಸ್ಥಿತ ಕಳ್ಳ ಜಾಲಗಳು ಬಡವರನ್ನೆ ಬಂಡವಾಳ ಮಾಡಿಕೊಂಡಿವೆ.

ಉಚಿತವಾಗಿ ನೀಡುವ ಶಕ್ತಿವರ್ಧಿತ ಪಡಿತರ ಅಕ್ಕಿಯನ್ನು ಏನೇನೋ ನೆಪ ಹೇಳಿಕೊಂಡು ಬರುವ ಅಕ್ಕಿ ಕಳ್ಳರ ಜಾಲ ಅದನ್ನು ಬಳಸದಂತೆ ನೋಡಿಕೊಂಡು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಅದನ್ನ ರೈಸ್ ಮಿಲ್ ಗಳಿಗೆ ತೆಗೆದುಕೊಂಡು ಹೋಗಿ ಪಾಲಿಶ್ ಮಾಡಿ ಅದೇ ಅಕ್ಕಿಯನ್ನ 25 ಕೆ.ಜಿಯ ಬ್ರಾಂಡೆಡ್ ಚೀಲಕ್ಕೆ ತುಂಬಿ ದಿನಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಇಲ್ಲಿ ಕಡಿಮೆ ಬೆಲೆಗೆ ನಾವು ಕೊಟ್ಟ ಪಡಿತರ ಅಕ್ಕಿಯೇ ಪಾಲೀಶ್ ಮಾಡಿ ಹೆಚ್ಚಿನ ಬೆಲೆ ನಮಗೆ ಮಾರಾಟ ಮಾಡುತ್ತಾರೆ ಎಂಬುದನ್ನು‌ ಜನ ಅರಿಯಬೇಕಿದೆ.

ಚಾ.ನಗರ ಜಿಲ್ಲೆಯಲ್ಲಿ ತಿಂಗಳಿಗೆ ಮೂರರಿಂದ ನಾಲ್ಕು ಪ್ರಕರಣಗಳು ಅಕ್ರಮ ಪಡಿತರ ಅಕ್ಕಿ ಸಾಗಾಟದ ಮೇಲೆ ದಾಖಲಾಗುತ್ತಿದೆ. ಆದರೂ ಕಾಳಸಂತೆಕೋರರು ಕಡಿಮೆಯಾಗದೆ ಹೆಚ್ಚಾಗಿ ಪಡಿತರ ಅಕ್ಕಿ ಮಾಫಿಯದಲ್ಲಿ ತೊಡಗಿಕೊಳ್ಳುತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಸುಪ್ರೀತ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಕ್ರಮ ಪಡಿತರ ವಶ:ಮೂವರ ವಿರುದ್ಧ ಪ್ರಕರಣ ದಾಖಲು Read More

ಯುವತಿ ಜತೆಗಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಬೆದರಿಕೆ:ಎಫ್ಐಆರ್

ಮೈಸೂರು: ವಿವಾಹವಾಗುವುದಾಗಿ ನಂಬಿಸಿ ಯುವತಿ ಜತೆ ತೆಗೆಸಿಕೊಂಡಿದ್ದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಕಿರುಕುಳ ನೀಡಿದ ಆರೋಪದ ಮೇಲೆ
ನಾಲ್ವರ ವಿರುದ್ಧ ದೂರು ದಾಖಲಾಗಿದೆ.

ನಗರದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ತುಮಕೂರು ಮೂಲದ ಸದಾನಂದಗೌಡ, ಅವರ ಅಕ್ಕ ರಾಜಮ್ಮ, ಭಾವ ಹನುಮಂತಪ್ಪ ಹಾಗೂ ದಯಾನಂದ್ ಎಂಬುವರ ವಿರುದ್ದ ದೂರು ದಾಖಲಾಗಿದೆ.

ಕಳೆದ 9 ವರ್ಷಗಳ ಹಿಂದೆ ಯುವತಿಗೆ ಸದಾನಂದ್ ಎಂಬವರ ಪರಿಚಯವಾಗಿದೆ.ನಂತರ ಸ್ನೇಹ ಪ್ರೀತಿಗೆ ತಿರುಗಿದೆ.ಆತ ಮದುವೆ ಪ್ರಸ್ತಾಪ ಮಾಡಿದ್ದಾನೆ.

ಈ ನಡುವೆ ಬೈಕ್ ಕೊಡಿಸುವ ನೆಪದಲ್ಲಿ ಸದಾನಂದ್ ಯುವತಿಯಿಂದ ಚೆಕ್‌ಗಳನ್ನ ಪಡೆದಿದ್ದಾನೆ. ಆಕೆ ಬೈಕ್ ಹಣ ಹಿಂದಿರುಗಿಸಿದರೂ ಚೆಕ್‌ಗಳನ್ನ ಹಿಂದಿರುಗಿಸಿಲ್ಲ. ನಂತರ ಮದುವೆ ಆಗುವುದಾಗಿ ನಂಬಿಸಿದ್ದಾನೆ. ಇಬ್ಬರೂ ಹಲವಾರು ಸ್ಥಳಗಳಲ್ಲಿ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ. ಎರಡು ವರ್ಷಗಳ ನಂತರ ಜಾತಿ ನೆಪ ಒಡ್ಡಿ ಮದುವೆ ಆತ ನಿರಾಕರಿಸಿದ್ದಾನೆ.

ಇದರಿಂದಾಗಿ ಯುವತಿ ಅಂತರ ಕಾಯ್ದುಕೊಂಡಿದ್ದಾಳೆ. ಕೆಲಕಾಲ ಸುಮ್ಮನಿದ್ದ ಸದಾನಂದ್ ಮತ್ತೆ ಸಂಪರ್ಕಕ್ಕೆ ಬಂದು ಮನೆಯಿಂದ ಆಕೆ ನೀಡಿದ್ದ ಚೆಕ್‌ಗಳನ್ನು ಸ್ನೇಹಿತನ ಹೆಸರಲ್ಲಿ 8.50 ಲಕ್ಷ ರೂ. ಹಣ ಬರೆದು ಬ್ಯಾಂಕ್‌ ಗೆ ನೀಡುವ ಮೂಲಕ ಚೆಕ್ ಬೌನ್ಸ್ ಮಾಡಿಸಿದ್ದಾನೆ.ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.

ನಂತರ‌ ಆತ ಮನೆಗೆ ಬಂದು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದನೆಂದು ನೊಂದ ಯುವತಿ ಆರೋಪಿಸಿದ್ದಾರೆ.

ಬೇರೊಬ್ಬನ ಜೊತೆ ವಿವಾಹ ನಿಶ್ಚಯವಾದಾಗ ಹುಡುಗನ ಮನೆಯವರಿಗೆ ಫೋಟೋಗಳನ್ನ ತೋರಿಸಿ ಮದುವೆ ನಿಲ್ಲಿಸಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹರಿದುಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಹಾಗಾಗಿ ಸದಾನಂದಗೌಡ ಹಾಗೂ ಈತನಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ದ ನೊಂದ ಯುವತಿ ದೂರು ದಾಖಲಿಸಿದ್ದಾರೆ.

ಯುವತಿ ಜತೆಗಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಬೆದರಿಕೆ:ಎಫ್ಐಆರ್ Read More

ಸಾಕಿದ ನಾಯಿ ಸಾವು:ಪಶು ವೈದ್ಯಾಧಿಕಾರಿಗೆ ಥಳಿಸಿದ ದಂಪತಿ

ಮೈಸೂರು: ಚಿಕಿತ್ಸೆ ನಂತರ ಸಾಕಿದ ನಾಯಿ ಮೃತಪಟ್ಟಿದ್ದಕ್ಕೆ ಆಕ್ರೋಶ ಗೊಂಡ ಮಾಲೀಕರು ಪಶುವೈದ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್.ವನಂ ಮಾನಂದವಾಡಿ ರಸ್ತೆಯಲ್ಲಿರುವ ವೆಟರ್ನರಿ ಆಸ್ಪತ್ರೆ ಮುಖ್ಯ ವೈಧ್ಯಾಧಿಕಾರಿ ಡಾ.ಲಕ್ಷ್ಮೀಶ್ ಎಂಬುವರ ಮೇಲೆ ನಾಯಿ ಮಾಲೀಕರು ಹಲ್ಲೆ ಮಾಡಿದ್ದಾರೆ.

ಜಯನಗರ ನಿವಾಸಿ ಪ್ರದೀಪ್ ಹಾಗೂ ಅವರ ಪತ್ನಿ ಹಲ್ಲೆ ನಡೆಸಿದ್ದಾರೆಂದು ಡಾ.ಲಕ್ಷ್ಮೀಶ್ ದೂರು ನೀಡಿದ್ದಾರೆ.

ಪ್ರದೀಪ್ ಅವರ ಸಾಕಿದ ನಾಯಿ ಪಗ್ ಬೀಡ್ ಗೆ ಡಾ.ಲಕ್ಷ್ಮೀಶ್ ಚಿಕಿತ್ಸೆ ನೀಡಿದ್ದಾರೆ.ನಂತರ ಪ್ರದೀಪ್ ಅವರು ಖಾಸಗಿ ವೆಟರ್ನರಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಅವರ ನಾಯಿ ಮೃತಪಟ್ಟಿದೆ.

ಆದರೆ ಪ್ರದೀಪ್ ಮತ್ತು ಪತ್ನಿ ಆಸ್ಪತ್ರೆಗೆ ಬಂದು ಏನನ್ನೂ ಹೇಳದೆ ಡಾ.ಲಕ್ಷ್ಮೀಶ್ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೂಗಾಡಿದ್ದಾರೆ.

ನಂತರ ನಾಯಿ ಸಾವಿಗೆ ಕಾರಣ ತಿಳಿಯಲು ಖಾಸಗಿ ಆಸ್ಪತ್ರೆಗೆ ತೆರಳಿದ ಡಾ.ಲಕ್ಷ್ಮೀಶ್ ಅವರ ಮೇಲೆ ಪ್ರದೀಪ್ ಪತ್ನಿ ಹಲ್ಲೆ ಮಾಡಲು ಯತ್ನಿಸಿದ್ದಾರೆ.ಹಲ್ಲೆ ನಡೆಸಿದ ದಂಪತಿ ವಿರುದ್ದ ಕ್ರಮ ಕೈಗೊಳ್ಳುವಂತೆ ಡಾ.ಲಕ್ಷ್ಮೀಶ್ ಅಶೋಕಾಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸಾಕಿದ ನಾಯಿ ಸಾವು:ಪಶು ವೈದ್ಯಾಧಿಕಾರಿಗೆ ಥಳಿಸಿದ ದಂಪತಿ Read More

ಲಾಂಗ್ ಪ್ರದರ್ಶಿಸಿ ಅಟ್ಟಹಾಸ:ರೌಡಿ ವಿರುದ್ದ ಎಫ್ಐಆರ್

ಮೈಸೂರು: ಸಾರ್ವಜನಿಕ ಪ್ರದೇಶದಲ್ಲಿ ಲಾಂಗ್ ಬೀಸಿ ಭಯದ ವಾತಾವರಣ ಸೃಷ್ಟಿಸಿದ್ದ ರೌಡಿ ಸೇರಿದಂತೆ ಇಬ್ಬರ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿ ಮೋಹನ್ ಅಲಿಯಾಸ್ ಚಿಂಟು ಹಾಗೂ ರಕ್ಷಿತ್ ಅಲಿಯಾಸ್ ಕೇಕು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಮಾ. 11ರಂದು ನಗರದ ಕೆ.ಜಿ.ಕೊಪ್ಪಲಿನ ಸಿದ್ದಪ್ಪಾಜಿ ವೃತ್ತದಲ್ಲಿ ಮೋಹನ್ ಹಾಗೂ ರಕ್ಷಿತ್ ಲಾಂಗ್ ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಿದ್ದು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಸದಸ್ಯರಾದ ಬಸವರಾಜ ಅರಸ್ ಅವರು ಈ ದೃಶ್ಯಗಳನ್ನ ಗಮನಿಸಿ ನಂತರ ಪರಿಶೀಲನೆ ನಡೆಸಿದಾಗ ಲಾಂಗ್ ಪ್ರದರ್ಶಿಸಿರುವುದು ಖಚಿತವಾಗಿದೆ.

ಹಾಗಾಗು ಇಬ್ಬರು ಆರೋಪಿಗಳ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಲಾಂಗ್ ಪ್ರದರ್ಶಿಸಿ ಅಟ್ಟಹಾಸ:ರೌಡಿ ವಿರುದ್ದ ಎಫ್ಐಆರ್ Read More

ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ವಿವಾಹವಾದ:ಸಿಕ್ಕಿಬಿದ್ದ

ಮೈಸೂರು: ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ಮದುವೆಯಾದ ವಂಚಕ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಪ್ರಸಂಗ
ಮೈಸೂರಿನಲ್ಲಿ ನಡೆದಿದೆ‌

ಈ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಂಚಕನ ವಿರುದ್ದ ನ್ಯಾಯಾಲಯ ಆದೇಶದ ಅನ್ವಯ ಎಫ್ಐಆರ್ ದಾಖಲಾಗಿದೆ.

ಬೆಳಗಾವಿ ಮೂಲದ ವಿಜಯಕುಮಾರ್ ಲಟ್ಟಿ(39) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.

ಶ್ರೀನಿವಾಸ್ ಎಂಬುವರು ತಮ್ಮ ತಮ್ಮ ಪುತ್ರಿಯನ್ನು ನಂಬಿಸಿ ಮದುವೆ ಆಗಿ ವಿಜಯಕುಮಾರ್ ವಂಚಿಸಿದ್ದಾನೆಂದು ದೂರು ದಾಖಲಿಸಿದ್ದಾರೆ.

2021 ರಲ್ಲಿ ಮ್ಯಾಟ್ರಿಮೋನಿಯಲ್ ಮೂಲಕ ವಿಜಯ್ ಕುಮಾರ್ ಲಟ್ಟಿ ಎಂಬಾತ ಶ್ರೀನಿವಾಸ್ ಪುತ್ರಿ ಸ್ವಾತಿ ಎಂಬವರನ್ನ ಸಂಪರ್ಕಿಸಿದ್ದಾನೆ.

ಹೈಟೆಕ್ ಪ್ರೊಫೈಲ್ ಹಾಕಿ ಸ್ವಾತಿ ಹಾಗೂ ತಂದೆ ಶ್ರೀನಿವಾಸ್ ಅವರಿಗೆ ನಂಬಿಕೆ ಬರುವಂತೆ ಮಾಡಿದ್ದಾನೆ.ಪ್ಯಾರಿಸ್ ನಲ್ಲಿ ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂಬಂತೆ ಸರ್ಟಿಫಿಕೇಟ್ ಗಳನ್ನ ತೋರಿಸಿದ್ದಾನೆ.

ತಾನು ಪ್ಯಾರಿಸ್ ಗೆ ಹೋಗಬೇಕು ಮದುವೆ ಬೇಗ ಮಾಡಿಕೊಡಿ ಎಂದು ಒತ್ತಾಯ ಮಾಡಿ ದ್ದಾನೆ.ಆತನ ಮಾತು ನಂಬಿದ ಶ್ರೀನಿವಾಸ್ ಮಗಳನ್ನ ಕೊಟ್ಟು 2021ರ ಫೆ.15 ರಂದು ವಿವಾಹ ಮಾಡಿದ್ದಾರೆ.

ಈ ವೇಳೆ ಕರೋನಾ ಭೀತಿ ಇದ್ದುದರಿಂದ ಪ್ಯಾರೀಸ್ ಗೆ ಹೋಗಲು ವಿಳಂಬವಾಗುತ್ತಿದೆ ಎಂದು ನಂಬಿಸಿ ಅತ್ತೆ ಮನೆಯಲ್ಲೇ ಠಿಕಾಣಿ ಹೂಡಿದ್ದಾನೆ.

ನಂತರ ಬೆಂಗಳೂರಿನ ರಾಜಾಜಿನಗರಕ್ಕೆ ಪತ್ನಿಯನ್ನ ಕರದೊಯ್ದು ಐಶಾರಾಮಿ ಮನೆಯನ್ನ ತೋರಿಸಿ,ಬಿಎಂಡಬ್ಲೂ ಕಾರಿನಲ್ಲಿ ಓಡಾಡಿದ್ದಾನೆ.ಕಂಪನಿಯಿಂದ ತನಗೆ ಬಂದಿರುವಂತೆ ಲೆಟರ್ ಗಳನ್ನ ತೋರಿಸಿದ್ದಾನೆ.

ನಂತರ ಮನೆಯಲ್ಲಿದ್ದ 20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ,ಅಲ್ಲದೆ ಶ್ರೀನಿವಾಸ್ ಅವರ ಪತ್ನಿ ಸರಸ್ವತಿ ಹೆಸರಲ್ಲಿ ಮುತ್ತೂಟ್ ಫೈನಾನ್ಸ್ ನಲ್ಲಿ 20 ಲಕ್ಷ ಸಾಲ ಕೂಡಾ ಪಡೆದಿದ್ದಾನೆ.

ಮನೆಯಲ್ಲಿದ್ದ ಚಿನ್ನಾಭರಣ ಕಾಣೆಯಾಗಿದ್ದು ಗೊತ್ತಾಗಿ ಶ್ರೀನಿವಾಸ್ ಅವರಿಗೆ ಅನುಮಾನ ಬಂದು ಟ್ರಾಪ್ ಮಾಡಿದಾಗ ವಿಜಯ್ ಕುಮಾರ್ ಲಟ್ಟಿ ತಾನು ಕದ್ದಿರುವುದಾಗಿ ಒಪ್ಪಕೊಂಡಿದ್ದಾನೆ.

ಲಾಯರ್ ಮಧ್ಯಸ್ಥಿಕೆಯಲ್ಲಿ ಕದ್ದ ಚಿನ್ನಾಭರಣದ ಹಣ ಹಾಗೂ ಲೋನ್ ನಲ್ಲಿ ಪಡೆದ 20 ಲಕ್ಷ ಒಟ್ಟು 40 ಲಕ್ಷ ಹಿಂದಿರುಗಿಸಿದ್ದ.

ನಂತರ ತನಗೆ 40 ಲಕ್ಷ ವರದಕ್ಷಿಣೆ ಬೇಕು ಎಂದು ಪಟ್ಟುಹಿಡಿದಿದ್ದಾನೆ.ಈತನ ಕಿರುಕುಳಕ್ಕೆ ಬೇಸತ್ತ ಶ್ರೀನಿವಾಸ್ ಮಗಳ ಭವಿಷ್ಯದ ದೃಷ್ಟಿಯಿಂದ ವಿಚ್ಛೇದನ ಕೊಡಿಸಿದ್ದಾರೆ.

ಅಳಿಯನ ಮೋಸದತನದಿಂದ ಬೇಸತ್ತಿದ್ದ ಶ್ರೀನಿವಾಸ್ ವಿಜಯ್ ಕುಮಾರ್ ಲಟ್ಟಿ ಹಾಗೂ ಆತನ ತಂದೆ ಸದಾಶಿವ ವಿರೂಪಾಕ್ಷ ಲಟ್ಟಿ ವಿರುದ್ದ ನ್ಯಾಯಾಲಯದ ಮೊರೆ ಹೋಗಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈಗ ಎಫ್ಐಆರ್ ದಾಖಲಾಗಿದೆ.

ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ವಿವಾಹವಾದ:ಸಿಕ್ಕಿಬಿದ್ದ Read More

ಇನ್ಸ್ಟಾಗ್ರಾಂ,ಸ್ನಾಪ್ ಚಾಟ್ ನಲ್ಲಿ ಫಾಲೋಯರ್ಸ್ ಹೆಚ್ಚಳ: ಯುವತಿಗೆ ಹಲ್ಲೆ

ಮೈಸೂರು,ನ.1: ಇನ್ಸ್ಟಾಗ್ರಾಂ, ಸ್ನಾಪ್ ಚಾಟ್ ಫಾಲೋಯರ್ಸ್ ಹೆಚ್ಚಾಗಿದ್ದಕ್ಕೆ ಅಸೂಯೆಗೊಂಡ ಯುವತಿ ಸ್ನೇಹಿತರ ಜೊತೆ ಸೇರಿ ಮನೆಗೆ ನುಗ್ಗಿ ವಿಧ್ಯಾರ್ಥಿನಿಗೆ ಹಲ್ಲೆ ಮಾಡಿದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀಕಂಠೇಶ್ವರ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಶಾಫಿಯಾ ಮೇಲೆ ಹಲ್ಲೆ ನಡೆಸಲಾಗಿದೆ.

ಜೋಯಾ ಎಂಬಾಕೆ ಫರಾಜ್ ಹಾಗೂ ಮೋಹಿನ್ ಜೊತೆ ಸೇರಿ ಶಾಫಿಯಾಗೆ ಹಲ್ಲೆ ನಡೆಸಿದ್ದು ಮೂವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ಶಾಫಿಯಾ ಸುಮಾರು 2 ವರ್ಷಗಳಿಂದ ಇನ್ಸ್ಟಾಗ್ರಾಂ ಹಾಗೂ ಸ್ನಾಪ್ ಚಾಟ್ ನಲ್ಲಿ ಸಕ್ರೀಯಳಾಗಿದ್ದಾಳೆ. ಹಾಗಾಗಿ ಫಾಲೋಯರ್ಸ್ ಸಂಖ್ಯೆ ಹೆಚ್ಚಾಗಿದೆ.
ಇದರಿಂದ ಅಸೂಯೆಗೊಂಡ ಜೋಯಾ ಇನ್ಸ್ಟಾಗ್ರಾಂ ಹಾಗೂ ಸ್ನಾಪ್ ಚಾಟ್ ಅಕೌಂಟ್ ಗಳನ್ನ ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾಳೆ.

ಇದೇ ವಿಷಯವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಲೆ ಇತ್ತು,ಅ. 28 ರಂದು ಜೋಯಾ ತನ್ನ ಸ್ನೇಹಿತರಾದ ಫರಾಜ್ ಹಾಗೂ ಮೋಹಿನ್ ಜೊತೆ ರಾಜೀವ್ ನಗರದಲ್ಲಿರುವ ಮನೆಗೆ ನುಗ್ಗಿ ಶಾಫಿಯಾ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿ ಶೋಕೇಸ್ ಗಾಜು ಪುಡಿ ಮಾಡಿದ್ದಾರೆ.

ಮಾಹಿತಿ ತಿಳಿದು ಉದಯಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ, ಪೊಲೀಸರನ್ನ ಕಂಡ ಕೂಡಲೆ ಮೂವರು ಆರೊಪಿಗಳು ಪರಾರಿಯಾಗಿದ್ದಾರೆ.

ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಜೋಯಾ,ಫರಾನ್,ಮೊಹೀನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಶಾಫಿಯಾ ಉದಯಗಿರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.

ಇನ್ಸ್ಟಾಗ್ರಾಂ,ಸ್ನಾಪ್ ಚಾಟ್ ನಲ್ಲಿ ಫಾಲೋಯರ್ಸ್ ಹೆಚ್ಚಳ: ಯುವತಿಗೆ ಹಲ್ಲೆ Read More

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್:ಸಂಕಷ್ಟ ಪ್ರಾರಂಭ

ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರುಗೆ ಈಗ ಸಂಕಷ್ಟ ಪ್ರಾರಂಭವಾಗಿದೆ.

ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಅವರ ದೂರಿನ ಆಧಾರದ ಮೇಲೆ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದರು.

ಎಫ್ಐಆರ್ ಯಾರ ವಿರುದ್ಧ, ವಿವರ ಇಲ್ಲಿದೆ:

ಸಿದ್ದರಾಮಯ್ಯ, ಮುಖ್ಯಮಂತ್ರಿ (A1)
ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ(A2)
ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ(A3)
ದೇವರಾಜು, ಮಾರಾಟಗಾರ, ನಕಲಿ ಭೂ ಮಾಲೀಕ (A4) ಮತ್ತು ಇತರರು‌.
ಕಾಯ್ದೆಗಳು:
ಭ್ರಷ್ಟಾಚಾರ ತಡೆ ಕಾಯ್ದೆ 1988,
ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ ದಾಖಲು,
ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ,
ಸೆಕ್ಷನ್ 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ ಮಾಡುವುದು,
ಸೆಕ್ಷನ್ 403 ಆಸ್ತಿಯ ದುರ್ಬಳಕೆ,
ಸೆಕ್ಷನ್ 406 ನಂಬಿಕೆಯ ಉಲ್ಲಂಘನೆ
ಸೆಕ್ಷನ್ 420 ವಂಚನೆ,
ಸೆಕ್ಷನ್ 426 ದುಷ್ಕೃತ್ಯವೆಸಗುವುದು,
ಸೆಕ್ಷನ್ 465 ಫೋರ್ಜರಿ,
ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಫೋರ್ಜರಿ,
ಸೆಕ್ಷನ್ 340 ಅಕ್ರಮ ಬಂಧನ,
ಸೆಕ್ಷನ್ 351 ಇತರರಿಗೆ ಹಾನಿಯನ್ನುಂಟು ಮಾಡುವುದು.

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್:ಸಂಕಷ್ಟ ಪ್ರಾರಂಭ Read More

ಮುಡ ಆಸ್ತಿ ವಶ ಪ್ರಕರಣ;2017 ರಲ್ಲಿ ದಾಖಲಾಗಿದ್ದ ಎಫ್ಐಆರ್-ಈಗ ಲೋಕಾದಿಂದ 18 ಮಂದಿಗೆ ನೋಟೀಸ್

ಮೈಸೂರು: ಉಳ್ಳವರಿಗೆ ಹಂಚಿಕೆ ಮಾಡಿದ್ದ ಮುಡ ಆಸ್ತಿಯನ್ನು ವಶಕ್ಕೆ ಪಡೆಯುವಂತೆ 2017ರಲ್ಲಿ ಆರ್ ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದ ಕುರಿತು ದಾಖಲಾಗಿರುವ ಎಫ್ ಐಆರ್ ಗೆ ಈಗ ಮತ್ತೆ ಜೀವ ಬಂದಿದೆ.

ಈ ಸಂಬಂಧ ಇದೀಗ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಮೂರು ದಿನಗಳ‌ ಒಳಗೆ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ.

ಸರ್ವೆ ನಂ.89 ಹಿನಕಲ್, ವಿಜಯ ನಗರ 2 ನೇ ಹಂತ, ಮೈಸೂರು ಇಲ್ಲಿ ಪ್ರಾಧಿಕಾರದ 7 ಎಕರೆ 18 ಗುಂಟೆ ಜಮೀನನ್ನ ವಿಜಯ ನಗರ 2 ನೇ ಹಂತದ ಬಡಾವಣೆ ನಿರ್ಮಿಸಲು ಭೂ ಸ್ವಾದೀನಪಡಿಸಿಕೊಳ್ಳಲಾಗಿತ್ತು.

1996-97 ರಲ್ಲಿ ಹಿನಕಲ್ ಪಂಚಾಯತಿಯ ಅಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮತ್ತು ಅಂದಿನ ಸದಸ್ಯರುಗಳು ಹಿನಕಲ್ ಬಡಜನರಿಗೆ ಆಶ್ರಯ ನಿವೇಶನ ರಚಿಸಿ ಹಂಚುತ್ತೇವೆ ಎಂದು ಪ್ರಾಧಿಕಾರದ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಪ್ರಾಧಿಕಾರದ ಅನುಮತಿ ಪಡೆಯದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರದ ಆಸ್ತಿಯಲ್ಲಿ ಸುಮಾರು 350 ಕ್ಕೂ ಹೆಚ್ಚು 25*25 ಅಳತೆಯ ನಿವೇಶನಗಳನ್ನು ರಚಿಸಿದ್ದರು.

ಈ ನಿವೇಶನಗಳನ್ನ ಬಿಎಂಎಲ್ ನೌಕರರಿಗೆ, ಶಾಲಾ ಶಿಕ್ಷಕರಿಗೆ, ಪಂಚಾಯತ್ ಪಿಡಿಒ ಗಳಿಗೆ, ಪೋಸ್ಟ್ ಆಫೀಸ್ ನೌಕರರಿಗೆ, ಸರ್ಕಾರಿ ನೌಕರರಿಗೆ, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಇನ್ನಿತರ ಉಳ್ಳವರಿಗೆ ಹಂಚಿಕೆ ಮಾಡಿದ್ದರು.

ಈ ಸಂಬಂಧ 2017ರಲ್ಲಿ ಗಂಗರಾಜು ಎಂಬುವವರು ಪ್ರಾಧಿಕಾರದ ಆಸ್ತಿಯನ್ನು ವಶಕ್ಕೆ ಪಡೆಯಲು ಪ್ರಾಧಿಕಾರಕ್ಕೆ ಹಾಗೂ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಎಫ್ಐಆರ್ ದಾಖಲು ಮಾಡಲು ಸರ್ಕಾರದಿಂದ ಅನುಮತಿ ನೀಡಲಾಗಿತ್ತು.

ಅಂತೆಯೇ 2022ರಲ್ಲಿ ಎಸಿಬಿ ಎಫ್ಐಆರ್ ದಾಖಲು ಮಾಡಿದ್ದು ಇದು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿತ್ತು.

ಈಗ ಲೋಕಾಯುಕ್ತ ಪೊಲೀಸರು ಪ್ರಾಧಿಕಾರದ 18 ಅಧಿಕಾರಿಗಳಿಗೆ ವಿಚಾರಣೆಗೆ 3 ದಿವಸದೊಳಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮುಡಾ ಸೂಪರಿಂಟೆಂಡೆಂಟ್, ಇಂಜಿನಿಯರ್, ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮುಡ ಆಸ್ತಿ ವಶ ಪ್ರಕರಣ;2017 ರಲ್ಲಿ ದಾಖಲಾಗಿದ್ದ ಎಫ್ಐಆರ್-ಈಗ ಲೋಕಾದಿಂದ 18 ಮಂದಿಗೆ ನೋಟೀಸ್ Read More