ವಿದೇಶಿ ಮಹಿಳೆಯೊಂದಿಗೆ ಅತಿರೇಕ ವರ್ತನೆ:ಆಟೋ ಡ್ರೈವರ್ ವಶಕ್ಕೆ

ಮೈಸೂರು,ಫೆ.1:‌ ವಿದೇಶಿ ಮಹಿಳೆಯ ಜೊತೆ ಬಲವಂತವಾಗಿ ಸೆಲ್ಫೀ ತೆಗೆದುಕೊಂಡು ಅತಿರೇಕವಾಗಿ ವರ್ತಿಸಿದ ಊಬರ್ ಆಟೋ ಡ್ರೈವರ್ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಊಬರ್ ಆಟೋ ಡ್ರೈವರ್ ರಂಜನ್ ವಿರುದ್ದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಸ್ಪೇನ್ ದೇಶದ ಮಹಿಳೆ ಮರಿಯಾ ನೋಯಲ್ ಕಟಲಡೋ ರೋಡ್ರಿಗ್ಸ್ ಅವರು ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ‌

ಮರಿಯಾ ರೋಡ್ರಿಗ್ಸ್ ಅವರು ನವೆಂಬರ್ ತಿಂಗಳಲ್ಲಿ ಯೋಗ ಟ್ರೈನಿಂಗ್ ಪಡೆಯಲು ಸ್ಪೇನ್ ದೇಶದಿಂದ ಮೈಸೂರಿಗೆ ಬಂದಿದ್ದು ಇನ್ಫೋಸಿಸ್ ಬಳಿ ಮನೆ ಬಾಡಿಗೆ ಪಡೆದು ತಂಗಿದ್ದಾರೆ.

ಜನವರಿ 26 ರಂದು ಗೋಕುಲಂ ನಿಂದ ತಮ್ಮ ಮನೆಗೆ ತೆರಳಲು ಮರಿಯಾ ರೋಡ್ರಿಗ್ಸ್ ಊಬರ್ ಆಟೋ ಬುಕ್ ಮಾಡಿದ್ದಾರೆ.(KA09 -B 6216) ಆಟೋ ಚಾಲಕ ರಂಜನ್ ವಿದೇಶಿ ಮಹಿಳೆಯನ್ನ ತನ್ನ ಆಟೋದಲ್ಲಿ ಕರೆದೊಯ್ಯುವಾಗ ಇನ್ಫೋಸಿಸ್ ಬಳಿ ಸೆಲ್ಫೀ ತೆಗೆಯಲು ಪ್ರಯತ್ನಿಸಿದ್ದಾನೆ.ಈ ಪ್ರಯತ್ನವನ್ನ ಮರಿಯಾ ರೋಡ್ರಿಗ್ಸ್ ವಿರೋಧಿಸಿದ್ದಾರೆ.

ನಂತರ ಆಟೋದಿಂದ ಇಳಿದ ರಂಜನ್ ವಿದೇಶಿ ಮಹಿಳೆಯನ್ನ ಹೊರಕ್ಕೆ ಎಳೆಯುವ ಪ್ರಯತ್ನ ಮಾಡಿ ನಂತರ ತಾನೇ ಆಕೆಯ ಪಕ್ಕದಲ್ಲಿ ಕುಳಿತು ಬುಜಗಳ ಮೇಲೆ ಕೈ ಹಾಕಿ ಬಲವಂತವಾಗಿ ಸೆಲ್ಪೀ ತೆಗೆದಿದ್ದಾನೆ.ಈ ವೇಳೆ ಆಕೆಗೆ ಮುತ್ತು ಕೊಡುವ ಪ್ರಯತ್ನ ಮಾಡಿ ವಿರೋಧಿಸುತ್ತಿದ್ದರೂ ಬಿಡದೆ ಬಲವಂತವಾಗಿ ಸೆಲ್ಪೀ ತೆಗೆದುಕೊಂಡಿದ್ದಾನೆ.

ನಂತರ ಆಕೆಗೆ ಫೋನ್ ನಂಬರ್ ನೀಡಿ ಮಸಾಜ್ ಬೇಕಿದ್ದಲ್ಲಿ ಕರೆಯಿರಿ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ.ರಂಜನ್ ಕಪಿಮುಷ್ಠಿಯಿಂದ ಬಿಡಿಸಿಕೊಂಡ ಮರಿಯಾ ರೋಡ್ರಿಗ್ಸ್ ಊಬರ್ ಕಂಪನಿಗೆ ದೂರು ನೀಡಿ ನಂತರ ಹೆಬ್ಬಾಳ ಠಾಣೆಗೆ ಬಂದು ರಂಜನ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ರಂಜನ್ ವಿರುದ್ದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತನನ್ನು‌ ವಶಕ್ಕೆ ಪಡೆಯಲಾಗಿದೆ.

ವಿದೇಶಿ ಮಹಿಳೆಯೊಂದಿಗೆ ಅತಿರೇಕ ವರ್ತನೆ:ಆಟೋ ಡ್ರೈವರ್ ವಶಕ್ಕೆ Read More