ಸೈಬರ್ ಅಪರಾಧ ತಡೆಗೆ ಜಾಗೃತಿ ಅಗತ್ಯ-ಮಹೇಶ್ ಸಿ ಎನ್

ಮೈಸೂರು: ಸಾಮಾಜಿಕ ಜಾಲತಾಣ ಬಳಸುವ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಬೇಕು ಎಂದು
ಮೈಸೂರು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆ ಮುಖ್ಯಪೇದೆ ಮಹೇಶ್ ಸಿ ಎನ್ ತಿಳಿಹೇಳಿದರು.

ವಿದ್ಯಾರಣ್ಯಪುರಂ ನಲ್ಲಿರುವ ವಿದ್ಯಾರಣ್ಯ ಕೋಚಿಂಗ್ ಸೆಂಟರ್ ನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಮೈಸೂರು ಘಟಕದ ವತಿಯಿಂದ
ಶುಕ್ರವಾರ ಆಯೋಜಿಸಿದ್ದ ಸೈಬರ್ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಸೈಬರ್ ಅಪರಾಧಿಗಳು ಅಮಾಯಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಹೊಂಚುಹಾಕಿ ಕುಳಿತಿರುತ್ತಾರೆ. ಅಪರಾಧಗಳ ಕುರಿತು ಆತಂಕಗೊಳ್ಳುವ ಬದಲು ಪಾಸ್‍ವರ್ಡ್ ಭದ್ರತೆ ಕುರಿತು ಸದಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್‍ಗಳ ಹೆಸರಿನಲ್ಲಿ ಒಟಿಪಿ ಮಾಹಿತಿ ಪಡೆದುಕೊಳ್ಳುವ ಮೂಲಕ ಬ್ಯಾಂಕ್ ಖಾತೆಗಳಲ್ಲಿನ ಸೈಬರ್ ಅಪರಾಧಿಗಳು ಹಣ ದೋಚುತ್ತಾರೆ. ಅಪರಿಚಿತ ವ್ಯಕ್ತಿಗಳು ಕರೆಮಾಡಿದರೆ ಮಾಹಿತಿ ಹಂಚಿಕೊಳ್ಳಬೇಡಿ. ಬ್ಯಾಂಕ್ ಸಿಬ್ಬಂದಿ ಯಾವುದೇ ಕಾರಣಕ್ಕೂ ಮೊಬೈಲ್ ಕರೆಮಾಡಿ ಮಾಹಿತಿ ಕೇಳುವುದಿಲ್ಲ, ಇದು ಅಪರಾಧಿಗಳ ಕೃತ್ಯವಾಗಿರುತ್ತದೆ ಎಂದು ಮಹೇಶ್ ಸಿ ಎನ್ ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಮಾತನಾಡಿ, ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿದ್ಯಾರ್ಥಿ, ಯುವ ಸಮೂಕ ಮುಂಚೂಣಿಯಲ್ಲಿದೆ. ಬಳಕೆಯ ಸುರಕ್ಷತೆಯ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್,ರಾಜ್ಯ ವಿದ್ಯಾ ವರ್ಗದ ಸಂಚಲಕರದ ಡಾ. ಜಿ ವಿ ರವಿಶಂಕರ್,
ಶಿಕ್ಷಕರಾದ ಧನುಷ್, ಶ್ವೇತ ಮತ್ತಿತರರು ಹಾಜರಿದ್ದರು.

ಸೈಬರ್ ಅಪರಾಧ ತಡೆಗೆ ಜಾಗೃತಿ ಅಗತ್ಯ-ಮಹೇಶ್ ಸಿ ಎನ್ Read More

ಐಪಿಎಲ್ ಬೆಟ್ಟಿಂಗ್ ಗೆ ಕಡಿವಾಣ ಹಾಕಲು ಕರ್ನಾಟಕ ಹಿತರಕ್ಷಣ ವೇದಿಕೆ ಆಗ್ರಹ

ಮೈಸೂರು: ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕೆಂದು
ಸೈಬರ್ ಕ್ರೈಮ್ ಅಪರಾಧಗಳ ವಿಭಾಗಕ್ಕೆ
ಕರ್ನಾಟಕ ಹಿತರಕ್ಷಣ ವೇದಿಕೆಯವರು ಮನವಿ ಮಾಡಿದ್ದಾರೆ.

ನಜರ್ಬಾದ್ ನಲ್ಲಿರುವ ಸೈಬರ್ ಕ್ರೈಮ್ ಅಪರಾಧಗಳ ವಿಭಾಗಕ್ಕೆ
ಕರ್ನಾಟಕ ಹಿತರಕ್ಷಣ ವೇದಿಕೆಯ ಸದಸ್ಯರು ತೆರಳಿ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕರಾದ ನಂದೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ
ದರು.

ಈ‌ ವೇಳೆ ಕರ್ನಾಟಕ ಹಿತರಕ್ಷಣ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ,
ಮುಂದಿನ ವಾರದಿಂದ ಐಪಿಎಲ್ ನಡೆಯಲಿದ್ದು ಮುಂದಿನ ಎರಡು ತಿಂಗಳು ಯುವ ಸಮೂಹ ಈ ಕ್ರಿಕೆಟ್ ಹಬ್ಬದಲ್ಲಿ ಮುಳುಗೇಳಲಿದೆ ಎಂದು ಹೇಳಿದರು.

ಇತ್ತೀಚೆಗೆ ಗ್ರಾಮೀಣ ಭಾಗದ ಯುವಕರು, ವಿದ್ಯಾರ್ಥಿಗಳನ್ನು ಐಪಿಎಲ್ ಹೆಚ್ಚಿಗೆ ಆಕರ್ಷಿಸುತ್ತಿವೆ ಜೊತೆಗೆ ಬೆಟ್ಟಿಂಗ್ ದಂಧೆಗೂ ಕಾರಣವಾಗಿವೆ ಎಂದು ಆತಂಕ‌ ವ್ಯಕ್ತಪಡಿಸಿದರು.

ಅನೇಕರು ಈ ದಂಧೆಯಲ್ಲಿ ಸಿಲುಕುತ್ತಿದ್ದಾರೆ, ಸಂಜೆಯಾಗುತ್ತಿದ್ದಂತೆ ಆನ್‌ಲೈನ್ ಕ್ಲಾಸ್ ನೆಪ ಹೇಳಿಕೊಂಡು ಮೊಬೈಲ್‌ನಲ್ಲಿ ಕ್ರಿಕೆಟ್ ವೀಕ್ಷಿಸುತ್ತಾ ಬೆಟ್ಟಿಂಗ್ ದಂಧೆಯಲ್ಲಿ ತೊಡಗುತ್ತಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕರ ಗಮನ ಸೆಳೆದರು.

ಕಾಲೇಜು ವಿದ್ಯಾರ್ಥಿಗಳು, ಯುವಕರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿರುತ್ತಾರೆ. ಹಲವು ಯುವಕರು ಇದಕ್ಕಾಗಿ ಸಾಲ ಮಾಡಿ ಮೊಬೈಲ್, ಬೈಕ್ ಅಡಮಾನ ಮಾಡಿ ಕೈ ಸುಟ್ಟುಕೊಂಡ ಉದಾಹರಣೆಗಳಿವೆ ಎಂದು ತಿಳಿಸಿದರು.

ಬೆಟ್ಟಿಂಗ್ ನಲ್ಲಿ ತೊಡಗಿದ ವಿದ್ಯಾರ್ಥಿಗಳು, ಯುವಕರು ಗೆದ್ದ ಖುಷಿಗೆ, ಸೋತ ದುಃಖಕ್ಕೆ ಮದ್ಯದ ಅಮಲಲ್ಲಿ ತೇಲಿದ ನಿದರ್ಶನಗಳು ಇವೆ. ಸಾಲ ತೀರಿಸಲಾಗದೆ ಊರು ಬಿಟ್ಟು ಹೋದ, ಆತ್ಮಹತ್ಯೆಗೆ ಶರಣಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಇನ್ನಷ್ಟು ಜನ ಇಂತಹ ಸಂಕಷ್ಟಕ್ಕೆ ಸಿಲುಕದಂತೆ ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ಈ ಬೆಟ್ಟಿಂಗ್ ದಂಧೆ ಫೋನ್ ಮೂಲಕವೇ ನಡೆಯುತ್ತಿದೆ, ಸೈಬರ್ ಕ್ರೈಂ ವಿಭಾಗದ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಮುಂದಾಗಬೇಕು ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮವಹಿಸಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು ಎಂದು ವಿನಯ್ ಕುಮಾರ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ ಎನ್ ರಾಜೇಶ್, ಗುರುರಾಜ್ ಶೆಟ್ಟಿ, ಮಂಜುನಾಥ್, ರವಿಚಂದ್ರ, ಸಂತೋಷ್ ಕುಮಾರ್, ರಾಜು ಮತ್ತಿತರರು ಹಾಜರಿದ್ದರು.

ಐಪಿಎಲ್ ಬೆಟ್ಟಿಂಗ್ ಗೆ ಕಡಿವಾಣ ಹಾಕಲು ಕರ್ನಾಟಕ ಹಿತರಕ್ಷಣ ವೇದಿಕೆ ಆಗ್ರಹ Read More

ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಆಪ್ ನಿಂದ ಪಂಗನಾಮ ಅಭಿಯಾನ

ಬೆಂಗಳೂರು: ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಆಮ್ ಆದ್ಮಿ ಪಕ್ಷವು ಬೆಂಗಳೂರಿನಾದ್ಯಂತ ಪಂಗನಾಮ ಅಭಿಯಾನ‌ ಹಮ್ಮಿಕೊಂಡಿದೆ.

ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿದರು.

ದೇಶದಾದ್ಯಂತ ಅದರಲ್ಲೂ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ನಗರದಲ್ಲಿಯೇ ಅದರಲ್ಲಿಯೂ ವಿದ್ಯಾವಂತರೇ ಸೈಬರ್ ಅಪರಾಧಗಳಿಗೆ ತುತ್ತಾಗಿ ಸಾವಿರಾರು ಕೋಟಿ ತಮ್ಮ ಗಳಿಕೆಯ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಸೈಬರ್ ಅಪರಾಧಗಳ ವಿರುದ್ಧ ಆಮ್ ಆದ್ಮಿ ಪಕ್ಷವು ಬೆಂಗಳೂರಿನಾದ್ಯಂತ ಎಲ್ಲಾ ವಾರ್ಡ್ ಗಳಲ್ಲಿ ಮನೆಮನೆಗೆ ತೆರಳಿ ಹಾಗೂ ಜನನಿ ಬಿಡ ಪ್ರದೇಶಗಳಲ್ಲಿ ಪಂಗನಾಮ ವಿಶೇಷ ಅಭಿಯಾನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಸೈಬರ್ ಅಪರಾಧಗಳು ತಕ್ಕಮಟ್ಟಿಗಾದರೂ ನಿಯಂತ್ರಣಕ್ಕೆ ಬರಬೇಕೆಂಬುದು ನಮ್ಮ ಅಭಿಲಾಷೆ ಎಂದು ಜಗದೀಶ್ ಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದು ಎಂಟು ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗದಲ್ಲಿ 8000ಕ್ಕೂ ಹೆಚ್ಚು ದೂರುಗಳು ದಾಖಲಾಗಿ 1250 ಕೋಟಿ ರೂಪಾಯಿಗಳು ಕಳ್ಳರ ಪಾಲಾಗಿದೆರುವುದು ಗೊತ್ತಾಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೈಬರ್ ಅಪರಾಧವನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಸರ್ಕಾರಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.

ಅತ್ಯಾಧುನಿಕ ತಂತ್ರಜ್ಞಾನವನ್ನು ಕಾಲಕಾಲಕ್ಕೆ ಅಳವಡಿಸಿಕೊಂಡು ಸೈಬರ್ ತಜ್ಞರನ್ನು ನೇಮಕ ಮಾಡಿಕೊಂಡು ಈ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲ ವಾಗಿರುವುದು ಕಂಡುಬರುತ್ತಿದೆ.

ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸೈಬರ್ ಕ್ರೈಮ್ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ ಜಗದೀಶ್ ಚಂದ್ರ, ಜನತೆಗೆ ಅರಿವು ಮೂಡಿಸುವ ಪಂಗನಾಮ ಅಭಿಯಾನವನ್ನು ಯಶಸ್ವಿಗೊಳಿಸಲು ನಾಗರಿಕರು ಸಹ ನಮ್ಮೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮಾತನಾಡಿ ಈಗಾಗಲೇ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಅಭಿಯಾನವನ್ನು ನಡೆಸುತ್ತಿದ್ದೇವೆ. ನಾಗರೀಕರಿಂದ ಅಭೂತ ಪೂರ್ವ ಸ್ವಾಗತ ದೊರೆಯುತ್ತಿದ್ದು ಅಲ್ಲಿನ ಸ್ಥಳಿಯರು ಸಹ ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ ಒಂದು ತಿಂಗಳ ಕಾಲ ಈ ಅಭಿಯಾನ ನಡೆಯಲಿದೆ
ಎಂದು ತಿಳಿಸಿದರು.

ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಆಪ್ ನಿಂದ ಪಂಗನಾಮ ಅಭಿಯಾನ Read More