ಬೆಂಗಳೂರು: ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮುಸುಕಿನ ಗುದ್ದಾಟದಲ್ಲಿ ಬೆಂಗಳೂರಿಗೆ ಮತ್ತೊಮ್ಮೆ ಅನ್ಯಾಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.
ಜಿಬಿಎ ಸಭೆಯಲ್ಲಿ ಅನುಮೋದನೆಗೊಂಡಿದ್ದ ಬಜೆಟ್ ನಲ್ಲಿ ಅರ್ಧದಷ್ಟು ಹಣವನ್ನ ನಗರಾಭಿವೃದ್ಧಿ ಇಲಾಖೆ ಕಡಿತಗೊಳಿಸಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಜಿಬಿಎ ಸಭೆಯಲ್ಲಿ ಅನುಮೋದನೆಗೊಂಡಿದ್ದ ಬಜೆಟ್ ಅನ್ನೇ ಕೊಡಿಸಲು ಆಗದ ನಿಮಗೆ ಕೇಂದ್ರ ಸರ್ಕಾರವನ್ನ ಪ್ರಶ್ನಿಸುವ ಯಾವ ನೈತಿಕತೆ ಇದೆ ಎಂದು ಟ್ವೀಟ್ ಮಾಡಿ ಅಶೋಕ್ ಪ್ರಶ್ನಿಸಿದ್ದಾರೆ.
ನಿಮಗೆ ನಿಜವಾಗಿಯೂ ಬೆಂಗಳೂರಿನ ಬಗ್ಗೆ ಬದ್ಧತೆ ಇದ್ದರೆ, ಪೂರ್ತಿ ಅನುದಾನವನ್ನು ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರು: ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವತಿಯಿಂದ ವಿವಿಧ ಮುಖಂಡರು ಕೃತಜ್ಞತೆ ಸಲ್ಲಿಸಿದರು.
ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಜನತೆಯ ಒಳಿತಿಗಾಗಿ ನಂದಿನಿ ಬಡಾವಣೆಯಿಂದ ನಾಗಮಂಗಲಕ್ಕೆ ನೇರ ಬಸ್ ಸೌಕರ್ಯ ಕಲ್ಪಿಸಿದ ಕಾರಣ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎಸ್ ಕೇಶವಮೂರ್ತಿ, ಕ್ಷೇತ್ರದ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ ಜಿ ಸುಧೀಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಬ್ಲಾಕ್ ಅಧ್ಯಕ್ಷ ಪರಿಸರ ರಾಮಕೃಷ್ಣ, ಮುಖಂಡರಾದ ಎಂ ಕುಮಾರ್ ಗೌಡ, ಆನಂದ ಹಾಗೂ ಅನುಷ್ಠಾನ ಸಮಿತಿಯ ಎಲ್ಲ ಸದಸ್ಯರು ಹಾಜರಿದ್ದರು.
ಕಬಿನಿ: ರಾಜ್ಯದ ಅಣೆಕಟ್ಟೆಗಳ ಸುರಕ್ಷತೆ ಕುರಿತು ಸರ್ಕಾರ ತಾಂತ್ರಿಕ ಸಮಿತಿ ರಚಿಸಿದ್ದು,ಅದರ ವರದಿ ಬಂದ ನಂತರ ಅಗತ್ಯ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಬಿನಿ ಅಣೆಕಟ್ಟು ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕೆಆರ್ ಎಸ್ ಅಣೆಕಟ್ಟಿನ ನಂತರ ಇಂದು ಕಬಿನಿಯಲ್ಲಿ ಬಾಗಿನ ಅರ್ಪಣೆ ಮಾಡಿದ್ದೇವೆ, ಎರಡು ವರ್ಷ ಅಣೆಕಟ್ಟು ಭರ್ತಿ ಆಗಿರಲಿಲ್ಲ. ಈ ವರ್ಷ ತುಂಬಿದೆ. ಕಬಿನಿಯಿಂದ ನಮಗೆ ಕಷ್ಟ ಕಾಲದಲ್ಲೂ ಸಹಾಯವಾಗುತ್ತಿದೆ ಎಂದು ಹೇಳಿದರು.
ಈ ಪ್ರದೇಶ ವಿಸ್ತರಣೆ ಮಾಡಬೇಕು ಎಂದು ನಮ್ಮ ಶಾಸಕರು ಪ್ರಸ್ತಾವನೆ ನೀಡಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 35 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದೇವೆ. ಈ ಭಾಗದಲ್ಲಿ 88 ಕೋಟಿ ಮೊತ್ತದ ಹನಿ ನೀರಾವರಿ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ತುಂಗಭದ್ರಾ ಅಣೆಕಟ್ಟು ಗೇಟ್ ದುರಸ್ತಿಯಾದ ಬಳಿಕ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆ ವಿಚಾರದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಕೆಶಿ ಹೇಳಿದರು.
ಕಬಿನಿ ಉತ್ಸವ ಮಾಡುವ ಬಗ್ಗೆ ಒತ್ತಾಯ ಇದೆಯೆ ಎಂಬ ಪ್ರಶ್ನೆಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಸಚಿವರು ಹಾಗೂ ಇತರರೊಂದಿಗೆ ಚರ್ಚೆ ಮಾಡುತ್ತೇನೆ. ಈ ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮ ಆಕರ್ಷಣೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.
ಬಟಾನಿಕಲ್ ಗಾರ್ಡನ್ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿದೆಯಲ್ಲ ಎಂದು ಕೇಳಿದಾಗ, ಇದಕ್ಕೆ ಬಂಡವಾಳ ಹೂಡಿಕೆ ಮಾಡುವವರು ಮುಂದೆ ಬರಬೇಕು. ನಮ್ಮ ಆದ್ಯತೆ ಇರುವುದು ನೀರಿನ ಸಮರ್ಪಕ ಬಳಕೆ ಹಾಗೂ ಅಣೆಕಟ್ಟು ಸುರಕ್ಷತೆ ಬಗ್ಗೆ ಇದೆ ಎಂದು ಡಿಸಿಎಂ ತಿಳಿಸಿದರು.
ದಿಢೀರನೆ ದೆಹಲಿ ಪ್ರವಾಸ ಹೋಗಿದ್ದೀರಿ ಎಂಬ ಮತ್ತೊಂದು ಪ್ರಶ್ನೆಗೆ,ನಾನು ಸಿಎಂಗೆ ಮಾಹಿತಿ ನೀಡಿಯೇ ಕಾರ್ಯಕ್ರಮದಿಂದ ಹೊರಟೆ. ಮಾರ್ಗ ಮಧ್ಯದಲ್ಲೇ ನನ್ನ ಬೆಂಗಾವಲು ವಾಹನ ಅಪಘಾತಕ್ಕೀಡಾಯಿತು. ತಾಯಿ ಚಾಮುಂಡೇಶ್ವರಿ ಕೃಪೆ ಯಾರಿಗೂ ಅಪಾಯವಾಗಿಲ್ಲ, ವಕೀಲರ ಜೊತೆ ಸಭೆ ನಿಗದಿಯಾದ ಕಾರಣ, ನಾನು 7.30ಕ್ಕೆ ತೆರಳಿ, 9.30ಕ್ಕೆ ವಾಪಸ್ ಬಂದಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದೇನೆ. ನನ್ನ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೋಗಿದ್ದೆ, ಅದನ್ನು ಮುಗಿಸಿಕೊಂಡು ಬಂದಿದ್ದೇನೆ ಇದರ ಹೊರತಾಗಿ ಯಾವುದೇ ರಾಜಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ,ಬಿಜೆಪಿಯವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ, ನಾನು ಹೆಚ್ಚು ಬಲಿಷ್ಠವಾಗಿರುವುದರಿಂದ ನನ್ನ ಮೇಲೆ ಪ್ರೀತಿ ಜಾಸ್ತಿ ಎಂದು ವ್ಯಂಗ್ಯವಾಡಿದರು.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ 11 ಜನ ಅಭಿಮಾನಿಗಳ ಮರಣದ ಹೊಣೆ ಹೊತ್ತು ಸಿಎಂ,ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಆಮ್ ಆದ್ಮಿ ಪಕ್ಷದಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸಿಎಂ,ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಲಾಯಿತು.
ಈ ವೇಳೆಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ನಾಚಿಕೆಗೇಡಿನ, ಬಂಡತನದ ನಡೆಯಿಂದಾಗಿ 11 ಮಂದಿ ಅಮಾಯಕ ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ನಿಸ್ಸಹಾಯಕ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ಕಂಪನಿಯ ನೌಕರರುಗಳನ್ನು ಬಂಧಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಕುತಂತ್ರ ನಡೆಸುತ್ತಿದೆ,ಅಮಾಯಕರ ಈ ಸಾವು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದರು.
ಕೂಡಲೇ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಿ ತೊಲಗಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.
ಈಗಾಗಲೇ ಆಮ್ ಆದ್ಮಿ ಪಕ್ಷದ ಕಾನೂನು ಘಟಕವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ ಪರಿಣಾಮವಾಗಿ ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲು ಹಾಗೂ ಪ್ರಕರಣದಿಂದ ನುಣಿಚಿಕೊಳ್ಳಲು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಅಂದಾಜುಂದಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಜನರು ಸೂಕ್ಷ್ಮ ಕಣ್ಣುಗಳಿಂದ ಎಲ್ಲವನ್ನು ಗಮನಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಮಾತನಾಡಿ ನಮ್ಮ ಪಕ್ಷ ತಪ್ಪಿತಸ್ಥರಾಗಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ತನಕ ಸುದೀರ್ಘ ಹೋರಾಟವನ್ನು ನಡೆಸಲಿದೆ ಎಂದು ತಿಳಿಸಿದರು.
ಮೈಸೂರು,ಮಾ.6: ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರ ಬಗ್ಗೆ ನಟ್ಟು- ಬೋಲ್ಟು ಪದ ಉಪಯೋಗಿಸಿ ಅವಮಾನಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯ ಎಂದು ಬಿಜೆಪಿ ಕಲೆ ಮತ್ತು ಸಂಸ್ಕೃತಿಕ ಪ್ರಕೋಷ್ಠ ರಾಜ್ಯ ಸಂಚಾಲಕಿ ಡಾ.ರೂಪ ಅಯ್ಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಸಿನಿಮೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ- ನಟಿಯರ ಕುರಿತು ಮಾಡಿದ ಭಾಷಣದ ವೇಳೆ ಕಲಾವಿದರ ನಟ್ಟು- ಬೋಲ್ಟು ಸರಿ ಮಾಡ್ತೇನೆ ಎಂಬ ಅಸಡ್ಡೆ ಹೇಳಿಕೆ ನೀಡಿರುವ ಡಿ.ಕೆ ಶಿವಕುಮಾರ್ ಅವರು ಕೂಡಲೇ ಚಿತ್ರರಂಗದವರ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.
ಚಿತ್ರರಂಗವದವರಿಗೆ ಅವರದ್ದೇ ಅದ ಗೌರವ, ಸ್ಥಾನಮಾನಗಳಿವೆ.ಅದರಲ್ಲೂ ನಟ- ನಟಿಯರು ಸೇರಿದಂತೆ ತಂತ್ರಜ್ಞರು,ಕಲಾವಿದರು ಹೀಗೆ ಸಾವಿರಾರು ಮಂದಿ ಚಿತ್ರರಂಗವನ್ನು ನಂಬಿ ಬದುಕುತ್ತಿದ್ದಾರೆ.
ಆದರೆ ಅಂತವರಿಗೆ ಒಂದು ಸರ್ಕಾರಿ ಆಸ್ಪತ್ರೆಗೆ ಹೋದರೆ ಸೂಕ್ತ ಚಿಕಿತ್ಸೆ ಸಿಗುವುದಿಲ್ಲಾ,ಅಲ್ಲದೇ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ, ಹಗಲಿರುಳೆನ್ನದೇ ದುಡಿಯುವ ಚಿತ್ರರಂಗವದ ಬಗ್ಗೆ ಮಾತನಾಡುವ ನೈತಿಕತೆ ಡಿಕೆಶಿ ಅವರಿಗಿಲ್ಲ ಎಂದು ರೂಪಾ ಅಯ್ಯರ್ ಕುಟುಕಿದ್ದಾರೆ.
ಒಂದು ಸಿನಿಮಾ ಮಾಡಬೇಕಾದರೇ ಎಷ್ಟು ಕಷ್ಟಪಡಬೇಕಿದೆ.ಚಿತ್ರಕ್ಕೆ ಸಿಗುವ ಸಬ್ಸಿಡಿಗೆ ವರ್ಷಾನುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಚಿತ್ರಕ್ಕೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆ ಇದೆ ಎಂದು ನೊಂದು ನುಡಿದಿದ್ದಾರೆ.
ಅಣ್ಣಾವ್ರು ಡಾ.ರಾಜ್ ಕುಮಾರ್, ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಅವರುಗಳ ಕಾಲದಿಂದಲೂ ಕನ್ನಡ ಚಿತ್ರರಂಗಕ್ಕೆ,ಕನ್ನಡ ಕಲಾವಿದರಿಗೆ ಅವರದ್ದೇ ಆದ ಸ್ಥಾನ ಮಾನ,ಗೌರವವಿದೆ.ಇದನ್ನು ಅರಿಯದೇ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಚಿತ್ರರಂಗದವರನ್ನು ಅವರ ಪಾಡಿಗೆ ಬಿಡಿ.ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿ ನಿಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡಿ ಹೊರ ರಾಜ್ಯ, ದೇಶಗಳಿಂದ ಇತರರನ್ನು ಕರೆಸಿ ಹೊಗಳಿ ಸನ್ಮಾನಿಸುವುದನ್ನು ಬಿಟ್ಟು, ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರಿಗೆ ಮನ್ನಣೆ ಕೊಟ್ಟು,ಪ್ರೋತ್ಸಾಹಿಸಿ ಅದು ಆಗಿಲ್ಲಾಂದರೆ ಸುಮ್ಮನಿದ್ದುಬಿಡಿ. ಅದನ್ನು ಬಿಟ್ಟು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಕಲಾವಿದರನ್ನು ಅವಮಾನಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಕಲಾವಿದರ ಬಗ್ಗೆ ಮಾತನಾಡುವುದು ನಿಜಕ್ಕೂ ಅವರ ಹುದ್ದೆಗೆ ಶೋಭೆ ತರುವಂತದಲ್ಲ.ರಾಜಕೀಯವಾಗಿ ಅವರ ವ್ಯಾಪ್ತಿಯಲ್ಲಿ ಏನು ಬೇಕಾದರೂ ಮಾತನಾಡಿಕೊಳ್ಳಲಿ.ಅದನ್ನು ಬಿಟ್ಟು ಬಹಿರಂಗವಾಗಿ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದನ್ನು ಈ ಕೂಡಲೇ ನಿಲ್ಲಿಸಲಿ ಎಂದು ರೂಪ ಅಯ್ಯರ್ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ: ವಕ್ಫ್ ವಿವಾದ ಬಿಜೆಪಿ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜ್ಯದ ಆಸ್ತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವಕ್ಫ್ ಆಸ್ತಿ ವಿಚಾರವಾಗಿ ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ 2019ರಿಂದ ಮೊದಲು ನೋಟೀಸ್ ಕೊಟ್ಟಿದ್ದು ಬಿಜೆಪಿ,ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾವು ಆಗಿರುವ ತಪ್ಪುಗಳನ್ನು ಸರಿಪಡಿಸಿ ರೈತರನ್ನು ರಕ್ಷಣೆ ಮಾಡುತ್ತೇವೆ. ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಜೆಪಿಸಿ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಭೇಟಿ ನೀಡುತ್ತಿದ್ದಾರೆ. ಈ ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ದಸರಾ ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ಗಳಿಗೆ ಶಿಲ್ಪಿ ರಾಜೇಶ್ ಅವರು ಪಂಚಲೋಹದ ವಿಗ್ರಹಗಳನ್ನು ಉಡುಗೊರೆ ನೀಡಲಿದ್ದಾರೆ.
ಮೈಸೂರಿನ ಗೌರಿಶಂಕರ ನಂದಿ ಧ್ವಜ ಸಂಘದಲ್ಲಿ ಅನೇಕ ವರ್ಷಗಳಿಂದ ಶಿಲ್ಪಿಯಾಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ ಶಿಲ್ಪಿ ಅವರು ತಮ್ಮ ತಂದೆಯವರ ಕಾಲದಿಂದ ನಡೆದುಕೊಂಡು ಬಂದಿರುವ ವಿಗ್ರಹ ಉಡುಗೊರೆ ಕೊಡುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಅದರಂತೆ ಈ ಬಾರಿ ಕೂಡ ಶಿಲ್ಪಿ ರಾಜೇಶ್ ಅವರು ರಾಜ್ಯದ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಪಂಚಲೋಹದ ಕಾಡಸಿದ್ದೇಶ್ವರ ವಿಗ್ರಹವನ್ನು ಕೊಟ್ಟು ಶುಭ ಲಗ್ನದಲ್ಲಿ ಗೌರವಿಸಲಿದ್ದಾರೆ.
ವಿಶೇಷವೆಂದರೆ ರಾಜೇಶ್ ಅವರೇ ಈ ಎರಡೂ ವಿಗ್ರಹಗಳನ್ನು ಮಾಡಿದ್ದಾರೆ.
ನಮ್ಮ ಮೈಸೂರಿನ ಶಿಲ್ಪಿ ರಾಜೇಶ್ ಅವರಿಗೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.