ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ:ಅಯೂಬ್ ಖಾನ್
ಮೈಸೂರು: ಸಂವಿಧಾನ ಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ
ಅಯೂಬ್ ಖಾನ್ ತಿಳಿಸಿದರು.
ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 69ನೇ ಪರಿನಿಬ್ಬಾಣ ದಿನ ಆಚರಣೆ ವೇಳೆ ಬಾಬಾ ಸಾಹೇಬರ ಭಾವಚಿತ್ರಕ್ಕೆ ಅಯೂಬ್ ಖಾನ್ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಸಮಾನತೆಯ ಕತ್ತಲಲ್ಲಿ ತತ್ತರಿಸುತ್ತಿದ್ದ ಭಾರತಕ್ಕೆ ಬೆಳಕು ನೀಡಿದ ಸೂರ್ಯನನ್ನು ಕಳೆದುಕೊಂಡು ಇಡೀ ದೇಶವೇ 1956.ಡಿ.6 ಕಣ್ಣೀರು ಹರಿಸಿತ್ತು. ಇಂದು ದೇಶದಲ್ಲಿ ನ್ಯಾಯಂಗ, ಕಾರ್ಯಾಂಗ, ಶಾಸಕಾಂಗದ ಮೂಲಕ ಇಡೀ ಭಾರತದಲ್ಲಿ ಆಡಳಿತ ಅಭಿವೃದ್ಧಿಯ ಕಾನೂನನ್ನ ರಚಿಸಿ ದೇಶದ ಕಟ್ಟಕಡೆಯ ವ್ಯಕ್ತಿಗೆ ಸ್ವಾತಂತ್ರ್ಯ, ಸಮಾನತೆ, ರಕ್ಷಣೆ, ಹಕ್ಕುಗಳನ್ನ ನೀಡಿದ್ದು ಬಾಬಸಾಹೇಬರು ರಚಿಸಿಕೊಟ್ಟ ಸಂವಿಧಾನದಿಂದ.ಈ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡಬೇಕಿದೆ ಎಂದು ತಿಳಿಸಿದರು.
ಭಾರತೀಯರ ಸ್ವಾಭಿಮಾನದ ಪ್ರತೀಕವಾದ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ನೆಲೆಗಟ್ಟಿನಲ್ಲಿ ಸರ್ವಧರ್ಮ ಸಮನ್ವಯ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಪರಿನಿಬ್ಬಾಣವಾದ ದಿನದಂದು ಅವರ ಚಿಂತನೆಗಳನ್ನು ಜೀವಂತವಿರಿಸಿ, ಅವುಗಳನ್ನು ಪಾಲಿಸಿಕೊಂಡು ಮುನ್ನಡೆಯೋಣ ಎಂದು ಕರೆ ನೀಡಿದರು.
ಮಹಾನಾಯಕ ಅಂಬೇಡ್ಕರ್ ಅವರು ಕಂಡ ಕನಸುಗಳನ್ನು ಸಾಕಾರಗೊಳಿಸುವ ಸಾಮಾಜಿಕ ಬದ್ಧತೆ ತೋರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಯೂಬ್ ಖಾನ್ ನುಡಿದರು.
ಸಾಂಸ್ಕೃತಿಕ ಸಮಿತಿಯು ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಆಯೋಜನೆ ಮಾಡಿದ್ದ ಸಮಾರಂಭದಲ್ಲಿ ಬಾಬಾ ಸಾಹೇಬರ ಗೀತೆಗಳ ಮೂಲಕ ಸ್ಮರಿಸಿ, ಸಂವಿಧಾನ ಪೀಠಿಕೆ ಭೋದನೆ ಮಾಡಲಾಯಿತು.
ಪ್ರಾಧಿಕಾರದ ಸಿಇಒ ಕೆ.ರುದ್ರೇಶ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್. ಎಸ್, ಉಪಾಧ್ಯಕ್ಷರುಗಳಾದ ರಂಗಸ್ವಾಮಿ ಪಾಪು, ಶಿವಲಿಂಗಯ್ಯ, ರಾಜೇಶ್ ಸಿ ಗೌಡ, ರಘುರಾಜೇ ಅರಸ್, ಪದ್ಮನಾಭ್ ಗುಂಡಣ್ಣ, ನಿರೂಪಕ ಅಜಯ್ ಶಾಸ್ತ್ರಿ, ಭವ್ಯ, ಜಯಲಕ್ಷ್ಮಿ, ಚಂದ್ರಕಲಾ, ಸರಸ್ವತಿ, ಗೌರಮ್ಮ, ವರುಣಾ ಪ್ರಶಾಂತ್, ಉಮೇಶ್, ಸೈಯದ್ ಇಸ್ಮಾಯಿಲ್, ಸಮಿ ಅನ್ವರ್, ಮನ್ಸೂರ್ ಅಲಿ ಮತ್ತಿತರರು ಹಾಜರಿದ್ದರು.