ತನ್ನದೆ ಕುಟುಂಬದ ನಾಲ್ವರನ್ನು ಕೋಂದಿದ್ದ ಪಾಪಿ ಅಪರಾಧಿಗೆ ಮರಣದಂಡನೆ

ಮೈಸೂರು: ಹೆಂಡತಿ ಮಕ್ಕಳು ಮತ್ತು ತಾಯಿಯನ್ನೂ ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.

ಸರಗೂರು ತಾಲ್ಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ಎಂಬ ವ್ಯಕ್ತಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ಮಣಿಕಂಠ ವಿಶಿಷ್ಟ ಚೇತನನಾಗಿದ್ದು, 2014 ಮಾರ್ಚ್ ತಿಂಗಳಲ್ಲಿ ಗಂಗೆ ಎಂಬಾಕೆಯನ್ನು ವಿವಾಹವಾಗಿದ್ದ. ಆತನಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದುವರೆ ವರ್ಷದ ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಅಲ್ಲದೆ ಆತನ ಪತ್ನಿ 9 ತಿಂಗಳ ಗರ್ಭಿಣಿಯಾಗಿದ್ದು ಆಕೆಯ ಮೇಲೆ ಅನುಮಾನಪಟ್ಟು ಪದೇ ಪದೇ ಜಗಳವಾಡುತ್ತಿದ್ದ,ಆಗ ಆತನ ತಾಯಿ ಕೆಂಪಾಜಮ್ಮ ಸಮಾಧಾನ ಮಾಡಿದಾಗೆಲ್ಲಾ ಆಕೆಯೊಂದಿಗೂ ಜಗಳವಾಡುತ್ತಿದ್ದ.

28.04.2021 ರಂದು ಸಂಜೆ 6 ಗಂಟೆ ಸಮಯದಲ್ಲಿ ಆರೋಪಿ ಮಣಿಕಂಠಸ್ವಾಮಿ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಆಕೆಯೊಂದಿಗೆ ಮತ್ತು ತನ್ನ ತಾಯಿ ಕೆಂಪಾಜಮ್ಮನೊಂದಿಗೆ ಜೋರು ಗಲಾಟೆ ಮಾಡಿದ್ದ.

ನಂತರ ಅದೇ ದಿನ ರಾತ್ರಿ 9 ಗಂಟೆಗೆ ಮನೆಗೆ ಬಂದು ಮಧ್ಯರಾತ್ರಿ 12 ಗಂಟೆ ತನಕ ಟಿವಿ ನೋಡಿ ಬೆಳಗಿನ ಜಾವ 4 ಗಂಟೆಯಲ್ಲಿ ಎಲ್ಲರೂ ಮಲಗಿದ್ದಾಗ ತಾನು ನಡೆದಾಡಲು ಬಳಸುತ್ತಿದ್ದ ಕಬ್ಬಿಣದ ಊರುಗೋಲಿನಿಂದ ಗರ್ಭಣಿ ಪತ್ನಿ ಮತ್ತು ತಾಯಿ ಕೆಂಪಾಜಮ್ಮ ಹಾಗೂ ನಾಲ್ಕು ವರ್ಷದ ಮಗ ಸಾಮ್ರಾಟ್ ತಲೆ, ಮುಖಕ್ಕೆ ಬಲವಾಗಿ ಹೊಡೆದು ಕೊಂದು ನಂತರ ಇನ್ನೊಬ್ಬ ಒಂದುವರೆ ವರ್ಷದ ಮಗ ರೋಹಿತ್ ನನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದ.

ಜೊತೆಗೆ ತನ್ನ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣವಾಗಿದ್ದ.

ಈ‌ ಸಂಬಂಧ ಸರಗೂರು ಪೊಲೀಸರು ಎಫ್ ಐ ಆರ್ ತಯಾರಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಐದನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಅವರು
ಅಭಿಯೋಜಕರು ಆರೋಪಿಯ ವಿರುದ್ಧ ಆಪಾದಿಸಲಾದ ಆರೋಪವನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆಂದು‌ ತೀರ್ಪು ನೀಡಿ ಅಪರಾಧಿ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ.

ತನ್ನದೆ ಕುಟುಂಬದ ನಾಲ್ವರನ್ನು ಕೋಂದಿದ್ದ ಪಾಪಿ ಅಪರಾಧಿಗೆ ಮರಣದಂಡನೆ Read More