ನಿಗದಿತ ಅವಧಿಯೊಳಗೆ ಜನರ ಕೆಲಸ ಮಾಡಿಕೊಡಿ- ಕೆ ಎನ್ ಫಣೀಂದ್ರ ಸೂಚನೆ

ಮೈಸೂರು,ಆ.2: ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಕಾನೂನಿನಡಿಯಲ್ಲಿ ನಿಗಧಿತ ಅವಧಿಯೊಳಗೆ ಮಾಡಿಕೊಡಬೇಕು,ಜನರನ್ನು ಕಚೇರಿಗೆ ಅಲೆಸಬಾರದು ಎಂದು ಉಪ ಲೋಕಾಯುಕ್ತ ಕೆ ಎನ್ ಫಣೀಂದ್ರ ಅವರು ಸೂಚಿಸಿದರು.

ಶನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 3 ದಿನದ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ದೂರುದಾರರು ಮತ್ತು ಎದುರುದಾರರ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಸಿವಿಲ್ ಕೋರ್ಟ್ ನಲ್ಲಿ ಇಂಜೆಕ್ಷನ್ ಆದೇಶ ಆಗಿದೆ ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೈಟ್ ಖಾತೆ ಮಾಡಿಕೊಟ್ಟಿಲ್ಲ ಎಂದು ದೂರು ನೀಡಿದ್ದಾರೆ. ಇದಕ್ಕೆ ಪಿಡಿಒ ಅವರು ಪತ್ರದಲ್ಲಿ ಇರುವಷ್ಟು ಜಾಗ ಇಲ್ಲ ಹಾಗೂ ಇದು ಆನ್ ರಿಜಿಸ್ಟರ್ ದಾಖಲೆ ಆಗಿದೆ ಆದ್ದರಿಂದ ಖಾತೆ ಮಾಡಲು ಬರುವುದಿಲ್ಲ ಎಂದು ಮಾಹಿತಿ ನೀಡಿದರು.

ದೂರುದಾರರು ಹೂಟಗಳ್ಳಿ ನಗರಸಭೆಯಲ್ಲಿ ಸಿವಿಲ್ ಕಾಮಗಾರಿ ಮಾಡಿದ್ದು, ಕಾಮಗಾರಿ ಮುಗಿದು ನಿಗದಿತ ಅವಧಿ ಮುಗಿದ ನಂತರವೂ ಇಎಂಡಿ ಹಣ ನೀಡಿಲ್ಲ, ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ಇಎಂಡಿ ಹಣ ನೀಡಿದ್ದಾರೆ. ಆದರೆ ವಿಳಂಬವಾಗಿರುವುದಕ್ಕೆ ಬಡ್ಡಿ ನೀಡಿಲ್ಲ ಎಂದು ದೂರು ನೀಡಿದರು. ಇದಕ್ಕೆ ಉಪ ಲೋಕಾಯುಕ್ತರು ಬಡ್ಡಿ ಹಣಕ್ಕೆ ಕೋರ್ಟ್ ಗೆ ಹೋಗುವಂತೆ ಸಲಹೆ ನೀಡಿದರು.

ದೂರುದಾರರು ನಾನು ಬೋಗಾದಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಡಾವಣೆಯಲ್ಲಿ ಸೈಟ್ ಖರೀದಿ ಮಾಡಿದ್ದು, 20 ವರ್ಷದಿಂದ ಕಂದಾಯ ಪಾವತಿ ಮಾಡುತ್ತಾ ಬಂದಿದ್ದೇನೆ. ಅದೇ ಬಡಾವಣೆಯಲ್ಲಿ ಕೆಲವರಿಗೆ ಖಾತೆ ಮಾಡುತ್ತಾರೆ. ಆದರೆ ನನಗೆ ಇದು ಅನಧಿಕೃತ ಬಡಾವಣೆ ಎಂದು ಹೇಳಿ 11 ಹಾಗೂ 11 ಬಿ ಎಂದು ಅಳಲು ತೋಡಿಕೊಂಡರು.

ಅದಕ್ಕೆ ಅಧಿಕಾರಿಗಳು ಪ್ರತಿಕ್ರಿಯಿಸಿ ಬಡಾವಣೆಯಲ್ಲಿ ಪಾರ್ಕ್ ಹಾಗೂ ಸಿ ಎ ನಿವೇಶನಗಳಲ್ಲಿ ಸೈಟ್ ಮಾಡಿ ಅನಧಿಕೃತವಾಗಿ ಮಾರಾಟ ಮಾಡಿರುತ್ತಾರೆ. ಈ ಸಂಬಂಧ ಹೈ ಕೋರ್ಟ್ ನಲ್ಲಿ ಕೇಸ್ ಇದೆ ಎಂದು ಮಾಹಿತಿ ನೀಡಿದರು, ಇದಕ್ಕೆ ಉಪ ಲೋಕಾಯುಕ್ತರು ಅನಧಿಕೃತ ಬಡಾವಣೆ ಮಾಡಿರುವ ಡೆವಲಪರ್ಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ. ಅನದಿಕೃತವಾಗಿ ಸೈಟುಗಳನ್ನು ಮಾಡಿ ಕೋಟ್ಯಂತರ ರೂಪಾಯಿ ಹಣ ಮಾಡಿಕೊಂಡು ಹೋಗುವವರ ಮೇಲೆ ಸೂಕ್ತ ಕಾನೂನಡಿ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಲೋಕಾಯುಕ್ತ ಜಂಟಿ ನಿಬಂಧಕರು(ವಿಚಾರಣೆ) ವಿ.ಎನ್.ವಿಮಲಾ, ಲೋಕಾಯುಕ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಮರ್ ನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಗದಿತ ಅವಧಿಯೊಳಗೆ ಜನರ ಕೆಲಸ ಮಾಡಿಕೊಡಿ- ಕೆ ಎನ್ ಫಣೀಂದ್ರ ಸೂಚನೆ Read More

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಸೌಜನ್ಯದಿಂದ ವರ್ತಿಸಿ-ಕೆ.ಎನ್. ಫಣೀಂದ್ರ

ಮೈಸೂರು ಆ.2: ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಶನಿವಾರ ಬೆಳ್ಳಂಬೆಳಿಗ್ಗೆ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ಪ್ರತಿ ವಾರ್ಡ್ ಗಳಿಗೂ ಭೇಟಿ ನೀಡಿ ಸರಿಯಾಗಿ ಚಿಕಿತ್ಸೆ ದೊರೆಯುತಿದೆಯೇ, ಶೌಚಾಲಯ,ಊಟದ ವ್ಯವಸ್ಥೆ ಸರಿಯಾಗಿದೆಯೇ ಎಂದು ರೋಗಿಗಳಿಂದ ಮಾಹಿತಿ ಪಡೆದರು.

ಎಕ್ಸರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಹಾಗೂ ವೈದ್ಯರ ಚಿಕಿತ್ಸೆ ಬಗ್ಗೆಯೂ ವಿಚಾರಿಸಿದರು.

ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ, ಶೌಚಾಲಯ ಹಾಗೂ ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಉಪ ಲೋಕಾಯುಕ್ತರು ಖುದ್ಧಾಗಿ ವೀಕ್ಷಣೆ ಮಾಡಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸೌಜನ್ಯವಾಗಿ ವರ್ತಿಸಬೇಕು ಎಂದು ಸಿಬ್ಬಂದಿಗೆ ಸಲಹೆ ನೀಡಿದರು.

ಆಸ್ಪತ್ರೆಯ ಅವ್ಯವಸ್ಥೆಗಳನ್ನು ಪರಿಶೀಲಿಸಿ,ರೋಗಿಗಳ ದೂರುಗಳನ್ನು ಆಲಿಸಿದರು, ಹಣಕ್ಕೆ ಬೇಡಿಕೆಯಿಡುವುದು, ಸ್ವಚ್ಛತೆಯ ಕೊರತೆ, ಮತ್ತು ಡಿ ಗ್ರೂಪ್ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮನಗೊಂಡು ತಾವು ಮತ್ತೆ ಭೇಡಿ ನೀಡುವಷ್ಟರಲ್ಲಿ ಎಲ್ಲವೂ ಸರಿಯಾಗಿರಬೇಕೆಂದು ತಾಕೀತು ಮಾಡಿದರು.

ರೋಗಿಗಳಿಂದ ಅಹವಾಲು ಸ್ವೀಕರಿಸಿದ ಉಪ ಲೋಕಾಯುಕ್ತರು ರೋಗಿಗಳಿಂದ ಚಿಕಿತ್ಸೆಗಾಗಿ ದುಡ್ಡು ಸ್ವೀಕರಿಸಿದರೆ ಅಂತವರ ಮೇಲೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ನಾಯಿ ಇರುವುದನ್ನು ಕಂಡು ಏನಿದು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಕೆಲವರು ರೋಗಿಗಳಿಂದ ಹಣ ಪಡೆದ ಬಗ್ಗೆ ಈ ವೇಳೆ ಸ್ಥಳದಲ್ಲಿದ್ದ ಮೈಸೂರು ಮೆಡಿಕಲ್‌ ಕಾಲೇಜು ಡೀನ್‌ ಹಾಗೂ ನಿರ್ದೇಶಕರಾದ ದಾಕ್ಷಾಯಿಣಿ ಅವರನ್ನು ಪ್ರಶ್ನಿಸಿ ಫಣೀಂದ್ರ ಅವರು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್,ಆರ್‌ಎಂಒ ಡಾ. ನಯಾಜ್ ಪಾಷಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಸೌಜನ್ಯದಿಂದ ವರ್ತಿಸಿ-ಕೆ.ಎನ್. ಫಣೀಂದ್ರ Read More

ರಾಯನ ಕೆರೆ ನೀರು ಸಂಸ್ಕರಣ ಘಟಕ: ಉಪ ಲೋಕಾಯುಕ್ತರ ಪ್ರಶಂಸೆ

ಮೈಸೂರು: ರಾಯನ ಕೆರೆ ನೀರು ಸಂಸ್ಕರಣಾ ಘಟಕ ಹಾಗೂ ಘನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದರು.

ನಗರದ ರಾಯನ ಕೆರೆ ನೀರು ಸಂಸ್ಕರಣ ಘಟಕ ಒಳಚರಂಡಿ ನೀರನ್ನು ಸಂಸ್ಕರಿಸಿ, ಕೆರೆಗಳಿಗೆ ಬಿಡುಗಡೆ ಮಾಡುವ ವ್ಯವಸ್ಥೆಯಾಗಿದ್ದು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ಆದರೆ ಇದರಿಂದ ಜನರಿಗೆ ತೊಂದರೆ ಆಗದಂತೆ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ವೇಳೆ ನ್ಯಾ.ಕೆ.ಎನ್. ಫಣೀಂದ್ರ ತಿಳಿಸಿದರು.

ರಾಯನಕೆರೆ ನೀರು ಸಂಸ್ಕರಣ ಘಟಕ ಉತ್ತಮ ನಿರ್ವಹಣೆಯ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿದ ಅವರು ಮಲಿನ ನೀರು ಎತ್ತುವ ಯಂತ್ರಗಾರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಜನರಿಗೆ ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಇದೇ ವೇಳೆ ಉಪ ಲೋಕಾಯುಕ್ತರು ಮಹಾನಗರ ಪಾಲಿಕೆಯ ರಾಯನ ಕೆರೆ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿ, ಒಣ ಕಸ ಹಾಗೂ ಹಸಿ ಕಸ ಬೇರ್ಪಡಿಸುವ ಕಾರ್ಯ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ಪಡೆದು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಲ್ಲದೆ ಮೈಸೂರು ಮಾದರಿಯಲ್ಲಿಯೇ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಗೂ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಿ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಘನ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತಾ 5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಜನರ ಸಮಿಕ್ಷೇ ಮಾಡಿ ಜನರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚರಿಕೆ ವಹಿಸಿ ಹಾಗೂ ಇದರ ಸುತ್ತ ಅಕ್ರಮ ಲೇ ಔಟ್ ಗಳು ಹಾಗೂ ಕಟ್ಟಡ ನಿರ್ಮಾಣ ಆಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ನೀರು ಸಂಸ್ಕರಣ ಘಟಕದಲ್ಲಿ ಬೆಳೆದಿರುವ ಗಿಡ ಗಂಟೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.

ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೆಲಸ ಮಾಡುವವರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಹಾಗೂ ಅವರಿಗೆ ಉತ್ತಮವಾದ ಗ್ಲೌಸ್, ಬೂಟ್ ಹಾಗೂ ಮಾಸ್ಕ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶೇಕ್ ತನ್ವಿರ್ ಆಸಿಫ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಉಮಾ ಶಂಕರ್, ಮೈಸೂರು ತಾಲೂಕು ತಹಶೀಲ್ದಾರ್ ಮಹೇಶ್ ಕುಮಾರ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.

ರಾಯನ ಕೆರೆ ನೀರು ಸಂಸ್ಕರಣ ಘಟಕ: ಉಪ ಲೋಕಾಯುಕ್ತರ ಪ್ರಶಂಸೆ Read More