ವನ್ಯಜೀವಿ ಅರಣ್ಯ ಇಲಾಖೆ ಕಚೇರಿ: ಸಮಗ್ರ ಕಮಾಂಡ್ ಸೆಂಟರ್ ಉದ್ಘಾಟಿಸಿದ ಖಂಡ್ರೆ

(ವರದಿ:ಸಿದ್ದರಾಜು‌ ಕೊಳ್ಳೇಗಾಲ)

ಕೊಳ್ಳೆಗಾಲ: ಅರಣ್ಯ ಕ್ಷೀಣಿಸುತ್ತಿದ್ದು, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸಹಬಾಳ್ವೆಯಿಂದ ಮಾತ್ರ ಸಂಘರ್ಷ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಕೊಳ್ಳೆಗಾಲದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಸಮಗ್ರ ಕಮಾಂಡ್ ಸೆಂಟರ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ಗಸ್ತು ಹೆಚ್ಚಳದ ಮೂಲಕ ಹಾಗೂ ಅರಣ್ಯದಂಚಿನ ಜನರಲ್ಲಿ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ, ಈ ನಿಟ್ಟಿನಲ್ಲಿ ಕಮಾಂಡ್ ಕೇಂದ್ರ ಯಶಸ್ವೀ ಪರಿಹಾರ ಆಗಲಿದೆ ಎಂದು ಹೇಳಿದರು.
ಪ್ರಸ್ತುತ ನಾಗರಹೊಳೆ, ಎಂ.ಎಂ.ಹಿಲ್ಸ್, ಕಾಳಿ, ಮಡಿಕೇರಿ ಸೇರಿ ನಾಲ್ಕು ಕಡೆಗಳಲ್ಲಿ ಕಮಾಂಡ್ ಕೇಂದ್ರ ಸಿದ್ಧವಾಗಿದ್ದು ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ.
ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಚಿಕ್ಕಮಗಳೂರು ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಾಸನ ವಲಯದಲ್ಲಿ ಕಮಾಂಡ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ರಾಜ್ಯ ಮಟ್ಟದ ಕೇಂದ್ರ ಸಿದ್ಧವಾಗುತ್ತಿದ್ದು, ಅಧಿವೇಶನದ ನಂತರ ಇದನ್ನು ಉದ್ಘಾಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮರಾ, ಥರ್ಮಲ್ ಡ್ರೋನ್ ಕ್ಯಾಮರಾ ಇತ್ಯಾದಿಗಳನ್ನು ಬಳಸಿ ವನ್ಯಜೀವಿಗಳ ಚಲನ ವಲನದ ಬಗ್ಗೆ ನಿಗಾ ಇಟ್ಟು, ಯಾವ ಕಾಡಿನಂಚಿನ ಗ್ರಾಮದ ಬಳಿ ವನ್ಯಜೀವಿ ಇದೆ ಎಂಬ ಬಗ್ಗೆ ತತ್ ಕ್ಷಣ ಮಾಹಿತಿ ನೀಡಿದರೆ ಅಮೂಲ್ಯ ಜೀವಹಾನಿ ತಡೆಯಬಹುದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಮಾಂಡ್ ಸೆಂಟರ್ ಮಾಹಿತಿ ನೀಡಿದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್, ಈ ತಂತ್ರಾಂಶದಲ್ಲಿ ಯಾವ ಸಿಬ್ಬಂದಿ ಎಷ್ಟು ಹೊತ್ತಿನಲ್ಲಿ ಯಾವ ವಲಯದಲ್ಲಿ ಗಸ್ತಿನಲ್ಲಿದ್ದರು ಎಂಬ ಮಾಹಿತಿ ಲಭಿಸಲಿದೆ. ಅದೇ ರೀತಿ ವನ್ಯಜೀವಿಗಳು ನಾಡಿನತ್ತ ಬಂದಾಗ ಸಕಾಲಿಕ ಮಾಹಿತಿ ಪಡೆದು ಕಾಡಿನಂಚಿನ ಜನರಿಗೆ ವಾಟ್ಸ್ ಅಪ್ ಮತ್ತು ಇತರ ಮಾಧ್ಯಮಗಳ ಮೂಲಕ ಮಾಹಿತಿ ನೀಡಲು ಕಮಾಂಡ್ ಸೆಂಟರ್ ಮಹತ್ವದ ಪಾತ್ರ ವಹಿಸಲಿದೆ ಎಂದು ವಿವರಿಸಿದರು.
ನಾಲೆಯಲ್ಲಿ ಸಿಲುಕಿದ್ದ ಸಲಗ ರಕ್ಷಿಸಿದ ಅರಣ್ಯ ಸಿಬ್ಬಂದಿಗೆ ಸನ್ಮಾನ:
ಇತ್ತೀಚೆಗೆ ಶಿವನಸಮುದ್ರದ ಜಲವಿದ್ಯುತ್ ಗಾರದ ಜಲಾಶಯದ ಬಳಿ ನಾಲೆಯಲ್ಲಿ ಸಿಲುಕಿದ್ದ ಸಲಗವನ್ನು ಯಶಸ್ವಿಯಾಗಿ ರಕ್ಷಿಸಿದ ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರನ್ನು ಈಶ್ವರ ಬಿ ಖಂಡ್ರೆ ಅವರು ಸನ್ಮಾನಿಸಿದರು.
ಕೊಳ್ಳೆಗಾಲದಲ್ಲಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ತರುವಾಯ ನಡೆದ ಅಧಿಕಾರಿಗಳ ಸಭೆಗೂ ಮುನ್ನ 40 ಅಡಿ ಆಳದಿಂದ ಆನೆಯನ್ನು ರಕ್ಷಿಸಿದ ತಂಡದಲ್ಲಿದ್ದ ಮಂಡ್ಯ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಪಶುವೈದ್ಯ ಆದರ್ಶ್ ಹಾಗೂ ಶಾರ್ಪ್ ಶೂಟರ್ ಅಕ್ರಮ್ ಅವರನ್ನು ಸಚಿವರು ಸನ್ಮಾನಿಸಿದರು.
ಉತ್ತಮ ಕಾರ್ಯ ಮಾಡಿದ ಸಿಬ್ಬಂದಿ ಪ್ರಶಂಸೆಗೆ ಮತ್ತು ಸನ್ಮಾನಕ್ಕೆ ಅರ್ಹರಾಗುತ್ತಾರೆ. ಅದೇ ರೀತಿ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.
ಕಮಾಂಡ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷರಾದ ಎಚ್.ವಿ.ಚಂದ್ರು,ಜಿಲ್ಲಾಧಿಕಾರಿ ಶಿಲ್ಪನಾಗ್, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೌತ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿ.ಸಿಎಫ್. ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.

ವನ್ಯಜೀವಿ ಅರಣ್ಯ ಇಲಾಖೆ ಕಚೇರಿ: ಸಮಗ್ರ ಕಮಾಂಡ್ ಸೆಂಟರ್ ಉದ್ಘಾಟಿಸಿದ ಖಂಡ್ರೆ Read More

ಹಸಿರು ಪಟಾಕಿ ಬಿಟ್ಟು ಬೇರೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು-ಖಂಡ್ರೆ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿಯನ್ನು ಮಾತ್ರ ಬಳಕೆ ಮಾಡಬೇಕು,ಅದು ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಿದರೆ ಅಂತಹ ಅಂಗಡಿ ಲೈಸೆನ್ಸ್ ರದ್ದು ಪಡಿಸಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿಯಲ್ಲಿ ಹಸಿರು ಪಟಾಕಿ ಮಾತ್ರ ಹಚ್ಚಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದ ‌ಆದೇಶ ಇದ್ದರೂ, ಭಾರ ಇರುವ, ಲೋಹ ಭರಿತ ಪಟಾಕಿ ಬಳಕೆ ಆಗುತ್ತಿದೆ, ಯಾವುದೇ ಹಸಿರು ಪಟಾಕಿ ಬಿಟ್ಟು ಬೇರೆಯದಕ್ಕೆ ಅವಕಾಶ ಕೊಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು.

ಪರಿಸರ ಸ್ನೇಹಿ ಪಟಾಕಿ ಮಾಡುತ್ತೇವೆ ಅಂತ ಮುಚ್ಚಿಳಿಕೆ ಬರೆದು ಕೊಟ್ಟಿದ್ದಾರೆ. ಯಾರಾದರೂ ನಿಯಮ ಉಲ್ಲಂಘನೆ ಮಾಡಿ ಪಟಾಕಿ ಮಾರಿದರೆ ಅವರ ಲೈಸೆನ್ಸ್ ರದ್ದು ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಂಡ್ರೆ ತಿಳಿಸಿದರು.

ಹಸಿರು ಪಟಾಕಿ ಬಿಟ್ಟು ಬೇರೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು-ಖಂಡ್ರೆ Read More

ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ

ಮೈಸೂರು: ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಧನಂಜಯ ನಿಶಾನೆ ಆನೆಯ ಕಾರ್ಯ ನಿರ್ವಹಿಸಲಿದ್ದು, ಗೋಪಿ ಆನೆ ನೌಪತ್ ಆನೆಯ ಸ್ಥಾನ ಪಡೆದಿದ್ದಾನೆ ಎಂದು ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಈ ಕುರಿತು ವಿವರ ನೀಡಿದ ಸಚಿವರು, ಮಹೇಂದ್ರ, ಶ್ರೀಕಂಠ ಮತ್ತು ಲಕ್ಷ್ಮೀ ಸಾಲಾನೆ 1ನೇ ತಂಡದಲ್ಲಿದ್ದರೆ, ಕಂಜನ್, ಭೀಮ, ಏಕಲವ್ಯ ಸಾಲಾನೆ 2ರಲ್ಲಿ ಸಾಗಲಿವೆ ಎಂದು ತಿಳಿಸಿದರು.

ಸಾಲಾನೆ 3ರ ತಂಡದಲ್ಲಿ ಪ್ರಶಾಂತ್, ಸುಗ್ರೀವ, ಹೇಮಾವತಿ ಇದ್ದರೆ, ಅಂಬಾರಿ ಹೊತ್ತು ಸಾಗುವ ಅಭಿಮನ್ಯುವಿನ ಅಕ್ಕ ಪಕ್ಕದಲ್ಲಿ ಕಾವೇರಿ ಮತ್ತು ರೂಪಾ ಹೆಣ್ಣಾನೆಗಳು ಹೆಜ್ಜೆ ಹಾಕಲಿವೆ ಎಂದು ಹೇಳಿದರು.

ವಸ್ತುಪ್ರದರ್ಶನ ಆವರಣದಲ್ಲಿ ಸೋಮವಾರ ರಾತ್ರಿ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು.

ಈ ಮಳಿಗೆಯಲ್ಲಿ ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿ, ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂವರ್ಧನೆ ಕುರಿತ ಮಾಹಿತಿಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಸೆರೆ ಕಾರ್ಯಾಚರಣೆ, ಕಾಡ್ಗಿಚ್ಚು ನಂದಿಸುವ ಹಾಗೂ ಕಾಡುಗಳ್ಳರೊಂದಿಗೆ ಹೋರಾಡಿ ಮೃತಪಟ್ಟ ಅರಣ್ಯ ಹುತಾತ್ಮರ ಮಾಹಿತಿಯೂ ಇದ್ದು, ಸಚಿವರು ಈ ವಸ್ತುಪ್ರದರ್ಶನ ವೀಕ್ಷಿಸಿ, ಹುತಾತ್ಮರಿಗೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ಸಚಿವ ಈಶ್ವರ ಬಿ ಖಂಡ್ರೆ ಅವರನ್ನು ಗೌರವಿಸಿದರು.

ನಂತರ ಮೈಸೂರಿನ ಕಲಾ ಮಂದಿರದಲ್ಲಿ ಏರ್ಪಡಿಸಿರುವ ವಿವಿಧ ಪತ್ರಿಕೆಗಳ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವನ್ನೂ ಖಂಡ್ರೆ ವೀಕ್ಷಿಸಿ ಪ್ರಶಂಸಿಸಿದರು.

ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ Read More

ಆನೆ ಕಂದಕ, ಸೌರ ಬೇಲಿಗಳ ಸಮರ್ಪಕ ನಿರ್ವಹಣೆ ಮಾಡಿ: ಈಶ್ವರ ಖಂಡ್ರೆ

ಮೈಸೂರು: ಮೈಸೂರು ಅರಣ್ಯ ವೃತ್ತದಲ್ಲಿ ಆನೆ ಹಾವಳಿ ತಡೆಗೆ ತೋಡಲಾಗಿರುವ ಆನೆ ಕಂದಕಗಳು ಮತ್ತು ಸೌರ ಬೇಲಿಗಳ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ
ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದರು.

ಮೈಸೂರು ಅರಣ್ಯ ಭವನದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಸಚಿವರು,
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಾಗಿ ಕಾಡಿನಂಚಿನಲ್ಲಿ ಬಿದಿರು ಬೆಳೆಸುವುದು ಮತ್ತು ಅರಣ್ಯದೊಳಗಿನ ನೀರು ಗುಂಡಿಗಳು ಬತ್ತದಂತೆ ಸೌರ ಪಂಪ್ ಸೆಟ್ ಮೂಲಕ ಕೊಳವೆ ಬಾವಿಗಳಿಂದ ನೀರು ಹರಿಸುವುದು ಸೇರಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಬೇಸಿಗೆಯಲ್ಲಿ ಕಾಡ್ಗಿಚ್ಚು ಅರಣ್ಯ ನಾಶಕ್ಕೆ ಕಾರಣವಾಗುವುದರಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಿಳುಸಿದರು.ಒಂದು ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡರೆ ಕೂಡಲೇ ನಂದಿಸಲು ಅಗ್ನಿಶಾಮಕ ಉಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ, ಸಿಬ್ಬಂದಿಯನ್ನು ಸನ್ನದ್ಧವಾಗಿರುವಂತೆ ನೋಡಿಕೊಳ್ಳಿ ಎಂದು ನಿರ್ದೇಶಿಸಿದರು.

ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲಾಗಿದ್ದು, ನಗರದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಲೋಟ, ಬ್ಯಾನರ್, ಬಂಟಿಗ್ಸ್ ಸೇರಿದಂತೆ ಯಾವುದೇ ಏಕ ಬಳಕೆ ವಸ್ತು ಮಾರಾಟ, ಸಾಗಾಟ, ದಾಸ್ತಾನಿಗೆ ಅವಕಾಶ ಇಲ್ಲದಂತೆ ನಿಯಮಿತವಾಗಿ ತಪಾಸಣೆ ನಡೆಸಿ ದಂಡ ವಿಧಿಸಲು ಸೂಚನೆ ನೀಡಿದರು.

ಕಲುಷಿತ ನೀರು ಸೇವಿಸಿ ಯಾರೂ ಅಸ್ವಸ್ಥರಾಗಬಾರದು,ಹಾಗಾಗಿ ನಿಯಮಿತವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್ ಗಳ ನೀರಿನ ಗುಣಮಟ್ಟ ಪರೀಕ್ಷಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಖಂಡ್ರೆ ಸೂಚಿಸಿದರು.

ಸಭೆಯಲ್ಲಿ ಮೈಸೂರು ವೃತ್ತದ ಸಿಸಿಎಫ್‌ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜು ಹಾಗೂ ಅರಣ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಆನೆ ಕಂದಕ, ಸೌರ ಬೇಲಿಗಳ ಸಮರ್ಪಕ ನಿರ್ವಹಣೆ ಮಾಡಿ: ಈಶ್ವರ ಖಂಡ್ರೆ Read More