ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ:ಅಯೂಬ್ ಖಾನ್

ಮೈಸೂರು: ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ
ಅಯೂಬ್ ಖಾನ್ ತಿಳಿಸಿದರು.

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 69ನೇ ಪರಿನಿಬ್ಬಾಣ ದಿನ ಆಚರಣೆ ವೇಳೆ ಬಾಬಾ ಸಾಹೇಬರ ಭಾವಚಿತ್ರಕ್ಕೆ ಅಯೂಬ್ ಖಾನ್ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅಸಮಾನತೆಯ ಕತ್ತಲಲ್ಲಿ ತತ್ತರಿಸುತ್ತಿದ್ದ ಭಾರತಕ್ಕೆ ಬೆಳಕು ನೀಡಿದ ಸೂರ್ಯನನ್ನು ಕಳೆದುಕೊಂಡು ಇಡೀ ದೇಶವೇ 1956.ಡಿ.6 ಕಣ್ಣೀರು ಹರಿಸಿತ್ತು. ಇಂದು ದೇಶದಲ್ಲಿ ನ್ಯಾಯಂಗ, ಕಾರ್ಯಾಂಗ, ಶಾಸಕಾಂಗದ ಮೂಲಕ ಇಡೀ ಭಾರತದಲ್ಲಿ ಆಡಳಿತ ಅಭಿವೃದ್ಧಿಯ ಕಾನೂನನ್ನ ರಚಿಸಿ ದೇಶದ ಕಟ್ಟಕಡೆಯ ವ್ಯಕ್ತಿಗೆ ಸ್ವಾತಂತ್ರ್ಯ, ಸಮಾನತೆ, ರಕ್ಷಣೆ, ಹಕ್ಕುಗಳನ್ನ ನೀಡಿದ್ದು ಬಾಬಸಾಹೇಬರು ರಚಿಸಿಕೊಟ್ಟ ಸಂವಿಧಾನದಿಂದ.ಈ‌ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡಬೇಕಿದೆ ಎಂದು ತಿಳಿಸಿದರು.

ಭಾರತೀಯರ ಸ್ವಾಭಿಮಾನದ ಪ್ರತೀಕವಾದ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ನೆಲೆಗಟ್ಟಿನಲ್ಲಿ ಸರ್ವಧರ್ಮ ಸಮನ್ವಯ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಪರಿನಿಬ್ಬಾಣವಾದ ದಿನದಂದು ಅವರ ಚಿಂತನೆಗಳನ್ನು ಜೀವಂತವಿರಿಸಿ, ಅವುಗಳನ್ನು ಪಾಲಿಸಿಕೊಂಡು ಮುನ್ನಡೆಯೋಣ ಎಂದು ಕರೆ ನೀಡಿದರು.

ಮಹಾನಾಯಕ ಅಂಬೇಡ್ಕರ್‌ ಅವರು ಕಂಡ ಕನಸುಗಳನ್ನು ಸಾಕಾರಗೊಳಿಸುವ ಸಾಮಾಜಿಕ ಬದ್ಧತೆ ತೋರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಯೂಬ್ ಖಾನ್ ನುಡಿದರು.

ಸಾಂಸ್ಕೃತಿಕ ಸಮಿತಿಯು ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಆಯೋಜನೆ ಮಾಡಿದ್ದ ಸಮಾರಂಭದಲ್ಲಿ ಬಾಬಾ ಸಾಹೇಬರ ಗೀತೆಗಳ ಮೂಲಕ ಸ್ಮರಿಸಿ, ಸಂವಿಧಾನ ಪೀಠಿಕೆ ಭೋದನೆ ಮಾಡಲಾಯಿತು.

ಪ್ರಾಧಿಕಾರದ ಸಿಇಒ ಕೆ.ರುದ್ರೇಶ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್. ಎಸ್, ಉಪಾಧ್ಯಕ್ಷರುಗಳಾದ ರಂಗಸ್ವಾಮಿ ಪಾಪು, ಶಿವಲಿಂಗಯ್ಯ, ರಾಜೇಶ್ ಸಿ ಗೌಡ, ರಘುರಾಜೇ ಅರಸ್, ಪದ್ಮನಾಭ್ ಗುಂಡಣ್ಣ, ನಿರೂಪಕ ಅಜಯ್ ಶಾಸ್ತ್ರಿ, ಭವ್ಯ, ಜಯಲಕ್ಷ್ಮಿ, ಚಂದ್ರಕಲಾ, ಸರಸ್ವತಿ, ಗೌರಮ್ಮ, ವರುಣಾ ಪ್ರಶಾಂತ್, ಉಮೇಶ್, ಸೈಯದ್ ಇಸ್ಮಾಯಿಲ್, ಸಮಿ ಅನ್ವರ್, ಮನ್ಸೂರ್ ಅಲಿ ಮತ್ತಿತರರು ಹಾಜರಿದ್ದರು.

ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ:ಅಯೂಬ್ ಖಾನ್ Read More

ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಂಬೇಡ್ಕರ್ ಅವರನ್ನು‌ ಎಲ್ಲರೂ ಸ್ಮರಿಸಿ-ಹೆಚ್.ಸಿ‌ ಮಹದೇವಪ್ಪ

ಮೈಸೂರು: ಭಾರತದ ಉದ್ದಗಲಕ್ಕೂ ಇಂದು ಸಂವಿಧಾನವನ್ನು ಆರಾಧಿಸುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದವರು ಕೂಡ ಸಂವಿಧಾನ ಪೀಠಿಕೆಯನ್ನು ಪ್ರತಿದಿನ ಓದುತ್ತಿದ್ದಾರೆ ಎಂದು ಸಚಿವ‌ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ನಂಜನಗೂಡಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನವದಲ್ಲಿ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಆಶಯ ಅಡಗಿದೆ. ಎಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುವ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸಾರುತ್ತದೆ. ಈ ಅಂಶಗಳ ಮೇಲೆ ಭಾರತದ ಜನಜೀವನ ನಡೆಯುತ್ತಿದೆ.
ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು ಆ ಸಂದರ್ಭದಲ್ಲಿ ಎಲ್ಲಾ ಆರ್ಥಿಕ ತಜ್ಞರ ಸಭೆಯಲ್ಲಿ ಅಂಬೇಡ್ಕರ್ ಅವರು ಭಾಗವಹಿಸಿ ಭಾರತೀಯ ರೂಪಾಯಿ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು, ಅವರ ಸಲಹೆ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿತ್ತು ಎಂದು ಸ್ಮರಿಸಿದರು.

ದೇಶದ ಎಲ್ಲಾ ಜನರ ಏಳಿಗೆಗೆ ಸಂವಿಧಾನ ರಚಿಸಿ ಪ್ರತಿಯೊಬ್ಬರ ಸಮಾನ ಹಕ್ಕುಗಳ ರಕ್ಷಣೆಗೆ ಮುಂದಾದ ಬಾಬಾ ಸಾಹೆಬರನ್ನು ಒಂದು ವರ್ಗಕ್ಕೆ ಏಕೆ ಸೀಮಿತ ಮಾಡಲಾಗುತ್ತಿದೆ. ಸದಾ ಕಾಲ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅವರನ್ನು ಪ್ರತಿಯೊಬ್ಬರೂ ಕೂಡ ಸ್ಮರಿಸಬೇಕು ಎಂದು ಮಹದೇವಪ್ಪ ಕರೆ ನೀಡಿದರು.

ನಮ್ಮ ಸರ್ಕಾರವು ಸಂವಿಧಾನದ ಆಶಯವನ್ನು ಆಡಳಿತದ ಮೂಲಕ ಜಾರಿಗೆ ತರುತ್ತಿದೆ. ಅವಕಾಶಗಳಿಂದ ವಂಚಿತರಾದವರಿಗೆ ಸಂವಿಧಾನದಡಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒದಗಿಸಿಕೊಡಲಾಗುತ್ತಿದೆ. ಅದರಂತೆ ಬಾಬಾಸಾಹೇಬರ ಬಯಕೆಯ ಸಮೃದ್ಧ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು ಎಂದು ಸಚಿವರು ನುಡಿದರು.

ಇದೇ‌ ವೇಳೆ ಹೆಚ್.ಸಿ.ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಸಂಸದ ಸುನೀಲ್ ಬೋಸ್, ಶಾಸಕರಾದ ದರ್ಶನ ಧ್ರುವನಾರಾಯಣ, ಹೆಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಂಬೇಡ್ಕರ್ ಅವರನ್ನು‌ ಎಲ್ಲರೂ ಸ್ಮರಿಸಿ-ಹೆಚ್.ಸಿ‌ ಮಹದೇವಪ್ಪ Read More

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ

ಮೈಸೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ. ಹಾಗಾಗಿ ಮೈಸೂರಿನ ಪುರಭವನ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಕಾಂಗ್ರೆಸ್ ಮುಖಂಡ ಜೆ.ಜೆ ಆನಂದ್, ಸೇವಾದಳ ಕಾರ್ಯಧ್ಯಕ್ಷ ಮೋಹನ್, ರಮ್ಮನಹಳ್ಳಿ ಸುರೇಶ್ ಮತ್ತು ಅಂಬೇಡ್ಕರ್ ಯುವ ಸೇನೆ ಬ್ರಿಗೇಡ್ ಪದಾಧಿಕಾರಿಗಳು ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಿದರು.

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ Read More

ಕಾಂಗ್ರೆಸ್‌ ಹಲವು ವರ್ಷಗಳಿಂದ ದಲಿತರನ್ನು ತುಳಿದುಕೊಂಡೇ ಬಂದಿದೆ:ಅಶೋಕ್

ಬೆಂಗಳೂರು: ಕಾಂಗ್ರೆಸ್‌ನವರು ಹಲವಾರು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ವಿಧಾನಸೌಧದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಬಳಿ ಭೀಮ ಹೆಜ್ಜೆ 100 ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತರ ಬಗ್ಗೆ ಮಾತಾಡುವಾಗಲೆಲ್ಲ ಅವರು ತುಳಿತಕ್ಕೆ ಒಳಗಾದವರು ಎಂದು ಹೇಳುತ್ತೇವೆ. ಆದರೆ ಈ ರೀತಿ ತುಳಿದವರು ಯಾರು ಎಂದು ಪ್ರಶ್ನೆ ಮಾಡಿದರೆ, ಕಾಂಗ್ರೆಸ್‌ನವರೇ ಎಂಬ ಉತ್ತರ ಸಿಗುತ್ತದೆ ಎಂದು ಹೇಳಿದರು.

ಇಷ್ಟು ವರ್ಷಶೋಷಿತರನ್ನು ಕಾಂಗ್ರೆಸ್‌ನವರೇ ತುಳಿದಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್‌ನವರು ದಲಿತರನ್ನು ಉದ್ಧಾರ ಮಾಡಲಿಲ್ಲ ಎಂದು ಟೀಕಿಸಿದರು

ಬಾಬಾ ಸಾಹೇಬ್‌ ಅಂಬೇಡ್ಕರ್‌ರ ಹೆಸರನ್ನು ಕಾಂಗ್ರೆಸ್‌ನವರು ದುರುಪಯೋಗ ಮಾಡಿಕೊಂಡಿದೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ಕಾಂಗ್ರೆಸ್‌ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರಿಗೆ ಮೋಸ ಮಾಡುತ್ತಾರೆ ಎಂದು ದೂರಿದರು.

ವಕ್ಫ್‌ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್‌ನಿಂದಾದ ಭೂ ಕಬಳಿಕೆ ಬಗ್ಗೆ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ, ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಸಂಸತ್ತಿನಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್‌ ನಿಂತುಕೊಳ್ಳುತ್ತದೆ ಎಂಬುದರಲ್ಲೇ ಅವರ ದಲಿತರ ಕಾಳಜಿ ಅರ್ಥವಾಗುತ್ತದೆ. ಸಂವಿಧಾನ ಉಳಿಯಬೇಕು, ಕಾಂಗ್ರೆಸ್‌ನ ಪೊಳ್ಳು ಭರವಸೆಗಳು ಹೋಗಬೇಕು ಎಂದು ಅಶೋಕ್ ತಿಳಿಸಿದರು.

ಕಾಂಗ್ರೆಸ್‌ ಹಲವು ವರ್ಷಗಳಿಂದ ದಲಿತರನ್ನು ತುಳಿದುಕೊಂಡೇ ಬಂದಿದೆ:ಅಶೋಕ್ Read More

ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ ಭೀಮನಗರದ ಮುಖಂಡರ ಸಿದ್ಧತೆ

ಕೊಳ್ಳೇಗಾಲ: ಕೊಳ್ಳೇಗಾಲ ಭೀಮನಗರದ ಡಾ.ಅಂಬೇಡ್ಕರ್ ಜಯಂತೋತ್ಸವ ಆಚರಣೆ ಸಮಿತಿ ವತಿಯಿಂದ ಡಾ.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಸಂಭ್ರಮ ಸಡಗರ ದಿಂದ ಆಚರಿಸಲು ನಿರ್ಧರಿಸಲಾಗಿದೆ.

ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದ ಸಭಾಂಗಣದಲ್ಲಿ ಈ ಕುರಿತು ಭೀಮನಗರದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೊಡ್ಡ ಯಜಮಾನ ಚಿಕ್ಕಮಾಳಿಗೆ ಅವರು ಮಾತನಾಡಿ, ಏ.11 ರಿಂದ 14 ರವರೆಗೆ ಕೊಳ್ಳಗಾಲ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು ಕಾರ್ಯಕ್ರಮದ ಸಿದ್ಧತೆಗಳು ಬರದಿಂದ ಸಾಗಿವೆ ಎಂದು ತಿಳಿಸಿದರು.

ಭೀಮನಗರದ ಮನೆ, ಮನೆಗಳಲ್ಲೂ ಹಬ್ಬದ ವಾತಾವರಣ ಮನೆ ಮಾಡಲಿದೆ. ಕಳೆದೊಂದು ವಾರದಿಂದ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಸಮುದಾಯದ ಸಾಕಷ್ಟು ಯುವಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಆಹ್ವಾನ ಪತ್ರಿಕೆಗಳನ್ನು ನೀಡಿ ಜನರನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿ ಗ್ರಾಮಾಂತರ ಪ್ರದೇಶದ ಜನರೊಡಗೂಡಿ ಅಂಬೇಡ್ಕರ್ ಜಯಂತೋತ್ಸವವನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಿದ್ದೇವೆ ಎಂದು ತಿಳಿಸಿದರು.

ಜಯಂತೋತ್ಸವದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಅಂಬೇಡ್ಕರ್ ಅವರು ನ್ಯಾಯವಾದಿಗಳು ಹಾಗೂ ಕಾನೂನು ಸಚಿವರಾಗಿದ್ದರಿಂದ ಏ.11 ರಂದು ಸಂಜೆ 5 ಗಂಟೆಗೆ ಭೀಮ ನಗರದ ಸಾವಿತ್ರಿಬಾಯಿ ಪುಲೆ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ, ಕಾರ್ಯಕ್ರಮಕ್ಕೆ ನ್ಯಾಯಾಧೀಶರು ಚಾಲನೆ ನೀಡಲಿದ್ದಾರೆ ಎಂದು ಚಿಕ್ಕಮಾಳಿಗೆ ತಿಳಿಸಿದರು.

ಏ.12 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ರಮಾಬಾಯಿ ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಈ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭೀಮನಗರದ ವೈದ್ಯರು ಹಾಗೂ ಸಿಬ್ಬಂದಿ ಬಳಗ ನಡೆಸಿಕೊಡಲಿದೆ.

ಏ.13 ರಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ 6 ಗಂಟೆಗೆ ಬೆಂಗಳೂರು ರಸ್ತೆಯಲ್ಲಿರುವ ಭೀಮ ನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಖ್ಯಾತ ರಂಗಕರ್ಮಿ ಗಿರೀಶ್ ಮಾಚಳ್ಳಿ ಅವರ ರಚನೆ ಮತ್ತು ನಿರ್ದೇಶನದ ಮನುಸ್ಮೃತಿ ಮತ್ತು ಭಾರತದ ಸಂವಿಧಾನ ಎಂಬ ನಾಟಕ ಪ್ರದರ್ಶನವಿದೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

14 ರಂದು ಬೆಳಿಗ್ಗೆ 6 ರಿಂದ 8 ರವರೆಗೆ ಭೀಮ ನಗರ ಹಾಗೂ ಜಿ.ಪಿ. ಮಲ್ಲಪ್ಪಪುರಂ ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.

9 ಗಂಟೆಗೆ ಭೀಮ ನಗರದ ಬಸವನಗುಡಿಯಿಂದ ಅಂಬೇಡ್ಕರ್ ಪ್ರತಿಮೆ ಮೆರವಣಿಗೆ ಹೊರಡಲಿದೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಿ ನ್ಯಾಷನಲ್ ಶಾಲ ಮೈದಾನ ತಲುಪಿ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ

ಸಂಜೆ ವೇದಿಕೆ ಕಾರ್ಯಕ್ರಮಗಳು ಮುಂದುವರೆಯಲಿದ್ದು 5 ಕ್ಕೆ ರಮೇಶ್ ತಾಯೂರು ಮತ್ತು ತಂಡದಿಂದ ಭೀಮಗೀತೆಗಳ ಗಾಯನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಭೀಮನಗರದ ಕಲಾವಿದರು ಮತ್ತು ಗಣ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್, ಶಾಸಕರಾದ ಎ ಆರ್ ಕೃಷ್ಣಮೂರ್ತಿ ಎಂ ಆರ್ ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕೊಳ್ಳೇಗಾಲ ಪಟ್ಟಣದ ಭೀಮನಗರ ಜಿಲ್ಲೆ ಹಾಗೂ ತಾಲ್ಲೂಕಿಗೆ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಮುದಾಯದ ಮುಖಂಡರು ಗಳಾದ ದಿವಂಗತರಾದ ಡಿ ಸಿದ್ದರಾಜು, ಪ್ರೆಸ್ ರಾಜಣ್ಣ ಹಾಗೂ ಹೋರಾಟಗಾರರಾದ ದಿವಂಗತ ಹೆಚ್. ಕೃಷ್ಣಸ್ವಾಮಿ, ಶಿವಲಂಕಾರಯ್ಯ, ದೊರೈರಾಜ್ ಅವರು ಸಂಘಟನೆ ಹೇಗೆ ಕಟ್ಟಬೇಕೆಂಬುದನ್ನು ತೋರಿಸಿಕೊಟ್ಟು ಇಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ದೊಡ್ಡ ಯಜಮಾನ ಚಿಕ್ಕಮಾಳಿಗೆ ಸ್ಮರಿಸಿದರು.

ಹಿರಿಯ ಮುಖಂಡರಾದ ಲಿಂಗರಾಜು ಅವರು ಮಾತನಾಡಿ ಕಾರ್ಯಕ್ರಮದ ವೇಳೆ ಯಾವುದೇ ಗೊಂದಲಕ್ಕೆ ಅಸ್ಪದ ಕೊಡದೆ ಬಹಳ ಶಾಂತಿಯುತವಾಗಿ ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು.

ನಟರಾಜು ಮಾಳಿಗೆ ಅವರು ಮಾತನಾಡಿ 1991ರಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿದೆವು ಮತ್ತೆ ಈ ಅವಕಾಶ ಈಗ ಸಿಕ್ಕಿದೆ ಗ್ರಾಮೀಣ ಪ್ರದೇಶದವರು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

ಇದೇ‌ ವೇಳೆ ಸಮಾರಂಭದ ಆಹ್ವಾನ ಪತ್ರಿಕೆ,ಬ್ರೌಶರ್ ಗಳನ್ನು ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಭೀಮನಗರದ ಯಜಮಾನರುಗಳಾದ ವರದರಾಜು, ನಟರಾಜು, ಸಿದ್ದಾರ್ಥ, ಪಾಪಣ್ಣ, ಸನತ್ ಕುಮಾರ್, ಸಿದ್ದಪ್ಪ, ಜಯಂತೋತ್ಸವದ ಪ್ರಚಾರ ಸಮಿತಿಯ ದಿಲೀಪ್ ಸಿದ್ದಪ್ಪಾಜಿ, ಶಂಕರ್ ಚೇತನ್, ಕಿರಣ್, ಸಿದ್ದಪ್ಪಾಜಿ, ಮಾಧ್ಯಮ ಸಮಿತಿಯ ಮುಖ್ಯಸ್ಥ ನಿಂಪು ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ ಭೀಮನಗರದ ಮುಖಂಡರ ಸಿದ್ಧತೆ Read More

ಅಂಬೇಡ್ಕರರ ಆದರ್ಶ,ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ-ಕಲ್ಯಾಣ ಶ್ರೀ ಬಂತೇಜಿ

ಮೈಸೂರು: ವಿವಿಧ ಭಾಷೆ, ವಿವಿಧ ಜನಾಂಗ ಹಾಗೂ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಭಾರತದ ನೆಲಕ್ಕೆ ಮತ್ತು ಜನರಿಗೆ ಸಮಾನತೆಯನ್ನು ಸಾರುವ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶ ಹಾಗೂ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ ಎಂದು
ಕಲ್ಯಾಣ ಶ್ರೀ ಬಂತೇಜಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 68 ನೇ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಬಾ ಸಾಹೇಬರರ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಬೆಲೆಕೊಡಬೇಕು. ನಮ್ಮ ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇದೆ,ನಗರದ ಜೀವನಕ್ಕೆ ಒಗ್ಗಿಕೊಂಡು ಸಾಮಾಜಿಕ ವ್ಯವಸ್ಥೆ ಸುಧಾರಣೆ ಕಂಡಿದ್ದರೂ ಸಹ ಮಾನಸಿಕ ವ್ಯವಸ್ಥೆ ಸುಧಾರಣೆ ಗೊಂಡಿಲ್ಲ. ಎಲ್ಲಿಯವರೆಗೂ ಜಾತಿ ಹಾಗೂ ತಾರತಮ್ಯ ಹೋಗುವುದಿಲ್ಲವೋ, ನಮ್ಮಲ್ಲಿ ಮಾನವೀಯ ಗುಣಗಳು ಬರುವುದಿಲ್ಲವೋ ಅಲ್ಲಿಯವರೆಗೂ ನಮಗೆ ನಿಜವಾದ ಸ್ವತಂತ್ರ ಸಿಗುವುದಿಲ್ಲ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಸಾಮಾಜಿಕವಾಗಿ ಸ್ವತಂತ್ರವನ್ನು ಇನ್ನೂ ಪಡೆದಿಲ್ಲ. ಅದು ಸಿಗಬೇಕೆಂದರೆ ಭಾರತೀಯರೆಲ್ಲರೂ ಸಹೋದರತೆಯಿಂದ ಬದುಕಬೇಕು. ಯಾವುದೇ ವ್ಯಕ್ತಿಯನ್ನು ಜಾತಿ -ಧರ್ಮ ಹಾಗೂ ವರ್ಣದಿಂದ ಅಳೆಯದೆ. ಪ್ರೀತಿಯಿಂದ ಭ್ರಾತೃತ್ವ ಭಾವನೆಯಿಂದ ಕಾಣಬೇಕೆಂಬುದೇ ಅಂಬೇಡ್ಕರ್ ಅವರ ಆಶಯ. ಇಂದು ಪ್ರಪಂಚದಾದ್ಯಂತ ಸುಭಧ್ರವಾಗಿ ನಿಂತಿರುವ ಅವರ ಪರಿಪೂರ್ಣವಾದ ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಬುದ್ಧ ಎಂಬ ಸುಜ್ಞಾನ ಸಾಗರಕ್ಕೆ ಮಹಾ ನದಿಯಾಗಿರುವುದು ಬಾಬಾ ಸಾಹೇಬರು, ಅವರೊಂದಿಗೆ ನಾವು ಉಪ ನದಿಗಳಾಗಿ ಸೇರಿ,ಪ್ರಬುದ್ಧ ಸಂವಿಧಾನವನ್ನು ಅನುಸರಿಸೋಣ ಎಂದು ಡಾ. ಕಲ್ಯಾಣ ಶ್ರೀ ಬಂತೇಜಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಕಲ್ಯಾಣ ಶ್ರೀ ಬಂತೇಜಿ ಹಾಗೂ ಭೋದಿ ರತ್ನ ಬಂತೇಜಿ ಅವರು ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆಯನ್ನು ಬೋಧಿಸಿದರು.

ಟೌನ್ ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಅಂಬೇಡ್ಕರರ ಆದರ್ಶ,ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ-ಕಲ್ಯಾಣ ಶ್ರೀ ಬಂತೇಜಿ Read More