ಹುಣಸೂರು: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸ್ಥಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಪ್ರತಿಮೆ ಅತ್ಯಂತ ಕೆಟ್ಟದಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಪದಾಧಿಕಾರಿಗಳು ಕಿಡಿಕಾರಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಅವರು ಪ್ರತಿಮೆಯನ್ನು ಕಂಡು ತೀರ ಬೇಸರ ವ್ಯಕ್ತಪಡಿಸಿದ್ದಾರೆ.
ಯಾವುದೇ ಆಂಗಲ್ ನಿಂದ ನೋಡಿದರೂ ಈ ಪ್ರತಿಮೆ ದೇವರಾಜ ಅರಸು ಅವರಿಗೆ ಹೋಲಿಕೆಯೇ ಆಗುವುದಿಲ್ಲ. ಯಾರನ್ನೋ ನೋಡಿದಂತಾಗುತ್ತದೆ, ಅತ್ಯಂತ ಕೆಟ್ಟದಾಗಿ ಕೆತ್ತಲಾಗಿದೆ. ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೆ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನಲ್ಲಿ ಡಿ ದೇವರಾಜ ಅರಸು ಅವರ ಪ್ರತಿಮೆ ಸ್ಥಾಪಿಸಲು ಹಣ ಬಿಡುಗಡೆ ಮಾಡಿದ್ದರು ಎಂಬ ಮಾಹಿತಿ ಇದೆ. ಅದು ಸರಿಯಾದುದೇ ಆಗಿದೆ. ಆದರೆ ಇಂತಹ ಕೆಟ್ಟ ವಿಗ್ರಹವನ್ನು ಏಕೆ ಮಾಡಬೇಕಿತ್ತು ಈ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಹುಣಸೂರಿನಲ್ಲಿ ಸ್ಥಾಪಿಸಲಾಗಿರುವ ಡಿ ದೇವರಾಜ ಅರಸು ಅವರ ಪ್ರತಿಮೆಯನ್ನು ನೋಡಿ ಬನ್ನಿ ಅದು ಅರಸರೆ ಎದ್ದು ಬಂದಂತೆ ಕಾಣುತ್ತಿದೆ, ಆ ರೀತಿಯ ಪ್ರತಿಮೆ ಸ್ಥಾಪಿಸುವುದು ಬಿಟ್ಟು ಇಂತಹ ಕೆಟ್ಟ ಪ್ರತಿಮೆಯನ್ನು ಏಕೆ ಮಾಡಬೇಕಿತ್ತು ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.
ಹೀಗೆ ಸುಖಾಸುಮ್ಮನೆ ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ ಪ್ರತಿಮೆ ಸ್ಥಾಪನೆಗೆ ಸುಮಾರು 60 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ, ಈ ರೀತಿ ಜನರ ತೆರಿಗೆ ಹಣವನ್ನು ಏಕೆ ಪೋಲು ಮಾಡಬೇಕು ಎಂದು ಚೆಲುವರಾಜು ಕಿಡಿ ಕಾರಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗ ಸ್ಥಾಪಿಸಿರುವ ಅರಸು ಅವರ ಪ್ರತಿಮೆಯನ್ನು ಕೂಡಲೇ ತೆಗೆದುಹಾಕಿ ಹೊಸದಾಗಿ ದೇವರಾಜ ಅರಸು ಅವರಿಗೆ ಹೋಲಿಕೆಯಾಗುವಂತಹ ಪ್ರತಿಮೆಯನ್ನೇ ಸ್ಥಾಪನೆ ಮಾಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮೈಸೂರು, ನ.2: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪ್ರತಿಮೆಯನ್ನು ಶೀಘ್ರ ಅನಾವರಣಗೊಳಿಸಬೇಕೆಂದು ಒತ್ತಾಯಿಸಿ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಬಿಜೆಪಿ ನಗರ ಅಧ್ಯಕ್ಷ ಮತ್ತು ಮಾಜಿ ಶಾಸಕರು ಎಲ್.ನಾಗೇಂದ್ರ, ಮುಖಂಡರಾದ, ಹೇಮಾ ನಂದೀಶ್,ರಘು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು,ಅರಸು ಅಭಿಮಾನುಗಳು ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿಗಳು ಡಿ.ದೇವರಾಜ ಅರಸು ಅವರು ಮೈಸೂರು ಸೇರಿದಂತೆ ರಾಜ್ಯಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ,ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇಟ್ಟಿದ್ದೇವೆ.ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಸು ಪ್ರತಿಮೆ ಶೀಘ್ರ ಅನಾವರಣಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಅರಸು ಭಾವಚಿತ್ರಗಳು ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ಒಂದು ವೇಳೆ ಸರ್ಕಾರ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ನಾವೇ ಅನಾವರಣ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಮೈಸೂರು: ಲೋಕಾಯುಕ್ತ ಸಂಸ್ಥೆಗೆ ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಆಸ್ತಿ ವಿವರ ಲಭ್ಯವಾಗುವಂತಹ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿ,ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರತಿವರ್ಷ ಆಸ್ತಿ ವಿವರವನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಹಶೀಲ್ದಾರ್ ರೇಖಾ ರವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪ್ರತಿ ವರ್ಷ ಆಸ್ತಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ನಿಯಮ ಇದೆ. ಅಧಿಕಾರಿಗಳು, ನೌಕರರ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಲೋಕಾಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಒತ್ತಾಯಿಸಿದರು.
ಮದ್ರಾಸ್ ಹೈಕೊಟ್೯ ನ್ಯಾಯ ಮೂರ್ತಿ ಸಿ.ವಿ.ಕಾರ್ತಿಕೇಯನ್ ಅವರು ಸರ್ಕಾರಿ ನೌಕರರ ಆಸ್ತಿ ವಿವರ ಸಾರ್ವಜನಿಕರಿಗೆ ಮಾಹಿತಿ ಇರಬೇಕೆಂದು ತೀರ್ಪು ನೀಡಿದ್ದಾರೆ. ಸರ್ಕಾರಿ ಉದ್ಯೋಗಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಲಭ್ಯವಾಗುವಂತೆ ವ್ಯವಸ್ಥೆಯನ್ನು ರೂಪಿಸಿ ಮಾರ್ಚ್ ಅಂತ್ಯದೊಳಗೆ ವಿವರ ಅಪಲೋಡ್ ಮಾಡಬೇಕು,ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಆಸ್ತಿ ಬಹಿರಂಗ ಅಗತ್ಯವಿದೆ, ಸರಕಾರಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು ಎಂಬ ಸದುದ್ದೇಶದಿಂದ ನೌಕರರು ತಮ್ಮ ಆಸ್ತಿ ವಿವರ ನೀಡುವುದು ಕಡ್ಡಾಯವಾಗಿದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ಮನವಿ ಮಾಡಿದರೂ ಆಯಾ ಇಲಾಖೆಯ ಮುಖ್ಯಸ್ಥರು ಆ ಕುರಿತ ಮಾಹಿತಿ ನೀಡದೇ ಗೌಪ್ಯವಾಗಿರಿಸಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಅಮಿತ್ ಕುಮಾರ್ ಹಾಜರಿದ್ದರು.
ಮೈಸೂರು,ಮಾ.5: ರಾಜ್ಯ ಸರ್ಕಾರ ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯ ನಿಯಮವನ್ನು ತಿದ್ದುಪಡಿ ಮಾಡಲು ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ ನಡೆಸಿತು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ,ರಾಜ್ಯಪಾಲರು,ಕೃಷಿ ಮಾತುಕಟ್ಟೆ ಸಚಿವರು,ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ರವಾನಿಸಲಾಯಿತು.
ಈ ವೇಳೆ ತೇಜೇಶ್ ಲೋಕೇಶ್ ಗೌಡ ಮಾತನಾಡಿ, 1965-66ರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯ ನಿಯಮವನ್ನು ಪ್ರಸ್ತುತ ಅಧಿವೇಶನದಲ್ಲಿ ತರಾತುರಿಯಲ್ಲಿ ತಿದ್ದುಪಡಿ ಮಾಡಲು ಹೊರಟಿರುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ರೈತರಿಗೆ ಹಾಗೂ ಸಗಟು ಮಾರಾಟಗಾರರಿಗೆ ಅನುಕೂಲವಾಗಿರುವ ಪ್ರಸ್ತುತ ಚಾಲ್ತಿಯಲ್ಲಿರುವ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬಾರದೆಂದು ಒತ್ತಾಯಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇರುವುದು ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲಿ ಹಾಗೂ ಸಗಟು ಅಂದರೆ ಹೋಲ್ ಸೇಲ್ ಮಾರಾಟಗಾರರಿಗೆ, ಅದರಲ್ಲೂ ವಿಶೇಷವಾಗಿ, ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ತಂದು ಇಲ್ಲಿ ಸಗಟು ಮಾರಾಟ ಮಾಡಲು.ಆದರೆ ಇಲ್ಲಿ ತಂಬಾಕು ಉತ್ಪನ್ನ ಗಳು, ಕೊಕೊಕೋಲಾ ಮತ್ತಿತರ ಕೂಲ್ ಡ್ರಿಂಕ್ಸ್ ಮಾರಾಟ ಮಾಡಲಾಗುತ್ತಿದೆ.ಇದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ದೂರಿದರು.
ಆದರೆ ಈಗ ನಿವೇಶನ ಪಡೆದ ವ್ಯಾಪಾರಿಗಳು ಎಪಿಎಂಸಿ ಇಲಾಖೆಯ ನಕ್ಷೆ ,ಪ್ಲಾನ್, ಕಾಯ್ದೆ, ನಿಯಮದ ಆಶೋತ್ತರಗಳಿಗೆ ವಿರುದ್ಧವಾಗಿ, ನಿವೇಶನವನ್ನು ಹಲವಾರು ಭಾಗಗಳನ್ನಾಗಿ ವಿಂಗಡಿಸಿ, ಮಳಿಗೆಗಳನ್ನು ನಿರ್ಮಿಸಿ ಅಧಿಸೂಚಿತವಲ್ಲದ ವ್ಯಾಪಾರ ವಹಿವಾಟು ನಡೆಸಲು, ಕಾನೂನು ಬಾಹಿರವಾಗಿ ಬಾಡಿಗೆಗೆ ನೀಡಿರುವುದು ಕಂಡುಬಂದಿದೆ ಎಂದು ಹೇಳಿದರು.
ಎಪಿಎಂಸಿ ಲೈಸೆನ್ಸ್ ಹೊಂದಿರುವ ವ್ಯಾಪಾರಿಯು ಸತತವಾಗಿ ಮೂರು ವರ್ಷ ಗಳು ವ್ಯಾಪಾರ, ವಹಿವಾಟು ನಡೆಸದೆ ಹಾಗೂ ಆರ್‌ಎಂಸಿ ಶುಲ್ಕ (ಸೆಸ್) ಪಾವತಿಸದೆ ಇದ್ದಲ್ಲಿ, ಎಪಿಎಂಸಿಯು ವ್ಯಾಪಾರಿಗೆ ನೀಡಿರುವ ಲೈಸೆನ್ಸ್ ರದ್ದುಪಡಿಸಿ ನಿವೇಶನದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಪೂರ್ಣ ಅಧಿಕಾರ ಹೊಂದಿದೆ ಎಂದು ಗುತ್ತಿಗೆಯ ಕರಾರು ಒಪ್ಪಂದ ಪತ್ರದಲ್ಲಿ ತಿಳಿಸಿರುತ್ತದೆ.
ಮೈಸೂರಿನ ಸ್ಥಳೀಯ ರೈತರ ಭೂಮಿಯನ್ನು ವಶಪಡಿಸಿಕೊಂಡು ಇಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆಯಾಗಿದೆ. ಈಗ ನೋಡಿದರೆ ಸ್ಥಳೀಯ ಸಗಟು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡದೆ, ಲಕ್ಷಾಂತರ ರೂ ಲಂಚ ನೀಡಿರುವ ಹಾಗೂ ಜ್ಯೇಷ್ಠತೆ ಹೊಂದಿಲ್ಲದವರಿಗೆ ಅಕ್ರಮವಾಗಿ, ಚಿಲ್ಲರೆ ದಿನಸಿ ವ್ಯಾಪಾರಿಗಳಿಗೆ, ತಂಬಾಕು ಉತ್ಪನ್ನ ವ್ಯಾಪಾರಿಗಳಿಗೆ, ಪ್ಲಾಸ್ಟಿಕ್ ವ್ಯಾಪಾರಿಗಳಿಗೆ, ಕಬ್ಬಿಣದ ವ್ಯಾಪಾರಿಗಳಿಗೆ, ತಂಪು ಪಾನೀಯ ವ್ಯಾಪಾರಿಗಳಿಗೆ ಹಾಗೂ ಇನ್ನಿತರ ಎಪಿಎಂಸಿ ಕಾಯ್ದೆಯ ವ್ಯಾಪ್ತಿಗೆ ಒಳಪಡದ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ತೇಜೇಶ್ ದೂರಿದರು.
ರಾಜ್ಯ ಸರ್ಕಾರ ಈ ಅಕ್ರಮಗಳನ್ನು ಮುಚ್ಚಿ ಹಾಕಲು ಎಪಿಎಂಸಿಯಲ್ಲಿ ಈಗ ಚಿಲ್ಲರೆ ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಅವಕಾಶ ಕುರಿತು ಕಾಯ್ದೆಯನ್ನೇ ತಿದ್ದುಪಡಿ ಮಾಡಲು ಹೊರಟಿದೆ.ಹಾಗೊಂದು ವೇಳೆ ತಿದ್ದುಪಡಿ ಮಾಡಿದರೆ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಯಾನಂದ್ ಎಂ ವಿ, ರಾಜ್ಯ ರೈತಸಂಘದ ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ ಶಿವರಾಂ ಗೌಡ, ನಾಗರಾಜು, ಕೃಷ್ಣಪ್ಪ, ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.
ಮೈಸೂರು: ರಾಜ್ಯ ಸರ್ಕಾರ ಜಾರಿಮಾಡಲು ಹೊರಟಿರುವ ಜಾತಿಗಣತಿ ವರದಿಯನ್ನು ವಿರೋಧಿಸಿ ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ಹೆಚ್ ಡಿ ಕುಮಾರ ಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಸಂಸ್ಥಾಪಕ ಜಿಲ್ಲಾಧ್ಯಕ್ಷರಾದ ರಾಮಕೃಷ್ಣೇಗೌಡ, ನಗರ ಅಧ್ಯಕ್ಷ ಕೆ ಆರ್ ಮಿಲ್ ಆನಂದ್ ಗೌಡ, ನಗರ ಘಟಕದ ಅಧ್ಯಕ್ಷೆ ಬಾಬಿತಾ, ಖಜಾಂಚಿ ಪ್ರಸನ್ನ ಗೌಡ ನೇತೃತ್ವದಲ್ಲಿ ಸಹಾಯಕ ಜಿಲ್ಲಾಧಿಕಾರಿ ಶಿವ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಜಾರಿ ಮಾಡಲು ಹೊರಟಿರುವ ಜಾತಿಗಣತಿಯ ವರದಿಯು ಅವೈಜ್ಞಾನಿಕವಾಗಿದ್ದು, ವರದಿಯಲ್ಲಿ ಎಲ್ಲಾ ಜಾತಿಗಳ ಜನರನ್ನು ಭೇಟಿ ಮಾಡದೇ ವರದಿಯನ್ನು ತಯಾರಿಸಲಾಗಿದೆ ಎಂದು ಸಂಘದವರು ದೂರಿದರು.
ಕೂಡಲೇ ಇದನ್ನು ಪರಿಶೀಲಿಸಿ ಮರು ಗಣತಿಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಜಾತಗಣತಿಯು ಅತ್ಯಂತ ಸೂಕ್ಷ್ಮ ವಿಷಯವಾಗಿ ಪರಿವರ್ತನೆ ಆಗಿದ್ದು,ಈ ಜಾತಿಗಣತಿ ಹಲವಾರು ಪಂಗಡ, ಸಮುದಾಯಗಳನ್ನು ಒಡೆಯಲು ಪ್ರಾರಂಭಿಸಿದೆ.
ಕೇವಲ ಆಧಾರ್ ಕಾರ್ಡಿನ ಆಧಾರದ ಮೇಲೆ ಜಾತಿಯನ್ನು ಗುರುತಿಸಲು ಸಾಧ್ಯವಿಲ್ಲ. ಮತ್ತು ಕಾಂತರಾಜು ಆಯೋಗ ಪ್ರತಿ ಮನೆಗೆ ತೆರಳದೆ ವಿವರಗಳನ್ನು ಕಲೆಹಾಕಿರುವುದರಿಂದ ಈ ವರದಿಯು ಅವೈಜ್ಞಾನಿಕವಾಗಿದೆ. ಇದರಿಂದಾಗಿ ಹಲವಾರು ಸಮುದಾಯ ಹಾಗೂ ಪಂಗಡಗಳಿಗೆ ಅನ್ಯಾಯವಾಗುತ್ತದೆ ಹಾಗಾಗಿ ವರದಿಯನ್ನು ಸಾರ್ವಜನಿಕರ ಚರ್ಚೆಗೆ ಬಿಟ್ಟು ನಂತರ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಕೂಡಲೇ ಜಾತಿಗಣತಿ ವರದಿಯನ್ನು ಪುನರ್ ಪರಿಶೀಲಿಸಿ ಮರು ಜಾತಿಗಣತಿ ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ರಾಮಕೃಷ್ಣೇಗೌಡ, ಆನಂದ್ ಗೌಡ ಮತ್ತಿತರರು ಒತ್ತಾಯಿಸಿದರು.
ಮೈಸೂರು: ಹಿಂದೂ ದೇವಾಲಯ ಮತ್ತು ದಾರ್ಮಿಕ ಕೇಂದ್ರಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ್ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತ ಕಚೇರಿಯ ತಹಶೀಲ್ದಾರ್ ಶಿವಪ್ರಸಾದ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಘಟಕದ ಅಧ್ಯಕ್ಷ ಮಹೇಶ್ ಕಾಮಾತ್ ಅವರು, ಲಕ್ಷಾಂತರ ವರ್ಷದಿಂದ ಸನಾತನ ಹಿಂದೂ ಧರ್ಮ ಇದೆ, ದೇಶದಲ್ಲಿ ಮುಸಲ್ಮಾನರಿಗೆ ವಕ್ಫ ಬೋರ್ಡ್ ಹಾಗೂ ಕ್ರೈಸ್ತರಿಗೆ ಅವರದೇ ಬೋರ್ಡ್ ಇದೆ,ಹಾಗೆಯೇ ಬಹುಸಂಖ್ಯಾತರಾದ ಹಿಂದುಗಳಿಗೂ ಸನಾತನ ಬೋರ್ಡ ಏಕೆ ರಚಿಸಬಾರದು ಎಂದು ಪ್ರಶ್ನಿಸಿದರು.
ಸರ್ಕಾರ ಕೇವಲ ದೇವಸ್ಥಾನಗಳನ್ನ ಮಾತ್ರ ಮುಜರಾಯಿ ಇಲಾಖೆಗೆ ಸೇರಿಸಿದೆ, ಭಕ್ತರ ದೇಣಿಗೆಯಿಂದ ದೇವಸ್ಥಾನಗಳು ನಡೆಯುವಂತೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ಆಡಳಿತ ನಡೆಸಲು ಕೊಡಬೇಕು ಎಂದು ಒತ್ತಾಯಿಸಿದರು.
ಇದರಿಂದ ಮುಂದೆಂದೂ ಯಾವುದೇ ಧರ್ಮದವರು ಸರ್ಕಾರ ರಚಿಸಿದರೂ ಹಸ್ತ ಕ್ಷೇಪಮಾಡುವಂತಾಗಬಾರದು ಎಂದು ಹೇಳಿದರು.
ಆಂದ್ರದಲ್ಲಿ ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ಮುಸ್ಲಿಮರಿಗೆ ಹಾಗೂ ಕ್ರಿಶ್ಚನ್ನರನ್ನು ಟಿ ಟ ಡಿ ಆಡಳಿತಕ್ಕೆ ನೇಮಿಸಿದ ಕಾರಣ ಹಲವು ಮುಸ್ಲೀಂ ಜನರಿಂದ ತುಪ್ಪ ಖರೀದಿಸಿದ ಪರಿಣಾಮ ಇಂತಹ ಘಟಣೆ ನಡೆದಿದೆ ಆದ್ದರಿಂದ ಎಲ್ಲಾ ದೇವಸ್ಥಾನ ಹಾಗೂ ದಾರ್ಮಿಕ ಕೇಂದ್ರಗಳು ಸರ್ಕಾರದಿಂದ ಮುಕ್ತಿ ಹೊಂದಬೇಕೆಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಅಂಬಿಕಾ ಜೀವನ್, ಸಹ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ಜಯಶ್ರೀ ಶಿವರಾಂ, ಗೋರಕ್ಷಾ ಪ್ರಮುಖ್ ಶಿವರಾಜ್, ಸೇವಾ ಪ್ರಮುಖ್ ಲೋಕೇಶ್ ,ಸವಿತಾ ಘಾಟ್ಕೆ ಸೇರಿದಂತೆ ಹಲವಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೈಸೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದ ಗಲಭೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ರಾಜಸ್ಥಾನ್ ಸಂಘದವರು ಪ್ರತಿಭಟನೆ ನಡೆಸಿದರು.
ನಗರದ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಹಾಗೂ ರಾಜಸ್ಥಾನ್ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.
ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದ ಗಲಭೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ರಾಜಸ್ಥಾನ್ ಸಂಘದವರು ಪ್ರತಿಭಟನೆ ನಂತರ ಮಾನವ ಸರಪಳಿ ನಿರ್ಮಿಸಿದರು.
ಹಿಂದೂ ವಿರೋಧಿ ಸರ್ಕಾರಕ್ಕೆ ದಿಕ್ಕಾರ, ಭಾರತ್ ಮಾತಾ ಕಿ ಜೈ, ಕಿಡಿಗೇಡಿಗಳನ್ನು ಬಂಧಿಸಿ, ಬಂಧಿಸಿ ಮುಂತಾದ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಮಹೇಶ್ ಕಾಮತ್ ಅವರು ಭಾರತದ ಹಿಂದೂಗಳು ಯಾವಾಗಲೂ ಶಾಂತಿ ಪ್ರೀಯರು ಮತ್ತು ಎಲ್ಲಾ ಧರ್ಮದ ಜನರ ಜೊತೆ ಹೊಂದಾಣಿಕೆಯಿಂದ ಬದುಕುವವರು ಎಂದು ಹೇಳಿದರು.
ಕರ್ನಾಟಕದಲ್ಲೂ ಹಿಂದುಗಳು ಎಲ್ಲಾ ದರ್ಮೀಯರ ಜೊತೆ ಉತ್ತಮ ಸಾಮರಸ್ಯದ ಜೊತೆ ಜೀವನ ನಡೆಸಿಕೊಂಡು ಬರುತ್ತಿದ್ದಾರೆ, ಎಲ್ಲಾ ದರ್ಮೀಯರ ಹಬ್ಬ ಹರಿದಿನಕ್ಕೆ ಪ್ರತಿ ಬಾರತೀಯನು ಸಹಕರಿಸಲೇಬೇಕು ಇದು ನಮ್ಮ ಬಾರತೀಯರ ಸಂಸ್ಕ್ರತಿಯೂ ಹೌದು. ಪರದರ್ಮೀಯರ ಯಾವುದೇ ಹಬ್ಬ ಹರಿದಿನಕ್ಕೆ ಹಿಂದುಗಳು ಎಂದೂ ತೊಂದರೆ ಕೊಟ್ಟಿಲ್ಲ ಎಂದು ತಿಳಿಸಿದರು.
ಆದರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಗಣೇಶ ವಿಸರ್ಜನೆ ವೇಳೆ ಬೇರೆ ದರ್ಮದವರು ವ್ಯವಸ್ಥಿತ ಪಿತೂರಿ ಮಾಡಿ ಹಿಂದುಗಳ ಮೇಲೆ ಹಾಗೂ ಗಣೇಶ ವಿಗ್ರಹದ ಮೇಲೆ ಧಾಳಿ ಮಾಡಿದ್ದಲ್ಲದೇ ಹಿಂದೂ ಅಂಗಡಿ ಮುಗ್ಗಟ್ಟಿನ ಮೇಲೆ ದಾಳಿ ಮಾಡಿ ಅವರ ಜೀವನೋಪಾಯಕ್ಕಾಗಿ ಇರುವ ಅಂಗಡಿ ಮುಗ್ಗಟ್ಟಿಗೆ ಬೆಂಕಿ ಹಚ್ಚಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶಭರಿತರಾಗಿ ನುಡಿದರು.
ಬಹು ಸಂಖ್ಯಾತರಾಗಿರುವ ಹಾಗೂ ಶಾಂತಿಯುತರಾಗಿರುವ ಹಿಂದೂಗಳಿಗೆ ಈ ರೀತಿ ಕೆಣಕುವ ಕೆಲಸ ಮಾಡದಂತೆ ಮತ್ತು ಕ್ರೌರ್ಯ ಮಾಡುವವರಿಗೆ ಸರಿಯಾದ ಶಿಕ್ಷೆ ನೀಜಬೇಕೆಂದು ಆಗ್ರಹಿಸಿ ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾ ಕಾರ್ಯದರ್ಶಿ ಮಧುಶಂಕರ್, ವಿಭಾಗ ಸಂಚಾಲಕರಾದ ಸವಿತಾ ಘಾಟ್ಕೇ, ಉಪಾಧ್ಯಕ್ಷರಾದ ಅಂಬಿಕಾ ಜೀವನ್ ಮಿತ್ರ, ಜನಾರ್ಧನ್, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್, ಮುಖಂಡರಾದ ಶ್ರೀ ಮುರಳಿ, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಡಾಕ್ಟರ್ ಕೃಷ್ಣಮೂರ್ತಿ, ಶಿವು, ರಾಣಿ, ಚೇತನ್ ಮಂಜುನಾಥ್, ಭಾಗ್ಯ, ಬೆರುಮಲ್ ರಾಥೋಡ್, ಕಾಂತಿಲಾಲ್ ಗುಲೆಚ, ದಲ್ಲಿಚಂದ್ ಶ್ರೀ ಶ್ರೀ ಮಾಲ್, ರಾಜೀವ್ ಕುಮಾರ್, ಲಾಲಾರಂ ಪುರೋಹಿತ್, ಮದನ್ ಲಾಲ್ ಪುರೋಹಿತ್, ಹಾಗೂ ರಾಜಸ್ಥಾನ ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.