ಮಾದಕ ವಸ್ತು ಮುಕ್ತ ಜಿಲ್ಲೆ ಮಾಡಲು ಅಧಿಕಾರಿಗಳು ಕೈ ಜೋಡಿಸಿ: ನಾಗೇಶ್

ಮೈಸೂರು: ಮಾದಕ ವಸ್ತುಗಳ ಸರಬರಾಜು ತಡೆಗಟ್ಟಲು ಹಾಗೂ ಮಾದಕ ವಸ್ತುಗಳ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾಗೇಶ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮಿಕೊಳ್ಳಲಾಗಿದ್ದ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ಮದ್ಯಪಾನವನ್ನು ಊರಿನ ಹೊರಭಾಗದಲ್ಲಿ ಮಾರಾಟ ಮಾಡಲಾಗುತ್ತಿತ್ತು, ಇಂದು ಊರಿನ ಒಳಗೆ ಮಾರಾಟ ಮಾಡುತ್ತಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಮನೆಗಳನ್ನೇ ಆವರಿಸಬಹುದು. ಸಾರ್ವಜನಿಕರು ಇದರ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಮಾದಕ ವಸ್ತುಗಳ ಸೇವನೆ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿದ್ದು, ಅವರ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಕಾಲೇಜು ಶಿಕ್ಷಣ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜುಗಳ ಸುತ್ತಮುತ್ತ ಸಿ ಸಿ ಟಿವಿಗಳನ್ನು ಅಳವಡಿಸಿ ವಿದ್ಯಾರ್ಥಿಗಳ ಚಲನವಲನಗಳ ಬಗ್ಗೆ ನಿಗಾವಹಿಸಬೇಕು. ಕಾಲೇಜುಗಳ ಸುತ್ತ ಮುತ್ತ ಮಾದಕ ವಸ್ತುಗಳಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ಮಾಹಿತಿ ಇರುವ ಬ್ಯಾನರ್ ಗಳನ್ನ ಅಳವಡಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್ ಗಳ ಸುತ್ತ ಮುತ್ತ ಸಿ. ಸಿ ಟಿವಿಯನ್ನು ಅಳವಡಿಸಿ ಅವುಗಳನ್ನು ಪರಿಶೀಲಿಸಬೇಕು, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಹಾಸ್ಟೆಲ್ ಗಳ ಸುತ್ತ ಸಂಶಯಾಸ್ಪದವಾಗಿ ಓಡಾಡುತ್ತಿರುವುದು ತಿಳಿದುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿಮ್ಮ ವ್ಯಾಪಿಗೆ ಬರುವಂತಹ ಎಲ್ಲಾ ಆಸ್ಪತ್ರೆಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಬೇಕು.

ಔಷಧ ನಿಯಂತ್ರಣಾಧಿಕಾರಿಗಳು ಮೆಡಿಕಲ್ ಸ್ಟೋರ್ ಗಳಲ್ಲಿ ಕಾನೂನು ಬಾಹಿರವಾಗಿ ಡ್ರಗ್ಸ್ ಸರಬರಾಜು ಆಗದಂತೆ ಹಾಗೂ ಡ್ರಗ್ಸ್ ನಿಯಂತ್ರಣದ ಬಗ್ಗೆ ಕ್ರಮ ವಹಿಸಿ, ಅನಿರೀಕ್ಷಿತ ವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಹೇಳಿದರು.

ಅರಣ್ಯ ಇಲಾಖೆ ಮತ್ತು ಕೃಷಿ ಇಲಾಖೆಯವರು ಕಾಡಂಚಿನ ಗ್ರಾಮಗಳು ಹಾಗೂ ಹಾಡಿಗಳಲ್ಲಿ, ಗಾಂಜಾ ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದುಕೊಂಡು ಪೊಲೀಸರಿಗೆ ವರದಿ ನೀಡಬೇಕು.

ಮೈಸೂರು ಜಿಲ್ಲೆಯಲ್ಲಿ ಇರುವ ಕೇಂದ್ರ ಕಾರಾಗೃಹ ಹಾಗೂ ಉಪ ಕಾರಾಗೃಹಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು. ಕಾರಗೃಹದಲ್ಲಿ ಇರುವ ಬಂಧಿಗಳಿಗೆ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು.

ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾದಕ ವಸ್ತುಗಳು ಸರಬರಾಜು ಆಗದಂತೆ ಕ್ರಮ ವಹಿಸಬೇಕು. ಸರಕು ಸಾಗಾಣಿಕೆ ಗೂಡ್ಸ್ ಗಳನ್ನು ಸರಕು ಮತ್ತು ಸೇವಾ ತೆರಿಗೆ ಇಲಾಖೆಯವರು ಪಾರ್ಸಲ್ ಗಳಲ್ಲಿ ಮಾದಕ ವಸ್ತುಗಳ ಸಾಗಾಣಿಕೆಯಾಗುತ್ತಿರುವುದರ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಕ್ರಮ ವಹಿಸಿ ವರದಿ ನೀಡಬೇಕು ಎಂದು ನಾಗೇಶ್ ಸೂಚಿಸಿದರು.

ಸಭೆಯಲ್ಲಿ ಎಎಸ್ಐ ನಾಗರಾಜ್ ನಾಯಕ್, ಸೈಬರ್ ಕ್ರೈಂ ವಿಭಾಗದ ಮನೋಜ್ ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾದಕ ವಸ್ತು ಮುಕ್ತ ಜಿಲ್ಲೆ ಮಾಡಲು ಅಧಿಕಾರಿಗಳು ಕೈ ಜೋಡಿಸಿ: ನಾಗೇಶ್ Read More

ಮೈಸೂರಲ್ಲಿ ಮುಂದುವರಿದ ಮಾದಕ ವಸ್ತುಗಳ ವಿರುದ್ದ ಸಮರ:140 ಶಂಕಿತರು ವಶ

ಮೈಸೂರು: ಮಾದಕ ವಸ್ತುಗಳ ವಿರುದ್ದ ಮೈಸೂರು ನಗರ ಪೊಲೀಸರು
ಸಮರ ಮುಂದುವರಿಸಿದ್ದಾರೆ.

ಬುಧುವಾರ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಗರದ ಹಲವೆಡೆ ದಾಳಿ ನಡೆಸಿ ಮಾದಕ ಮಾರಾಟಗಾರರಿಗೆ ಮಾದಕ ಸೇವಿಸುವವರಿಗೆ ಚುರುಕುಮುಟ್ಟಿಸಿದ್ದಾರೆ‌.

11 ಕಾಲೇಜ್ ಹಾಸ್ಟೆಲ್ ಗಳು, ಖಾಸಗಿ ಹಾಸ್ಟೆಲ್ ಗಳು, ಪ್ರತ್ಯೇಕವಾಗಿ ಬಾಡಿಗೆಗೆ ಪಡೆದು ತಂಗಿರುವ ವಿಧ್ಯಾರ್ಥಿಗಳ ಕೊಠಡಿಗಳ ಮೇಲೆ ದಾಳಿ ನಡೆಸಲಾಗಿದೆ.

ಈ ವೇಳೆ ಗಾಂಜಾ ಸೇವನೆ ಮಾಡಿದ 140 ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ.
ಎನ್ ಡಿ ಪಿಎಸ್ ಕಾಯ್ದೆ ಅನ್ವಯ ಒಬ್ಬನನ್ನು ಬಂಧಿಸಲಾಗಿದೆ.

ಪೊಲೀಸರು ಒಟ್ಟು 860 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ‌

ಮೈಸೂರಲ್ಲಿ ಮುಂದುವರಿದ ಮಾದಕ ವಸ್ತುಗಳ ವಿರುದ್ದ ಸಮರ:140 ಶಂಕಿತರು ವಶ Read More

ಡ್ರಗ್ಸ್ ತಯಾರಿಕಾ ಘಟಕ ಪತ್ತೆ;59 ಗೋದಾಮುಗಳಲ್ಲಿ ತಪಾಸಣೆ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾದ ಹಿನ್ನಲೆಯಲ್ಲಿ
ಪ್ರಕರಣವನ್ನು ಮೈಸೂರು ಖಾಕಿಪಡೆ ಗಂಭೀರವಾಗಿ ಪರಿಗಣಿಸಿದೆ.

ಹಾಗಾಗಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಖುದ್ದಾಗಿ ಫೀಲ್ಡ್ ಗೆ ಇಳಿದಿದ್ದಾರೆ,
ಭಾನುವಾರ ಇಡೀ ದಿನ ಮೈಸೂರು ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆದಿದೆ.

ನೆನ್ನೆ ರಾತ್ರಿ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ನಡೆದಿದ್ದು, ದಾಳಿಯಲ್ಲಿ
26 ಜನ ಗಾಂಜಾ ಸೇವಿಸಿದವರು ಪತ್ತೆಯಾಗಿದ್ದಾರೆ.ಒಬ್ಬ ಮಾರಾಟಗಾರನನ್ನು ವಶಕ್ಕೆ ಪಡೆಯಲಾಗಿದೆ.

ಮಂಡಿ ಮೊಹಲ್ಲಾ, ಉದಯಗಿರಿ, ಎನ್ ಆರ್ ಮೊಹಲ್ಲಾ, ನಜರ್ ಬಾದ್, ಕೆ ಆರ್ ಮೊಹಲ್ಲಾ ಸೇರಿ ಹಲವು ಕಡೆ ಏಕ ಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.

ಡಿಸಿಪಿಗಳು ಎಸಿಪಿಗಳು ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,59 ಗೋದಾಮುಗಳಲ್ಲಿ ತಪಾಸಣೆ ಮಾಡಲಾಗಿದೆ.ಜತೆಗೆ
ಹಾಸ್ಟೆಲ್‌ಗಳು ಸೇರಿ ಹಲವು ಕಡೆ ತಪಾಸಣೆ ಮಾಡಿದ್ದಾರೆ.

ಈ ಹಿಂದೆ ಗಾಂಜಾ ಮಾರಾಟ‌ ಮಾಡುತ್ತಿದ್ದ
35 ಜನರ ವಿಚಾರಣೆ ನಡೆಸಲಾಗಿದೆ.
ಸೋಮವಾರ ಕೂಡಾ ಕಾರ್ಯಾಚರಣೆ ಮುಂದುವರಿದಿದೆ.

ಅಮಾನತು: ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 50 ಕ್ಕೂ ಹೆಚ್ಚು ಕೆಜಿ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಭಂಧಿಸಿದಂತೆ ಎನ್.ಆರ್.ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಲಕ್ಷ್ಮಿಕಾಂತ್ ತಳವಾರ್ ಅವರನ್ನ ಅಮಾನತುಪಡಿಸಲಾಗಿದೆ.

ಅಡಳಿತಾತ್ಮಕ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.

ಲಕ್ಷ್ಮಿಕಾಂತ್ ತಳವಾರ್ ಅವರ ಜಾಗಕ್ಕೆ ಸಿಸಿಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್ ಅವರನ್ನ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.

ಡ್ರಗ್ಸ್ ತಯಾರಿಕಾ ಘಟಕ ಪತ್ತೆ;59 ಗೋದಾಮುಗಳಲ್ಲಿ ತಪಾಸಣೆ Read More

ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಿ:ತೇಜಸ್ವಿ ಆಗ್ರಹ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರ ತಂಡ ಡ್ರಗ್ ಉತ್ಪಾದನೆ ಮಾಡುವ ಘಟಕದ ಮೇಲೆ ದಾಳಿ ಮಾಡಿ ಸುಮಾರು ಐವತ್ತು ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಈ ಜಾಲವನ್ನು ಮಟ್ಟ ಹಾಕಬೇಕೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ನರಸಿಂಹರಾಜ ಪೋಲಿಸ್ ಠಾಣೆಯ ನಿರೀಕ್ಷಕರಾದ ಲಕ್ಷ್ಮಿ ಕಾಂತ ತಳವಾರ್ ಅವರನ್ನು ಅಮಾನತು ಮಾಡಲಾಗಿದೆ,ಆದರೆ ಮೈಸೂರಿನಲ್ಲಿ ಡ್ರಗ್ಸ್ ಜಾಲ ಇರುವುದನ್ನು ಅರಿಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಯಿತೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಪ್ರಶ್ನಿಸಿದ್ದಾರೆ.

ಹಾಗುದ್ದಮೇಲೆ ಗುಪ್ತಚರ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕಲ್ಲವೆ ಎಂದು ಅವರು ಆಗ್ರಹಿಸಿದ್ದಾರೆ.

ಮೈಸೂರಿನ ನರಸಿಂಹರಾಜ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ್ಥಳವೊಂದರಲ್ಲಿ ಕೋಟ್ಯಂತರ ಮೌಲ್ಯದ ಎಂಡಿಎಂಎ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ದಲ್ಲಿ ಸಿಕ್ಕಿಬಿದ್ದ ಡ್ರಗ್ ಪೆಡ್ಲರ್ ನೀಡಿದ ಮಾಹಿತಿಯಾಧರಿಸಿ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಆಗಮಿಸಿ ಸ್ಥಳೀಯ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ 50 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ

ಡ್ರಗ್ ಜಾಲದ ನಂಟು ಮೈಸೂರಿಗೆ ಹರಡಿರುವುದರಿಂದ ಜನರಲ್ಲಿ ಆತಂಕ ಉಂಟು ಮಾಡಿದೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡ್ರಗ್ ಮಾರಾಟ ಜಾಲದ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಮತ್ತು ಕೊಕ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಶಾಶ್ವತವಾಗಿ ಮೈಸೂರಿನಿಂದ ಗಡಿಪಾರು ಮಾಡಬೇಕು ಎಂದು ತೇಜಸ್ವಿ ಒತ್ತಾಯಿಸಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಿ:ತೇಜಸ್ವಿ ಆಗ್ರಹ Read More

ಡ್ರಗ್ ಮಾಫಿಯಾ ತಾಣವಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಡ್ರಗ್ ಮಾಫಿಯಾ ತಾಣವಾಗುತ್ತಿದೆ, ಇದಕ್ಕೆ ನಗರದಲ್ಲಿ ನಡೆದ ಕಾರ್ಯಾಚರಣೆ ಸಾಕ್ಷಿಯಾಗಿದೆ.

ಮಹಾರಾಷ್ಟ್ರ ಪೊಲೀಸರು ಮೈಸೂರಿನ ಪೊಲೀಸರೊಂದಿಗೆ ನಗರದಲ್ಲಿ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಡ್ರಿಕ್ಸ್ ವಶಪಡಿಸಿಕೊಂಡಿದ್ದು,ಮೈಸೂರು ಡ್ರಗ್ ಮಾಫಿಯಾ ತಾಣವಾಗುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.

ಮೈಸೂರಿನ ನರಸಿಂಹರಾಜ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ್ಥಳವೊಂದರಲ್ಲಿ ಕೋಟ್ಯಂತರ ಮೌಲ್ಯದ ಎಂಡಿಎ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ಮಾದಕ ವಸ್ತು ನಿಗ್ರಹದಳದ ಪೊಲೀಸರಿಗೆ ವ್ಯಕ್ತಿಯೊಬ್ಬ ನೀಡಿದ ಮಾಹಿತಿಯಾಧರಿಸಿ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಆಗಮಿಸಿ ಸ್ಥಳೀಯ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ 50 ಕೆಜಿ ಡ್ರಗ್ಸ್ ಸೀಸ್ ಮಾಡಿದ್ದಾರೆ.

ಡ್ರಗ್ ಜಾಲದ ನಂಟು ಮೈಸೂರಿಗೆ ಹರಡಿರುವುದು ಆತಂಕ ಉಂಟು ಮಾಡಿದೆ ಡ್ರಗ್ಸ್ ಮಾರಾಟಗಾರರು ಮೈಸೂರು ಸುರಕ್ಷಿತ ಸ್ಥಳವೆಂದು ನಿರ್ಧರಿಸಿ ಮೈಸೂರಿನಲ್ಲಿ ತಾಣವನ್ನು ತೆರೆದು ಇಲ್ಲಿ ಡ್ರಗ್ಸ್ ತಯಾರಿಸುತ್ತಿದ್ದರು ಎಂದು ಗೊತ್ತಾಗಿದೆ.

ಡ್ರಗ್ ಮಾಫಿಯಾ ತಾಣವಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು! Read More

ಯುವ ಪೀಳಿಗೆಯ ಜೀವನ ನಾಶ‌ ಮಾಡುವ ಮಾದಕ ದ್ರವ್ಯ: ಸಿ.ಎಮ್ ರವೀಂದ್ರ

ನಂಜನಗೂಡು: ಇಂದಿನ ಯುವ ಪೀಳಿಗೆ ಹೆಚ್ಚಾಗಿ ಮಾದಕ ದ್ರವ್ಯಗಳ ಸೇವನೆಗೆ ದಾಸರಾಗುತ್ತಿದ್ದಾರೆ,ಇದು ಜೀವನವನ್ನೇ ನಾಶ ಮಾಡಿಬಿಡುತ್ತದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸಿ.ಎಂ ರವೀಂದ್ರ ಅವರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕೇವಲ ಗೆಳೆಯರಿಂದ ಅನುಭವ ಪಡೆಯಲಿಕ್ಕೆ ಮಾದಕ ದ್ರವ್ಯವನ್ನು ಸೇವಿಸಿ ನಂತರ ಅವುಗಳಿಗೆ ದಾಸರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರವೀಂದ್ರ ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ನಗರ ಪ್ರದೇಶದಲ್ಲಿ ಇಂದು ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗಿದೆ,ಗ್ರಾಮೀಣ ಪ್ರದೇಶದಲ್ಲಿ ಅಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಗ್ರಾಮೀಣದಲ್ಲಿಯೂ ಇದರ ಹಾವಳಿ ಹೆಚ್ಚಾಗಿದೆ. ಆದಕಾರಣ ಇದರ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ಅವರು ಅಧ್ಯಕ್ಷೀಯ ಭಾಷಣ ಮಾಡಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮಾದಕ ದ್ರವ್ಯ ಸೇವನೆಯನ್ನು ಮಾಡುವುದಿಲ್ಲ ಎಂದು ತಮ್ಮ ಹೃದಯವನ್ನು ಮುಟ್ಟಿ ಕೊಂಡು ಪ್ರತಿಜ್ಞೆ ಮಾಡಿದರೆ ಮಾತ್ರ ಇವುಗಳ ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಸಂವಾದ ಹಮ್ಮಿಕೊಂಡು ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಉತ್ತರವನ್ನು ಪಡೆದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗನಸ್ವಾಮಿ ಎನ್, ನಾಗರಾಜು, ಡಾ.ಕೆ. ಮಾಲತಿ ,ಭವ್ಯ ಸುಮಿತ್ರ ,ಸ್ವಾಮಿಗೌಡ, ಡಾ. ಟಿ.ಕೆ ರವಿ ,ಹೆಚ್.ಕೆ ಪ್ರಕಾಶ್ ,ಅದಿಲ್ ಹುಸೇನ್, ನಾಗರಾಜ ರೆಡ್ಡಿ, ರಾಮಾನುಜ,ಡಾ. ಸುಮಾ ,ಎನ್. ದಿನೇಶ್, ರೂಪ, ವತ್ಸಲ ,ಶೃತಿ ನಾಗರಾಜ್, ಬಿಂದು ,ಮಿಲ್ಟನ್ ,ಹರ್ಷಿತ್ ,ನಿಂಗಯ್ಯ ,ಮಾದೇವ ಸ್ವಾಮಿ ,ದಿವ್ಯ ಉಪಸ್ಥಿತರಿದ್ದರು.

ಯುವ ಪೀಳಿಗೆಯ ಜೀವನ ನಾಶ‌ ಮಾಡುವ ಮಾದಕ ದ್ರವ್ಯ: ಸಿ.ಎಮ್ ರವೀಂದ್ರ Read More

ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ಬಳಿ 1,800 ಕೋಟಿ ಮೌಲ್ಯದ ಡ್ರಗ್ಸ್‌ ವಶ

ಗಾಂಧಿನಗರ: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಜಂಟಿ ಕಾರ್ಯಾಚರಣೆಯಲ್ಲಿ, ಗುಜರಾತ್ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ 1,800 ಕೋಟಿ ರೂ. ಮೌಲ್ಯದ 300 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಗುಜರಾತ್ ಎಟಿಎಸ್ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಭಾರೀ ಪ್ರಮಾಣದ ಸರಕು ಪತ್ತೆಯಾಗಿದೆ, ಆದರೆ ಕಳ್ಳಸಾಗಣೆದಾರರು ಎಸ್ಕೇಪ್‌ ಆಗಲು ಪಾಕಿಸ್ತಾನ ಜಲ ಪ್ರದೇಶಕ್ಕೆ ಪಲಾಯನ ಮಾಡಿದ್ದಾರೆ,ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ಬಳಿ 1,800 ಕೋಟಿ ಮೌಲ್ಯದ ಡ್ರಗ್ಸ್‌ ವಶ Read More

ಮದ್ಯ, ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಿ: ಎಂ.ಕೆ ಸವಿತಾ

ಮೈಸೂರು,ಮಾ.7: ಮದ್ಯ ಮತ್ತು ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತು ಕೊಳ್ಳಿ, ಅಕಸ್ಮಾತ್ ಈ ಚಟಕ್ಕೆ ಒಳಗಾದರೆ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ಹೇಳಿದರು.

ಈ ಚಟ ಇಡೀ ನಿಮ್ಮ ಬದುಕನ್ನೇ ನಾಶದ ಅಂಚಿಗೆ ಕರೆದುಕೊಂಡು ಹೋಗುತ್ತದೆ ಎಂದು ಎಚ್ಚರಿಸಿದರು.

ಯುವರಾಜ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದಷ್ಪರಿಣಾಮ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ಈ ರೀತಿಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಆಯೋಜಿಸುತ್ತಾ ಬಂದಿದೆ. ಕಾರಣ ವಿದ್ಯಾರ್ಥಿಗಳ ಮೇಲೆ ಮದ್ಯ ಹಾಗೂ ಮಾದಕ ವಸ್ತುಗಳು ಬೀರುವ ಪರಿಣಾಮದಿಂದ. ಡ್ರಿಂಕ್ಸ್, ಡ್ರಗ್ಸ್, ಅದನೆಲ್ಲಾ ಮೀರಿದ ಮೊಬೈಲ್ ಅಡಿಕ್ಷನ್ ಎಂಬುದು ಪ್ರಾರಂಭವಾಗಿದೆ. ಮೊಬೈಲ್ ಬಳಕೆ ಎಂಬುದು ಒಂದು ವ್ಯಸನ ಎಂದರೆ ತಪ್ಪಾಗುವುದಿಲ್ಲ ಎಂದು ಹೇಳಿದರು.

ನಾವು ಒಂದು ಒಳ್ಳೆಯ ಪರಿಸರ ವಾತಾವರಣದಲ್ಲಿ ಬೆಳೆದರೆ ಇಂತಹ ಕೆಟ್ಟ ಅಭ್ಯಾಸಗಳು, ವ್ಯಸನಗಳು ನಮ್ಮ ಹತ್ತಿರ ಬರುವುದಿಲ್ಲ. ನಾವೂ ಎಲ್ಲೆ ಇದ್ದರೂ ಸಹ ಮಾದರಿಯಾಗಿ ತೆಗೆದುಕೊಳ್ಳಬೇಕು, ಒಳ್ಳೆಯದನ್ನು ಅನುಸರಿಸಬೇಕು, ಒಳ್ಳೆಯ ದಾರಿಯಲ್ಲಿ ಹೋಗುತ್ತಿರುವವರನ್ನು ಅನುಸರಿಸಬೇಕು ಎಂದು ಕಿವಿ ಮಾತು ಹೇಳಿದರು.

ಮೈಸೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶಿವಶಂಕರ್ ಅವರು ಮಾತನಾಡಿ ಯುವಕರು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗು ತ್ತೀರಿ, ಪೋಷಕರು ಮಕ್ಕಳಲ್ಲಿ ಭೇದಭಾವವನ್ನು ಮಾಡಬಾರದು. ನಮ್ಮ ದೇಹದ ಎರಡು ಭಾಗಗಳಾದ ಮೆದುಳು ಹೊಟ್ಟೆಯನ್ನು ನೀವು ಸದಾ ಕಾಳಜಿಯಿಂದ ನೋಡಿಕೊಳ್ಳಬೇಕು. ಈ ಎರಡು ಅಂಶಗಳನ್ನು ನೀವು ನಿರ್ಲಕ್ಷಿಸಿದರೆ ನಿಮ್ಮ ಭವಿಷ್ಯ ಹಾಳಾಗುತ್ತದೆ ಎಂದು ತಿಳಿಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಅವರು ಮಾತನಾಡಿ ಮೊದಲು ಆರೋಗ್ಯವೇ ಭಾಗ್ಯ ಎಂದಿತ್ತು. ಈಗ ಆರೋಗ್ಯವೇ ಎಲ್ಲಾ ಎಂಬಂತಾಗಿದೆ. ಆರೋಗ್ಯ ಇಲ್ಲದೇ ನಾವು ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಪತ್ರಕರ್ತ ಎಸ್.ಟಿ ರವಿಕುಮಾರ್ ಅವರು ಮಾತನಾಡಿ ಯುವ ಪೀಳಿಗೆ ಯಾವುದೇ ಒಂದು ಗಂಟೆಯ ಸಂತೋಷಗಳಿಗೆ ನೀವು ಇಂತಹ ಕೆಟ್ಟ ಚಟಗಳಿಗೆ ಬಲಿಯಾಗಿ ನಿಮ್ಮ ಜೀವನವನ್ನು ನಾಶ ಮಾಡಿಕೊಳ್ಳಬಾರದು ತಂದೆ ತಾಯಿ ನಿಮ್ಮ ಬೆಳವಣಿಗೆಗೆ ಆಸೆಯಿಂದ ಶಾಲಾ-ಕಾಲೇಜುಗಳಿಗೆ ಕಳಿಸುತ್ತಾರೆ ಅವರನ್ನು ನಿರಾಶೆ ಮಾಡಬೇಡಿ ಎಂದು ಬುದ್ದಿಮಾತು ಹೇಳಿದರು.

ಕೆ. ಆರ್. ಆಸ್ಪತ್ರೆ ಮನೋರೋಗ ತಜ್ಞರಾದ ಡಾ.ಬಿ.ಎನ್ ರವೀಶ್ ಅವರು ಮಾತನಾಡಿ ನಿಮ್ಮನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಇಂತಹ ದುಶ್ಚಟಗಳಿಗೆ ಬಲಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಅಜಯ್ ಕುಮಾರ್ ಸೇರಿದಂತೆ ಕಾಲೇಜಿನ ಬೋದಕ ಹಾಗೂ ಬೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮದ್ಯ, ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಿ: ಎಂ.ಕೆ ಸವಿತಾ Read More

ಮದ್ಯ,ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮುಖ್ಯ: ಅಯೂಬ್ ಖಾನ್

ಮೈಸೂರು: ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಅತೀ ಮುಖ್ಯವಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಜಾಗೃತರಾಗಬೇಕು ಎಂದು ಹೇಳಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜನರಲ್ಲಿ‌ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ನಿರ್ಮಿಸಿರುವ ಜಾಗೃತಿ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಹಾಗೂ ವಿಶೇಷವಾಗಿ ದೇಶದ ಮುಂದಿನ ಜವಾಬ್ದಾರಿಯುತ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ಮದ್ಯ ಮತ್ತು ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ, ಪ್ರಸ್ತುತ ಮುಖ್ಯವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಜಾಗೃತಿ ಮಳಿಗೆ ಬಹಳ ಅರ್ಥಪೂರ್ಣವಾಗಿದೆ. ಮಳಿಗೆಯಲ್ಲಿ ಅನಾವರಣಗೊಳಿಸಿರುವ ವಿಷಯಗಳು, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಸೇರಿದಂತೆ ಸಮಾಜದಲ್ಲಿ ಉತ್ತುಂಗ ಸ್ಥಾನದಲ್ಲಿರುವ ಗಣ್ಯರ ಜಾಗೃತಿ ಸಂದೇಶ, ಸಮಾಜದಲ್ಲಿ ಗಟ್ಟಿಯಾಗಿ ಬೇರೂರಲು ಪ್ರಯತ್ನಿಸುತ್ತಿರುವ ದುಷ್ಟ ಚಟಗಳನ್ನು ನಿಯಂತ್ರಿಸುವ ಸಂಬಂಧ ಒಳ್ಳೆಯ ಕಾರ್ಯವಾಗಿದೆ ಎಂದು ‌ಶ್ಲಾಘಿಸಿದರು.

ಎಕ್ಸಿಬಿಷನ್ ಬರುವ ಪ್ರತಿಯೊಬ್ಬರೂ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಳಿಗೆಗೆ ಭೇಟಿ ನೀಡಬೇಕು ಮತ್ತು ಇಲ್ಲಿ ಅನಾವರಣಗೊಳಿಸಿರುವ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದರಿಂದ ಮದ್ಯ ಮತ್ತು ಮಾದಕವಸ್ತುಗಳಿಂದ ಕುಟುಂಬ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮಾಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಇದೇ ವೇಳೆ ಅಯೂಬ್ ಖಾನ್ ಅವರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಕಟಿಸಿರುವ ಮದ್ಯ ಮತ್ತು ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪುಸ್ತಕ ಮತ್ತು ಮಡಕೆ ಪತ್ರವನ್ನು ಬಿಡುಗಡೆ ಗೊಳಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮಹೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ಮದ್ಯ,ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮುಖ್ಯ: ಅಯೂಬ್ ಖಾನ್ Read More