ಮೈಸೂರು ರೇಸ್ಕ್ಲಬ್ ಸುತ್ತ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ ಚಲನೆ ನಿಷೇಧ
ಮೈಸೂರು : ಮೈಸೂರಿನ ರೇಸ್ಕ್ಲಬ್ ಪ್ರದೇಶದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನ ನಿಷೇಧಿಸಲಾಗಿದೆ.
ಕುದುರೆಗಳನ್ನು ಮನೋರಂಜನೆ, ಮೆರವಣಿಗೆಗೆ ಬಳಸದಂತೆ ನಿರ್ಬಂಧ ಹೇರಲಾಗಿದೆ.
ಮೈಸೂರು ರೇಸ್ಕ್ಲಬ್ನಲ್ಲಿರುವ ಕುದುರೆಗಳ ಪೈಕಿ ಒಂದು ಕುದುರೆಗೆ ಗ್ಲಾಂಡರ್ಸ್ ರೋಗ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆ ಸರ್ಕಾರದ ಅಧಿನ ಕಾರ್ಯದರ್ಶಿಗಳು ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮ ೨೦೦೯ರ ಕಲಂ-೬ರಡಿ ಅಧಿಸೂಚನೆ ಹೊರಡಿಸಿದ್ದಾರೆ.
ಇದರ ಅಧಿಸೂಚನೆಯಂತೆ ಮೈಸೂರು ರೇಸ್ಕ್ಲಬ್ ಗ್ಲಾಂಡರ್ಸ್ ಕೇಂದ್ರೀಕೃತಸ್ಥಳ ಗುರುತಿಸಿರುವುದರಿಂದ ಕೇಂದ್ರದಿಂದ ೨ ಕಿ.ಮೀ ವ್ಯಾಪ್ತಿಯನ್ನು ಚಲನವಲನ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಮೈಸೂರು ರೇಸ್ ಕ್ಲಬ್ನ ಸುತ್ತಲಿನ ೨ ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ,ಕತ್ತೆ, ಹೇಸರಗತ್ತೆ, ಪ್ರಾಣಿಗಳ ಚಲನವಲನ,ಕುದುರೆ,ಕತ್ತೆ,ಹೇಸರಗತ್ತೆಗಳನ್ನು ಮನೋರಂಜನೆ, ಮೆರವಣಿಗೆ, ಶುಭಕಾರ್ಯಗಳಲ್ಲಿ ಉಪಯೋಗಿಸದಂತೆ ಸಂಪೂರ್ಣವಾಗಿ ನಿರ್ಬಂಧಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.
ಮೈಸೂರು ರೇಸ್ ಕೋರ್ಸ್ನಲ್ಲಿ ಒಂದು ಕುದುರೆ ಸಾವನ್ನಪ್ಪಿರುವ ಕುರಿತಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಎನ್.ನಾಗರಾಜು ವರದಿ ನೀಡಿದ್ದರು. ಹಾಗಾಗಿ,ಸರ್ಕಾರದ ಅಧಿಸೂಚನೆಯಂತೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ.