ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ ಸ್ಥಳಕ್ಕೆ ಡಿಸಿ, ಜಿಪಂ ಸಿಇಒ ಭೇಟಿ

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಮೈಸೂರಿನ ವರುಣಾ ವಿಧಾನ ಸಭಾ ಕ್ಷೇತ್ರದ ವಾಜಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಜಮಂಗಲ, ಭುಗತ ಹಳ್ಳಿ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪರಿಶೀಲಿಸಿದರು.

ಗಣತಿದಾರರು ಮನೆ-ಮನೆಗೆ ತೆರಳಿ ಮಾಹಿತಿಯನ್ನು ನಿಖರವಾಗಿ ದಾಖಲಿಸುತ್ತಿರುವುದನ್ನು ಗಮನಿಸಿದರು.
ಸಮೀಕ್ಷೆ ವೇಳೆ ಎದುರಾಗುವ ಸಮಸ್ಯೆಗಳ ಕುರಿತು ಗಣತಿದಾರರೊಂದಿಗೆ ಚರ್ಚಿಸಿ, ಸಮೀಕ್ಷಾ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮೈಸೂರು ತಹಶೀಲ್ದಾರ್ ಮಹೇಶ್, ಮೈಸೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಮೈಸೂರು ಗ್ರಾಮಾಂತರ ಬಿಇಒ ಪ್ರಕಾಶ್ ಹಾಗೂ ಪಿಡಿಒ ಹಾಜರಿದ್ದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ ಸ್ಥಳಕ್ಕೆ ಡಿಸಿ, ಜಿಪಂ ಸಿಇಒ ಭೇಟಿ Read More

ನಾಳೆಯಿಂದ ಪ.ಜಾ ಒಳಮೀಸಲಾತಿ ವರ್ಗೀಕರಣ: ದತ್ತಾಂಶ ಶೇಖರಣಾ ಸಮೀಕ್ಷೆ

ಮೈಸೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಹೆಚ್. ಏನ್ ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆಯು ಮೈಸೂರು ಜಿಲ್ಲೆಯಲ್ಲಿ ಮೇ 5 ರಿಂದ 17 ರವೆರೆಗೆ ನಡೆಯಲಿದೆ.

ಪರಿಶಿಷ್ಟ ಜಾತಿ ಸಮುದಾಯದವರು ಸಮೀಕ್ಷೆಯ ಸಂದರ್ಭದಲ್ಲಿ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ನಿಖರ ಮಾಹಿತಿ ನೀಡುವಂತೆ ಹಾಗೂ ಪರಿಶಿಷ್ಟ ಜಾತಿಯ ಕುಟುಂಬಸ್ಥರು ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.

ಮೇ 5 ರಿಂದ 17 ರವರೆಗೆ ಮನೆ ಮನೆ ಸಮೀಕ್ಷೆ ನಡೆಯಲಿದೆ. ಗಣತಿದಾರರನ್ನು ಶಾಲಾ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸಮೀಕ್ಷೆಯನ್ನು ಆ್ಯಪ್ ನಲ್ಲಿ ಭರ್ತಿ ಮಾಡಲಾಗುವುದು.

ಇದಲ್ಲದೇ ಮೇ 19 ರಿಂದ 23 ರವರೆಗೆ ಆನ್‌ಲೈನ್ ಮೂಲಕ ಸ್ವಯಂ-ಘೋಷಣೆಗೆ ಅವಕಾಶವಿದೆ.

ಸಮೀಕ್ಷೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಕುಟುಂಬದವರು ತಮ್ಮ ಜಾತಿ ಹಾಗೂ ಉಪಜಾತಿಗಳನ್ನು ಸರಿಯಾಗಿ ತಿಳಿಸಬೇಕೆಂದು ಜಿಲ್ಲಾಧಿಕಾರಿ ಗಳು ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 2950 ಗಣತಿದಾರರನ್ನು ನೇಮಕ ಮಾಡಲಾಗಿದ್ದು ಶೇಕಡಾ 10ರಷ್ಟು ಗಣತಿದಾರರನ್ನು ಕಾಯ್ದಿರಿಸಲಾಗಿದೆ, ಪ್ರತಿ 10 ಗಣದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

ಸಮೀಕ್ಷೆಯು ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ ಮೊದಲ ಹಂತದಲ್ಲಿ ಮೇ 5 ರಿಂದ 17ರವರೆಗೆ ಸಮೀಕ್ಷೆದಾರರು ಮನೆಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವರು.ಎರಡನೇ ಹಂತದಲ್ಲಿ ಮೇ 19 ರಿಂದ 21 ರವರೆಗೆ ಸಮೀಕ್ಷೆ ಬ್ಲಾಕ್ ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು ಮನೆ ಮನೆ ಭೇಟಿಯ ಅವಧಿಯಲ್ಲಿ ಬಿಟ್ಟು ಹೋದ ಎಸ್ ಸಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು.

ಮೂರನೇ ಹಂತದಲ್ಲಿ ಮೇ 22 ಮತ್ತು 23 ನೇ ತಾರೀಕಿನಂದು ಆನ್ಲೈನ್ ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.

ನಾಳೆಯಿಂದ ಪ.ಜಾ ಒಳಮೀಸಲಾತಿ ವರ್ಗೀಕರಣ: ದತ್ತಾಂಶ ಶೇಖರಣಾ ಸಮೀಕ್ಷೆ Read More

ಕೆ.ಆರ್.ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ಡಿಸಿ,ಸಿಇಒ ದಿಢೀರ್ ಭೇಟಿ

ಮೈಸೂರು: ನಗರದ ಕೆ.ಆರ್.ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿ ಕಾಂತ ರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ದಿಢೀರ್ ಭೇಟಿ ನೀಡಿದರು.

ಕೆ.ಆರ್. ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಮೂಲಸೌಕರ್ಯಗಳು ಹಾಗೂ ಕುಂದು–ಕೊರತೆಗಳ ಬಗ್ಗೆ ಪರಿಶೀಲಿಸಿದರು.

ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸೌಜನ್ಯವಾಗಿ ವರ್ತಿಸಬೇಕು ಎಂದು ವೈದ್ಯರು ನರ್ಸ್ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ನಂತರ ವಾರ್ಡ್‌ಗಳಿಗೆ ತೆರಳಿ ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲನೆ ನಡೆಸಿ,ಸಿಬ್ಬಂದಿಗಳಿಗೆ ಆಸ್ಪತ್ರೆಯನ್ನು ಸ್ವಚ್ಛವಾಗಿಡುವಂತೆ ತಾಕೀತು ಮಾಡಿದರು.

ಕೆ.ಆರ್.ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ಡಿಸಿ,ಸಿಇಒ ದಿಢೀರ್ ಭೇಟಿ Read More

ಉದಯಗಿರಿ ಘಟನೆ: ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಿ-ಸಿಎಂ ಕಡಕ್ ಸೂಚನೆ

ಬೆಂಗಳೂರು: ಮೈಸೂರಿನ ಉದಯಗಿರಿ ಘಟನೆಯಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಡಕ್ ಸೂಚನೆ ನೀಡಿದ್ದಾರೆ.

ಸಂಜೆ ಮೈಸೂರು ಉದಯಗಿರಿ ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಭೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಕಡಕ್ ಸೂಚನೆಗಳನ್ನು ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಮೈಸೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ತಪ್ಪು ಯಾರೇ ಮಾಡಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ,ಕಾನೂನು ಕೈಗೆ ಎತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿ ಎಂದು ಆದೇಶಿಸಿದ್ದಾರೆ.

ಅಮಾಯಕರಿಗೆ ತೊಂದರೆ ಕೊಡಬಾರದು,
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು,ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಇದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿ ಎಂದು ಸಿದ್ದರಾಮಯ್ಯ ಕಠಿಣ ಸೂಚನೆ ನೀಡಿದ್ದಾರೆ.

ಉದಯಗಿರಿ ಘಟನೆ: ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಿ-ಸಿಎಂ ಕಡಕ್ ಸೂಚನೆ Read More

ದಸರಾದಲ್ಲಿ ಅರ್ಜುನ ಆನೆ ಸ್ಮರಿಸಲು ಕೆಎಂಪಿಕೆ ಟ್ರಸ್ಟ್ ನಿಂದ ಡಿಸಿಗೆ ಮನವಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ 414 ನೇ ಮೈಸೂರು ದಸರಾ ಮೆರವಣಿಗೆಯಲ್ಲಿ ಅರ್ಜುನ ಆನೆಯ ಸ್ತಬ್ಧ ಚಿತ್ರ ಪ್ರದರ್ಶಿಸಬೇಕು ಹಾಗೂ ನಮ್ಮ ಅರ್ಜುನ ಗ್ಯಾಲರಿ ಸ್ಥಾಪಿಸಬೇಕೆಂದು ಕೆಎಂಪಿಕೆ ಟ್ರಸ್ಟ್
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ನೇತೃತ್ವದಲ್ಲಿ ಡಿಸಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಶಿವರಾಜು ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

ಸತತ 9 ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊತ್ತು ಎಲ್ಲರ ಮನಗೆದ್ದ ಅರ್ಜುನ ಆನೆ ಕಳೆದ ವರ್ಷ ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಸಾವನ್ನಪ್ಪಿದೆ.

2019ರಲ್ಲಿ ದಸರಾದಿಂದ ನಿವೃತ್ತಿ ಪಡೆದಿದ್ದ ಅರ್ಜುನ ಕಳೆದ ವರ್ಷದ ದಸರಾದಲ್ಲಿ ನಿಶಾನೆ ಆನೆಯಾಗಿ ಗಜಪಡೆಯನ್ನು ಮುನ್ನಡೆಸಿ ಸೇವೆಸಲ್ಲಿಸಿದೆ.

ರಾಜ್ಯ ಸರ್ಕಾರ ಸಕಲೇಶಪುರದ ಅರಣ್ಯ ಪ್ರದೇಶದಲ್ಲಿ ಅರ್ಜುನ ಆನೆಯ ಅಂತ್ಯಕ್ರಿಯೆಯನ್ನು ಮಾಡಿದ್ದು, ಸಮಾಧಿ ಸ್ಥಳದಲ್ಲಿ ಹಾಗೂ ಅರ್ಜುನನ ವಾಸಸ್ಥಳವಾಗಿದ್ದ ಎಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಿಸುವುದಾಗಿ ತಿಳಿಸಿತ್ತು,ಆದರೆ ಈವರೆಗೂ ಸ್ಮಾರಕ ನಿರ್ಮಾಣದ ಕಾಮಗಾರಿಯೇ ಪ್ರಾರಂಭವಾಗಿಲ್ಲ ಎಂದು ಮನವಿ ಪತ್ರ ದಲ್ಲಿ ತಿಳಿಸಲಾಗಿದೆ.

ಅರ್ಜುನ ದಸರಾದಲ್ಲಿ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿ ದೇಶವಿದೇಶದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ. ಇಂತಹ ಆನೆಗೆ ಗೌರವ ಸೂಚಿಸಬೇಕಾದದ್ದು ಸರ್ಕಾರದ ಕರ್ತವ್ಯ, ಆದ್ದರಿಂದ ಈ ಬಾರಿಯ ದಸರಾ ಮಹೋತ್ಸವದಲ್ಲಿ ಅರ್ಜುನ ಆನೆಯ ಸ್ತಬ್ಧಚಿತ್ರ ಪ್ರದರ್ಶಿಸುವ ಮೂಲಕ ಅರ್ಜುನನ ಸ್ಮರಿಸಬೇಕು ಎಂದು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮನವಿ ಮಾಡಿದ್ದಾರೆ.

90ದಿನಗಳು ನಡೆಯುವ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದ ಸರ್ಕಾರಿ ಮಳಿಗೆ ವಿಭಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಅರ್ಜುನ ಆನೆಯ ಸೇವೆ, ಭಾವಚಿತ್ರ ಮಾಹಿತಿಯುಳ್ಳ ‘ನಮ್ಮ ಅರ್ಜುನ’ ಸ್ಮರಿಸುವ ಗ್ಯಾಲರಿ ವಲಯ ನಿರ್ಮಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ ಎಂದು ಈ ವೇಳೆ ವಿಕ್ರಮ್ ಅಯ್ಯಂಗಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ನಿಯೋಗದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ, ಸಾಮಾಜಿಕ ಹೋರಾಟಗಾರ ನಜರ್ಬಾದ್ ಚರಣ್ ರಾಜ್, ಬೈರತಿ ಲಿಂಗರಾಜು, ಸುಚೇಂದ್ರ, ಚಕ್ರಪಾಣಿ, ಮೋಹನ್ ಕುಮಾರ್, ದುರ್ಗಾ ಪ್ರಸಾದ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಮತ್ತಿತರರು ಹಾಜರಿದ್ದರು.

ದಸರಾದಲ್ಲಿ ಅರ್ಜುನ ಆನೆ ಸ್ಮರಿಸಲು ಕೆಎಂಪಿಕೆ ಟ್ರಸ್ಟ್ ನಿಂದ ಡಿಸಿಗೆ ಮನವಿ Read More