ಧರ್ಮಸ್ಥಳದ ಮುಸುಕುಧಾರಿ ಹೆಸರು ಬಹಿರಂಗಪಡಿಸಿ- ಅಶೋಕ ಆಗ್ರಹ

ಬೆಂಗಳೂರು: ಧರ್ಮಸ್ಥಳದಲ್ಲಿ ನೆಲ ಅಗೆಯಲು ಹೇಳುತ್ತಿರುವ ಮುಸುಕುಧಾರಿ ಹೆಸರನ್ನು ಬಹಿರಂಗ ಪಡಿಸಬೇಕೆಂದು ಸರ್ಕಾರವನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಆಗ್ರಹಿಸಿದ್ದಾರೆ.

ಎಸ್‌ಐಟಿಯನ್ನು ರದ್ದು ಮಾಡದೆ ಮುಂದುವರಿಸಬೇಕು, ಜೊತೆಗೆ ಇದರ ಹಿಂದೆ ಷಡ್ಯಂತ್ರ ಮಾಡುತ್ತಿರುವವರನ್ನು ಪತ್ತೆ ಮಾಡಲು ಇದನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಕೊನೆಯಲ್ಲಿ ಮಾಸ್ಕ್‌ ಮ್ಯಾನ್‌ ಹುಚ್ಚ ಎಂದು ಹೇಳುವ ಬದಲು, ಮೊದಲೇ ತನಿಖೆ ಮಾಡಬೇಕು, ಈವರೆಗೆ ಆತನ ಮಂಪರು ಪರೀಕ್ಷೆ ಮಾಡಿಲ್ಲ, ಈವರೆಗೆ ಒಂದು ಕೋಟಿ ರೂ.ಗೂ ಅಧಿಕ ಖರ್ಚಾಗಿದೆ, ಹಿಟಾಚಿ, ಜೆಸಿಬಿಗಳನ್ನು ಬಳಸುತ್ತಿದ್ದಾರೆ,ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ, ಇದು ಪ್ರಾಯೋಜಿತ ಕೆಲಸವಾಗಿದೆ, ಈ ಮುಸುಕುಧಾರಿ ಯಾರೆಂದು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.

ಅಪರಾಧಿ ಚಟುವಟಿಕೆಗಳಿಗೆ ಅಪರಾಧಿಗಳಿಗೆ ಖಂಡಿತ ಶಿಕ್ಷೆಯಾಗುತ್ತದೆ. ಅನೇಕ ಪ್ರಕರಣಗಳಲ್ಲಿ ಮುಖ್ಯಮಂತ್ರಿಗೇ ಶಿಕ್ಷೆಯಾಗಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಯಾರನ್ನೂ ಬಿಡುವುದಿಲ್ಲ. ಎಸ್‌ಐಟಿ ರದ್ದು ಮಾಡದೆ ಮುಂದುವರಿಸಬೇಕು, ತನಿಖೆ ಮಾಡಬೇಕು, ಹಾಗೆಯೇ ಯಾರ ಒತ್ತಡದ ಮೇಲೆ ಈ ಎಸ್‌ಐಟಿ ರಚಿಸಲಾಗಿದೆ ಎಂದು ತಿಳಿಸಬೇಕು. ಇದಕ್ಕೆ ವಿದೇಶದಿಂದ ಫಂಡಿಂಗ್‌ ಬಂದಿರುವ ಅನುಮಾನವಿದ್ದು, ಷಡ್ಯಂತ್ರ ಮಾಡಿರುವ ಗುಂಪನ್ನು ಪತ್ತೆ ಮಾಡಲು ಎನ್‌ಐಎಗೆ ತನಿಖೆಯನ್ನು ನೀಡಿ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ನೂರಾರು ಅಸ್ತಿಪಂಜರ ಇದೆ ಎಂದು ದೂರು ನೀಡಿದಾಗ ಕಾಂಗ್ರೆಸ್‌ ಸರ್ಕಾರ ಕೂಡಲೇ ಎಸ್‌ಐಟಿ ರಚಿಸಿದೆ. ಎಸ್‌ಐಟಿ ಮಾಡಬೇಕೆಂದು ಕೋರ್ಟ್‌ ಹೇಳಿಲ್ಲ ಅಥವಾ ಅಧಿಕಾರಿ ಪ್ರಣವ್‌ ಮೊಹಂತಿ ಹೇಳಿಲ್ಲ. ಇದರ ಹಿಂದೆ ಇರುವ ಗ್ಯಾಂಗ್‌ ಯಾವುದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುತ್ತ ಇರುವ ಗ್ಯಾಂಗ್‌ ಯಾವುದು, ಇದಕ್ಕೆ ಪ್ರೇರಣೆ ನೀಡಿದವರು ಯಾರು, ಈ ರೀತಿ ನೆಲ ಅಗೆಯುವುದಕ್ಕೆ ಸಾರ್ವಜನಿಕ ಹಣ ಬಳಸಲಾಗಿದೆ. ಆದರೆ ಬೆಟ್ಟ ಅಗೆದು ಇಲಿ ಹಿಡಿಯುವಂತಹ ಕೆಲಸವಾಗಿದೆ ಹುಲಿ ಬಂತು ಎಂದು ಹೆದರಿಸಿ ಕೊನೆಗೆ ಇಲಿಯೂ ಸಿಕ್ಕಿಲ್ಲ ಎಂದು ಟೀಕಿಸಿದರು.

ಮಾಸ್ಕ್‌ ಮ್ಯಾನ್‌ ಬಗ್ಗೆ ಪ್ರತಿ ಕ್ಷಣದ ಮಾಹಿತಿ ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆತನ ಹೆಸರು ಚಿನ್ನಯ್ಯ, ಕ್ರೈಸ್ತ ಧರ್ಮಕ್ಕೆ ಮತಾಂತರವಾದವನು ಎಂದು ಜನರು ಹೇಳುತ್ತಿದ್ದಾರೆ. ಪೊಲೀಸರು ಪ್ರತಿ ದಿನ ಆತನಿಗೆ ಮೇಕಪ್‌ ಮಾಡಿ, ಬಿರಿಯಾನಿ ತಿನ್ನಿಸಿ, ಸಂಪೂರ್ಣ ಭದ್ರತೆ ನೀಡಿ ಕರೆದೊಯ್ಯುತ್ತಿದ್ದಾರೆ. ಆತ ಇವೆಲ್ಲವನ್ನೂ ಎಂಜಾಯ್‌ ಮಾಡುತ್ತಿದ್ದಾರೆ. ಆತ ಹೇಳಿದ ಕಡೆಯಲ್ಲ ಪೊಲೀಸರು ನೆಲ ಅಗೆದರು. ನಂತರ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಡ್ರೋಣ್‌ ಹಾಗೂ ಇತರೆ ಯಂತ್ರಗಳನ್ನು ಬಳಸಿದರು. 20 ಅಡಿ ಆಳದಲ್ಲಿ ಯಾರಾದರೂ ಹೆಣ ಹೂಳುತ್ತಾರಾ ಸರ್ಕಾರಕ್ಕೆ ಸಾಮಾನ್ಯ ಪ್ರಜ್ಞೆ ಕೂಡಾ ಇಲ್ಲವೇ ಎಂದು ಪ್ರಶ್ನಿಸಿದರು.

ಒಬ್ಬ ವ್ಯಕ್ತಿ ಆರಡಿ ಅಗೆಯಬೇಕೆಂದರೂ ಅದು ಬಹಳ ಕಷ್ಟ. ಆದರೆ ಈ ವ್ಯಕ್ತಿ ಒಬ್ಬನೇ ಇಷ್ಟು ಕೆಲಸವನ್ನು ಮಾಡಿದ್ದಾನೆ ಎಂದರೆ ಇದನ್ನು ಚಂದಾಮಾಮ ಕಥೆ ಎಂದೇ ಹೇಳಬೇಕು. ಈತ ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು ಒಬ್ಬನೇ ಕಾಡಿಗೆ ಹೋಗಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ. ಈಗ ಅಗೆದಿರುವುದನ್ನೇ ಕೃಷಿ ಹೊಂಡ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅಶೋಕ್ ಕುಟುಕಿದರು.

ಪ್ರತಿ ದಿನ ಅಷ್ಟೆಲ್ಲ ಅಗೆದರೂ ಏನೂ ಸಿಗುತ್ತಿಲ್ಲ. ದೂರು ನೀಡಿದವನು ಯಾರು ಎಂದು ಪೊಲೀಸರು ಮೊದಲು ತನಿಖೆ ಮಾಡಬೇಕಿತ್ತು. ಆ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು ಎಂಬುದನ್ನು ನೋಡಬೇಕಿತ್ತು. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಿಸುವುದಾದರೆ ನಾವೆಲ್ಲರೂ ಬೆಂಬಲ ನೀಡುತ್ತೇವೆ. ಆದರೆ ಆ ನೆಪದಲ್ಲಿ ಮಂಜುನಾಥ ಸ್ವಾಮಿಗೆ ಅಪಮಾನ ಮಾಡಲಾಗುತ್ತಿದೆ. ಈ ಹಿಂದೆ ತಿರುಪತಿಯನ್ನು ಮುಳುಗಿಸಲು ಮುಂದಾಗಿದ್ದರು. ನಂತರ ಶಬರಿಮಲೆ, ಶನಿಸಿಂಗಾಪುರ ಕ್ಷೇತ್ರಗಳನ್ನು ಹಾಳು ಮಾಡಲು ಯತ್ನಿಸಿದರು ಮಾರ್ಮಿಕವಾಗಿ ನುಡಿದರು.

ಧರ್ಮಸ್ಥಳದ ಮುಸುಕುಧಾರಿ ಹೆಸರು ಬಹಿರಂಗಪಡಿಸಿ- ಅಶೋಕ ಆಗ್ರಹ Read More

ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ: ಪ್ರತಿಭಟನೆ

ಮೈಸೂರು: ನಾಡಿನ ಧಾರ್ಮಿಕ ಶಕ್ತಿ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳು ಹಾಗೂ ದುಷ್ಟ ಶಕ್ತಿಗಳ ವಿರುದ್ಧ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸಿದರು.

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಭಕ್ತರನ್ನು ಕೆರಳಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ, ಶವ ಸಂಸ್ಕಾರ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಪ್ರತಿಭಟನೆ ವೇಳೆ ತೇಜೇಶ್ ಲೋಕೇಶ್ ಗೌಡ ಹೇಳಿದರು.

ಪ್ರಪಂಚದಲ್ಲಿ ಎಷ್ಟೇ ದೊಡ್ಡ ದೊಡ್ಡ ಮಸೀದಿ ಚರ್ಚ್ ಗಳು ಇದ್ದರೂ, ಹಸಿದವರಿಗೆ ಅನ್ನ ನೀಡುವುದು ಹಿಂದೂ ಮಠಗಳು ಮತ್ತು ದೇವಸ್ಥಾನಗಳು ಮಾತ್ರ.ಪ್ರತಿದಿನ ಲಕ್ಷಾಂತರ ಭಕ್ತರಿಗೆ ಅನ್ನ ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಪ್ಪು ಚುಕ್ಕೆ ತರಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷಾಂತರ ಭಕ್ತರು ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಕೆಲವರು ಸ್ನಾನ ಮಾಡುವಾಗ ನೇತ್ರಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತರಾಗಿ ರಬಹುದು.ಕೆಲವರು ಜೀವನದಲ್ಲಿ ಜಿಗುಪ್ಸೆಗೊಂಡು, ಇನ್ನೂ ಕೆಲವರು ಇಲ್ಲಿ ಸತ್ತರೆ ಮುಕ್ತಿ ಸಿಗತ್ತದೆಂದು ಆತ್ಮಹತ್ಯೆ, ಅನಾಹುತಗಳನ್ನು ಮಾಡಿಕೊಂಡಿರಬಹುದು. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಅನ್ಯಧರ್ಮೀಯರು, ಅಹಿಷ್ಣುಗಳು, ದುಷ್ಟ ಶಕ್ತಿಗಳು ಶ್ರೀ ಕ್ಷೇತ್ರಕ್ಕೆ, ಧರ್ಮಾಧಿಕಾರಿಗಳಿಗೆ ಕೆಟ್ಟ ಹೆಸರು ತಂದು ನಮ್ಮ ಹಿಂದೂ ಧರ್ಮವನ್ನು, ಧಾರ್ಮಿಕ ಕ್ಷೇತ್ರವನ್ನು ಹಾಳು ಮಾಡಲು ವ್ಯವಸ್ಥಿತ ಸಂಚುಗಳನ್ನು ರೂಪಿಸುತ್ತಿದ್ದಾರೆ‌ ಎಂದು ಪ್ರತಿಭಟನಾ ನಿರತರು ಗಂಭೀರ ಆರೋಪ ಮಾಡಿದರು.

ಧರ್ಮಸ್ಥಳದಲ್ಲಿದ್ದ ಈ ಅನಾಮಿಕ ವ್ಯಕ್ತಿಗೆ ಇಷ್ಟು ವರ್ಷಗಳಾದ ಮೇಲೆ ಪಾಪ ಪ್ರಜ್ಞೆ ಮೂಡಿ, ಈಗ ಜಾಗ ತೋರಿಸಲು ಬಂದಿರುವುದು ಅನುಮಾನಾಸ್ಪದವಾಗಿದೆ ಈ ವ್ಯಕ್ತಿ ತೋರಿಸಿರುವ 16-17 ಜಾಗಗಳಲ್ಲಿ, ಎಲ್ಲೂ ಸರಿಯಾಗಿ ಅಸ್ತಿಗಳು ಸಿಗುತ್ತಿಲ್ಲ. ದಿನಕ್ಕೊಂದು ಜಾಗ ತೋರಿಸಿ ಎಸ್ ಐ ಟಿ ಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ. ಜತೆಗೆ ಈಗ ಇಬ್ಬರು ಬಂದು ಅವನು ಆಗ ಹೂತು ಹಾಕಿದ್ದನ್ನು ನೋಡಿದ್ದೇವೆ ಎನ್ನುತ್ತಿರುವುದು ಹಾಸ್ಯಸ್ಪದ. ಏಕೆಂದರೆ ಮುಖ ತೋರಿಸದ, ಮಾಸ್ಕ್ ಹಾಕಿರುವ ಈ ವ್ಯಕ್ತಿಯನ್ನು ಇವರು ಹೇಗೆ ಗುರುತು ಹಿಡಿದರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ರಾಜ್ಯ ಸರ್ಕಾರ ಯಾರೋ ಅನಾಮಿಕ ವ್ಯಕ್ತಿ ಹೇಳಿದ ಎಂದು ಹೇಳಿ ದಿನಕ್ಕೆ 3-4 ಲಕ್ಷ ಸಾರ್ವಜನಿಕರ ತೆರಿಗೆ ಹಣವನ್ನು ಇದಕ್ಕೆ ಪೋಲು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜತೆಗೆ ಸರ್ಕಾರ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಒಳಪಡಿಸಿಕೊಳ್ಳಲು ಅವರೊಂದಿಗೆ ಸಂಚು ರೂಪಿಸುತ್ತಿರುವ ಹಾಗಿದೆ. ಈ ಕೂಡಲೇ ಸರ್ಕಾರ ಅನಾಮಿಕ ವ್ಯಕ್ತಿಯನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡು, ಅವನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ನಿಜ ತಿಳಿಯಬೇಕು ಹಾಗೂ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿ, ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಸಿದರು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಜ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದರು.

ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಮಧುವನ ಚಂದ್ರು, ವರಕೂಡು ಕೃಷ್ಣೇಗೌಡ, ಶಿವಲಿಂಗಯ್ಯ, ನೇಹಾ, ಮಹದೇವಸ್ವಾಮಿ, ಪದ್ಮ, ಹೊನ್ನೇಗೌಡ, ಡಾ. ಶಾಂತರಾಜೇ ಅರಸ್, ನಾರಾಯಣ ಗೌಡ, ಹನುಮಂತಯ್ಯ, ರಾಧಾಕೃಷ್ಣ, ನಾಗರಾಜು, ಸುಬ್ಬೇಗೌಡ, ರಘು ಅರಸ್, ನಂದಕುಮಾರ್ , ಅಶೋಕ್, ಬಸವರಾಜು, ಕುಮಾರ್, ಗೀತಾ ಗೌಡ, ಎಳನೀರು ರಾಮಣ್ಣ, ದರ್ಶನ್ ಗೌಡ, ಪ್ರದೀಪ್, ಆನಂದ್ ಗೌಡ, ಭಾನುಪ್ರಕಾಶ್, ಶಿವನಾಯಕ್, ರವಿ ನಾಯಕ್, ರವೀಶ್, ಸ್ವಾಮಿ ಗೌಡ, ಪ್ರಭಾಕರ್, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ: ಪ್ರತಿಭಟನೆ Read More

ಧರ್ಮಸ್ಥಳ ಗ್ರಾಮದಲ್ಲಿ ಉತ್ಖನನ:ಎರಡು ಅಸ್ಥಿಪಂಜರ ಪತ್ತೆ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಕೊನೆಗೂ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದೆ.

ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಇದೀಗ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದೆ,
ಅದರಲ್ಲಿ ಎರಡು ಅಸ್ಥಿಪಂಜರ ಪತ್ತೆಯಾಗಿದೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ತಲೆ ಬುರುಡೆ ಸೇರಿದಂತೆ ಕೆಲವು ಭಾಗಗಳು ಮಾತ್ರ ಸಿಕ್ಕಿದೆ,ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈಗ ಸಿಕ್ಕಿರುವ ಕಳೇಬರವನ್ನು ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ ಕಳುಹಿಸಲಿದ್ದಾರೆ. 6 ನೆ ಪಾಯಿಂಟ್ ಬಳಿಕ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಯಲಿವೆ.

ಎಸ್‌ಐಟಿ ಅಧಿಕಾರಿಗಳು ಕರ್ನಾಟಕದ ಪ್ರತಿ ಪೊಲೀಸ್ ಠಾಣೆಯಿಂದ ಮಾಹಿತಿ ಕೇಳಿದ್ದು, 1995ರಿಂದ 2005 ಹಾಗೂ 2005ರಿಂದ 2015ವರೆಗೆ ಪತ್ತೆಯಾಗದ, ನಾಪತ್ತೆ, ಕೊಲೆ-ಅತ್ಯಾಚಾರ ಪ್ರಕರಣದ ಮಾಹಿತಿ ಒದಗಿಸಲು ಕೋರಿದೆ.

10 ವರ್ಷಗಳಂತೆ ಎರಡು ಪಟ್ಟಿಯಲ್ಲಿ ಒಟ್ಟು 20 ವರ್ಷದ ದಾಖಲೆ ನೀಡಲು ಎಸ್‌ಐಟಿ ಅಧಿಕಾರಿಗಳು ಪತ್ರದ ಮೂಲಕ ತಿಳಿಸಿದ್ದಾರೆ.

ದೂರುದಾರ ಜು.28 13 ಜಾಗಗಳನ್ನು ಗುರುತಿಸಿದ್ದ. ಅದಾದ ಬಳಿಕ ಎರಡು ದಿನ ಈ ಮೊದಲು 5 ಪಾಯಿಂಟ್‌ಗಳಲ್ಲಿ ನಡೆಸಲಾಗಿದ್ದ ಉತ್ಖನನದ ವೇಳೆ ಯಾವುದೇ ಕಳೇಬರ ಸಿಕ್ಕಿರಲಿಲ್ಲ. ಆದರೆ ಎರಡನೇ ದಿನದಲ್ಲಿ ಒಂದು ಕೆಂಪು ಬಣ್ಣದ ಹರಿದ ರವಿಕೆ ಹಾಗೂ ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿತ್ತು.

ಹಾಗಾಗಿ ದೂರುದಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಲಾಗಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ.

ಎಸ್‌ಐಟಿ ವಿಚಾರಣೆ ವೇಳೆ ದೂರುದಾರನು ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿದ್ದು, ಎಸ್‌ಐಟಿ ಅಧಿಕಾರಿಗಳು 1995ರಿಂದ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಲಿಸ್ಟ್ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಮನವಿ ಕಳುಹಿಸಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಉತ್ಖನನ:ಎರಡು ಅಸ್ಥಿಪಂಜರ ಪತ್ತೆ Read More

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ; ಅಪಪ್ರಚಾರ ಬೇಡ: ಅಶೋಕ್

ಬೆಂಗಳೂರು: ಧರ್ಮಸ್ಥಳದ ಬಳಿ ಸಾವಿರಾರು ಶವಗಳು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ, ಆದರೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿ ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಈ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾದ ತನಿಖೆಯಾಗಲಿ ಎಂದು ಆಗ್ರಹಿಸುತ್ತೇನೆ,ಆದರೆ ಯಾರನ್ನೂ ಸಿಕ್ಕಿಹಾಕಿಸುವ ಉದ್ದೇಶದಿಂದ ತನಿಖೆ ನಡೆಯಬಾರದು ಎಂದು ತಿಳಿಸಿದರು.

ದಕ್ಷಿಣ ಭಾರತದಲ್ಲಿ ತಿರುಪತಿ ಹಾಗೂ ಧರ್ಮಸ್ಥಳ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ. ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಯುವಕ ವೀಡಿಯೋಗಳನ್ನ ಅಪ್‌ಲೋಡ್‌ ಮಾಡುತ್ತಿದ್ದಾರೆ,ಈ ನಡುವೆ ಕೇರಳ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಕೇರಳ ಸರ್ಕಾರ ಅಲ್ಲಿನ ದೇವಸ್ಥಾನಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ, ಶಬರಿಮಲೆ ಅಯ್ಯಪ್ಪ ದೇವಾಲಯದ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಎಂಬುದು ಜಗಜ್ಜಾಹೀರಾಗಿದೆ. ಯಾವುದೇ ಕೊಲೆಯಾಗಿದ್ದರೆ ಸ್ಥಳೀಯ ಪೊಲೀಸ್‌ ಠಾಣೆ ತನಿಖೆ ಮಾಡುತ್ತದೆ ಎಂದು ಹೇಳಿದರು.

ಸಾವಿರಾರು ಶವಗಳು ಸಿಕ್ಕಿದೆ ಎಂದರೆ, ಅವರ ಕುಟುಂಬದವರು ದೂರು ದಾಖಲಿಸುತ್ತಾರೆ. ಅಂತಹ ಪ್ರಕರಣ ಎಷ್ಟಿದೆ ಎಂದು ಸರ್ಕಾರ ತಿಳಿಸಬೇಕು. ದೇವಾಲಯ ಮಾತ್ರವಲ್ಲದೆ, ಚರ್ಚ್‌, ಮಸೀದಿ ಮೊದಲಾದ ಧಾರ್ಮಿಕ ಕೇಂದ್ರಗಳ ಬಳಿ ಅನೇಕರು ಸಾಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ತನಿಖೆ ಮಾಡುತ್ತಾರೆ. ಯಾರೋ ಒಬ್ಬರಿಗೆ 20 ವರ್ಷಗಳ ಬಳಿಕ ಜ್ಞಾನೋದಯವಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಒಂದು ಧರ್ಮಕ್ಕೆ ಅಪಮಾನ ಮಾಡಲು ವಿವಾದ ಮಾಡುವುದು ಸರಿಯಲ್ಲ. ಇದರಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ವಿಚಾರವೇ ಬರುವುದಿಲ್ಲ. ಆದರೂ ಪದೇ ಪದೆ ಧಾರ್ಮಿಕ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.

ಯಾವುದೇ ವ್ಯಕ್ತಿ ತಪ್ಪು ಮಾಡಿದರೆ, ಆ ವ್ಯಕ್ತಿಯ ಬಗ್ಗೆ ಆರೋಪ ಮಾಡಲಿ. ಆದರೆ ಇಡೀ ಧಾರ್ಮಿಕ ಸಂಸ್ಥೆಯನ್ನು ಗುರಿ ಮಾಡಿ ಮಾತಾಡುವುದು ಸರಿಯಲ್ಲ. ಎಸ್‌ಐಟಿ ತಂಡಕ್ಕೆ ಸರ್ಕಾರ ಬೇರಾವುದೇ ಜವಾಬ್ದಾರಿ ವಹಿಸಬಾರದು. ಈ ತಂಡದ ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂದು ಸಲಹೆ ನೀಡಿದರು.

ಇದು ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರವೇ ಹೊರತು, ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ. ಯಾರೂ ಧರ್ಮಸ್ಥಳದ ದೇವಾಲಯವನ್ನು ಗುರಿ ಮಾಡಬಾರದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಮಗಿಂತಲೂ ಹೆಚ್ಚಿನ ದೈವಭಕ್ತರು. ಅವರು ದೇವರ ಇಚ್ಛೆಯಂತೆಯೇ ನಡೆದುಕೊಳ್ಳಲಿ. ಧರ್ಮಸ್ಥಳದ ದೇವಾಲಯದ ಬಗ್ಗೆ ಮನಸ್ಸಿಗೆ ಬಂದಂತೆ ಮಾತಾಡುವುದು ತಪ್ಪು. ಇಂತಹ ಮಾತುಗಳು ಯಾವುದೇ ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಪ್ರತಿಪಕ್ಷ ನಾಯಕರು ಹೇಳಿದರು.

ಗ್ರೇಟರ್‌ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿದೆ. ಇದನ್ನೇ ಮುಂದಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಕಸದ ರಾಶಿ ಎಲ್ಲ ಕಡೆ ರಾರಾಜಿಸುತ್ತಿದೆ, ಆಸ್ಪತ್ರೆಗಳಲ್ಲಿ ಸಂಬಳ ಪಾವತಿಯಾಗಿಲ್ಲ. ಶಾಲೆಗಳ ಶಿಕ್ಷಕರನ್ನು ವಜಾ ಮಾಡಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಮಾಡಲಾಗದೆ ಐದು ಪಾಲಿಕೆ ಮಾಡುವ ವಿಷಯವನ್ನು ಮುನ್ನೆಲೆಗೆ ತರಲಾಗಿದೆ. ಎಲ್ಲದಕ್ಕೂ ಜನರ ಮೇಲೆ ತೆರಿಗೆ ಹೇರಲಾಗಿದೆ. ಇ ಖಾತಾದಿಂದಾಗಿ ಎಲ್ಲೂ ನೋಂದಣಿ ಮಾಡಲು ಆಗುತ್ತಿಲ್ಲ. ಕಾಂಗ್ರೆಸ್‌ ವಾಮಮಾರ್ಗದಲ್ಲಿ ಗೆಲ್ಲಲು ಈ ರೀತಿ ಪಾಲಿಕೆಗಳನ್ನು ರಚಿಸುತ್ತಿದೆ. ಬೆಂಗಳೂರನ್ನು ಹೋಳು ಮಾಡುವುದನ್ನು ವಿಧಾನಸಭೆ ಅಧಿವೇಶನದಲ್ಲೂ ವಿರೋಧಿಸಲಾಗುವುದು ಎಂದು ಅಶೋಕ್ ತಿಳಿಸಿದರು.

ಮುಡಾ ಹಗರಣದ ವಿರುದ್ಧದ ಬಿಜೆಪಿಯ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ನಿವೇಶನಗಳನ್ನು ವಾಪಸ್‌ ಮಾಡಿದ್ದಾರೆ, ತಪ್ಪಾಗಿದೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ,ನಾವು ಮುಡಾ ಹಗರಣದ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ; ಅಪಪ್ರಚಾರ ಬೇಡ: ಅಶೋಕ್ Read More