ದಸರಾ ದೀಪಾಲಂಕಾರ, ಡ್ರೋನ್ ಶೋ ಪೋಸ್ಟರ್, ಟೀಸರ್ ಬಿಡುಗಡೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರ ಹಾಗೂ ಡ್ರೋನ್ ಶೋ ಪೋಸ್ಟರ್ ಹಾಗೂ ದೀಪಾಲಂಕಾರದ ಟೀಸರ್ ಬಿಡುಗಡೆಗೊಳಿಸಲಾಯಿತು.

ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವತಿಯಿಂದ ನಡೆಸಲಾಗುವ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿ, ಟೀಸರ್ ಅನಾವರಣಗೊಳಿಸಿದರು.

ಎಂದಿನಂತೆ ಈ ಬಾರಿಯೂ ಸೆಸ್ಕ್ ವತಿಯಿಂದ ದೀಪಾಲಂಕಾರ ಮಾಡಲಾಗುತ್ತಿದ್ದು, ನಗರದ 135 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಅವುಗಳೊಂದಿಗೆ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಆಕರ್ಷಕ ಪ್ರತಿಕೃತಿಗಳನ್ನು ಇರಿಸಲಾಗುತ್ತದೆ. ದೀಪಾಲಂಕಾರಕ್ಕಾಗಿ 300 ಕಿಲೋ ವ್ಯಾಟ್, 257520 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.

ದಸರಾ ಮಹೋತ್ಸವದ ಸಂಭ್ರಮಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿರಲಿದೆ.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅಕ್ಟೋಬರ್ 1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದೆ. ಕಳೆದ ಬಾರಿ 1500 ಡ್ರೋನ್ ಬಳಸಿಕೊಂಡು ನಡೆಸಲಾಗಿದ್ದ ಡ್ರೋನ್ ಪ್ರದರ್ಶನದಲ್ಲಿ ಈ ಬಾರಿ 3000 ಡ್ರೋನ್ ಬಳಸಿಕೊಂಡು ನಡೆಸಲಾಗುತ್ತಿದೆ ಎಂದು ಈ ವೇಳೆ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.

ಈ‌ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಎಸ್ಪಿ ವಿಷ್ಣುವರ್ಧನ್, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಹಾಜರಿದ್ದರು.

ದಸರಾ ದೀಪಾಲಂಕಾರ, ಡ್ರೋನ್ ಶೋ ಪೋಸ್ಟರ್, ಟೀಸರ್ ಬಿಡುಗಡೆ Read More

ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ದೃಶ್ಯ ಸೆರೆ ಹಿಡಿದ ನೀಚರು!

ಮಂಡ್ಯ: ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯದಲ್ಲಿದ್ದ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ದೃಶ್ಯಗಳನ್ನು ಡ್ರೋನ್ ಬಳಸಿ ಸೆರೆ ಹಿಡಿದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದು ಎಲ್ಲೆಡೆ ತೀವ್ರ ಆಕ್ರೋಶ‌ ವ್ಯಕ್ತವಾಗಿದೆ.

ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಮಂದಗೆರೆ ಸಮೀಪ ಈ ನೀಚ ಕೆಲಸ ನಡೆದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇಂತಹ ವಿಕೃತಿ ಮೆರೆದ ಪುಂಡರು ಕಾರು, ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನೂರಾರು ನರೇಗಾ ಕೂಲಿ ಕಾರ್ಮಿಕರು, ಮಹಿಳೆಯರು ಪ್ರತಿಭಟನೆ ನಡೆಸಿದರು.

ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವಿನಹಳ್ಳಿ ಅಮಾನಿಕೆರೆ ಹೂಳೆತ್ತುವ ಕಾರ್ಯ ನಡೆಯುತ್ತಿದೆ, ಸುತ್ತಲಿನ ವಿವಿಧ ಗ್ರಾಮಗಳ 100ಕ್ಕೂ ಅಧಿಕ ಮಹಿಳೆಯರು ಹೊಳೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಾಮಗಾರಿ ವೇಳೆ ಕೆಲವು ಮಹಿಳಾ ಕಾರ್ಮಿಕರು ಶೌಚಕ್ಕೆ ತೆರಳಿದಾಗ ವಿಕೃತ ಮನಸ್ಸಿನ ಕಿಡಿಗೇಡಿಗಳು ಕೆರೆ ಏರಿ ಮೇಲೆ ನಿಂತು ಡ್ರೋನ್ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಿದ್ದಾರೆ.

ಡ್ರೋನ್ ಹಾರಾಡುತ್ತಿರುವುದನ್ನು ಕಂಡ ಕೂಲಿ ಕಾರ್ಮಿಕ ಮಹಿಳೆಯರು ಕೂಗಿ ಬರುವಷ್ಟರಲ್ಲಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ,ಇಂತಹ ನೀಚ ಕೆಲಸ ಮಾಡಿದ ಪೋಕರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಒತ್ತಾಯಿಸಿದ್ದಾರೆ.

ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ದೃಶ್ಯ ಸೆರೆ ಹಿಡಿದ ನೀಚರು! Read More