ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಮೈಸೂರು: ಇದೇ ಡಿ. 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಕರೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಡಿಸೆಂಬರ್ 21 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತದೆ. ಡಿಸೆಂಬರ್ 22 ರಿಂದ ಡಿಸೆಂಬರ್ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳು ಸಂಚಾರ ಕೇಂದ್ರಗಳು ಹಾಗೂ ಹೆಚ್ಚಿನ ಅಪಾಯ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 21ಕ್ಕೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ತಪ್ಪಿದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಪಲ್ಸ್ ಪೋಲಿಯೋ ಲಸಿಕೆ ನೀಡಲು ಅಗತ್ಯವಿರುವ ಸಿಬ್ಬಂದಿಗಳಿಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ರೂಟ್ ಮ್ಯಾಪ್ ಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಾ.ಸುದೀರ್ ನಾಯಕ್ ಮಾತನಾಡಿ, ಕಳೆದ 14 ವರ್ಷಗಳಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಕರ್ನಾಟಕದಲ್ಲಿ 2007ರಲ್ಲಿ ಕೊನೆಯದಾಗಿ ಒಂದು ಪೋಲಿಯೋ ಪ್ರಕರಣ ಕಂಡುಬಂದಿತ್ತು. ನಂತರ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಪೋಲಿಯೋ ಲಸಿಕೆ ಹಾಕಿಸಿದ ಮಗುವಿನ ಬೆರಳಿಗೆ ಇಂಕ್ ಹಾಕಲಾಗುವುದು. ಇದರಿಂದ ಯಾರಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ಹಾಗೂ ಎರಡೆರಡು ಬಾರಿ ಲಸಿಕೆ ಹಾಕಿಸುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 5 ವರ್ಷದೊಳಗಿನ 2,22,084 ಮಕ್ಕಳು ಇದ್ದಾರೆ.ಅವರೆಲ್ಲರಿಗೂ‌ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 1648 ಬೂತ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. 50 ಮೊಬೈಲ್ ಟೀಮ್ ಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕುಮಾರ್ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು, ಆರ್.ಸಿ.ಹೆಚ್ ಅಧಿಕಾರಿ ಮಹಮ್ಮದ್ ಸಿರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ Read More

ನೀಟ್‌ ಪರೀಕ್ಷೆ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಿ-ಜಿ.ಲಕ್ಷ್ಮಿಕಾಂತ ರೆಡ್ಡಿ

ಮೈಸೂರು: ಬರುವ ಮೇ 4ರಂದು ನೀಟ್‌ ಪರೀಕ್ಷೆ ನಡೆಯಲಿದ್ದು, ಯಾವುದೇ ಲೋಪವಾಗ ದಂತೆ ಸುಗಮ ಹಾಗೂ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ‌ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೀಟ್ ಪರೀಕ್ಷೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು,
ಮೈಸೂರು ಜಿಲ್ಲೆಯಲ್ಲಿ 20 ಪರೀಕ್ಷಾ ಕೇಂದ್ರಗಳಲ್ಲಿ 7,709 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಲಿದ್ದು ನೀಟ್ ಪರೀಕ್ಷೆ ಸುಗಮವಾಗಿ, ನ್ಯಾಯಯುತವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರಿಗೆ ನೀಟ್‌ ಪರೀಕ್ಷೆ ನಡೆಸಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರೀಕ್ಷೆ ನಡೆಸುತ್ತಿದ್ದು ಅವರು ನೀಡುವ ಗೈಡ್ ಲೈನ್ಸ್ ಗಳ ಪ್ರಕಾರ ನೇಮಕವಾಗಿರುವ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಆದೇಶಿಸಿದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು, ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಯಾವುದೇ ತೊಂದರೆ ಆಗದಂತೆ ನೇಮಕವಾದ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ನೂತನ್ ಪುಂಜ್, ಮಿತಿಲೇಶ್ ಕುಮಾರ್ ಹಾಗೂ ಕಾಲೇಜಿನ ಪ್ರಾಂಶುಪಾಲರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನೀಟ್‌ ಪರೀಕ್ಷೆ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಿ-ಜಿ.ಲಕ್ಷ್ಮಿಕಾಂತ ರೆಡ್ಡಿ Read More

ಅರಣ್ಯ ಬೆಂಕಿ ತಡೆಯಲು ಮುಂಜಾಗ್ರತೆ ವಹಿಸಿ-ಜಿ ಲಕ್ಷ್ಮೀಕಾಂತ ರೆಡ್ಡಿ

ಮೈಸೂರು, ಮಾ.4: ಬೇಸಿಗೆ ದಿನಗಳು ಹತ್ತಿರವಾಗುತ್ತಿದೆ, ಈ ಸಂಬಂಧ ಅರಣ್ಯ ರಕ್ಷಣೆಗೆ ಜನರ ಸಹಕಾರ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಬೆಂಕಿ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೂರ್ವಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಅರಣ್ಯ ಹಾಗೂ ಅಗ್ನಿ ಶಾಮಕ ಇಲಾಖೆಯವರ ಉತ್ತಮ ಸಮನ್ವಯತೆಯಿಂದ ಅನಾಹುತ ಆಗದಂತೆ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಗಲೂ ಅರಣ್ಯದಲ್ಲಿ ಬೆಂಕಿ ಸಂಭವಿಸದ ಹಾಗೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅನಿವಾರ್ಯ ಸಂದರ್ಭದಲ್ಲಿ ಅರಣ್ಯ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಕ್ರಮ ಕೈಗೊಂಡು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳು ಸಿಬ್ಬಂದಿಗಳು ಸಜ್ಜಾಗಿರಬೇಕು ಎಂದು ತಿಳಿಸಿದರು.

ಮಹಾರಾಣಿ ಕಾಲೇಜು ಕಟ್ಟಡ ಕುಸಿದ ಸಂದರ್ಭದಲ್ಲಿ, ಟಿ ನರಸೀಪುರ ಕುಂಭಮೇಳ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳಾದ ಚಂದನ್ ಹಾಗೂ ಗುರುರಾಜ್ ಅವರಿಗೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ವಿಪತ್ತು ನಿರ್ವಹಣೆಯಿಂದ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಇಲಾಖೆಯ ಉಪಕರಣಗಳ ಖರೀದಿಗೆ ಹಾಗೂ ವಾಹನಗಳ ಖರೀದಿಗೆ ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜನರು ಬೆಂಕಿ ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಬೇಕು. ಕಾಡಂಚಿನ ಪ್ರದೇಶಗಳ ಜನರು ಬಿಡಿ ಸಿಗರೇಟ್ ಸೇವನೆ ಮಾಡಿ ಬೆಂಕಿ ನಂದಿಸದೆ ಎಸೆಯಬಾರದು. ಇದರಿಂದ ಬೆಂಕಿ ಕಾಣಿಸಿಕೊಳ್ಳುವ ಸಂಭವ ಹೆಚ್ಚು ಇರುತ್ತದೆ. ಅರಣ್ಯ ಬೆಂಕಿ ಕಾಣಿಸಿಕೊಳ್ಳದ ಹಾಗೆ ತಡೆಯಲು ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ ಅವರು ಮಾತನಾಡಿ ಕಳೆದ ವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಸಿಕೊಂಡಿತ್ತು. ಆದರೆ ಅಗ್ನಿ ಶಾಮಕ ಇಲಾಖೆಯ ಸಹಕಾರದಿಂದ ನಮ್ಮ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಇದ್ದು ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಯಿತು. ವಾಚ್ ಟವರ್ ಗಳನ್ನು ಮಾಡಿಕೊಂಡು ಅಲ್ಲಿ ಸಿಬ್ಬಂದಿ ಇದ್ದು ವಾಚ್ ಮಾಡುತ್ತಾರೆ. ಬೆಂಕಿ ಕಾಣಿಸಿಕೊಂಡರೆ ಅರಿಸಲು ನೀರು ಅತ್ಯಗತ್ಯ. ಆದ್ದರಿಂದ ನೀರು ಲಭ್ಯವಿರುವ ಸ್ಥಳಗಳನ್ನು ಗುರುತಿಸಿಕೊಳ್ಳಾಗಿದೆ. ಇನ್ನು ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಣೆ ಮಾಡಲು ಜಿಲ್ಲಾ ವಿಪತ್ತು ನಿರ್ವಹಣೆ ಯಡಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಕೆ.ಎನ್. ಬಸವರಾಜು ಅವರು ಮಾತನಾಡಿ ಅರಣ್ಯ ಬೆಂಕಿಯನ್ನು ತಡೆಯಲು ವಾಚ್ ಟವರ್ ಗಳನ್ನು ನಿರ್ಮಿಸಲಾಗಿದೆ. ಅಗ್ನಿ ಶಾಮಕ ಇಲಾಖೆಯ ಜೊತೆ ಸಂಪರ್ಕದಲ್ಲಿ ಇರುತ್ತೇವೆ. ಬೆಂಕಿ ಕಂಡುಬರುವ ಪ್ರದೇಶಗಳನ್ನು ಗುರುತಿಸಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಅರಣ್ಯ ಬೆಂಕಿ ತಡೆಯಲು ಮುಂಜಾಗ್ರತೆ ವಹಿಸಿ-ಜಿ ಲಕ್ಷ್ಮೀಕಾಂತ ರೆಡ್ಡಿ Read More

ಹೊಸ ವರ್ಷಕ್ಕೆ ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಎಲ್ಲಾ ಸೌಲಭ್ಯ ಒದಗಿಸಿ:ಡಿಸಿ

ಮೈಸೂರು: ಹೊಸ ವರ್ಷದ ದಿನ ತಾಯಿ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಎಲ್ಲಾ ಸೌಲಭ್ಯ ಒದಗಿಸಲು
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸೂಚಿಸಿದ್ದಾರೆ.

ಚಾಮುಂಡಿ ತಾಯಿಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಮೂಲಭೂತ ಸೌಲಭ್ಯ ಒದಗಿಸಲು ಸಿದ್ಧತೆ ಮಾಡುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದರು.

ಸೋಮವಾರ ಜಿಲ್ಲಾ ಪಂಚಾಯತ್ ನಲ್ಲಿ ನಡೆದ, ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬಂದೋಬಸ್ ವ್ಯವಸ್ಥೆ ಮಾಡಬೇಕು, ವಾಹನ ಸಂಚಾರ ನಿಯಂತ್ರಣ ಮಾಡುವುದರ ಮೂಲಕ ಚಾಮುಂಡಿ ಬೆಟ್ಟ ರಸ್ತೆ ಮಾರ್ಗದ ಮೂಲಕ ಪ್ರವೇಶಿಸುವ ಎಲ್ಲಾ ಗೇಟ್ ಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು,ಜತೆಗೆ ಚಾಮುಂಡಿ ಬೆಟ್ಟಕ್ಕೆ ಹೊಸವರ್ಷದ ದಿನ ಮಾತ್ರ ಆಟೋಗಳ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಸೂಚಿಸಿದರು.

ಆಟೋಗಳ ಪ್ರವೇಶವನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ ಬಸ್ ಗಳನ್ನು ನಿಯೋಜಿಸಿ ಭಕ್ತಾದಿಗಳಿಂದ ಟಿಕೆಟ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದ ಇತರೆ ಪ್ರದೇಶಗಳಿಂದಲೂ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಮತ್ತು ನಗರ ಬಸ್ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್ ನಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಹೊಸವರ್ಷದ ದಿನದಂದು ಸಾರ್ವಜನಿಕರಿಗೆ ಬೆಳಗ್ಗೆ 6.30 ರಿಂದಲೇ ತಾವರೆ ಕೆರೆ ಗೇಟ್ ತೆರೆದಿರಲಾಗುತ್ತದೆ, ಭಕ್ತರು ಪಾರ್ಕಿಂಗ್ ಸ್ಥಳದಿಂದಲೇ ಸರದಿ ಸಾಲಿನಲ್ಲಿ ದೇವಸ್ಥಾನಕ್ಕೆ ಆಗಮಿಸಬೇಕು ಎಂದು ಹೇಳಿದರು.

ಬೆಳಗ್ಗೆ ತಯಾರು ಮಾಡುವ ಪ್ರಸಾದದ ಗುಣಮಟ್ಟವನ್ನು ಅಧಿಕಾರಿಗಳು ಪರೀಕ್ಷಿಸಿ ಗುಣಮಟ್ಟದ ಪ್ರಮಾಣ ಪತ್ರವನ್ನು ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ರೂಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹೊಸ ವರ್ಷಕ್ಕೆ ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಎಲ್ಲಾ ಸೌಲಭ್ಯ ಒದಗಿಸಿ:ಡಿಸಿ Read More