ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ರಾಜ್ಯಮಟ್ಟದ ವಸ್ತುಪ್ರದರ್ಶನಕ್ಕೆ ಚಾಲನೆ

ಧರ್ಮಸ್ಥಳ: ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಜತೆಗೆ ರಾಜ್ಯಮಟ್ಟದ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು,
ರಾಜ್ಯದ ಮೂಲೆ,ಮೂಲೆಗಳಿಂದ ಜನಸಾಗರವೇ ಹರಿದು ಬಂದಿದೆ.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶನಿವಾರದಿಂದಲೇ ಮೇಳೈಸಿವೆ.

ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆಯೊಂದಿಗೆ ಪುಸ್ತಕ ಮಳಿಗೆಗಳು, ಆರೋಗ್ಯ, ಶಿಕ್ಷಣ, ಕೃಷಿ, ವಾಣಿಜ್ಯ, ಜೀವವಿಮೆ, ಸರ್ಕಾರದ ವಿವಿಧ ಇಲಾಖಾ ಮಳಿಗೆಗಳು, ಅಂಚೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮೀಣ ಕರಕುಶಲ ಕೈಗಾರಿಕೆಗಳು,ವಿವಿಧ‌ ವಸ್ತುಗಳ ಮಳಿಗೆಗಳು, ಆಯುರ್ವೇದ ಔಷಧಿ ಮಳಿಗೆಗಳು, ಪೂಜಾ ಸಾಮಾಗ್ರಿಗಳು, ಸಿರಿಧಾನ್ಯಗಳು, ಅಡಿಕೆ ಹಾಳೆತಟ್ಟೆ ತಯಾರಿ, ಸೇರಿದಂತೆ ೩೫೦ಕ್ಕೂ ಹೆಚ್ಚು ಮಳಿಗೆಗಳು ಪ್ರೇಕ್ಷಕರ ಮನಸೆಳೆದಿವೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಶುಭ ಹಾರೈಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿಇಒ ಜನಾರ್ದನ ಕೆ.ಎನ್., ಎಸ್.ಡಿ.ಎಂ. ಕಾಲೇಜಿನ ಡಾ. ಶ್ರೀಧರ ಭಟ್, ಪಿ. ಜಿನರಾಜ ಆರಿಗ‌ ಮತ್ತಿತರರು ಉಪಸ್ಥಿತರಿದ್ದರು.

ನ. ೨೦ರ ವರೆಗೆ ಪ್ರತಿ ದಿನ ಬೆಳಿಗ್ಗೆ ಒಂಭತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆ ವರೆಗೆ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ರಾಜ್ಯಮಟ್ಟದ ವಸ್ತುಪ್ರದರ್ಶನಕ್ಕೆ ಚಾಲನೆ Read More

ಬುರುಡೆ ಗ್ಯಾಂಗ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮೈಸೂರು: ಧರ್ಮಸ್ಥಳದ ವಿರುಓದ್ಧ ಅಪಪ್ರಚಾರ ಮತ್ತು ಪಿತೂರಿ ನಡೆಸಿದ ಬುರುಡೆ ಗ್ಯಾಂಗ್ ಸದಸ್ಯರನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ವಿಕಾಸ್ ಶಾಸ್ತ್ರಿ ಮತ್ತಿತರರು ಒತ್ತಾಯಿಸಿದ್ದಾರೆ.

ಶನಿವಾರ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಾಮಾಜಿಕ ಕಾರ್ಯಕರ್ತ ವಿಕಾಸ್ ಶಾಸ್ತ್ರಿ, ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಭುಸ್ವಾಮಿ, ಹೊನ್ನಾನಾಯ್ಕ, ಸೋಮಶೇಖರ್ ಮೂರ್ತಿ, ಶಿವಯ್ಯ, ಶಂಕರ್, ಪ್ರಸಾದ್ ನಾಯಕ್ ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಿದರು.

ಧರ್ಮಸ್ಥಳದ ಮೇಲಿನ ಅಪಪ್ರಚಾರವು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆಯಿರುವುದರಿಂದ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.

ಬುರುಡೆ ಗ್ಯಾಂಗ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ Read More

ವೀರೇಂದ್ರ ಹೆಗಡೆ ಅವರಿಗೆ ಶುಭ ಕೋರಿದಕೆಎಂ ಪಿ ಕೆ ಟ್ರಸ್ಟ್ ಪದಾಧಿಕಾರಿಗಳು

ಮೈಸೂರು: ಮೈಸೂರಿನ ಕೆಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಪಟ್ಟಾಭಿಷೇಕದ 58ನೇ ವರ್ದಂತೋತ್ಸವದ ಪ್ರಯುಕ್ತ ಅವರಿಗೆ ಕೆಎಂ ಪಿ ಕೆ ಟ್ರಸ್ಟ್ ಪದಾಧಿಕಾರಿಗಳು
ಶುಭಾಶಕೋರಿದರು.

ನಂತರ ಹೆಗಡೆ ಅವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜಿ ರಾಘವೇಂದ್ರ, ಕಡಕೋಳ ಜಗದೀಶ್, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಮಹೇಶ್ ಕುಮಾರ್ ಹಾಗೂ ಟ್ರಸ್ಟ್ ನ ಇತರ ಪದಾಧಿಕಾರಿಗಳು ಹಾಜರಿದ್ದರು.

ವೀರೇಂದ್ರ ಹೆಗಡೆ ಅವರಿಗೆ ಶುಭ ಕೋರಿದಕೆಎಂ ಪಿ ಕೆ ಟ್ರಸ್ಟ್ ಪದಾಧಿಕಾರಿಗಳು Read More

ಮಂಜುನಾಥ ಸ್ವಾಮಿ ಅನುಗ್ರಹದಿಂದ ಎಲ್ಲ ಸಮಸ್ಯೆ ನಿವಾರಣೆಯಾಗುತ್ತಿವೆ-ಹೆಗ್ಗಡೆ

ಬೆಳ್ತಂಗಡಿ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ ಮತ್ತು ಅಣ್ಣಪ್ಪ ಸ್ವಾಮಿ ರಕ್ಷಣೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿವೆ ಎಂದು
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಸತ್ಯದ ಸಾಕ್ಷಾತ್ಕಾರವಾಗುತ್ತಿದೆ, ಜೊತೆಗೆ ಶಾಂತಿ, ನೆಮ್ಮದಿಯೂ ದೊರಕಿದೆ. ಅಲ್ಲದೆ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ನಮಗೆ ಎಲ್ಲಾ ಸೇವಾಕಾರ್ಯಗಳನ್ನು ಮುಂದುವರಿಸಲು ನವಚೈತನ್ಯ ಮೂಡಿಬಂದಿದೆ ಎಂದು ಹೇಳಿದರು.

ಶುಕ್ರವಾರ ಧರ್ಮಸ್ಥಳದಲ್ಲಿ ನಡೆದ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಧರ್ಮಾಧಿಕಾರಿಯಾಗಿ ಹೆಗ್ಗಡೆ ಪೀಠವನ್ನು ಬಯಸಿದವನಲ್ಲ. ಆದರೆ ಅನಿರೀಕ್ಷಿತವಾಗಿ ತೀರ್ಥರೂಪರ ನಿಧನದಿಂದ ನಾನು ಪಟ್ಟವನ್ನು ಸ್ವೀಕರಿಸಬೇಕಾಯಿತು. ಇಲ್ಲಿ ನಾನು “ನೆಪ” ಮಾತ್ರ. ಎಲ್ಲಾ ಕಾರ್ಯಗಳೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ, ಧರ್ಮದೇವತೆಗಳ ಆಶಯದಂತೆ ಹಾಗೂ ಅಣ್ಣಪ್ಪ ಸ್ವಾಮಿಯ ರಕ್ಷಣೆಯಿಂದ ಸುಗಮವಾಗಿ ನಡೆಯುತ್ತವೆ ಎಂದು ತಿಳಿಸಿದರು.

ಪ್ರತೀ ಸಂಕ್ರಮಣದ ದಿನ ನಾನು ಧರ್ಮದೇವತೆಗಳಿಗೆ ವರದಿ ಒಪ್ಪಿಸಬೇಕು. ಆಗ ಅವರು, ತಿಳುವಳಿಕೆ ಇಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇದೆ. ಏನೇ ಆಪತ್ತು, ವಿಪತ್ತು ಬಂದರೂ ಹೆತ್ತ ತಾಯಿಯಂತೆ ನಾವು ರಕ್ಷಣೆ ನೀಡುತ್ತೇವೆ ಎಂದು ಅಭಯ ನೀಡುತ್ತಾರೆ. ಏನಾದರು ತಪ್ಪಾದಲ್ಲಿ ಕೈಯ ಎಣ್ಣೆ ಕಣ್ಣಿಗೆ ತಾಗಿದಂತೆ ಆಗಬಹುದು ಎಂದು ಎಚ್ಚರಿಕೆಯನ್ನೂ ನೀಡುತ್ತಾರೆ ಎಂದು ತಿಳಿಸಿದರು.

ತಮಗೆ ಧರ್ಮಾಧಿಕಾರಿಯಾಗಿ ಪಟ್ಟಾಭಿಷೇಕ ಆದಾಗ ಆರಂಭದಲ್ಲಿಯೂ ಅನೇಕ ಪ್ರತಿಭಟನೆ, ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಕುಟುಂಬದ ಎಲ್ಲಾ ಸದಸ್ಯರ ಸಹಕಾರ, ನೌಕರವೃಂದದವರ ಕರ್ತವ್ಯ ನಿಷ್ಠೆ ಹಾಗೂ ಊರಿನ ನಾಗರಿಕರು ಮತ್ತು ಕ್ಷೇತ್ರದ ಅಭಿಮಾನಿಗಳ ಸಹಕಾರದಿಂದ ಎಲ್ಲಾ ಸಮಸ್ಯೆಗಳು ಸುಗಮವಾಗಿ ನಿವಾರಣೆಯಾಗಿವೆ‌ ಎಂದು ಹೆಗ್ಗಡೆ ಯವರು ಹೇಳಿದರು.

ಬಾರ್ಕೂರಿನ ಹಿರಿಯ ವಿದ್ವಾಂಸರಾದ ದಾಮೋದರ ಶರ್ಮ ಮಾತನಾಡಿ
ಧರ್ಮಸ್ಥಳದ ದಾನ ಪರಂಪರೆ, ಸಮಾಜಮುಖಿ ಸೇವಾ ಕಾರ್ಯಗಳು ವಿಶ್ವಮಾನ್ಯವಾಗಿವೆ. ಹಾಗಾಗಿ ಹೆಗ್ಗಡೆಯವರು ದೇವರು ಮತ್ತು ಮನುಷ್ಯರ ಸೇವೆ ಮಾಡಿ “ದೇವಮಾನವ” ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಬಣ್ಣಿಸಿದರು.

ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟರು ಮಾತನಾಡಿ, ಮುನಿಗಳಂತೆ ಮೌನದಿಂದ ಹೆಗ್ಗಡೆಯವರು ಎಲ್ಲವನ್ನೂ ಜಯಿಸಿದ್ದಾರೆ. ಮೌನದಿಂದ ತನ್ನನ್ನು ತಾನು ತಿಳಿದುಕೊಳ್ಳುವವರಿಗೆ “ಮುನಿ” ಎನ್ನುತ್ತಾರೆ. ಹೆಗ್ಗಡೆಯವರು ಮುನಿಯಂತೆ ಎಲ್ಲವನ್ನೂ ಹಾಗೂ ಎಲ್ಲರನ್ನೂ ಗೆದ್ದಿದ್ದಾರೆ ಎಂದು ತಿಳಿಸಿದರು.

ವಿದ್ವಾನ್ ನಾಗೇಂದ್ರ ಭಾರದ್ವಾಜ ಮಾತನಾಡಿ ಯಾವುದನ್ನೂ ಕಳೆದುಕೊಳ್ಳುವುದು ಸುಲಭ. ಆದರೆ, ಅದನ್ನು ಪಡೆಯುವುದು ಕಷ್ಟ. ಎಲ್ಲಾ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಹೆಗ್ಗಡೆಯವರು ಪ್ರಸಾದರೂಪವಾಗಿ ಧರ್ಮಸ್ಥಳದಿಂದ ಪ್ರಥಮ ದಾನವನ್ನು ನೀಡಿ ಪೋತ್ಸಾಹಿಸುತ್ತಾರೆ ಎಂದು ತಿಳಿಸಿದರು.

ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್,ಕಟೀಲು ದೇವಸ್ಥಾನದ ಲಕ್ಷ್ಮೀನಾರಾಯಣ ಅಸ್ರಣ್ಣ ಮತ್ತಿತರರು ಮಾತನಾಡಿದರು.

ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಸೋನಿಯಾವರ್ಮ ಉಪಸ್ಥಿತರಿದ್ದರು.

ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಧಾರ್ಮಿ ಕ್ಷೇತ್ರಗಳು, ದೈವಸ್ಥಾನಗಳು ಮತ್ತು ಶ್ರದ್ಧಾಕೇಂದ್ರಗಳ ಮುಖಂಡರು ಹಾಗೂ ಧಾರ್ಮಿಕ ಪರಿಷತ್ತಿನ ಸದಸ್ಯರು ಸೇರಿದಂತೆ ಸುಮಾರು ಆರು ಸಾವಿರ ಮಂದಿ ಸಭಾಸದರು ಉಪಸ್ಥಿತರಿದ್ದರು.

ಮಂಜುನಾಥ ಸ್ವಾಮಿ ಅನುಗ್ರಹದಿಂದ ಎಲ್ಲ ಸಮಸ್ಯೆ ನಿವಾರಣೆಯಾಗುತ್ತಿವೆ-ಹೆಗ್ಗಡೆ Read More

ಧರ್ಮಸ್ಥಳಕ್ಕೆ ಭೇಟಿ ನೀಡಿದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

ಬೆಳ್ತಂಗಡಿ: ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೂಜ್ಯ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ನಂತರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು.

ದಶಕಗಳಿಂದ ದೇವಾಲಯದ ಸೇವೆ ಮತ್ತು ಅದರ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಹೆಗ್ಗಡೆಯವರ ಕಾರ್ಯವನ್ನು ಶ್ರೀಗಳು ಶ್ಲಾಘಿಸಿದರು.

ಜಾತಿ-ಮತ ಭೇದವಿಲ್ಲದೆ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಪವಿತ್ರ ಕ್ಷೇತ್ರದ ಗೌರವ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ಧರ್ಮಸ್ಥಳಕ್ಕೆ ಭೇಟಿ ನೀಡಿದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ Read More

ಅಹಿಂಸಾಪಾಲಕರಾದ ಜೈನರು ತೊಂದರೆ ಕೊಡಲ್ಲ,ಕೊಟ್ಟವರನ್ನು ಬಿಡಲ್ಲ-ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ

ಬೆಳ್ತಂಗಡಿ: ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದು ತಮಿಳುನಾಡು ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಎಲ್ಲಾ ಜೈನಮಠಗಳ ಭಟ್ಟಾರಕರುಗಳ ನೇತೃತ್ವದಲ್ಲಿ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದರು.

ಸತ್ಯಮೇವ ಜಯತೇ ಎನ್ನುವಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು ಎಂದು ಹೇಳಿದರು.

ಶುಕ್ರವಾರ ಎಲ್ಲಾ ಭಟ್ಟಾರಕರುಗಳು ದೇವಸ್ಥಾನಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಘಂಟೆ ಬಾರಿಸಿತು. ಇದರಿಂದಾಗಿ ಸಣ್ಣ ಕಳಂಕ ಮಾಯವಾಯಿತು ಎಂದು ತಮಗೆ ತಿಳಿಯಿತು ಎಂದು ಸ್ವಾಮೀಜಿ ನುಡಿದರು.

ರಾಮಚಂದ್ರ, ಸೀತೆಯ ಹಾಗೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ,ಈಗ ಸಣ್ಣ ಕಳಂಕವೂ ನಿವಾರಣೆಯಾಗಿದೆ.

ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರುಗಳು ವಿಧಾನಸಭೆ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಎಚ್ಚರಿಸಿದರು.

ಖ್ಯಾತ ಸಾಹಿತಿ ನಾಡೋಜಾ ಹಂಪ ನಾಗರಾಜಯ್ಯ ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಂಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆಯನ್ನು ವರ್ಣಿಸಲಸದಳವಾಗಿದೆ ಎಂದು ತಿಳಿಸಿದರು.

ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೆಗ್ಗಡೆಯವರು ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು.

ಶ್ರವಣಬೆಲಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಜೈನಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ,ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸಲಹೆ ನೀಡಿದರು.

ಸೋಂದಾ ಮಠದ ಭಟ್ಟಾಕಳಂಕ ಸ್ವಮೀಜಿ,
ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ,
ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ತಿಜಾರ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಜೊತೆ ಸದಾ ತಾವೆಲ್ಲರೂ ಸೇವೆಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರುಗಳ ದರ್ಶನ ಭಾಗ್ಯ ಲಭಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ನುಡಿದರು.

ಸತ್ಯ, ಅಹಿಂಸೆ, ತ್ಯಾಗ, ಬ್ರಹ್ಮಚರ್ಯ ಇತ್ಯಾದಿ ದಶಧರ್ಮಗಳನ್ನು ಜೈನರು ನಿತ್ಯವೂ ಪಾಲಿಸುತ್ತಾರೆ. ಇಂತಹ ಪವಿತ್ರಪರ್ವದ ಸಂದರ್ಭದಲ್ಲಿ ಎಲ್ಲಾ ಭಟ್ಟಾರಕರುಗಳು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ತಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.

ತತ್ವ, ಸಿದ್ಧಾಂತ, ಧರ್ಮ ಇರುವುದು ಕೇವಲ ಓದಲು, ಉಪದೇಶಕ್ಕೆ ಮಾತ್ರ ಅಲ್ಲ. ಅದನ್ನು ನಾವು ನಿತ್ಯವೂ ಪಾಲಿಸಬೇಕು. “ಸಮ್ಯಕ್‌ದರ್ಶನ, ಜ್ಞಾನ ಚಾರಿತ್ರಾಣಿ ಮೋಕ್ಷ ಮಾರ್ಗಃ” ಎಂಬುದು ಜೈನ ಧರ್ಮದ ಸಾರವಾಗಿದೆ. ಅಂದರೆ ಸರಿಯಾದ ತತ್ವ ಸಿದ್ಧಾಂತಗಳ ಬಗ್ಯೆ ನಂಬಿಕೆ, ತಿಳುವಳಿಕೆ (ಜ್ಞಾನ) ಮತ್ತು ಆಚರಣೆಯಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಜೈನ ಸಿದ್ಧಾಂತವಾಗಿದೆ. ಇದರ ಪ್ರತೀಕವಾಗಿ ಮೂರು ಎಳೆಗಳಿರುವ ಜನಿವಾರ (ಯಜ್ಞೋಪವೀತ) ವನ್ನು ಜೈನರು ಧರಿಸುತ್ತಾರೆ. ಇಂತಹ ಸಾತ್ವಿಕ ಹಾಗೂ ನೈತಿಕ ಜೀವನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.ನಂತರ ಎಲ್ಲಾ ಭಟ್ಟಾರಕರುಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಮಾವೇಶದಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಮತ್ತು ಸೋನಿಯಾ‌ ವರ್ಮ ಉಪಸ್ಥಿತರಿದ್ದರು.

ಅಹಿಂಸಾಪಾಲಕರಾದ ಜೈನರು ತೊಂದರೆ ಕೊಡಲ್ಲ,ಕೊಟ್ಟವರನ್ನು ಬಿಡಲ್ಲ-ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ Read More

ಧರ್ಮಸ್ಥಳದಲ್ಲಿ ಕಾರ್ಮೋಡ ಕರಗಿ ಶಾಂತಿ-ನೆಮ್ಮದಿ ನೆಲೆಸಲಿ- ಶಿವರಾತ್ರಿ ಶ್ರೀ

ಮೈಸೂರು: ನಾಡಿನ ಪ್ರಸಿದ್ಧ ಶ್ರದ್ದೆ ಹಾಗೂ ಭಕ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರವೂ ಒಂದು. ಇಂದು ಕ್ಷೇತ್ರವನ್ನು ವಿವಾದಿತ ಕೇಂದ್ರವನ್ನಾಗಿಸಲು ಕೆಲವರು ಯತ್ನಿಸುತ್ತಿರುವುದು ವಿಷಾದನೀಯ ಎಂದು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ.

ನಂಬಿಕೆ ಎಂಬುದು ಬಹು ಸೂಕ್ಷ್ಮವಾದ ಸಂಗತಿ, ಅದು ಕನ್ನಡಿಯಿದ್ದಂತೆ, ಒಮ್ಮೆ ಅದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗುವುದಿಲ್ಲ. ಒಡೆದ ಕನ್ನಡಿಯ ಪ್ರತಿಚೂರಿನಲ್ಲೂ ಪ್ರತ್ಯೇಕ ಪ್ರತ್ಯೇಕ ಬಿಂಬಗಳು ಕಾಣುತ್ತಿರುತ್ತವೆ. ಹೀಗೆ ಕಂಡ ಕಂಡ ಬಿಂಬಗಳನ್ನೆಲ್ಲ ನಂಬಿ ವಿಭಿನ್ನವಾಗಿ ಅರ್ಥೈಸುತ್ತಾ ಹೋಗುವುದು ಸೂಕ್ತವಾದುದಲ್ಲ. ಒಂದು ಧಾರ್ಮಿಕ ಕ್ಷೇತ್ರದ ಮೇಲೆ ನಿರಂತರವಾಗಿ ಒಂದಲ್ಲ ಒಂದು ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಪ್ರಯತ್ನಗಳು ಸೂಕ್ತವಾದುವಲ್ಲ ಎಂದು ಶ್ರೀಗಳು ಹೇಳಿದ್ದಾರೆ.

ಶ್ರೀ ಧರ್ಮಸ್ಥಳ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ, ಜಗತ್ತಿನ ಅನೇಕ ಭಾಗಗಳ ಪರಂಪರಾಗತ ಸಹಬಾಳ್ವೆಗೆ ದ್ಯೋತಕ. ಅಲ್ಲಿ ಶಿವ ದೇವಾಲಯದಲ್ಲಿ ಪೂಜಿಸುವ ಅರ್ಚಕರು ವಿಷ್ಣುವನ್ನೇ ಪರಮ ದೈವವೆಂದು ನಂಬುವ ಮಾಧ್ವ ಸಂಪ್ರದಾಯದವರು. ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಶ್ರಮಣ ಧರ್ಮದ ಜೈನ ಸಮುದಾಯದವರು. ಈ ಮೂರು ವಿಭಿನ್ನ ನಂಬಿಕೆಗಳು ಒಗ್ಗೂಡಿರುವ ಶ್ರೀಕ್ಷೇತ್ರದ ಮೂಲ ದೈವಕ್ಕೆ ಹೆಗ್ಗಡೆ ಕುಟುಂಬದ ಪರಂಪರೆಯವರೆಲ್ಲರೂ ಶ್ರದ್ಧಾ-ಭಕ್ತಿಗಳಿಂದ ನಡೆದುಕೊಳ್ಳುತ್ತಿರುವುದು ಹಾಗೂ ಯಾವುದೇ ಚ್ಯುತಿಬಾರದಂತೆ ನಿರ್ವಹಿಸುತ್ತಿರುವುದು ಹೆಮ್ಮೆ ಪಡುವ ವಿಚಾರ. ಇದು ಭಾವೈಕ್ಯತೆಗೆ ನಿಜವಾದ ತೋರುಗನ್ನಡಿ ಎಂದು ಶಿವರಾತ್ರಿ ಶ್ರೀಗಳು ದೀರ್ಘ ಪತ್ರ ಬರೆದು ಶ್ಲಾಘಿಸಿದ್ದಾರೆ‌

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಜನರ ಬದುಕನ್ನು ಸಮೃದ್ಧಗೊಳಿಸಲು ಹಮ್ಮಿಕೊಂಡಿರುವ ಕಾರ್ಯಗಳು ಅಪೂರ್ವವಾದುವು ಎಂದು ಬಣ್ಣಿಸಿದ್ದಾರೆ.

ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿರುವರು. ದೇವಾಲಯಗಳ ಜೀಣೋದ್ಧಾರ ಕೈಗೊಳ್ಳುತ್ತಿರುವರು. ಮಂಜೂಷಾ ವಸ್ತುಸಂಗ್ರಹಾಲಯದ ಮೂಲಕ ಪ್ರಾಚೀನ ವಸ್ತುಗಳು, ಸ್ಮರಣಿಕೆಗಳು ಹಾಗೂ ಹಸ್ತಪ್ರತಿಗಳ ಸಂಗ್ರಹ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಿರುವರು. ಸ್ತ್ರೀಶಕ್ತಿ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಭದ್ರತೆಯನ್ನು ಹೆಚ್ಚಿಸಿ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕನ್ನು ಕಲ್ಪಿಸುತ್ತಿರುವರು ಇದೆಲ್ಲಾ ಅನುಕರಣೀಯ ಎಂದು ಹೇಳಿದ್ದಾರೆ.

ಇಂತಹ ಪವಿತ್ರ ಕ್ಷೇತ್ರದ ಪರಿಸರದಲ್ಲಿ ನಡೆದ ಕೆಲವು ಅಸಹಜ ಸಾವಿನ ಪ್ರಕರಣಗಳು ಗಂಭೀರವಾದುವೇ ಆಗಿರಬಹುದು. ಆದರೆ ಇಂತಹ ಪ್ರಕರಣಗಳನ್ನು ಶ್ರೀಕ್ಷೇತ್ರದೊಂದಿಗೆ ತಳಕು ಹಾಕಲು ಪ್ರಯತ್ನಿಸುವುದು ದುಡುಕಿನ ನಿರ್ಧಾರವಾಗುತ್ತದೆ. ಸತ್ಯ ಸದಾ ಮೌನಿ, ಸುಳ್ಳಿಗೆ ಆರ್ಭಟ ಜಾಸ್ತಿ.ಇದರಿಂದ ಶ್ರದ್ಧಾವಂತ ಮನಸ್ಸುಗಳಿಗೆ ಧಕ್ಕೆಯುಂಟಾಗಬಾರದು.

ಇಂಥ ಕೃತ್ಯಗಳನ್ನು ಸಮಗ್ರವಾಗಿ ತನಿಖೆ ಮಾಡಿ ಸತ್ಯವನ್ನು ಅನಾವರಣ ಮಾಡಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಶ್ರೀಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆಯನ್ನು ಹೊಂದಿರುವ ಸದ್ಭಕ್ತರು ಶಾಂತಿ ಮತ್ತು ಸಂಯಮದಿಂದ ಇರಬೇಕಾದುದು ಅಗತ್ಯ.

ಹಾಗೆಯೇ ನ್ಯಾಯಕ್ಕಾಗಿ ಆಗ್ರಹಿಸುವವರು ಕೂಡ ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದೆ ತನಿಖೆ ಪೂರ್ಣವಾಗುವವರೆಗೆ ಅಸಹನೆಗೊಳ್ಳದೆ ತಾಳ್ಮೆಯಿಂದ ಇರಬೇಕಾದುದೂ ಅಗತ್ಯ ಯಾವುದನ್ನೇ ಆಗಲಿ ಒಡೆಯುವುದು ಸುಲಭ, ಕಟ್ಟುವುದು ಕಷ್ಟ ಎಂಬುದನ್ನು ಎಲ್ಲರೂ ಅರಿಯಬೇಕು. ಸರ್ಕಾರ ಆದಷ್ಟು ಶೀಘ್ರವಾಗಿ ಕೂಲಂಕುಷವಾಗಿ ತನಿಖೆ ನಡೆಸಿ ಸತ್ಯವನ್ನು ಪತ್ತೆ ಹಚ್ಚಬೇಕು ಎಂದು ಶಿವರಾತ್ರಿ ದೇಶೀಕೇಂದ್ರ ಶೀಗಳು ಸಲಹೆ ನೀಡಿದ್ದಾರೆ.

ಇಂಥ ಘಟನೆಗಳಿಂದ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬವರ್ಗದವರು, ಶ್ರೀಕ್ಷೇತ್ರದ ಸೇವಾಕರ್ತರು, ಭಕ್ತಾದಿಗಳು ಹಾಗೂ ಅಭಿಮಾನಿಗಳು ವಿಚಲಿತರಾಗದೆ, ಧೈರ್ಯ ಹಾಗೂ ಸಮಾಧಾನಗಳಿಂದಿದ್ದು, ಶ್ರೀಕ್ಷೇತ್ರದ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುತ್ತಿರಬೇಕು.

ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಎಲ್ಲರೂ ಅವರೊಂದಿಗೆ ಒಟ್ಟಾಗಿದ್ದು ಕ್ಷೇತ್ರದ ಸಂರಕ್ಷಣೆಗೆ ಸಹಕರಿಸಬೇಕಾದುದು ಅತ್ಯಗತ್ಯ. ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಆದಷ್ಟು ಜಾಗ್ರತೆ ಎಲ್ಲ ಕಾರ್ಮೋಡಗಳು ಕರಗಿ ಶಾಂತಿ-ನೆಮ್ಮದಿಗಳು ನೆಲೆಸುವಂತಾಗಲೆಂದು ಹಾರೈಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

ಧರ್ಮಸ್ಥಳದಲ್ಲಿ ಕಾರ್ಮೋಡ ಕರಗಿ ಶಾಂತಿ-ನೆಮ್ಮದಿ ನೆಲೆಸಲಿ- ಶಿವರಾತ್ರಿ ಶ್ರೀ Read More

ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ:ಸಿಎಂ ಉತ್ತರಿಸಲಿ-ಅಶೋಕ್‌ ಆಗ್ರಹ

ಬೆಂಗಳೂರು: ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ ಇದೆ ಎಂಬುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ,ಹಾಗಾಗಿ ಇದನ್ನು ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಈ ಷಡ್ಯಂತ್ರ ಏನು, ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಅವರ ಉದ್ದೇಶ ಏನು, ಇದೆಲ್ಲಾ ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ, ಸುರ್ಜೇವಾಲ ಅವರ ಸೂಚನೆಯಂತೆ ನಡುತ್ತಿದೆಯೇ ಎಂದು ಟ್ವೀಟ್ ಮಾಡಿ ಅಶೋಕ ಪ್ರಶ್ನಿಸಿದ್ದಾರೆ.

ಇವೆಲ್ಲಕ್ಕೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ:ಸಿಎಂ ಉತ್ತರಿಸಲಿ-ಅಶೋಕ್‌ ಆಗ್ರಹ Read More

ಅಪಪ್ರಚಾರ ಪ್ರಕರಣ-ಬಿಜೆಪಿ ನಿಯೋಗ ಧರ್ಮಸ್ಥಳಕ್ಕೆ ಭೇಟಿ :

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರ ಅಪಪ್ರಚಾರದ ಹಿನ್ನೆಲೆಯಲ್ಲಿ ಆ.17 ಭಾನುವಾರ ರಾಜ್ಯ ಬಿಜೆಪಿ ನಿಯೋಗ ಧರ್ಮಸ್ಥಳಕ್ಕೆ ಭೇಟಿ ನೀಡಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರು,ಸದಸ್ಯರು, ಬಿಜೆಪಿಯ ಶಾಸಕರು, ಸಂಸದರು,ಪಕ್ಷದ ಹಲವು ಪದಾಧಿಕಾರಿಗಳು ಭೇಟಿ ನೀಡಿ ಶ್ರೀ ಮಂಜುನಾಥನ ದರ್ಶನ ಪಡೆದರು.

ನಂತರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ನಿಯೋಗ ಅವರೊಂದಿಗೆ ಮಾತುಕತೆ ನಡೆಸಿತು.

ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯು ಎಸ್ ಐಟಿ ತನಿಖೆಯನ್ನು ಪ್ರಾರಂಭದಲ್ಲೇ ಸ್ವಾಗತಿಸಿದ್ದು, ಅದರ ಮಧ್ಯಂತರ ವರದಿಯನ್ನು ಸರಕಾರ ಮಂಡಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದ್ದೇವೆ ಎಂದು ಹೇಳಿದರು.

ಧರ್ಮಸ್ಥಳ ಕ್ಷೇತ್ರದ ಕುರಿತು ಅಪಪ್ರಚಾರ ಮಾಡುತ್ತಿರುವ ಬಗ್ಗೆಯೂ ಸರಕಾರ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಅಪಪ್ರಚಾರ ಪ್ರಕರಣ-ಬಿಜೆಪಿ ನಿಯೋಗ ಧರ್ಮಸ್ಥಳಕ್ಕೆ ಭೇಟಿ : Read More

ಧರ್ಮಸ್ಥಳದ ಬಗ್ಗೆ ಅಪಚಾರ ಮಾಡುವವರ ವಿರುದ್ಧ ನಿಲ್ಲುತ್ತೇವೆ- ಶ್ರೀವತ್ಸ

ಮೈಸೂರು: ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಬಿಡುವುದಿಲ್ಲ,ಅಪಚಾರ ಮಾಡುವವರ ವಿರುದ್ಧ ಸದಾ ನಾವು ನಿಲ್ಲುತ್ತೇವೆ ಎಂದು ಶಾಸಕ ಶ್ರೀವತ್ಸ ಎಚ್ಚರಿಸಿದರು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರನ್ನ ಕೇಳಿ ಎಸ್ಐಟಿ ರಚನೆ ಮಾಡಿದರು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಸಹಾನುಭೂತಿಯಿಂದ ಇಷ್ಟೆಲ್ಲ ನಡೆಯುತ್ತಿದೆ. ಮಂಜುನಾಥ ಸ್ವಾಮಿ ಸನ್ನಿಧಿಯ ಅಡಿಯಲ್ಲಿ ಹೆಣ ಇದೆ ಅಂತ ಅಂದರೂ ತೆಗೆಸಿಬಿಡ್ತಾರಾ ಎಂದು ಕಿಡಿಕಾರಿದರು.

ಮೈಸೂರು ಮುಡಾ ಹಗರಣ, ಅಕ್ರಮ ರೆಸಾರ್ಟ್ ಹಗರಣ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಕೇಸ್ ಆಯಿತು ಇದೆಲ್ಲವನ್ನ ಎಸ್ ಐಟಿಗೆ ವಹಿಸಿದ್ರಾ, ಧರ್ಮ ಸ್ಥಳದ ಬಗ್ಗೆ ಯಾಕೆ ಇಷ್ಟು ಮುತುವರ್ಜಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಮಾಡುವವರ ವಿರುದ್ಧ ಸದಾ ನಾವು ಇರುತ್ತೇವೆ ಎಂದು ಶ್ರೀವತ್ಸ ತಿಳಿಸಿದರು.

ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀವತ್ಸ, ಸತ್ಯ ಹೇಳಿದ್ದಕ್ಕೆ ವಜಾ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ, ರಾಜಣ್ಣ ಅವರ ಅಧ್ಯಕ್ಷರು ಹೇಳಿದ್ದನ್ನ ಒಪ್ಪಲಿಲ್ಲ ಎಂಬ ಕಾರಣಕ್ಕೆ ಸಂಪುಟದಿಂದ ಕಿತ್ತು ಹಾಕಿದ್ದಾರೆ. ಇದು ಒಬ್ಬ ಹಿಂದುಳಿದ ನಾಯಕನಿಗೆ ಮಾಡಿದ ಅಪಮಾನ ಕಾಂಗ್ರೆಸ್ ನಲ್ಲಿ ಸತ್ಯ ಹೇಳಿದ್ರೆ ಉಳಿಗಾಲ ಇಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ‌ಟೀಕಿಸಿದರು.

ನಟ ದರ್ಶನ್ ಜಾಮೀನು ಅರ್ಜಿ ವಜಾ ವಿಚಾರ ಕುರಿತು ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ಸಂದ ಜಯ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನ‌ ಯಾರಾದರೂ ಪ್ರಶ್ನೆ ಮಾಡೋದಕ್ಕೆ ಸಾಧ್ಯನಾ ಸುಪ್ರೀಂ ಕೋರ್ಟ್ ಎಲ್ಲವನ್ನೂ ಅವಲೋಕಿಸಿ ತೀರ್ಪು ನೀಡಿದೆ, ಕಾನೂನಿನ ಮುಂದೆ ಎಲ್ಲರೂ ಒಂದೇ, ಈ ತೀರ್ಪುನ್ನ ನಾನು ಸ್ವಾಗತ ಮಾಡುತ್ತೇನೆ ಎಂದು ಶ್ರೀವತ್ಸ ತಿಳಿಸಿದರು.

ಧರ್ಮಸ್ಥಳದ ಬಗ್ಗೆ ಅಪಚಾರ ಮಾಡುವವರ ವಿರುದ್ಧ ನಿಲ್ಲುತ್ತೇವೆ- ಶ್ರೀವತ್ಸ Read More