ಮಾಜಿ ಸಚಿವ, ದಾವಣಗೆರೆ‌ ಧಣಿ ಶಾಮನೂರು ಶಿವಶಂಕರಪ್ಪ ವಿಧಿವಶ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ವಿಧಿವಶರಾಗಿದ್ದಾರೆ.

ಅವರಿಗೆ‌ 95 ವರ್ಷಗಳಾಗಿತ್ತು,ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಭಾನುವಾರ ಸುಮಾರು 6.45 ರ ಸಮಯದಲ್ಲಿ ವಿಧಿವಶರಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಶಿವಶಂಕರಪ್ಪ ಅವರ ಆರೋಗ್ಯ ವಿಚಾರಿಸಿದ್ದರು.

ಶಾಮನೂರ್ ಶಿವಶಂಕರಪ್ಪ ಅವರು 1931 ಜೂನ್‌ 16ರಂದು ಶಾಮನೂರು ಕಲ್ಲಪ್ಪ – ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು.
ಅವರು ಪತ್ನಿ ಪಾರ್ವತಮ್ಮ, ನಾಲ್ವರು ಪುತ್ರಿಯರಾ ಡಾ. ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಮೀನಾ ಡಾ. ಶರಣ್‌ ಪಾಟೀಲ್ ಹಾಗೂ ಮೂವರು ಗಂಡು ಮಕ್ಕಳಾದ ಎಸ್.ಎಸ್ ಬಕ್ಕೇಶ್, ಎಸ್.ಎಸ್ ಗಣೇಶ್, ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಬಂಧು ಬಳಗ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಶಾಮನೂರು ಶಿವಶಂಕರಪ್ಪನವರು 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. 1971 ರಿಂದ 1973ರ ವರೆಗೆ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಲೋಕಸಭಾ ಚುನಾವಣೆಗೆ ಅರಸು ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇಂದಿರಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಟಿ.ವಿ ಚಂದ್ರಶೇಖರಪ್ಪರ ವಿರುದ್ಧ ಪರಾಭವಗೊಂಡರು.

ಇದಾದ ಬಳಿಕ 1994ರಲ್ಲಿ ನಡೆದ 10ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಖಾಡಕ್ಕಿಳಿದ ಅವರು ಬಿಜೆಪಿ ಅಭ್ಯರ್ಥಿ ಕೆ.ಬಿ ಶಂಕರನಾರಾಯಣರನ್ನ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

1997 ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಜಿ.ಮಲ್ಲಿಕಾರ್ಜುನಪ್ಪ ಅವರನ್ನ ಸೋಲಿಸಿ ಸಂಸದರಾದರು. 2004 ರಲ್ಲಿ ಶಿವಶಂಕರಪ್ಪ 2ನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಆ ನಂತರ 2008 ರಲ್ಲಿ 3ನೇ ಬಾರಿಗೆ. 2013 ರಲ್ಲಿ 4ನೇ ಬಾರಿಗೆ, 2018ರಲ್ಲಿ 5ನೇ ಬಾರಿಗೆ ಹಾಗೂ 2023ರಲ್ಲಿ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಶಾಮನೂರು ಅವರು 2013 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಎರಡೂವರೆ ವರ್ಷ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಂತಾಪ: ಮುಖ್ಯ ಮಂತ್ರಿ ಸಿದ್ದ ರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್,ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಬಸವರಾಜ ಬೊಮ್ಮಾಯಿ,ಪ್ರತಿಪಕ್ಷ ನಾಯಕ ಆರ್.ಅಶೋಕ,ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಸೇರಿದಂತೆ ರಾಜಕೀಯ ನಾಯಕರು ಪಕ್ಷಾತೀತವಾಗಿ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ, ದಾವಣಗೆರೆ‌ ಧಣಿ ಶಾಮನೂರು ಶಿವಶಂಕರಪ್ಪ ವಿಧಿವಶ Read More

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿತ್ಯ;ಗಂಭೀರ ಕ್ರಮ-ಸಿಎಂ

ದಾವಣಗೆರೆ: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತು ನೀಡಿರುವ ಬಗ್ಗೆ ಸೋಮವಾರ ಗೃಹ ಸಚಿವರು ಸಭೆ ಕರೆದಿದ್ದಾರೆ, ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ದಾವಣಗೆರೆಯ ಹೆಲಿಪ್ಯಾಡ್ ನಲ್ಲಿ
ಮಾಧ್ಯಮದವರೊಂದಿಗೆ ಮಾತನಾಡಿದ‌ ಸಿಎಂ, ಇನ್ನು ಮುಂದೆ ಇಂಥದ್ದು ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಬ್ರಿಟಿಷರ ಕಾಲದಲ್ಲಿಯೇ ಆರ್.ಎಸ್.ಎಸ್ ಇತ್ತು , ಆಗಲೇ ನೋಂದಣಿ ಮಾಡಿಕೊಳ್ಳಬೇಕಿತ್ತು ಎಂಬ ಬಗ್ಗೆ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಆರ್.ಎಸ್.ಎಸ್ ಹೊರಗಿಡುವ ಬಗ್ಗೆ ಸರ್ಕಾರದ ಆದೇಶದಲ್ಲಿ ಹೇಳಿಲ್ಲ. ಯಾವುದೇ ಸಂಘ ಸಂಸ್ಥೆಗಳು ಆಯಾ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು ಎಂದು ಹೇಳಿದೆ, ಅವರು ಹಾಗೆ ಭಾವಿಸಿಕೊಂಡಿದ್ದಾರೆ,ಆದರೆ ಭಾಗವತ್ ಹೇಳಿದ್ದಕ್ಕೆಲ್ಲ ನಾವು ಉತ್ತರಿಸಲಾಗುವುದಿಲ್ಲ ಎಂದು ಗರಂ ಆಗಿ ನುಡಿದರು.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ,ನ್ಯಾಯಾಲಯ ಯಾವಾಗ ಮಾಡಬೇಕೆಂದು ಸೂಚಿಸುತ್ತದೊ ಆಗ ಚುನಾವಣೆ ನಡೆಸಲಾಗುವುದು ಎಂದು ಉತ್ತರಿಸಿದರು.

ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರದ ತೀರ್ಮಾನದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರಲ್ಲಾ ಎಂದು ಕೇಳಿದ್ದಕ್ಕೆ ಅವರ ಸಮ್ಮುಖದಲ್ಲಿಯೇ ಈ ಬಗ್ಗೆ ತೀರ್ಮಾನ ಮಾಡಲಾಗಿದೆ. 50 ರೂ.ಗಳನ್ನು ಎಲ್ಲರೂ ಕೊಡಲೇಬೇಕು. ಕೊಡದಿರುವವರೂ ಕೊಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ಸರ್ಕಾರದ ಆದೇಶ ಪಾಲಿಸದ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಬಸವನ ಗೌಡ ಪಾಟೀಲ್ ಯತ್ನಾಳ್ ಗೆ ತಿರುಗೇಟು ನೀಡಿದರು.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿತ್ಯ;ಗಂಭೀರ ಕ್ರಮ-ಸಿಎಂ Read More

ಕೋಟ್ಯಂತರ ಜಿ ಎಸ್ ಟಿ ವಂಚನೆ:ವ್ಯಕ್ತಿ ಬಂಧನ

ಬೆಳಗಾವಿ: ದಾವಣಗೆರೆ ಜಿಲ್ಲೆಯ ಹರಿಹರದ ಮರಿಯಮ್ ಸ್ಕ್ಯಾಪ್ ಡೀಲರ್ಸ್ ಮೇಲೆ ದಾಳಿ ನಡೆಸಿದ ಕೇಂದ್ರ ಜಿಎಸ್ ಟಿ ಬೆಳಗಾವಿ ಕಚೇರಿಯ ವಿಚಕ್ಷಣಾ ದಳದ ಅಧಿಕಾರಿಗಳು ಸುಮಾರು 21.64ಕೋಟಿ ತೆರಿಗೆ ವಂಚನೆ ಬಯಲಿಗೆ ಎಳೆದಿದ್ದಾರೆ.

ತೆರಿಗೆ ವಂಚನೆ ಸಂಬಂಧ ಮೆರಿಯಮ್ ಸ್ಕ್ರ್ಯಾಪ್ ನ ಮೊಹಮ್ಮದ್ ಸಾಕ್ಲಿಯಾನ್ ಎಂಬಾತನನ್ನು ವಶಕ್ಕೆ‌ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಸುಳ್ಳು ಬಿಲ್ಲುಗಳನ್ನು ಸಲ್ಲಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್(Input Tax Credit) ಮೋಸ ಮಾಡಿರುವುದು ಗೊತ್ತಾಗಿದೆ.

ನೊಂದಣಿಯಾಗದ ಪೂರೈಕೆದಾರರಿಂದ ಮೆಟಲ್ ಸ್ಕ್ರ್ಯಾಪ್ ಆಮದು ಮಾಡಿಕೊಂಡು ವ್ಯವಹಾರ ನಡೆಸುತ್ತಿರುವುದು ಜೊತೆಗೆ ನಕಲಿ ಜಿ ಎಸ್ ಟಿ ನೊಂದಣಿಗೆ, ನಕಲಿ ದಾಖಲೆಗಳನ್ನು ಬಳಕೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮೊಹಮ್ಮದ್ ಸಾಕ್ಲೆನ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಕೇಂದ್ರ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್ಯಂತರ ಜಿ ಎಸ್ ಟಿ ವಂಚನೆ:ವ್ಯಕ್ತಿ ಬಂಧನ Read More

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾ ದಾಳಿ

ಬೆಂಗಳೂರು: ಬೆಳ್ಳಂಬೆಳಿಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಬೆಂಗಳೂರಿನ ಜಿಆರ್‌ಪಿಎ ಚೀಫ್‌ ಎಂಜಿನಿಯರ್ ನಂಜುಂಡಪ್ಪ ಮತ್ತು ಬಿಬಿಎಂಪಿ ಎಕ್ಸಿಕ್ಯೂಟಿವ್ ಎಂಜಿನಿಯರ್‌‌ ಹೆಚ್‌.ಪಿ ಕಲ್ಲೇಶಪ್ಪ ಅವರ ಮನೆಗಳ ಮೇಲೆ ದಾಳಿ ನಡೆದಿದೆ.

ಕೋಲಾರದಲ್ಲಿ ಬೆಸ್ಕಾಂ ಎಇಇ ಜಿ.ನಾಗರಾಜ್ ಮನೆ ಹಾಗೂ ಅವರಿಗೆ ಸೇರಿದ ಮೂರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದ್ದಾರೆ.ಜತೆಗೆ ಇವರ ಸಂಬಂಧಿಕರೊಬ್ಬರ ಮನೆ ಮೇಲೂ ದಾಳಿ ನಡೆದಿದೆ.

ನಾಗರಾಜ್ ಬೆಂಗಳೂರಿನ ರಾಜಾಜಿನಗರದಲ್ಲಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾಳಿ ವೇಳೆ ಕೋಟ್ಯಂತರ ರೂ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಾಗರಾಜ್ ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳನ್ನು ಹೊಂದಿದ್ದಾರೆ.

ದಾವಣಗೆರೆಯಲ್ಲಿ ಫುಡ್‌ ಸೇಫ್ಟಿ & ಕ್ವಾಲಿಟಿ ಯುನಿಟ್ ಹೆಲ್ತ್ ಡಿಪಾರ್ಟ್ಮೆಂಟ್‌ನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಡಾ.ನಾಗರಾಜ್ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ.

ತುಮಕೂರಿನ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಜಗದೀಶ್ ಮನೆ ಮೇಲೂ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

ಬಾಗಲಕೋಟೆಯ ಬೀಳಗಿ ಲೋಕೋಪಯೋಗಿ ಇಲಾಖೆ ಎಫ್‌ಡಿಸಿ ಮಲ್ಲೇಶ್‌ ಮನೆ ಹಾಗೂ ಕಚೇರಿ ಮೇಲೂ ದಾಳಿ ಮಾಡಲಾಗಿದೆ.

ಕಲಬುರಗಿಯಲ್ಲಿ ಲೋಕೋಪಯೋಗಿ ಚೀಫ್ ಇಂಜಿನಿಯರ್ ಮನೆ‌ ಮೇಲೆ ದಾಳಿ ನಡೆದಿದೆ.

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾ ದಾಳಿ Read More

ಲೋಕಾಯುಕ್ತ ದಾಳಿ:ದಾಖಲೆ,ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಪತ್ತೆ

ಬೆಂಗಳೂರು: ಬೆಳ್ಳಂಬೆಳಗ್ಗೆ
ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ.

ನಾಲ್ವರು ಅಧಿಕಾರಿಗಳಿಗೆ ಸೇರಿದ 25 ಸ್ಥಳಗಳಲ್ಲಿ ಏಕಾಏಕಿ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು, ಮಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರು ನಗರ ಯೋಜನಾ ಘಟಕದ ನಿರ್ದೇಶಕ ತಿಪ್ಪೇಸ್ವಾಮಿ ನಿವಾಸ ಹಾಗೂ ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ತಿಪ್ಪೇಸ್ವಾಮಿ ಪತ್ನಿಯ ತವರು ಮನೆಯಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದ ಮನೆಯಲ್ಲಿ
ದಾವಣಗೆರೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಪ್ರಭು ನೇತ್ರತ್ವದಲ್ಲಿ ಶೋಧ ನಡೆಯುತ್ತಿದೆ.

ತಿಪ್ಪೇಸ್ವಾಮಿಯವರ ಗಿರಿನಗರದಲ್ಲಿರುವ ಬಂಗಲೆಗೆ ಎಸ್‌ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಬಂಗಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಚಿನ್ನಾಭರಣ ತೂಕ ಹಾಕಲು ಲೋಕಾ ಅಧಿಕಾರಿಗಳು ತಿಪ್ಪೇಸ್ವಾಮಿ ಮನೆಗೆ ಅಕ್ಕಸಾಲಿಗನನ್ನು ಕರೆಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಅವರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೈಸೂರು, ಬೆಂಗಳೂರು, ಮಂಡ್ಯದ ಮಳವಳ್ಳಿಯಲ್ಲಿರುವ ಮಹೇಶ್ ಅವರಿಗೆ ಸೇರಿದ ಮನೆಗಳು ಹಾಗೂ ಸಂಬಂಧಿಕರ ಮನೆಗಳ ಮೇಲೂ ಕಾರ್ಯಾಚರಣೆ ನಡೆಸಿದ್ದಾರೆ.

ಜೊತೆಗೆ ಕೆಆರ್‌ಎಸ್‌ನಲ್ಲಿ ಇರುವ ಮಹೇಶ್ ಪತ್ನಿ ಮಾಲೀಕತ್ವದ ಪೆಟ್ರೋಲ್ ಬಂಕ್ ಮೇಲೂ ದಾಳಿ ನಡೆದಿದೆ. ದಾಳಿ ವೇಳೆ ಕೆಲವು ದಾಖಲೆಗಳು, ನಗದು ಹಾಗೂ ಚಿನ್ನಾಭರಣಗಳು ಸಿಕ್ಕಿವೆ ಎಂದು ಗೊತ್ತಾಗಿದೆ.

ಲೋಕಾಯುಕ್ತ ದಾಳಿ:ದಾಖಲೆ,ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಪತ್ತೆ Read More