ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ:ದೇವಿಗೆ ಪುಷ್ಪ ನಮನ‌ ಸಲ್ಲಿಸಿದ ಬಾನು

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 10 ರಿಂದ 10.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

ನವವಧುವಿನಂತೆ ಶೃಂಗಾರಗೊಂಡಿದ್ದ ಚಾಮುಂಡಿ ಬೆಟ್ಟದ ಸಮೀಪದ ಬೃಹತ್ ವೇದಿಕೆಯಲ್ಲಿ ನಾಡಹಬ್ಬ 415ನೇ ದಸರಾ ಮಹೋತ್ಸವಕ್ಕೆ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತರಾದ ಭಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಉದ್ಘಾಟನಾ ಭಾಷಣ ಮಾಡಿದ ಬಾನು ಮುಷ್ತಾಕ್ ಅವರು,ದಸರಾ ಕೇವಲ ಹಬ್ಬವಲ್ಲ ಅದು ಶಾಂತಿಯ ಸಂಕೇತ, ಹೃದಯಗಳನ್ನು ಒಂದು ಮಾಡುವ ಸೌಹಾರ್ದತೆಯ ಸಾಂಸ್ಕೃತಿಕ‌ ಹಬ್ಬವಾಗಿದೆ ಎಂದು ಹೇಳಿದರು.

ಸಂಸ್ಕೃತಿಯೇ ನಮ್ಮ ಬೇರು, ನೂರಾರು ದೀಪಗಳನ್ನು ಬೆಳಗಿಸಿದ್ದೇನೆ, ಮಂಗಳಾರತಿ ಸ್ವೀಕರಿಸಿದ್ದೇನೆ, ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳುವ ಮೂಲಕ ತಮ್ಮನ್ನು ವಿರೋಧಿಸಿದವರಿಗೆ ಅವರು ಟಾಂಗ್ ನೀಡಿದರು.

ಈ ನೆಲದ ಪರಂಪರೆ ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳುತ್ತದೆ,ಪ್ರತಿ ಹೂ ತನ್ನ ತೋಟದಲ್ಲಿ ಅರಳಲಿ, ಒಟ್ಟಿಗೆ ಸೇರಿದಾಗ ಎಲ್ಲರೂ ಒಂದಾಗಲಿ, ನಾವೆಲ್ಲರೂ ಒಂದೇ ಗಗನದ ಪಯಣಿಗರು, ಭೂಮಿ ಯಾರನ್ನು ಹೊರ ತಳ್ಳೋದಿಲ್ಲ, ಮನುಷ್ಯ ಮಾತ್ರ ಗಡಿ ಹಾಕುತ್ತಾನೆ, ಇದನ್ನು ನಾವೇ ಅಳಿಸಬೇಕು, ಅಕ್ಷರಗಳಿಂದ ನಾವು ಗೆಲ್ಲಬೇಕು ಎಂದು ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಬಾನು ಮುಷ್ತಾಕ್ ಟಾಂಗ್ ಕೊಟ್ಟರು.

ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯದ ದೊರೆ ಆಗಿದ್ದರು. ಭೇದ ಭಾವ ತೋರಲಿಲ್ಲ. ಶಕ್ತಿಯನ್ನು ಹಂಚಿಕೊಂಡರೆ ಧೀರ್ಘ ಕಾಲ ಉಳಿಯುತ್ತೆ ಅಂತ ಹೇಳಿದ್ದಾರೆ ಎಂದು ಸ್ಮರಿಸಿದರು.

ನಾನು ಒಬ್ಬ ಸಾಹಿತಿ, ಲೇಖಕಿ. ಸಾಹಿತ್ಯದ ಮೂಲಕ ಸಂದೇಶ ಸಾರುತ್ತೇನೆ. 10 ವರ್ಷದ ಹಿಂದೆ ಬರೆದಿದ್ದ ಪ್ರಕಟಣೆ ಆಗಿದೆ, ಬಾಗಿನ ಅಂತ ಅದರ ಹೆಸರು. ಪ್ರೀತಿಯ ಸಮಾಜವ ಕಟ್ಟೋಣ ಎಲ್ಲರಿಗೂ ಸಮಪಾಲು ಸಮಬಾಳು ಇರಲಿ ಎಂದು ಬಾನು ಮುಷ್ತಾಕ್ ಹಾರೈಸಿದರು.

ನನ್ನ ಹಿಂದೂ ಧರ್ಮದ ಸಂಬಂಧ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗತ್ತಿದೆ, ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ನನ್ನನ್ನು ಆಹ್ವಾನ ನೀಡಿ ನೈತಿಕ ಬೆಂಬಲ ನೀಡಿದ ಮುಖ್ಯ ಮಂತ್ರಿಗಳು ಮತ್ತು ಜಿಲ್ಲಾಡಳಿತಕ್ಕೆ ನನ್ನ ಧನ್ಯವಾದಗಳು ಎಂದು ಬಾನು ಮುಸ್ತಾಕ್ ತಿಳಿಸಿದರು.

ಇದೇ ವೇಳೆ ಬಾನು ಮುಸ್ತಾಕ್ ಅವರು ರಚಿಸಿದ್ದ 10 ವರ್ಷ ಹಿಂದಿನ ಕವನ ಒಂದನ್ನು ವಾಚಿಸಿದರು.

ನನ್ನ ಸ್ನೇಹಿತೆ ಬೂಕರ್ ಪ್ರಶಸ್ತಿ ಸಂದರ್ಭದಲ್ಲಿ ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಕರೆ ತರುತ್ತೇನೆ ಎಂದು ಹರಕೆ ಹೊತ್ತಿದ್ದಳು,ಆದರೆ ಬರಲಾ ಗಿರಲಿಲ್ಲ,ಆದರೆ ಈಗ ಚಾಮುಂಡೇಶ್ವರಿ ದೇವತೆಯೇ ನನ್ನನ್ನು ಆಕೆಯ ದರ್ಶನಕ್ಕೆ ಕರೆಸಿಕೊಂಡಿದ್ದಾಳೆ ಎಂದು ಭಾನು ಮಷ್ತಾಕ್ ಹೇಳಿದರು.

ಇಲ್ಲಿಗೆ ಬರಲು ನನಗೆ ಹಲವು ಅಡೆತಡೆಗಳು ಆಗಿತ್ತು ಆದರೆ ಅದೆಲ್ಲವನ್ನು ಕಳೆದು ದೇವಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ ಎಂದು ಪುನರುಚ್ಛರಿಸಿದರು.

ನನ್ನ ಮಾವ ಮೊಹಮ್ಮದ್ ಘೋಷ್ ಅವರು ಮೈಸೂರು ಅರಸರ ಅಂಗರಕ್ಷಕ ಪಡೆಯ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ, ಮಹಾರಾಜರು ಒಬ್ಬ ಮುಸ್ಲಿಮನನ್ನು ನಂಬಿ ಆತನನ್ನು ತಮ್ಮ ರಕ್ಷಣಾ ಪಡೆಯಲ್ಲಿ ಇಟ್ಟುಕೊಂಡಿದ್ದು ವಿಶೇಷವಾಗಿತ್ತು ಎಂದು ಅವರು ಸ್ಮರಿಸಿದರು.

ದಸರಾ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ,ಹೆಚ್.ಕೆ ಪಾಟೀಲ್,ಕೆ.ಹೆಚ್. ಮುನಿಯಪ್ಪ,ಕೆ. ವೆಂಕಟೇಶ್, ಶಾಸಕರುಗಳಾದ ಜಿ ಟಿ ದೇವೇಗೌಡ,ಟಿ.ಎಸ್. ಶ್ರೀವತ್ಸ, ತನ್ವೀರ್ ಸೇಟ್, ಶಿವಕುಮಾರ್, ಹರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ:ದೇವಿಗೆ ಪುಷ್ಪ ನಮನ‌ ಸಲ್ಲಿಸಿದ ಬಾನು Read More

ಬನಶಂಕರಿ ಬೊಂಬೆ ಮನೆಯಲ್ಲಿ 600 ಕ್ಕೂ ಹೆಚ್ಚು ದಸರಾ ಬೊಂಬೆ ಪ್ರದರ್ಶನ

ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ನವರಾತ್ರಿಯ ದಸರಾ ಹಬ್ಬದ ಹತ್ತು ದಿನಗಳ ಕಾಲ ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.

ಇದರಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಿಭಾಗಗಳಲ್ಲಿ ಬೊಂಬೆ ಪ್ರದರ್ಶನ ಮಾಡಲಾಗಿದೆ.

ರಾಮಾಯಣ, ಮಹಾಭಾರತ, ಭಾಗವತ, ಕೃಷ್ಣನ ವಿವಿಧ ಲೀಲೆಗಳು, ಸಮುದ್ರ ಮಂಥನ, ತಲಕಾವೇರಿಯಲ್ಲಿ ಕಾವೇರಿ ಉಗಮ,ಕನಕಧರಾ ಸ್ತೋತ್ರ,ಆಚಾರ್ಯ ತ್ರಯರು, ಗಜೇಂದ್ರ ಮೋಕ್ಷ, ಘಟೋದ್ಘಜ, ಸಪ್ತ ಋಷಿಗಳು, ಪಂಚತಂತ್ರ ಕಥೆಗಳೊಂದಿಗೆ ಕಣ್ಮರೆಯಾಗುತ್ತಿರುವ ಭಾರತೀಯ ಆಟಗಳು, ಆಪರೇಷನ್ ಸಿಂಧೂರ, ಮಹಾ ಕುಂಭ ಮೇಳ, ಸ್ವದೇಶಿ ಜಾಗೃತಿ, ಹಳ್ಳಿಯ ಬದುಕು, ಶೃಂಗೇರಿ, ಧರ್ಮಸ್ಥಳ, ಮಂತ್ರಾಲಯ, ವಿವಾಹದ ವೈಭವ, ಮೈಸೂರು ದಸರಾ , ಅರಣ್ಯ ರಕ್ಷಣೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಮಾದರಿ ಬೊಂಬೆಗಳು, ಸಾಹಸ ಸಿಂಹ ಕರ್ನಾಟಕ ರತ್ನ ಡಾ. ವಿಷ್ಣು ವರ್ಧನ್ ಹಾಗೂ ಭಾರತದ ಕೀರ್ತಿಯನ್ನು ಬಾಹ್ಯಾಕಾಶಕ್ಕೆ ತಲುಪಿಸಿದ ಶುಭಾಂಶು ಶುಕ್ಲರವರನ್ನೂ ಸಹ ಬೊಂಬೆ ಪ್ರದರ್ಶನದಲ್ಲಿ ಸ್ಮರಿಸಲಾಗಿದೆ.

ಬನಶಂಕರಿ ಬೊಂಬೆ ಮನೆಯ
ಕೆ. ಆರ್. ಗಣೇಶ್, ಸರಸ್ವತಿ, ಡಾ. ಪೃಥು ಪಿ ಅದ್ವೈತ್, ಪುನೀತ್ ಜಿ, ಪೂಜಾ ಪುನೀತ್ ಅವರು ಶ್ರಮಪಟ್ಟು ಆಸ್ತೆಯಿಂದ‌ ಈ ಬೊಂಬೆ ಮನೆಯನ್ನು ಎಂಟು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಈ ಬೊಂಬೆ ಮನೆಯಲ್ಲಿ ನವರಾತ್ರಿಯ ಪ್ರತಿ ದಿನ ಸಂಜೆ 5.30 ರಿಂದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರು ನಾಳೆ ಸೋಮವಾರದಿಂದ ಅಕ್ಟೋಬರ್ ‌2 ರ ತನಕ ಬೆಳಿಗ್ಗೆ 10.30 ರಿಂದ ರಾತ್ರಿ 8.30 ರ ತನಕ ಬೊಂಬೆ ಮನೆಗೆ ಭೇಟಿ ನೀಡಿ ಬೊಂಬೆಗಳನ್ನು ವೀಕ್ಷಣೆ ಮಾಡಬಹುದು ಎಂದು ಬನಶಂಕರಿ ಬೊಂಬೆ ಮನೆಯ ಪೂಜಾ ಪುನೀತ್ ಮನವಿ ಮಾಡಿದ್ದಾರೆ.

ಬನಶಂಕರಿ ಬೊಂಬೆ ಮನೆಯಲ್ಲಿ 600 ಕ್ಕೂ ಹೆಚ್ಚು ದಸರಾ ಬೊಂಬೆ ಪ್ರದರ್ಶನ Read More

ದಸರಾ ಉದ್ಘಾಟನೆ ವೇಳೆ ಅತಿ ಹೆಚ್ಚು ಮುಂಜಾಗ್ರತೆ ವಹಿಸಿ:ಡಿ ಜಿ‌‌ ಸೂಚನೆ

ಮೈಸೂರು: ದಸರಾ ಮಹೋತ್ಸವ ಉದ್ಘಾಟಕರ ವಿಚಾರದಲ್ಲಿ ವಿವಾದ ಇರುವ ಕಾರಣ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ವೇಳೆ ಪ್ರತಿಭಟನೆ, ಗೌಜಲು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಸೂಚನೆ ನೀಡಿದರು.

ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ದಸರಾ ಭದ್ರತೆ ಸಂಬಂಧ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು‌ ಈ ಆದೇಶ ನೀಡಿದರು.

ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಬೇಕು. ಹಂತ ಹಂತವಾಗಿ ಭದ್ರತಾ ಕಾರ್ಯ ಹೆಚ್ಚಿಸಬೇಕು. ದಸರಾ ಉದ್ಘಾಟಕರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಬಂದು ಕಾರ್ಯಕ್ರಮ ಮುಗಿಸಿ ಸುರಕ್ಷಿತವಾಗಿ ತೆರಳುವವರೆಗೆ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಸೆ. 22ರಿಂದ ಅ. 2ರವರೆಗೆ ನಡೆಯಲಿರುವ ದಸರಾ ಉತ್ಸವಕ್ಕೆ ಸ್ಥಳೀಯರು ಸೇರಿದಂತೆ ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದು, ಪ್ರಮುಖ ಕಾರ್ಯಕ್ರಮ ಸೇರಿದಂತೆ ಎಲ್ಲೆಡೆ ನಡೆಯಲಿರುವ ಸಮಾರಂಭಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ಆದೇಶಿಸಿದರು.

ಅರಮನೆ ಸೇರಿದಂತೆ ಪಂಜಿನ ಕವಾಯತು ಮೈದಾನ, ಆಹಾರ ಮೇಳ ಮತ್ತು ಯುವ ದಸರಾ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಂತಹ ಪ್ರಕರಣ ನಡೆಯದಂತೆ ಸಾರ್ವಜನಿಕರ ಮೇಲೆ ನಿಗಾವಹಿಸಬೇಕು.

ವಿಜಯದಶಮಿ ಮೆರವಣಿಗೆ, ಟಾರ್ಚ್‌ಲೈಟ್ ಪರೇಡ್ ಮೈದಾನ, ಚಾಮುಂಡಿಬೆಟ್ಟ, ಯುವ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ವೈಮಾನಿಕ ಪ್ರದರ್ಶನದಂತಹ ಕಾರ್ಯಕ್ರಮ ನಡೆಯುವ ಸ್ಥಳದಲ್ಲೂ ಮೆಟಲ್ ಡಿಟೆಕ್ಟರ್ ಅಳವಡಿಸಿ, ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಪ್ರವೇಶಾವಕಾಶ ನೀಡಬೇಕು ಎಂದು ಸೂಚಿಸಿದರು.

ಮೈಸೂರು ನಗರ ಪೊಲೀಸ್ ಘಟಕವು ಜಿಲ್ಲಾಡಳಿತದೊಂದಿಗೆ ನಿರಂತರ ಚರ್ಚೆ ನಡೆಸಿ ದಸರಾ ಬಂದೋಬಸ್ತ್ ಯೋಜನೆಯನ್ನು ಅಂತಿಮಗೊಳಿಸಬೇಕು ಎಂದು ಡಾ.ಎಂ.ಎ.ಸಲೀಂ ಸೂಚಿಸಿದರು.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್.ಬಿಂದು ಮಣಿ, ಕೆ.ಎಸ್.ಸುಂದರ್ ರಾಜ್, ಸಿದ್ದನಗೌಡ ಪಾಟೀಲ್, ಅಶ್ವಾರೋಹಿ ದಳದ ಪೊಲೀಸ್ ಕಮಾಂಡೆಂಟ್ ಎ.ಮಾರುತಿ, ನಗರ ಸಂಚಾರ ವಿಭಾಗದ ಎಸಿಪಿ ಎಂ.ಶಿವಶಂಕರ್, ಅರಮನೆ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್ ಸೇರಿದಂತೆ ಎಲ್ಲಾ ಉಪ ವಿಭಾಗಗಳ ಎಸಿಪಿಗಳು ಉಪಸ್ಥಿತರಿದ್ದರು.

ದಸರಾ ಉದ್ಘಾಟನೆ ವೇಳೆ ಅತಿ ಹೆಚ್ಚು ಮುಂಜಾಗ್ರತೆ ವಹಿಸಿ:ಡಿ ಜಿ‌‌ ಸೂಚನೆ Read More