ಸ್ವದೇಶಿ ಸುರಕ್ಷಿತ ಅಭಿಯಾನ:ಕೆಎಂಪಿಕೆ ಟ್ರಸ್ಟ್ ನಿಂದ ಮಣ್ಣಿನ ದೀಪ ವಿತರಣೆ

ಮೈಸೂರು: ದೀಪಾವಳಿ ಹಬ್ಬದ ಅಂಗವಾಗಿ
ಕೆಎಂಪಿಕೆ ಟ್ರಸ್ಟ್ ವತಿಯಿಂದ ಮಣ್ಣಿನ ದೀಪಗಳನ್ನು ವಿತರಿಸಲಾಯಿತು.

ನಗರದ ದೇವರಾಜ ಮಾರುಕಟ್ಟೆ ಮುಂಭಾಗದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಸ್ವದೇಶಿ ಸುರಕ್ಷಿತ ಅಭಿಯಾನದ ಭಾಗವಾಗಿ ಮಂಗಳವಾರ ಗ್ರಾಹಕರಿಗೆ ಮಣ್ಣಿನ ದೀಪಗಳನ್ನು ವಿತರಿಸಿ ಶುಭ ಕೋರಲಾಯಿತು.

ಈ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಅವರು ಮಾತನಾಡಿ,
ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶದ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಆಟಿಕೆಗಳು, ಪಟಾಕಿಗಳು, ಗೊಂಬೆಗಳು, ಪೆನ್, ಪೆನ್ಸಿಲ್, ಮೊಬೈಲ್ ಸೇರಿದಂತೆ ಎಲ್ಲ ವಲಯಗಳಲ್ಲೂ ಚೀನಾ ಬ್ರಾಂಡ್‌ಗಳು ಮಾರುಕಟ್ಟೆ ಪ್ರವೇಶಿಸಿವೆ. ಇದರ ಪರಿಣಾಮವಾಗಿ ಚನ್ನಪಟ್ಟಣದ ಗೊಂಬೆ, ಇಳಕಲ್, ಮೊಳಕಾಲ್ಮುರು ರೇಷ್ಮೆ ಸೇರಿದಂತೆ ಸ್ವದೇಶಿ ಕುಶಲ ವಸ್ತುಗಳ ತಯಾರಿಕಾ ಘಟಕಗಳು ಮುಚ್ಚಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಆ ಕಾರಣಕ್ಕಾಗಿ ಈ ದೀಪಾವಳಿಯಲ್ಲಿ ಕುಂಬಾರರು ತಯಾರಿಸಿರುವ ಮಣ್ಣಿನ ದೀಪಗಳನ್ನು ಬಳಸಿ, ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡೋಣ ಎಂದು ವಿಕ್ರಮ ಅಯ್ಯಂಗಾರ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್. ಎನ್. ರಾಜೇಶ್, ಚಾಮರಾಜ ಕ್ಷೇತ್ರದ ಬಿಜೆಪಿ ಸಂಚಾಲಕ ಸಚಿನ್ ನಾಯಕ್, ಮಹಾನ್ ಶ್ರೇಯಸ್, ದುರ್ಗಾ ಪ್ರಸಾದ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಸ್ವದೇಶಿ ಸುರಕ್ಷಿತ ಅಭಿಯಾನ:ಕೆಎಂಪಿಕೆ ಟ್ರಸ್ಟ್ ನಿಂದ ಮಣ್ಣಿನ ದೀಪ ವಿತರಣೆ Read More

ಪೌರಕಾರ್ಮಿಕರಿಗೆ ದೀಪ ವಿತರಿಸಿ ಸಂದೀಪ್ ದೀಪಾವಳಿ ಆಚರಣೆ

​ಮೈಸೂರು: ಚಾಮುಂಡಿಪುರಂನ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸಿ. ಸಂದೀಪ್ ಅವರು ವಾರ್ಡ್ ನಂ 55 ರ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ, ಪೌರಕಾರ್ಮಿಕರಿಗೆ ದೀಪಗಳನ್ನು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.

​ಈ ವೇಳೆ ಮಾತನಾಡಿದ ಅವರು,ಯಾವ ಹಬ್ಬವಿದ್ದರೂ ಕೂಡ ನಮ್ಮ ಪೌರಕಾರ್ಮಿಕರು ಮೊದಲು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಅವರು ನಗರವನ್ನು ಸ್ವಚ್ಛಗೊಳಿಸಿ, ಹಬ್ಬದ ವಾತಾವರಣ ಸೃಷ್ಟಿಸಿದ ನಂತರವೇ ತಮ್ಮ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಅವರು ತಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುತ್ತಾರೆ. ಇಂತಹ ನಿಸ್ವಾರ್ಥ ಸೇವಕರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿದ್ದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು.

​ಈ ವಿನೂತನ ಕಾರ್ಯಕ್ರಮಕ್ಕೆ ಶ್ರೀರಾಮ ಗೆಳೆಯರ ಬಳಗದ ಸದಸ್ಯರಾದ ಭಾನುಕುಮಾರ್, ಮಧುಸೂಧನ್, ಪಾರ್ವತಿ, ಸುರೇಶ್ ಸಾಥ್ ನೀಡಿದರು.

ಪೌರಕಾರ್ಮಿಕರಿಗೆ ದೀಪ ವಿತರಿಸಿ ಸಂದೀಪ್ ದೀಪಾವಳಿ ಆಚರಣೆ Read More

ದೀಪಾವಳಿಗೆ ವಿಮಾ ವಿ ರಾಮಪ್ರಸಾದ್ ನೇತೃತ್ವದಲ್ಲಿ ಹಣತೆ ವಿತರಣೆ

ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತ 55ನೇ ವಾರ್ಡಿನಲ್ಲಿ ಮಾ ವಿ ರಾಮಪ್ರಸಾದ್ ಅವರ ನೇತೃತ್ವದಲ್ಲಿ ವಾರ್ಡಿನ ಎಲ್ಲಾ ಮನೆಗಳಿಗೂ ಹಣತೆಗಳನ್ನು ಹಂಚಲಾಯಿತು.

ಆದಷ್ಟು ಶಬ್ದ ಬರುವ ಪಟಾಕಿಯಿಂದ ದೂರವಿರಿ ಹಾಗೂ ಮಕ್ಕಳ ಬಗ್ಗೆ ಹೆಚ್ಚು ಜಾಗೃತರಾಗಿರಿ, ಪಟಾಕಿಯಿಂದ ಎಷ್ಟೋ ಜನ ತಮ್ಮ ಕಣ್ಣುಗಳನ್ನು ಕಳೆದುಕೊಂಡ ಉದಾಹರಣೆ ಗಳು ಇವೆ ಆದ್ದರಿಂದ ಜಾಗೃತರಾಗಿರಬೇಕೆಂದು ಜನರಲ್ಲಿ ಮನವಿ ಮಾಡಲಾಯಿತು.

ನಂತರ ಮಾಾವಿ ರಾಮಪ್ರಸಾದ್ ಅವರ ಪುತ್ರ ಹಾಗೂ ಬಿಜೆಪಿ ಯುವ ಮುಖಂಡರಾದ ಅದ್ವೈತ್ ಜೀವತ್ಸಾ ಅವರು ಪೌರಕಾರ್ಮಿಕರಿಗೆ ಮಣ್ಣಿನ ಹಣತೆಗಳನ್ನು ಕೊಟ್ಟು ಸಿಹಿ ಹಂಚಿ ಪೌರಕಾರ್ಮಿಕರ ಜೊತೆ ದೀಪಾವಳಿಯನ್ನು ಆಚರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಿಮಂಜುನಾಥ್ ,
ಧರ್ಮೇಂದ್ರ ,ಲಕ್ಷ್ಮೀನಾರಾಯಣ್ ,ನಿರಂಜನ್, ಮಧು ,ಸೋಮೇಶ್ ,ಶಿವು ,ಶಂಕರ್, ಕಿರಣ್ ಮುಂತಾದವರು ಹಾಜರಿದ್ದರು.

ದೀಪಾವಳಿಗೆ ವಿಮಾ ವಿ ರಾಮಪ್ರಸಾದ್ ನೇತೃತ್ವದಲ್ಲಿ ಹಣತೆ ವಿತರಣೆ Read More

ದೀಪಾವಳಿ ದಿವಾಳಿ ಯಾಗದಿರಲಿ ಕನ್ನಡ ಪದಬಳಕೆ ಸರಿಯಿರಲಿ:ಅಭಿಯಾನ

ಮೈಸೂರು: ಕರ್ನಾಟಕ ಹಿತರಕ್ಷಣಾ ವೇದಿಕೆ
ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಅಂಗವಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಯಿತು.

ಡಿ ದೇವರಾಜ ಅರಸು ರಸ್ತೆ, ವಿನೋಬ ರಸ್ತೆ, ಶಿವರಾಂಪೇಟೆ ಸುತ್ತಮುತ್ತಲ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ಹೂವನ್ನು ನೀಡಿ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ತಿಳಿ ಹೇಳಲಾಯಿತು.

ಇತ್ತೀಚೆಗೆ ಸ್ಥಳೀಯ ಹಬ್ಬಗಳ ಹೆಸರನ್ನು ಅಪಭ್ರಂಶ ಗೊಳಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ದೀಪಾವಳಿಯನ್ನು ದಿವಾಳಿ ಎಂದು ಶುಭ ಕೋರುವುದು ಹಾಗೆಯೇ ದಸರಾವನ್ನು ದುಸ್ಸೆರಾ ಎಂದು ತಪ್ಪಾಗಿ ಶುಭಕೋರುತ್ತಾ,
ಅನ್ಯ ಭಾಷೆ ಶೈಲಿಯಲ್ಲಿ ಪದಬಳಕೆ ಮಾಡಿ ಶುಭ ಕೋರುವುದು ಖಂಡನೀಯ, ಅದರ ಅರ್ಥವೇ ಬೇರೆ ಇರುತ್ತದೆ.

ಹಾಗಾಗಿ ಕರ್ನಾಟಕ ಹಿತ ರಕ್ಷಣಾ ವೇದಿಕೆ ವತಿಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ನೀಡಿ ಪದಬಳಕೆ ಸರಿಯಾಗಿ ಉಚ್ಛರಿಸುವಂತೆ ಮನವಿ ಮಾಡಲಾಯಿತು.

ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ದೀಪಾವಳಿಯನ್ನು ದಿವಾಳಿಯೆಂದು ಬರೆದು ಶುಭಕೋರುತ್ತಿರುವದನ್ನು ಖಂಡಿಸಿ ಅವರಿಗೆ ತಿಳಿಹೇಳಿ ಕನ್ನಡವನ್ನು ಸರಿಯಾಗಿ ಪ್ರಯೋಗಿಸಿ ಗೌರವಿಸಿ ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ದೀಪಾವಳಿ ದಿವಾಳಿಯಾಗದಿರಲಿ ಎಂದು ಹೇಳಿದರು.

ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಗ್ರಾಹಕರಿಗೆ ಶುಭಾಶಯ ತಿಳಿಸಲು ಹಲವಾರು ಉದ್ದಿಮೆಗಳು ಕನ್ನಡಿಗರಿಗೆ ಉತ್ತರ ಭಾರತದ ಭಾಷೆಯಲ್ಲೇ ದಿವಾಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತವೆ.

ಬ್ಯಾಂಕ್‍ಗಳು ಅದರಲ್ಲೂ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಬ್ಯಾಂಕ್‍ಗಳು ದಿವಾಳಿ ಹಬ್ಬದ ಶುಭಾಶಯಗಳು ಎಂದು ಗ್ರಾಹಕರಿಗೆ ತಿಳಿಸುತ್ತಿರುವುದನ್ನು ನೋಡಿದರೆ ಕನ್ನಡದ ಬಗ್ಗೆ ಇವರಿಗೆಷ್ಟು ಅಭಿಮಾನವಿದೆ ಮಾಹಿತಿಯಿದೆ ಎಂಬುದರ ಬಗ್ಗೆ ಸಂದೇಹ ವ್ಯಕ್ತವಾಗುತ್ತದೆ ಎಂದು ಹೇಳಿದರು.

ಕನ್ನಡದಲ್ಲಿ ದಿವಾಳಿ ಎಂದರೆ ಎಲ್ಲವನ್ನೂ ಕಳೆದುಕೊಳ್ಳುವುದು ಎಂದು ಅರ್ಥ.ದಿವಾಳಿ ಹಬ್ಬ ಎಂದರೆ ಕನ್ನಡಿಗರು ಏನೆಂದು ತಿಳಿದುಕೊಳ್ಳಬೇಕು? ಅದರಲ್ಲೂ ಕನ್ನಡಿಗರು ಹಣ ಇಟ್ಟಿರುವ ಬ್ಯಾಂಕುಗಳೇ ಹೀಗೆ ಹಾರೈಸಿದರೆ ಕನ್ನಡಿಗರಿಗೆ ಪರಿಚಯವಿರುವ ಹೆಸರುಗಳನ್ನೇ ಬಳಸಲು ತೊಂದರೆ ಏನು ?
ಈ ಬಗ್ಗೆ ಕನ್ನಡ ಪ್ರಾಧಿಕಾರವು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಅಭಿಯಾನದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ರವಿಚಂದ್ರ, ನಂಜುಂಡಸ್ವಾಮಿ, ಸಚಿನ್ ನಾಯಕ್, ದಿನೇಶ್, ರಾಕೇಶ್, ಕಾಟೂರು ಶ್ರೀನಿವಾಸ್, ಕಣ್ಣಣ್ಣ ಪಾಲ್ಗೊಂಡಿದ್ದರು.

ದೀಪಾವಳಿ ದಿವಾಳಿ ಯಾಗದಿರಲಿ ಕನ್ನಡ ಪದಬಳಕೆ ಸರಿಯಿರಲಿ:ಅಭಿಯಾನ Read More

ದೀಪಾವಳಿ ಸಂಭ್ರಮದ ವೇಳೆ ಎಚ್ಚರಿಕೆ ಇರಲಿ-ಕೆ.ಎಂ. ಮುನಿಗೋಪಾಲ್‌ ರಾಜು

ಮೈಸೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಮನವಿ ಮಾಡಿದೆ. 

ದೀಪಾವಳಿ ಹಬ್ಬದ ಆಚರಣೆ ವೇಳೆ ಅನೇಕರು ತಮ್ಮ ಮನೆ ಹಾಗೂ ಅಂಗಡಿಗಳಿಗೆ ವಿದ್ಯುತ್‌ ದೀಪಗಳಿಂದ ಅಲಂಕರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೀರಿಯಲ್ ಲೈಟ್‌ಗಳನ್ನು ಮತ್ತು ವಿದ್ಯುತ್ ತಂತಿಗಳನ್ನು ನೀರಿನಿಂದ ದೂರವಿರಿಸಬೇಕು. ಪ್ಲಗ್ ಪಾಯಿಂಟ್‌ಗಳಲ್ಲಿ ಅತಿಯಾದ ಲೋಡ್‌ ಹಾಕಬಾರದು, ಇದು ಶಾರ್ಟ್ ಸರ್ಕ್ಯೂಟ್‌ ಉಂಟಾಗುವ ಸಾಧ್ಯತೆ ಇರಲಿದೆ. ಹಣತೆ, ದೀಪಗಳನ್ನು ಕೇಬಲ್‌ಗಳು, ವಿದ್ಯುತ್‌ ತಂತಿಗಳು ಹಾಗೂ ಪ್ಲಗ್‌ಗಳಿಂದ ದೂರವಿರಿಸಿ ಎಂದು ಸಲಹೆ ನೀಡಿದೆ.

ಪಟಾಕಿ ಹಚ್ಚುವ ಸಂದರ್ಭದಲ್ಲಿ ವಿದ್ಯುತ್‌ ಕಂಬಗಳು ಅಥವಾ ಟ್ರಾನ್ಸ್‌ ಫಾರ್ಮರ್‌ಗಳು ಇರುವ ಸ್ಥಳಗಳ ಬಗ್ಗೆ ನಿಗಾವಹಿಸಿ ಮತ್ತು ಇಂತಹ ಸ್ಥಳಗಳಲ್ಲಿ ಪಟಾಕಿ ಹಚ್ಚುವುದನ್ನು ತಪ್ಪಿಸಿ.

ವಿದ್ಯುತ್ ಉಪಕರಣಗಳಿಂದ ಮಕ್ಕಳನ್ನು ದೂರವಿರಿಸಿ ಹಾಗೂ ಹಿರಿಯರ ಸಮ್ಮುಖದಲ್ಲೇ ಪಟಾಕಿ ಹಚ್ಚುವ ಹಾಗೂ ದೀಪಗಳನ್ನು ಇರಿಸುವಂತೆ ನೋಡಿಕೊಳ್ಳಿ ಎಂದು ತಿಳಿಸಿದೆ.

ವಿದ್ಯುತ್‌ ಸಮಸ್ಯೆಗಳು ಅಥವಾ ಅವಘಡಗಳು ಸಂಭವಿಸಿದಲ್ಲಿ ಗ್ರಾಹಕ ಸಹಾಯವಾಣಿ 1912ಗೆ ಮಾಹಿತಿ ನೀಡಬೇಕೆಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸೆಸ್ಕ್‌ ವತಿಯಿಂದ ನೀಡಿರುವ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸುವಂತೆ ಅವರು ಮನವಿ ಮಾಡಿದ್ದಾರೆ.

ದೀಪಾವಳಿ ಸಂಭ್ರಮದ ವೇಳೆ ಎಚ್ಚರಿಕೆ ಇರಲಿ-ಕೆ.ಎಂ. ಮುನಿಗೋಪಾಲ್‌ ರಾಜು Read More