ಪ್ರಮೋದಾದೇವಿ ಒಡೆಯರ್ ಅವರಿಗೆದಸರಾ ಉತ್ಸವಕ್ಕೆ ಅಧಿಕೃತ ಆಹ್ವಾನ

ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ದಸರಾ ಉತ್ಸವಕ್ಕೆ ಅಧಿಕೃತ ಆಹ್ವಾನ ನೀಡಿದರು.

ಅರಮನೆಯಲ್ಲಿ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲ ತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಡಾ ಪುಷ್ಪಾ ಅಮರ್ ನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ .ಯುಕೇಶ್ ಕುಮಾರ್ , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು ಹಾಗೂ ಅಧಿಕಾರಿಗಳು ಮಹದೇವಪ್ಪ‌ ಅವರಿಗೆ ಸಾಥ್ ನೀಡಿದರು.

ಪ್ರಮೋದಾದೇವಿ ಒಡೆಯರ್ ಅವರಿಗೆದಸರಾ ಉತ್ಸವಕ್ಕೆ ಅಧಿಕೃತ ಆಹ್ವಾನ Read More

ದಸರಾ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ನಿಗಾವಹಿಸಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಅಳವಡಿಸಿರುವ ವಿದ್ಯುತ್‌ ದೀಪಾಲಂಕಾರಗಳನ್ನು ಕಣ್ತುಂಬಿಕೊಳ್ಳುವ ಜತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ದಸರಾ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತಿದೆ.

ನಗರದ ಸೌಂದರ್ಯ ಹೆಚ್ಚಿಸುವ ಹಾಗೂ ದಸರೆಯ ಸಂಭ್ರಮ, ಸಡಗರವನ್ನು ಇಮ್ಮಡಿಗೊಳಿಸುವ ವಿದ್ಯುತ್‌ ದೀಪಾಲಂಕಾರ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಆದ್ದರಿಂದ ದೀಪಾಲಂಕಾರದ ಅಂದ ಕಣ್ತುಂಬಿಕೊಳ್ಳುವ ಸಂದರ್ಭದಲ್ಲಿ ಸುರಕ್ಷತೆಗೂ ಆದ್ಯತೆ ನೀಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಮನವಿ ಮಾಡಿದ್ದಾರೆ.

ವಿದ್ಯುತ್‌ ಗ್ರಾಹಕರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಸೆಸ್ಕ್‌ ವತಿಯಿಂದಲೂ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡು ದಸರಾ ದೀಪಾಲಂಕಾರ ಮಾಡಲಾಗಿದೆ. ಆದರೂ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಅದಕ್ಕಾಗಿ ಸಾರ್ವಜನಿಕರ ಸುರಕ್ಷತೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳಿ,ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ,ವಿಡಿಯೋ ಶೂಟ್‌ ಮಾಡುವುದನ್ನು ತಪ್ಪಿಸಬೇಕು, ಮಳೆ ಸಂದರ್ಭದಲ್ಲಿ ವಿದ್ಯುತ್ ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸಬೇಕು,ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ಕೆಲವು ಕಡೆಗಳಲ್ಲಿ ದೀಪಾಲಂಕಾರದ ಪ್ರತಿಕೃತಿಗಳನ್ನು ಇರಿಸಲಾಗಿದೆ. ಆದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಇವುಗಳನ್ನು ಗಮನಿಸಿ ಸುರಕ್ಷಿತವಾಗಿ ಸಂಚರಿಸಬೇಕೆಂದು
ಸೆಸ್ಕ್ ಪರವಾಗಿ ಕೆ.ಎಂ. ಮುನಿಗೋಪಾಲ್‌ ರಾಜು‌ ಕೋರಿದ್ದಾರೆ‌.

ವಿದ್ಯುತ್‌ ಸಂಬಂಧಿತ ದೂರುಗಳಿದ್ದರೆ ಹಾಗೂ ದೀಪಾಲಂಕಾರದಿಂದ ತೊಂದರೆ ಆದಲ್ಲಿ 24×7 ಸಹಾಯವಾಣಿ 1912 ಸಂಪರ್ಕಿಸ‌ಬಹುದೆಂದು ತಿಳಿಸಲಾಗಿದೆ.

ದಸರಾ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ನಿಗಾವಹಿಸಿ Read More

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ

ಮೈಸೂರು: ದಸರಾ ಉದ್ಘಾಟನೆಗೆ‌ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ‌ ಸ್ವಾಗತಿಸಿ‌ ದಲಿತ ಮಹಾಸಭಾ ದವರು
ಚಾಮುಂಡಿ ನಡಿಗೆ ಹಮ್ಮಿಕೊಳ್ಳಲು ಮುಂದಾದರು ಆದರೆ ಪೊಲೀಸರು ಅನುಮತಿ‌ ನೀಡಲಿಲ್ಲ.

ದಲಿತ ಮಹಾಸಭಾ ದಿಂದ ನೂರಾರು ಮಂದಿ ಚಾಮುಂಡಿ ನಡಿಗೆ ಹೆಸರಲ್ಲಿ ಬೆಟ್ಟದ ಕಡೆಗೆ ಹೊರಟಿದ್ದರು.

ದಸರಾ ಮಹೋತ್ಸವ ವೇಳೆ ಪರ-ವಿರೋಧ ಮೆರವಣಿಗೆಯಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆಯವರನ್ನು ತಡೆದಂತೆಯೇ ಪೊಲೀಸರು ದಲಿತ ಮಹಾಸಭಾದವರನ್ನೂ ವಶಕ್ಕೆ ಪಡೆದರು.

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ Read More

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಪಾದಯಾತ್ರೆ: ಶ್ರೀವತ್ಸ ಸೇರಿ ಹಲವರು ಅರೆಸ್ಟ್

ಮೈಸೂರು: ದಸರಾ ಉದ್ಘಾಟನೆಗೆ‌ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ‌ ಖಂಡಿಸಿ ಪರ ಹಾಗೂ ವಿರೋಧದ ಚಾಮುಂಡಿ ಬೆಟ್ಟ ಪಾದಯಾತ್ರೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಅನುಮತಿ ನಿರಾಕರಿಸಿದರೂ ಚಾಮುಂಡಿ ಚಲೋಗೆ ಬಿಜೆಪಿ ಹಾಗೂ ಹಿಂದೂ ಜಾಗರಣ ವೇದಿಕೆ ಮುಂದಾದರು.

ನಗರದ ಕುರುಬಾರಹಳ್ಳಿ ವೃತ್ತದಿಂದ ಹಿಂದೂ ಜಾಗರಣಾ ವೇದಿಕೆಯು ಚಾಮುಂಡಿ ಬೆಟ್ಟ ಚಲೋಗೆ ಮುಂದಾಯಿತು.

ಇದರೊಂದಿಗೆ ಬಿಜೆಪಿಯವರೂ ಕೂಡಾ ಚಾಮುಂಡಿ ಬೆಟ್ಟ ಚಲೋಗೆ ಮುಂದಾದರು,ಈ ಹಿನ್ನಲೆಯಲ್ಲಿ
ಬಿಜೆಪಿ ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಮೈಸೂರಿನ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಚಲೋಗೆ ಮುಂದಾಗಿದ್ದವರನ್ನು ಪೊಲೀಸರು ತಡೆದರು.

ಕನ್ನಡ ವಿರೋಧಿ ಭಾನು ಮುಷ್ತಾಕ್. ಹೀಗಾಗಿ ದಸರಾ ಉದ್ಘಾಟನೆಗೆ ಬಿಡಲ್ಲ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಢಯಿತು ನಂತರ ಕಾರ್ಯಕರ್ತರನ್ನು
ಬಲವಂತವಾಗಿ ವಶಕ್ಕೆ ಪಡೆಯಲಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಚಾಮುಂಡಿಬೆಟ್ಟಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ಚಾಮುಂಡಿಬೆಟ್ಟಕ್ಕೆ ತೆರಳುವ ಎಲ್ಲಾ ಮಾರ್ಗಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಪಾದಯಾತ್ರೆ: ಶ್ರೀವತ್ಸ ಸೇರಿ ಹಲವರು ಅರೆಸ್ಟ್ Read More

ಜಂಬೂಸವಾರಿ ರಾಜಕಾರಣಿಗಳು, ಅಧಿಕಾರಿಗಳ ಹಬ್ಬವಾಗದಿರಲಿ:ಮಹೇಶ್

ಮೈಸೂರು: ವಿಶ್ವ ವಿಖ್ಯಾತ ದಸರಾ ಹಬ್ಬವೆಂದರೆ ಜಿಲ್ಲೆ, ರಾಜ್ಯ, ದೇಶ ವಿದೇಶಗಳು ಸಂಭ್ರಮಿಸುವ ಹಬ್ಬವೇ ಸರಿ ಅದರಲ್ಲೂ ಮೈಸೂರು ಸುತ್ತಮುತ್ತವಿರುವ ಜನರಿಗಂತೂ ಹತ್ತು ದಿನ ಸಂಭ್ರಮ , ಸಡಗರದ ಹಬ್ಬವಾಗಿದೆ.

ಮಹಾರಾಜರ ಕಾಲದಿಂದಲೂ ಈ ಹಬ್ಬವನ್ನ ಬಹಳ ವಿಜ್ರಂಭಣೆಯಿಂದ ಆಚರಿಸಿಕೊಳ್ಳುತ್ತಾ ಬಂದಿರುವುದು ಜಗಜ್ಜಾಹೀರ.

ಸರ್ಕಾರಗಳು ಬಂದ ನಂತರ ಪ್ರತಿಯೊಂದು ವರ್ಷವೂ ಸರ್ಕಾರಗಳು ಈ ಹಬ್ಬವನ್ನ ಬಹಳ ವಿಜ್ರಂಭಣೆಯಿಂದ ಆಚರಿಸಲು ಪ್ರಯತ್ನಿಸುತ್ತಿದೆ. ಇದನ್ನ ಕಣ್ಣುತುಂಬಿ ನೋಡದವರೇ ಇಲ್ಲ

ಆದರೆ ಇತ್ತೀಚಿನ ದಿನದಲ್ಲಿ ಈ ಹಬ್ಬವು ಸರ್ಕಾರಕ್ಕೇ ಮತ್ತು ಅಧಿಕಾರಿಗಳಿಗೆ ಸೀಮಿತವಾಗಿರುವಂತೆ ಕಾಣಿಸುತ್ತಿದೆ ಎಂದು
ಉದ್ಯಮಿ ಕೆ ಮಹೇಶ ಕಾಮತ್ ಹೇಳಿದ್ದಾರೆ.

ಏಕೆಂದರೆ ದಸರಾ ಉಧ್ಗಾಟಣೆಗೂ ಸಹ ಅರ್ಹರನ್ನು ಕರೆಯದೇ ತಮಗೆಲ್ಲೋ ಯಾವುದೋ ಕಾರಣಕ್ಕೆ ಸಹಾಯವಾದವರನ್ನೇ ಕರೆಯುವಂತಾಗಿದ್ದು ಕಂಡು ಬರುತ್ತದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಂಬೂ ಸವಾರಿ ಸಮಯದಲ್ಲೂ ಕೂಡ ಕೇವಲ ರಾಜಕಾರಣಿಗಳಿಗೋಸ್ಕರ ಏರ್ಪಡಿಸಿದಂತೆ ಕಾಣುತ್ತದೆ. ನಿಜವಾದ ಪ್ರವಾಸಿಗರಿಂದ ಹಣ ಪಡೆದು ಸಹ ಮೂಲೆ ಗುಂಪು ಮಾಡಿ ರಾಜಕಾರಣಿಗಳ ಕುಟುಂಬ ಹಾಗೂ ಚೇಲಾಗಳಿಗೆ ಎಲ್ಲಿಲ್ಲದ ಮಹತ್ವ ಕೊಟ್ಟಹಾಗೆ ಕಾಣಿಸುತ್ತಿದೆ. ಅಧಿಕಾರಿ ವರ್ಗದವರೂ ಸಹ ತಮ್ಮ ಕುಟುಂಬ ಹಾಗೂ ಪರಿಚಯಸ್ಥರಿಗೆ ಹೆಚ್ಚಿನ ಮಹತ್ವ ಕೊಟ್ಟಹಾಗೆ ಕಾಣಿಸುತ್ತಿದೆ ಎಂದು ಬೇಸರ‌ ವ್ಯಕ್ತಪಡಿಸಿದ್ದಾರೆ.

ಯುವ ದಸರಾ, ರೈತ ದಸರಾ, ವಸ್ತು ಪ್ರದರ್ಶನ, ಫಲ ಪುಷ್ಪ ಪ್ರಧರ್ಶನ , ಆಹಾರ ಮೇಳ ಹಾಗೂ ಇತರ ಕಾರ್ಯಕ್ರಮಕ್ಕೂ ಕೇವಲ ತಮಗೆ ಬೇಕಾಗಿರುವವರನ್ನು ನೇಮಿಸುವ ಕಾರಣ ಅವರು ಏನೇ ತಪ್ಪು ಮಾಡಿದರೂ ಕೇಳುವವರಿಲ್ಲ ಎಂಬಂತಾಗಿದೆ ಎಂದು ಮಹೇಶ್ ಕಾಮತ್ ಬೇಸರ ವ್ಯಕ್ತಪಡಿಸಿದ್ದಾರೆ.

ಜಂಬೂ ಸವಾರಿ ಪಾಸ್ ಗಳು ಕಾಳಸಂತೆಯಲ್ಲಿ ಮನಸಿಗೆ ಬಂದ ದರದಲ್ಲಿ ಮಾರಾಟಮಾಡಿದರೂ ಪೋಲೀಸರು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಕೊಂಡ ಹಾಗೆ ಇರುತ್ತಾರೆ. ಏಕೆಂದರೆ ಈ ಪಾಸ್ ಗಳು ಸಹ ರಾಜಕಾರಣಿಗಳ ಕಡೆಯವರೇ ಮಾರಾಟ ಮಾಡುತ್ತಾರೇನೋ ಅನಿಸುತ್ತಿದೆ.

ಪ್ರತೀ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಜೊತೆ ಚರ್ಚಿಸಿ ಪ್ರತೀ ರಾಜ್ಯದವರಿಗೆ ಕರೆಸಿದರೆ ಈ ಕಾರ್ಯಕ್ರಮಕ್ಕೂ ಮೆರಗು ತರಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಇಂತಹ ಕೆಲಸವನ್ನು ಈ ಸರ್ಕಾರವೇ ಅರಿತು ಬದಲಾವಣೆ ತಂದರೆ ಇದೇ ಬದಲಾವಣೆಯನ್ನು ಮುಂದೆ ಎಲ್ಲಾ ಸರ್ಕಾರಗಳೂ ಮುಂದುವರಿಸಲಿ ಎಂದು ಆಶಿಸುತ್ತೇನೆ ಎಂದು ಕೆ ಮಹೇಶ ಕಾಮತ್ ಆಶಿಸಿದ್ದಾರೆ.

ಜಂಬೂಸವಾರಿ ರಾಜಕಾರಣಿಗಳು, ಅಧಿಕಾರಿಗಳ ಹಬ್ಬವಾಗದಿರಲಿ:ಮಹೇಶ್ Read More

ಈ ಬಾರಿಯ ದಸರಾ ದೀಪಾಲಂಕಾರ ಹೆಚ್ಚು ಆಕರ್ಶಕ-ಮುನಿಗೋಪಾಲ ರಾಜು

ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಮತ್ತು ಡ್ರೋನ್ ಶೋ ಹೆಚ್ಚು ಆಕರ್ಷಣೀಯವಾಗಿ ಮಾಡಲು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡಲು ನಿರ್ಧರಿಸಿದ್ದೇವೆ, ಅರಮನೆ ದೀಪಾಲಂಕಾರಕ್ಕೆ ಪೂರಕವಾದ ಬಣ್ಣದಲ್ಲಿ ಮೈಸೂರು ನಗರದ ದೀಪಗಳು ಬೆಳಗಲಿವೆ ಎಂದು ಹೇಳಿದರು.

ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 136 ಕಿ.ಮೀ ರಸ್ತೆಗಳವರೆಗೆ ದೀಪಾಲಂಕಾರ ಮಾಡಲಾಗುತ್ತದೆ. ಸುಮಾರು 60ರಿಂದ 70 ಪ್ರತಿಕೃತಿಗಳನ್ನ ದೀಪಾಲಂಕಾರದಲ್ಲಿ ನಿರ್ಮಿಸುತ್ತಿದ್ದೇವೆ. ಈ ಬಾರಿ ದೀಪಾಲಂಕಾರದಲ್ಲಿ ವಿಶೇಷ ಅಂದರೆ ಕೊಲ್ಕತ್ತಾ ಮಾದರಿಯ ಮೂವಿಂಗ್ ಲೈಟ್ಸ್ ಪರಿಕಲ್ಪನೆ ಇದೆ, ಬೇರೆ ಬೇರೆ ಕಡೆಗಳಿಂದಲೂ ಆಕರ್ಷಣಿಯ ದೀಪಗಳನ್ನ ತರಿಸಲಾಗುತ್ತದೆ ಎಂದು ವಿವರಿಸಿದರು.

ದಸರಾ ಮಹೋತ್ಸವದಲ್ಲಿ ಡ್ರೋನ್ ಶೋ ಕೂಡಾ ಎಲ್ಲರ ಮನ ಸೆಳೆಯಲಿದೆ, ಕಳೆದ ವರ್ಷ 1500 ಡ್ರೋನ್ ಉಪಯೋಗಿಸಿದ್ದೆವು, ಈ ಬಾರಿ 3 ಸಾವಿರ ಡ್ರೋನ್ ಗಳನ್ನ ಬಳಸಿ ಬನ್ನಿಮಂಟಪದಲ್ಲಿ ಡ್ರೋನ್ ಶೋ ಮಾಡುತ್ತಿದ್ದೇವೆ . ತಾಯಿ ಚಾಮುಂಡೇಶ್ವರಿ, ದಸರಾ ಅಂಬಾರಿ ವಿವಿಧ ಆಕೃತಿಗಳನ್ನ ಮೂಡಿಸಲಾಗುತ್ತದೆ, ಈ ಕಾಮಗಾರಿಗಳಿಗೆ 9 ರಿಂದ 10 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮುನಿಗೋಪಾಲ ರಾಜು ಮಾಹಿತಿ ನೀಡಿದರು.

ಈ ಬಾರಿಯ ದಸರಾ ದೀಪಾಲಂಕಾರ ಹೆಚ್ಚು ಆಕರ್ಶಕ-ಮುನಿಗೋಪಾಲ ರಾಜು Read More

ಡಾ ಹೆಚ್.ಸಿ.ಮಹದೇವಪ್ಪ ಅವರಿಗೆ ಜಿಲ್ಲಾಡಳಿತದಿಂದ ಆಹ್ವಾನ

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರನ್ನು ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು.

ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮಹಾನಗರ ಪಾಲಿಕೆ ಆಯುಕ್ತರಾದ ಶೇಕ್ ತನ್ವಿರ್ ಆಸಿಫ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಮತ್ತು ಸ್ವಾಗತ ಸಮಿತಿಯವರು ಸಚಿವ ಮಹದೇವಪ್ಪ ಅವರಿಗೆ ದಸರಾ ಆಹ್ವಾನ ಪತ್ರಿಕೆ ಕೊಟ್ಟು ಆಹ್ವಾನಿಸಿದರು.

ಡಾ ಹೆಚ್.ಸಿ.ಮಹದೇವಪ್ಪ ಅವರಿಗೆ ಜಿಲ್ಲಾಡಳಿತದಿಂದ ಆಹ್ವಾನ Read More

ಅಭಿಮನ್ಯು ಟೀಮ್ ಗೆ ಭಾರ ಹೊರುವ ತಾಲೀಮು

ಮೈಸೂರು: ನಾಡಹಬ್ಬ ದಸರಾ ಮುಖ್ಯ ಆಕರ್ಷಣೆ ಜಂಬೂಸವಾರಿ.ನಾಡ ಅಧಿದೇವತೆ ಚಾಮುಂಡೇಶ್ವರಿ ಮೂರ್ತಿಯನ್ನು ಹೊರಬೇಕಾದ ಗಜಪಡೆಗೆ ಭಾರ ಹೊರುವ ತಾಲೀಮನ್ನು ನಡೆಸಲಾಯಿತು.

ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇವಾಲಯದ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಕ್ಯಾಪ್ಟನ್​ ಅಭಿಮನ್ಯು ಆನೆಗೆ ಭಾರ ಹೊರುವ ತಾಲೀಮನ್ನು ಆರಂಭಿಸಲಾಯಿತು.

ಈಗಾಗಲೇ ಕ್ಯಾಪ್ಟನ್​ ಅಭಿಮನ್ಯು ನೇತೃತ್ವದ 14 ಗಜಪಡೆ ಅರಮನೆ ಆವರಣಕ್ಕೆ ಆಗಮಿಸಿ ತಾಲೀಮು ಹಾಗೂ ಪೌಷ್ಟಿಕ ಆಹಾರದ ಜೊತೆಗೆ ಅರಮನೆಯ ವಾತಾವರಣಕ್ಕೆ ಹೊಂದಿಕೊಂಡಿವೆ.

ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಅರಮನೆಯಿಂದ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸಲಾಗುತ್ತಿದೆ.

ಎರಡನೇ ಹಂತವಾಗಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಚಿನ್ನದ ಅಂಬಾರಿ ಹೊರುವುದಕ್ಕಾಗಿ ನಡೆಸುವ ತಾಲೀಮಾದ ಮರಳು ಮೂಟೆ ಹೊರುವುದನ್ನು ಅಭ್ಯಾಸ ಮಾಡಿಸಲಾಗುತ್ತಿದೆ.

ಕೋಡಿ ಸೋಮೇಶ್ವರ ದೇವಾಲಯದ ಬಳಿ ಅರ್ಚಕ ಪ್ರಹ್ಲಾದ್ ರಾವ್ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ತಾಲೀಮಿಗೆ ಚಾಲನೆ ನೀಡಿದರು.

ದಸರಾ ಗಜಪಡೆಯ ಎರಡನೇ ತಾಲೀಮು ಭಾರ ಹೊರುವುದು. ಆ ತಾಲೀಮಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭ ನೀಡಲಾಯಿತು.

ಅಭಿಮನ್ಯು ಆನೆಗೆ 200 ಕೆ.ಜಿ ತೂಕದ ಗಾದಿ, ನಮ್ದ, ಚಾರ್ಮ (ಕಬ್ಬಿಣದ ತೊಟ್ಟಿಲು) ಹಾಗೂ 300 ಕೆ.ಜಿ ತೂಕದಷ್ಟು ಮರಳಿನ ಮೂಟೆಯನ್ನು ಹಾಕಿ ಸುಮಾರು 500 ಕೆ.ಜಿ ಭಾರವನ್ನು ಹೊರಿಸಿ ತಾಲೀಮು ನೀಡಲಾಗಿದೆ,ಆನೆಯ ಪಕ್ಕ ಕುಮ್ಕಿ ಆನೆಯಾಗಿ ಕಾವೇರಿ ಹಾಗೂ ಹೇಮಾವತಿ ಸಾಥ್​ ನೀಡಿದವು.

ಮುಂದಿನ ದಿನಗಳಲ್ಲಿ ಮಹೇಂದ್ರ, ಧನಂಜಯ, ಭೀಮ ಹಾಗೂ ಏಕಲವ್ಯ ಆನೆಗಳಿಗೂ ಭಾರ ಹೊರುವ ತಾಲೀಮನ್ನು ನಡೆಸಲಾಗುವುದು.

ಈಗಾಗಲೇ 14 ಆನೆಗಳು ತಾಲೀಮಿನಲ್ಲಿ ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಭಾರ ಹೊರುವ ತಾಲೀಮಿನ ಜೊತೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ನಡೆಸಲಾಗುವುದು ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.

ಭಾರ ಹೊತ್ತು ಸಾಗಿದ ಅಭಿಮನ್ಯು : ಕಳೆದ ಐದು ವರ್ಷಗಳಿಂದ ಸುಮಾರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗುತ್ತಿರುವ 59 ವರ್ಷದ ಅಭಿಮನ್ಯು ಆನೆ 500 ಕೆ.ಜಿ ತೂಕದ ಮರಳಿನ ಮೂಟೆ ಹಾಗೂ ಇತರ ವಸ್ತುಗಳನ್ನು ಹೊತ್ತು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು ಜಂಬೂಸವಾರಿ ಸಾಗುವ ಮಾರ್ಗವಾದ ಕೆ.ಆರ್.ವೃತ್ತ, ಸಯ್ಯಾಜಿರಾವ್ ವೃತ್ತ, ಆಯುರ್ವೇದಿಕ್ ಆಸ್ಪತ್ರೆ, ಹಳೆಯ ಆರ್.ಎಂ.ಸಿ ವೃತ್ತ, ಹೈವೇ ವೃತ್ತ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿತು. ಪುನಃ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಅಭಿಮನ್ಯು ನೇತೃತ್ವದ ಗಜಪಡೆ ಬಂದಿತು. ಮೊದಲ ದಿನದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ನಡೆಯಿತು.

ಅಭಿಮನ್ಯು ಟೀಮ್ ಗೆ ಭಾರ ಹೊರುವ ತಾಲೀಮು Read More

ದಸರಾ ಸಾಂಸ್ಕೃತಿಕ;ಧರ್ಮಾತೀತವಾದ ಹಬ್ಬ:ಧರ್ಮದ ಲೇಪನ ಸರಿಯಲ್ಲ-ಸಿಎಂ ಟಾಂಗ್

ಮೈಸೂರು: ದಸರಾ ಸಾಂಸ್ಕೃತಿಕ ಹಬ್ಬ, ಧರ್ಮಾತೀತವಾದ ಹಬ್ಬ.
ಇದು ಎಲ್ಲಾ ಜಾತಿ ಧರ್ಮಕ್ಕೆ ಸೇರಿದ್ದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಜೆಪಿ ಗೆ ಟಾಂಗ್ ನೀಡಿದರು.

ಮೈಸೂರು ಜಿಲ್ಲಾ‌ ಪ್ರವಾಸ ಕೈಗೊಂಡಿರುವ ಸಿಎಂ,ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕವಿ ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ,
ಟಿಪ್ಪು ,ಹೈದಾರಲಿ ಕೂಡ ದಸರಾ ನಡೆಸಿದ್ದಾರೆ,ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ.
ಇದಕ್ಕೆ ಧರ್ಮದ ಲೇಪನ ಬಳಿಯುವುದು ಸರಿಯಲ್ಲಾ ಎಂದು ತಿರುಗೇಟು ನೀಡಿದರು.

ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೇ ಹೇಳಿಕೆಗೂ ದಸರಾ ಉದ್ಘಾಟನೆ‌ ವಿಷಯಕ್ಕೂ ಏನು ಸಂಬಂಧ,
ಬೆಜೆಪಿಯವರು ಕುಂಟ ನೆಪ ಹುಡುಕುತ್ತಿದ್ದಾರೆ ಅಷ್ಟೇ.ಯಾವತ್ತು ಏನೋ ಹೇಳಿದ್ದಾರೆ ಎಂದು ಅದನ್ನ ಇಲ್ಲಿದೆ ಲಿಂಕ್ ಮಾಡುವುದು ಎಷ್ಟು ಸರಿ ಎಂದು ಸಿಎಂ ಪ್ರಶ್ನಿಸಿದರು.

ಬೆರಳಣಿಕೆ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ,ನಾನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ,ಧರ್ಮಾಂದರು ಮಾತ್ರ ಬಾನು ಮುಷ್ತಾಕ್ ಹೆಸರನ್ನ ವಿರೋಧಿಸುತ್ತಾರೆ ಎಂದು ಅಸಮಾಧಾನದಿಂದ ಸಿದ್ದು ನುಡಿದರು.

ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ ಐ ಟಿ ತನಿಖೆ ನಡೆಯುತ್ತಿದೆ,ಸ್ವತಃ ‌ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಇದನ್ನು‌ ಸ್ವಾಗತಿಸಿದ್ದಾರೆ.ಬಿಜೆಪಿ ಯವರು ಕೂಡಾ ಎಸ್ಐಟಿ‌ ತನಿಖೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ,ತನಿಖೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ದಸರಾ ಸಾಂಸ್ಕೃತಿಕ;ಧರ್ಮಾತೀತವಾದ ಹಬ್ಬ:ಧರ್ಮದ ಲೇಪನ ಸರಿಯಲ್ಲ-ಸಿಎಂ ಟಾಂಗ್ Read More

ದಸರಾ ಉದ್ಘಾಟನೆ;ಚಾಮುಂಡಿ ಬೆಟ್ಟ ಕುರಿತ‌ ಚರ್ಚೆ- ರಾಜಮಾತೆ ಸುದೀರ್ಘ ಪತ್ರ

ಮೈಸೂರು: ಬಾನು ಮುಸ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ ಬಳಿಕ ಸಾಕಷ್ಟು ಚರ್ಚೆ, ವಾದ- ವಿವಾದಗಳು ಪ್ರಾರಂಭವಾಗಿದ್ದು,ಇದರ ನಡುವೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಕೆಲ ಸ್ಪಷ್ಟನೆ ನೀಡಿ ಪತ್ರ ಬರೆದಿದ್ದು ಕೆಳಗಿನಂತಿದೆ.

ರಾಜ್ಯ ಸರ್ಕಾರ ಈ ವರ್ಷ ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ರಾಜಕೀಯ ನಡೆಯುತ್ತಿರುವ ಸಂಗತಿ ತೀವ್ರ ಬೇಸರ ತಂದಿದೆ ಎಂದು ಬರೆದಿದ್ದಾರೆ.

ಈ ವರ್ಷದ ನಾಡ ಹಬ್ಬ (ಜನತಾ ದಸರಾ) ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿದ್ದು ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧರ್ಮಕ್ಕೆ ಸೇರಿಲ್ಲ ಎಂಬಂತಹ ಹೇಳಿಕೆಗಳು ಅನಗತ್ಯ.

ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಪದ್ಧತಿಗನುಗುಣವಾಗಿ ಪೂಜೆ ಆಚರಣೆ ನಡೆದರೂ ಹಿಂದಿನಿಂದಲೂ ಅನ್ಯ ಧರ್ಮೀಯರಿಗೆ ದೇವಸ್ಥಾನದಲ್ಲಿ ಪ್ರವೇಶದ ಅವಕಾಶವಿತ್ತು ಮತ್ತು ಈಗಲೂ ಇದೆ. ಅದು ಹಿಂದೂ ದೇವಸ್ಥಾನವಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರಲಾಗುತ್ತಿರಲಿಲ್ಲ.

ಸರ್ಕಾರದ ದಸರಾ ಒಂದು ಸಾಂಸ್ಕೃತಿಕ ಆಚರಣೆ ಎಂಬುದು ನಮ್ಮ ಪರಿಗಣಿತ ಅಭಿಪ್ರಾಯ. ಸರ್ಕಾರದ ವತಿಯಿಂದ ಯಾವುದೇ ಧಾರ್ಮಿಕ ಪಂಗಡದ ಆಚರಣೆಗಳಿಗೆ ಅವಕಾಶವಿಲ್ಲವಾಗಿದ್ದು ಅಂತಹ ಉತ್ಸವವನ್ನು ನಡೆಸುವಲ್ಲಿ ಧಾರ್ಮಿಕ ಪಾವಿತ್ರ್ಯ, ಸಂಪ್ರದಾಯ ಅಥವಾ ಪರಂಪರೆಯನ್ನು ಪಡೆಯಲು ಸಾಧ್ಯವಿಲ್ಲ.

ಈ ಕಾರಣದಿಂದ ಕರ್ನಾಟಕ ಸರ್ಕಾರ ಆಯೋಜಿಸುವ ಆಚರಣೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೊರತು ಧಾರ್ಮಿಕ ಸಂಪ್ರದಾಯವಾಗಿಲ್ಲ.

ಆಶ್ವೀಯುಜ ಶರನ್ನವರಾತ್ರಿ ಸಮಯದಲ್ಲಿ ನಾವು ಖಾಸಗಿಯಾಗಿ ನವರಾತ್ರಿ ಸಂಬಂಧ ಧಾರ್ಮಿಕ ಆಚರಣೆಗಳನ್ನು ಹಳೆಯ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಅರಮನೆಯ ಒಳಾಂಗಣದಲ್ಲಿ ಮತ್ತು ಅರಮನೆಯ ಹೊರಾಂಗಣದಲ್ಲಿ ಶಾಸ್ತ್ರೋಕ್ತವಾಗಿ ಪಾಡ್ಯದಿಂದ ನವಮಿ ಪರ್ಯಂತ ಪೂಜೆ ನಡೆಸಿ ವಿಜಯದಶಮಿ ಆಚರಣೆಯೊಂದಿಗೆ ಪೂರ್ಣಗೊಳ್ಳುತ್ತದೆ.

ಇದೇ ದಿನಗಳಲ್ಲಿ ಸರ್ಕಾರ.ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಮುಂದೆ ಆಯೋಜಿಸವುದರಿಂದ, ನಮ್ಮ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸಮಯದ ಅತಿಕ್ರಮಣವನ್ನು ತಪ್ಪಿಸಲು, ಶ್ರೀ ಚಾಮುಂಡೇಶ್ವರಿಯ ಉದ್ಘಾಟನೆ ಮತ್ತು ಶ್ರೀ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆಗೆ ಶುಭ ಮತ್ತು ಸೂಕ್ತ ಸಮಯವನ್ನು ನಿಗದಿಪಡಿಸಲಾಗುತ್ತದೆ.

ಈ ನಿಟ್ಟಿನಲ್ಲಿ ಇಂದಿನ ಗಣೇಶ ಚತುರ್ಥಿಯ ಆಚರಣೆ ಮತ್ತು ಅನುಗ್ರಹದಿಂದ ಎಲ್ಲಾ ಅಡೆತಡೆಗಳು, ತಪ್ಪು ಕಲ್ಪನೆಗಳು ಮತ್ತು ಸಂಘರ್ಷಗಳು ನಿವಾರಣೆಯಾಗಿ ಶೀಘ್ರದಲ್ಲೇ ಒಮ್ಮತವನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ರಾಜಮಾತೆ ಪತ್ರದಲ್ಲಿ ತಿಳಿಸಿದ್ದಾರೆ.

ದಸರಾ ಉದ್ಘಾಟನೆ;ಚಾಮುಂಡಿ ಬೆಟ್ಟ ಕುರಿತ‌ ಚರ್ಚೆ- ರಾಜಮಾತೆ ಸುದೀರ್ಘ ಪತ್ರ Read More