ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ

ಬೆಂಗಳೂರು: ಸರ್ಕಾರ ನಡೆಸುವುದು, ಅಭಿವೃದ್ಧಿ ಮಾಡುವುದು ಅಂದರೆ 3 ತಿಂಗಳಿಗೋ, 6 ತಿಂಗಳಿಗೋ ಒಮ್ಮೆ ಗೃಹಲಕ್ಷ್ಮಿ ಹಣ ಅಕೌಂಟಿಗೆ ಹಾಕೋದು, ಬಾಕಿ ಸಮಯದಲ್ಲಿ ರಾಜಕೀಯ ಮಾಡೋದು, ಕುರ್ಚಿಗಾಗಿ ಕಿತ್ತಾಡೋದು ಅಂದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಆರ್.ಅಶೋಕ್ ಜರಿದಿದ್ದಾರೆ.

ರಸ್ತೆ, ಚರಂಡಿ, ಮೂಲಸೌಕರ್ಯ ನಿರ್ಮಾಣದಿಂದ ಬಡವರು ಉದ್ಧಾರ ಆಗಿಲ್ಲ ಅನ್ನೋ ಮನಸ್ಥಿತಿ ಇರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ ಎಂದು ‌ಟ್ವೀಟ್ ಮಾಡಿ ಪ್ರತಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.

ರಸ್ತೆ, ಚರಂಡಿ ಬೇಡ ಅಂದಮೇಲೆ, ತುಮಕೂರಿನವರೆಗೂ ಮೆಟ್ರೋ ಯಾಕೆ ಬೇಕು ಪರಮೇಶ್ವರ್ ಅವರೇ,ಎಸ್ ಸಿ ಎಸ್ ಪಿ- ಟಿ ಎಸ್ ಪಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ, ಮೆಟ್ರೋ ಕಾಮಗಾರಿಯ ಹಣವನ್ನೂ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಬಿಡಿ ಎಂದು ಅಶೋಕ್ ವ್ಯಂಗ್ಯವಾಗಿ‌ ಚಾಟಿ ಬೀಸಿದ್ದಾರೆ‌.

ಒಟ್ಟಿನಲ್ಲಿ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗೊವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ ಅದಂತೂ ಗ್ಯಾರೆಂಟಿ ಎಂದು ಅಶೋಕ್ ಟೀಕಿಸಿದ್ದಾರೆ.

ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ Read More

ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ:ಅಶೋಕ್‌ ವ್ಯಂಗ್ಯ ಸಲಹೆ

ಬೆಂಗಳೂರು: ಅಭಿವೃದ್ಧಿಗೆ ದುಡ್ಡಿಲ್ಲ,ರಾಜ್ಯದ ಪ್ರಗತಿಗೆ ಯಾವುದೇ ದೂರದೃಷ್ಟಿ ಇಲ್ಲ,ಹೂಡಿಕೆದಾರರನ್ನು, ಉದ್ಯಮಿಗಳನ್ನು ಆಕರ್ಷಿಸುವ, ಹಿಡಿದಿಟ್ಟುಕೊಳ್ಳುವ ಆಸಕ್ತಿ ಇಲ್ಲದ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.

ಹಿಂದೆಂದೂ ಕಂಡರಿಯದ ದುರಾಡಳಿತ, ಭ್ರಷ್ಟಾಚಾರದ ಕೂಪದಲ್ಲಿ ರಾಜ್ಯವನ್ನು ಮುಳುಗಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಮುಜುಗರಕ್ಕೊಳಗಾದಾಗಲೆಲ್ಲ ಜನರ ದಿಕ್ಕು ತಪ್ಪಿಸಲು, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ಎಂಬ ಮೆಗಾ ಸೀರಿಯಲ್ ನ ಒಂದೊಂದೇ ಸಂಚಿಕೆ ಹೊರಬಿಡುವ ನಾಟಕ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ‌

ಸಿಎಂ ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಈ ಭಂಡ ಬಾಳು. ನೀವು ಹೇಳಿದ್ದನ್ನ ನಿಮ್ಮ ಸಂಪುಟ ಸದಸ್ಯರೆ ಒಪ್ಪುವುದಿಲ್ಲ, ಶಾಸಕರೂ ಒಪ್ಪುವುದಿಲ್ಲ, ಹೈಕಮಾಂಡ್ ಅಂತೂ ನಿಮ್ಮ ಮಾತಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ, ಈ ಭಂಡ ಬಾಳು ಸಾಕು ಮಾಡಿ ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಅಶೋಕ್ ಹೇಳಿದ್ದಾರೆ.

ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ:ಅಶೋಕ್‌ ವ್ಯಂಗ್ಯ ಸಲಹೆ Read More

ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಕುಸಿತ:ಜನಾಕ್ರೋಶವೇ ಸಾಕ್ಷಿ-ಅಶೋಕ್

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಕುಸಿದುಬಿದ್ದಿದ್ದು, ಭ್ರಷ್ಟಾಚಾರ ಮೇರೆ ಮೀರಿರುವುದಕ್ಕೆ ರಾಜ್ಯಾದ್ಯಂತ ವ್ಯಕ್ತವಾಗುತ್ತಿರುವ ಜನಾಕ್ರೋಶ ವೇ ಸಾಕ್ಷಿ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ನೀಡಿರುವ ಸರ್ಟಿಫಿಕೇಟ್ ಮತ್ತು 20 ತಿಂಗಳ ಬಳಿಕ ಸರ್ಕಾರ ಟೇಕಾಫ್ ಆಗುತ್ತಿದೆ ಎಂದು ಸಚಿವ ಡಿ.ಸುಧಾಕರ್ ನೀಡಿರುವ ಹೇಳಿಕೆ ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿವೆ ಎಂದು ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸರ್ಕಾರದ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಪಕ್ಷದ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲ ಮತ್ತು ಭೇಟಿ ನೀಡುತ್ತಿರುವ ಜಿಲ್ಲೆಗಳಲ್ಲಿ ಜನರು ವ್ಯಕ್ತಪಡಿಸುತ್ತಿರುವ ಅನಿಸಿಕೆಗಳು ಇದಕ್ಕೆ ಪೂರಕವಾಗಿವೆ ಎಂದು ಹೇಳಿದ್ದಾರೆ.

ಇದೊಂದು ವಂಚಕ ಸರ್ಕಾರ,ಕೆಟ್ಟ ಆಡಳಿತ ನೀಡುತ್ತಿದೆ. ಅದನ್ನು ಮರೆಮಾಚಲು ನಡೆಸಿದ ಕಸರತ್ತು ವಿಫಲವಾಗಿವೆ. 20 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಣ್ಣ ಬಯಲಾಗಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಜಾರಿಯಿಂದ ಬೊಕ್ಕಸ ಬರಿದಾಗಿ, ಸರ್ಕಾರ ದಿವಾಳಿಯಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಿಎಂ ಮತ್ತು ಸಚಿವರು ಎಲ್ಲಿಯೂ ಪ್ರವಾಸ ಮಾಡುತ್ತಿಲ್ಲ,ಭೇಟಿ ನೀಡಿದ ಕಡೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಬೆಂಗಳೂರಿನಲ್ಲಿ ಕುಳಿತು ಕಾಲಾಹರಣ ಮಾಡುತ್ತಿದ್ದಾರೆ, ಯಾವ ಕಚೇರಿಗೆ ಹೋದರು ಲಂಚದ ಹಾವಳಿಯಿಂದ ಜನ ಹೈರಾಣಾ ಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ವಾಸ್ತವ ಸಂಗತಿಯನ್ನು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೇ ಹಾದಿ ಬೀದಿಗಳಲ್ಲಿ ಟೀಕಿಸುತ್ತಿದ್ದಾರೆ. ಹೆಚ್ಚು ದಿನ ಸುಳ್ಳು ಹೇಳಿ ಕಾಲಾಹರಣ ಮಾಡಲು ಆಗುವುದಿಲ್ಲ. ಹೀಗಾಗಿ ಆ ಸತ್ಯವನ್ನು ರಾಯರೆಡ್ಡಿ ಮತ್ತು ಸಚಿವ ಡಿ. ಸುಧಾಕರ್ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕಿಂತ ಈ ಸರ್ಕಾರಕ್ಕೆ ದೊಡ್ಡ ಸರ್ಟಿಫಿಕೇಟ್ ಬೇಕೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ವಿಧಾನಸೌಧದ ಮುಂದೆ ದಿನವಿಡೀ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದ ಸಿದ್ದರಾಮಯ್ಯನವರು, ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಬೇಕು ಎಂದು ಸೂಚನೆ ನೀಡಿದ್ದರು. ಸಿಎಂ ಮಾತಿಗೆ ಯಾವ ಸಚಿವರು ಕಿವಿಗಿಡಲಿಲ್ಲ. ಎಲ್ಲಿಯೂ ಜನತಾ ದರ್ಶನ ನಡೆಯಲಿಲ್ಲ. ಇದು ಸರ್ಕಾರದ ಕಾರ್ಯವೈಖರಿಗೆ ಒಂದು ಸಣ್ಣ ಉದಾಹರಣೆ ಎಂದು ಅಶೋಕ್ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರು ಇನ್ನೆಷ್ಟು ದಿನ ಇರುತ್ತಾರೆ,ಬದಲಾಗುತ್ತಾರೆ ಎಂಬ ಉಡಾಫೆ ಸಚಿವರಲ್ಲಿದೆ. ಇದರಿಂದ ಜನರ ಅಹವಾಲು ಕೇಳುವವರು ದಿಕ್ಕಿಲ್ಲದಂತಾಗಿದೆ. ಅಧಿಕಾರಿಗಳು ಕೂಡ ಮಾತು ಕೇಳುತ್ತಿಲ್ಲ, ಕಚೇರಿಗೂ ಬರುತ್ತಿಲ್ಲ. ಹೀಗಾಗಿ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ವಿಧಾನಸೌಧದ ಆಡಳಿತ ಕೇರಳದ ವಯನಾಡಿಗೆ ಶಿಫ್ಟ್ ಆಗಿದೆ. ಅಲ್ಲಿಂದ ಬರುವ ಸೂಚನೆಯನ್ನು ಇಲ್ಲಿ ಪಾಲಿಸಲಾಗುತ್ತಿದೆ. ಹುಲಿ ಯೋಜನೆ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರದೇಶದಲ್ಲಿ ಮಲಯಾಳಂ ಚಲನಚಿತ್ರ ಚಿತ್ರೀಕರಣ ಮಾಡಲು ಅವಕಾಶ ನೀಡಿರುವುದೇ ಇದಕ್ಕೆ ಸಾಕ್ಷಿ. ನಿರ್ಬಂಧಿತ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಸ್ಥಳೀಯ ಅಧಿಕಾರಿಗಳು ಅವಕಾಶ ನೀಡಿಲ್ಲ,ಸರ್ಕಾರದ ಮಟ್ಟದಲ್ಲೇ ಶೂಟಿಂಗ್ ನಡೆಸಲು ಅವಕಾಶ ನೀಡಲಾಗಿದೆ ಎಂದು ಸ್ಥಳೀಯ ಎಸಿಎಫ್ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಂದರೆ ಯಾರು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಅಶೋಕ್ ಒತ್ತಾಯಿಸಿದ್ದಾರೆ‌.

ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಕುಸಿತ:ಜನಾಕ್ರೋಶವೇ ಸಾಕ್ಷಿ-ಅಶೋಕ್ Read More

ಗ್ಯಾರೆಂಟಿಗಳ ಖರ್ಚಿನ ಅಂದಾಜೇ ಗೊತ್ತಿಲ್ಲದೆ ಮಂಡಿಸಿದ ದೋಷಪೂರಿತ ಬಜೆಟ್ : ಮು. ಮ ಚಂದ್ರು

ಬೆಂಗಳೂರು, ಮಾ.7: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಈ ಸಾಲಿನ ಬಜೆಟ್ ನಲ್ಲಿ ಪಂಚ ಗ್ಯಾರಂಟಿಗಳ ಖರ್ಚಿನ ನಿಖರ ಮೊತ್ತವೇ ಸರಕಾರಕ್ಕೆ ಗೊತ್ತಿಲ್ಲದಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯ ಮಂತ್ರಿ ಚಂದ್ರು ಟೀಕಿಸಿದ್ದಾರೆ

ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯ ಪ್ರಥಮ ಬಜೆಟ್ ನಲ್ಲಿ ಗ್ಯಾರಂಟಿಗಳಿಗಾಗಿ 17000 ಕೋಟಿ ಎಂದು ಅಂದಾಜು ಮಾಡಿದ್ದರು. ಆದರೆ ಅದು 28,000 ಕೋಟಿ ರೂಪಾಯಿಗಳಿಗೆ ತಲುಪಿತು. ಕಳೆದ ಬಜೆಟ್ ನಲ್ಲಿಯೂ ಸಹ ಗ್ಯಾರೆಂಟಿಗಳಿಗಾಗಿ ಮೀಸಲಿಟ್ಟಿದ್ದ ಹಣಕ್ಕೂ ಖರ್ಚು ಮಾಡಿದ ಹಣಕ್ಕೂ ಶೇ.47 ನಷ್ಟು ಹೆಚ್ಚಾಯಿತು.

ಅಂದರೆ ಈ ಸರ್ಕಾರಕ್ಕೆ ತಾವು ನೀಡುತ್ತಿರುವ ಗ್ಯಾರಂಟಿಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ಪ್ರಾಥಮಿಕ ಅಧ್ಯಯನವೇ ಇಲ್ಲದಂತಹ ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಘೋಷಿಸಿರುವಂತಹ ಯೋಜನೆ ಎಂಬುದು ಸಾಬೀತಾಗುತ್ತಿದೆ.

ಇದರಿಂದಾಗಿ ಬಜೆಟ್ ಮೀಸಲಿಟ್ಟಿರುವ ಮೊತ್ತಕ್ಕೂ ಖರ್ಚಾಗುವ ಮುತ್ತಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಸರ್ಕಾರವು ಆರ್ಥಿಕ ಕೊರತೆಯಿಂದಾಗಿ ತತ್ತರಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ.

ರಾಜ್ಯದ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ಈ ಇಲಾಖೆಯಲ್ಲಿ ಈಗಾಗಲೇ 31,000 ಕೋಟಿ ರೂಗಳನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ವರ್ಷವೂ ಸಹ ಯಾವುದೇ ನಯಾ ಪೈಸೆ ನೀರಾವರಿ ಯೋಜನೆಗಳು ಆಗುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಇದೊಂದು ಬೋಗಸ್ ಬಜೆಟ್ ಎಂದು ಹೇಳಿದ್ದಾರೆ

ಈ ವರ್ಷವೂ ಸಹ 1,06,000 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ. ರಾಜ್ಯದ ಸಾಲದ ಮೊತ್ತ ಈಗ 4,73, 477 ಕೋಟಿ ರೂಪಾಯಿಗಳಾಗಿದೆ. ಪ್ರತಿ ವರ್ಷ ಕೇವಲ ಬಡ್ಡಿ ಪಾವತಿಗಾಗಿ 50,000 ಕೋಟಿ ರೂಪಾಯಿಗಳನ್ನು ನೀಡಬೇಕಾಗಿರುವುದು ರಾಜ್ಯದ ಪಾಲಿನ ಜನತೆಯ ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಪಾಲು ಸರಿಯಾಗಿ ಬಂದಿಲ್ಲವೆಂದು ಪದೇ ಪದೇ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪ ಮಾಡುತ್ತಲೇ ಇದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದೆ ಇರುವುದರಿಂದ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ, ಆಸ್ತಿ ತೆರಿಗೆಗಳ ಹೆಚ್ಚಳಕ್ಕಾಗಿ, ನಗರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ನೀಡುವ ಮೊತ್ತಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಚಂದ್ರು ತಿಳಿಸಿದ್ದಾರೆ.

ಬೆಂಗಳೂರು ನಗರ ಅಭಿವೃದ್ಧಿಗಾಗಿ 7000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಆದರೆ ಸ್ಥಳೀಯ ಆಡಳಿತ ಸಂಸ್ಥೆಯಾದ ಬಿಬಿಎಂಪಿಗೆ ಇದನ್ನು ನೇರವಾಗಿ ನೀಡದೆ ವಿಶೇಷ ಉದ್ದೇಶತ ವಾಹನ ಎಂದು ಪ್ರತ್ಯೇಕಿಸಿ ಈ ಮೂಲಕ ನೇರವಾಗಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ವೃತ್ತಿಪರ ತೆರಿಗೆಯನ್ನು 200 ರೂ ಗಳಿಂದ ಏಕಾಏಕಿ 300 ರೂ.ಗಳಿಗೆ ಏರಿಸಿರುವುದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆತಂಕ ಪಟ್ಟಿದ್ದಾರೆ‌

23ರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 14.8 % ಅನುದಾನವನ್ನು ಮೀಸಲು ಇಡಲಾಗಿತ್ತು.
ಆದರೆ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನುಕ್ರಮವಾಗಿ ಕಳೆದ ಮೂರು ಬಜೆಟ್ ಗಳಿಂದ 11 % , 11.7% ಈಗ ಕೇವಲ 10% ಗೆ ಇಳಿಸಿರುವುದು ನಿಜಕ್ಕೂ ಶಿಕ್ಷಣ ಕ್ಷೇತ್ರಕ್ಕೆ ಇವರಿಗಿರುವ ತಾತ್ಸಾರ ಮನೋಭಾವನೆ ಎದ್ದು ಕಾಣುತ್ತದೆ.

ಕಳೆದ ಬಜೆಟ್ ನಲ್ಲಿ 4.9% ನಷ್ಟು ಇದ್ದ ಅನುದಾನವನ್ನು ಈಗ ಕೇವಲ 0.1% ನಷ್ಟು ಏರಿಸಿ 4332 ರೂಗಳನ್ನು ಘೋಷಿಸಿದ್ದಾರೆ. ಆನೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಅನುದಾನದ ಕೊರತೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಯಾವುದೂ ಇಲ್ಲದರ ಪ್ರಾಣವನ್ನು ಒತ್ತೆ ಇಡುವಂತಹ ಪರಿಸ್ಥಿತಿ ಇದೆ ಎಂದು ಜರಿದಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಬೆಂಗಳೂರಿನ ಸುರಂಗ ಮಾರ್ಗ ನಿರ್ಮಾಣಕ್ಕೆ 40,000 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಮುಖ್ಯ ಮಂತ್ರಿ ಚಂದ್ರು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರು ಅನ್ನ ರಾಮಯ್ಯ ಎಂದು ಪ್ರಖ್ಯಾತವಾಗಿರುವ ಅನ್ನಭಾಗ್ಯ ಯೋಜನೆಯನ್ನು ಕೃಷಿ ಇಲಾಖೆಗೆ ನೀಡುವ ಅನುದಾನದಲ್ಲಿ ಸೇರಿಸಿದ್ದಾರೆ. ರೈತರು, ಯಂತ್ರೋಪಕರಣ , ಬೀಜ ,ರಸಗೊಬ್ಬರ , ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ಸಾಮಗ್ರಿಗಳ ಸಬ್ಸಿಡಿಗಾಗಿ ಈ ಇಲಾಖೆಗೆ ಒದಗಿಸುವ ಅನುದಾನವನ್ನು ಉಪಯೋಗಿಸಬೇಕಿದೆ. ಆದರೆ ಅನ್ನಭಾಗ್ಯ ಯೋಜನೆಗೆ ಮಾತ್ರವೇ 10,000 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. ರೈತರ ಯಂತ್ರೋಪಕರಣಗಳ ಖರೀದಿಗೆ ಯಾವುದೇ ಸಬ್ಸಿಡಿ ದೊರಕುವುದಿಲ್ಲ. ರಾಜ್ಯದ ಕೋಟ್ಯಾಂತರ ರೈತರುಗಳಿಗೆ ಮಾಡುತ್ತಿರುವ ಮಹಾ ಮೋಸ ಎಂದು ಹೇಳಬಹುದು ಎಂದು ಮುಖ್ಯ ಮಂತ್ರಿ ಚಂದ್ರು‌ ವಿಶ್ಲೇಷಿಸಿದ್ದಾರೆ

ಈ ಬಜೆಟ್ ರಾಜ್ಯದ ರೈತರು, ಜನಸಾಮಾನ್ಯರಿಗೆ ಯಾವುದೇ ವಿಶೇಷವಾದಂತಹ ಅನುಕೂಲಗಳನ್ನು ನೀಡಲಾಗದಂತಹ ದೋಷಪೂರಿತ ಬಜೆಟ್ ಆಗಿದೆ ಎಂದು ಅವರು ಟೀಕಿಸಿದ್ದಾರೆ.

ಗ್ಯಾರೆಂಟಿಗಳ ಖರ್ಚಿನ ಅಂದಾಜೇ ಗೊತ್ತಿಲ್ಲದೆ ಮಂಡಿಸಿದ ದೋಷಪೂರಿತ ಬಜೆಟ್ : ಮು. ಮ ಚಂದ್ರು Read More

ಡಿ.ಕೆ.ಶಿವಕುಮಾರ್ ಬಗ್ಗೆ ಅಶೋಕ್ ಟೀಕೆ

ಬೆಂಗಳೂರು: ಅನುದಾನ ಬೇಕಾದರೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎಂದು ದರ್ಪ ಮೆರೆದಿದ್ದ ಡಿಸಿಎಂ ಡಿ.ಕೆ ಸಾಹೇಬರು ಈಗ ಕನ್ನಡ ಸಿನಿಮಾ ಕಲಾವಿದರಿಗೆ ಬಹಿರಂಗ ವೇದಿಕೆಯಲ್ಲಿ ಧಮ್ಕಿ ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಟ್ವೀಟ್ ಮಾಡಿ ಅಶೋಕ್ ಹೇಳಿದ್ದಾರೆ.

ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎಂಬ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ ಎಂದು ಸಲಹೆ ನೀಡಿದ್ದಾರೆ.

ಕಲಾವಿದರು ಯಾರ ಸ್ವತ್ತೂ ಅಲ್ಲ, ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ ಎಂದಿದ್ದಾರೆ.

ಕಲಾವಿದರು ನಿಮ್ಮ ಕಾಂಗ್ರೆಸ್
ಪಕ್ಷದ ಕಾರ್ಯಕರ್ತರಲ್ಲ, ನಿಮ್ಮ ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಳ್ಳುವಂತೆ ಕಲಾವಿದರನ್ನು ನಡೆಸಿಕೊಳ್ಳಬೇಡಿ. ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಅಶೋಕ್ ಚಾಟಿ ಬೀಸಿದ್ದಾರೆ.

ಡಿ.ಕೆ.ಶಿವಕುಮಾರ್ ಬಗ್ಗೆ ಅಶೋಕ್ ಟೀಕೆ Read More

ರಾಹುಲ್‌ ಹೇಳಿಕೆಗೆ ಅಮಿತ್‌ ಶಾ ಟೀಕೆ

ನವದೆಹಲಿ: ರಾಹುಲ್‌ ಗಾಂಧಿ ಹೇಳಿಕೆಯಿಂದ ಮತ್ತೊಮ್ಮೆ ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ನೀತಿ ಬಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ.

ಮೀಸಲಾತಿ ವಿಚಾರದ ಬಗ್ಗೆ ರಾಹುಲ್‌ ಗಾಂಧಿ ಪ್ರಸ್ತಾಪ ಮಾಡಿದ್ದನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶಾ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶವನ್ನು ವಿಭಜಿಸುವ ಷಡ್ಯಂತ್ರ ರೂಪಿಸುವ ಶಕ್ತಿಗಳೊಂದಿಗೆ ನಿಂತು ದೇಶ ವಿರೋಧಿ ಹೇಳಿಕೆ ನೀಡುವುದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿ ಹೋಗಿದೆ ಎಂದು ಜರಿದಿದ್ದಾರೆ.

ಕಾಶ್ಮೀರದಲ್ಲಿ ದೇಶ ವಿರೋಧಿ ನ್ಯಾಷನಲ್‌ ಕಾನ್ಫರೆನ್ಸ್‌ ಬೆಂಬಲಿಸಿರುವ ಕಾಂಗ್ರೆಸ್‌ ಈಗ ಮೀಸಲಾತಿ ವಿರೋಧಿ ಅಜೆಂಡಾವನ್ನು ಬೆಂಬಲಿಸುತ್ತಿದೆ. ವಿದೇಶಿ ವೇದಿಕೆಗಳಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ಯಾವಾಗಲೂ ರಾಷ್ಟ್ರದ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಎಂದು ದೂರಿದ್ದಾರೆ.

ರಾಹುಲ್ ಗಾಂಧಿಯವರ ಹೇಳಿಕೆಯು ಪ್ರಾದೇಶಿಕತೆ, ಧರ್ಮ ಮತ್ತು ಭಾಷಿಕ ಭಿನ್ನಾಭಿಪ್ರಾಯದ ರೀತಿಯಲ್ಲಿ ಬಿರುಕುಗಳನ್ನು ಉಂಟುಮಾಡುವ ಕಾಂಗ್ರೆಸ್‌ನ ರಾಜಕೀಯವನ್ನು ಬಯಲು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಇರುವವರೆಗೂ ಯಾರೊಬ್ಬರೂ ಮೀಸಲಾತಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಅಥವಾ ರಾಷ್ಟ್ರದ ಭದ್ರತೆಯೊಂದಿಗೆ ಯಾರೂ ಗೊಂದಲಕ್ಕೀಡಾಗಲು ಸಾಧ್ಯವಿಲ್ಲ ಎಂದು ನಾನು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ ಎಂದು ಅಮಿತ್ ಶಾ ಕಟುವಾಗಿ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಜಾರ್ಜ್‌ಟೌನ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ನಡೆಸಿದ್ದಾಗ ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚನೆ ಮಾಡಲಿದೆ. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದು ಉತ್ತರಿಸಿದ್ದನ್ನು ಸ್ಮರಿಸಬಹುದು.

ರಾಹುಲ್‌ ಹೇಳಿಕೆಗೆ ಅಮಿತ್‌ ಶಾ ಟೀಕೆ Read More

ಎತ್ತಿನಹೊಳೆ ಬಗ್ಗೆ ರಾಜ್ಯ ಸರ್ಕಾರ ಬೊಗಳೆಬಿಡುತ್ತಿದೆ:ಅಶೋಕ್

ಬೆಂಗಳೂರು: ಎತ್ತಿನಹೊಳೆ ಯೋಜನೆ ಬಗ್ಗೆ ಕಾಂಗ್ರೆಸ್ ಸರ್ಕಾರ ಮತ್ತೊಂದು ಬೊಗಳೆ ಬಿಡುತ್ತಿದೆ ಎಂದು ‌ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 2010ರಲ್ಲಿ ಅಂದಿನ‌ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಎತ್ತಿನಹೊಳೆ ಯೋಜನೆ ರೂಪಿಸಿತ್ತು.

ಈ ಯೋಜನೆಯನ್ನ ಕಾಂಗ್ರೆಸ್ ಸರ್ಕಾರ ಇಂದು ತನ್ನದೇ ಸಾಧನೆ ಎಂದು ಪುಟಗಟ್ಟಲೆ ಜಾಹೀರಾತು ಕೊಟ್ಟು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದೆ,ಇದು ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ, ನೈತಿಕವಾಗಿ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದು ವ್ಯಂಗ್ಯ ವಾಡಿದ್ದಾರೆ.

2010ರಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಎತ್ತಿನಹೊಳೆ ಯೋಜನೆಯ ಪ್ರಸ್ತಾವನೆಯನ್ನು ಯಡಿಯರಪ್ಪನವರ ಮುಂದಿಟ್ಟಾಗ ಅವರು ತಾತ್ವಿಕ ಒಪ್ಪಿಗೆ ನೀಡಿದ್ದರು.

2012 ರಲ್ಲಜ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಒಟ್ಟು 8,000 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು.

ನಂತರ 2013ರಲ್ಲಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರ ವೇಳೆಗೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಮಾತು ಕೊಟ್ಟು, ಬಯಲು ಸೀಮೆ ಜನರಿಗೆ ಮೋಸ ಮಾಡಿದರು ಎಂದು ಅಶೋಕ್ ದೂರಿದ್ದಾರೆ.

ನಂತರ 2022-23ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ 3,000 ಕೋಟಿ ರೂಪಾಯಿ ಅನುದಾನ ನೀಡಿ ಎತ್ತಿನಹೊಳೆ ಯೋಜನೆಗೆ ವೇಗ ನೀಡಿತ್ತು.

2014ರಲ್ಲಿ 8,500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23,251 ಕೋಟಿ ರೂ.ಗೆ ಮುಟ್ಟಿದೆ. ಇದಕ್ಕೆ ಯಾರು ಕಾರಣ ಎಂದು ಅವರು ಪ್ರಶ್ನಿಸಿದ್ದಾರೆ.

ಸುಮಾರು ಆರೂವರೆ ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದರೂ ಈ ಯೋಜನೆ ಇಷ್ಟು ವಿಳಂಬವಾಗಲು ಯಾರು ಕಾರಣ ಎಂದು ಅವರು ಕೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಿಜವಾಗಿಯೂ ಈ ಭಾಗದ ಜನರ ಬಗ್ಗೆ ಬದ್ಧತೆ ಇದ್ದಿದ್ದರೆ ಎತ್ತಿನಹೊಳೆ ಯೋಜನೆಗೆ ಈ ಮೂರು ಜಿಲ್ಲೆಗಳಲ್ಲಿ ಒಂದು ಕಡೆ ಚಾಲನೆ ನೀಡಬೇಕಾಗಿತ್ತು.

ಕಾಂಗ್ರೆಸ್ ಸರ್ಕಾರದ ಬೋಗಸ್ ಗ್ಯಾರೆಂಟಿಗಳ ರೀತಿಯಲ್ಲಿ ಈಗಿನ ಕಾರ್ಯಕ್ರಮವೂ ಒಂದು ಬಿಟ್ಟಿ ಪ್ರಚಾರ ಪಡೆಯುವ ನಾಟಕವಷ್ಟೇ ಎಂದು ಅಶೋಕ್ ಟೀಕಿಸಿದ್ದಾರೆ.

ಎತ್ತಿನಹೊಳೆ ಬಗ್ಗೆ ರಾಜ್ಯ ಸರ್ಕಾರ ಬೊಗಳೆಬಿಡುತ್ತಿದೆ:ಅಶೋಕ್ Read More